ಪರಿಕಲ್ಪನೆಯ ಪರಿಕ್ರಮಣ ಕಾಡು ತೋಟ ರಾಜ್ಯ ನೋಟ
Team Udayavani, Mar 25, 2019, 6:00 AM IST
ಕಾಡು ತೋಟ ಪರಿಸರಸ್ನೇಹಿ ತೋಟಗಾರಿಕೆಯ ಪರಿಕಲ್ಪನೆಯೇ ಹೊರತೂ ಕರಾರುವಕ್ಕಾಗಿ ಇಂಥ ಸಸಿಗಳನ್ನು ಇಷ್ಟು ಅಂತರದಲ್ಲಿ ಹೀಗೆ ನಾಟಿ ಮಾಡಲು ಹೇಳುವ ಕೃಷಿ ತಾಂತ್ರಿಕತೆಯ ಸ್ವರೂಪದ್ದಲ್ಲ. ಭೂಮಿಯ ಜೊತೆ ಬದುಕಿದ ಕೃಷಿಕ, ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಸಸ್ಯ ಸಂಕುಲಗಳನ್ನು ಸ್ವಾನುಭವದಲ್ಲಿ ಓದುತ್ತ ವಿವಿಧ ಹಂತದ ಬೆಳೆ ಬೆಳೆಯುವ ಕೌಶಲ್ಯವಿದು. ಇನ್ನೂ ಸರಳವಾಗಿ ಹೇಳಬೇಕೆಂದರೆ, ನಮಗೆ ಇಷ್ಟವಾದ ಬಟ್ಟೆಯನ್ನು ನಾವೇ ನೇಯುವುದೇ ಆಗಿದೆ.
ಕಾಡು ತೋಟ (ಅನಲಾಗ್ ಫಾರೆಸ್ಟ್) ಪರಿಕಲ್ಪನೆ ಜನಿಸಿದ್ದು ಮೊನೋಕಲ್ಚರ್ ನೆಡುತೋಪಿನ ವಿರುದ್ಧದ ಹೋರಾಟದಲ್ಲಿ ಎಂಬುದುನ್ನು ನೆನಪಿಡಬೇಕು. ಈಗಾಗಲೇ ಹೇಳಿದಂತೆ, 1980ರ ದಶಕದಲ್ಲಿ ಶ್ರೀಲಂಕಾದಲ್ಲಿ ನೈಸರ್ಗಿಕ ಕಾಡು ಕಡಿದು ಏಕಜಾತೀಯ ನೆಡುತೋಪು ಬೆಳೆಸುವ ಕೆಲಸ ನಡೆಯುತ್ತಿದ್ದಾಗ ಸರಕಾರದ ವಿರುದ್ಧ ಪರಿಸರ ತಜ್ಞ ಡಾ.ರೇನಿಯಲ್ ಸೇನಾನಾಯಕೆ ಧ್ವನಿ ಎತ್ತಿದರು. ಅರಣ್ಯ ಇಲಾಖೆಯ ಮಾರ್ಗದರ್ಶಕರಾಗಿದ್ದ ರೇನಿಯಲ್‌ರನ್ನು ಸರಕಾರ ಸೇವೆಯಿಂದ ಹೊರದಬ್ಬಿತು. ಮೊನೋಕಲ್ಚರ್ ನೆಡುತೋಪಿಗೆ ಪರ್ಯಾಯ ಏನಿದೆ? ನ್ಯಾಯಾಲಯ ವಿಚಾರಣೆ ಸಂದರ್ಭದಲ್ಲಿ ಅವರನ್ನು ಪ್ರಶ್ನಿಸಿದಾಗ, ಹುಡುಕಾಟದ ಹಾದಿ ಶುರುವಾಯ್ತು.
