ಸಸ್ಯ ಲೋಕದಲ್ಲೂ ಉಂಟು ಜಾತಿ ಸಂಘರ್ಷ !
Team Udayavani, Nov 5, 2018, 6:00 AM IST
ಸಸ್ಯಗಳಲ್ಲಿ ಜಾತಿ ಜಗಳವಿದೆ. ಪಂಗಡ, ಒಳಪಂಗಡ ನಿರ್ಮಿಸಿಕೊಂಡು ಸಾಮ್ರಾಜ್ಯ ಸ್ಥಾಪಿಸುವ ಗುಣವಿದೆ. ಇಡೀ ನೋಟಕ್ಕೆ ನೂರಾರು ಸಸ್ಯ ಜಾತಿಗಳು ಕಾಡಲ್ಲಿ ಕಾಣಿಸುತ್ತಿದ್ದರೂ ಬಿಡಿ ಬಿಡಿಯಾಗಿ ಗಮನಿಸಿದರೆ ಕೆಲವು ಮರಗಳ ಜೊತೆ ಬದುಕುವ ಆಪ್ತ ಬಳಗವಿದೆ.
ರಮೇಶನಿಗೆಂದು ಅಮ್ಮ ಅಕ್ಕರೆಯಲ್ಲಿ ಕಳಿಸಿದ ತಿಂಡಿಯನ್ನೆಲ್ಲ ಹೊಟ್ಟೆಬಾಕ ರವೀಶ ಯಾವಾಗಲೂ ಸಂಪೂರ್ಣ ಕಬಳಿಸುತ್ತಾನೆ. ಹುಡುಗ ಉಪವಾಸದಲ್ಲಿ ಅಳು ಮೋರೆ ಹಾಕುತ್ತಾನೆ. ಎಚ್ಚೆತ್ತ ಅಮ್ಮ ಇವನ ಜೊತೆಗಿದ್ದರೆ ಉದ್ಧಾರವಾಗೋಲ್ಲವೆಂದು ಬೇರೆ ಮಕ್ಕಳ ಜೊತೆ ಶಾಲೆಗೆ ಕಳಿಸುತ್ತಾಳೆ. ಮನುಷ್ಯರ ಇಂಥ ಮುಂಜಾಗೃತೆ ಸದಾ ಪೈಪೋಟಿಯಲ್ಲಿ ಬದುಕುವ ಕಾಡು ಸಂಕುಲಗಳಲ್ಲಿದೆ. ಒಂದು ಸಸ್ಯ ಇದ್ದಲ್ಲಿ ಇನ್ನೊಂದು ಜಾತಿ ಕಾಣಿಸದು, ತಾನು ಬೆಳೆದಲ್ಲಿ ಬೇರಾವುದೂ ತಲೆ ಎತ್ತದಂತೆ ಮಟ್ಟ ಹಾಕುವುದು ಸಸ್ಯಗಳಿಗೂ ಗೊತ್ತಿದೆ. ಹಗೆತನ, ಗೆಳೆತನ, ಹೊಡೆದಾಟ, ಕೃತಘ್ನತೆ, ಆಕ್ರಮಣ, ಮೋಸದ ಆಟಗಳಿವೆ. ಪರಿಮಳ ಸೂಸುವ ಶ್ರೀಗಂಧ ಭಾಗಶಃ ಪರಾವಲಂಬಿಯಾಗಿದೆ. ಯಾವತ್ತೂ ತಾನೊಬ್ಬ ಬೆಳೆಯುವುದಿಲ್ಲ. ನರ್ಸರಿಯಲ್ಲಿ ಬೀಜ ಮೊಳಕೆಯಾಗಿ ಸಸಿಯಾಗುವ ಕಾಲಕ್ಕೆ ತೊಗರಿ ಸಸಿಯಾದರೂ ಬೇಕು. ಅಕ್ಕಪಕ್ಕದ ಸಸ್ಯದ ಬೇರಿನಿಂದ ಆಹಾರ ಕದ್ದು ಬದುಕುವ ಕಳ್ಳ ವೃಕ್ಷವೇ ನಾಡಿಗೆಲ್ಲ ಸುಗಂಧ ಪಸರಿಸುತ್ತದೆ. ಕಾಡಿನಲ್ಲಿ ಹೆಬ್ಬೇವು, ಬೇವು, ಬಿದಿರು, ಕಾರೆ, ಹುಲಗಲ, ಬಾಗೆ, ಸೀಮೆತಂಗಡಿ, ಕಕ್ಕೆ ಮುಂತಾದಗಳ ಜೊತೆ ಶ್ರೀಗಂಧ ಗೆಲ್ಲುತ್ತದೆ.
