ಡೈರೆಕ್ಟ್ ಸ್ಪೆಷಲ್; ಮ್ಯೂಚುವಲ್ ಫಂಡ್‌ಗಳಲ್ಲಿ ನೇರ ಹೂಡಿಕೆ
Team Udayavani, Feb 18, 2019, 12:30 AM IST
ಯಾರೊಬ್ಬರಿಗೂ ನಯಾಪೈಸೆಯ ಕಮೀಷನ್ ಕೊಡದೆ, ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡಬಹುದು. ಏಜೆಂಟರುಗಳ ಅಥವಾ ವಿತರಣಾ ಸಂಸ್ಥೆಗಳ ನೆರವಿಲ್ಲದೆಯೂ, ನೇರವಾಗಿ ಮ್ಯೂಚುವಲ್ ಫಂಡ್ ಹೌಸ್‌ನಿಂದಲೇ ಯೂನಿಟ್ಸ್ ಖರೀದಿ ಮಾಡಬಹುದಾಗಿದೆ. ಈ ಮೊದಲೂ ಇಂಥ ಅನುಕೂಲವಿತ್ತು. ಆದರೆ ಆಗೆಲ್ಲಾ ಏಜೆಂಟ್ ಕಮೀಶನ್ ಎಂದು ಒಂದಷ್ಟು ಹಣ ಕೈಬಿಡುತ್ತಿತ್ತು.
ಕಳೆದ ಕೆಲವು ದಶಕಗಳಿಂದ ಜನ ಸಾಮಾನ್ಯರಿಗೆ ಮ್ಯೂಚುವಲ್ ಫಂಡು ಒಂದು ಜನಪ್ರಿಯ ಹೂಡಿಕಾ ಮಾಧ್ಯಮವಾಗಿ ಕಾಣಿಸಿದೆ. ಶೇರು ಅಥವಾ ಸಾಲಪತ್ರಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಸಾಕಷ್ಟು ಮಾಹಿತಿ ಕೊರತೆ ಇರುವವರು, ಅಧ್ಯಯನಕ್ಕೆ ಸಮಯ ಇಲ್ಲದವರು, ಮಾರುಕಟ್ಟೆಯ ಅಪಾಯವನ್ನು ನೇರವಾಗಿ ಎದುರಿಸಲು ಮನಸ್ಸಿಲ್ಲದವರು, ಮ್ಯೂಚುವಲ್ ಫಂಡ್‌ನ ಮೊರೆ ಹೋಗುತ್ತಾರೆ. ಇಂತಹ ಮ್ಯೂಚುವಲ್ ಫಂಡ್‌ಗಳು ಏಜೆಂಟರ ಮೂಲಕ ಬಿಕರಿಯಾಗುತ್ತವೆ. ಆದರೆ ಅವುಗಳು ನೇರವಾಗಿ ಫಂಡ್ ಹೌಸುಗಳಿಂದಲೂ ಖರೀದಿಗೆ ಸಿಗುತ್ತವೆ. ಬಹುತೇಕ ಜನ ಸಾಮಾನ್ಯರು, ಕಮೀಷನ್ ತೆತ್ತು ಏಜೆಂಟರ ಮೂಲಕ ಈ ಮ್ಯೂಚುವಲ್
ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ಜನವರಿ 1, 2013 ರಿಂದ ಏಜೆಂಟರನ್ನು ಬೈಪಾಸ್ ಮಾಡಿ ಕಮೀಷನ್ ಉಳಿಸಿ ನೇರವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಇಷ್ಟು ವರ್ಷಗಳ ಅವಧಿಯಲ್ಲಿ ಈ ಸೌಲಭ್ಯವನ್ನು ಪಡಕೊಂಡವರ ಸಂಖ್ಯೆ ಕಡಿಮೆ. ಈ ಸೌಲಭ್ಯವನ್ನು ಪಡಕೊಂಡು ಜಾಸ್ತಿ ಆದಾಯ ಗಳಿಸಿದವರು ಮುಖ್ಯವಾಗಿ ಸಾಂಸ್ಥಿಕ ಹೂಡಿಕೆದಾರರೇ ಹೊರತು ಚಿಲ್ಲರೆ ಗ್ರಾಹಕರಲ್ಲ. ಮಧ್ಯಮ ವರ್ಗದ ಚಿಲ್ಲರೆ ಗ್ರಾಹಕರೇ ಜಾಸ್ತಿ ಹೂಡುವ ಇಕ್ವಿಟಿ ಫಂಡುಗಳಲ್ಲಿ ನೇರ ಹೂಡಿಕೆಯ ಆಯ್ಕೆಯನ್ನು ಉಪಯೋಗಿಸಿಕೊಂಡವರು ಶೇ. 5 ಕ್ಕೂ ಕಡಿಮೆ ಮಂದಿ ಮಾತ್ರ.
