ಬೆಣ್ಣೆ ಜೊತೆ ತಟ್ಟೆ ಇಡ್ಲಿ, ದೋಸೆ ತಿನ್ಬೇಕಾ? ಚನ್ನಪಟ್ಟಣಕ್ಕೆ ಬನ್ನಿ…
Team Udayavani, Nov 4, 2019, 4:06 AM IST
ಬೆಂಗಳೂರು – ಮೈಸೂರು ಹೆದ್ದಾರಿಯ ಆಗಾಗ ಸಂಚರಿಸುವ ಪ್ರಯಾಣಿಕರಿಗೆ, ತಟ್ಟೆ ಇಡ್ಲಿ ಅಂದಾಕ್ಷಣ ಬಿಡದಿ ನೆನಪಾಗುತ್ತದೆ. ಅದೇರೀತಿ, ಗೊಂಬೆ ನಗರಿ ಚನ್ನಪಟ್ಟಣದಲ್ಲಿರುವ ಜಗದೀಶ್ ಹೋಟೆಲ್ ಕೂಡ ತಟ್ಟೆ ಇಡ್ಲಿ, ಗರಿಗರಿಯಾದ ಮಿನಿ ಮಸಾಲೆ ದೋಸೆಗೆ ಹೆಸರುವಾಸಿ. ಚನ್ನಪಟ್ಟಣ ನಗರದ ಎಂ.ಜಿ.ರಸ್ತೆಯಲ್ಲಿ ಈ ಹೋಟೆಲ್ ಇದೆ. 34 ವರ್ಷಗಳ ಹಿಂದೆ, ಜಗದೀಶ್ ಅವರು ಈ ಹೋಟೆಲ್ ಪ್ರಾರಂಭಿಸಿದ್ರು.
ಮೊದಲು ಚನ್ನಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪದ ಇದ್ದ ನಾಗಣ್ಣನವರ ಹೋಟೆಲ್‌ನಲ್ಲಿ 15 ವರ್ಷ ಕೆಲಸ ಮಾಡಿಕೊಂಡಿದ್ದ ಜಗದೀಶ್ ಓದಿದ್ದು ಮೂರನೇ ತರಗತಿ. 1985ರಲ್ಲಿ ಡೂಮ್ ಲೈಟ್ ಸರ್ಕಲ್‌ನಲ್ಲಿ ಸ್ವಂತವಾಗಿ ಹೋಟೆಲ್ ಪ್ರಾರಂಭಿಸಿದ ಜಗದೀಶ್, ನಂತರ ಎಂ.ಜಿ.ರಸ್ತೆಯಲ್ಲಿ ಸ್ವಂತ ಜಾಗದಲ್ಲಿ ಹೆಂಚಿನ ಹೊದಿಕೆ ಇದ್ದ ಕಟ್ಟಡ ಕಟ್ಟಿ ಅಲ್ಲೇ ಸೌದೆ ಒಲೆಯಲ್ಲಿ ಇಡ್ಲಿ ಬೇಯಿಸುತ್ತಿದ್ದರು. ಈಗ ಹೊಸ ಕಟ್ಟಡ ಆದ ಮೇಲೆ ಮೂರು ವರ್ಷದಿಂದ ಅಡುಗೆ ಅನಿಲ ಬಳಸುತ್ತಿದ್ದಾರೆ. ಸದ್ಯ ಪುತ್ರರಾದ ಶಿವರುದ್ರಯ್ಯ ಮತ್ತು ರಾಜೇಶ್ ಹೋಟೆಲ್ ಮುನ್ನಡೆಸುತ್ತಿದ್ದಾರೆ.
ಮಾಡೋದು ಎರಡೇ ತಿಂಡಿ: ಕೆಲಸಗಾರರ ಸಮಸ್ಯೆ ಇರುವುದರಿಂದ ತಟ್ಟೆ ಇಡ್ಲಿ, ದೋಸೆ ಮಾತ್ರ ಮಾಡಲಾಗುತ್ತಿದೆ. ಇದು ಜಗದೀಶ್ ಹೋಟೆಲ್‌ನ ವಿಶೇಷ ತಿಂಡಿ ಕೂಡ. ಇಲ್ಲಿ ಎಲ್ಲಾ ತಿಂಡಿಯ ಜೊತೆಗೆ ಬೆಣ್ಣೆ ಕೊಡಲಾಗುತ್ತೆ. ದೋಸೆಯಲ್ಲಿ ನಾಲ್ಕೈದು ಬಗೆ ಮಾಡಲಾಗುತ್ತದೆ. ಇಲ್ಲಿ ಸಿಗುವ ಕೆಂಪು ಚಟ್ನಿ ಮತ್ತು ಬೆಣ್ಣೆಯನ್ನು ನೆಚ್ಕೊಂಡು ತಿಂದ್ರೆ ರುಚಿ ಇಮ್ಮಡಿಯಾಗುತ್ತದೆ. ತಟ್ಟೆ ಇಡ್ಲಿ ಮೃದುವಾಗಿ ರುಚಿಯಾಗಿರುತ್ತೆ.
ಪ್ಲಾಸ್ಟಿಕ್ ಬಳಸಲ್ಲ: ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ಕೆಲವರು ಪ್ಲಾಸ್ಟಿಕ್ ಹಾಳೆ ಬಳಸುವುದುಂಟು. ಕೆಲವರು ಟೆಫ್ಲಾನ್ ತಟ್ಟೆಗಳಲ್ಲಿ ಬೇಯಿಸುತ್ತಾರೆ. ಆದರೆ, ಜಗದೀಶ್ ಹೋಟೆಲ್‌ನಲ್ಲಿ ಅಡುಗೆಗೆ ಯಾವುದೇ ಪ್ಲಾಸ್ಟಿಕ್ ಬಳಕೆ ಮಾಡಲ್ಲ. ಬಟ್ಟೆಯ ಮೇಲೆ ಸಂಪಳ ಸುರಿದು ಇಡ್ಲಿ ಬೇಯಿಸುವುದರಿಂದ, ಮನೆಯಲ್ಲಿ ಮಾಡಿದ ಹಾಗೆ ಇರುತ್ತದೆ.