ಸುಮಾರು ಇಪ್ಪತೈದು ವರ್ಷಗಳ ಹಿಂದೆ ನೆಲ್ಲಿ ಬೆಳೆದ ರಾಮದುರ್ಗದ ಅಖೀಲ್ ಸರದೇಶಪಾಂಡೆಯವರಿಗೆ ಆಗಾಗ ತೋಟದ ಮರಗಳು ಸಾಯುತ್ತಿದ್ದವು. ಕಾಡಿನಲ್ಲಿ ನೆಲ್ಲಿ ತಾನೊಂದೇ ಮರವಾಗಿ ಬೆಳೆಯುವುದಿಲ್ಲ, ಸುತ್ತಲೂ ಮತ್ತಿ, ಹೊನ್ನೆ, ಕಿಂದಳ, ಕೌಲು ,ಕಾರೆ ಮುಂತಾದ ಗಿಡ ಗೆಳೆಯರು ಬೇಕು. ಸರಳವಾಗಿ ಹೇಳುವುದಾದರೆ ಬೇರೆ ಮರಗಳ ಜೊತೆ ಮಾತಾಡುತ್ತಿದ್ದರೆ ಇದು ಆರೋಗ್ಯವಂತ! ಏಕ ಜಾತಿಯ ಏಕತಾನತೆ ಬೇಜಾರಾಗಿ ನೆಲ್ಲಿ ಸಾಯುತ್ತಿದೆಯೆಂದು ತಜ್ಞರೊಬ್ಬರು ಸಲಹೆ ನೀಡಿದರು. ಆಕಾಶಮಲ್ಲಿಗೆ, ನೇರಳೆ, ಸೀತಾಫಲ ಸಸ್ಯಗಳನ್ನು ನೆಲ್ಲಿಯ ಜೊತೆ ನಾಟಿ ಮಾಡಿದರು. ಕಾಡಿನ ಎಲ್ಲ ಸಸ್ಯಗಳೂ ನೆಡುತೋಪಿಗೆ ಒಗ್ಗುವುದಿಲ್ಲ. ಮೂಲ ನೆಲೆಯ ವಾತಾವರಣ ಒದಗಿಸಲು ಮರಕ್ಕೆ ಹೊಂದುವ ಸಸ್ಯ ಕೂಡಿಸಬೇಕು. ಬಯಲುಸೀಮೆಯ ಅಕ್ಕರೆಯ ಹುಣಸೆ ಒಚಿಟಿ ಸಲಗ ಏಕಜಾತಿಯ ತೋಟವಾಗಿ ಬರದ ಸೀಮೆಯಲ್ಲಿ ಗೆಲ್ಲುತ್ತದೆ.
