ದೇಸಿ ದನಕಾಯೋರು
Team Udayavani, Jan 6, 2019, 12:09 PM IST
ಇದು ಮಲ್ನಾಡ್ ಗಿಡ್ಡ, ಹಾಸನ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಮತ್ತು ಕರಾವಳಿ ಭಾಗದಲ್ಲಷ್ಟೇ ಕಂಡುಬರುವ ತಳಿ. ಕಡಿಮೆ ಆಹಾರ ತಿಂದು ಹೆಚ್ಚು ಪೌಷ್ಟಿಕವಾದ ಹಾಲು ಕೊಡುತ್ತದೆ. ಕಪ್ಪು, ಕೆಂಪು, ಕಂದು ಮತ್ತು ಮಿಶ್ರ ವರ್ಣಗಳಲ್ಲಿರುವ ಹಸು ಗಿಡ್ಡವಾಗಿದ್ದು, ನಾಲ್ಕಡಿಗಿಂತ ಹೆಚ್ಚು ಎತ್ತರವಾಗುವುದಿಲ್ಲ.
ಕಾರ್ಕಳದ ಗುಣವಂತೇಶ್ವರ ಭಟ್ಟರು ವಾಸವಾಗಿರುವುದು ಪೇಟೆಯ ಪರಿಸರದಲ್ಲಿ. ಆದರೂ ದೇಸಿ ತಳಿಗೆ ಸೇರಿದ ಮಲ್ನಾಡ್ ಗಿಡ್ಡ ಜಾತಿಯ ಇಪ್ಪತ್ತು ಹಸುಗಳು, ಐದು ಕರುಗಳನ್ನು ಸಾಕಿ ಸಲಹುತ್ತಿದ್ದಾರೆ.
ಕಾರ್ಕಳದಿಂದ ಉಡುಪಿಗೆ ಹೋಗುವ ದಾರಿಯಲ್ಲಿ ಆನೆಕೆರೆಯಿಂದ ಅನತಿ ದೂರದಲ್ಲಿ ಅವರ ಕಲಾ ಕೇಂದ್ರವಿದೆ. ಸಮೀಪದಲ್ಲಿ ಮನೆಯೂ ಇದೆ. ಕೆನರಾ ಬ್ಯಾಂಕ್ ಪ್ರಾಯೋಜಿತ ಶಿಲ್ಪ ಕಲಾ ಶಾಲೆಯಲ್ಲಿ ಅವರು ಬೋಧಕರೂ ಹೌದು. ಹದಿನಾರು ವರ್ಷಗಳ ಹಿಂದೆ ಎರಡು ಹಸುಗಳಿಂದ ಆರಂಭಿಸಿದ ಅವರ ದೇಸೀ ಹಸು ಸಾಕಣೆ ಇಂದು ಇಪ್ಪತ್ತರ ಅಂಚು ತಲುಪಿದೆ. ಕೆಲವು ಹಸುಗಳು ಕಳವಾಗಿವೆ, ವೃದ್ಧಾಪ್ಯದಿಂದ ಕೆಲವು ಸತ್ತಿವೆ. ಈ ಅವಧಿಯಲ್ಲಿ ಅವರು ಪೋಷಿಸಿರುವ ಒಟ್ಟು ಹಸುಗಳ ಸಂಖ್ಯೆ 40 ದಾಟುತ್ತದೆ.
ಗುಣವಂತೇಶ್ವರ ಭಟ್ಟರು ಈ ಕಾಯಕ ಆರಂಭಿಸಲು ಕಾರಣ ಅವರ ತಂದೆ ಕೋಟಿಮೂಲೆ ಶಂಕರ ಭಟ್ಟರನ್ನು ಬಾಧಿಸಿದ ಬಾಯಿಯ ಕ್ಯಾನ್ಸರ್. ನೋವಿನಿಂದ ತುಂಬ ಹಿಂಸೆ ಅನುಭವಿಸುತ್ತಿದ್ದ ಅವರಿಗೆ ಮಲ್ನಾಡ್ ಗಿಡ್ಡ ತಳಿಯ ಹಸುವಿನ ಮೂತ್ರ ಸೇವನೆಗೆ ಸಲಹೆ ನೀಡಿದವರು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ
ಯತಿಗಳು. ಈ ಹಸುವಿನ ಮೂತ್ರದಲ್ಲಿ ವಿಶಿಷ್ಟ ಗುಣಗಳಿವೆ. ನಿತ್ಯ ಸೇವಿಸುವುದರಿಂದ ಕ್ಯಾನ್ಸರ್ ಬಾಧಿತರಾಗಿದ್ದವರಿಗೆ ನೋವು ಶಮನವಾಗಿದೆ ಅಂದರು. ಐದು ವರ್ಷಗಳ ಕಾಲ ತಂದೆ ಸೇವಿಸಿದರು. ಅದನ್ನು ಸೇವಿಸುತ್ತಿರುವಷ್ಟು ಕಾಲವೂ ರೋಗ ಉಲ್ಬಣಿಸಲಿಲ್ಲ. ಹೀಗಾಗಿ ಗುಣವಂತೇಶ್ವರ ಭಟ್ಟರು ಈ ತಳಿಗೆ ತನ್ನ ಕೃತಜ್ಞತೆ ಸಲ್ಲಿಸಲು ಯಥಾಶಕ್ತಿ ಅದರ ಸಾಕಣೆಗೆ ಮುಂದಾದರು.
