ಪೊಲೀಸರ ವಿರುದ್ಧ ಪೊಲೀಸರಿಗೇ ದೂರು ನೀಡಿ!
Team Udayavani, Oct 29, 2018, 4:00 AM IST
ಪೊಲೀಸ್ ಕಂಪ್ಲೈಂಟ್ಸ್ ಅಥಾರಿಟಿ ಅರ್ಥಾತ್ ಪಿಸಿಎ ಪೊಲೀಸರ ದುರ್ನಡತೆ ಕುರಿತ ಎಲ್ಲ ದೂರು ದಾಖಲಿಸಿಕೊಳ್ಳುತ್ತದೆ. ರಾಜ್ಯಮಟ್ಟದಲ್ಲಿ ಒಂದು ಪ್ರಾಧಿಕಾರ ಹಾಗೂ ಪ್ರತಿ ಜಿಲ್ಲಾ ಮಟ್ಟದಲ್ಲೂ ಒಂದೊಂದು ಪ್ರಾಧಿಕಾರಗಳಿರುತ್ತವೆ. ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ), ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶ್ರೇಣಿಗಿಂತ ಮೇಲಿನ ಅಧಿಕಾರಿಗಳ ವಿರುದ್ಧ ದೂರಿದ್ದರೆ ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ, ಡಿವೈಎಸ್‌ಪಿ ಸೇರಿದಂತೆ ಇತರ ಎಲ್ಲ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರುಗಳಿದ್ದರೆ ಆಯಾ ಜಿಲ್ಲಾ ಪ್ರಾಧಿಕಾರಗಳಲ್ಲಿ ದೂರು ದಾಖಲಿಸಬಹುದು.
ಬದುಕು ವಿಚಿತ್ರ, ನಾವು ಹಲವು ಹಂತಗಳಲ್ಲಿ ಭರವಸೆಗಳನ್ನು ಕಳೆದುಕೊಳ್ಳುತ್ತೇವೆ. ಅದೇ ವೇಳೆ ಮತ್ತಾವುದರಿಂದಲೋ ವಿಶ್ವಾಸದ ಕಿಡಿ ಕಾಣಿಸಿ ಮತ್ತೆ ಹೊಸ ಉತ್ಸಾಹ ಪಡೆಯುತ್ತೇವೆ. ಭಾರತದ ರಾಜಕೀಯ ಮತ್ತು ಕಾರ್ಯಾಂಗದ ಇಂದಿನ ಸ್ಥಿತಿ ನೈತಿಕ ಪ್ರಜ್ಞೆ ಇರುವವರನ್ನು ಕಸಿವಿಸಿಗೊಳಿಸುತ್ತದೆ. ಇದೇ ವೇಳೆ ನ್ಯಾಯಾಂಗದ ಬಗ್ಗೆ ಕೂಡ ಬಲಯುತವಾದ ಭರವಸೆ ಕಾಣಿಸುತ್ತಿಲ್ಲ. ಆದರೂ, ಆಡಳಿತಗಳು ಜಾರಿಗೆ ತರುವ ಮಾಹಿತಿ ಹಕ್ಕು ಕಾಯ್ದೆ, ಸಕಾಲ, ಲೋಕಾಯುಕ್ತ ಮೊದಲಾದವು ನಮ್ಮಲ್ಲಿ ವಿಶ್ವಾಸದ ಕಣಗಳನ್ನು ಹುಟ್ಟಿಸುತ್ತಲೇ ಇರುತ್ತವೆ.
ಬಹುಶಃ, ಪೊಲೀಸ್ ದೂರು ಪ್ರಾಧಿಕಾರ ಕೂಡ ಅಂಥ ಒಂದು ಪ್ರಯತ್ನ. ಪೊಲೀಸರ ವಿಚಾರದಲ್ಲಿ ಎರಡು ಮಗ್ಗುಲುಗಳಿವೆ. ಅವರ ಕಾರ್ಯಚಟುವಟಿಕೆಯ ಮೇಲೆ ಜನಪ್ರತಿನಿಧಿಗಳ ಅಸೀಮ ಒತ್ತಡ ಅವರನ್ನು ದುರ್ಬಲಗೊಳಿಸಿದೆ. ಅವರ ಜೊತೆಗಿನ ಮೈತ್ರಿಯ ಕಾರಣದಿಂದಲೇ ಕಡಿಮೆ ಸಂಬಳದ ಹೊರತಾಗಿಯೂ ಬದುಕನ್ನು “ನೇರ್ಪು’ಗೊಳಿಸಿಕೊಳ್ಳಲು ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿದೆ.