ರಕ್ತ ಹೊನ್ನೆ ಮರದ ಲಕ್ಷಾಂತರ ಬೀಜಗಳು ನೆಲಕ್ಕೆ ಬೀಳುತ್ತವೆ. ಆದರೆ ಗೊಣಗಲು ಮುಳ್ಳುಕಂಟಿಯಲ್ಲಿ ಬಿದ್ದದ್ದು ಮಾತ್ರ ಸಸಿಯಾಗಿ, ಮರವಾಗಿ ಚೆನ್ನಾಗಿ ಮೇಲೇಳುತ್ತದೆ. ದನಕರು, ಜಿಂಕೆಗಳು ಎಲೆ ಚಿಗುರು ತಿನ್ನದಂತೆ ಹೊನ್ನೆಯನ್ನು ಗೊಣಗಲು ರಕ್ಷಿಸುತ್ತದೆ. ಹೊನ್ನೆಯ ಗಿಡ ಮರವಾಗಿ ನೆರಳು ಚೆಲ್ಲಲು ಆರಂಭಿಸಿದ ಬಳಿಕ ಗೊಣಗಲ ನೆರವನ್ನು ಹೊನ್ನೆಯೂ ಮರೆಯುತ್ತದೆ. ಕಾಲಾಂತರದಲ್ಲಿ ರಕ್ಷಿಸಿದ ಮರದ ನೆರಳಲ್ಲಿ ಈ ಮುಳ್ಳುಕಂಟಿ ಅವಸಾನ ಹೊಂದುತ್ತದೆ. ಪೀಠೊಪಕರಣಗಳಿಗೆ ಹೆಸರಾದ ಹೊನ್ನೆ ಬೆಳೆಸಲು ಮುಳ್ಳುಕಂಟಿ ಬದುಕು ಮೀಸಲಾಗಿದೆ. ಇದೇ ಹೊನ್ನೆ ಮರದ ಮೇಲೆ ಹಕ್ಕಿಯ ಹಿಕ್ಕೆಯ ಜೊತೆ ಬಿದ್ದ ಫೈಕಸ್ ಕುಲದ ಕರಿಬಸರಿ ಸಸ್ಯ ಮೊಳೆಯುತ್ತದೆ. ಹೊನ್ನೆ ತೊಗಟೆಯ ಒಳಗಿಳಿಯುತ್ತ ಮರಕ್ಕೆ ಹೊಸ ಏಟು ನೀಡುತ್ತದೆ. ಹತ್ತಾರು ವರ್ಷಗಳಲ್ಲಿ ನಿಧಾನಕ್ಕೆ ಹೊನ್ನೆಯ ಕತ್ತು ಹಿಸುಕಿ ಹಿಸುಕಿ ಸಾಯಿಸಿ ಕೊನೆಗೆ ಸ್ವಯಂ ಮರವಾಗಿ ನಿಲ್ಲುತ್ತದೆ. ಹೊನ್ನೆಯ ಕೊಲೆಗೆಡುಕನಂತೆ ಅವತರಿಸಿದ ಈ ಪರಾವಲಂಬಿ ಕರಿಬಸರಿಗೆ ನೆಲಕ್ಕೆ ನೆರವಾಗುವ ಸದ್ಗುಣವೂ ಇದೆ. ವರ್ಷಕ್ಕೆ ಎರಡು ಮೂರು ಸಾರಿ ಹಣ್ಣು ಬಿಟ್ಟು ಸೀಮೆಯ ಚಿಲಿಪಿಲಿಗಳನ್ನು ಆಹ್ವಾನಿಸಿ ಭರ್ಜರಿ ದಾಸೋಹ ನಡೆಸುತ್ತದೆ. ಯಾವ ಯಾವುದೋ ಹಣ್ಣು ತಿಂದು ಬಸರಿಯ ಮರಕ್ಕೆ ಬರುವ ಪಕ್ಷಿಗಳು ಮರದಡಿ ಹಿಕ್ಕೆ ಹಾಕುತ್ತವೆ. ಪಕ್ಷಿಗಳ ಬೀಜೋಪಚಾರದ ನೆರನಿಂದ ಕರಿಬಸರಿ ಕೆಳಗಡೆ ಪರಿಗೆ, ಸಳ್ಳೆ, ಅಂಡಿ, ನುರುಕಲು, ಹೊಳೆದಾಸವಾಳ, ಸಂಪಿಗೆ, ಜುಮ್ಮು, ಕಾಡು ಮಲ್ಲಿಗೆ, ಕಣಗಲು ಸೇರಿದಂತೆ ಹತ್ತು ಹಲವು ಕಾಡು ಹಣ್ಣಿನ ಸಸ್ಯ ಬೆಳೆಯುತ್ತ ಜಾತ್ಯಾತೀತ ಕಾಡು ಕೂಡುತ್ತದೆ. ಹೀಗಾಗಿ ಫೈಕಸ್ ವೃಕ್ಷಗಳನ್ನು ಬುನಾದಿ ವೃಕ್ಷಗಳೆಂದು ಕರೆಯುತ್ತೇವೆ.
