ಉದ್ಯಮ ನಡುಗಿಸುತ್ತಿರುವ ಗುರುಗಳು
Team Udayavani, Nov 6, 2017, 7:10 PM IST
ನಿತ್ಯ ಬಳಕೆಯ ವಸ್ತುಗಳ ಉತ್ಪನ್ನ ಮತ್ತು ಮಾರಾಟದಲ್ಲಿ ಮೊನ್ನೆ ಮೊನ್ನೆಯವರೆಗೂ ವಿದೇಶಿ ಕಂಪೆನಿಗಳೇ ಮೇಲುಗೈ ಸಾಧಿಸಿದ್ದವು. ಆದರೆ ಇದೀಗ ಪತಂಜಲಿ, ಶ್ರೀಶ್ರೀ ಉತ್ಪನ್ನಗಳು ಎಲ್ಲರಿಗೂ ಇಷ್ಟವಾಗುತ್ತಿದೆ. ಅದರ ಮುಂದೆ ಉಳಿದೆಲ್ಲ ಕಂಪೆನಿಗಳೂ ಕಂಗಾಲಾಗಿವೆ. ಇದೇ ಸಂದರ್ಭದಲ್ಲಿ ಪತಂಜಲಿಯ ದಾರಿಯನ್ನೇ ಅನುಸರಿಸಿ ಹೆಜ್ಜೆ ಇಡಲು ಮತ್ತಷ್ಟು ದೇಸೀ ಕಂಪೆನಿಗಳು ಸನ್ನದ್ಧವಾಗಿವೆ….
ಎಫ್ಎಂಸಿಜಿ ಪ್ರಾಡಕ್ಟ್ಸ್ ಎಂಬ ಉಲ್ಲೇಖವನ್ನು ಕಿರಾಣಿ ಅಂಗಡಿಯಿಂದ ಹಿಡಿದು ಮಾಲ್‌ಗಳ ರಚನೆಯವರೆಗಿನ ಪ್ರತಿ ಹಂತದಲ್ಲಿ ಕೇಳುತ್ತೇವೆ. ಎಕನಾಮಿಕ್ಸ್ ಪಾಠಗಳಲ್ಲೂ ಇದೇ ಪ್ರಸ್ತಾಪ. ಫಾಸ್ಟ್ ಮೂವಿಂಗ್ ಕಸ್ಯೂಮರ್ ಗೂಡ್ಸ್ ಎಂಬುದರ ಹೃಸ್ವ ಸ್ವರೂಪವದು. ಸೋಪು, ಪೇಸ್ಟು, ರೆಡಿ ಮಿಕ್ಸ್, ತಂಪು ಪಾನೀಯ ಮೊದಲಾದವನ್ನು ಈ ವರ್ಗಕ್ಕೆ ಸೇರಿಸಬಹುದು. ಗ್ರಾಹಕನ ದಿನನಿತ್ಯದ ಬದುಕಿಗೆ ಬೇಕಾಗುವ, ಹೆಚ್ಚು ಜನರು ಖರೀದಿಸುವ, ತುಸು ಕಡಿಮೆ ಬಾಳಿಕೆ ಅವಧಿಯನ್ನು ಹೊಂದಿರುವ ವಸ್ತುಗಳನ್ನು ಎಫ್ಎಂಸಿಜಿ ಎನ್ನಬಹುದೇನೋ. ಆದರೆ ಇದರ ಅರ್ಥ ವಿಸ್ತಾರ ಹಾಗೂ ಪಟ್ಟಿಗೆ ಹೊಸ ಸೇರ್ಪಡೆಗೆ ಕಟ್ಟುಪಾಡುಗಳನ್ನು ಹಾಕುವುದು ಕಷ್ಟ. ಹಿಂದೆಲ್ಲ ಕುಡಿಯುವುದಿರಲಿ, ಕಿವಿಯಾರೆ ಕೇಳದ ಎನರ್ಜಿ ಡ್ರಿಂಕ್ ಕೂಡ ಇವತ್ತು ಎಫ್ಎಂಸಿಜಿ!
