ಸಮ್ಮಿಶ್ರ ಆದಾಯ
Team Udayavani, Oct 23, 2017, 11:18 AM IST
ಬಿನ್ನ ಬೆಳೆಗಳನ್ನು ಬೆಳೆಯುವ ಕೃಷಿಯಲ್ಲಿ ಮಾತ್ರವಲ್ಲ, ಹೈನುಕಗಾರಿಕೆ, ಕೋಳಿ ಹಾಗೂ ಕುರಿ ಸಾಕಾಣಿಕೆಯಲ್ಲೂ ಭಾರೀ ಯಶಸ್ಸು ಪಡೆದಿರುವುದು ಅಶೋಕ ಶೇಖರ ಗೌಡರ ಹ ಎಚ್ಚುಗಾರಿಕೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗದಗೇರಿ ಗ್ರಾಮದ ಅಶೋಕ ಶೇಖರಗೌಡ ಕೋಳಿಹಾಳರದ್ದು ನಾಲ್ಕೆ ಎಕರೆ ಜಮೀನು ಹಸಿರು ಹೊದ್ದು ನಿಂತಿದೆ. ಪ್ರತಿ ಐದು ಸಾಲಿಗೆ ಒಂದರಂತೆ ಬೆಳೆಸಿರುವ ತೊಗರಿ ಗಿಡಗಳು ತೊನೆದಾಡುತ್ತಿವೆ. ಮಧ್ಯದ ಸಾಲುಗಳಲ್ಲಿ ಮೆಕ್ಕೆಜೋಳ. ಅದೇ ಸಾಲಿನಲ್ಲಿ. ಸಜ್ಜೆ ಗಿಡಗಳೂ ಪೈಪೋಟಿ ನೀಡಿ ಮೇಲೆದ್ದು ನಿಂತಿವೆ. ಬದುವಲ್ಲಿ ನವಣೆ, ಊದಲಿನಂತಹ ಸಿರಿ ಧಾನ್ಯಗಳ ಸಿರಿ ಮೈದಳೆದಿದೆ.
ಇಷ್ಟಕ್ಕೆಲ್ಲಾ ಕಾರಣ, ಬಿತ್ತನೆಗೂ ಮೊದಲು ಭೂಮಿ ಸಿದ್ದತೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದು. ಜೂನ್ ಎರಡನೆಯ ವಾರದಲ್ಲಿ ರೋಟೋವೇಟರ್ ಹೊಡೆಸಿದ್ದಾರೆ. ವಾರದ ನಂತರ ಬಲರಾಮ ಮಡಿಕೆ (ಕಲ್ಟಿವೇಟರ್) ಹೊಡೆದು ಮಣ್ಣು ಸಡಿಲಗೊಳಿಸಿದ್ದಾರೆ. ಎಕರೆ ಭೂಮಿಗೆ ಐದು ಟ್ರಾಕ್ಟರ್ ಲೋಡ್‌ನಷ್ಟು ಕಾಂಪೋಸ್ಟ್ ಗೊಬ್ಬರ ಹಾಕಿದ್ದಾರೆ. ಎತ್ತಿನ ಸಹಾಯದಿಂದ ಕುಂಟೆ ಹೊಡೆದು ಗೊಬ್ಬರವನ್ನು ಮಣ್ಣಿನೊಂದಿಗೆ ಒಂದುಗೂಡಿಸಿದ್ದಾರೆ. ಜುಲೈ ಮೊದಲ ವಾರದಲ್ಲಿ ಮೂರು ತಾಳಿನ ಮುಂಗಾರಿ ಕೂರಿಗೆಯಿಂದ ಬಿತ್ತನೆ. ಸಾಲಿನ ನಡುವೆ ಎರಡು ಅಡಿ, ಗಿಡಗಳ ನಡುವೆ ಮೂರು ಇಂಚು ಅಂತರವಿರುವಂತೆ ಜಾಗ್ರತೆ ವಹಿಸಿದ್ದಾರೆ. ಒಂದೂವರೆ ಎಕರೆಯಲ್ಲಿ ಮೆಕ್ಕೆಜೋಳ ಹಾಗೂ ಸಜ್ಜೆ ಬೀಜದ ಮಿಶ್ರಣ ಬಿತ್ತನೆ. ಎಕರೆಯೊಂದಕ್ಕೆ ಏಳು ಕಿ.ಗ್ರಾಂ ಮೆಕ್ಕೆಜೋಳ, ಮೂರು ಕಿಲೋ.ಗ್ರಾಂ ಸಜ್ಜೆ ಬಳಸಿದ್ದಾರೆ. ಉಳಿದ ಎರಡೂವರೆ ಎಕರೆಯಲ್ಲಿ ಜೋಳ ಹಾಗೂ ತೊಗರಿ ಬಿತ್ತಿದ್ದಾರೆ. ಇದರಲ್ಲಿಯೂ ಐದು ಸಾಲಿಗೆ ಒಂದರಂತೆ ಜವಾರಿ ತಳಿಯ ತೊಗರಿ ಬಿತ್ತನೆ.
