ಮನೆಯ ನಾಡಿ ಮಿಡಿತ…
ಗೋಡೆಗಳ ಮೇಲೆ ತೇವ, ಬಿರುಕುಗಳು ಮೂಡದಿರಲಿ
Team Udayavani, Feb 3, 2020, 5:15 AM IST
ಮನೆಗೆ ಏನಾದರೂ ತೊಂದರೆಯಾಗುವ ಮೊದಲೇ, ನಮಗೆ ಅದು ಸಂದೇಶವನ್ನು ರವಾನಿಸುತ್ತಿರುತ್ತದೆ, ನಾವು ಅದನ್ನು ಗಮನಿಸಿ ತಕ್ಷಣವೇ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು. ಈ ಸಂಜ್ಞೆಗಳನ್ನು ನಿರ್ಲಕ್ಷಿಸಿದರೆ, “ಆಮೇಲೆ ನೋಡೋಣ’ ಎಂದು ಹಾಗೆಯೇ ಬಿಟ್ಟರೆ, ಮುಂದೆ ದುಬಾರಿ ಬೆಲೆ ತೆರಬೇಕಾಗುತ್ತದೆ.
ಮನೆಗಳ ಸತ್ವಪರೀಕ್ಷೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಆಗುತ್ತದೆಯಾದರೂ, ಇತರೆ ಕಾಲಗಳಲ್ಲೂ ನಾವು ಅವುಗಳತ್ತ ಒಂದು ಕಣ್ಣು ಇಟ್ಟಿರಬೇಕು. ಅದರಲ್ಲೂ ಹೊಸ ಮನೆಗಳನ್ನು ಎಲ್ಲಾ ಕಾಲದಲ್ಲೂ ಅಂದರೆ ಮಳೆ, ಬಿಸಿಲು, ಚಳಿಗಾಲದಲ್ಲಿ- ಒಂದು ವರ್ಷದ ಮಟ್ಟಿಗಾದರೂ ಕೂಲಂಕಷವಾಗಿ ಪರಿಶೀಲಿಸುತ್ತಾ ಇದ್ದರೆ, ಅದರ ನ್ಯೂನತೆಗಳು ನಮಗೆ ಸಕಾಲದಲ್ಲಿ ತಿಳಿದು, ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು.
ಪೇಂಟ್‌ನಲ್ಲಿ ಚಕ್ಕೆ ಮತ್ತು ಧೂಳು
ಮಳೆಗಾಲದಲ್ಲೂ ನಮಗೆ ಕಾಣದ ವಿರೂಪಗೊಂಡ ಬಣ್ಣಗಳು, ಚಳಿಗಾಲದಲ್ಲಿ ಢಾಳಾಗಿ ಕಾಣುತ್ತವೆ. ಜೊತೆಗೆ ಧೂಳಾಗಿ ಪುಡಿಪುಡಿಯಾಗಿ ಕೆಳಗೂ ಬೀಳಬಹುದು. ಹಪ್ಪಳದಂತೆ ಚಕ್ಕೆಗಳೂ ಏಳಬಹುದು. ಹೀಗಾಗಲು ಮುಖ್ಯ ಕಾರಣ- ಬಣ್ಣದ ಹಿಂದಿನ ಆಧಾರ ಸಡಿಲಗೊಳ್ಳುವುದೇ ಆಗಿದೆ. ಬಣ್ಣಗಳು ಒಂದು ಹಂತದವರೆಗೆ ನೀರು ನಿರೋಧಕ ಗುಣ ಹೊಂದಿದ್ದರೂ, ಅದರ ಹಿಂದೆ ಆಧಾರವಾಗಿರುವ- ಪ್ರೈಮರ್‌ಗಳು ಅದರಲ್ಲೂ ಗೋಡೆಗಳ ನ್ಯೂನತೆಗಳನ್ನು ಸರಿಪಡಿಸುವ ಪಟ್ಟಿ- ಪೇಸ್ಟ್‌ಗಳು ನೀರು ನಿರೋಧಕ ಗುಣ ಹೊಂದಿರುವುದಿಲ್ಲ! ಹಾಗಾಗಿ, ಈ ಬಣ್ಣಗಳ ಮೇಲೆ ನೀರು ಬಿದ್ದರೆ ಏನೂ ಆಗುವುದಿಲ್ಲವಾದರೂ, ಹಿಂಬದಿಗೆ ತೇವಾಂಶ ತಾಗಬಾರದು. ಗೋಡೆ ಅಥವಾ ಸೂರಿನಲ್ಲಿ ಮಳೆಗಾಲದಲ್ಲಿ ನೀರು ಸ್ವಲ್ಪ ಇಳಿದಿದ್ದರೂ, ಆ ಸ್ಥಳಗಳು ನಂತರ ಒಣಗಿದ ಮೇಲೆ ಚಕ್ಕೆ ಏಳುವುದು, ಪುಡಿಯಾಗುವುದನ್ನು ನಾವು ನೋಡಬಹುದು.