ನಾನೇಕೆ ಅಂಜಲಿ – ಬಂದಿದೆ ಪತಂಜಲಿ!
ಪುಟ್ಟ ಫ್ಲ್ಯಾಶ್‌ಬ್ಯಾಕ್, 1888ರಲ್ಲಿ ಕೊಲ್ಕತ್ತಾ ಬಂದರಿನಲ್ಲಿ ಇಂಗ್ಲೆಂಡ್‌ನಿಂದ ಸನ್‌ಲೈಟ್ ಸೋಪ್ ಬಾರ್‌ಗಳ ಪೆಟ್ಟಿಗೆಗಳು ಬಂದಿಳಿದಿದ್ದವಂತೆ; ಭಾರತದಲ್ಲಿ ಎಫ್ಎಂಸಿಜಿಯ ಉದಯ ಎಂಬ ಉಲ್ಲೇಖವಿದೆ. 1931ರ ನಂತರದಲ್ಲಿ ದೇಶಿ ಸ್ಪರ್ಶದ ಭಾರತದಲ್ಲಿ ತಯಾರಿಕೆಗಳಿಗೆ ಕಂಪನಿಗಳು; ಹಿಂದೂಸ್ತಾನ್ ಲಿವರ್, ನೆಸ್ಲೆ, ಪ್ರಾಕ್ಟರ್ ಅಂಡ್ ಗ್ಯಾಂಬಲ್ ತರಹದವು ಸ್ಪರ್ಧೆಗಿಳಿದವು. 1931ರಲ್ಲಿ ಯುಕೆಯ ಯುನಿಲಿವರ್, 1933ರಲ್ಲಿ ಲಿವರ್ ಬ್ರದರ್ ಮತ್ತು 1935ರಲ್ಲಿ ಯುನೈಟೆಡ್ ಟ್ರೇಡರ್ 1956ರಲ್ಲಿ ಹಿಂದೂಸ್ತಾನ್ ಯುನೈಟೆಡ್ ಲಿಮಿಟೆಡ್ ಹೆಚ್‌ಯುಎಲ್ ಆಗಿ, ಅಕ್ಷರಶಃ ಹಲವು ದಶಕಗಳ ಕಾಲ ಭಾರತದ ಎಫ್ಎಂಸಿಜಿ ಉದ್ಯಮವನ್ನು ಆಳಿದವು. ಡಾಬರ್, ಬ್ರಿಟಾನಿಯಾ ಮೊದಲಾದವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಡಿ ಇಟ್ಟವು. ಆದರೆ ಆಗಲೂ ಹೆಚ್‌ಯುಎಲ್ ಆಳ್ವಿಕೆ ತನ್ನ ಮುಂದುವರೆಸಿತ್ತು. 70ರ ದಶಕದಲ್ಲಿ ಬಂದ ಅಹ್ಮದಾಬಾದ್‌ನ ನಿರ್ಮಾ ಸೋಪಿನ ಪೌಡರ್‌ಅನ್ನು ಕೆಜಿಗೆ 3.50 ರೂ.ನಂತೆ ನೀಡಿದಾಗ ಹೆಚ್‌ಯುಎಲ್‌ನ 15 ರೂ. ಸಫ್ì ಕೆ.ಜಿ ಪ್ಯಾಕ್ ಬೆಚ್ಚಿಬಿದ್ದಿತ್ತು. ಅಷ್ಟೇಕೆ, 1983ರಲ್ಲಿ ಸಿ.ಕೆ.ರಂಗನಾಥನ್ ಎಂಬ ಮೆದುಳು ಎರಡು ರೂ.ಗೆ ಶ್ಯಾಂಪೂ ಸ್ಯಾಚೆಟ್ ವ್ಯವಸ್ಥೆ ತಂದದ್ದು ಈ ಉದ್ಯಮದ ಸಾಧ್ಯತೆಯನ್ನು ಎರಡು ಮಾರ್ಗದಲ್ಲಿ ತೆರೆದಿಟ್ಟಿತು. ಗ್ರಾಮೀಣ ಭಾಗದಲ್ಲಿ ಎಫ್ಎಂಸಿಜಿ ಅಡಿ ಇಡಲು ಕಡಿಮೆ ದರದ ಪೇಸ್ಟು, ಪೌಡರ್, ಶಾಂಪೂ ಕಾರಣವಾದರೆ ನಗರದ ಮಾಸಿಕ ವೇತನದ ಜನ ತಿಂಗಳ ತುದಿಯಲ್ಲೂ ತಮ್ಮ ಖರೀದಿ ನಿಲ್ಲಿಸಲಿಲ್ಲ!