ಬೀಜ ಬಿತ್ತಿದ ನಾಲ್ಕನೆಯ ದಿನಕ್ಕೆ ಸಜ್ಜೆ ಮೊಳಕೆಯೊಡೆದು ನಿಂತವು. ಎಂಟು ದಿನಕ್ಕೆ ಜೋಳ ಹಾಗೂ ತೊಗರಿ ಚಿಗುರಲಾರಂಭಿಸಿದವು. ಬಿತ್ತಿದ ಹದಿನೈದು ದಿನಕ್ಕೆ ಕುಂಟೆ ಹೊಡೆದು ಕಳೆ ನಿಯಂತ್ರಿಸಿದ್ದಾರೆ. ಮೂವತ್ತನೆಯ ದಿನಕ್ಕೆ ಒಂದೂವರೆ ಕ್ವಿಂಟಾಲ್ ಯೂರಿಯಾ ಗೊಬ್ಬರ ಉಗ್ಗಿ ಕುಂಟೆ ಹೊಡೆದು ಮಣ್ಣಿನೊಂದಿಗೆ ಮಿಶ್ರಗೊಳಿಸಿದ್ದಾರೆ. ಜೊತೆಯಾಗಿ ಬಿತ್ತಿರುವ ಸಜ್ಜೆ ಹಾಗೂ ಗೋವಿನ ಜೋಳ ಸರತಿ ಸಾಲಿನಲ್ಲಿ ಪೈಪೋಟಿಗೆ ಬಿದ್ದಂತೆ ಬೆಳೆದು ನಿಂತಿದೆ.
ಬೇರೆ ಬೇರೆ ದಿನದಲ್ಲಿಕೊಯ್ಲು
ಒಂದೇ ಸಾಲಿನಲ್ಲಿ ಮಿಶ್ರ ಬೆಳೆಯಾಗಿ ಬೆಳೆದ ಸಜ್ಜೆ ಹಾಗೂ ಜೋಳದ ನಡುವೆ ಕಟಾವಿನ ದಿನ ಅಂತರದ ಬೇಧವಿದೆ. ಬೀಜ ಬಿತ್ತಿದ ಮೂರು ತಿಂಗಳಿಗೆ ಸಜ್ಜೆಕೊಯ್ಲಿಗೆ ಸಿಕ್ಕಿದೆ. ತೆನೆಯನ್ನು ಕತ್ತರಿಸಿ ಒಣಗಿಸಿ ಸಂಸ್ಕರಿಸಿದ್ದಾರೆ. ಒಂದೂವರೆ ಎಕರೆಯಿಂದ ಸಜ್ಜೆ ಎಂಟು ಕ್ವಿಂಟಾಲ್ ಕಾಳು ದೊರೆತಿದೆ. ತೆನೆ ಕತ್ತರಿಸಿದ ಎರಡು ದಿನದ ನಂತರ ಸಜ್ಜೆ ಗಿಡಗಳ ಬುಡ ಕತ್ತರಿಸಿ ಒಂದೆಡೆ ಸಂಗ್ರಹಿಸುತ್ತಾರೆ. ಅವುಗಳನ್ನು ಚಾಪ್‌ಕಟ್ಟರ್ ಸಹಾಯದಿಂದ ಸಣ್ಣದಾಗಿ ಕತ್ತರಿಸಿ ರಸಮೇವು ತಯಾರಿಸಿ ಜಾನುವಾರುಗಳ ಆಹಾರವಾಗಿ ಬಳಸಿಕೊಳ್ಳುತ್ತಾರೆ.
ಬಿತ್ತನೆ ಮಾಡಿದ ನಾಲ್ಕು ತಿಂಗಳಿಗೆ ಮೆಕ್ಕೆಜೋಳದ ಕಟಾವು ಮುಗಿಸಿದ್ದಾರೆ. ಎಂಭತ್ತು ಕ್ವಿಂಟಾಲ್ ಇಳುವರಿ ಕೈ ಸೇರಿದೆ. ಜೋಳದ ತೆನೆ ಕತ್ತರಿಸಿದ ಎರಡು ದಿನಕ್ಕೆ ಗಿಡಗಳ ಬುಡವನ್ನು ಕತ್ತರಿಸಿ ಬಣವೆ ತಯಾರಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಸಜ್ಜೆ, ಜೋಳ ತೆರವುಗೊಂಡ ಭೂಮಿಯನ್ನು ಎತ್ತಿನ ಸಹಾಯದಿಂದ ಹರಗಿ ಹುರುಳಿ ಬಿತ್ತುವ ಆಲೋಚನೆಯಲ್ಲಿದ್ದಾರೆ. ತೊಗರಿ ಕಟಾವಿನ ನಂತರ ನಿಧಾನವಾಗಿ ಹುರುಳಿಯೂ ರೈತನ ಜೇಬು ತುಂಬಿಸುತ್ತದೆ. ಐದು ಸಾಲಿಗೊಂದರಂತೆ ಬೆಳೆದ ತೊಗರಿಯಿಂದ ಏಳು ಕ್ವಿಂಟಾಲ್ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ಜಾನುವಾರು ಸಾಕಾಣಿಕೆ
ಕೃಷಿಯಲ್ಲಿ ಭಿನ್ನತೆ ಅಳವಡಿಸಿಕೊಂಡಿರುವ ಇವರು ಹೈನುಗಾರಿಕೆಯಲ್ಲಿಯೂ ಪಳಗಿದ್ದಾರೆ. ಎಂಟು ಆಕಳು ಹೊಂದಿದ್ದು ಮೇವಿಗೆಂದೇ ಅರ್ಧ ಎಕರೆಯಲ್ಲಿ ಧಾರವಾಡ ನೇಪಿಯರ್ ಹುಲ್ಲು ಬೆಳೆಸಿದ್ದಾರೆ. ದಿನವೊಂದಕ್ಕೆ ಅರವತ್ತು ಲೀಟರ್ ಹಾಲು ದೊರೆಯುತ್ತಿದೆ. ಲೀಟರ್ ವೊಂದಕ್ಕೆ ಇಪ್ಪತ್ತೇಳು ರೂ.ದರ ಸಿಗುತ್ತಿದೆ. ಜಾನುವಾರು ಸಾಕಾಣಿಕೆಯಿಂದ 35,000ರೂ. ಆದಾಯ ಗಳಿಸುತ್ತಿದ್ದಾರೆ. ತಮಿಳುನಾಡಿನಿಂದ ತಂದಿರುವ ವಿಶೇಷವಾದ ಎಚ್.ಎಫ್ ತಳಿಯ ಹಸುವೊಂದು ಇವರ ಕೊಟ್ಟಿಗೆಯಲ್ಲಿದೆ. ದಿನಕ್ಕೆ ಇಪ್ಪತ್ತು ಲೀಟರ್ ಹಾಲು ಕೊಡುವ ಸಾಮರ್ಥ್ಯ ಅದರದು. ಯತೇಚ್ಚ ಹಸಿರು ಮೇವು, ರಸಮೇವು, ಒಣ ಮೇವು ದೊರೆಯುವುದರಿಂದ ಕಡಿಮೆ ಖರ್ಚಿನಲ್ಲಿ ಹೈನುಗಾರಿಕೆ ಸಾಧ್ಯವಾಗಿಸಿಕೊಂಡಿದ್ದಾರೆ.
ಪಶುಪಾಲನೆಯಲ್ಲಿ ಆಸಕ್ತಿ
ಕೋಳಿ ಸಾಕಾಣಿಕೆಯಲ್ಲಿ ಪಳಗಿದ ಕೈ ಇವರದು. ಎರಡು ನೂರು ನಾಟಿ ಕೋಳಿಗಳು ಇವರ ಮನೆಯೆದುರಲ್ಲಿ ಓಡಾಡಿಕೊಂಡಿವೆ. ವಾರ್ಷಿಕ ಮೂರು ಸಾವಿರ ಕೋಳಿ ಮೊಟ್ಟೆಗಳನ್ನು ಮಾರಾಟ ಮಾಡುತ್ತಾರೆ. ಪ್ರತೀ ಮೊಟ್ಟೆಗೆ ಆರು ರೂ. ದರ. ಮನೆ ಬಾಗಿಲಿಗೆ ಬಂದು ಒಯ್ಯುವ ಗ್ರಾಹಕರಿದ್ದಾರೆ. ಬೆಳೆದು ನಿಂತ ಕೋಳಿ 500-700 ರೂ.ವರೆಗೆ ಬೆಲೆ ಪಡೆದುಕೊಳ್ಳುತ್ತದೆ. ಸರಳ ಮಾದರಿಯ ಕೋಳಿ ಮನೆ ನಿರ್ಮಿಸಿದ್ದು ತಾವು ಬೆಳೆದ ಕಾಳು ಕಡಿಗಳನ್ನೇ ಆಹಾರವಾಗಿ ನೀಡುತ್ತಾರೆ.