ಅವರಿಗಿಲ್ಲದ ಕೆಲಸದ ವೇಳೆಯ ಕಾಲಮಿತಿ ಅವರನ್ನು ಮಾನಸಿಕವಾಗಿ ಹಿಂಸಿಸುತ್ತದೆ. ಅವರಿಗೆ ಕುಟುಂಬ ಸೌಖ್ಯವನ್ನು ಕಡಿಮೆಗೊಳಿಸುತ್ತದೆ. ಇದು ಅವರಲ್ಲಿ ಮೃಗೀಯ ಅಂಶಗಳು ಆಗಾಗ್ಗೆ ಕಾಣಿಸಲು ಕಾರಣವಾಗುತ್ತದೆ. ಈ ಸಮಯದಲ್ಲಿ ಮುಗ್ಧರು, ಸಜ್ಜನರು ಕೂಡ ಪೊಲೀಸರ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಲಾಕಪ್ ಡೆತ್, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡವರಿದ್ದಾರೆ. ಪೊಲೀಸರೆಂದರೆ, ಜನಸಾಮಾನ್ಯರ ಮಾನವನಿರ್ಮಿತ ಕಷ್ಟಕೋಟಲೆಗಳನ್ನು ಆಲಿಸುವವರು ಎಂಬುದು ನಂಬಿಕೆ. ಆದರೆ ಅವರೇ ಶೋಷಕರಾಗಿ ಕಾಡಿದಾಗ ದೂರು ಕೊಡುವುದಾದರೂ ಯಾರಿಗೆ?
ಏಳು ನಿರ್ದೇಶನಗಳ ಜಾರಿ ಪ್ರಯತ್ನ: 2006ರಲ್ಲಿ ಸುಪ್ರೀಂಕೋರ್ಟ್‌ನ ಎದುರು ಬಂದಿದ್ದ ಪ್ರಕಾಶ್‌ಸಿಂಗ್ ಎಂಬುವವರ ಪ್ರಕರಣದಲ್ಲಿ ನ್ಯಾಯಾಲಯ ಪೊಲೀಸ್ ಕಾಯ್ದೆಯ ಪರಿಷ್ಕರಣೆಯ ಅಗತ್ಯವನ್ನು ಪ್ರತಿಪಾದಿಸಿ, ಒಟ್ಟು ಏಳು ನಿರ್ದೇಶನಗಳನ್ನು ನೀಡುತ್ತದೆ. 1861ರ ಕೇಂದ್ರ ಪೊಲೀಸ್ ಕಾಯ್ದೆ ಬದಲಾಗುವುದಕ್ಕೆ ಹೀಗೆ ಮುಹೂರ್ತ ನಿಗದಿಯಾಗುತ್ತದೆ. 2006ರ ಅಕ್ಟೋಬರ್‌ನಲ್ಲಿ ಪೊಲೀಸ್ ಕಾಯ್ದೆ ಕರಡು ಸಮಿತಿ, ಯಾನೆ ಜನರ ಬಾಯಲ್ಲಿ ಕರೆಸಿಕೊಳ್ಳುವ ಸೋಲಿ ಸೊರಾಬ್ಜಿ ಸಮಿತಿ, ಕೇಂದ್ರದ ಗೃಹ ಸಚಿವಾಲಯಕ್ಕೆ ತನ್ನ ಶಿಫಾರಸುಗಳುಳ್ಳ ಕರಡು ಮಸೂದೆಯನ್ನು ಸಲ್ಲಿಸುತ್ತದೆ.
ಈ ಉದ್ದೇಶಿತ ತಿದ್ದುಪಡಿಯಲ್ಲಿಯೇ, ಪೊಲೀಸರ ವಿರುದ್ಧ ದೂರು ದಾಖಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸುವ ಸಲಹೆ ಅಡಕವಾಗಿರುತ್ತದೆ. ಸುಪ್ರೀಂಕೋರ್ಟ್‌ನ ಏಳು ನಿರ್ದೇಶನಗಳ ಒತ್ತಡ ಇರುವ ಹಿನ್ನೆಲೆಯಲ್ಲಿ, ಪೊಲೀಸ್ ದೂರು ಪ್ರಾಧಿಕಾರ ಎಂಬ ವ್ಯವಸ್ಥೆಯನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸುವ ಉಲ್ಲೇಖ ಕಾನೂನಾಗುತ್ತದೆ. ಪೊಲೀಸ್ ಕಂಪ್ಲೈಂಟ್ಸ್ ಅಥಾರಿಟಿ ಅರ್ಥಾತ್ ಪಿಸಿಎ ಪೊಲೀಸರ ದುರ್ನಡತೆ ಕುರಿತ ಎಲ್ಲ ದೂರು ದಾಖಲಿಸಿಕೊಳ್ಳುತ್ತದೆ.