ಮಿರಾವತ್‌ನ ಬೆಟ್ಟಗುಡ್ಡಗಳ ನಡುವಿನ ಬಂದರ್ ಲಾ ಪ್ರದೇಶದ ಹಾಳು ಬಿದ್ದ ಚಹದ ತೋಟ ಖರೀದಿಸಿ “ನಿಯೋ ಸಿಂಥಸಿಸ್ ರಿಸರ್ಚ್ ಸೆಂಟರ್’ ಸಂಸ್ಥೆ ಆರಂಭಿಸಿದ ರೇನಿಯಲ್ ನೈಸರ್ಗಿಕ ಕಾಡು ಬೆಳೆಸುವ ವಿಧಾನ ಆರಂಭಿಸಿದರು. ಚಹಾ ಗಿಡಗಳನ್ನು ಕತ್ತರಿಸಿ ಆರಂಭದಲ್ಲಿ ನೆರಳು ನೀಡುವ, ಶೀಘ್ರ ಬೆಳೆಯುವ, ಸಾರಜನಕ ಸ್ಥಿರೀಕರಿಸುವ ಸಸ್ಯಗಳನ್ನು ಬೆಳೆಸಿದರು. ನಂತರದ ವರ್ಷಗಳಲ್ಲಿ ಹಣ್ಣಿನ ಗಿಡ, ಬಳ್ಳಿ, ಬೆಲೆ ಬಾಳುವ ಮರ, ಗಡ್ಡೆ ಗೆಣಸನ್ನು ಬೆಳೆದರು. 10 ವರ್ಷಗಳಲ್ಲಿ ನೆಲ ಫಲವತ್ತಾಯಿತು. ತೋಟದ ಆದಾಯವೂ ಹೆಚ್ಚಿತು. ವಿವಿಧ ಪಕ್ಷಿ$ಸಂಕುಲಗಳಿಗೆ ತೋಟ ಆಶ್ರಯ ನೀಡಿತು. 1994 ರಲ್ಲಿ, ಮೆಕ್ಸಿಕೋದಲ್ಲಿ ಸಭೆ ಸೇರಿದ ಪರಿಸರ ತಜ್ಞರು “ಅನಲಾಗ್ ಫಾರೆಸ್ಟ್’ ಅರಣ್ಯೀಕರಣದ ಒಂದು ಉತ್ತಮ ಮಾದರಿಯೆಂದು ಗುರುತಿಸಿದರು. ಇದನ್ನು ಮತ್ತೆ ಮತ್ತೆ ನೆನಪಿಸುವುದಕ್ಕೆ ಕಾರಣವಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಾಡು ತೋಟದ ವರದಿಗಳು ಪ್ರಕಟವಾಗುತ್ತಿವೆ. ಗಮನಿಸಿ ನೋಡಿದರೆ ಬದುವಿನಲ್ಲಿ ಮರ ಬೆಳೆಸುವ ಕೃಷಿ ಅರಣ್ಯವನ್ನೇ ಹೀಗೆ ಗುರುತಿಸುವ ಪ್ರಮಾದ ನಡೆಯುತ್ತಿದೆ.
ಹೊಸ ಸಾಹಸಕ್ಕೆ ಮುನ್ನುಡಿ
ಶ್ರೀಲಂಕಾದ ತೋಟ ವೀಕ್ಷಿಸಿದ ಕನ್ನಡಿಗ, ಬರಹಗಾರ ಜಿ. ಕೃಷ್ಣಪ್ರಸಾದ್ ಅಡಿಕೆ ಪತ್ರಿಕೆಯಲ್ಲಿ ಕ್ರಿ.