ಠೇವಣಿ ಸೇಫ್; ಬ್ಯಾಂಕ್ ಠೇವಣಿ ವಿಮಾ ಪರಿಹಾರ ಹೆಚ್ಚಳ
ದಿವಾಳಿಯಾದರೂ ಗ್ರಾಹಕರ ದುಡ್ಡು ಸುರಕ್ಷಿತ!
Team Udayavani, Feb 24, 2020, 5:15 AM IST
ಬ್ಯಾಂಕುಗಳು ದಿವಾಳಿಯಾದಾಗ ಖಾತೆದಾರರಿಗೆ ಇದುವರೆಗೂ 1 ಲಕ್ಷದವರೆಗೂ ಪರಿಹಾರ ಮೊತ್ತ ನೀಡಲಾಗುತ್ತಿತ್ತು. ಈ ಮೊತ್ತವನ್ನು ಇದೀಗ 5 ಲಕ್ಷದವರೆಗೂ ಏರಿಸಲಾಗಿದೆ!
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಒಂದು ವೇಳೆ ಮುಚ್ಚಿ ಹೋದರೆ, ಠೇವಣಿದಾರರಿಗೆ ದೊರಕುವ ವಿಮೆ ಪರಿಹಾರ ಮೊತ್ತವನ್ನು 2020- 21ರ ಬಜೆಟ್‌ನಲ್ಲಿ 1ಲಕ್ಷ ರೂ.ನಿಂದ 5 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಇದರಿಂದ ಠೇವಣಿದಾರರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಈವರೆಗೆ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ದಿವಾಳಿಯಾಗಿ, ವ್ಯವಹಾರ ಸ್ಥಗಿತಗೊಳಿಸಿ, ಠೇವಣಿದಾರರು ಅತಂತ್ರರಾದಾಗ, ಅವರು ಎಷ್ಟೇ ಠೇವಣಿ ಇರಿಸಿದ್ದರೂ ರಿಸರ್ವ್ ಬ್ಯಾಂಕ್‌ನ ಆಧೀನ ಸಂಸ್ಥೆಯಾದ ಠೇವಣಿ ವಿಮಾ ಮತ್ತು ಸಾಲ ಖಾತ್ರಿ ನಿಗಮ (Deposit Insurance and Credit Guarantee Corporation & DICGC) ಗರಿಷ್ಠ 1 ಲಕ್ಷ ರೂ. ವಿಮೆ ಪರಿಹಾರವನ್ನು (ಬಡ್ಡಿಯೂ ಸೇರಿ)ನೀಡುತ್ತಿತ್ತು.
1962ರಲ್ಲಿ ಈ ನಿಗಮ ಆರಂಭವಾದಾಗ, ಗರಿಷ್ಠ ಪರಿಹಾರ 30,000 ರೂ. ಇತ್ತು. ಕ್ರಮೇಣ ಠೇವಣಿದಾರರ ಮತ್ತು ಬ್ಯಾಂಕುಗಳ ನಿರಂತರ ಒತ್ತಾಯದ ಮೇರೆಗೆ, ಹಣದುಬ್ಬರ ಮತ್ತು ಕುಸಿಯುತ್ತಿರುವ ರೂಪಾಯಿ ಮೌಲ್ಯ ಮತ್ತು ವಿದೇಶಗಳಲ್ಲಿ ನೀಡುವ ಪರಿಹಾರದ ಮೊತ್ತವನ್ನು ಪರಿಗಣಿಸಿ, ಗರಿಷ್ಠ ವಿಮಾ ಪರಿಹಾರ ಮೊತ್ತವನ್ನು 1993ರಲ್ಲಿ 1 ಲಕ್ಷಕ್ಕೆ ಏರಿಸಲಾಗಿತ್ತು. ಅದನ್ನು ಇನ್ನೂ ಏರಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವು ನೀಡಿದ ಭರವಸೆಯಂತೆ 2020- 21ರ ಬಜೆಟ್‌ನಲ್ಲಿ ಠೇವಣಿ ವಿಮಾ ಪರಿಹಾರ ಮೊತ್ತವನ್ನು 1ರಿಂದ 5 ಲಕ್ಷಕ್ಕೆ ಏರಿಸಿದರು. ಸರ್ಕಾರದ ಈ ಕ್ರಮವನ್ನು ಠೇವಣಿದಾರರು ಸಾರ್ವತ್ರಿಕವಾಗಿ ಸ್ವಾಗತಿಸಿದ್ದಾರೆ.
ಪರಿಹಾರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ದಿವಾಳಿಯಾದಾಗ ಠೇವಣಿ ವಿಮಾ ನಿಗಮವು ಠೇವಣಿದಾರನಿಗೆ, ಅತ ಬ್ಯಾಂಕ್‌ನಲ್ಲಿ ಇರಿಸಿದ ಠೇವಣಿ (ಬಡ್ಡಿಯೂ ಸೇರಿ) ಅಥವಾ ಗರಿಷ್ಠ ಐದು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುತ್ತದೆ. ಈ ಪರಿಹಾರದ ಮೊತ್ತವು ಗ್ರಾಹಕನು ಒಂದು ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಹೊಂದಿರುವ ಎಲ್ಲಾ ರೀತಿಯ (ಉಳಿತಾಯ, ಚಾಲ್ತಿ, ಆರ್.ಡಿ, ಮತ್ತು ಎಫ್.ಡಿ) ಖಾತೆಗಳಿಗೆ ಅನ್ವಯವಾಗುತ್ತದೆ. ಈ ಪರಿಹಾರವನ್ನು ನೀಡುವಾಗ ಒಂದು ಬ್ಯಾಂಕ್ ಹೆಸರಿನಲ್ಲಿ ಲೆಕ್ಕ ಹಾಕಲಾಗುತ್ತದೆ ವಿನಾ ಒಂದು ಶಾಖೆಗಳಲ್ಲಿ ಇರುವ ಠೇವಣಿಗಳನ್ನು ಪ್ರತ್ಯೇಕವಾಗಿ ಪರಿಗಣಿಸುವುದಿಲ್ಲ. ಗ್ರಾಹಕನೊಬ್ಬ ಇಂಡಿಯನ್ ಬ್ಯಾಂಕ್‌ನ ನಾಲ್ಕು ಶಾಖೆಗಳಲ್ಲಿ ಠೇವಣಿ ಇಟ್ಟಿದ್ದರೆ, ವಿಮಾ ಪರಿಹಾರ ನೀಡುವಾಗ, ಠೇವಣಿ ವಿಮಾ ನಿಗಮವು ನಾಲ್ಕೂ ಶಾಖೆಗಳಲ್ಲಿ ಇರುವ ಠೇವಣಿಗಳನ್ನು ಪ್ರತ್ಯೇಕವಾಗಿ ಪರಿಗಣಿಸದೆ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಲೆಕ್ಕ ಹಾಕಿ ಪರಿಹಾರ ನೀಡುತ್ತದೆ.
ವಿಮಾ ನಿಗಮದ ಉದ್ದೇಶ
ಬ್ಯಾಂಕ್ ವೈಪಲ್ಯಗೊಂಡಾಗ, ದಿವಾಳಿಯಾದಾಗ ಅಥವಾ ಬಾಗಿಲು ಮುಚ್ಚಿದಾಗ ಅದರ ಮೊದಲ ಮತ್ತು ನೇರ ಪರಿಣಾಮ ಆಗುವುದು ಠೇವಣಿದಾರನ ಮೇಲೆ. ಬ್ಯಾಂಕ್ ಠೇವಣಿದಾರರಲ್ಲಿ ಹೆಚ್ಚಿನವರು ಸಮಾಜದ ಬಡ ಮತ್ತು ಮಧ್ಯಮವರ್ಗದವರು ಮತ್ತು ನಿವೃತ್ತರು. ನಾಳೆಗಾಗಿ, ಕಷ್ಟದ ದಿನಗಳಿಗಾಗಿ, ಧುತ್ತೆಂದು ಎರಗಿ ಬರುವ ಅನಿರೀಕ್ಷಿತ ಖರ್ಚುಗಳಿಗಾಗಿ ಹೊಟ್ಟೆ- ಬಟ್ಟೆ ಕಟ್ಟಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುತ್ತಾರೆ. ನಿವೃತ್ತರು ತಮ್ಮ ನಿವೃತ್ತಿ ಹಣವನ್ನು ಬ್ಯಾಂಕಿನಲ್ಲಿ ಇಟ್ಟು, ಗಳಿಸುವ ಬಡ್ಡಿ ಅದಾಯದ ಮೇಲೆ ತಮ್ಮ ಜೀವನದ ರಥವನ್ನು ಓಡಿಸುತ್ತಾರೆ. ಠೇವಣಿಗಳನ್ನು ಇಟ್ಟ ಬ್ಯಾಂಕುಗಳು ವಿಫಲವಾಗಿ, ಗ್ರಾಹಕರ ಠೇವಣಿ ಹಿಂತಿರುಗಿ ಬರದಿದ್ದರೆ ಅವರ ಬದುಕು ಅಯೋಮಯವಾಗುತ್ತದೆ. ಅಂತೆಯೇ ಸರ್ಕಾರ ಠೇವಣಿದಾರರ ಹಿತ ರಕ್ಷಿಸಲು, ಅವರ ಸಂಕಷ್ಟವನ್ನು ಕಡಿಮೆ ಮಾಡಲು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅವರ ವಿಶ್ವಾಸ ಮತ್ತು ಭರವಸೆಯನ್ನು ಉಳಿಸಲು ಮತ್ತು ಹೆಚ್ಚಿಸಲು, ಬ್ಯಾಂಕುಗಳು ವಿಫಲವಾದಾಗ ಠೇವಣಿದಾರರ ಸಹಾಯಕ್ಕೆ ನಿಲ್ಲಲು 1962ರಲ್ಲಿ ರಿಸರ್ವ್ ಬ್ಯಾಂಕ್ ಆಧೀನದಲ್ಲಿ ಠೇವಣಿ ವಿಮಾ ಮತ್ತು ಸಾಲ ಗ್ಯಾರಂಟಿ ನಿಗಮವನ್ನು ((Deposit Insurance and credit Guarantee Corporation & DICGC) ) ಹುಟ್ಟುಹಾಕಿತು.
ಠೇವಣಿ ಹಂಚಿಹೋಗಬಹುದು
ಈ ಹೊಸ ವ್ಯವಸ್ಥೆಯ ನಂತರ ಬಹುತೇಕ ಠೇವಣಿದಾರರು ತಮ್ಮ ಠೇವಣಿಯನ್ನು ವಿಭಜಿಸಿ, ಬೇರೆ- ಬೇರೆ ಬ್ಯಾಂಕುಗಳಲ್ಲಿ ಇರಿಸುವ ತಂತ್ರಗಾರಿಕೆಯನ್ನು ಬಳಸಬಹುದು. ಯಾವುದೇ ಒಂದು ಬ್ಯಾಂಕಿನಲ್ಲಿ (ಎಲ್ಲಾ ಶಾಖೆಗಳು ಸೇರಿ) ತಮ್ಮ ಠೇವಣಿ 5 ಲಕ್ಷ ಮೀರದಂತೆ ಎಚ್ಚರಿಕೆ ವಹಿಸಬಹುದು. ಎಲ್ಲಾ ಬ್ಯಾಂಕುಗಳಿಗೆ ಠೇವಣಿಗಳು distribute ಆಗಬಹುದು. “ಠೇವಣಿ ವಿಮಾ ನಿಗಮ’, ರಿಸರ್ವ್ ಬ್ಯಾಂಕ್‌ನ ಆಧೀನ ಸಂಸ್ಥೆಯಾದರೂ, ಈ ಸಂಸ್ಥೆಯ ಮೇಲೆ ಮೇಲೆ ಸರ್ಕಾರದ ನೇರ ನಿಯಂತ್ರಣ ಇಲ್ಲ ಎಂದು ಹೇಳಲಾಗುತ್ತಿದೆ. ವಿಮೆ ಮೊತ್ತ ಏರಿಸಬೇಕಾದರೆ ಬ್ಯಾಂಕುಗಳು ಹೆಚ್ಚಿನ ಪ್ರೀಮಿಯಂ ನೀಡಬೇಕು ಎಂದು ಈ ನಿಗಮ ಆಗ್ರಹಿಸುವುದನ್ನು ತಳ್ಳಿಹಾಕಲಾಗದು. ನಿಗಮದಲ್ಲಿ ಸಾಕಷ್ಟು ವಿಮಾ ಪ್ರೀಮಿಯಂ ಸಂಗ್ರಹವಿದ್ದು ಮತ್ತು ಪರಿಹಾರ ನೀಡುವಿಕೆ ತುಂಬಾ ಕಡಿಮೆ ಇದ್ದು ಬ್ಯಾಂಕುಗಳು ಪ್ರೀಮಿಯಂ ಹೆಚ್ಚಳಕ್ಕೆ ಸಮ್ಮತಿಸುವುದು ಸಂದೇಹಾಸ್ಪದ.
– ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.