ಸನ್ನೆಗಳನ್ನು ನಿರ್ಲಕ್ಷಿಸದಿರಿ
ಬಣ್ಣಗಳು ಕಳೆಗುಂದುವುದು, ಪ್ಯಾಚ್ ಪ್ಯಾಚ್- ತೇಪೆ ಹಾಕಿದಂತೆ ಆಗುವುದು ನೀರು ಹೀರುವಿಕೆಯ ಮೊದಲ ಲಕ್ಷಣ. ಸಾಮಾನ್ಯವಾಗಿ ನೀರು ಹೊರಗಿನಿಂದ, ಅಂದರೆ ಮಳೆಗಾಲದಲ್ಲಿ ಸಣ್ಣಸಣ್ಣ ಬಿರುಕುಗಳಿಂದ ಗಾಳಿಯ ಒತ್ತಡವೂ ಸೇರಿದರೆ, ಸುಲಭವಾಗಿ ಒಳಾಂಗಣವನ್ನು ಸೇರಿಬಿಡುತ್ತದೆ. ಗೋಡೆಗಳಲ್ಲಿ ನೀರು ಇಂಗುವುದು ಕಡಿಮೆಯೇ ಆದರೂ ಸಜ್ಜಾ, ಲಿಂಟಲ್ ಇತ್ಯಾದಿಗಳ ಬಳಿ ನೀರು ಹೀರಿಕೊಂಡು ಒಳಗೆ ಸೇರುವುದು ಸಾಮಾನ್ಯ. ಇನ್ನು ಸೂರಿನ ಮೇಲೆ ಸರಿಯಾಗಿ ನೀರು ನಿರೋಧಕ ಪದರ ಇಲ್ಲದೇ ಇದ್ದರೆ ಅಥವಾ ಇಳಿಜಾರನ್ನು ಸರಿಯಾಗಿ ನೀಡದಿದ್ದರೆ, ಸೂರಿನ ಕೆಳಗೆ ತೇವಾಂಶ ಇಳಿದು, ಬಣ್ಣ ಕೆಡಬಹುದು. ಈ ಸನ್ನೆಗಳನ್ನು ನಾವು ನಿರ್ಲಕ್ಷಿಸಿದರೆ, ಮುಂದೆ ಇದೇ ಸ್ಥಳದಿಂದ ಗೋಡೆಗಳೊಳಗೆ ನೀರಿಳಿದು ಜಿನುಗಲು ಶುರುವಾಗಬಹುದು. ಇಲ್ಲವೇ, ಒಳಗಿಂದ ಒಳಗೇ ನೀರು ಸೇರಿಕೊಂಡು, ಆರ್.ಸಿ.ಸಿ ಯಲ್ಲಿ ಅಡಕಗೊಂಡಿರುವ ಕಬ್ಬಿಣದ ಸರಳುಗಳು ತುಕ್ಕು ಹಿಡಿದು, ಪ್ಲಾಸ್ಟರ್ ಸಡಿಲಗೊಳ್ಳಬಹುದು. ಆದುದರಿಂದ, ನಮಗೆ ಮೊದಲ ಸನ್ನೆ ದೊರತ ಕೂಡಲೆ, ಅದಕ್ಕೆ ಕಾರಣ ಕಂಡುಕೊಂಡು ಪರಿಹಾರ ಮಾಡಿಕೊಳ್ಳಬೇಕು. ಪ್ಲಾಸ್ಟರಿಂಗ್‌ನಲ್ಲಿ, ಅದರಲ್ಲೂ ಹೊಸ ಮನೆಗಳಲ್ಲಿನ ಹೊರಾಂಗಣದಲ್ಲಿ, ಒಂದಷ್ಟು ಹೇರ್‌ಲೈನ್ ಕ್ರಾÂಕ್ಸ್- ಕೂದಲೆಳೆಯಷ್ಟು ದಪ್ಪದ ಬಿರುಕುಗಳು ಬರುವುದು ಸಾಮಾನ್ಯ. ಅವು