ಶ. 2002ರ ಫೆಬ್ರವರಿಯಲ್ಲಿ “ನಿಸರ್ಗ ಸಹಜ ಕೃಷಿ ಅರಣ್ಯ – ತದ್ರೂಪಿ ಕಾಡು’ ಲೇಖನ ಪ್ರಕಟಿಸಿದರು. ಇದು ಕನ್ನಡದಲ್ಲಿ ಈ ಕುರಿತ ಪ್ರಥಮ ಲೇಖನವಾಗಿದೆ. ಇದಾದ ನಂತರ ಕರ್ನಾಟಕದ ಪಶ್ಚಿಮ ಘಟ್ಟದ ತೇಗ, ಅಕೇಶಿಯಾ, ನೀಲಗಿರಿ, ಮ್ಯಾಜಿಯಂ ನೆಡುತೋಪುಗಳ ಇತಿಹಾಸ, ಪರಿಸರ ಪರಿಣಾಮಗಳ ಕುರಿತು ಕ್ರಿ.ಶ. 2003 ರಲ್ಲಿ “ಮೊನೋಕಲ್ಚರ್ ಮಹಾಯಾನ’ ಪುಸ್ತಕವನ್ನು ನಾನು ಪ್ರಕಟಿಸಿದೆ. ರಾಜ್ಯದ ಪಶ್ಚಿಮ ಘಟ್ಟದಲ್ಲಿ ದೇಶಿ ಸಸ್ಯಗಳ ವ್ಯಾಪಕ ನಾಟಿ ವಿರೋಧಿಸಿದಾಗ ಶೀಘ್ರ ಬೆಳೆಯುವ ನಮ್ಮ ಕಾಡು ಸಸ್ಯ ಪರಿಚಯಿಸುವ ಅನಿವಾರ್ಯತೆ ಎದುರಾಯಿತು. ವಿವಿಧ ಭಾಗ ಸುತ್ತಾಡಿ ಎಂಟು ವರ್ಷ ಅಧ್ಯಯನ ನಡೆಸಿದ ಬಳಿಕ “ದೇಶಿ ನೆಲದ ಹಸಿರು ಭೀಮ ಹೆಬ್ಬೇವು’ ಬರೆದಿದ್ದು ಕೃಷಿಕರ ಗಮನ ಸೆಳೆಯಿತು. ಇಂದು ರಾಜ್ಯದೆಲ್ಲೆಡೆ ಹೆಬ್ಬೇವಿನ ಪ್ರೀತಿ ಹಬ್ಬಲು ಇದು ಮುಖ್ಯಕಾರಣವಾಯ್ತು. ಶ್ರೀಲಂಕಾದ ಅನಲಾಗ್ ಫಾರೆಸ್ಟ್ ಹಾಗೂ ಮಲೆನಾಡಿನ ತೋಟಗಾರಿಕೆಯ ಹೊಸ ಸಾಧ್ಯತೆಗಳ ಕುರಿತು ಕ್ರಿ .ಶ. 2008ರಲ್ಲಿ ‘ತದ್ರೂಪಿ ಕಾಡು’ ಪುಸ್ತಕವನ್ನು ನಾನು ಹಾಗೂ ಕೃಷ್ಣಪ್ರಸಾದ್ ಬರೆದೆವು. ಕೃಷಿಗೇರಿದ ಹೊಸ ತಲೆಮಾರಿನ ಹುಡುಗರಲ್ಲಿ ಕಾಡು ತೋಟದ ಕುರಿತು ಸಣ್ಣ ಚರ್ಚೆಗಳು ಆರಂಭವಾದವು.
ನಿಸರ್ಗ ಸಂಧಾನದ ದಾರಿ
ಮರ ಬೆಳೆಸಿ ಉದ್ಯಮಗಳಿಗೆ ಮಾರುವ ವಿಧಾನ ಬದಲಿಸಿ ಹುಲ್ಲಿನಿಂದ ಹೆಮ್ಮರದ ತನಕ ಸಸ್ಯ ವೈವಿಧ್ಯದ ತೋಟ ಬೆಳೆಸುವುದು “ಕಾನೊ¤àಟ’ದ ಪರಿಕಲ್ಪನೆ. ಏಕಜಾತೀಯ ತೋಟಗಾರಿಕೆ ಅಪಾಯಗಳ ಬಗ್ಗೆ ಎಚ್ಚರಿಸಿ ಅದಕ್ಕೊಂದು ಕಡಿವಾಣ ಹಾಕುವ ಅಗತ್ಯವಿದೆ. ಕೀಟ, ರೋಗದಿಂದ ಬಳಲಿದ ಬೇಸಾಯ, ರಾಸಾಯನಿಕ ವಿಷವರ್ತುಲದಲ್ಲಿ ಸಿಲುಕಿದೆ. ಇನ್ನೊಂದೆಡೆ, ನಾಡು