ಸೋಂಕು ತಾಕದ ಮನೆ
Team Udayavani, Mar 9, 2020, 5:35 AM IST
ಮನೆಯ ವಿನ್ಯಾಸ, ಬೇಸಗೆಯಲ್ಲಿ ತೀರಾ ಬೆಂದು ಬೆಂಡಾಗುವಂತೆ ಮಾಡದೆ, ಚಳಿಗಾಲದಲ್ಲಿ ಗಡಗಡ ನಡುಗುವಂತೆ ಮಾಡಬಾರದು. ಹಾಗೆಯೇ, ಶೀತಕಾಲದಲ್ಲಿ ತೇವಾಂಶ ಕಡಿಮೆ ಆಗದಂತೆಯೂ, ಬೇಸಿಗೆಯಲ್ಲಿ ಹಾಗೂ ಮಳೆಗಾಲದಲ್ಲಿ ನೀರಿನಂಶವನ್ನು ಸರಿದೂಗಿಸಿಕೊಂಡು ಹೋಗುವಂತೆಯೂ ಇರಬೇಕು. ಆಗ ಮಾತ್ರ ಮನೆ ರೋಗ ನಿರೋಧಕ ಎಂದು ಕರೆಸಿಕೊಳ್ಳುತ್ತದೆ.
ಮನೆ ಕಟ್ಟುವುದೇ ನೆಮ್ಮದಿಯಿಂದ ಇರಲು. ಹೀಗಾಗಿ ಮನೆ, ಅದರಲ್ಲಿ ವಾಸ ಮಾಡುವವರನ್ನು ಚಳಿ, ಮಳೆ, ಬಿಸಿಲುಗಳಿಂದ ರಕ್ಷಿಸುವುದಷ್ಟೇ ಅಲ್ಲದೆ, ಅವರ ಆರೋಗ್ಯ ಕಾಪಾಡುವುದು ಕೂಡಾ ಮುಖ್ಯ. ಹೀಗಾಗಿ ಮನೆಯ ಒಳಾಂಗಣ ಹಾಗೂ ಹೊರಾಂಗಣ, ರೋಗನಿರೋಧಕ ಗುಣಗಳನ್ನು ಹೊಂದಿರಬೇಕು. ನಮ್ಮ ದೇಹ ಆರೋಗ್ಯದಿಂದಿರಲು ನಿರ್ದಿಷ್ಟ ತಾಪಮಾನ ಹಾಗೂ ತೇವಾಂಶವನ್ನು ಬಯಸುತ್ತದೆ. ವರ್ಷವಿಡೀ ಪರಿಸರದ ತಾಪಮಾನ ಹಾಗೂ ತೇವಾಂಶ ಬದಲಾಗುತ್ತಲೇ ಇರುತ್ತದೆ. ಕೆಲವೊಮ್ಮೆ ದಿಢೀರ್ ಎಂದು ಬದಲಾದರೆ, ಮಿಕ್ಕ ಸಮಯದಲ್ಲಿ ಸಾಕಷ್ಟು ನಿಧಾನವಾಗಿ ಬದಲಾಗುತ್ತದೆ. ಇದು ದೇಹಕ್ಕೆ ಸಹಾಯಕವೂ ಆಗಿರುತ್ತದೆ. ಆರೋಗ್ಯಕರ ಮನೆಗಳು ವಾತಾವರಣದ ವೈಪರೀತ್ಯವನ್ನು ಸರಿದೂಗಿಸಿಕೊಂಡು ಹೋಗುವ ಗುಣವನ್ನು ಹೊಂದಿರಬೇಕು. ಬೇಸಗೆಯಲ್ಲಿ ತೀರಾ ಬೆಂದು ಬೆಂಡಾಗುವಂತೆ ಮಾಡದೆ, ಚಳಿಗಾಲದಲ್ಲಿ ಗಡಗಡ ನಡುಗುವಂತೆ ಮಾಡದಂತೆ ಮನೆಯ ವಿನ್ಯಾಸ ಇರಬೇಕು. ಹಾಗೆಯೇ, ಶೀತಕಾಲದಲ್ಲಿ ತೇವಾಂಶ ಕಡಿಮೆ ಆಗದಂತೆಯೂ, ಬೇಸಿಗೆಯಲ್ಲಿ ಹಾಗೂ ಮಳೆಗಾಲದಲ್ಲಿ ನೀರಿನಂಶವನ್ನು ಸರಿದೂಗಿಸಿಕೊಂಡು ಹೋಗುವಂತೆಯೂ ನೋಡಿಕೊಳ್ಳಬೇಕು. ಇನ್ನು, ಧೂಳು ಕೂಡ ಮನೆಯ ವಿನ್ಯಾಸ ಆಧರಿಸಿ ಹೆಚ್ಚು ಶೇಖರಗೊಳ್ಳಬಹುದು. ಮನೆಯ ವಿನ್ಯಾಸ ಮಾಡುವಾಗ ಈ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು.