ಹೊಸ ಸೌಲಭ್ಯ
ಹೌದು, ಜನವರಿ 1, 2013 ರಿಂದ ಮೊದಲ್ಗೊಂಡು ಮ್ಯೂಚುವಲ್ ಫಂಡುಗಳಲ್ಲಿ ಯಾರೊಬ್ಬನಿಗೂ ಕಮೀಷನ್ ನೀಡದೆ ನೇರವಾಗಿ ಹೂಡಬಹುದು. ನೇರವಾಗಿ ಅಂದರೆ ಯಾವುದೇ ಏಜೆಂಟರುಗಳ ಅಥವಾ ವಿತರಣಾ ಸಂಸ್ಥೆಗಳ ಮೂಲಕ ಹೋಗದೆ ನೇರವಾಗಿ ಮ್ಯೂಚುವಲ್ ಫಂಡ್ ಹೌಸಿನಿಂದಲೇ ಯುನಿಟ್ಸ್ ಖರೀದಿ ಮಾಡಬಹುದಾಗಿದೆ. ಈ ನೇರ ಖರೀದಿಯನ್ನು ಆ ಮೊದಲೂ ಮಾಡಬಹುದಿತ್ತು. ಅಲ್ಲವೆ? ಆದರೆ ಅಂತಹ ನೇರ ಖರೀದಿಯಿಂದ ನಿಮಗೆ ಯಾವುದೇ ರೀತಿಯ ಲಾಭ ಆಗುತ್ತಿರಲಿಲ್ಲ. ಏಜೆಂಟ್ ಕಮೀಷನ್ ನಿಮ್ಮ ಖಾತೆಯಿಂದ ವಜಾ ಆಗಿಯೇ ಆಗುತ್ತಿತ್ತು. ಅದರಿಂದ ನಿಮಗೆ ಯಾವುದೇ ಮುಕ್ತಿ ಇರಲಿಲ್ಲ. ಮ್ಯೂಚುವಲ್
ಫಂಡುಗಳು ಎಲ್ಲಾ ಯುನಿಟ್‌ದಾರರಿಗೆ ಸಮಾನವಾಗಿ ಕಮೀಷನ್ ವಿಧಿಸಿ ನಿಮ್ಮ ಫಂಡ್ ಮೊತ್ತವನ್ನೂ ಕಳೆಯಲಾಗುತ್ತಿತ್ತು. ಏಜೆಂಟುಗಳಿದ್ದಲ್ಲಿ ಆ ಕಮೀಷನ್ ಹಣವನ್ನು ಕೊಡುತ್ತಿತ್ತು ಮತ್ತು ಏಜೆಂಟರುಗಳಿಲ್ಲದ ನೇರ ಹೂಡಿಕೆಗಳಲ್ಲಿ ತಾನೇ ಅದನ್ನು ಉಳಿಸಿಕೊಂಡು ತನ್ನ ಜೇಬು ತುಂಬಿಸಿಕೊಳ್ಳುತ್ತಿತ್ತು.