ಅವುಗಳನ್ನು ಆಲಿಸಿ, ವಿಚಾರಣೆ ಅಥವಾ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸುವುದು ಇದರ ಉದ್ದೇಶ. ರಾಜ್ಯಮಟ್ಟದಲ್ಲಿ ಒಂದು ಪ್ರಾಧಿಕಾರ ಹಾಗೂ ಪ್ರತಿ ಜಿಲ್ಲಾ ಮಟ್ಟದಲ್ಲೂ ಒಂದೊಂದು ಪ್ರಾಧಿಕಾರಗಳಿರುತ್ತವೆ. ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ), ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶ್ರೇಣಿಗಿಂತ ಮೇಲಿನ ಅಧಿಕಾರಿಗಳ ವಿರುದ್ಧ ದೂರಿದ್ದರೆ ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ, ಡಿವೈಎಸ್‌ಪಿ ಸೇರಿದಂತೆ ಇತರ ಎಲ್ಲ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರುಗಳಿದ್ದರೆ ಆಯಾ ಜಿಲ್ಲಾ ಪ್ರಾಧಿಕಾರಗಳಲ್ಲಿ ದೂರು ದಾಖಲಿಸಬಹುದು.
ಪ್ರಾಧಿಕಾರಕ್ಕೆ, ಸಾರ್ವಜನಿಕರು ಹಾಗೂ ನೊಂದವರು ಪೊಲೀಸರ ಬಗ್ಗೆ ದೂರು ನೀಡಬಹುದು. ಮಾಧ್ಯಮಗಳ ವರದಿ ಆಧರಿಸಿ ಪ್ರಾಧಿಕಾರವೇ ಸ್ವಯಂ ದೂರು ದಾಖಲಿಸಿಕೊಳ್ಳಬಹುದು. ಅಲ್ಲದೆ, ಮಾನವ ಹಕ್ಕುಗಳ ಆಯೋಗಕ್ಕೆ ಪೊಲೀಸರ ವಿರುದ್ಧದ ದೂರುಗಳು ಬಂದರೆ, ಅದು ದೂರುಗಳನ್ನು ನೇರವಾಗಿ ಪ್ರಾಧಿಕಾರಕ್ಕೆ ವರ್ಗಾಯಿಸಬಹುದು. ಪೊಲೀಸ್ ಠಾಣೆ ಯಾ ಲಾಕಪ್‌ನಲ್ಲಿನ ಡೆತ್, ಅಕ್ರಮ ಬಂಧನ ಪ್ರಕರಣ, ಐಪಿಸಿ 320ರಲ್ಲಿ ತಿಳಿಸಿರುವಂತೆ ಗಂಭೀರ ಗಾಯ, ಠಾಣೆಗೆ ಕರೆದು ಹಿಂಸೆ ನೀಡಿದರೆ, ಹಣ ಅಥವಾ ವಸ್ತುವಿಗಾಗಿ ಬೇಡಿಕೆ, ಬೆದರಿಕೆಯನ್ನು ಪೊಲೀಸರು ಒಡ್ಡಿದ್ದರೆ, ಕಿರುಕುಳ, ಭೂ ಕಬಳಿಕೆ ಅಧಿಕಾರ ದುರುಪಯೋಗ, ಕರ್ತವ್ಯಲೋಪ ಅಥವಾ ನಿರ್ಲಕ್ಷ್ಯ ಕುರಿತು ಕೂಡ ಜಿಲ್ಲಾ ಪೊಲೀಸ್ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು.
