ಕಟ್ಟುವ ಮೊದಲೇ ಮೆಟ್ಟಿಲಾಗುವ ಸಾರ್ವೆ
Team Udayavani, Jun 24, 2019, 5:00 AM IST
ನೆಟ್ಟಗೆ, ಸದೃಢವಾಗಿ ಹೆಚ್ಚುವರ್ಷ ಬಾಳಿಕೆ ಬರುವ ಮರ ಎಂದರೆ ಅದು ಸಾರ್ವೆ ಮರವೇ ಆಗಿದೆ. ಇತ್ತೀಚಿನ ದಿನಗಳಲ್ಲಿ ನೀಲಗಿರಿ ಮರವನ್ನೂ ಹೆಚ್ಚು ಉಪಯೋಗಿಸಿತ್ತಿದ್ದರೂ, ಸಾರ್ವೆ ಮರವೇ ಹೆಚ್ಚು ಜನಪ್ರಿಯ. ಸುಮಾರು ಮೂರು ಇಂಚು ದಪ್ಪದ ಅಂದರೆ ಹತ್ತು ಇಂಚು ಸುತ್ತಳತೆಯ ಮರಗಳು ಹೆಚ್ಚು ಬಳಕೆಯಲ್ಲಿವೆ. ಇವು ಹತ್ತರಿಂದ ಹದಿನೈದು ಅಡಿಗಳಷ್ಟು ಉದ್ದವಿದ್ದು, ಸೂರು ಒಂಭತ್ತು ಇಲ್ಲವೇ ಒಂಭತ್ತೂವರೆ ಅಡಿ ಇದ್ದರೆ, ಅಷ್ಟೇ ಅಡಿ ಉದ್ದದ ಮರವನ್ನು ಬಳಸುವ ಪದ್ಧತಿ ಇದೆ. ಸೂರಿನ ಸೆಂಟ್ರಿಂಗ್ ಕೆಳಗೆ ರನ್ನರ್, ಅಂದರೆ, ರಿಪೀಸು ಬರುವುದರಿಂದ, ಇದರ ದಪ್ಪವನ್ನು ಕಳೆದು ಆಧಾರವನ್ನು ನೀಡಲಾಗುತ್ತದೆ.
ನಡೆದಾಡುವಾಗ ಅರಿವಾಗದ ಸಮತಟ್ಟಾದ ನೆಲದ ಆಧಾರ ಒಮ್ಮೆ ಒಂದೆರಡು ಅಡಿ ಮೇಲೆ ಹತ್ತಬೇಕಾದರೂ ಮೆಟ್ಟಿಲುಗಳತ್ತ ಒಮ್ಮೆ ನೋಡಿಯೇ ಹತ್ತುತ್ತೇವೆ. ನಾಲ್ಕಾರು ಅಡಿ ಹತ್ತಬೇಕು ಎಂದರೆ, ಮತ್ತೂ ಹೆಚ್ಚಿನ ಎಚ್ಚರ ವಹಿಸುವುದು ಇದ್ದೇ ಇದೆ. ಸದೃಢವಾಗಿರುವ ಮೆಟ್ಟಿಲುಗಳ ಲೆಕ್ಕಾಚಾರ ಇದು. ಆದರೆ ನಮ್ಮ ಕುಶಲ ಕರ್ಮಿಗಳು ದಿನನಿತ್ಯ ಹತ್ತಾರು ಅಡಿಗಳ ಎತ್ತರದಲ್ಲಿ ಸಾರ್ವೆ- “ಸ್ಕಾ ಫೋಲ್ಡ್’ ಮೇಲೆ ಓಡಾಡುತ್ತಾರೆ. ಅವರಿಗೆ ಆಧಾರವಾಗಿರುವುದು ಕೆಲವೇ ಮರಗಳು ಹಾಗೂ ಇವೂ ಕೂಡ ಗುಂಡಗೆ ಇದ್ದು, ಜಾರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹಾಗಾಗಿ, ಇವರು ಸಾರ್ವೆ ಮೇಲೆ ನಡೆದಾಡುವಾಗ ಅತಿ ಎಚ್ಚರದಿಂದ ಇರಬೇಕಾಗುತ್ತದೆ. ಕೆಲಸ ಕಾರ್ಯಗಳೂ ಎತ್ತರ ಹೆಚ್ಚಿದಂತೆಲ್ಲ ಕಡಿಮೆ ವೇಗದಲ್ಲಿ ಮುಂದುವರೆಯುತ್ತವೆ. ಕಾರ್ಮಿಕರಿಗೆ ಸೂಕ್ತ ಆಧಾರ ಕಲ್ಪಿಸಿಕೊಡುವುದು ಅನಿವಾರ್ಯ. ಮನೆ ಕಟ್ಟುವವರಿಗೆಲ್ಲ ತಮ್ಮ ಕಟ್ಟಡದಲ್ಲಿಯಾರಿಗೂ ಗಾಯ ಆಗಬಾರದು ಎಂದೇ ಇರುತ್ತದೆ. ಹಾಗಾಗಿ, ಆಧಾರಗಳನ್ನು ಸದೃಢವಾಗಿ ಹಾಗೂ ಬೇಗನೆ ಹಾಕುವ ವಿಧಾನಗಳನ್ನು ಗಮನಿಸುವುದು ಅನಿವಾರ್ಯ.