ನೇರ ಹೂಡಿಕೆ ಎನ್ನುವುದು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಯ ವತಿಯಿಂದ ಇದೊಂದು ಮಹತ್ತರವಾದ ಹೆಜ್ಜೆ. ಈಗ ಮ್ಯೂಚುವಲ್ ಫಂಡುಗಳ ಎಲ್ಲಾ ಸ್ಕೀಮುಗಳಲ್ಲೂ 2 ರೀತಿಯ ಪ್ಲಾನ್‌ಗಳಿವೆ. ಏಜೆಂಟ್ ಮೂಲಕ ಹೋಗುವಂತಹ, ಕಮೀಷನ್ ಕಳೆಯಲ್ಪಡುವ ಸಾಮಾನ್ಯ ಪ್ಲಾನ್ ಮತ್ತು ನೇರವಾಗಿ ಹೋಗುವಂತಹ ಕಮೀಷನ್ ರಹಿತ ನೇರ ಪ್ಲಾನ್ ಪ್ರತಿ ಸ್ಕೀಮಿನ ಎನ್‌ವಿವಿ ಅಥವಾ ನಿವ್ವಳ ಮೌಲ್ಯವನ್ನು ಈ ಎರಡು ಪ್ಲಾನ್‌ಗಳಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಘೋಷಿಸಲಾಗುತ್ತದೆ. ಹೂಡಿಕೆಯ ಮಟ್ಟಿಗೆ ಎರಡೂ ಆಯ್ಕೆಗಳೂ ಒಂದೇ ಆದರೂ, ಕಮೀಷನ್ ಉಳಿತಾಯದ ಲೆಕ್ಕದಿಂದ ಎನ್‌ಎವಿ ವ್ಯತ್ಯಾಸವಾಗಿರುತ್ತದೆ- ನೇರ ಹೂಡಿಕೆಯಲ್ಲಿ ಜಾಸ್ತಿಯಾಗಿರುತ್ತವೆ.
ಎಷ್ಟು ಉಳಿತಾಯ?
ನೇರವಾಗಿ ಹೂಡಿಕೆ ಮಾಡುವವರಿಗೆ ಮ್ಯೂಚುವಲ್ ಫಂಡು ಸಾಮಾನ್ಯವಾಗಿ ಕಡಿತ ಮಾಡುತ್ತಿದ್ದ ಎನ್‌ಎವಿ ಮೇಲಿನ ಸುಮಾರು ವಾರ್ಷಿಕ ಕಮೀಷನ್ ಉಳಿತಾಯವಾಗುತ್ತದೆ.
ಲಿಕ್ವಿಡ್ ಫಂಡ್. . . . 0.05-0.1%
ಡೆಡ್ ಫಂಡ್. . . . 0.4-0.5%
ಇಕ್ವಿಟಿ ಫಂಡ್ ಸುಮಾರು 1%
ಅದಲ್ಲದೆ ಪ್ರತೀ ಬಾರಿ ಹೂಡಿಕೆ ಮಾಡುವಾಗಲೂ ಹೂಡಿಕೆಯ ರೂ 10,000 ಕ್ಕೆ ಟ್ರಾನ್ಸಾಕ್ಷ$ನ್ ಚಾರ್ಜ್ ಎಂದು ರೂ 150 (ಪ್ರಥಮ ಬಾರಿ) ಯಾ 100 (ಬಳಿಕ) ನಿಮಗೆ ತಗಲುವುದು ಕೂಡಾ ಉಳಿತಾಯವಾಗುತ್ತದೆ (ಇದು ಈಗಲೂ ಸಾಧ್ಯ). ಪ್ರತಿ ವರ್ಷ ಉಳಿತಾಯವಾದ ಸುಮಾರು 0.5%-1% (ಮೇಲೆ ಹೇಳಿದಂತೆ) ಚಕ್ರೀಕರಣದೊಂದಿಗೆ (Compounding) ದೀರ್ಘಾವಧಿಯಲ್ಲಿ ಒಂದು ಆಕರ್ಷಕ ಮೊತ್ತವಾಗುವುದರಲ್ಲಿ ಸಂಶಯವಿಲ್ಲ.
ಏನು ಮಾಡಬೇಕು?