ವನ ವ್ಯವಸ್ಥೆ ವಿಚಿತ್ರವಾಗಿದೆ. ಫೈಕಸ್‌ನ ಇನ್ನೊಂದು ಕುಲ ಆಲದ ಮರದ ನೋಟದಲ್ಲಿ ವಿಶೇಷವಿದೆ. ನಮ್ಮ ರಾಜಕಾರಣಿಗಳಂತೆ ಮಕ್ಕಳು, ಸೊಸೆ, ಮೊಮ್ಮಕ್ಕಳ ಬಳಗವನ್ನು ಬೆಳೆಸುವ ಗುಣ ಸಾಮಾನ್ಯವೆಂದು ಇದರೆದುರು ತರ್ಕಿಸುವಂತಿಲ್ಲ. ಊರಿನ ಸುದ್ದಿಕಟ್ಟೆಗೆ ನೆರವಾಗುವ ಗೌರವಾನ್ವಿತ ಆಲ ಬಹಳ ಹಣ್ಣು ಬಿಡುತ್ತದೆ.
ಪಕ್ಷಿಗಳನ್ನು ಸೆಳೆಯುತ್ತದೆ. ಆದರೆ ತನ್ನ ನೆರಳಲ್ಲಿ ತನ್ನದೇ ಸಂಕುಲ ಬೆಳೆಸಲು ಮುಜುಗರ ಪಡುತ್ತದೆ. ಮರದಡಿ ಬೇರೆ ವೃಕ್ಷಗಳು ಎದ್ದು ನಿಲ್ಲುವುದಿಲ್ಲ! ಪರಾವಲಂಬಿ ಬಂದಳಿಕೆ ಮಾವಿನ ಮರಗಳ ರಸ ಹೀರಿ ಹಿಗ್ಗುತ್ತದೆ. ಕೊನೆಗೆ ಮರದ ಜೊತೆ ತಾನೂ ಸಾಯುತ್ತದೆ. ಮುಂದಿನದಕ್ಕಿಂತ ಇಂದಿನ ಬದುಕು ಗೆಲ್ಲುವ ಗುರಿಯಲ್ಲಿ ಆಶ್ರಯದಾತ ಮರವನ್ನು ಮರೆಯುತ್ತದೆ.