ಉದ್ಯಮ ಸಾಕ್ಷ್ಯ ಚಿತ್ರದ ತರಹ ಒಂದೇ ಓಘದಲ್ಲಿ ಸಾಗುತ್ತಿದ್ದಾಗ ಈ ಉದ್ಯಮಕ್ಕೆ ತಿರುವು ಕೊಟ್ಟಿದ್ದು ಸ್ವದೇಶಿ ಸ್ಪರ್ಶ, ನೈಸರ್ಗಿಕ, ಸಾವಯವ, ಆಯುರ್ವೇದ ಎಂಬ ಉದ್ಘೋಷದ ಜೊತೆ ಆಟಕ್ಕಿಳಿದ ಬಾಬಾ ರಾಮ್‌ದೇವ್ ಅವರ ಪತಂಜಲಿ, ಧರ್ಮಸ್ಥಳದ ಮಂಜುನಾಥೇಶ್ವರ ಕ್ಷೇತ್ರದ ಸ್ತ್ರೀಶಕ್ತಿ ಸಂಘಗಳ ಸಿರಿ, ರವಿಶಂಕರ್ ಗುರೂಜಿ ಅವರ ಶ್ರೀ ಶ್ರೀ ಉತ್ಪನ್ನಗಳೂ ಮತ್ತೆ ಬದಲಾವಣೆಯ ಗಾಳಿಯನ್ನು ತಂದಿವೆ. ಬಾಬಾ ರಾಮ್‌ದೇವ್‌ರ ಯೋಗಾಸನಕ್ಕಿಂತ ಅವರ ಪ್ಯಾಕ್ ಆದ ಗೋದಿ ಹಿಟ್ಟು, ಚವನ್‌ಪ್ರಾಶ್, ತುಪ್ಪ ಇತ್ಯಾದಿ ಐಟಂಗಳ ಉದ್ಯಮ ಹೆಚ್‌ಯುಎಲ್‌ನಂಥ ಪಟ್ಟಭದ್ರರಲ್ಲೂ ಚಳಿ ಹುಟ್ಟಿಸಿಬಿಟ್ಟಿದೆ.
ಅಂಕಿಅಂಶಗಳು ಹೇಳುವುದು ಕೂಡ ಇದನ್ನೇ. ಹೆಚ್‌ಯುಎಲ್ ವಾರ್ಷಿಕ 30782.7 ಕೋಟಿ ರೂ.ನಷ್ಟು ವಹಿವಾಟು ನಡೆಸಿದ್ದರೆ ಪತಂಜಲಿ 10561 ಕೋಟಿ ರೂ. ವಹಿವಾಟಿನ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಪತಂಜಲಿಯ ತುಪ್ಪ, ಮಾರುಕಟ್ಟೆಯ 13.9ರಷ್ಟನ್ನು, ಟೂತ್‌ಪೇಸ್ಟ್‌ಗಳಲ್ಲಿ 8.9ರಷ್ಟನ್ನು, ಆಯುರ್ವೇದ ಔಷಧದಲ್ಲಿ ಶೇ. 8.2, ಹೇರ್ ಆಯಿಲ್‌ನಲ್ಲಿ ಶೇ. 7.8 ಹಾಗೂ ಹರ್ಬಲ್ ಸೋಪ್‌ಗ್ಳಿಂದ ಶೇ. 5.4ರಷ್ಟು ಮಾರುಕಟ್ಟೆಯನ್ನು ತನ್ನದಾಗಿಸಿಕೊಂಡಿದೆ. ಇದನ್ನೇ ಅನುಕ್ರಮವಾಗಿ ರೂಪಾಯಿಗಳಲ್ಲಿ, ಕೋಟಿಗಳಲ್ಲಿ ಹೇಳುವುದಾದರೆ ಅನುಕ್ರಮವಾಗಿ 1,467, 940, 870, 825 ಹಾಗೂ 574 ಕೋಟಿ ರೂ. ಉತ್ಪನ್ನಗಳನ್ನು ಪತಂಜಲಿ ಬಿಕರಿ ಮಾಡಿದೆ.