ಯಾರಿಗೆ ಬೇಕು ಸುವ್ಯವಸ್ಥೆ?: ವ್ಯವಸ್ಥೆಯ ವಿರುದ್ಧ ಹೋರಾಡುವವರಿಗೆ ನಮ್ಮ ದೇಶದಲ್ಲಿ ಪ್ರಬಲ ಅಸ್ತ್ರಗಳನ್ನು ನೀಡಲು ಅಧಿಕಾರಶಾಹಿ ಹಾಗೂ “ಸೋ ಕಾಲ್ಡ್’ ಜನಪ್ರತಿನಿಧಿಗಳು ಅವಕಾಶ ಕೊಡುವುದಿಲ್ಲ. ಲೋಕಾಯುಕ್ತವನ್ನು ದುರ್ಬಲಗೊಳಿಸುವುದೇ ಆಡಳಿತದಲ್ಲಿಲ್ಲದ ರಾಜಕೀಯ ಪಕ್ಷಗಳಿಗೂ ಬಹುಮುಖ ಕೆಲಸವೆಂದ ತೋರುತ್ತದೆ. ಸೈ. ಮಾಹಿತಿ ಹಕ್ಕು ಕಾಯ್ದೆಯಡಿ ನ್ಯಾಯಾಲಯಗಳನ್ನಾಗಲಿ, ರಾಜಕೀಯ ಪಕ್ಷಗಳನ್ನು ತರುವುದಕ್ಕಾಗಲಿ ಈವರೆಗೆ ಸಮ್ಮತಿ ಸಿಕ್ಕಿಲ್ಲ. ಸುಪ್ರೀಂಕೋರ್ಟ್‌ನ ಆದೇಶದ ಅನ್ವಯ ತಕ್ಷಣ ಜಾರಿಗೆ ಬರಬೇಕಿದ್ದ ಪೊಲೀಸ್ ದೂರು ಪ್ರಾಧಿಕಾರ, ಇವತ್ತಿಗೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.
2012ರಲ್ಲೊಮ್ಮೆ ನವದೆಹಲಿಯ ಕಾಮನ್‌ವೆಲ್ತ್ ಹ್ಯೂಮನ್‌ರೈಟ್ಸ್ ಇನಿಶಿಯೇಟಿವ್ ಸಂಸ್ಥೆ ಈ ಪಿಸಿಎ ಜಾರಿ ಕುರಿತಾಗಿ ದೇಶಾದ್ಯಂತ ಸಮೀಕ್ಷೆ ನಡೆಸುತ್ತದೆ. ಅದು ಕಂಡುಕೊಂಡ ಅಂಶಗಳು ಗಾಬರಿಪಡಿಸುವಂತದು. ಅದಾಗಲೇ ಕಾಯ್ದೆ ಜಾರಿಯಾಗಿ ಆರು ವರ್ಷ ಕಳೆದಿದ್ದರೂ ಜಾರಿಯನ್ನು ಅಧಿಕಾರಶಾಹಿ ವಿಳಂಬ ನೀತಿಯ ಮೂಲಕ ಕೊಲೆ ನಡೆಸುವ ಪ್ರಯತ್ನದಲ್ಲಿರುತ್ತದೆ. ಆ ವೇಳೆಗೆ 14 ರಾಜ್ಯಗಳಲ್ಲಿ ಪ್ರಾಧಿಕಾರ ರಚನೆಯ ಪ್ರಕ್ರಿಯೆಗೆ ಒಪ್ಪಿಗೆ ಸಿಕ್ಕಿತ್ತಾದರೂ ಅಸ್ಸಾಂ, ಗೋವಾ, ಹರಿಯಾಣ, ಕೇರಳ, ತ್ರಿಪುರ, ಉತ್ತರಾಖಂಡ್ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ, ದಿಯು ಮತ್ತು ದಾಮನ್, ದೆಹಲಿಯಲ್ಲಿ ರಾಜ್ಯ ಪ್ರಾಧಿಕಾರ ಸ್ಥಾಪಿಸಲಾಗಿತ್ತು. ಕೇರಳದಲ್ಲಿ ಮಾತ್ರ ಜಿಲ್ಲಾ ಮಟ್ಟದ ಪ್ರಾಧಿಕಾರಕ್ಕೂ ಚಾಲನೆ ಸಿಕ್ಕಿತ್ತು.