ಬೇರಿನ ಜಗಳ ಕೃಷಿ ಭೂಮಿಯಲ್ಲಿ ಜೋರಾಗಿ ಕೇಳಿಸುತ್ತದೆ. ಅಡಿಕೆ ಪಕ್ಕ ಬೆಳೆದ ಹಲಸು ತಾನು ಬೆಳೆಯುವ ಹಂಬಲದಲ್ಲಿ ಸುತ್ತೆಲ್ಲ ಬೇರು ಕಳಿಸುತ್ತದೆ. ಅಡಿಕೆಯನ್ನು ಸೋಲಿಸುತ್ತದೆ. ಕಾಡಿನ ಭೂಮಿಯಲ್ಲಿ ಸಸಿ ನಾಟಿಗೆ ಕುಳಿ ತೆಗೆಯುತ್ತೇವೆ. ಆಗ ಅಕ್ಕಪಕ್ಕದ ಮರದ ಬೇರು ಕತ್ತರಿಸುತ್ತೇವೆ. ಗೊಬ್ಬರ, ಒಳ್ಳೆಯ ಮಣ್ಣು ಹಾಕಿ ಅಲ್ಲಿ ಸಸಿ ನೆಟ್ಟಾಗ ಬೇರಿನ ಗಾಯದಲ್ಲಿ ನೋವುಂಡ ವೃಕ್ಷಗಳು ಹೊಸ ಸಸ್ಯದ ಬುಡಕ್ಕೆ ನೂರಾರು ಬೇರಿಳಿಸಿ ಆಹಾರವನ್ನೆಲ್ಲ ಕಬಳಿಸುತ್ತವೆ. ಹೀಗಾಗಿ ಮರಗಳ ನಡುವೆ ಸಸ್ಯ ಬೆಳೆಸುವ ಗ್ಯಾಪ್ ಪ್ಲಾಟಿಂಗ್ ವಿಧಾನದಲ್ಲಿ ಹಲವು ಸಾರಿ ಸೋಲುತ್ತೇವೆ. ಆಹಾರ ಮೂಲಗಳನ್ನು ತೀರ ಮೇಲ್ಮಣ್ಣಿನಲ್ಲಿ ಬಯಸುವ ಸಸ್ಯಗಳು ನಿತ್ಯ ಜಗಳ ಕಾಯುತ್ತ ಬೇರೆ ಸಸ್ಯದ ಗೊಬ್ಬರ ಕಬಳಿಸುತ್ತ ಗಲಾಟೆಯಲ್ಲಿ ದಿನ ನೂಕುತ್ತವೆ. ಯಾರೂ ಸರಿಯಾಗಿ ಬೆಳೆಯುವುದಿಲ್ಲ. ರಬ್ಬರ್, ದ್ರಾಕ್ಷಿ$ ತೋಟಗಳಲ್ಲಿ ಇನ್ನೊಂದು ಬೆಳೆ ಬೆಳೆಯಲು ಹಿಂಜರಿಯುವುದಕ್ಕೆ ಇದೇ ಕಾರಣವಾಗಿದೆ. ಅಡಿಕೆಯ ಮರ ಆಶ್ರಯಿಸಿ ಕಾಳು ಮೆಣಸು ಚೆನ್ನಾಗಿ ಬೆಳೆಯುತ್ತದೆ. ಎರಡು ಜನ ಊಟ ಮಾಡುವಾಗ ಹೋಟೆಲ್‌ನಲ್ಲಿ ಒಂದು ತಟ್ಟೆ ಸಾಲುವುದಿಲ್ಲ . ಸೀಮಿತ ಗೊಬ್ಬರ ಹಂಚಿ ಉಣ್ಣಲು ಅಡಿಕೆ, ಕಾಳು ಮೆಣಸು ಜೊತೆಗಿದ್ದರೆ ಯಾರಿಗೂ ಹೊಟ್ಟೆ ತುಂಬುವುದಿಲ್ಲ. ಆಗ ಎರಡು ಸಸ್ಯಗಳ ಅಗತ್ಯಕ್ಕೆ ಆಹಾರ ನೀಡಬೇಕಾಗುತ್ತದೆ.