ಬೇರೆಯವರ ತಾಟಿಗೆ ಕೈ!
ಐಟಿಸಿ, ನೆಸ್ಲೆ, ಗೋದ್ರೆಜ್, ಬ್ರಿಟಾನಿಯಾ, ಟಾಟಾ, ಡಾಬರ್, ಮಾರಿಕೋ, ಇಮಾಮ್, ಜ್ಯೋತಿ, ಬಜಾಜ್ ಮೊದಲಾದವುಗಳನ್ನು ಹಿಂದಿಕ್ಕಿದ ಪತಂಜಲಿ 2017ರಲ್ಲಿ 20ರಿಂದ 25 ಸಾವಿರ ಕೋಟಿ ವಹಿವಾಟು ನಡೆಸಬೇಕು ಎಂಬ ಗುರಿ ಇರಿಸಿಕೊಂಡಿದೆ. ಹಾಗಂತ ಎಫ್ಎಂಸಿಜಿ ಉದ್ಯಮ 2015ರವರೆಗೆ ತುಸು ಕುಸಿತದಲ್ಲಿಯೇ ಇತ್ತು. 2016ರಲ್ಲಿ 22 ಭಾಗಗಳ ಪೈಕೆ 18 ಚೇತರಿಕೆ ಕಂಡಿವೆ. ಇನ್ನು ಮುಂದೆ ಶೇ. 9ರ ಬೆಳವಣಿಗೆಯನ್ನು ನಗರಗಳಲ್ಲಿ ಹಾಗೂ ಇದರ 1.7 ಪಟ್ಟು ಉನ್ನತಿಯನ್ನು ಗ್ರಾಮೀಣ ಗ್ರಾಹಕ ಕ್ಷೇತ್ರದಲ್ಲಿ ನಿರೀಕ್ಷೆ ಮಾಡಲಾಗಿದೆ. ಸ್ವಾರಸ್ಯ ಎಂದರೆ ಒಂದೇ ಒಂದು, ಮ್ಯಾಗಿ ನ್ಯೂಡಲ್ಸ್‌ಗೆ ಬಿದ್ದ ಹೊಡೆತ ಇಡೀ ನ್ಯೂಡಲ್ಸ್ ತಯಾರಿಕಾ ವಿಶ್ವವನ್ನೇ ನಡುಗಿಸಿಬಿಟ್ಟಿತು ಎಂಬುದು ಈ ಎಫ್ಎಂಸಿಜಿಯ ಚಂಚಲತೆಯ ಸಾಕ್ಷಿ$!