ಇದೊಂದು ಆಯ್ಕೆ ಮಾತ್ರ. ಕಡ್ಡಾಯವಲ್ಲ. ಏಜೆಂಟರ ಸಲಹೆ ಮತ್ತು ಸೇವೆ ಬೇಕಾದವರು ಮತ್ತು ಅವರ ಮೂಲಕ ಹೋಗುವುದರಲ್ಲಿ ಪ್ರಯೋಜನ ಕಾಣುವವರು ಆ ಮೂಲಕವೇ ಮುಂದುವರಿಯುವುದು ಉತ್ತಮ. ಆದರೆ ಅದರ ಅಗತ್ಯ ಕಾಣದವರು ಹಾಗೂ ತಾವೇ ಇವನ್ನು ನಿಭಾಯಿಸ ಬಲ್ಲವರು ನೇರವಾಗಿ ಹೌಸಿನವರ ಕಚೇರಿ ಅಥವಾ ಆನ್ಲ„ನ್ ಮೂಲಕ ಹೋಗಬಹುದು. ಅಪ್ಲಿಕೇಶನ್‌ನಲ್ಲಿ ಏಜೆಂಟ್ ಕೋಡ್ ಎಂಬಲ್ಲಿ ಡೈರೆಕ್ಟ್ ಎಂದು ನಮೂದಿಸಿರಿ. ಡೈರೆಕ್ಟ್ ಪ್ಲಾನ್ ಅನ್ನು ಆಯ್ಕೆ ಮಾಡಿ.
ಅದಲ್ಲದೆ, ಮ್ಯೂಚುವಲ್ ಫಂಡುಗಳಲ್ಲಿ ಈಗಾಗಲೇ ಹೂಡಿಕೆ ಇರುವವರು – ಎಸ್‌ಐಡಪಿ ಸಹಿತ, ಅಂತಹ ಹೂಡಿಕೆಗಳನ್ನು ಈ ನೇರ ಹಾದಿಗೆ ವರ್ಗಾಯಿಸಿಕೊಳ್ಳಬಹುದು. ಅದಕ್ಕಾಗಿ ಪ್ರತ್ಯೇಕ ಲಿಖೀತ ಅರ್ಜಿ ನೀಡಬೇಕು. ಹೀಗೆ ಮಾಡಿ ವಾರ್ಷಿಕ ಪ್ರತಿಫಲದಲ್ಲಿ 0.5%-1% ಜಾಸ್ತಿ ಪ್ರತಿಫಲ ಪಡೆಯಬಹುದು.
ಈ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ. ಇದಕ್ಕೆ ಜಾಸ್ತಿ ಪ್ರಚಾರವನ್ನು ಕೂಡಾ ಸರಕಾರ ನೀಡಿಲ್ಲ. ಈ ನಿರ್ದೇಶನದೊಂದಿಗೆ ಸೆಬಿ ಭಾರತದ ಹೂಡಿಕಾ ಕ್ಷೇತ್ರದಲ್ಲಿ ಒಂದು ಹೊಸ ಮೈಲುಗಲ್ಲನ್ನು ತಲುಪಿದೆ. ಅದು ಯಾಕೆಂದರೆ ನಮ್ಮಲ್ಲಿ ಏಜೆಂಟರ ಮೂಲಕ ಬಿಕರಿಯಾಗುವಂತಹ ಹಲವಾರು ಹೂಡಿಕಾ ಮಾರ್ಗಗಳಿವೆ. ಅವುಗಳಲ್ಲಿ ಎಲ್ಲವನ್ನೂ ನೇರವಾಗಿ ಆಯಾ ಸಂಸ್ಥೆಗಳಲ್ಲಿ ಹೋಗಿ ಮಾಡಿಕೊಳ್ಳಲು ಬರುವುದಿಲ್ಲ. ನೀವು ಆ ಹೂಡಿಕೆಯಲ್ಲಿ ಎಂತಹ ಬೃಹಸ್ಪತಿಯಾಗಿದ್ದರೂ ಆಯಾ ಏಜೆಂಟರುಗಳ ನಿಪುಣ ಸಲಹೆ ಪಡೆದ ಬಳಿಕವಷ್ಟೇ ನಿಮಗೆ ಆ ಕ್ಷೇತ್ರದಲ್ಲಿ ಜ್ಞಾನೋದಯವಾಗಿ ಸರಿಯಾದ ಹೂಡಿಕೆಯಲ್ಲಿ ದುಡ್ಡು ಹಾಕಬಲ್ಲಿರಿ ಎಂಬುದು ಸರಕಾರದ ಪೂರ್ವಾಗ್ರಹ. ಇಲ್ಲದಿದ್ದರೆ, ನೀವು ಏನೂ ಗೊತ್ತಿಲ್ಲದ ಹೆಡ್ಡರು ಎನ್ನುವುದು ಅವರ ಅಂಬೋಣ. ಅದು ಬಿಟ್ಟು ನನಗೆ ಈ ವಿಚಾರ ಗೊತ್ತಿದೆ, ನಾನು ನೇರವಾಗಿ ಹೂಡ ಬಲ್ಲೆ ನನಗೆ ಏಜೆಂಟರ ಸಲಹೆಯ ಅಗತ್ಯವಿಲ್ಲ ಎನ್ನುವಂತಿಲ್ಲ. ಆ ಆಯ್ಕೆಯನ್ನು ಸರಕಾರ ನಿಮಗೆ ಕೊಡುವುದಿಲ್ಲ. ಆದರೆ ಏಜೆಂಟರ ವತಿಯಿಂದ ಯಾವ ಗುಣಮಟ್ಟದ ಸಲಹೆ ಸಿಗುತ್ತದೆ ಎನ್ನುವುದರ ಮೇಲ್ತನಿಕೆ ಮಾಡುವುದಾಗಲಿ ಮತ್ತು ಅದಕ್ಕಾಗಿ ನಿಮ್ಮ ಹೂಡಿಕೆಯಿಂದ ಎಷ್ಟು ದುಡ್ಡು ಕಿತ್ತುಕೊಳ್ಳಲಾಗುತ್ತದೆ ಎನ್ನುವುದನ್ನು ತಿಳಿಸುವ ಕನಿಷ್ಠ ಸೌಜನ್ಯವಾಗಲಿ ನಮ್ಮ ಸರಕಾರಕ್ಕಿಲ್ಲ. ಕೆಲವೊಂದು ಸ್ಕೀಮುಗಳಲ್ಲಿ ಏಜೆಂಟರಿಗೆ ಸಿಗುವ ಕಮೀಷನ್ ಮೊತ್ತ ನೋಡಿದರೆ ನಿಮಗೆ ದಿಗಿಲಾಗುವುದು ಗ್ಯಾರಂಟಿ.
ಆದರೆ, ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ. ಜನಸಾಮಾನ್ಯರ ಹಗಲುದರೋಡೆ ಮಾಡುತ್ತಿದ್ದ ಯುಲಿಪ್ ಸ್ಕೀಮುಗಳ ಕಮೀಶನ್ ಮೇಲೆ ವಿಮಾ ನಿಯಂತ್ರಕ ಐ.ಆರ್.ಡಿ.ಎ ತೀವ್ರವಾದ ಕಡಿವಾಣ ಹಾಕಿದ್ದಾರೆ. ಒಳ್ಳೆಯದು. ಪೋಸ್ಟಲ್ ಇಲಾಖೆಯವರು ತಮ್ಮ ಸೇವಿಂಗ್ಸಿನ ಕೆಲ ಸ್ಕೀಮುಗಳಲ್ಲಿ ಕಮೀಷನ್ ಅನ್ನು ಸಂಪೂರ್ಣ ತೆಗೆದು ಹಾಕಿದ್ದಾರೆ, ಉಳಿದವಕ್ಕೆ ಇಳಿಸಿದ್ದಾರೆ. ಮ್ಯೂಚುವಲ್
ಫಂಡ್ ಕ್ಷೇತ್ರದಲ್ಲಿ ಏಜೆಂಟರ ನೆರವಿಲ್ಲದೆ ನೇರವಾಗಿ ಹೋಗಿ ಶೂನ್ಯ ಕಮೀಷನ್ ಫಂಡುಗಳಲ್ಲಿ ಹೂಡುವ ಆಯ್ಕೆ ಇದೀಗ ಜಾರಿಗೆ ಬಂದಿದೆ.