ಜಲಕ್ಷಾಮದಿಂದ ಬಳಲುತ್ತಿದೆ, ಅರಣ್ಯನಾಶ ಮಿತಿಮೀರಿದೆ. ಮಲೆನಾಡಿನ ಗುಡ್ಡದಲ್ಲಿ ಅಕೇಶಿಯಾ, ಕಣಿವೆಯಲ್ಲಿ ಅಡಿಕೆ ತೋಟಗಳಾಗಿ ಪರಿಸರ ಪರಿಸ್ಥಿತಿ ಹದಗೆಟ್ಟಿದೆ. ಅಕ್ಕಪಕ್ಕದ ಕಾಡು ನೋಡಿ ಕೃಷಿ ಮಾಡುವ ತಂತ್ರ ಅನುಸರಿಸುವ ಅಗತ್ಯವಿದೆ. ಜೇನು, ಕಪ್ಪೆ, ಜೇಡ, ಇರುವೆ, ಹಾವು, ಗುಲಗುಂಜಿ ಹುಳು ಮುಂತಾದ ಸಣ್ಣಪುಟ್ಟ ಜೀವಿಗಳ ಕೃಷಿ ಕೊಡುಗೆ ಗಮನಿಸಿ ಕೃಷಿಗೂ ಕಾಡಿಗೂ ನಡುವಿನ ಜೀವದಾರಿ ಸಂರಕ್ಷಿಸುವ ಹೆಜ್ಜೆ ಇದು. ತೋಟಗಾರಿಕೆಗಾಗಿ ಮಣ್ಣು-ನೀರು ಹಾಳು ಮಾಡುವ ಪರಿಸರ ಸಂಘರ್ಷದ ಹಾದಿ ತಪ್ಪಿಸಿ “ನಿಸರ್ಗ ಸಂಧಾನ’ ಅನುಸರಿಸಲು “ಅನಲಾಗ್’ ಮಾದರಿ ಜನಿಸಿತೆಂಬುದನ್ನು ಸದಾ ನೆನಪಿಡಬೇಕು.
ವಿಶೇಷವೆಂದರೆ 40-50 ವರ್ಷ ಹಿಂದಿನ ಮಲೆನಾಡಿನ ಅಡಿಕೆ, ಕಾಫಿ ತೋಟದ ಪಾರಂಪರಿಕ ಜಾnನಗಳಲ್ಲಿ ಅನಲಾಗ್ ಸೂತ್ರ ಅಡಕವಾಗಿದೆ. ಎತ್ತರದ ಅಡಿಕೆ ಮರ, ಅಡಿಕೆಗೆ ಹಬ್ಬಿಸಿದ ಕಾಳು ಮೆಣಸಿನ ಬಳ್ಳಿ, ತೋಟದ ನಡುವಿನ ಬಾಳೆ, ಅರಿಸಿನ, ಗೆಣಸು, ಕೆಸುವಿನ ಗಡ್ಡೆ, ಏಲಕ್ಕಿ, ಬೆಳೆಗಳು. ತೋಟದ ಸುತ್ತಲಿನ ಆವರಣದಲ್ಲಿ ಬೆಳೆಸಿದ ಹಲಸು, ಮಾವು, ತೆಂಗು, ಸಂಪಿಗೆ, ಜಾಯಿಕಾಯಿ, ಬಿಂಬಳೆ, ಬೇರು ಹಲಸು, ಅಮಟೆ, ನುಗ್ಗೆ, ಕಂಚಿ, ಚಕ್ಕೋತ ಮುಂತಾದ ಮರ ಬೆಳೆಯುವ ಕೌಶಲ್ಯ ಇಲ್ಲಿದೆ. ತೋಟಗಾರಿಕೆಯಲ್ಲಿ ಗರಿಷ್ಠ ಫಲ ಪಡೆಯುವ ಗುರಿಯ ಹೊರತಾಗಿ ಮಣ್ಣು, ನೀರು, ಜೀವಸಂಕುಲ ಸಂರಕ್ಷಣೆ ಮೂಲಕ ಸುಸ್ಥಿರತೆ ಸಾಧಿಸುವ ಸೂಕ್ಷ್ಮವಿದೆ. ಬರ ಗೆಲ್ಲುವ ತಂತ್ರ ಕಲಿಯಲು ಮರಗಳ ನೆರವು ಪಡೆಯಬೇಕಿದೆ.
