ಸೌಹಾರ್ದ ಸಹಕಾರಿ ಕಾಯ್ದೆ; ತಿದ್ದುಪಡಿಗಳ ನಂತರವೂ ಆಕರ್ಷಕ!


Team Udayavani, Sep 25, 2017, 1:32 PM IST

25-ZZ-4.jpg

ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ನೋಂದಣಿಯಾದ ದತ್ತಿ ಅರ್ಥಾತ್‌ ಟ್ರಸ್ಟ್‌ ಕಾಯ್ದೆ ಎಂದರೂ ಅದು ಕೆಲವೇ ಜನ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಂಡು, ಭರಪೂರ ಪ್ರಚಾರ ಪಡೆಯಲು ಸಾಧ್ಯವಾಗುವಂತೆ ರೂಪಿಸಿದ ವ್ಯವಸ್ಥೆ ಎಂಬ ಅಭಿಮತವೇ ಕೇಳುತ್ತದೆ. ಸಹಕಾರಿ ಕಾಯ್ದೆಯಡಿ ತನ್ನ ಸಂಘ, ಸಂಘಟನೆಯನ್ನು ನೋಂದಣಿ ಮಾಡಿಸುವುದು ಸಂಕಷ್ಟ ತರುವಂತದು. ಮೀಸಲಾತಿ ನಿಯಮಗಳನ್ನು ಅನೂಚಾನವಾಗಿ ಪಾಲಿಸಬೇಕಾಗಿರುವುದು, ಎಲ್ಲ ಅರ್ಹರ ಸದಸ್ಯತ್ವದ ಬೇಡಿಕೆಗೆ ಅಸ್ತು ಎನ್ನಬೇಕಾಗಿರುವುದು ಸೊಸೈಟಿ ಆ್ಯಕ್ಟ್‌ನ ತಾಪತ್ರಯ ಎಂಬ ವಾದವಿತ್ತು.  ಇವಕ್ಕೆಲ್ಲ ರಾಜ್ಯ ಸರ್ಕಾರವೇ ಪರಿಹಾರ ರೂಪದಲ್ಲಿ 2001ರಿಂದ ಸೌಹಾರ್ದ ಸಹಕಾರಿ ಕಾಯ್ದೆಯನ್ನು ಜಾರಿಗೆ ತಂದಿದ್ದು ಹಳೆಯ ಸುದ್ದಿ.

ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದಾಗ, ಸಹಕಾರಿ ಪೋಷಾಕಿನಡಿ ಕುಳಿತ ದತ್ತಿ ಕಾಯ್ದೆ ಎಂಬಂತಿತ್ತು. ಈ ಮಾತು ಸರ್ಕಾರಕ್ಕೆ ಕೂಡ ಕೇಳಿಸಿದ್ದು, ಮುಖ್ಯವಾಗಿ ತನ್ನ ನಿಯಂತ್ರಣವನ್ನೇ ಮೀರಿ ವ್ಯವಸ್ಥೆಯೊಂದು ರೂಪುಗೊಳ್ಳುವುದನ್ನು ಸಹಿಸದ ಸರ್ಕಾರ 2013ರಲ್ಲಿ ವಿಶೇಷ ತಿದ್ದುಪಡಿ ತಂದಿತು. ಒಂದರ್ಥದಲ್ಲಿ ಆಮೂಲಾಗ್ರ ಬದಲಾವಣೆಗೆ ಕೈಹಾಕಿ ಸರಿಸುಮಾರು 40 ಮಾರ್ಪಾಡುಗಳನ್ನು ಮಾಡಿತು. 

