ಭಾಗ್ಯದ ಕೊನೆಗಾರ; ಸೀಸನಲ್ ಕುಶಲಕರ್ಮಿಯ ಬದುಕು ಬವಣೆ
Team Udayavani, Dec 2, 2019, 5:15 AM IST
ನಮ್ಮಲ್ಲಿ ಸೀಸನಲ್ ಹಣ್ಣುಗಳಿರುವಂತೆಯೇ ವೃತ್ತಿಗಳಲ್ಲಿ ಸೀಸನಲ್ ವೃತ್ತಿಗಳಿವೆ. ಅವುಗಳಲ್ಲಿ ಒಂದು ಅಡಕೆ ಕೊನೆ (ಗೊನೆ) ಕೀಳುವ “ಕೊನೆಗಾರ’ನದ್ದು. ಅಡಕೆ ಕೊಯ್ಲು ಶುರುವಾಗುವ ಸಮಯ ಹತ್ತಿರದಲ್ಲಿರುವುದರಿಂದ ಆತನ ಬರುವಿಕೆಗೆ ಅಡಕೆ ಕೃಷಿಕರೆಲ್ಲರೂ ಕಾದಿರುತ್ತಾರೆ. ಮೂರು ನಾಲ್ಕು ತಿಂಗಳ ಪೂರ್ತಿ ಮೈದಣಿಯುವಂತೆ ಕೆಲಸ ಮಾಡುವ ಈ ಕುಶಲಕರ್ಮಿ, ತಾನು ಪಡೆಯುವ ಪಗಾರದಲ್ಲಿ ವರ್ಷಪೂರ್ತಿ ಜೀವನ ನಿರ್ವಹಣೆ ನಡೆಸುತ್ತಾನೆ. ಮರಕ್ಕೆ ಕೈಮುಗಿದು ಕೆಲಸ ಶುರುಮಾಡುವ ಅವನಿಗೆ ಅಡಕೆ ಹೇಗೆ ದೇವರ ಸಮಾನವೋ ಹಾಗೆಯೇ, ಕೃಷಿಕರಿಗೂ ಕೊನೆಗಾರ
ಆಪದ್ಬಾಂಧವ.
“ಅಲ್ದೊ ಮಾರಾಯ, ಕೊನೇ ಗೌಡ ಯಾವಾಗ ಬರ್ತನನ, ಕಳೆದ ತಿಂಗಳಿಂದಲೇ ನಾಳೆ ಬರ್ತ ಹೇಳ್ತಿದ್ದ… ಅಡಿಕೆ ಎಲ್ಲ ಉದರೋತು’. ಮಲೆನಾಡು, ಕರಾವಳಿ ಸೀಮೆಯಲ್ಲಿ ಈ ಸಮಯದಲ್ಲಿ ಪ್ರತೀ ವರ್ಷ ಅಡಿಕೆ ಕೃಷಿಕರು ಮಂಡೆ ಬಿಸಿ ಮಾಡಿಕೊಳ್ಳುವ ಪರಿ ಇದು. ಅಡಕೆ ಕೊಯ್ಲಿನ ಸಮಯ ಇನ್ನೇನು ಆರಂಭವಾಗುತ್ತಿದೆ. ನಮ್ ಕಷ್ಟ ಕೇಳವ್ಯಾರಾ? ಎಂದೂ ಹೇಳಿಕೊಳ್ಳುತ್ತಾರೆ. ವರ್ಷಕ್ಕೆ ಅಡಕೆ ಕೊಯ್ಲು ಮಾಡುವ ಸಂದರ್ಭ ಒದಗಿ ಬರುವುದು ಎರಡು ಬಾರಿ ಮೊದಲನೆಯದು ಮಳೆಗಾಲದಲ್ಲಿ, ಎರಡನೆಯ ಬಾರಿ ಚಳಿಗಾಲ ಕೊನೆಗೊಂಡು ಇನ್ನೇನು ಬೇಸಗೆಕಾಲ ಶುರುವಾಗುತ್ತದೆ ಎನ್ನುವ ಹೊತ್ತಿನಲ್ಲಿ. ಈ ಕಾಲದಲ್ಲಿ ಅಡಕೆ ಕೃಷಿಕರೆಲ್ಲರಿಗೂ ನೆನಪಾಗುವವನೇ ಕೊನೆಗಾರ. ಕೆಲವೆಡೆ ಆತ “ಕೊನೆ ಗೌಡ’ ಎಂದೂ ಕರೆಸಿಕೊಳ್ಳುತ್ತಾನೆ.