ಬರಗೆಲ್ಲುವ ತಂತ್ರ
ರಾಜ್ಯದಲ್ಲಿ ಇಂದು 300 ಮಿಲಿ ಮೀಟರ್ ಮಳೆ ಸುರಿಯುವ ಚಳ್ಳಕೆರೆಯಿಂದ 6000 ಮಿಲಿ ಮೀಟರ್ ಸುರಿಯುವ ಆಗುಂಬೆಯಲ್ಲಿಯೂ ಈಗ ತೋಟದ ಬೆಳೆ ಇದೆ. ಒಂದು ಕಾಲದಲ್ಲಿ ಕೆರೆ, ಗುಡ್ಡದ ತಗ್ಗಿನ ಭೂಯಿಯಲ್ಲಿ ಮಾತ್ರ ತೆಂಗು, ಅಡಿಕೆ ಕಾಣಿಸುತ್ತಿದ್ದ ಬಯಲು ನೆಲೆಯಲ್ಲಿ ಇಂದು ರೋಜಾ ಕಂಟಿ( ಲಂಟಾನಾ), ಕಾರೆ ಗಿಡ ಬೆಳೆಯುವಲ್ಲಿ ಬಹುವಾರ್ಷಿಕ ತೋಟಗಾರಿಕೆ ವೃಕ್ಷಗಳಿವೆ. ತೋಟದ ಆದಾಯವೆಲ್ಲ ನೀರು, ಗೊಬ್ಬರ, ನಿರ್ವಹಣೆಗೆ ಖರ್ಚಾಗುತ್ತಿದೆ. ಮಸಾರಿ, ಮಡಿಕಟ್ ( ಮಸಾರಿ ಹಾಗೂ ಎರೆ ಮಿಶ್ರಿತ), ಎರೆ ಭೂಮಿ, ಕಲ್ಲುಗುಡ್ಡದಲ್ಲಿಯೂ ನೀರಾವರಿ ತೋಟ ಬೆಳೆಸುವ ಸಾಹಸ ಸಾಗಿದೆ. ಸುರಿಯುವ ಮಳೆ, ಮಣ್ಣಿನ ನೀರು ಹಿಡಿಯುವ ಶಕ್ತಿಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಿದೆ. ಆಷಾಡದ ಗಾಳಿಯ ಪ್ರಹಾರಕ್ಕೆ ಬಳ್ಳಾರಿಯ ಹಗರಿ ಹಳ್ಳದ ಆಸುಪಾಸಿನ ತೋಟದ ಸಮಸ್ಯೆ ಚಿತ್ರವಾಗಿದೆ. ಅಲ್ಲಿ ಇದ್ದಕ್ಕಿದ್ದಂತೆ ಮರಳ ದಿಬ್ಬಗಳು ರೂಪುಗೊಳ್ಳುತ್ತಿವೆ. ದಾಳಿಂಬೆ, ದ್ರಾಕ್ಷಿ$ ನೆಲೆಗಳಲ್ಲಿ ತೋಟಕ್ಕೆ ನೀರು ಬೇಕು ಆದರೆ ಮಳೆ ಸುರಿಯಬಾರದು. ನೀರಾವರಿ ಅಗತ್ಯವಿಲ್ಲದ ನೇರಲು, ಹುಣಸೆ, ಬೇಲ, ನೆಲ್ಲಿ, ಸೀತಾಫಲ, ಮಾವು 500-800 ಮಿಲಿ ಮೀಟರ್ ಮಳೆ ಮಾತ್ರ ಸುರಿಯುವಲ್ಲಿದೆ. ಇವು ಬೆದುÉ ( ಮಳೆ ಆಶ್ರಿತ) ನೆಲೆಯಲ್ಲಿ ಬದುಕುವ ಸಾಧ್ಯತೆ ತೋರಿಸಿವೆ. ಕಾಡು ತೋಟದ ಬೇಸಾಯ ತಂತ್ರ ಕಲಿಕೆಗೆ ಇವುಗಳ ವೀಕ್ಷಣೆ ಸಹಾಯಕವಾಗುತ್ತದೆ.
ನೋಡಿ ಕಲಿಯಲು ಸಕಾಲ
ಮಾವಿನ ನಡುವೆ ಶುಂಠಿ, ಜೋಳ, ಅರಿಶಿನ ಬೆಳೆಯುವವರಿದ್ದಾರೆ. ತೆಂಗಿನ ಜೊತೆಗೆ ಬಾಳೆ, ರಾಗಿ, ಅಡಿಕೆ ಜೊತೆಗೆ ಬಳ್ಳಿ ತರಕಾರಿ ಬೆಳೆಯುವ ಮಾದರಿಗಳಿವೆ. ಮುಖ್ಯವಾಗಿ ಅನುಭವ, ಭೂಮಿಯ ಶಕ್ತಿ ಬಳಸಿಕೊಂಡು ಮಾರುಕಟ್ಟೆಗೆ ತಕ್ಕಂತೆ ಬೆಳೆಯುವ ಸಾಹಸ ಸಾಗಿದೆ. ತೋಟ ನೋಡುತ್ತ ನಾಡು ಸುತ್ತಾಡಿದಾಗ ಕಲಿಕೆಗೆ ಮಾದರಿಗಳು ಸಿಗುತ್ತವೆ. ಆದರೆ, ಅದನ್ನು ನೇರಾ ನೇರ ನಕಲು ಮಾಡಲು ಸಾಧ್ಯವಿಲ್ಲ. ಪೇಟೆ ಪಟ್ಟಣಗಳಿಗೆ ಹೋದಾಗ ಉಡುಗೆ, ಆಹಾರ, ಭಾಷೆ ವಿಶೇಷ ಗಮನಿಸಿ ಇಷ್ಟವಾದವನ್ನು ಅನುಸರಿಸಲು ಹೋಗುತ್ತೇವೆ. ಕಾಡು ತೋಟದ ಕಲಿಕೆ ಇಂಥ ನೋಟಗಳಿಂದ ಶುರುವಾಗುತ್ತದೆ. ಹೊಸ ಸಸ್ಯ ತರುವುದು, ಹಳೆಯ ಸಸ್ಯದ ಜಾಗ ಬದಲಿಸುವುದು, ಟೊಂಗೆ ಕತ್ತರಿಸುವುದು, ಪರಿಸರಕ್ಕೆ ಹೊಂದಿಸುವಂತೆ ಬೇಸಾಯ ಕ್ರಮದಲ್ಲಿ ನಿರಂತರ ಅನುಸರಣೆ ಬೇಕಾಗುತ್ತದೆ. ಕರಾವಳಿಯಲ್ಲಿ ಭೂ ಹಿಡುವಳಿ ಅತ್ಯಂತ ಕಡಿಮೆ ಇದೆ. ಕೇವಲ 15-20 ಗುಂಟೆಯಲ್ಲಿ ಮನೆಯ ನಿತ್ಯದ ಅಡುಗೆ ಅಗತ್ಯ ಸಸ್ಯಗಳ ಜೊತೆಗೆ ತೆಂಗು, ಅಡಿಕೆ ವಾಣಿಜ್ಯ ಬೆಳೆ ಬೆಳೆದು ಕುಟುಂಬ ಸಲಹುವ ಜಾಣ್ಮೆಗಳಿವೆ. ಸ್ವಂತ ದುಡಿಮೆಯಲ್ಲಿ ಅನುಭವ ಬೆಳೆಸಿಕೊಳ್ಳುವವರು ಕಾನೊ¤àಟದ ಸಮರ್ಥ ಪೋಷಕರಾಗಬಹುದು. ನೋಡಿ ಕಲಿಯಲು ಈಗ ರಾಜ್ಯದ ಆಯ್ದ ತೋಟಗಳ ಸುತ್ತಾಟ ಶುರುವಾಗಬೇಕಿದೆ.
ಕಾಡು ತೋಟ-17. ಅನಲಾಗ್ ಕಣ್ಣಲ್ಲಿ ತೋಟ ಹುಡುಕಾಟ
– ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.