ಸಾರ್ವೆ ಮರದ ಸಾರ್ವೆ
ಹೆಸರೇ ಹೇಳುವ ಹಾಗೆ ನೆಟ್ಟಗೆ, ಸದೃಢವಾಗಿ ಹೆಚ್ಚುವರ್ಷ ಬಾಳಿಕೆ ಬರುವ ಮರ ಎಂದರೆ ಅದು ಸಾರ್ವೆ ಮರವೇ ಆಗಿದೆ. ಇತ್ತೀಚಿನ ದಿನಗಳಲ್ಲಿ ನೀಲಗಿರಿ ಮರವನ್ನೂ ಹೆಚ್ಚು ಉಪಯೋಗಿಸಿತ್ತಿದ್ದರೂ, ಸಾರ್ವೆ ಮರವೇ ಹೆಚ್ಚು ಜನಪ್ರಿಯ. ಸುಮಾರು ಮೂರು ಇಂಚು ದಪ್ಪದ ಅಂದರೆ ಹತ್ತು ಇಂಚು ಸುತ್ತಳತೆಯ ಮರಗಳು ಹೆಚ್ಚು ಬಳಕೆಯಲ್ಲಿವೆ. ಇವು ಹತ್ತರಿಂದ ಹದಿನೈದು ಅಡಿಗಳಷ್ಟು ಉದ್ದವಿದ್ದು, ಸೂರು ಒಂಭತ್ತು ಇಲ್ಲವೇ ಒಂಭತ್ತೂವರೆ ಅಡಿ ಇದ್ದರೆ, ಅಷ್ಟೇ ಅಡಿ ಉದ್ದದ ಮರವನ್ನು ಬಳಸುವ ಪದ್ಧತಿ ಇದೆ. ಸೂರಿನ ಸೆಂಟ್ರಿಂಗ್ ಕೆಳಗೆ ರನ್ನರ್, ಅಂದರೆ, ರಿಪೀಸು ಬರುವುದರಿಂದ, ಇದರ ದಪ್ಪವನ್ನು ಕಳೆದು ಆಧಾರವನ್ನು ನೀಡಲಾಗುತ್ತದೆ. ಸಾರ್ವೆ ಮರ ತೀರ ಹಳೆಯದಾಗಿದ್ದು ಕೊನೆಗಳು ಬಿರುಕು ಬಿಟ್ಟಿದ್ದರೆ ಅದನ್ನು ಬಳಸಲು ಸಾಧ್ಯವಿಲ್ಲ. ಇಡೀ ಸೂರಿನ ಭಾರವನ್ನು ನೋಡಲು ಸಣಕಲು ಕಡ್ಡಿಗಳಂತಿರುವ ಈ ಮರಗಳೇ ವಾರಗಟ್ಟಲೆ, ಅಂದರೆ, ಕಾಂಕ್ರಿಟ್ ಕ್ಯೂರ್ ಆಗುವವರೆಗೂ ಹೊರಬೇಕಾಗಿರುವುದರಿಂದ, ಸಾಕಷ್ಟು ಸಂಖ್ಯೆಯಲ್ಲಿ ನೀಡಬೇಕಾಗುತ್ತದೆ.