ಕೊನೆಗೌಡ ಎಂಬ ವಿರಳ ವೃತ್ತಿ
ನಮ್ಮಲ್ಲಿರುವ ಸೀಸನಲ್ ವೃತ್ತಿಗಳಲ್ಲಿ ಅಡಕೆ ಕೊಯ್ಲಿಗೆ ಸಂಬಂಧಿಸಿದ್ದೂ ಒಂದಿದೆ. ಅದು ಕೊನೆಗಾರನ ವೃತ್ತಿ. ಮುಗಿಲೆತ್ತರದ ಅಡಕೆ ಮರವನ್ನೇರಿ ಅಡಕೆ ಕೊನೆಗಳನ್ನು ಕೆಳಕ್ಕಿಳಿಸುವ ಕುಶಲಕರ್ಮಿಗೆ ಈ ಸಮಯದಲ್ಲಿ ವಿಪರೀತ ಡಿಮ್ಯಾಂಡು. ಒಮ್ಮೆ ಒಂದು ಮರವನ್ನೇರಿದರೆ ಮತ್ತೆ ಇಳಿಯುವುದು ಟೀ ಬ್ರೇಕಿಗೆ ಮಾತ್ರ. ಮೊದಲು ಹತ್ತಿದ ಮರದಿಂದ ಕೊನೆಗಳನ್ನು ಇಳಿಸಿದ ನಂತರ ಆ ಮರವನ್ನೇ ಬಾಗಿಸಿ ಆ ತುದಿಯಿಂದಲೇ ಸನಿಹದ ಮರದ ತುದಿಯನ್ನು ತಲುಪುವ ಅವನ ಕೌಶಲ್ಯವನ್ನು ಕಣ್ಣಾರೆ ನೋಡಿಯೇ ತುಂಬಿಕೊಳ್ಳಬೇಕು. ಆತ ಕೊನೆಗಳನ್ನು ಇಳಿಸುವ ಕೆಲಸವನ್ನಷ್ಟೇ ಮಾಡುವುದಿಲ್ಲ. ಅಡಿಕೆಗೆ ಕೊಳೆ ರೋಗ ಬಾರದಂತೆ ಬೋಡೋì ದ್ರಾವಣ ಅಥವಾ ಇನ್ನಾವುದೋ ಔಷಧ ಸಿಂಪಡಣೆಗೂ ಅವನೇ ಬೇಕು. ಈಚೆಗೆ ಕೆಲವೆಡೆ ಯಂತ್ರಗಳು ಬಂದಿದ್ದರೂ, ಕಾಳು ಮೆಣಸಿನ ಬಳ್ಳಿ, ಮರ ಒಂದು ತೋಟದಿಂದ ಇನ್ನೊಂದು ಕಡೆ ವಾಲಿರುವುದರಿಂದ ಅದರ ಪ್ರಯೋಜನ ಬಾರದು. ಹೀಗಾಗಿ ಯಂತ್ರಗಳೂ ಕಾರ್ಯಾಚರಿಸದ ಸಂದರ್ಭಗಳಿಗೆಲ್ಲಾ ಕೊನೇ ಗೌಡ ಬರಲೇಬೇಕು. ವಿರಳವಾಗುತ್ತಿರುವ ಈ ಕುಶಲಕರ್ಮಿಗಳ ಕೊರತೆ ಇಂದು ಅವರಿಗೆ ಬೇಡಿಕೆ ಹೆಚ್ಚಿಸಿದೆ.
ಯಾರಿವರು ಗೌಡ್ರು?
