ಸಾಲ ಮನ್ನಾ ಅಂದರೂ ಸಾವುಗಳು ನಿಂತಿಲ್ಲ
Team Udayavani, Oct 1, 2018, 12:05 PM IST
ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರವು ಸಾಲಮನ್ನಾ ಎಂದು ಘೋಷಿಸಿ ಆಗಲೇ ತಿಂಗಳು ಕಳೆದಿವೆ. ಆದರೂ ರೈತರ ಆತ್ಮಹತ್ಯೆ ನಿಂತಿಲ್ಲ. ಸಾಲದ ಹೊರೆಯಿಂದ ಹತಾಶರಾದ ಒಂದೇ ಕುಟುಂಬದ ನಾಲ್ವರು ಕಳೆದ ವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾಂಡವಪುರ ತಾಲೂಕಿನ ಸುಂಕಾತಣ್ಣೂರು ಗ್ರಾಮದ ನಂದೀಶ್ (37), ಪತ್ನಿ ಕೋಮಲಾ (30), ಮಗಳು ಚಂದನಾ (12) ಮತ್ತು ಮಗ ಮನೋಜ (10) ಮೃತರು.
ಗುತ್ತಿಗೆಗೆ ಪಡೆದಿದ್ದ ಎರಡು ಎಕರೆ ಸಹಿತ ಸುಮಾರು ಮೂರು ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದ ನಂದೀಶ್ ಪಡೆದಿದ್ದ ಸಾಲ ರೂ.10 ಲಕ್ಷ ದಾಟಿತ್ತು. ಸಾಲದಿಂದ ಕಂಗಾಲಾಗಿದ್ದ ನಂದೀಶ್, ಜನತಾ ದರ್ಶನದಲ್ಲಿ ಎರಡು ಸಲ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಹಾಯಕ್ಕಾಗಿ ಮನವಿ ಮಾಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದ ಪತ್ರದಲ್ಲಿ, ತಮ್ಮೆಲ್ಲರ ಆತ್ಮಹತ್ಯೆಗೆ ವ್ಯವಸಾಯವೇ ಕಾರಣ ಎಂದು ನಂದೀಶ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೃಷಿಸಾಲಗಳ ಒಟ್ಟು ಮೊತ್ತ ರೂ.1.4 ಲಕ್ಷ ಕೋಟಿ. ಇದರಲ್ಲಿ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲ ಮುಖ್ಯಮಂತ್ರಿಗಳನ್ನು ರೂ.50,000 ಕೋಟಿ. ಕರ್ನಾಟಕದ 75 ಲಕ್ಷ ರೈತರಲ್ಲಿ, 50 ಲಕ್ಷ$ ರೈತರಿಗೆ ಮಾತ್ರ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಲಭ್ಯ. ಇನ್ನುಳಿದ ರೈತರು ಖಾಸಗಿ ಲೇವಾದೇವಿದಾರರು ಮತ್ತು ಇತರ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ.
ಹೊಸ ಸರಕಾರದ ಬಜೆಟ್ ಘೋಷಣೆಯಾಗಿ ಎರಡು ತಿಂಗಳು ದಾಟಿದ್ದರೂ, ಸಾಲ ಮನ್ನಾಕ್ಕಾಗಿ ಹಣ ಹೊಂದಿಸಲು ಸರಕಾರ ಹೆಣಗುತ್ತಿದೆ. ಸಾಲ ಮನ್ನಾಕ್ಕೆ ಅವಶ್ಯವಾದ ಹಣ 48,000 ಕೋಟಿ ಎಂದು ಅಂದಾಜಿಸಲಾಗಿದೆ. ಈ ಮೊತ್ತ ಹಳೆಯ ಬಾಕಿ ಸಾಲಗಳು, ಈಗಿನ ಸಾಲಗಳು ಮತ್ತು ಸಾಲ ಮರುಪಾವತಿಸಿದ ರೈತರಿಗೆ ಕೊಡಲಿರುವ ತಲಾ 25,000ರೂ. ಪರಿಹಾರವನ್ನು ಒಳಗೊಂಡಿದೆ.