2010-11ರಲ್ಲಿ 317 ಕೋಟಿ ರೂ. ವ್ಯಾಪಾರ ನಡೆಸಿದ್ದ ಪತಂಜಲಿ ಕಳೆದ ಮಾರ್ಚ್‌ಗೆ 10,561 ಕೋಟಿ ರೂ. ವಹಿವಾಟಿಗೆ ಮುಟ್ಟಿದೆ. ಅಂದರೆ 2014-15ಕ್ಕಿಂತ 5 ಪಟ್ಟು ಹೆಚ್ಚು. 2018-19ರಲ್ಲಿ ಅದಕ್ಕೆ 50 ಸಾವಿರ ಕೋಟಿ ದಾಟುವ ತವಕ. ಇದು ಉದ್ಯಮದ ಇತರ ಆಟಗಾರರನ್ನು ಕಳವಳಕ್ಕೀಡು ಮಾಡಿದೆ. ಇಷ್ಟು ದಿನ ಈ 22 ಭಾಗಗಳಲ್ಲಿ ನಿರ್ದಿಷ್ಟ ಕಂಪನಿಗಳು ನಿರ್ದಿಷ್ಟ ಉತ್ಪನ್ನಗಳ ಮೂಲಕ ತಮ್ಮ ತಮ್ಮ ಆಧಿಪತ್ಯ ನಡೆಸುತ್ತಿದ್ದವು. ಉದಾಹರಣೆಗೆ, ಮಾರಿಕೋ ಕಂಪನಿ ತನ್ನ ಪ್ಯಾರಾಚೂಟ್ ಕೋಕನಟ್ ಆಯಿಲ್ ಮೂಲಕ 570 ಕೋಟಿ ರೂ. ವಹಿವಾಟು ನಡೆಸುತ್ತಿತ್ತು. ಗೋದ್ರೆಜ್‌ನ ಬಾತ್ ಸೋಪ್, ಕೂದಲು ಬಣ್ಣದ ಪ್ಯಾಕ್, ಮನೆಯೊಳಗಿನ ಕೀಟನಾಶಕಗಳು ಉಳಿದ ಕಂಪನಿ ಎದುರು ಅಗ್ರ ಕ್ರಮಾಂಕದ ಮಾರಾಟವನ್ನು ಉಳಿಸಿಕೊಂಡಿದ್ದವು. ಇತ್ತ ಪತಂಜಲಿ ಪ್ರತಿಯೊಬ್ಬರ ತಾಟಿಗೂ ಕೈ ಹಾಕುತ್ತಿದೆ.
ಮಾರಾಟದ ಪ್ರವಚನ!
ಗುರೂಜಿಗಳು ಭಕ್ತರಿಗೆ ಪ್ರವಚನ ಮಾಡುತ್ತ ಭಕ್ತಿ ಉದ್ಯಮವನ್ನು ವಿಸ್ತರಿಸಿದ್ದರೆ ಎಫ್ಎಂಸಿಜಿ ಉದ್ಯಮಿಗಳು ಭಯ ಬೀಳುತ್ತಿರಲಿಲ್ಲ. ಅತ್ತ ವಾರ್ಷಿಕ 360 ಕೋಟಿಗೂ ಹೆಚ್ಚಿನ ಮೊತ್ತವನ್ನು ಜಾಹೀರಾತುಗಳಿಗೇ ವಿನಿಯೋಗಿಸುವ ಪತಂಜಲಿಯಂತೆ ರಶಂಕರ್ ಗುರೂಜಿಯವರ ಶ್ರೀಶ್ರೀ ಆಯುರ್ವೇದ ಸಂಸ್ಥೆ ಕೂಡ ಈ ವರ್ಷ ರಾಷ್ಟ್ರದಾದ್ಯಂತ 2,500 ಸ್ಟೋರ್‌ಗಳನ್ನು ತೆರೆಯಲು ನಿರ್ಧರಿಸಿದೆ. 2003ರಲ್ಲಿ ಈ ಎಫ್ಎಂಸಿಜಿ ಉತ್ಪಾದಕ ಕಂಪನಿ ಆರಂಭವಾಗಿದ್ದರೂ ತನ್ನ ಹೆಜ್ಜೆಗಳನ್ನು ದೃಢವಾಗಿ ದಾಖಲಿಸಿರಲಿಲ್ಲ. ಈಗ ಪತಂಜಲಿಯ ಯಶಸ್ಸಿನ ಪುಟಗಳ ಸಾಲುಗಳನ್ನೇ ಅದೂ ಅನುಸರಿಸಲು ಮುಂದಾಗಿದೆ. ಈಗಾಗಲೇ ತನ್ನ ಅಧಿಕೃತ ವೆಬ್ ಹೊರತಾಗಿ ಬಿಗ್‌ಬಾಸ್ಕೆಟ್, ಅಮೆಜಾನ್‌ನಂಥ ಆನ್‌ಲೈನ್ ಕಂಪನಿಗಳಲ್ಲೂ ತನ್ನ ವಸ್ತುಗಳನ್ನು ಬಿಕರಿಗಿರಿಸಿದೆ.