ಪೇಂಟ್ ಮಾಡಿದ ಮೇಲೆ ಮುಚ್ಚಿ ಹೋಗಬೇಕು. ಹಾಗೆ ಮುಚ್ಚಿಹೋಗದೇ ಇದ್ದರೆ, ಇಲ್ಲವೇ ಪೇಂಟ್ ಪದರದಲ್ಲಿ ಮುಚ್ಚಿಹೋಗದಷ್ಟು ದೊಡ್ಡದಿದ್ದರೆ, ಆಗ ನಾವು ಅನಿವಾರ್ಯವಾಗಿ ಅದಕ್ಕೆಂದೇ ಮಾರುಕಟ್ಟೆಯಲ್ಲಿ ಸಿಗುವ ಪೇಸ್ಟ್‌ಗಳನ್ನು ತಂದು ಮೆತ್ತಿ, ಬಿರುಕುಗಳನ್ನು ಸರಿಪಡಿಸಬೇಕಾಗುತ್ತದೆ.
ಮರಮುಟ್ಟುಗಳು ನೀರು ಹೀರಿದಾಗ
ಕೆಲವೊಮ್ಮೆ ವಿನಾಕಾರಣ ಬಾಗಿಲು ತೆರೆಯಲು ತೊಂದರೆಯಾಗುವುದು, ಕಿಟಕಿ ಬಾಗಿಲುಗಳು ಸರಿಯಾಗಿ ಮುಚ್ಚದೆ, ಚಿಲಕ ಹಾಕಲು ಆಗದಿರುವುದು ಇತ್ಯಾದಿ ತೊಂದರೆಗಳು ಬರಬಹುದು. ಇದಕ್ಕೂ ಕೂಡ ನೀರು ಹೀರಿಕೊಂಡಿರುವುದೇ ಕಾರಣವಾಗಿರಬಹುದು. ಕೆಲವೊಮ್ಮೆ ನೀರು ಗೋಡೆಗಳ ಮೂಲಕ ಇಳಿದರೂ ಪ್ಲಾಸ್ಟರಿಂಗ್, ನೀರು ನಿರೋಧಕಗಳಿಂದ ಗಟ್ಟಿಗೊಳಿಸಿದ್ದರೆ, ಬಣ್ಣಗಳೂ ನೀರು ನಿರೋಧಕ ಗುಣ ಹೊಂದಿದ್ದರೆ, ಈ ಕಡೆಯಿಂದ ಹೊರಬರಲಾರದೆ, ಮರಮುಟ್ಟುಗಳನ್ನು ತೇವಗೊಳಿಸಬಹುದು. ಎಲ್ಲಾ ಮರಗಳು, ಟೀಕ್- ತೇಗ ಸಹಿತ ನೀರು ಕುಡಿದರೆ, ಸ್ವಲ್ಪವಾದರೂ ಹಿಗ್ಗಿ, ಬಿಗಿಗೊಳ್ಳುತ್ತವೆ. ಆಗ, ನಮಗೆ ಬಾಗಿಲು ಕಿಟಕಿಗಳನ್ನು ತೆರೆದು ಮುಚ್ಚಲು ಕಷ್ಟ ಆಗುತ್ತದೆ. ಇಂಥ ತೊಂದರೆ ಬಂದಾಗ ನಾವು ಸುಮ್ಮನೆ ಬಡಗಿಗಳನ್ನು ಕರೆದು ತೋಪx- ಅಂದರೆ ಒಂದು ಪದರ ಮರವನ್ನು ತೆಗೆದು ಬಾಗಿಲನ್ನು ಸಡಿಲಗೊಳಸುವ ಮೊದಲು, ಹಾಗಾಗಲು ಕಾರಣವನ್ನು ಪತ್ತೆ ಹಚ್ಚಿ, ಪರಿಹಾರ ಕಂಡುಕೊಳ್ಳಬೇಕು.