ಆದರೆ, ಈ ವರ್ಷದ (2018-19) ಬಜೆಟ್‌ನಲ್ಲಿ ಸಾಲ ಮನ್ನಾಕ್ಕಾಗಿ ಕೇವಲ ರೂ.6,500 ಕೋಟಿ ಒದಗಿಸಲಾಗಿದೆ. ಸಾಲ ಮನ್ನಾದ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಇದರಿಂದಾಗಿ ನಂದೀಶರಂತೆ ಕೃಷಿ ಜಮೀನನ್ನು ಗುತ್ತಿಗೆಗೆ ಪಡೆದಿರುವ ರೈತರಿಗೆ ಸಮಸ್ಯೆಯಾಗಲಿದೆ. ಕರ್ನಾಟಕ ಸರಕಾರವು ಬ್ಯಾಂಕುಗಳಿಗೆ ಸೂಚಿಸಿರುವ ಸಾಲ ಮನ್ನಾ ಪ್ರಕ್ರಿಯೆ ಹೀಗಿದೆ: ಕೃಷಿಸಾಲಗಳ ಬಡ್ಡಿ ಒಂದೇ ಕಂತಿನಲ್ಲಿ ಮರುಪಾವತಿ ಮತ್ತು ಅಸಲು ನಾಲ್ಕು ವಾರ್ಷಿಕ ಕಂತುಗಳಲ್ಲಿ ಮರುಪಾವತಿ. ಆದರೆ, ಹಲವು ರಾಷ್ಟ್ರೀಕೃತ ಬ್ಯಾಂಕುಗಳು ಬಡ್ಡಿ ಮತ್ತು ಅಸಲನ್ನು ಒಂದೇ ಕಂತಿನಲ್ಲಿ ಸರಕಾರ ಮರುಪಾವತಿಸಬೇಕೆಂದು ಆಗ್ರಹಿಸುತ್ತಿವೆ.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್- ಸಾಲ ಮನ್ನಾ ಕುರಿತು ಎದ್ದಿರುವ ಟೀಕೆಗಳಿಗೆ ನೀಡುವ ಪ್ರತಿಕ್ರಿಯೆ ಗಮನಾರ್ಹ: ಕರ್ನಾಟಕದಲ್ಲಿ ಏಳನೇ ವೇತನ ಆಯೋಗದ ಶಿಫಾರಸಿನಂತೆ ಪ್ರತಿ ವರ್ಷ ಶೇ. 5ರಿಂದ 7ರಷ್ಟು ವೇತನ ಹೆಚ್ಚಳ ಮಾಡುವುದರಿಂದ ಸರಕಾರಕ್ಕೆ ಬೀಳುವ ಆರ್ಥಿಕ ಹೊರೆ ವರ್ಷಕ್ಕೆ 17,000 ಕೋಟಿ ರೂಪಾಯಿಗಳು. ಅದೇ ರೀತಿಯಲ್ಲಿ ಕೇಂದ್ರ ಸರಕಾರಕ್ಕೆ ತಗಲುವ ವೆಚ್ಚ, ವರ್ಷಕ್ಕೆ ಎರಡು ಲಕ್ಷ$ ಕೋಟಿ ರೂಪಾಯಿಗಳು. ಇದನ್ನು ಯಾರೂ ಆಕ್ಷೇಪಿಸುವುದಿಲ್ಲ.
ಅದೇನಿದ್ದರೂ, ಕೃಷಿರಂಗದ ಬಿಕ್ಕಟ್ಟು ಮುಂದುವರಿದಿದೆ. ರೈತರ ಆದಾಯವನ್ನು 2022ರ ವೇಳೆಗೆ ಇಮ್ಮಡಿ ಮಾಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡುತ್ತಲೇ ಇದೆ. ಈ ನಿಟ್ಟಿನಲ್ಲಿ ಜುಲೈ,4 2018ರಂದು ಕೇಂದ್ರ ಸರಕಾರವು 14 ಬೆಳೆಗಳ ಫಸಲಿನ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಿದೆ (ಈ ವರುಷ ಮುಂಗಾರು ಹಂಗಾಮಿನಿಂದ).
ಡಾ.ಎಂ.ಎಸ್. ಸ್ವಾಮಿನಾಥನ್ ಮುಖ್ಯಸ್ಥರಾಗಿದ್ದ ರಾಷ್ಟ್ರೀಯ ಕೃಷಿಕರ ಆಯೋಗ, 2006ರಲ್ಲೇ ತನ್ನ ವರದಿ ಸಲ್ಲಿಸಿದೆ. ಅದರ ಮುಖ್ಯ ಶಿಫಾರಸು: ಕನಿಷ್ಠ ಬೆಂಬಲ ಬೆಲೆಗಳನ್ನು ಪ್ರತಿಯೊಂದು ಬೆಳೆಯ ಉತ್ಪಾದನಾ ವೆಚ್ಚದ ಶೇ. 150 ಎಂದು ನಿಗದಿ ಪಡಿಸಬೇಕು. ಇದನ್ನು ಹಾಗೂ ಇತರ ಹಲವು ಬೇಡಿಕೆಗಳನ್ನು ಮುಂದಿಟ್ಟು, ಸುಮಾರು 40,000 ರೈತರು, ಕೃಷಿಕಾರ್ಮಿಕರು ಹಾಗೂ ಆದಿವಾಸಿಗಳು ಮಾರ್ಚ್ 2018ರಲ್ಲಿ ನಾಸಿಕದಿಂದ ಬೃಹತ್ ಜಾಥಾ ಹೊರಟರು. ಆರು ದಿನಗಳಲ್ಲಿ 180 ಕಿ.ಮೀ ನಡೆದು ಬಂದು ಮುಂಬೈಗೆ ಮುತ್ತಿಗೆ ಹಾಕಿದರು. ರೈತರ ಆಕ್ರೋಶ ಮುಗಿಲು ಮುಟ್ಟಿದೆ ಎಂಬುದಕ್ಕೆ ಇದು ಇತ್ತೀಚೆಗಿನ ಪುರಾವೆ.
ಇಂಥ ಸನ್ನಿವೇಶದಲ್ಲಿ, ರಾಜಕೀಯ ಪಕ್ಷಗಳು ಕೃಷಿ ಸಾಲ ಮನ್ನಾವನ್ನು ರಾಜಕೀಯ ಮೇಲಾಟಕ್ಕಾಗಿ ಬಳಸುತ್ತಿವೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಸರಕಾರದ ಒಟ್ಟು ಖರೀದಿ, ರೈತರ ಒಟ್ಟು ಫಸಲು ಉತ್ಪಾದನೆಯ ಕೇವಲ ಶೇ. 6ರಷ್ಟು. ಹಾಗಾಗಿ, ಕನಿಷ್ಠ ಬೆಂಬಲ ಬೆಲೆಯ ಹೆಚ್ಚಳದಿಂದ ಬಹುಪಾಲು ರೈತರಿಗೆ ಪ್ರಯೋಜನವಾಗುತ್ತಿಲ್ಲ ಎಂಬುದು ವಾಸ್ತವ.
ಅಂತಹ ರೈತರರಲ್ಲೂಬ್ಬರು 24 ಜೂನ್ 2018ರಂದು ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಜಿಲ್ಲೆಯ ಲಿಂಗನಮಠ ಗ್ರಾಮದ ಶಂಕರ ಬಾಳಪ್ಪ ಮಟೋಲಿ (75 ವರ್ಷ ವಯಸ್ಸು). ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೋರಿ ಪ್ರಧಾನ ಮಂತ್ರಿಯವರಿಗೆಗೇ ಈತ ಪತ್ರ ಬರೆದಿದ್ದರು. ಎರಡು ವಾರಗಳ ನಂತರ ಆತ್ಮಹತ್ಯ ಮಾಡಿಕೊಂಡರು. ಅವರ ಸಾಲ ರೂ.7.5 ಲಕ್ಷಕ್ಕೆ ಬೆಳೆದಿತ್ತು. ಏಕೆಂದರೆ, ಅವರಿಂದ ಕಬ್ಬು ಖರೀದಿಸಿದ ಸಕ್ಕರೆ ಕಾರ್ಖಾನೆ ಅವರಿಗೆ ಹಣ ಪಾವತಿಸಲಿಲ್ಲ. ನಮ್ಮ ದೇಶದ ಎಲ್ಲ ಸಕ್ಕರೆ ಕಾರ್ಖಾನೆಗಳೂ ರೈತರಿಗೆ ರೂ.20,000 ಕೋಟಿ ಹಣ ಪಾವತಿ ಬಾಕಿ ಮಾಡಿದ್ದರೆ, ಕರ್ನಾಟಕದಲ್ಲಿ ಈ ಮೊತ್ತ 1,045 ಕೋಟಿ.