ಗುರೂಜಿಗಳು, ಧಾರ್ಮಿಕ ಕ್ಷೇತ್ರಗಳು ತಮ್ಮದೇ ಆದ ಭಕ್ತ ವೃಂದವನ್ನು ಹೊಂದಿರುತ್ತವೆ. ಅವು ಒಂದು ನಂಬಿಕೆಯ ದಟ್ಟ ವಾತಾವರಣವನ್ನೇ ಸೃಷ್ಟಿಸಿರುತ್ತವೆ. ಇದು ಅವರ ಸಂಸ್ಥೆಯ ಉತ್ಪನ್ನಗಳ ಮಾರಾಟದಲ್ಲಿ ಗುರುತರ ಪಾತ್ರ ವಸುವುದು ಖಚಿತ. ಇದರ ಜೊತೆಗೆ ಸ್ವದೇಶಿ ಕಂಪನಿಗಳು ಎಂಬ ಅಂಶವನ್ನು ಚಿತ್ತದಲ್ಲಿ ದಾಖಲಿಸುವ ಕೆಲಸವೂ ಆಗುತ್ತಿದೆ. ಈ ಹೊಸ ಎಫ್ಎಂಸಿಜಿ ಆಟಗಾರರು ಅತ್ಯಂತ ಕಡಿಮೆ ಲಾಭಾಂಶವನ್ನು ಇರಿಸಿಕೊಂಡು ಗ್ರಾಹಕರಿಗೆ ಕೂಡ ಸ್ಪರ್ಧಾತ್ಮಕ ದರದಲ್ಲಿ ತಯಾರಿಕೆಗಳನ್ನು ಮಾರುತ್ತಿವೆ. 479 ಸಾವಿರ ಕೋಟಿ ರೂ. ಗಾತ್ರದ ಉದ್ಯಮ ಇದೇ ಮೊದಲ ಬಾರಿಗೆ ಸ್ವದೇಶಿ ಆಟಗಾರರ ವಿಜಯೋತ್ಸವವನ್ನು ಕಾಣುತ್ತಿದೆ.
ಪತಂಜಲಿಗೆ ಶ್ರೀ ಶ್ರೀ ಸವಾಲು!
ರವಿಶಂಕರ್ ಗುರೂಜಿಯವರ ಶ್ರೀ ಶ್ರೀ ಎಫ್ಎಂಸಿಜಿ ಸಂಸ್ಥೆ ಹೆಲ್ತ್ ಡ್ರಿಂಕ್, ಸೋಪುಗಳು, ಸುಗಂಧ, ಸಾಂಬಾರಗಳನ್ನು 2003ರಿಂದಲೇ ತಮ್ಮ ಬ್ರಾಂಡ್ ಮೂಲಕ ಮಾರುಕಟ್ಟೆಗೆ ಬಿಟ್ಟಿದೆ. ಈಗಿನ ಮಾಹಿತಿಯಂತೆ ನವೆಂಬರ್‌ನಿಂದಲೇ ಅದರ 50 ಮಧ್ಯಮ ಗಾತ್ರದ ಸ್ಟೋರ್‌ಗಳು ಆಯ್ದ ನಗರಗಳಲ್ಲಿ ಕಾಣಿಸಿದರೆ ಅಚ್ಚರಿ ಇಲ್ಲ. ಶ್ರೀ ಶ್ರೀ ತತ್ವ ಎಂಬ ಬ್ರಾಂಡೆಡ್ ಸ್ಟೋರ್‌ಗಳು ಎರಡೇ ವರ್ಷದಲ್ಲಿ ಸಾವಿರ ಆಗುವ ಗುರಿ ಇದೆ. ಅಷ್ಟೇ ಅಲ್ಲ, ಈ ಸ್ಟೋರ್‌ಗಳ ಮೂಲಕ 300 ಪ್ರಾಡಕ್ಟ್ಗಳನ್ನು ಶ್ರೀ ಶ್ರೀ ಪರಿಚಯಿಸಲಿದೆ.