ವೈರಸ್‌ಗಳ ಹಾವಳಿಯಿಂದ ರಕ್ಷಣೆ
ಇತ್ತೀಚಿನ ದಿನಗಳಲ್ಲಿ ವೈರಸ್ ಎಂದರೆ ಜನ ಭಯಭೀತರಾಗುವಂತೆ ಆಗಿದೆ. ಅವುಗಳಲ್ಲಿ ಎಲ್ಲವನ್ನೂ ತಡೆಹಿಡಿಯಲು ಆಗದೇ ಇರಬಹುದು. ಆದರೆ, ನಮ್ಮನ್ನು ಸಾಮಾನ್ಯವಾಗಿ ಕಾಡುವ ರೋಗಾಣುಗಳು ವೃದ್ಧಿಯಾಗದಂತೆ ಮನೆಯನ್ನು ರೂಪಿಸಬಹುದು. ಹಾಗೆಯೇ ಯಾವುದೇ ರೋಗಾಣು ನಿರ್ದಿಷ್ಟ ಕಾಲಮಾನದಲ್ಲಿ ಹೆಚ್ಚು ವೃದ್ಧಿಸಿ ನಂತರ ಕ್ಷೀಣವಾಗುವುದನ್ನೂ ನಾವು ಗಮನಿಸಬಹುದು. ಹಾಗಾಗಿ, ವೈರಸ್‌ಗಳು ಯಾವ ತಾಪಮಾನ, ತೇವಾಂಶದಲ್ಲಿ ವೃದ್ಧಿಸುತ್ತವೋ ಅದಕ್ಕೆ ತದ್ವಿರುದ್ಧವಾದ ವಾತಾವರಣವನ್ನು ನಾವು ಮನೆಯಲ್ಲಿ ವಿನ್ಯಾಸ ಮಾಡಿಕೊಂಡರೆ, ವೈರಾಣುಗಳ ವೃದ್ಧಿಗೆ ತಡೆಯೊಡ್ಡಬಹುದು.
ಚಳಿಗಾಲದಲ್ಲಿ ಬೆಚ್ಚನೆಯ ಮನೆ
ಬಹುತೇಕ ಶ್ವಾಸಕೋಶದ ಸೋಂಕುಗಳು ಚಳಿಗಾಲದಲ್ಲಿ ಉಲ್ಬಣಹೊಂದುವಂತೆ ಇತರೆ ಕಾಲದಲ್ಲಿ, ಮುಖ್ಯವಾಗಿ ಬೇಸಗೆಯಲ್ಲಿ ವೃದ್ಧಿಸುವುದಿಲ್ಲ. ನಮ್ಮ ದೇಹದ ಎಲ್ಲ ಭಾಗಗಳಿಗಿಂತ ಶ್ವಾಸಕೋಶಗಳಿಗೆ ನಿರ್ದಿಷ್ಟ ತಾಪಮಾನ ಅಂದರೆ 37 ಡಿಗ್ರಿ ಸೆಲ್ಸಿಯಸ್ ಅಥವ 98.6 ಡಿಗ್ರಿ ಫ್ಯಾರನ್‌ಹೀಟ್ ಇರಬೇಕಾಗುತ್ತದೆ. ಜೊತೆಗೆ ಸಾಕಷ್ಟು ತೇವಾಂಶ ಅಂದರೆ ಶೇಕಡ 50ರಷ್ಟಾದರೂ ನಾವು ಉಸಿರಾಡುವ ಗಾಳಿಯಲ್ಲಿ ಇರಬೇಕಾಗುತ್ತದೆ. ಒಣ ಹಾಗೂ ಶೀತಗಾಳಿ, ಅದರಲ್ಲೂ ಧೂಳಿನಿಂದ ಕೂಡಿದ್ದರೆ, ಸೋಂಕು ಬೇಗ ತಾಗುತ್ತದೆ, ಜೊತೆಗೆ, ಇರುವ ಸೋಂಕನ್ನು ದೇಹ ಹೊಡೆದೋಡಿಸಲು ಕಷ್ಟ ಆಗುತ್ತದೆ. ಆದರೆ, ಅದೇ ತಾಪಮಾನ, ಅದರಲ್ಲೂ ನಮ್ಮ ಶ್ವಾಸಕೋಶಗಳಲ್ಲಿ ತೀರಾ ಕಡಿಮೆ ಆದರೆ, ಅವುಗಳಲ್ಲಿ ಸೊಂಕು ವೃದ್ಧಿಸುತ್ತದೆ.
