ಕೃಷಿ ಖುಷಿಯಾಗಿ…
ಕಂಪ್ಯೂಟರ್ ಬಿಟ್ಟು ನೇಗಿಲು ಹಿಡಿದರು
Team Udayavani, Sep 9, 2019, 5:14 AM IST
ವರ್ಷಕ್ಕೆ ರೂ. 6.5 ಲಕ್ಷ ವೇತನ ಪಡೆಯುತ್ತಿದ್ದ ಅನೂಪ್ ಪಾಟೀಲ್, ಸಾಫ್ಟ್ವೇರ್ ಉದ್ಯೋಗ ತೊರೆದು ಕೃಷಿ ಮಾಡಲು ನಿಂತರು. “ಕೃಷಿ ಕೆಲಸವೆಲ್ಲಾ ನಿನ್ನ ಕೈಲಿ ಆಗದು, ತಿಂಗಳ ಕೊನೆಯಲ್ಲಿ ಪಗಾರ ಎಣಿಸುತ್ತಾ ಕೂರುವುದಕ್ಕೆ ಬದಲಾಗಿ ಸುಖಾಸುಮ್ಮನೆ ಇಲ್ಲೇಕೆ ಬಂದೆ’ ಎಂದು ಅವರನ್ನು ಹಂಗಿಸಿದ್ದ ಜನ ಈಗ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಐಟಿ ಉದ್ಯೋಗ ನೀಡುತ್ತಿದ್ದುದಕ್ಕಿಂತ ಮೂರು ಪಟ್ಟು ಹೆಚ್ಚು ಆದಾಯವನ್ನು ಅನೂಪ್ ಕೃಷಿಯಲ್ಲಿ ಗಳಿಸುತ್ತಿದ್ದಾರೆ. ಈಗ ಅವರ ವಾರ್ಷಿಕ ಆದಾಯ 20 ಲಕ್ಷ ರೂ.!
“ಒಳ್ಳೆಯ ನೌಕರಿ, ಕೈ ತುಂಬಾ ಸಂಬಳ ಇದ್ದುಬಿಟ್ಟರೆ ಸಾಕು, ಮತ್ತಿನ್ನೇನೂ ಬೇಡ’ ಎನ್ನುವವರು ನಮ್ಮಲ್ಲನೇಕರು ಸಿಗುತ್ತಾರೆ. ಇವಿಷ್ಟು ಇದ್ದುಬಿಟ್ಟರೆ ಎಂಥದ್ದೇ ತಲೆನೋವನ್ನು ಮರೆತು ಪೂರ್ತಿ ಜೀವನವನ್ನು ಕಳೆದುಬಿಡುತ್ತಾರೆ. ಅದರ ಸುಳಿಯಿಂದ ಹೊರ ಬರಬೇಕಾದರೆ ಧೈರ್ಯ ಬೇಕು’ ಎನ್ನುವುದು ಸಾಫ್ಟ್ವೇರ್ ಇಂಜಿನಿಯರ್ ಅನೂಪ್ ಪಾಟೀಲ್ ಅವರ ಅನುಭವದ ಮಾತು. ಐಟಿ ಉದ್ಯೋಗ ತೊರೆದಿರುವ ಅವರು ಈಗ ಕೃಷಿಯಲ್ಲಿ ತೊಡಗಿದ್ದಾರೆ. ಕೈತುಂಬಾ ಸಂಬಳ ನೀಡುತ್ತಿದ್ದ ಕೆಲಸ ಸಾಕು ಎಂದು ನಿರ್ಧರಿಸಿ, ಸ್ವಂತ ಊರಿಗೆ ಬಂದಿದ್ದಾರೆ. ಅವರಿಗೆ ಇನ್ನೂ 28 ವರ್ಷ ಪ್ರಾಯ. ಹುಟ್ಟೂರಿನಿಂದ, ಮನೆ ಮಂದಿಯಿಂದ ದೂರವಾಗಿ ನಗರಗಳಲ್ಲಿ ಉದ್ಯೋಗ ಮಾಡುತ್ತಿರುವ ಯುವಪೀಳಿಗೆಯ ಮನಸ್ಥಿತಿಗೆ ಅನೂಪ್ ಕೈಗನ್ನಡಿಯಾಗಿದ್ದಾರೆ.
