ಕೂಲ್ ಕೂಲ್: ಬೇಸಗೆಯಲ್ಲಿ ಜಾನುವಾರುಗಳ ಆರೈಕೆ
Team Udayavani, Mar 9, 2020, 5:05 AM IST
ಬೇಸಗೆ ಕಾಲವಾದ್ದರಿಂದ ಮುಂದಿನ ದಿನಗಳಲ್ಲಿ ಬಿಸಿಲು ಏರುತ್ತಲೇ ಹೋಗುತ್ತದೆ. ಮಳೆಗಾಲದಿಂದ ಚಳಿಗಾಲ. ಚಳಿಗಾಲದಿಂದ ಬೇಸಗೆಕಾಲ. ಹೀಗೆ, ವಾತಾವರಣ ಬದಲಾದ ಹಾಗೆಲ್ಲ ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ಹಾಗೆಯೇ ಜಾನುವಾರುಗಳಿಗೆ ಬೇಸಗೆಯಲ್ಲಿ ಮಾತ್ರ ಕಾಡುವ ಹಲವು ಕಾಯಿಲೆಗಳಿವೆ. ಅವುಗಳ ಬಗ್ಗೆ ತಿಳಿದು ಮುಂಜಾಗ್ರತೆ ವಹಿಸಬೇಕು. ಮುಖ್ಯವಾಗಿ ಬೇಸಗೆಯಲ್ಲಿ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗುತ್ತದೆ. ಜಾನುವಾರು ಹೊಂದಿರುವವರು ಸಾಕಷ್ಟು ಮೇವು ಹಾಗೂ ನೀರಿನ ಲಭ್ಯತೆ ಹೊಂದಿರಬೇಕು. ಹಸಿರು ಮೇವು- ಮೇವಿನ ಸೊಪ್ಪು ಕೂಡ ಹೊಂದಿಸಿಕೊಂಡಿರಬೇಕು.
ಪೋಷಕಾಂಶಯುಕ್ತ ಆಹಾರ
ಪಶು ಆಹಾರ ದುಬಾರಿಯಾದ್ದರಿಂದ ಅದರ ಬದಲು ಪೋಷಕಾಂಶಭರಿತ ಮೇವು ಕೊಡುವತ್ತ ಗಮನ ಹರಿಸಬೇಕು. ಸಾಕಾಗುವಷ್ಟು ಮೇವು ಕೊಡದೇ ಹೋದರೆ ಜಾನುವಾರುಗಳ ದೇಹದಲ್ಲಿ ಕ್ಯಾಲ್ಸಿಯಂ, ಕಬ್ಬಿಣದ ಪೋಷಕಾಂಶಗಳ ಜೊತೆಗೆ ವಿಟಮಿನ್ ಗಳ ಕೊರತೆಯುಂಟಾಗಿ ದನಗಳು ರಕ್ತಹೀನತೆಯಿಂದ ಬಳಲುತ್ತವೆ. ಇದರಿಂದ ಪ್ರಾಣಕ್ಕೂ ಅಪಾಯ ಒದಗಬಹುದು.
ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದೇ ಅರ್ಥ. ಅಂಥ ದನಗಳಿಗೆ ಸಾಕಷ್ಟು ಕಾಳಜಿ ವಹಿಸಿ ಉತ್ತಮ ಮೇವು, ಶುದ್ಧ ನೀರು ಕೊಟ್ಟು ಸಲಹಿದರೆ ಪ್ರಾಣಪಾಯದಿಂದ ಪಾರಾಗುತ್ತವೆ. ತೀರಾ ಕೃಶವಾಗಿದ್ದರೆ ಪಶುವೈದ್ಯರ ಸಲಹೆ ಪಡೆಯುವುದು ಉತ್ತಮ.