ಕೊನೇ ಗೌಡ ಎಂದೇ ಕರೆಯುವುದು ಅಡಕೆ ಮರ ಏರುವ ಕುಶಲಕರ್ಮಿಯನ್ನು. ಉತ್ತರಕನ್ನಡ, ಮಲೆನಾಡು ಸೀಮೆಯಲ್ಲಿ ಗೌಡರಿಲ್ಲದೇ ಅಡಕೆ ಕೃಷಿಕರ ಬದುಕು ಪೂರ್ಣವಾಗುವುದೇ ಇಲ್ಲ! ಅಡಕೆ ಏಕ ದಳ ಸಸ್ಯ. ಮರ ಏರಲು ರೆಂಬೆಗಳು ಇದರಲ್ಲಿ ಇರುವುದಿಲ್ಲ. ಈ ಕಾರಣದಿಂದ ಮಳೆಗಾಲದಲ್ಲಿ ಪಸೆ ಇರುವ ಜಾರುವ ಮರವನ್ನೂ ಸರ ಸರನೆ ಏರಬೇಕು. ಬೀಸುವ ಗಾಳಿ, ಮಳೆಗೂ ಜಗ್ಗದೇ ನೆಲದಿಂದ 4- 60 ಅಡಿ ಎತ್ತರದ ಮರದ ಮೇಲೆ ಇರುವ ಅಡಕೆ ಗೊನೆಗೆ ಮದ್ದು ಹೊಡೆಯಬೇಕು. ಕೊಳೆ ಬಾರದಂತೆ ಗಟೋರ ಪಂಪಿನ ಸಹಾಯದಿಂದ ಔಷಧ ಸಿಂಪಡಣೆ ಮಾಡಬೇಕು.
ನವೆಂಬರ್ ಕಳೆಯುತ್ತಿದ್ದಂತೆಯೇ ಮಲೆನಾಡಿನಲ್ಲಿ ಶುರುವಾಗುವ ಕೊನೇ ಕೊಯ್ಲಿನ ಹಂಗಾಮಿನಲ್ಲಿ ತುಂಬಾ ಬ್ಯುಸಿ ಶೆಡ್ನೂಲ್ ಈ ಕುಶಲಕರ್ಮಿಗಳದ್ದು. ಹತ್ತಾರು ಅಡಕೆ ಕೃಷಿಕರ ಕುಟುಂಬಗಳಿಗೆ ಒಬ್ಬನೇ ಗೌಡ ಆಶ್ರಯದಾತ. ಯಜಮಾನನಿಗೆ ಬಾರದ ಕೆಲಸ ಮಾಡುವ ಗೌಡನಿಗೆ ವಿಶೇಷ ಗೌರವ, ವಿಶಿಷ್ಟ ಉಪಚಾರ!
ಎದೆಗೊಂದು ಅಡಕೆ ಹಾಳೆ, ತಲೆಗೊಂದು ಟೊಪ್ಪಿ ಧರಿಸಿ, ಟೊಂಕಕ್ಕೆ ಬಿಗಿಯಾಗಿ ಬಟ್ಟೆ ಸುತ್ತಿಕೊಂಡು ಅಂಡು ಕೊಕ್ಕೆ, ಉದ್ದನೆಯ ಕತ್ತದ ಬಳ್ಳಿ ಕಟ್ಟಿಕೊಂಡು ಮರ ಏರುತ್ತಾರೆ. ಹಗ್ಗದ ಸಹಾಯದಿಂದ ಮರದ ಮೇಲಿನಿಂದ ಅಡಕೆ ಕೊನೆಯನ್ನು ಇಳಿ ಬಿಡುತ್ತಾರೆ. ಕೆಳಗೆ ಇರುವ ವ್ಯಕ್ತಿ 50- 60 ಕಿ.ಮೀ ವೇಗದಲ್ಲಿ ಬೀಳುವ 10- 20 ಕೆ.ಜಿ ತೂಕದ ಕೊನೆಯನ್ನು ಹಿಡಿಯಬೇಕು! ಕೆಲವೆಡೆ ಇಳಿಬಿಡುವ ಅಡಕೆ ಕೊನೆಯನ್ನು ನೆಲಕ್ಕೆ ಬೀಳಿಸಿ ನಂತರ ಪ್ರತ್ಯೇಕಗೊಂಡ ಅಡಕೆಗಳನ್ನು ಹೆಕ್ಕುವ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ.