ಮರ ಹೆಚ್ಚು ದಪ್ಪ ಇದ್ದಷ್ಟೂ ಹೆಚ್ಚು ಭಾರ ಹೊರುವ ಸಾಮರ್ಥ್ಯ ಹೊಂದಿರುತ್ತದೆ ಎಂಬುದು ನಿಜವಾದರೂ ದಪ್ಪ ಮರಗಳನ್ನು ಹತ್ತಾರು ಅಡಿ ಎತ್ತರ ಒಯ್ಯುವುದು ಸುಲಭವಲ್ಲ. ಆದುದರಿಂದ, ಮಧ್ಯಮ ಗಾತ್ರದ ಮರಗಳನ್ನೇ ಹೆಚ್ಚು ಸಂಖ್ಯೆಯಲ್ಲಿ ನೀಡುವುದು ಅನಿವಾರ್ಯ. ಕೆಲವೊಮ್ಮೆ ಮರಗಳನ್ನು ಸೊಟ್ಟ ಪಟ್ಟ ಇದ್ದರೂ ಬಳಸುವುದುಂಟು, ಆದರೆ ಮರಗಳು ನೇರವಾಗಿದ್ದರೆ ಹೊರುವಷ್ಟು ಭಾರವನ್ನು ಬಾಗಿದ್ದಾಗ ಹೊರುವುದಿಲ್ಲ. ಹಾಗಾಗಿ ಆದಷ್ಟೂ ನೇರವಾಗಿ ಇರುವ ಮರಗಳನ್ನೇ ಬಳಸಬೇಕು. ಕೆಲವೊಮ್ಮೆ ಮರಗಳನ್ನು ಕುಕ್ಕಿದಾಗ ಇಲ್ಲವೇ ಅಳತೆಗೆ ಹೊಂದಿಕೊಳ್ಳಲಿ ಎಂದು ಸುತ್ತಿಗೆಯಲ್ಲಿ ಬಡಿದಾಗ, ಕೊನೆ ಭಾಗ ಒಂದೆರಡು ಇಂಚು ಬಿರುಕು ಬಿಡುವುದು ಸಾಮಾನ್ಯ. ಮರಗಳನ್ನು ಗಮನಿಸಿ, ಅವೇನಾದರೂ ಬಿರುಕು ಬಿಡುವ ಸಾಧ್ಯತೆ ತೋರಿದರೆ, ಅಂದರೆ ಸಣ್ಣ ಸಣ್ಣ ರೇಖೆಗಳು ಮೂಡಿರುವುದು ಕಂಡರೆ, ಜಿ ಐ ಅಂದರೆ ತುಕ್ಕು ನಿರೋಧಕ ಗುಣ ಹೊಂದಿರುವ ಗ್ಯಾಲ್ವನೈಝಡ್ ಐರನ್ ವೈರ್ -ತಂತಿಗಳ ಸಹಾಯದಿಂದ ಬಿಗಿದು, ನಂತರ ಬಳಸುವುದು ಸೂಕ್ತ.
ಮರಗಳನ್ನು ಬಿಗಿಯುವುದು
ಇಂದಿಗೂ ಕೂಡ ನಮ್ಮಲ್ಲಿ ತೆಂಗಿನ ನಾರಿನಿಂದ ಮಾಡಿದ ಹುರಿ ಹಗ್ಗವನ್ನೇ ಹೆಚ್ಚು ಬಳಸುವುದು. ಇವು ಸದೃಢವಾಗಿದ್ದು, ಬಳಸಲು ಸುಲಭ. ಜೊತೆಗೆ ತರಿತರಿಯಾಗಿದ್ದು, ಒಮ್ಮೆ ಮರಗಳಿಗೆ ಬಿಗಿದರೆ, ಅವು ಜಾರಲು ಆಗುವುದಿಲ್ಲ. ಕಟ್ಟಿದಷ್ಟೇ ಸುಲಭದಲ್ಲಿ ಇವನ್ನು ಬಿಡಿಸಲೂ ಆಗುವುದರಿಂದ ಸಾರ್ವೆ ತೆಗೆಯುವುದೇನೂ ಕಷ್ಟ ಆಗುವುದಿಲ್ಲ. ಈ ಹಗ್ಗಗಳನ್ನು ಮಾರುಕಟ್ಟೆಯಿಂದ ತಂದಮೇಲೆ ನೀರಿನಲ್ಲಿ ನೆನೆಸಿ ಬಳಸುವುದು ಸೂಕ್ತ. ತೆಂಗಿನ ಹುರಿ ಒಣಗಿದಾಗ ಹೆಚ್ಚು ಗಟ್ಟಿಮುಟ್ಟಾಗಿದ್ದರೂ, ಕಟ್ಟಲು ಸುಲಭದಲ್ಲಿ ಬಾಗುವುದಿಲ್ಲ, ಆದುದರಿಂದ, ನೀರಿನಲ್ಲಿ ಹಾಕಿ ಕೆಲ ನಿಮಿಷ ಮೃದುಗೊಳಿಸಿ ನಂತರ ಬಳಸಬೇಕಾಗುತ್ತದೆ. ಹೆಚ್ಚು ಬಲ ಬೇಕೆಂದರೆ, ಮರಗಳು ತೀರಾ ದಪ್ಪಗಿದ್ದರೆ, ಹಾಗೆಯೇ ಮಳೆ ಬಿಸಿಲು ಹೆಚ್ಚಾಗಿದ್ದು ಹೆಚ್ಚು ಸಮಯವೂ ಕಟ್ಟಿರಬೇಕೆಂದರೆ, ಜಿಐ ವೈರ್‌ಗಳನ್ನು ಬಳಸಿ ಕಟ್ಟಬಹುದು. ಇವು ಜಾರುವ ಗುಣ ಹೊಂದಿರುವುದರಿಂದ, ಮೊದಲು ತೆಂಗಿನ ಹುರಿಯಿಂದ ಕಟ್ಟಿ ಅದರ ಮೇಲೆ ಜಿಐ ತಂತಿಗಳನ್ನು ಬಿಗಿಯುವುದೇ ಸೂಕ್ತ.
ಸಾರ್ವೆ ಹಾಕುವ ವಿಧಾನ
ಮನೆಯ ಗೋಡೆಗಳು ಎತ್ತರ ಮುಟ್ಟುವ ಮೊದಲೇ ಎತ್ತರಕ್ಕೆ ಸಾಗುವುದು ಕುಶಲ ಕರ್ಮಿಗಳಿಗೆ ಆಧಾರವಾಗಿರುವ ಸಾರ್ವೆ. ಹಾಗಾಗಿ, ಇವುಗಳನ್ನು ಆಳೆತ್ತರಕ್ಕಿಂತ ಸ್ವಲ್ಪ ಕಡಿಮೆ, ಅಂದರೆ, ನಾಲ್ಕರಿಂದ ಐದು ಅಡಿಗಳ ಅಂತರದಲ್ಲಿ “ಪೆಡಲ್’ಗಳನ್ನು ಹಂತಹಂತವಾಗಿ ಹಾಕಲಾಗುತ್ತದೆ. ಇವುಗಳ ಮೇಲೆ ನಮ್ಮ ಕಾರ್ಮಿಕರು ಸುಲಭವಾಗಿ ಏರಲು ಸಹಕಾರಿಯಾಗಿರುತ್ತದೆ. ಮರಗಳು ಸುಮಾರು ಹತ್ತು ಅಡಿಗಳಷ್ಟು ಉದ್ದ ಇರುವುದರಿಂದ, ಪೆಡಲ್ ಗಳು ನಾಲ್ಕೆçದು ಅಡಿ ಅಂತರದಲ್ಲಿದ್ದರೆ, ಸದೃಢವಾಗಿಯೂ ಸಾರ್ವೆ ಮೂಡಿಬರುತ್ತದೆ. ಮರಗಳು ನೇರವಾಗಿ ನಿಲ್ಲಲು ಅವುಗಳನ್ನು ನೆಲದಲ್ಲಿ ಒಂದೆರಡು ಅಡಿಗಳಷ್ಟು ಆಳದಲ್ಲಿ ಹೂತು, ಅದರ ಸುತ್ತಲೂ ಮಣ್ಣನ್ನು ಬಿಗಿಗೊಳಿಸಿ, ನಂತರ ಪೆಡಲ್ ಗಳನ್ನು ಹಾಕಲಾಗುತ್ತದೆ. ಕೆಲವೊಮ್ಮೆ ಭೂಮಿನ್ನು ಅಗೆಯಲು ಆಗದಿದ್ದರೆ, ಕಾಂಕ್ರಿಟ್ ಮತ್ತೂಂದು ಇದ್ದರೆ, ಆಗ ಅನಿವಾರ್ಯವಾಗಿ ಖಾಲಿ ಸಿಮೆಂಟ್ ಚೀಲಗಳಲ್ಲಿ ಮರಳನ್ನು ತುಂಬಿ, ಅದರಲ್ಲಿ ಮರಗಳನ್ನು ಇಡಲಾಗುತ್ತದೆ. ಆದರೆ ಇವು ಅಷ್ಟೊಂದು ಬಿಗಿಯಾಗಿ ಕೂರುವುದಿಲ್ಲ. ಆದುದರಿಂದ ಅನಿವಾರ್ಯವಾಗಿ ಹೆಚ್ಚುವರಿ ಮರಗಳನ್ನು ಮೂರು ದಿಕ್ಕುಗಳಿಂದ ಕೋನದಲ್ಲಿ ನೀಡಿ, ತ್ರಿಕೋನದಂತೆ ಆಗಿದ್ದಾಗ, ಒಂದಷ್ಟು ಗಟ್ಟಿತನ ಬರುವಂತೆ ನೋಡಿಕೊಳ್ಳಬೇಕು.