ಸೆಟ್‌ದೋಸೆ, ಮಿನಿ ಮಸಾಲೆ ಇದ್ದಂತೆ: ಸಾಮಾನ್ಯವಾಗಿ ಖಾಲಿ ದೋಸೆಯ ಮಿನಿ ರೂಪ ಸೆಟ್ ದೋಸೆ. ಆದ್ರೆ, ಜಗದೀಶ್ ಹೋಟೆಲ್‌ನಲ್ಲಿ ಸೆಟ್ ದೋಸೆ ಮಿನಿ ಮಸಾಲೆ ದೋಸೆಯಂತೆ. ಅಂಗೈ ಅಗಲದ ಗರಿ ಗರಿ ದೋಸೆಯ ಮಧ್ಯೆ ಆಲೂಗಡ್ಡೆ ಪಲ್ಯ ಹಾಕಿಕೊಡ್ತಾರೆ. ಬೆಣ್ಣೆ ಬೇಕಂದ್ರೆ ಅದಕ್ಕೆ ಪ್ರತ್ಯೇಕ ದರ ತೆಗೆದುಕೊಳ್ಳುತ್ತಾರೆ. ಬೆಣ್ಣೆ ಸೆಟ್ ದೋಸೆಗೆ ಆರ್ಡರ್ ಮಾಡಿದರೆ, ಬೆಣ್ಣೆ ಹಾಕಿ ದೋಸೆ ಬೇಯಿಸಿಕೊಡ್ತಾರೆ.
ಬೆಲೆ ಎಷ್ಟು?: ಸೆಟ್‌ದೋಸೆ 40 ರೂ., ತಟ್ಟೆ ಇಡ್ಲಿ 15 ರೂ.(ಸಿಂಗಲ್), ಮಸಾಲೆ ದೋಸೆ 30 ರೂ.(ಬೆಣ್ಣೆ ಹಾಕಿಸಿಕೊಂಡ್ರೆ 10 ರೂ. ಪ್ರತ್ಯೇಕ), ಬೆಣ್ಣೆ ಖಾಲಿ ದೋಸೆ 40 ರೂ. (ಪಲ್ಯಕ್ಕೆ 10 ರೂ. ಪ್ರತ್ಯೇಕ), ಖಾಲಿ ದೋಸೆ 30 ರೂ.. ಬೆಳಗ್ಗೆ ತಟ್ಟೆ ಇಡ್ಲಿ, ಸಂಜೆ ದೋಸೆ ಮಾತ್ರ ಸಿಗುತ್ತದೆ.
ಹೋಟೆಲ್ ಸಮಯ: ಬೆಳಗ್ಗೆ 7 ರಿಂದ 10.30, ಸಂಜೆ 3 ರಿಂದ 6.30ವರೆಗೆ. ಭಾನುವಾರ ಬೆಳಗ್ಗೆ 7 ರಿಂದ 10.30ವರೆಗೆ ಮಾತ್ರ. ವಾರದ ರಜೆ ಇಲ್ಲ.
ಹೋಟೆಲ್ ವಿಳಾಸ: ಎಂ.ಜಿ.ರಸ್ತೆ, ವಾಸವಿ ದೇವಾಲಯದ ಸಮೀಪ, ಚನ್ನಪಟ್ಟಣ ನಗರ. ಬೆಂಗಳೂರು- ಮೈಸೂರು ರಸ್ತೆಯಿಂದ ಅರ್ಧ ಕಿ.ಮೀ. ಬೆಂಗಳೂರಿಂದ ಮೈಸೂರು ಕಡೆಗೆ ಹೋಗಬೇಕಾದ್ರೆ ಶೇರು ಹೋಟೆಲ್ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿದ್ರೆ ಪೆಟ್ಟಾ ಸ್ಕೂಲ್(ಸರ್ಕಾರಿ ಶಾಲೆ) ರಸ್ತೆ ಸಿಗುತ್ತೆ. ನೇರ ಹೋದ್ರೆ ಐದು ದೀಪದ ವೃತ್ತ ಇದೆ. ಅಲ್ಲಿ ಎಡಕ್ಕೆ ತಿರುಗಿದ್ರೆ ಎಂ.ಜಿ.ರಸ್ತೆ ಇದ್ದು, ಅಲ್ಲಿ ಜಗದೀಶ್ ಹೋಟೆಲ್ ಅಂದ್ರೆ ತೋರಿಸುತ್ತಾರೆ. ಮೈಸೂರಿಂದ ಬೆಂಗಳೂರಿಗೆ ಬರುವವರು, ಪೊಲೀಸ್ ಠಾಣೆ ಪಕ್ಕದ ಶಿವಾನಂದ ಟಾಕೀಸ್ ರಸ್ತೆಯಲ್ಲಿ ನೇರ ಹೋದ್ರೆ ಜಗದೀಶ್ ಹೋಟೆಲ್ ಸಿಗುತ್ತೆ.
* ಬಿ. ವಿ. ಸೂರ್ಯಪ್ರಕಾಶ್/ಭೋಗೇಶ ಆರ್. ಮೇಲುಕುಂಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.