ಮಲ್ನಾಡ್ ಗಿಡ್ಡ, ಹಾಸನ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಮತ್ತು ಕರಾವಳಿ ಭಾಗದಲ್ಲಷ್ಟೇ ಕಂಡುಬರುವ ತಳಿ. ಕಡಿಮೆ ಆಹಾರ ತಿಂದು ಹೆಚ್ಚು ಪೌಷ್ಟಿಕವಾದ ಹಾಲು ಕೊಡುತ್ತದೆ. ಕಪ್ಪು, ಕೆಂಪು, ಕಂದು ಮತ್ತು ಮಿಶ್ರ ವರ್ಣಗಳಲ್ಲಿರುವ ಹಸು ಗಿಡ್ಡವಾಗಿದ್ದು, ನಾಲ್ಕಡಿಗಿಂತ ಹೆಚ್ಚು ಎತ್ತರವಾಗುವುದಿಲ್ಲ. ಗರಿಷ್ಠ ತೂಕ 120 ಕಿಲೋ ಇರುತ್ತದೆ. ಪುಂಗನೂರ್ ತಳಿಗಿಂತಲೂ ಚಿಕ್ಕ ಗಾತ್ರ, ಚಿಕ್ಕ ಕಿವಿಗಳು, ನೇರವಾದ ಚಿಕ್ಕ ಕೋಡುಗಳು, ನೆಲಕ್ಕೆ ತಾಗುವ ಬಾಲ. ದುಂಡಗಿರುವ ಪುಟ್ಟ ಕೆಚ್ಚಲು. ಕಾಲುಗಳು ಪುಟ್ಟದಾದರೂ ಆರು ಅಡಿ ಎತ್ತರದ ಬೇಲಿಯನ್ನು ನೆಗೆಯಬಲ್ಲ ಚೈತನ್ಯವಿದೆ. ಜೀವಿತಾವಧಿ ಸಾಮಾನ್ಯವಾಗಿ 9ರಿಂದ 12 ವರ್ಷಗಳಾಗಿದ್ದರೂ ಗುಣವಂತೇಶ್ವರ ಭಟ್ಟರು ಸಾಕಿದ ಒಂದು ಹಸು ಹದಿನೆಂಟು ವರ್ಷ ಜೀವಿಸಿ ಹದಿನೈದು ಕರುಗಳನ್ನು ಹಾಕಿದ ದಾಖಲೆ ಬರೆದಿದೆ.
ಗುಣವಂತೇಶ್ವರ ಭಟ್ಟರ ಮನೆಯ ಬಳಿ ಹಾಳು ಬಿದ್ದ ಹೊಲಗಳಿವೆ. ಅವರ ಹಸುಗಳು ಬೆಳಗ್ಗೆ ಎಂಟು ಗಂಟೆಗೆ ಅಲ್ಲಿಗೆ ಹೋಗಿ ಮೇದು ಸಂಜೆ ಮರಳುತ್ತವೆ. ತುಂಬ ಕಡಿಮೆ ಆಹಾರ ಸಾಕು ಅವಕ್ಕೆ . 100 ಕಿ.ಲೋ ರಾಗಿ ಬೂಸಾದೊಂದಿಗೆ, 50 ಕಿಲೋ ಜೋಳದ ಬೂಸಾ ಬೆರೆಸಿ ತಲಾ 25 ಕಿಲೋ ಪ್ರಮಾಣದಲ್ಲಿ ಎಳ್ಳು, ತೆಂಗು ಮತ್ತು ಶೇಂಗಾದ ಹಿಂಡಿಗಳನ್ನು ಮಿಶ್ರ ಮಾಡುತ್ತಾರೆ. ಈ ಆಹಾರವನ್ನು ಒಂದು ಹಸುವಿಗೆ ಅರ್ಧ ಕಿಲೋ ಪ್ರಮಾಣದಲ್ಲಿ ಕೊಡುತ್ತಾರೆ. ಇಷ್ಟು ಕಡಿಮೆ ಆಹಾರ ತಿಂದರೂ ಹಸುಗಳ ಮೈಯ ಹೊಳಪು ಆಕರ್ಷಕವಾಗಿದೆ. ಕರು ಹಾಕುವ ದಿನದ ತನಕವೂ ಕಾಡಿಗೆ ಹೋಗಿ ಆಯಾಸವಿಲ್ಲದೆ ಮೇದು ಬರುವ ಶಕ್ತಿ ಹಸುಗಳಿಗಿದೆ.