ಕೆಳಕ್ಕಿಳಿಯುವ ಕಟ್ಟಡ
ಕೆಲವೊಮ್ಮೆ ಒಂದೆರಡು ಬಾರಿ ಬಿರುಕುಗಳನ್ನು ಪೇಸ್ಟ್ ಹಾಕಿ ಮುಚ್ಚಿದರೂ ಮತ್ತೆಮತ್ತೆ ಬಿರುಕುಗಳು ಮೂಡುತ್ತವೆ. ಹೀಗಾಗಲು ಮುಖ್ಯ ಕಾರಣ, ಡಿಫರೆನ್ಷಿಯಲ್ ಸೆಟಲ್‌ಮೆಂಟ್- ಅಂದರೆ, ಒಂದೇ ಸಮನಾಗಿರದ ಕುಸಿತ ಅಥವಾ ಕೂರದಿರುವಿಕೆ. ಎಲ್ಲ ಕಟ್ಟಡಗಳೂ ಭಾರ ಹೊತ್ತು ಒಂದಷ್ಟು ಮಿಲಿಮೀಟರ್‌ನಷ್ಟು, ಅಂದರೆ ನಾಲ್ಕಾರು ಕೂದಲೆಳೆಯಷ್ಟು ಅಂತರ ಕೆಳಗೆ ಇಳಿಯುತ್ತವೆ. ಆದರೆ ಈ ಮಾದರಿಯ ಕುಸಿತ ಒಂದೇ ರೀತಿಯಲ್ಲಿ ಇರಬೇಕಾಗುತ್ತದೆ. ಒಂದು ಭಾಗ ಹೆಚ್ಚು ಕುಸಿದರೆ, ಮತ್ತೂಂದು ಕಡಿಮೆ ಇಳಿದರೆ, ಮಧ್ಯದಲ್ಲೊಂದು ಬಿರುಕು ಬೀಳುವುದು ಖಚಿತ. ಹೀಗಾಗುವುದನ್ನು ತಪ್ಪಿಸಲು ನಾವು ಮನೆಯ ವಿನ್ಯಾಸ ಮಾಡುವಾಗ ಆದಷ್ಟೂ ಒಂದೇ ರೀತಿಯಲ್ಲಿ ಭಾರ ಬರುವ ಹಾಗೆ ಮಾಡಬೇಕು. ಒಂದು ಕಡೆ ಹೆಚ್ಚು ಭಾರ, ಮತ್ತೂಂದು ಕಡೆ ಭಾರ ಕಡಿಮೆಯಾದರೆ, ಜಾಸ್ತಿ ಬಿರುಕುಗಳು ಬೀಳುತ್ತವೆ. ಈ ರೀತಿಯ ತೊಂದರೆಗಳನ್ನು ತಪ್ಪಿಸಲು ನುರಿತ ಇಂಜಿನಿಯರ್‌ಗಳ ಬಳಿಯೇ ವಿನ್ಯಾಸಗಳನ್ನು ಮಾಡಿಸುವುದು ಉತ್ತಮ.