ರೈತರ ಸಂಕಟ ನಿವಾರಣೆಗೆ ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಯಿಂದ ಸಹಾಯವಾಗುತ್ತಿದೆ ಎಂಬುದೇನೋ ನಿಜ. ಉದಾಹರಣೆಗೆ- 2016-17ರಲ್ಲಿ ಬೀದರ್ ಜಿಲ್ಲೆಯ ರೈತರು ಪಡೆದ ಫಸಲು ವಿಮಾ ಪರಿಹಾರ ರೂ.149 ಕೋಟಿ. ಇದರಿಂದ 1.21 ಲಕ್ಷ ರೈತರಿಗೆ ಸಹಾಯವಾಗಿದೆ. ಅವರು ಪಾವತಿಸಿದ ಪ್ರೀಮಿಯಮ 13.5 ಕೋಟಿ ರೂಪಾಯಿ ಮತ್ತು ಪಡೆದಿರುವ ಪರಿಹಾರ 149 ಕೋಟಿ ರೂಪಾಯಿ ಎಂಬ ಮಾಹಿತಿ ನೀಡುತ್ತಾರೆ ಅಲ್ಲಿನ ಲೋಕಸಭಾ ಸದಸ್ಯ ಭಗವಂತ್ ಖುಬಾ. ಅದೇನಿದ್ದರೂ, ಇತರ ಜಿಲ್ಲೆಗಳಲ್ಲಿ ಫಸಲು ವಿಮಾ ಕಂಪೆನಿಗಳು ಸಾವಿರಾರು ಕ್ಲೈಮುಗಳನ್ನು ಕ್ಷುಲ್ಲಕ ಕಾರಣಗಳಿಗಾಗಿ ತಡೆ ಹಿಡಿದಿವೆ ಎಂಬುದೂ ನಿಜ.
ಇವೆಲ್ಲವನ್ನೂ ಗಮನಿಸಿದಾಗ, ರೈತರ ಸಮಸ್ಯೆಗಳ ನಿವಾರಣೆಗೆ ಸಾಲ ಮನ್ನಾ ಎಂಬುದು ತಾತ್ಕಾಲಿಕ ಕ್ರಮ ಎಂಬುದು ಸ್ಪಷ್ಟವಾಗುತ್ತದೆ. ಬೆಂಗಳೂರು-ಮೈಸೂರು ಹೆದ್ಧಾರಿ ಪಕ್ಕದಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ 23 ಸಾವಯವ ರೈತರ ಮುಂದಾಳು ಶಿವರಾಮೇಗೌಡರಿಗೆ ಸಾಲ ಮನ್ನಾ ಬಗ್ಗೆ ಸಮಾಧಾನವಿಲ್ಲ. ಇದರ ಬದಲಾಗಿ, ಸರಕಾರ ದೀರ್ಘಾವಧಿ ಕೃಷಿ ಸಾಲಗಳು, ಉತ್ತಮ ಬೆಂಬಲ ಬೆಲೆ ಮತ್ತು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಬೇಕು ಎನ್ನುತ್ತಾರೆ. ಮೈಸೂರಿನ ರೈತಮಿತ್ರ 1,200 ರೈತರ ಸಂಘಟನೆ. ವಾರ್ಷಿಕ ರೂ.6.6 ಕೋಟಿ ವಹಿವಾಟು ನಡೆಸುವ ಈ ಸಂಘಟನೆಯ ಸಹ ಸ್ಥಾಪಕ ಕುರುಬೂರು ಶಾಂತಕುಮಾರ್ ಅವರ ಅಭಿಪ್ರಾಯದಲ್ಲಿ, ತಮ್ಮ ಸಂಕಟಗಳಿಂದ ರೈತರು ಪಾರಾಗಬೇಕಾದರೆ ಸುಸ್ಥಿರ ಕೃಷಿಯೊಂದೇ ದಾರಿಯಂತೆ. ಇದು ಸಾಲ ಮನ್ನಾದ ಗೊಂದಲದಲ್ಲಿ ಮುಳುಗಿರುವ ರೈತರಿಗೊಂದು ಎಚ್ಚರಿಕೆ, ಅಲ್ಲವೇ?
ಅಡ್ಡೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.