ಕೆಲಸ ತೊರೆದ ನಂತರ
ಅದೊಂದು ದಿನ ತನ್ನ ಉದ್ಯೋಗಕ್ಕೆ ರಾಜೀನಾಮೆಯಿತ್ತು, ಕಚೇರಿಯಿಂದ ಹೊರ ನಡೆದರು ಅನೂಪ್. ಮುಂದಿನ ಮೂರು ತಿಂಗಳು ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೃಷಿಕರನ್ನು ಭೇಟಿ ಮಾಡಿದರು. ಅದೇ ಅವಧಿಯಲ್ಲಿ ಯಾವ್ಯಾವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ ಎಂಬ ಬಗ್ಗೆ ಅಧ್ಯಯನ ಮಾಡಿದರು. ಅನಂತರ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತನ್ನ ಹಳ್ಳಿ ನಗ್ರಾಲೆಗೆ ಮರಳಿದ ಅನೂಪ್, ಕೃಷಿಯಲ್ಲಿ ತೊಡಗಿದರು. ಈಗ ಅವರ 12 ಎಕರೆ ಹೊಲದಲ್ಲಿ ಬಹುಬೆಳೆಗಳ ಕೃಷಿ: ಹಸಿರು ಮತ್ತು ಹಳದಿ ಕ್ಯಾಪ್ಸಿಕಮ್ ಸಿಹಿ ಜೋಳ, ಕಬ್ಬು ಮತ್ತು ಚೆಂಡುಮಲ್ಲಿಗೆ. 2016ರಲ್ಲಿ ಕೆಲಸ ಆರಂಭಿಸಿದಾಗ ಹಲವರು ತನ್ನನ್ನು ನಿರುತ್ಸಾಹಗೊಳಿಸಿದ್ದನ್ನು ನೆನೆಯುತ್ತಾರೆ ಅನೂಪ್. ನಗರದಲ್ಲಿ ಆರಾಮದಾಯಕ ಜೀವನ ನಡೆಸಿದ ಅನೂಪ್ ಪಾಟೀಲರಿಗೆ ಕೃಷಿಯ ಕಷ್ಟದ ಬದುಕಿಗೆ ಹೊಂದಿಕೊಳ್ಳಲಾಗದು ಎಂದವರು ಅನೇಕರು. ಕೃಷಿಯಲ್ಲಿ ಯಶಸ್ಸು ಸಾಧಿಸಲೇಬೇಕೆಂದು ಆ ದಿನವೇ ನಿರ್ಧರಿಸಿದ ಅನೂಪ್, ಮೊದಲ ಬೆಳೆಯಾಗಿ ಕಬ್ಬು ಬೆಳೆದರು.
ಬೆಳೆಯುವ ಮುನ್ನವೇ ಒಪ್ಪಂದ
ಅನಂತರ, ಸಹಾಯಧನ ಪಡೆದು ಪಾಲಿ ಹೌಸ್ ನಿರ್ಮಿಸಿದರು. ಅದರಲ್ಲಿ ಬಣ್ಣದ ಕ್ಯಾಪ್ಸಿಕಮ್ ಕೃಷಿ ಶುರುವಿಟ್ಟರು. ಅವರು ನೆಟ್ಟ 7,000 ಕ್ಯಾಪ್ಸಿಕಮ್ ಸಸಿಗಳಲ್ಲಿ 1,000 ಸಸಿಗಳು ಸತ್ತು ಹೋದವು. ಛಲ ಬಿಡದ ಅನೂಪ್ ಪುನಃ 1,000 ಕ್ಯಾಪ್ಸಿಕಮ್ ಸಸಿಗಳನ್ನು ನೆಟ್ಟು ಬೆಳೆಸಿದರು. ಅಂತೂ ಅವು ಉತ್ತಮ ಫಸಲು ಪಡೆದು, ಮೊದಲ ಪ್ರಯತ್ನದಲ್ಲೇ ಲಾಭ ನೀಡಿದವು. ಕ್ಯಾಪ್ಸಿಕಮ್ ಸಸಿಗಳನ್ನು ನೆಡುವ ಮುಂಚೆಯೇ ಖರೀದಿದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರಿಂದ ಅನುಕೂಲವಾಯಿತು. “ಒಪ್ಪಂದ ಮಾಡಿಕೊಂಡ ಖರೀದಿದಾರರಿಗೆ ಎ- ಗ್ರೇಡ್ ಕ್ಯಾಪ್ಸಿಕಮ್ ಮಾತ್ರ ಮಾರಾಟ ಮಾಡಿದೆ. ಉಳಿದ ಫಸಲನ್ನು ಇಲ್ಲಿನ ಮಾರುಕಟ್ಟೆಯಲ್ಲೇ ಮಾರಿದೆ. ಇದರಿಂದಾಗಿ ಖರೀದಿದಾರರು ಬೆಲೆ ಬಗ್ಗೆ ನನ್ನಲ್ಲಿ ಚೌಕಾಸಿ ಮಾಡಲಿಲ್ಲ’ ಎಂದು ತನ್ನ ಆರಂಭದ ಅನುಭವವನ್ನು ನೆನಪು ಮಾಡಿಕೊಳ್ಳುತ್ತಾರೆ ಅನೂಪ್.