ಇನ್ನೂ ಮುಂದಕ್ಕೆ ಹೋಗಿ ಇಂತಹ ನೇರ ಹೂಡಿಕೆಗಳ ಆಯ್ಕೆ ವಿಮಾ ಕ್ಷೇತ್ರದಲ್ಲೂ ಬರಬಹುದು. ಕೆಲ ಖಾಸಗಿ ವಿಮಾ ಕಂಪೆನಿಗಳು ಆನ್ ಲೈನ್ ಪಾಲಿಸಿಗಳ ಮೂಲಕ ಏಜೆಂಟರ ಕಮೀಶನ್ ರಹಿತವಾಗಿ ಸುಮಾರು 20-30% ಅಗ್ಗವಾಗಿ ಪಾಲಿಸಿಗಳನ್ನು ಈಗಾಗಲೇ ಮಾರುತ್ತಿದ್ದಾರೆ. ಆದರೆ ಇದು ಸ್ಪರ್ಧಾತ್ಮಕವಾದ ಬೆಳವಣಿಗೆಯೇ ಹೊರತು ಎಲ್ಲಾ ವಿಮಾ ಕಂಪೆನಿಗಳೂ ಕಡ್ಡಾಯವಾಗಿ ಈ ಆಯ್ಕೆಯನ್ನು ಗ್ರಾಹಕರಿಗೆ ನೀಡಬೇಕು ಎನ್ನುವ ಕಾನೂನು ಐ.ಆರ್.ಡಿ.ಎ ವತಿಯಿಂದ ಇನ್ನೂ ಬಂದಿಲ್ಲ. ಒಂದು ದಿನ ಅದೂ ಬಂದೀತು.
ಎಷ್ಟು ಉಳಿತಾಯ?
ಇದರಲ್ಲಿ ಆಗುವ ಉಳಿತಾಯ ಮೇಲ್ನೋಟಕ್ಕೆ ತೀರಾ ಕಡಿಮೆ ಅಂತ ಕಂಡು ಬಂದರೂ ಕಾಲಕ್ರಮೇಣ ಬೆಳೆದು ದೊಡ್ಡ ಮೊತ್ತವಾಗುತ್ತದೆ. ಏನಿದು ಅರ್ಧ ಅಥವಾ ಒಂದು ಶೇಕಡಾ ಹೆಚ್ಚುವರಿ ಬಡ್ಡಿ ಅಬ್ಬಬ್ಟಾ ಅಂದ್ರೆ ಎಷ್ಟಾಗಬಹುದು ಅಂತ ಮೂಗು ಮುರಿಯಬೇಡಿ.
ಪ್ರತಿವರ್ಷ ಶೇ.1ರಷ್ಟು ಹೆಚ್ಚುವರಿ ಪ್ರತಿಫಲ ಸಿಗುವಂತಿದ್ದರೆ ಅದು ಕಾಲ ಕ್ರಮೇಣ 5,10,15,20,25 ಯಾ 30 ವರ್ಷಗಳಲ್ಲಿ ಎಷ್ಟಾಗಬಹುದು? ಇದೊಂದು ಕುತೂಹಲಕಾರಿ ಲೆಕ್ಕಾಚಾರ.
ಒಬ್ಟಾತ 1 ಲಕ್ಷ ರುಪಾಯಿಗಳನ್ನು ಒಂದು ಇಕ್ವಿಟಿ ಮ್ಯೂಚುವಲ್ ಫಂಡಿನಲ್ಲಿ ಹಾಕಿದರೆ ಆತನಿಗೆ ವಾರ್ಷಿಕ 10% ಪ್ರತಿಫಲ ಬರಬಹುದು ಎಂದು ಇಟ್ಟುಕೊಳ್ಳೋಣ. ಆತ ನೇರವಾದ ಪ್ಲಾನಿನಲ್ಲಿ ಹಾಕಿದರೆ ಆತನಿಗೆ 1% ಹೆಚ್ಚುವರಿ ಪ್ರತಿ ವರ್ಷ ಸಿಗಬಹುದು ಅಂದರೆ ರೂ 1000 ಹೆಚ್ಚುವರಿ ಲಾಭ. ಈ ಹೆಚ್ಚುವರಿ ಬಡ್ಡಿ ಪರ್ತಿ ವರ್ಷವೂ ಸಿಗುವುದಲ್ಲದೆ ಆ ಮೊತ್ತವೂ ಬೆಳೆಯುತ್ತಾ ಹೋಗುತ್ತದೆ. ಒಂದು ಆರ್.ಡಿ ಖಾತೆಯ ಥರ.