ಲಾಭ ಹಾಗೂ ಮಿತಿ
ಸಾರ್ವೆ ಮರಗಳು ಎಲ್ಲೆಡೆ ಸಿಗುವುದರಿಂದ ಅದರ ಬಳಕೆ ಹೆಚ್ಚು, ಇತ್ತೀಚಿನ ದಿನಗಳಲ್ಲಿ ಉಕ್ಕಿನ ಆಧಾರಗಳು ಲಭ್ಯವಿದ್ದರೂ, ಸಾರ್ವೆ ಮರದ ಬಳಕೆ ಸಂಪೂರ್ಣವಾಗಿ ನಿಂತಿಲ್ಲ. ಎಮ್ ಎಸ್ ಪೈಪ್ ಗಳಿಗೆ ಹೋಲಿಸಿದರೆ ಇವು ಅಗ್ಗವೇ ಆಗಿದ್ದು, ನಮ್ಮ ಅಗತ್ಯಕ್ಕೆ ತಕ್ಕಂತೆ ಕತ್ತರಿಸಲೂ ಸುಲಭ ಆಗುತ್ತದೆ. ಸಾರ್ವೆ ಮರಗಳು ಬಾಡಿಗೆಗೂ ಸಿಗುತ್ತವೆ. ಆದರೆ ಮನೆ ಕಟ್ಟುವಾಗ ಒಂದಷ್ಟು ಮರಗಳನ್ನು ಶುರುವಿನಿಂದ ಹಿಡಿದು ಕೊನೆಯವರೆಗೂ ಬೇಕಾಗಿರುವುದರಿಂದ,ಅಗತ್ಯವಿದ್ದಷ್ಟು ಮರಗಳನ್ನು ಖರೀದಿಸಿ, ಹೆಚ್ಚುವರಿ ಮರಗಳು, ಕಡಿಮೆ ಅವಧಿಗೆ, ಅಂದರೆ, ಸೂರು ಹಾಕುವಾಗ ಬಾಡಿಗೆಗೆ ತರುವುದು ಉತ್ತಮ.
ಸೂಕ್ತ ಆಧಾರ ಕಲ್ಪಿಸಿದಷ್ಟೂ ನಮ್ಮ ಕುಶಲ ಕರ್ಮಿಗಳು ನಿರಾತಂಕಿತರಾಗಿ ಮೇಲೆ ಮೇಲೆ ಹತ್ತಿ ಸುಲಭದಲ್ಲಿ ಹಾಗೂ ಹುಷಾರಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಲೆಕ್ಕಾಚಾರದಲ್ಲಿ ಸಾರ್ವೆ ಹಾಕುವುದು, ನಂತರೆ ತೆಗೆದು ಹಾಕಲೇ ಆದರೂ ಅದು ಇದ್ದಾಗ ಮಾಡುವ ಮಹತ್ತರ ಕಾರ್ಯಕ್ಕಾಗಿ, ಒಂದೆರಡು ಸಾವಿರ ಹೆಚ್ಚು ಕಡಿಮೆ ಆದರೂ ಕ್ಷೇಮವಾಗಿ ಮನೆಕೆಲಸ ಮುಗಿಸಲು ಮುಖ್ಯ ಎಂಬುದನ್ನು ಮರೆಯಬಾರದು.
ಹೆಚ್ಚಿನ ಮಾಹಿತಿಗೆ ಫೋನ್ 98441 32826
-ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.