ಐದಾರು ತಿಂಗಳ ಕೆಲಸ
ಕೊನೇ ಗೌಡರದ್ದು ವರ್ಷದಲ್ಲಿ ಆರು ತಿಂಗಳು ಜೋರಿನ ಕೆಲಸ. ಉಳಿದ ವೇಳೆ ಇನ್ನಾವುದಾದರೂ ಕೆಲಸವನ್ನು ಹುಡುಕಿಕೊಳ್ಳಬೇಕು. ದಶಕಗಳ ಹಿಂದೆ ಮಲೆನಾಡಿನ ಸೀಮೆಗೆ ಅಡಕೆ ಕೊಯ್ಲಿನ ಸಮಯದಲ್ಲಿ ಕರಾವಳಿ ಭಾಗದಿಂದ ಕುಶಲಕರ್ಮಿಗಳು ಬರುತ್ತಿದ್ದರು. ಅವರು ಮಲೆನಾಡಿನ ಕೃಷಿಕರ ಮನೆಗಳಲ್ಲೇ ಉಳಿದು ಮಳೆಗಾಲದ ಹಾಗೂ ಬೇಸಗೆಯ ಕೊಯ್ಲನ್ನು ನಡೆಸಿಕೊಡುತ್ತಿದ್ದರು. ಜೂನ್‌ಗೆ ಬಂದರೆ, ಮಹಾಚೌತಿ ವೇಳೆಗೆ ಊರಿಗೆ ಹೋದವರು ನವೆಂಬರ್ ಕೊನೆಯೊಳಗೆ ಮತ್ತೆ ಬರುತ್ತಿದ್ದರು. ವಾಪಸ್ ಹೋಗುವಾಗ ಪಗಾರ ಪಡೆದು ಊರಿಗೆ ಹೋಗುತ್ತಿದ್ದರು. ಮೂರು ತಿಂಗಳ ಸಂಬಳ, ಮುಂದಿನ ಮೂರು ತಿಂಗಳ ನಿರ್ವಹಣೆಗೆ ಬರುತ್ತಿತ್ತು. ಹಣವನ್ನು ಅಗತ್ಯಕ್ಕೆ ತಕ್ಕಂತೆ ನಿರ್ವಹಿಸಿಕೊಳ್ಳುತ್ತಿದ್ದರು.
ಬದಲಾವಣೆಯೂ ಆಗುತ್ತಿದೆ
ಈಚೆಗಿನ ವರ್ಷದಲ್ಲಿ ಆಯಾ ಊರಿನಲ್ಲೇ ಕೆಲವರು ಅಡಕೆ ಮರ ಏರುವುದನ್ನು ಕಲಿತಿದ್ದಾರೆ. ಅಲ್ಲದೆ ಕ್ಯಾಂಪ್ಕೊ, ಶಿರಸಿ ಕದಂಬ ಸಂಸ್ಥೆ, ಶಿವಮೊಗ್ಗ ತೋಟಗಾರಿಕಾ ವಿದ್ಯಾಲಯಗಳಂಥ ಸ್ಥಳೀಯ ಸಂಘಸಂಸ್ಥೆಗಳು ಸುರಕ್ಷಿತವಾಗಿ ಮರ ಏರುವ ತರಬೇತಿ ಮತ್ತು ಅದಕ್ಕೆ ಸಹಕಾರಿಯಾಗುವಂಥ ಯಂತ್ರೋಪಕರಣಗಳನ್ನು ಪರಿಚಯಿಸುವ ಕೆಲಸದಲ್ಲಿ ನಿರತವಾಗಿವೆ. ಇದರಿಂದ ನೂರಾರು ಹೊಸ ಕುಶಲಕರ್ಮಿಗಳ ಪಡೆಯೇ ಸಿದ್ಧವಾಗುತ್ತಿದೆ. ಹಾಗಿದ್ದೂ, ಕೊನೆಗಾರರಿಗೆ ಅಭಾವ ಇದ್ದೇ ಇದೆ. ಅನೇಕರು ಈ ವೃತ್ತಿಯಲ್ಲಿ ತುಂಬಾ ಕಾಲ ಉಳಿಯದೆ ಬೇರೆ ವೃತ್ತಿಗಳತ್ತ ಮುಖ ಮಾಡುತ್ತಿರುವುದೂ ಅದಕ್ಕೆ ಕಾರಣ. ಊರಿಗೆ ಐದಾರು ಜನರು ಬೇಕಾದ ಕುಶಲಕರ್ಮಿಗಳಲ್ಲಿ ಕೇವಲ ಒಂದಿಬ್ಬರು ಇದ್ದಾರೆ! ಕೆಲವು ಹಳ್ಳಿಗಳಿಗೆ ಒಬ್ಬರೂ ಇಲ್ಲ. ಈ ಕಾರಣದಿಂದ ಗೌಡರಿಗೆ ಡಿಮ್ಯಾಂಡು.