ಕರ್ನಾಟಕ ಕೂಡ ಕಾಯ್ದೆಯನ್ವಯ ನಡೆದುಕೊಂಡ 14 ರಾಜ್ಯಗಳಲ್ಲಿ ಸೇರಿತ್ತಾದರೂ ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿ ಜಾರಿಯಾಗಿದ್ದೇ 2012ರ ಜೂನ್‌ನಲ್ಲಿ. 2010ರ ಒಂದು ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಹೈಕೋರ್ಟ್ ಮಾಜಿ ನ್ಯಾಯಾಧೀಶ ಆರ್.ಜೆ.ಬಾಬು ಅವರನ್ನು ನೇಮಕ ಮಾಡಲಾಗಿತ್ತಾದರೂ ಅವರಿಗೆ ಯಾವುದೇ ಸೌಲಭ್ಯ, ಸೌಕರ್ಯ, ಸಮಿತಿ ಸದಸ್ಯರನ್ನು ಕೊಡದಿದ್ದುದರಿಂದ ಜನರಿಗೆ ಸೇವೆಯೇ ಸಿಕ್ಕಿರಲಿಲ್ಲ. ಇಂತಹುದನ್ನು ಹಲವು ರಾಜ್ಯಗಳು ಮಾಡಿದ್ದವು. ಚತ್ತೀಸ್‌ಘಡ, ಮೇಘಾಲಯ, ಸಿಕ್ಕಿಮ್, ತ್ರಿಪುರ, ಉತ್ತರಾಖಂಡ್‌ಗಳಲ್ಲಿ ಕೇವಲ ರಾಜ್ಯ ಮಟ್ಟದ ಪ್ರಾಧಿಕಾರಗಳಲ್ಲಿ ಮಾಡಿ ಕೈತೊಳೆದುಕೊಳ್ಳಲಾಗಿತ್ತು. ಹರಿಯಾಣ ಪೊಲೀಸ್ ಕಾಯ್ದೆ ಜಿಲ್ಲಾ ಪ್ರಾಧಿಕಾರಕ್ಕೆ ಮಾತ್ರ ಅವಕಾಶ ಕಲ್ಪಿಸಿತ್ತು. ಬಿಹಾರದ್ದೂ ಇದೇ ಕತೆಯಾಗಿತ್ತು.
ಪ್ರಾಧಿಕಾರವಿದೆ, ಅಧ್ಯಕ್ಷರಿಲ್ಲ!: ಈಗ ಬೆಂಗಳೂರಿನ ವಿಕಾಸಸೌಧದಲ್ಲಿ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಕಚೇರಿ ಒದಗಿಸಲಾಗಿದೆ. ಮಾನವ ಹಕ್ಕು ಹಾಗೂ ದೂರು ಪರಿಹಾರ ಇಲಾಖೆಯ ಎಡಿಜಿಪಿ ಡಾ. ಕೆ.ರಾಮಚಂದ್ರರಾವ್ ಕಾರ್ಯದರ್ಶಿಯಾಗಿದ್ದಾರೆ. ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧ್ಯಕ್ಷರ ಹೆಸರು ನಮೂದಾಗಿಲ್ಲ, ಅಧ್ಯಕ್ಷರ ಹುದ್ದೆ ಖಾಲಿ ಇದೆ ಎಂದು ತೋರಿಸಲಾಗಿದೆ. 2013ರ ಸೆಪ್ಟೆಂಬರ್‌ನಲ್ಲಿ ನ್ಯಾ. ಎಂ.ಪಿ.ಚಿನ್ನಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರು ಕೆಲವು ಪ್ರಕರಣ ದೂರುಗಳನ್ನು ಸ್ವೀಕರಿಸಿದರು. ರಾಜ್ಯದಲ್ಲಿ ಒಂದೇ ಪ್ರಾಧಿಕಾರದ ಕಚೇರಿ ಇದಾಗಿದ್ದರಿಂದ ಆ ವರ್ಷದ ಸೆಪ್ಟೆಂಬರ್‌ನಲ್ಲಿಯೇ 14 ದೂರುಗಳು ಬಂದಿದ್ದವು. ಸ್ವಾರಸ್ಯ ಎಂದರೆ, ಪಿಸಿಎ ತನಿಖೆ ಮಾಡಿ, ವರದಿ, ಕ್ರಮ ಕೈಗೊಳ್ಳುವ ಶಿಫಾರಸು ಮಾಡಬಹುದೇ ವಿನಃ ಅದೇ ತನ್ನ ನೆಲೆಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸುವ ಅಧಿಕಾರ ಹೊಂದಿಲ್ಲ!