ಥಂಡಿ ಹೊಡೆಯದಂತೆ ವಿನ್ಯಾಸ ಮಾಡಿ
ಮನೆಯ ಪ್ಲ್ಯಾನ್ ಮಾಡುವಾಗಲೇ ನಾವು ದಿನದ 8- 10 ಗಂಟೆಗಳನ್ನು ಕಳೆಯುವ, ಅದರಲ್ಲೂ ನಿದ್ರಾವಸ್ಥೆಯಲ್ಲಿರುವಾಗ, ಉಸಿರಾಡುವ ಭಾಗ, ಅಂದರೆ ನಮ್ಮ ತಲೆ ಸಾಮಾನ್ಯವಾಗೇ ಆಗುವ ವಾತಾವರಣದ ಏರಿಳಿತಗಳಿಂದ, ತ್ರಾಸಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಈ ಕಾರಣಕ್ಕೆ ನಾವು ತಲೆಯನ್ನು ಕಿಟಕಿಯ ಮುಂದೆ ಇರುವಂತೆ ಮಂಚವನ್ನು ಇಡಬಾರದು. ಆದರೆ ಕಿಟಕಿಯ ಪಕ್ಕ ಇಟ್ಟುಕೊಳ್ಳಬಹುದು. ಈ ಮೂಲಕ ನಾವು “ವಿಂಡ್ ಡ್ರಾಫ್ಟ್’ ಅಂದರೆ ರಭಸದಿಂದ ಏರಿಳಿಯುವ ಗಾಳಿಯ ಹರಿವು ಮೂಗಿನ ಮೂಲಕ ಶ್ವಾಸಕೋಶವನ್ನು ಪ್ರವೇಶಿಸುವುದನ್ನು ತಡೆಯಬಹುದು. ಈ ಏರುಪೇರುಗಳನ್ನು ಪದೇಪದೆ ಸರಿಪಡಿಸುವುದು ಶ್ವಾಸಕೋಶಕ್ಕೆ ಕಷ್ಟದ ಕೆಲಸ. ನಮ್ಮ ದೇಹ ಥಂಡಿ ಗಾಳಿಗೆ ಒಗ್ಗಿಹೋಗಿದ್ದರೆ, ಸಾಕಷ್ಟು ರಕ್ತನಾಳಗಳು ಒಳಪ್ರವೇಶಿಸುವ ಗಾಳಿಯನ್ನು ಬೆಚ್ಚಗೆ ಹಾಗೆಯೇ ತೇವಾಂಶ ಭರಿತವಾಗಿಯೂ ಮಾಡಬಲ್ಲವು. ಆದರೆ, ಒಂದಷ್ಟು ಹೊತ್ತು ತಣ್ಣನೆಯ ಗಾಳಿ, ಅದೂ ಜೋರಾಗಿ ಬೀಸಿದರೆ, ನಮ್ಮ ದೇಹಕ್ಕೆ ಕಷ್ಟವಾಗುತ್ತದೆ. ಈ ಕಾರಣದಿಂದಾಗಿಯೇ, ಹವಾಮಾನದಲ್ಲಿ ಶೀಘ್ರವಾಗಿ ಏರುಪೇರಾದರೆ, ಹಲವಾರು ಸೋಂಕುಗಳು ಉಲ್ಬಣಿಸುವುದನ್ನು ನಾವು ನೋಡಬಹುದು.