ಗಿಡಮರಗಳ ಕೆಳಗೆ ಕಟ್ಟಿ ಹಾಕಿ
ಹಸುಗಳಿಗೆ ಹೋಲಿಸಿದಲ್ಲಿ ಎಮ್ಮೆಗಳಿಗೆ ಬಿಸಿಲಿನ ಬಾಧೆ ಜಾಸ್ತಿ. ಎಮ್ಮೆಗಳದ್ದು ಕಪ್ಪನೆಯ ಮೈ ಬಣ್ಣ, ಕೂದಲು ಕಡಿಮೆ. ಜೊತೆಗೆ ಬೆವರಿನ ಗ್ರಂಥಿಗಳ ಸಾಂದ್ರತೆ ಕಮ್ಮಿ ಇರುವುದರಿಂದ ಉರಿ ಬಿಸಿಲನ್ನು ತಡೆದುಕೊಳ್ಳುವ ಸಾಮರ್ಥ್ಯವೂ ಅವುಗಳಲ್ಲಿ ಕಡಿಮೆ. ಆದ್ದರಿಂದ ಎಮ್ಮೆ ಸಾಕುವವರು ಕೊಟ್ಟಿಗೆಯಲ್ಲಿ ತಂಪಾದ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಬೆಳಿಗ್ಗೆ ಹಾಗೂ ಸಾಯಂಕಾಲ ಮಾತ್ರ ಹೊರಗೆ ಅಡ್ಡಾಡಲು ಬಿಡಬೇಕು. ಜಮೀನಿನಲ್ಲಿ ಸಾಕಷ್ಟು ಗಿಡ ಮರಗಳಿದ್ದರೆ, ಅದರ ಕೆಳಗೆ ಕಟ್ಟಿ ಹಾಕಿ. ಶೆಡ್ ಗಿಂತ ಗಿಡ ಮರಗಳ ಕೆಳಗೆ ಎಮ್ಮೆಗಳು ಹಾಯಾಗಿರುತ್ತವೆ. ತಂಪು ಹೊತ್ತಿನಲ್ಲಿ ಪಶು ಆಹಾರ ನೀಡುವುದು, ಆದಷ್ಟು ಹಸಿರು ಮೇವು ನೀಡುವುದು ಒಳ್ಳೆಯ ಕ್ರಮ. ಇನ್ನು ಹವಾಮಾನದಲ್ಲಿ ಒಮ್ಮೆಲೇ ಬದಲಾವಣೆಯಾದಾಗ, ರೋಗಾಣುಗಳು ವೃದ್ಧಿಯಾಗಿ ಹಲವಾರು ಕಾಯಿಲೆಗಳನ್ನು ಹುಟ್ಟು ಹಾಕುತ್ತವೆ. ಕಂದು ಮೂತ್ರ ರೋಗ, ಥೈಲೀರಿಯ, ಅನಾಪ್ಲಾಸ್ಮ ಮುಂತಾದ ಕಾಯಿಲೆಗಳ ಕಾಟ ಬೇಸಗೆಯಲ್ಲಿ ಜಾಸ್ತಿ.
ಪರಾವಲಂಬಿ ಜೀವಿಗಳಿಂದ ದೂರವಿಡಿ
ಬೇಸಿಗೆಯಲ್ಲಿ ಉಣ್ಣೆಗಳ ಬಾಧೆ ಜಾಸ್ತಿ. ಟ್ರಿಪನೊಸೋಮಿಯಾಸಿಸ್ ಎಂಬ ಕಾಯಿಲೆ ಪ್ರಾಣಿಗಳ ರಕ್ತ ಹೀರುವ ಕುರುಡು ನೊಣಗಳಿಂದ ಹರಡುತ್ತದೆ. ಬೇಸಗೆಯಲ್ಲಿ ಈ ನೊಣಗಳ ಹಾವಳಿ ಜಾಸ್ತಿ. ಇದೇ ಸಮಯದಲ್ಲಿ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆಯ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ರೈತರು ಪರಾವಲಂಬಿ ಜೀವಿಗಳಾದ ಉಣ್ಣೆ, ಹೇನು, ಚಿಗಟಗಳನ್ನು ನಿಯಂತ್ರಿಸಿ ತಮ್ಮ ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಉತ್ಕೃಷ್ಟ ಮೇವು, ಶುದ್ಧ ನೀರು ಕೊಡುವುದರ ಜೊತೆಗೆ ಸ್ವಚ್ಚತೆ ಕಾಪಾಡಿಕೊಂಡು ಪಾಲನೆ ಪೋಷಣೆ ಬಗ್ಗೆ ಕಾಳಜಿ ವಹಿಸಿದರೆ ಬೇಸಗೆಯಲ್ಲಿ ಕಾಡುವ ಬಹುತೇಕ ಸಮಸ್ಯೆಗಳಿಂದ ನಮ್ಮ ಜಾನುವಾರುಗಳನ್ನು ರಕ್ಷಿಸಬಹುದು.