ಮರಗಳು ತಮ್ಮನ್ನು ಆಶ್ರಯಿಸಿ ಬೆಳೆಯುವ ಬಳ್ಳಿಯ ಕುಲ ಯಾವುದೆಂದು ಯಾವತ್ತೂ ಕೇಳುವುದಿಲ್ಲ. ಮನುಷ್ಯ ಮಾತ್ರ ಜಾತಿ ಜಾತಿಯೆಂದು ಬಡಿದಾಡಿ ಸಾಯುತ್ತಾನೆಂದು ವೇದಿಕೆಗಳಲ್ಲಿ ಮಾತು ಕೇಳಿಸುತ್ತದೆ. ಆದರೆ ಎಲ್ಲ ಮರಗಳಿಗೂ ಬಳ್ಳಿ ಬೆಳೆಯುವುದಿಲ್ಲ. ತೇಗ, ಅಕೇಶಿಯಾ, ನೀಲಗಿರಿ, ನಂದಿ ಮರಗಳಿಗೆ ಬಳ್ಳಿ ಹಬ್ಬಿಸುವುದು ಕಷ್ಟವಿದೆ. ವನ ವಿಕಾಸ ವಾದದಲ್ಲಿ ಯಾರನ್ನು ಜೊತೆಗಿಡಬೇಕು, ಯಾರನ್ನು ದೂರಿಡಬೇಕೆಂದು ಸ್ವಭಾವತಃ ಮಣ್ಣು, ಮರಗಳು ಕಂಡುಕೊಂಡಿವೆ. ಮಣ್ಣಿನ ಫಲವತ್ತತೆ ನೋಡಿಕೊಂಡು ಗೆಲ್ಲುವರು ಗೆಲ್ಲುತ್ತಾರೆ, ಸೋಲುವವರು ಸೋಲುತ್ತಾರೆ. ರೈತರು ಶತಮಾನಗಳಿಂದ ಇದನ್ನು ಗಮನಿಸಿದ ಬಳಿಕ ಅಡಿಕೆ, ಕಾಫಿ, ತೆಂಗಿನ ತೋಟಗಳ ನಡುವೆ ಏನೆಲ್ಲ ಬೆಳೆಯಬಹುದೆಂದು ನಿರ್ಧರಿಸಿದ್ದಾರೆ.
ಕಾಡು ಸುತ್ತಾಡುವಾಗ ಒಂದೇ ಜಾತಿಯ ಸಸ್ಯ ಸಮೂಹ ಕೆಲವೆಡೆ ನೋಡಬಹುದು. ವರ್ಷವಿಡೀ ಹುಲ್ಲಿಗೆ ಬೆಂಕಿ ಬೀಳುವ ನೆಲೆಯಲ್ಲಿ ಕೌಲು ಮರಗಳ ಬೆಟ್ಟಗಳಿವೆ. ಜಿಂಕೆಗಳು ಆಶ್ರಯ ಪಡೆಯುವ ನದಿಯಂಚಿನ ಬಯಲುಗಳಲ್ಲಿ ನೆಲ್ಲಿ ಬೇಣಗಳಿವೆ. ಜಿಂಕೆ ಇಷ್ಟದ ನೆಲ್ಲಿಕಾಯಿ ತಿಂದ ಬಳಿಕ ನದಿ ನೀರು ಕುಡಿದು ಕ್ಕೆ ಹಾಕಿದ ನೆಲೆಯಲ್ಲಿ ಮರಸಮೂಹ ಬೆಳೆದಿದೆ. ಹುಲ್ಲು ಕಡ್ಡಿಯೂ ಸರಿಯಾಗಿ ಬೆಳೆಯದ ಕರಾವಳಿಯ ಲ್ಯಾಟ್ರೆ„ಟ್ ಕಲ್ಲು ಗುಡ್ಡಗಳ ಮೇಲೆ ಕುರುಡು ನಂದಿ ನಗುತ್ತದೆ. ಕಲ್ ಅಶ್ವತ್ಥ, ಕಲ್‌ಅತ್ತಿ, ಕಲ್ ಬಾಳೆಗಳು ಬೇರೆ ಯಾವುದೂ ಬದುಕದ ನೆಲೆಗೆ ತಳ್ಳಲ್ಪಟ್ಟಿವೆ. ಹಾಗಂತ ಉತ್ತಮ ಗೊಬ್ಬರ, ನೀರು ನೀಡಿದರೆ ಬೆಳೆಯುವುದಿಲ್ಲ. ಅವಕ್ಕೆ ಕಲ್ಲಿನ ಪರಿಸರಬೇಕು. “ಮುತ್ತುಗಕ್ಕೆ ಎಷ್ಟು ಗೊಬ್ಬರ ಸುರಿದರೂ ಮೂರು ಎಲೆಯೇ’ ಮಾತು ಕಾಡು ನೋಟದಲ್ಲಿ ಉದಯಿಸಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಹೊಸನಗರ ರಸ್ತೆಯಲ್ಲಿ 17 ಕಿಲೋ ಮೀಟರ್ ದೂರದ ಹಲಸಾಲೆ, ಮಲವಳ್ಳಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ನಾಟಿ ಮಾಡಿದ ದೇಶಿ ಸಸ್ಯವೊಂದು ಕಳೆಯಂತೆ ಕಾಡು ನೆಲ ಕಬಳಿಸುತ್ತಿದೆ. ಆಲ್ಸೊ$ràನಿಯಾ ಮಾಕ್ರೋಫಿಲ್ಲ (Alstonia macrophylla) ಈ ಸಸ್ಯ ಮೂಲತಃ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಫೈನ್ಸ್, ಥೈಲ್ಯಾಂಡ್, ವಿಯಟ್ನಂ ಪ್ರದೇಶದ್ದಾಗಿದೆ. ನೆಡುತೋಪಿನ ಬಹುತೇಕ ಮರಗಳು ಕಟಾವಾಗಿದ್ದು ಅರಣ್ಯ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಬೀಜಗಳಿಂದ ಸಸ್ಯ ಪುನರುತ್ಪತ್ತಿ ಪಡೆಯುತ್ತಿದೆ. ನೂರಾರು ಸಸ್ಯ ವೈವಿಧ್ಯದ ಪ್ರದೇಶದಲ್ಲಿ ಹೊಸ ಆಲ್ಸೊ$ràನಿಯಾ ಸಾಮ್ರಾಜ್ಯ ಬೆಳೆಯುತ್ತಿದೆ. ಇದರ ಜೊತೆಗೆ ಬೇರಾವ ಸ್ಥಳೀಯ ಸಸ್ಯಗಳೂ ಗೆಲ್ಲುತ್ತಿಲ್ಲ. ಆಸ್ಟ್ರೇಲಿಯನ್ ಮೂಲದ ಅಕೇಶಿಯಾ (Acacia auriculiformis) ಕರಾವಳಿ, ಪಶ್ಚಿಮ ಘಟ್ಟದಲ್ಲಿ ಕ್ರಿ.ಶ.1985ರ ನಂತರದಲ್ಲಿ ಅರಣ್ಯ ನೆಡುತೋಪಿಗೆ ಬಂದಿದೆ. ಈಗ ಕಳೆ ಗಿಡಗಳಾಗಿ ಅತ್ಯಂತ ಆಕ್ರಮಣಕಾರೀ ಸಸ್ಯವಾಗಿದೆ. ಮೈಸೂರಿನ ನಂದಿ ಬೆಟ್ಟದಲ್ಲಿ ಕ್ರಿ.ಶ. 1790 ರಲ್ಲಿ ಪ್ರಥಮದಲ್ಲಿ ನಾಟಿ ಮಾಡಿದ ಆಸ್ಟ್ರೇಲಿಯನ್ ಮೂಲದ ನೀಲಗಿರಿ(Eucalyptus) ಈಗ ರಾಜ್ಯದ ಎಲ್ಲೆಡೆ ಇದೆ. ಇಂದು ಕೃಷಿ ಭೂುಯಲ್ಲಿ ನೀಲಗಿರಿ ಬೆಳೆಸಿದ ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಇದರ ಜೊತೆ ಬೇರಾವ ಸಸ್ಯ ಬೆಳೆಯುವುದಿಲ್ಲ. ಬಯಲುಸೀಮೆಯ ಕೆರೆಕಟ್ಟೆ, ಗುಡ್ಡ ಆಳುತ್ತಿರುವ ಜಾಲಿ ಕ್ರಿ.