1 ಲಕ್ಷ ಹೂಡಿದಾತನಿಗೆ ನೇರ ಹೂಡಿಕೆಯ ಸ್ಕೀಮಿನಲ್ಲಿ ರೂ. 6716 (5 ವರ್ಷಗಳಲ್ಲಿ) ರೂ. 17,532 (10 ವರ್ಷಗಳಲ್ಲಿ) ರೂ. 34,950 (15 ವರ್ಷಗಳಲ್ಲಿ) ರೂ. 63,000 (20 ವರ್ಷಗಳಲ್ಲಿ) ರೂ. 1,08182 (25 ವರ್ಷಗಳಲ್ಲಿ) ಹಾಗೂ ರೂ. 1,80,943 (30 ವರ್ಷಗಳಲ್ಲಿ) ಹೆಚ್ಚುವರಿ ಸಿಗುತ್ತವೆ.
ಒಂದು ವೇಳೆ ನೀವು ರೂ 10000 ಅನ್ನು ಪ್ರತಿ ತಿಂಗಳು 30 ವರ್ಷಗಳ ಕಾಲ 10% ನೀಡುವ ಮ್ಯೂಚುವಲ್ ಫಂಡಿನಲ್ಲಿ ಹಾಕಿದ್ದೀರಿ ಅಂದುಕೊಳ್ಳಿ. ಅದು ನಿಮಗೆ 30 ವರ್ಷಗಳ ಅಂತ್ಯದಲ್ಲಿ 2.24 ಕೋಟಿರೂ.ಗಳನ್ನು ಕೊಡುತ್ತದೆ. ಅದೇ ದುಡ್ಡನ್ನು 11% ನೀಡುವ ಅದೇ ಸ್ಕೀಮಿನ ನೇರ ಹೂಡಿಕೆಯಲ್ಲಿ ಹಾಕಿದರೆ ಅದು ನಿಮಗೆ ರೂ 2.83 ಕೋಟಿ ಕೊಡುತ್ತದೆ ಅಂದರೆ ರೂ 55 ಲಕ್ಷ$ ಹೆಚ್ಚುವರಿ, 30 ವರ್ಷಗಳಲ್ಲಿ.
ಇದು ಚಕ್ರೀಕರಣದ ಶಕ್ತಿ ಅಥವಾ Power of compounding. ಜಾಸ್ತಿ ಕಾಲ ದುಡ್ಡು ಬೆಳೆಯುತ್ತಾ ಹೋದಂತೆಲ್ಲಾ ಅಂತಿಮ ಮೊತ್ತ ದೊಡªದಾಗುತ್ತಾ ಹೋಗುತ್ತದೆ. ಒಂದು ದೀರ್ಘಕಾಲಕ್ಕೆ ಚಕ್ರ ಬಡ್ಡಿಯಲ್ಲಿ ಬೆಳೆಯುತ್ತಾ ಹೋಗುವ ಸಣ್ಣ ಮೊತ್ತವೂ ಒಂದು ದಿನ ಗಣನೀಯ ಮೊತ್ತವಾಗಿ ನಮಗೆ ಒದಗಿಬರಬಹುದು. ಹಾಗಾಗಿ, ನೇರ ಹೂಡಿಕೆಯ ಹೆಚ್ಚುವರಿ ಪ್ರತಿಫಲವನ್ನು ಚಿಕ್ಕದೆಂದು ಕಡೆಗಣಿಸುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.