ಕೊಳಚೆ ನೀರು ಬೇಡ
ಹೊರಗಡೆ ಮೇಯಲು ಹೋಗುವ ಜಾನುವಾರುಗಳು ಬಿಸಿಲಿನ ಧಗೆಗೆ ಬಾಯಾರಿ ಎಲ್ಲೆಲ್ಲೋ ನಿಂತಿರುವ ನೀರು, ಕೊಳಚೆ ನೀರು ಕುಡಿಯುತ್ತವೆ. ಇದರಿಂದ ಅವುಗಳ ರೋಗ ನಿರೋಧಕ ಶಕ್ತಿ ಕುಂದುವುದರ ಜೊತೆಗೆ, ಹಲವು ಕಾಯಿಲೆಗಳು ಕೂಡ ಬಂದೆರಗುತ್ತವೆ. ಬಹುತೇಕ ರೋಗಗಳು ಕಲುಷಿತ ನೀರಿನಿಂದಲೇ ಬರುತ್ತವೆ ಎಂಬುದು ತಿಳಿದಿರಲಿ.
ಕೊಟ್ಟಿಗೆಯಲ್ಲಿ ಫ್ಯಾನ್, ಏರ್‌ಕೂಲರ್
ಕೊಟ್ಟಿಗೆಯಲ್ಲಿ ಕಟ್ಟಿದರೂ ಬಿಸಿಲಿನ ತಾಪಕ್ಕೆ ಜಾನುವಾರುಗಳು ಮೇವು ತಿನ್ನುವುದನ್ನು ಕಮ್ಮಿ ಮಾಡುತ್ತವೆ. ಆದ್ದರಿಂದ ಕೊಟ್ಟಿಗೆಯಲ್ಲಿ ಸಾಕಷ್ಟು ಗಾಳಿಯಾಡುವಂತೆ ನೋಡಿಕೊಳ್ಳಿ, ಶೆಡ್ ಕಬ್ಬಿಣದ ತಗಡಿನದ್ದಾಗಿದ್ದರೆ ಅದರ ಮೇಲೆ ತೆಂಗಿನ ಗರಿ, ನಿರುಪಯುಕ್ತ ಹುಲ್ಲು ಇತ್ಯಾದಿ ಹಾಕಿ ತಣ್ಣಗಿರುವಂತೆ ನೋಡಿಕೊಳ್ಳಬಹುದು. ಕೊಟ್ಟಿಗೆ ಹಾಗೂ ಜಾನುವಾರುಗಳ ಮೇಲೆ ಆಗಾಗ ನೀರು ಚಿಮುಕಿಸುತ್ತಾ ಇರಿ. ಅನುಕೂಲ ಇದ್ದವರು ಅವುಗಳಿಗೆ ಫ್ಯಾನ್- ಏರ್ ಕೂಲರ್ ವ್ಯವಸ್ಥೆ ಮಾಡಬಹುದು. ಇಲ್ಲದಿದ್ದರೆ ಮೇವು ತಿನ್ನುವುದು ಕಮ್ಮಿಯಾಗುವುದರ ಜೊತೆಗೆ ಅದರ ಆರೋಗ್ಯವೂ ಕುಸಿಯುತ್ತದೆ. ಇದು ಹಾಲಿನ ಇಳುವರಿ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ.
-ಎಸ್.ಕೆ ಪಾಟೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.