ಎಲ್ಲೆಲ್ಲೋ ಪ್ರತಕ್ಷವಾಗುವ ತೇವ
ಮಳೆಯೇ ಇಲ್ಲದ ಕಾಲದಲ್ಲಿಯೂ ಎಲ್ಲಾದರೂ ತೇವಾಂಶ ಕಂಡುಬಂದರೆ, ಅದು ಆತಂಕದ ಸಂಗತಿಯೇ ಸರಿ! ನೀರು ಎಲ್ಲಿಂದ ನುಸುಳಿತು ಎಂಬುದು ತಲೆನೋವಾಗಬಹುದು. ಮಹಡಿ ಮನೆಯಾಗಿದ್ದು, ಮೊದಲ ಮಹಡಿಯಲ್ಲಿ ಟಾಯ್ಲೆಟ್ ಇದ್ದರೆ, ಅಲ್ಲಿಂದ ನೀರು ಇಂಗಿರುವ ಎಲ್ಲ ಸಾಧ್ಯತೆಗಳಿರುತ್ತವೆ. ನೀರು ಸಾಮಾನ್ಯವಾಗಿ ಅದು ಎಲ್ಲಿಂದ ಸೋರಿರುತ್ತದೋ ಅದರ ಹತ್ತಿರದಲ್ಲೇ ಹೊರಬರಲು ಪ್ರಯತ್ನಿಸುತ್ತದಾದರೂ, ಕೆಲವೊಮ್ಮೆ ನೆಲಹಾಸು- ಟೈಲ್ಸ್ ಕೆಳಗೆ ಹರಿದುಹೋಗಿ, ಹತ್ತಾರು ಅಡಿಗಳ ದೂರದ ಮೆಟ್ಟಿಲು, ಇಲ್ಲವೇ ಲಿವಿಂಗ್ ರೂಮಿನಲ್ಲಿ ತೇವವಾಗಿ ಪ್ರತ್ಯಕ್ಷವಾಗಬಹುದು! ಮಳೆಗಾಲದಲ್ಲಿ ಬರುವ ನೀರಿನ ತೇವಾಂಶ ನಂತರ ನಿಲ್ಲುತ್ತದೆ, ಆದರೆ ಟಾಯ್ಲೆಟ್‌ಗಳಲ್ಲಿ ನೀರು ಸೋರಿದರೆ ಬರುವ ತೇವಾಂಶ ಇತರೆ ಕಾಲದಲ್ಲೂ ಪ್ರತ್ಯಕ್ಷವಾಗುತ್ತದೆ. ವರ್ಷವಿಡೀ ತೇವಾಂಶ ಇದ್ದರೆ, ನೆಲಹಾಸಿನಲ್ಲೂ ಪಾಚಿ ಕಟ್ಟಿಕೊಂಡು ಜಾರುವಂತೆ ಆಗಬಹುದು. ಕೆಲವೊಮ್ಮೆ ಟೈಲ್ಸ್‌ನ ಹಿಂದೆ ನೀರು ಸೋರುತ್ತಿದ್ದರೆ, ಅದು ನಮಗೆ ಸುಲಭದಲ್ಲಿ ಗೊತ್ತಾಗುವುದಿಲ್ಲ, ಆದರೆ, ಅದರ ಹಿಂದಿನ ಗೋಡೆಗಳಲ್ಲಿ ಬಣ್ಣಗೆಡುವುದು ಮೊದಲ ಮುನ್ಸೂಚನೆ ಆಗಿರುತ್ತದೆ.
– ಆರ್ಕಿಟೆಕ್ಟ್ ಜಯರಾಮ್ ಕೆ.
ಹೆಚ್ಚಿನ ಮಾಹಿತಿಗೆ ಫೋನ್ 98441 32826
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.