ಭಟ್ಟರಲ್ಲಿ ಹಾಲು ಕೊಡುವ ನಾಲ್ಕಾರು ಹಸುಗಳಿವೆ. ಒಂದು ಹಸು ಏಕಪ್ರಕಾರವಾಗಿ 220 ದಿನಗಳ ಕಾಲ ಹಾಲು ಕೊಡುತ್ತದೆ. ಸರಾಸರಿ ದಿನಕ್ಕೆ ಎರಡೂವರೆ ಲೀಟರ್ ಹಾಲು ಕೊಡುತ್ತದೆ. 3ರಿಂದ 5 ಕಿಲೋ ಹಾಲು ಕೊಡುವ ಉದಾಹರಣೆಗಳೂ ಇವೆಯಂತೆ. ಹಾಲು ದಪ್ಪವಾಗಿದ್ದು ಹೆಚ್ಚು ಕೊಬ್ಬಿನಿಂದ ಕೂಡಿದೆ. ಮಜ್ಜಿಗೆಯ ಘಮವೇ ಪ್ರತ್ಯೇಕ. ಹರಳುಗಟ್ಟಿದ ತುಪ್ಪವೂ ಪರಿಮಳಯುಕ್ತವಾಗಿದೆ. ಯಜ್ಞಗಳು ಮತ್ತು ಔಷಧೀಯ ದೃಷ್ಟಿಯಿಂದ ಈ ತುಪ್ಪಕ್ಕೆ ಅಪಾರ ಬೇಡಿಕೆ ಇದೆ. ಅವರದೇ ಅನುಭವ ಪ್ರಕಾರ, ಕಾಲು ಗಂಟುಗಳ ನೋವು ತೀವ್ರತರವಾಗಿ ಬಾಧಿಸಿದಾಗ ಹನ್ನೆರಡು ವರ್ಷಗಳ ಹಿಂದಿನ ಈ ತುಪ್ಪವನ್ನು ಒಂದು ತಿಂಗಳ ಕಾಲ ಹಚ್ಚಿ ನೀವಿದ ಪರಿಣಾಮ ನೋವು ಪೂರ್ಣ ಮಾಯವಾಗಿದೆ.
ಈ ಹಸುಗಳಿಗೆ ಭಾರೀ ಸೌಕರ್ಯದ ಕೊಟ್ಟಿಗೆ ಬೇಡ, ಸಾಧಾರಣ ಸ್ಥಳಕ್ಕೂ ಹೊಂದಿಕೊಳ್ಳುತ್ತವೆ ಎನ್ನುವ ಭಟ್ಟರು ಹಸುಗಳು ಮೇಯುವ ಸ್ಥಳಕ್ಕೆ ಇದೇ ತಳಿಯ ಹೋರಿಗಳೂ ಬರುವ ಕಾರಣ ಸಂತಾನದಲ್ಲಿ ವರ್ಣಸಂಕರವಾಗುವ ಭಯವಿಲ್ಲ ಎನ್ನುತ್ತಾರೆ. ಸೆಗಣಿಯಿಂದ ಗೋಬರ್ ಅನಿಲ ಉತ್ಪಾದಿಸುತ್ತಿದ್ದು, ಕಲಾಶಾಲೆಯ ವಿದ್ಯಾರ್ಥಿಗಳು ಹಾಗೂ ಮನೆಯವರ ಅಡುಗೆ ತಯಾರಿಗೆ ಬಳಕೆಯಾಗುತ್ತದೆ.
ಗೊತ್ತಿರಲಿ. ಈ ಸೊಬಗಿನ ತಳಿಯ ಹಸು, ಕರುಗಳನ್ನು ಭಟ್ಟರು ಮಾರಾಟ ಮಾಡುವುದಿಲ್ಲ. ಆಪ್ತರಿಗೆ ಸಾಕುವ ದೃಷ್ಟಿಯಿಂದ ಕೊಡುತ್ತಾರೆ. ಆದರೆ ಅವರು ಕೂಡ ಮಾರಾಟ ಮಾಡಬಾರದು ಎಂಬ ನಿಬಂಧನೆ ವಿಧಿಸುತ್ತಾರೆ.
– ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.