ಪರಿಶ್ರಮಕ್ಕೆ ಫಲವಿದೆ
ಸ್ನಾತಕೋತ್ತರ ಪದವೀಧರೆಯಾದ ಪತ್ನಿಯ ಸಹಕಾರದಿಂದ ಫಾರ್ಮಿನ ಕೆಲಸಕಾರ್ಯಗಳನ್ನೆಲ್ಲ ನಿರ್ವಹಿಸುತ್ತಿದ್ದಾರೆ. ಒಂದೊಮ್ಮೆ ಉದ್ಯೋಗಿಯಾಗಿದ್ದ ಅನೂಪ್ ಈಗ ತಮ್ಮ ಹೊಲದಲ್ಲಿ 10- 15 ಕೆಲಸಗಾರರಿಗೆ ಉದ್ಯೋಗ ನೀಡಿ¨ªಾರೆ. ಇವತ್ತಿಗೂ ಕೃಷಿ ಎಂಬುದು ದೊಡ್ಡ ಅವಕಾಶಗಳ ಲೋಕ. ಅಲ್ಲಿ ಸಾಧ್ಯತೆಗಳು ಬಹಳ. ನಾವು ಪ್ರಯೋಗ ಮಾಡಲು ತಯಾರಿರಬೇಕು ಅಷ್ಟೇ. ಶಾಲಾ ಕಾಲೇಜು ಶಿಕ್ಷಣ ಪಡೆದ ಹೆಚ್ಚೆಚ್ಚು ಜನರು ಕೃಷಿಯನ್ನೊಂದು ವ್ಯವಹಾರವಾಗಿ ಪರಿಗಣಿಸಿ ಕೃಷಿಯಲ್ಲಿ ತೊಡಗಿದರೆ, ಬೇರೆ ಯಾವುದೇ ಕೈಗಾರಿಕೆಗಿಂತಲೂ ಹೆಚ್ಚಿನ ಲಾಭ ಗಳಿಸಲು ಸಾಧ್ಯ ಎಂದು ಅನೂಪ್ ಪಾಟೀಲ್ ಹೇಳುತ್ತಾರೆ.