ಕುರಿ ಸಾಕಾಣಿಕೆ ಇನ್ನೊಂದು ಆದಾಯದ ಮೂಲ. ಆರು ಆಡು, ಹನ್ನೊಂದು ಟಗರು ಇವರಲ್ಲಿದೆ. ಕುರಿ ಮೇಯಿಸುವ ಜವಾಬ್ದಾರಿ ತಾಯಿ ನಿಂಬವ್ವರದು. ಮೂರು ಸಾವಿರ ರೂಪಾಯಿಗೆ ಒಂದರಂತೆ ಕುರಿ ಮರಿಗಳನ್ನು ಖರೀದಿಸಿ ಮೂರು ತಿಂಗಳು ಮೇಯಿಸಿ 9,000-10,000 ರೂ.ಗೆ ಮಾರಾಟ ಮಾಡಿ ಬರುವುದು ಇವರ ಬುದ್ದಿವಂತಿಕೆ. ವರ್ಷಕ್ಕೆ ಮೂರು ಬ್ಯಾಚ್‌ಕುರಿ ಮಾರಾಟ. ಪ್ರತಿ ಬ್ಯಾಚ್‌ನಲ್ಲಿ ಹತ್ತು ಕುರಿಗಳಿರುತ್ತವೆ. ವಾರ್ಷಿಕ ಎರಡು ಲಕ್ಷ ಎಪ್ಪತ್ತು ಸಾವಿರ ರೂ. ಕುರಿಯಿಂದಲೇ ಲಾಭ.ವರ್ಷಕ್ಕೆ ಮೂವತ್ತು ಲೋಡ್‌ಗಳಷ್ಟು ಕೊಟ್ಟಿಗೆ ಗೊಬ್ಬರ ಉತ್ಪಾದನೆಯಾಗುತ್ತದೆ. ಯಥೇಚ್ಚವಾಗಿ ಕೃಷಿ ಭೂಮಿಗೆ ಬಳಸಿಕೊಳ್ಳುತ್ತಾರೆ.
ಸವಳು ಭೂಮಿಯಲ್ಲಿ ಕೃಷಿ
ಇವರ ಜಮೀನಿನ ಪಕ್ಕದಲ್ಲಿಯೇ ನಾಲ್ಕು ಎಕರೆ ಸವಳು ಭೂಮಿ ಇದೆ. ತಗ್ಗಿನ ಸ್ಥಳವದು. ಸುತ್ತಮುತ್ತಲಿನಿಂದ ಹರಿದು ಬಂದ ನೀರು ಸಂಗ್ರಹಗೊಳ್ಳುವುದು ಇಲ್ಲಿಯೇ. ಹಲವು ದಶಕಗಳಿಂದ ನೀರು ನಿಂತು ಭೂಮಿ ಸವಳಾಗಿದೆ. ಈ ಭೂಮಿಯನ್ನು ಕೃಷಿಗೆ ಪಳಗಿಸಬೇಕೆಂದು ಹಲವು ವರ್ಷಗಳಿಂದ ಶ್ರಮ ಪಡುತ್ತಾ ಬಂದಿದ್ದಾರೆ. ಗೋಬರ್‌ಗ್ಯಾಸ್ ನಿಂದ ಹೊರ ಬರುವ ಸ್ಲರಿಯನ್ನು ವಾರಕ್ಕೆ ಒಮ್ಮೆಯಂತೆ ನೀರಿನಲ್ಲಿ ಮಿಶ್ರಣ ಮಾಡಿ ಹರಿಯ ಬಿಟ್ಟಿದ್ದರು. ಇದರ ಪರಿಣಾಮ ಸವಳು ಕಳಚಿ ಹೋಗಿದೆ. ಭೂಮಿ ಕಸುವು ವೃದ್ದಿಸಿಕೊಂಡಿದೆ. ಕಳೆದ ಹಿಂಗಾರಿನಲ್ಲಿ ಈ ಭೂಮಿಯಲ್ಲಿ ಐದು ಕ್ವಿಂಟಾಲ್ ಜೋಳ, ಎರಡು ಕ್ವಿಂಟಾಲ್ ನವಣೆಯ ಫಸಲು ಪಡೆದಿದ್ದಾರೆ.
ಕೃಷಿ ಯಶಸ್ಸಿನ ಹಿಂದೆ ಇವರ ಕುಟುಂಬದ ಸದಸ್ಯರ ಹೊಂದಾಣಿಕೆಯ ಪರಿಶ್ರಮವಿದೆ. ತಾಯಿ ನಿಂಬವ್ವ, ಸಹೋದರ ಸುಭಾಸ್, ಪತ್ನಿ ಬಸಮ್ಮ, ಸಹೋದರನ ಪತ್ನಿ ಮಹಾದೇವಿ ಒಟ್ಟಾಗಿ ದುಡಿಯುತ್ತಾರೆ. ಶೂನ್ಯದಿಂದ ಮೇಲೆ ಬಂದ ಅಶೋಕ ಅವರ
ಸಾಧನೆಯ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನೆರವಿದೆ.
ಸಂಪರ್ಕಿಸಲು: 8151894719
ಕೋಡಕಣಿ ಜೈವಂತ ಪಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.