ಕೊನೆಗಾರರು, ಅಮಾವಾಸ್ಯೆ ದಿನದಂದು ಅಡಕೆ ಮರ ಏರುವುದಿಲ್ಲ. ಹಬ್ಬ ಹರಿದಿನಗಳಂದು ರಜೆ. ಅತಿಯಾದ ಮಳೆ ಬಂದರೂ ಮರ ಏರುವುದಿಲ್ಲ. ಅವರ ಬದುಕನ್ನು ಅಡಿಕೆ ಮರ ನಡೆಸುತ್ತದೆ. ಅಡಕೆ, ಕೃಷಿಕರ ಬದುಕನ್ನು ನಡೆಸುತ್ತದೆ. ವರ್ಷಕ್ಕೊಮ್ಮೆ ಕೊನೆ ಕೊಯ್ಲು ಮಾಡುವ ರೈತ ಕೂಡ, ವರ್ಷದ ಪ್ಲಾನ್ ಮಾಡಿಕೊಳ್ಳುವುದು ಕೊಯ್ಲಿನ ಹಂಗಾಮಿನಲ್ಲೇ! ಹೀಗಾಗಿ ಅಸಂಖ್ಯ ಅಡಕೆ ಕೃಷಿಕರ ಬದುಕು ಕೂಡಾ ಕೆಲವೇ ಕೊನೆಗಾರರ ಮೇಲೆ ನಿಂತಿದೆ ಎನ್ನುವುದು ಕೂಡಾ ಅಷ್ಟೇ ಸತ್ಯ!
ಹಣಕಾಸು ನಿರ್ವಹಣೆ
ಅಪಾಯಕಾರಿ ಕೆಲಸ ಮಾಡುವ ಈ ಕುಶಲಕರ್ಮಿಗಳಿಗೆ ನಿತ್ಯ 1200ರಿಂದ 2000 ರೂ. ತನಕವೂ ಸಂಬಳ ಇದೆ. ಕೆಲವು ರೈತರು ಸ್ವತಃ ವಿಮೆ ಕೂಡ ಮಾಡಿಸಿದ್ದಾರೆ. ವಿಶೇಷ ಏನಪ್ಪಾ ಅಂದರೆ, ಕೊನೆಗಾರರು ಮೂರು ತಿಂಗಳಿಗೆ 60ರಿಂದ 90 ಸಾವಿರ ರೂ. ತನಕವೂ ದುಡಿದು, ಅದರಲ್ಲಿ ವರ್ಷಪೂರ್ತಿ ಬರುವಂತೆ ನಿರ್ವಹಣೆ ಮಾಡುವ ರೀತಿ. ಪ್ರಾಥಮಿಕ ಶಿಕ್ಷಣ ಕೂಡ ಪಡೆಯದ ಕೊನೆಗಾರ, ವರ್ಷಪೂರ್ತಿ ಹಣಕಾಸು ನಿರ್ವಹಣೆ ನಡೆಸುವ ಪರಿ ಅಚ್ಚರಿ ಮೂಡಿಸುತ್ತದೆ.
-ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.