ನಿಧಾನವಾಗಿಯಾದರೂ ಭಾರತದಲ್ಲಿ ಚೀನಾ ತಯಾರಿಕೆಗಳ ವಿರುದ್ಧದ ಮನೋಭಾವ ಬಲಗೊಳ್ಳುತ್ತಿದೆ. ಅಂದರೆ ಅಲ್ಲಿನ ಸರಕಿನ ಆಮದು ಕಡಿಮೆಯಾದರೆ ಜನ ಪರ್ಯಾಯ ಹುಡುಕಲೇಬೇಕು. ಇದರ ಲಾಭ ಸ್ವದೇಶಿ ಕಂಪನಿಗಳಿಗೇ ಆಗುತ್ತದೆ ಎಂಬುದು ಸರಳ ತರ್ಕ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಹೆಚ್ಚು ಪ್ರಾಡಕ್ಟ್ಗಳು ಬೇಕಾಗುತ್ತವೆ. ಈ ಹಿನ್ನೆಲೆಯಲ್ಲಿ ಡಿಟರ್ಜೆಂಟ್ ಪೌಡರ್, ಡಿಷ್‌ವಾಶ್ ಬಾರ್, ಲಿಕ್ವಿಡ್ ಫ್ಲೊರ್ ಕ್ಲೀನರ್, ಪೂಜಾ ಹಾಗೂ ಇನ್ನೂ ಹಲವು ಲೈಪ್‌ಸ್ಟೈಲ್ ಮಾದರಿಗಳನ್ನು ತಯಾರಿಸಲು ಕೂಡ ಎಸ್‌ಎಸ್‌ಎ ನಿರ್ಧರಿಸಿದೆ.
ಶ್ರೀಶ್ರೀ ತಯಾರಿಕೆಗಳು ಈಗಾಗಲೇ 29 ದೇಶಗಳಿಗೆ ರಫ್ತಾಗುತ್ತಿವೆ. ಅದಕ್ಕೊಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ. ತಯಾರಿಕಾ ಸಂಸ್ಥೆ ಆರ್ಟ್ ಆಫ್ ಲಿವಿಂಗ್‌ನ ಸಂಚಾಲಕ ರವಿಶಂಕರ್ ಗುರೂಜಿ ಪದ್ಮ ಪ್ರಶಸ್ತಿ ಪಡೆದವರು. ಅವರ ಹೆಸರು, ಮಾತುಗಳಲ್ಲಿಯೇ ಬ್ರಾಂಡಿಂಗ್ ಇದೆ. ಆದರೆ ಖುದ್ದು ಭಾರತದ ಮಾರುಕಟ್ಟೆಯ ವಿಸ್ತಾರದ ಕಲ್ಪನೆ ಅದರ ಆದ್ಯತೆಯನ್ನು ಬದಲಿಸಿದೆ. ಬೆಂಗಳೂರು, ಹೈದರಾಬಾದ್, ಕೊದ್ವಾರ್, ಉತ್ತರಖಂಡ್‌ಗಳ ಯೂನಿಟ್‌ಗಳ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಬಿಲಿಯನ್ ಡಾಲರ್‌ಗಳ ಬಿಸಿನೆಸ್ ಕನಸು ಕಾಣಲಾಗಿದೆ. ಇತ್ತ ಪತಂಜಲಿಯ ರಾಮ್‌ದೇವ್ ಜಮ್ಮು ಮತ್ತು ಕಾಶ್ಮೀರದಲ್ಲಿ 150 ಎಕರೆ ಭೂಮಿ ಖರೀದಿಸಿ ಕಾಶ್ಮೀರಿ ಯುವಕರಿಗೆ ಉದ್ಯೋಗದ ಭರವಸೆ ಇತ್ತು ತಮ್ಮ ಸಾಮ್ರಾಜ್ಯದ ವಿಸ್ತರಣೆಗೆ ಹೊರಟಿದ್ದಾರೆ. ಗುರೂಜಿಗಳ ಪೈಪೋಟಿಯಲ್ಲಿ ಭಾರತದ ಗ್ರಾಹಕ ಗೆದ್ದಿದ್ದರೆ ಸಾಕಿತ್ತು!
– ಗುರು ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.