ಸೇವಂತಿಗೆಗೆ ಎಲ್‌ಇಡಿ ಬೆಳಕು
ಪಾಲಿಹೌಸಿನಲ್ಲಿ ಅನೂಪ್ ಪಾಟೀಲ್ ಬೆಳೆದ ಮೊದಲ ಹೂವಿನ ಬೆಳೆ ಸೇವಂತಿಗೆ. ಅವರು ಅದರ ಕೃಷಿಯ ಮಾಹಿತಿ ಪಡೆದದ್ದು ಬೆಂಗಳೂರಿನ ರೈತರಿಂದ. ಮೊದಲ 20 ದಿನಗಳು ಆ ಸಸಿಗಳಿಗೆ ದಿನದ 24 ಗಂಟೆ ಬೆಳಕು ಬೇಕೆಂದು ತಿಳಿದಿದ್ದರು. ಅದಕ್ಕಾಗಿ, ಎಲ…ಇಡಿ ಬಲುºಗಳನ್ನು ರಾತ್ರಿಯಿಡೀ ಉರಿಸಿದರು. ಅಂತೂ ಉತ್ತಮ ಫಸಲು ಬಂತು. ಆದರೆ, ಮಾರುಕಟ್ಟೆಯಲ್ಲಿ ಸೇವಂತಿಗೆಯ ಬೆಲೆ ಕುಸಿಯಿತು. ಹಾಗಾಗಿ ಕಡಿಮೆ ಬೆಲೆಗೆ ಸೇವಂತಿಗೆ ಮಾರಾಟ ಮಾಡಿ, ನಷ್ಟ ಅನುಭವಿಸಿದರು. “ಇದರಿಂದಾಗಿ, ಕೃಷಿಯಲ್ಲಿ ಲಾಭ ಇರುತ್ತದೆ; ಹಾಗೆಯೇ ನಷ್ಟವೂ ಇರುತ್ತದೆ ಎಂಬ ದೊಡ್ಡ ಪಾಠ ಕಲಿತೆ’ ಎನ್ನುತ್ತಾರೆ ಅನೂಪ್ ಪಾಟೀಲ್ 2018ರ ಕೊನೆಯಲ್ಲಿ 4 ಎಕರೆಯಲ್ಲಿ ಚೆಂಡುಮಲ್ಲಿಗೆ ಬೆಳೆಸಿದರು ಅನೂಪ್. ಅದರ ಫಸಲನ್ನು ಕಿಲೋಕ್ಕೆ 40- 50ರೂ. ದರದಲ್ಲಿ ಮಾರಲು ಸಾಧ್ಯವಾಯಿತು. ಜೊತೆಗೆ, ಸಿಹಿಜೋಳ ಮತ್ತು ಕ್ಯಾಪ್ಸಿಕಮ್ ಕೃಷಿಯಿಂದಲೂ ಆದಾಯ ಗಳಿಕೆ.
ನೀರು ನಿಲ್ಲುತ್ತಿದ್ದಲ್ಲಿ ಮೀನು ಸಾಕಣೆ
ಇವೆಲ್ಲದರ ಜೊತೆಗೆ ಮೀನು ಸಾಕಣೆ ಶುರು ಮಾಡಿದರು ಅನೂಪ್. ಯಾಕೆಂದರೆ, ಅವರ ಜಮೀನಿನ ಒಂದು ಭಾಗದಲ್ಲಿ ನೀರು ಬಸಿದು ಹೋಗುತ್ತಿರಲಿಲ್ಲ. ಅಲ್ಲಿ ಒಂದೂವರೆ ಎಕರೆಯಲ್ಲಿ ಮೀನು ಸಾಕಣೆಗೆ ಕೆರೆ ನಿರ್ಮಿಸಿ, ಕಾಟ್ಲಾ ಮತ್ತು ಸಿಪ್ರಿನಸ್ ಜಾತಿಯ ಮೀನು ಸಾಕಿದರು. ಅದರಿಂದಲೂ ಲಾಭ ಗಳಿಸಲು ಸಾಧ್ಯವಾಗಿದೆ. ಯಾವುದೇ ತೊಂದರೆಯನ್ನು ಲಾಭಕ್ಕೆ ಪರಿವರ್ತಿಸಿಕೊಳ್ಳುವಲ್ಲಿ ಅವರ ಮನೋಬಲವಿದೆ.
ಪ್ರತಿಯೊಬ್ಬರ ಅನುಭವದಿಂದಲೂ ಕಲಿಯಲು ಸಾಧ್ಯವಿದೆ. ಸಣ್ಣ ರೈತನೂ ಉಪಯುಕ್ತ ಮಾಹಿತಿ ನೀಡಬಲ್ಲ. ಎಲ್ಲರಿಂದಲೂ ಕಲಿಯುವ ಉತ್ಸಾಹವೇ ನನ್ನ ಯಶಸ್ಸಿಗೆ ಕಾರಣ. ಯಾವುದೇ ವಿಷಯದ ಬಗ್ಗೆ, ಯಾರ ಬಳಿ ಬೇಕಾದರೂ ಪ್ರಶ್ನೆ ಕೇಳಲು ನಾನು ಸಿದ್ಧ.
– ಅನೂಪ್, ಕೃಷಿಕ
ಸಂಪರ್ಕ: [email protected]
-ಅಡ್ಡೂರು ಕೃಷ್ಣ ರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.