ಧೂಳಿನಿಂದ ರಕ್ಷಣೆ
ಚಳಿಗಾಲ ಸರಿಯಾಗಿ ಮುಗಿಯದೆ, ಪೂರ್ವ ಬೇಸಗೆಯ ಕಾಲದಲ್ಲಿ, ಮಳೆ ಇಲ್ಲದೆ ವಾತಾವರಣ ಧೂಳಿನಿಂದ ಕೂಡಿರುತ್ತದೆ. ಈ ಧೂಳು ತುಂಬಿದ ಗಾಳಿಯೂ ಶ್ವಾಸಕೋಶಗಳಿಗೆ ಆರೋಗ್ಯಕರವಲ್ಲ. ಅನೇಕ ವೈರಾಣುಗಳಿಗೆ ಈ ಧೂಳಿನ ಕಣಗಳೇ ಆಧಾರವಾಗಿ, ಸುಲಭದಲ್ಲಿ ನಮ್ಮ ದೇಹವನ್ನು ಉಸಿರಿನೊಂದಿಗೆ ಸೇರಿಬಿಡುತ್ತದೆ. ಈ ಅವಧಿಯಲ್ಲಿ, ದಕ್ಷಿಣಭಾರತದ ಬಹುತೇಕ ಕಡೆಗಳಲ್ಲಿ ಒಣ ಹಾಗೂ ಚಳಿಗಾಳಿ ಪೂರ್ವ ಹಾಗೂ ಉತ್ತರದಿಂದ ಅಂದರೆ ಈಶಾನ್ಯದಿಂದ ಬೀಸುತ್ತದೆ. ಈ ಗಾಳಿಯನ್ನು ನಾವು ಆದಷ್ಟೂ ನೇರವಾಗಿ ತೆಗೆದುಕೊಳ್ಳಬಾರದು ಎಂದರೆ, ನಮ್ಮ ಕೋಣೆಯ ಈ ದಿಕ್ಕಿನ ಕಿಟಕಿಗಳನ್ನು ಮುಚ್ಚಿ, ತಾಜಾ ಗಾಳಿ ಒಳಾಂಗಣವನ್ನು ಪ್ರವೇಶಿಸಲು ಇದರ ವಿರುದ್ಧ ದಿಕ್ಕು ಅಂದರೆ ದಕ್ಷಿಣ ಹಾಗೂ ಪಶ್ಚಿಮದ ಕಡೆಯ ಕಿಟಕಿಗಳನ್ನು ತೆರೆದಿಡಬಹುದು. ಈ ದಿಕ್ಕಿನಿಂದ ಗಾಳಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಬೀಸುವುದಿಲ್ಲವಾದ ಕಾರಣ, ಇದು ಹೆಚ್ಚು ಆರೋಗ್ಯಕರ. ಮುಖ್ಯವಾಗಿ ನಮ್ಮ ಶ್ವಾಸಕೋಶಗಳಿಗೆ “ಏರ್ ಡ್ರಾಫ್ಟ್’ – ಗಾಳಿಯ ಏರಿಳಿತ ಹರಿವಿನಿಂದಾಗುವ ತೊಂದರೆಯನ್ನು ತಪ್ಪಿಸಬಹುದು.
ತೇವಾಂಶ ಹೆಚ್ಚಿಸಿ
ಒಣ ಹವಾಮಾನ ನಮ್ಮ ಚರ್ಮವನ್ನಷ್ಟೇ ಅಲ್ಲ ನಮ್ಮ ಶ್ವಾಸಕೋಶಗಳನ್ನೂ ಒಣಗುವಂತೆ ಮಾಡುತ್ತದೆ. ನಮ್ಮ ಮೂಗು ಮೊದಲು ಗೊಂಡು ಗಂಟಲು ಸಹ ತ್ರಾಸಕ್ಕೆ ಒಳಗಾಗುತ್ತದೆ. ಮನೆಯ ಸುತ್ತ ಒಂದಷ್ಟು ಖಾಲಿ ಜಾಗ ಬಿಟ್ಟರೆ, ಅಲ್ಲಿ ಹಸಿರನ್ನು ಬೆಳೆದರೆ, ಸ್ವಾಭಾವಿಕವಾಗೇ ಸಾಕಷ್ಟು ತೇವಾಂಶ ಸೇರ್ಪಡೆ ಆಗುತ್ತದೆ. ಇಲ್ಲದಿದ್ದರೆ, ಅಲಂಕಾರಿಕವಾಗಿಯೂ ಕಾಣುವಂತೆ, ದೊಡ್ಡ ಬಾಯಿಯ “ಉರುಳು’ ಮಾದರಿಯ ಹೆಚ್ಚು ಆಳವಿಲ್ಲದ, ಪಾತ್ರೆಯಲ್ಲಿ ಒಂದೆರಡು ಇಂಚು ನೀರು ಹಾಕಿ, ಕಲಾತ್ಮಕವಾಗಿ ಹೂವುಗಳನ್ನು ಇರಿಸಬಹುದು. ಅಗ, ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಒಳಾಂಗಣದ ತೇವಾಂಶವನ್ನೂ ಹೆಚ್ಚಿಸುತ್ತದೆ.
ಹೆಚ್ಚಿನ ಮಾಹಿತಿಗೆ ಫೋನ್ 9844132826
– ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.