ಇವತ್ತು ಪ್ರಾಧಿಕಾರಕ್ಕೆ ಅಧಿಕೃತ ವೆಬ್‌ಸೈಟ್ ಇದೆ. ಗಮನಿಸಿ… https://www.karnataka.gov.in/spca/Pages/home.aspx ಅದರಲ್ಲಿ ಹಲವು ಮಾಹಿತಿಗಳನ್ನು ನೀಡಲಾಗಿದೆ. ಸಂಪರ್ಕ ವಿಳಾಸ, ದೂರವಾಣಿ ಹಾಗೂ ಜಿಲ್ಲಾ ಪ್ರಾಧಿಕಾರಗಳ ಮಾಹಿತಿ ಇದೆ. ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಕಾಂಬ್ಳೆ ಮತ್ತು ಐಪಿಎಸ್ ಅಧಿಕಾರಿ, ಕೆಎಸ್‌ಆರ್‌ಪಿ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಿದೆ. ನಾಗರಿಕ ಸಮಾಜವನ್ನು ಪ್ರತಿನಿಧಿಸುವ ಒಬ್ಬರನ್ನು ಪ್ರಾಧಿಕಾರಕ್ಕೆ ನೇಮಕ ಮಾಡಬೇಕಾಗಿದ್ದು, ಏಕಾಂಬರ ನಾಯ್ಡು ಎಂಬ ಹೆಸರು ವೆಬ್‌ನಲ್ಲಿ ಕಾಣಿಸುತ್ತದೆ. ಪೊಲೀಸ್ ಇಲಾಖೆಯ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರೂ ಸದಸ್ಯರಾಗಿದ್ದಾರೆ. ಆದರೆ ಅಧ್ಯಕ್ಷರೇ ಇಲ್ಲದ ಮೇಲೆ ಸಮಿತಿ ಕೆಲಸ ಮಾಡುವುದಾದರೂ ಹೇಗೆ?
ಜಿಲ್ಲಾ ಪ್ರಾಧಿಕಾರ ರಚನೆ: ಜಿಲ್ಲಾ ಮಟ್ಟದಲ್ಲಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಪ್ರಾಧಿಕಾರ ರಚನೆಯಾಗಿದೆ. ಅದರಲ್ಲಿ ಒಬ್ಬ ಜಂಟಿ ಕಾರ್ಯದರ್ಶಿ ದರ್ಜೆಯ ಒಬ್ಬ ನಿವೃತ್ತ ಅಧಿಕಾರಿ, ನಾಗರಿಕ ಸಮಾಜವನ್ನು ಪ್ರತಿನಿಧಿಸುವ ವ್ಯಕ್ತಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಾಧಿಕಾರದ ಸದಸ್ಯರಾಗಿರುತ್ತಾರೆ. ರಾಜಕೀಯ ಹಿತಾಸಕ್ತಿಗಳನ್ನು ಆಧರಿಸಿ ನಾಗರಿಕ ಸಮಾಜವನ್ನು ಪ್ರತಿನಿಧಿಸುವ ವ್ಯಕ್ತಿಯ ನೇಮಕವಾಗುವುದು ಸಹಜ. ಇವರೂ ಸರ್ಕಾರಗಳು ಬದಲಾದಾಗ ರಾಜೀನಾಮೆ ಕೊಡಬೇಕೆ? ಎಂಬ ಪ್ರಶ್ನೆ ಚರ್ಚಾರ್ಹ.
ಜಿಲ್ಲಾ ಪ್ರಾಧಿಕಾರಗಳ ಸಂಪರ್ಕ ಇ.ಮೈಲ್ ಹಾಗೂ ದೂರವಾಣಿ ವಿವರ ಪ್ರಾಧಿಕಾರದ ವೆಬ್ ಪುಟದಲ್ಲಿದೆ. ರಾಜ್ಯ ಪ್ರಾಧಿಕಾರದ ವಿಳಾಸ: ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ, ವಿಕಾಸಸೌಧ, ಕೊಠಡಿ ಸಂಖ್ಯೆ 36 ಮತ್ತು 37. ದೂರವಾಣಿ ಸಂಖ್ಯೆ 080-22386063. ಮತ್ತದೇ ಮಾತುಗಳಿಂದ ಮುಗಿಸೋಣ, ಆಡಳಿತಗಳು ಜಾರಿಗೆ ತರುವ ಕೆಲವು ಉಪಕ್ರಮಗಳು ನಮ್ಮಲ್ಲಿ ವಿಶ್ವಾಸದ ಪುಟ್ಟ ಚಿಲುಮೆಯನ್ನು ಹುಟ್ಟಿಸುತ್ತಲೇ ಇರುತ್ತವೆ. ಬಹುಶಃ ಪೊಲೀಸ್ ದೂರು ಪ್ರಾಧಿಕಾರ ಕೂಡ ಅಂತಹ ಒಂದು ಪ್ರಯತ್ನ.
* ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.