ಶ. 1878ರಲ್ಲಿ ಉತ್ತರ ಹಾಗೂ ದಕ್ಷಿಣ ಅಮೆರಿಕಾದಿಂದ ಹೈದ್ರಾಬಾದ್ ಮೂಲಕ ದೇಶಕ್ಕೆ ಕಾಲಿಟ್ಟಿದೆ. ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯದ ಬೋಳು ಗುಡ್ಡಗಳಿಗೆ ವಿಮಾನಗಳ ಮೂಲಕ ಬೀಜ ಬಿತ್ತಲಾಗಿದೆ. ಈಗ ನಮ್ಮ ಕಾಡು-ಕೃಷಿ ನೆಲವನ್ನು ಈ ಮುಳ್ಳುಕಂಟಿ ಆಳುತ್ತಿದೆ. ನಮ್ಮ ನೆಲದಲ್ಲಿ ದೇಶಿ ಸಸ್ಯಗಳು ಎಂಥ ಆಕ್ರಮಣಕಾರಿಯಾಗಿವೆಯೆಂದು ಒಂದೊಂದು ಸಸ್ಯ ಕತೆ ಸಾರುತ್ತದೆ.
ಸಸ್ಯ ಸ್ವಭಾವಗಳಲ್ಲಿ ಸಹಬಾಳ್ವೆ ಹಾಗೂ ಹೆಮ್ಮೆಟ್ಟಿಸುವ ಗುಣಗಳಿವೆ. ಅಂದರೆ ಬೇರೆ ಸಸ್ಯಗಳ ಜೊತೆ ಬೆಳೆಯುವುದು ಅಥವಾ ತಾನೊಬ್ಬನೇ ಬದುಕುವುದೆಂದು ಸರಳಕ್ಕೆ ಅರ್ಥಮಾಡಿಕೊಳ್ಳಬಹುದು. ಪಾರ್ಥೇನಿಯಂ ಕಳೆ ಓಡಿಸಲು ತಗಟೆ(ನಾಯಿಶೇಂಗಾ) ಸಸ್ಯ ನೆರವಾಗುತ್ತದೆ. ಹೊಡೆದಾಟದಲ್ಲಿ ಗೆದ್ದು ತನ್ನ ಸಾಮ್ರಾಜ್ಯ ಕಟ್ಟುತ್ತದೆ. ಔಷಧ ಸಸ್ಯ ವಾಯುಳಂಗ ಸಾಮಾನ್ಯವಾಗಿ ಬಿದಿರು ಹಿಂಡಿನ ಬುಡದಲ್ಲಿ ಸಹಬಾಳ್ವೆ ನಡೆಸುತ್ತದೆ. ಸಸ್ಯ ಹೊಂದಾಣಿಕೆ ಎಷ್ಟು ಖಚಿತವಾಗಿರುತ್ತದೆಂದರೆ ಶಿರಸಿ ಕಾಡಿನಲ್ಲಿ ಹಣ್ಣು ಸಂಪಿಗೆ ಮರದಡಿ ಗಾಳಿ ಗಿಡ ನೋಡಬಹುದಾದ ನಾವು ಶೃಂಗೇರಿಯಲ್ಲಿ ಇದೇ ಗಿಡ ಗೆಳೆತನ ನೋಡಬಹುದು ಕಾಡು ಕೃಷಿ ಗೆಲುವಿಗೆ ಗಿಡ ಜಾತಿ ಸಂಘರ್ಷ ಸ್ವಭಾವ ಅಭ್ಯಸ ಮಾಡಬೇಕಾಗುತ್ತದೆ.
ಮುಂದಿನ ಭಾಗ- ಆಹಾರ ಆರೋಗ್ಯದ ನಿಸರ್ಗಧಾಮ
– ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.