ಸಹಕಾರಿ ಪೋಷಾಕಿಗೆ ಅಲ್ಪ ಭಂಗ!
1997ರಲ್ಲಿಯೇ ರೂಪುಗೊಂಡಿದ್ದರೂ, 2001ರ ಮೊದಲ ತೇದಿಯಿಂದ  ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ ಜಾರಿಗೆ ಬಂದಿದೆ. 2004 ಹಾಗೂ 2005ರಲ್ಲಿ ಕೆಲವು ತಿದ್ದುಪಡಿಗಳಾಗಿವೆ. 1959ರ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾದ ಗೃಹ ನಿರ್ಮಾಣ ಸಹಕಾರ ಸಂಘಗಳ ಹೊರತು ಉಳಿದವನ್ನೆಲ್ಲ ಈ ಸೌಹಾರ್ದ ಸಹಕಾರಿಯಾಗಿ ಬದಲಿಸಬಹುದಾಗಿರುವುದು ಒಂದು ವಿಶೇಷ ಅಂಶ. ಕಳೆಗುಂದಿದ ಸಹಕಾರಿ ಕ್ಷೇತ್ರಕ್ಕೆ ಜೀವ ತುಂಬುವ ನಿಟ್ಟಿನಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ ಎಂದು ಹೇಳಲಾಗುತ್ತಿದೆಯಾದರೂ ತುಂಬಾ ಬುದ್ಧಿವಂತರು ರೂಪಿಸಿರುವ ಈ ಕಾಯ್ದೆ ದತ್ತಿ ಕಾಯ್ದೆಗಿಂತ ತೀರಾ ಭಿನ್ನವಲ್ಲ. ಆದರೆ ಸಹಕಾರಿಯ ಪೋಷಾಕನ್ನು ತೊಡಿಸಿ ಚೆಂದವಾಗಿಸಲಾಗಿತ್ತು. ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕವು 2012ರ ಸಹಕಾರಿ ಪೋಷಾಕಿಗೆ ಭಂಗ ತಂದಿರುವುದಂತೂ ನಿಜ.

ಸೌಹಾರ್ದ ಸಹಕಾರಿ ನಿಯಮಗಳಲ್ಲಿ ಸದಸ್ಯತ್ವ ನೋಂದಣಿಗೆ ಕೊಟ್ಟಿರುವ ಅವಕಾಶ ಮತ್ತು ವರ್ಗೀಕರಣವೇ ಈ ಮಾತನ್ನು ಸ್ಪಷ್ಟೀಕರಿಸುತ್ತವೆ. ಹತ್ತಕ್ಕಿಂತ ಕಡಿಮೆ ಇಲ್ಲದ, ಒಂದೇ ಕುಟುಂಬದವರಲ್ಲದ ವ್ಯಕ್ತಿಗಳು ಸೌಹಾರ್ದ ಸಹಕಾರಿಯನ್ನು ರೂಪಿಸಬಹುದು ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ ಇದು ಕುಟುಂಬಗಳ ಟ್ರಸ್ಟ್‌ ಸಾಧ್ಯತೆಗಳಿಗೆ ತಿಲಾಂಜಲಿ ಇಡುತ್ತದೆ ಎನ್ನಬಹುದು. ಆದರೆ ಈ ಮಾತಿನಲ್ಲಿಯೇ ಜನ ಮಾಡಬೇಕಾದ ಹೊಂದಾಣಿಕೆಯನ್ನೂ ಪರೋಕ್ಷವಾಗಿ ಹೇಳಲಾಗಿದೆ! ದತ್ತಿಯ ಕೆಲವು ಸದಸ್ಯರಾದರೂ ಕುಟುಂಬದಿಂದ ಹೊರಗಿದ್ದವರಾದರೆ ಸಾಕು. ಕಾಯ್ದೆಯಲ್ಲಿ, ಯಾವುದೇ ಭಾಗದಲ್ಲಿ 10 ಜನ ಸದಸ್ಯರು ಕೂಡ ಭಿನ್ನ ಕುಟುಂಬದವರಾಗಿರಬೇಕು ಎಂದು ಹೇಳಿಲ್ಲ ಎನ್ನುವುದನ್ನು ಗಮನಿಸಬಹುದು.

ಸದಸ್ಯತ್ವದ ಮಾದರಿಯಲ್ಲಿ ಸದಸ್ಯರು, ನಾಮಕರಣ ಸದಸ್ಯರು ಹಾಗೂ ಸಹಸದಸ್ಯರಿಗೆ ಕಾಯ್ದೆ ಮೊದಲು ಅವಕಾಶ ಕಲ್ಪಿಸಿತ್ತು. ಈ ಹಿಂದೆ ಬೇಕಾದವರನ್ನು ಸದಸ್ಯರನ್ನಾಗಿಸಲು ಹಾಗೂ ಕಿರಿಕ್‌ ಪಾರ್ಟಿಗಳನ್ನು ಸಹಸದಸ್ಯರನ್ನಾಗಿಸಿ ಅವರಿಗೆ ಮುಖ್ಯವಾಗಿ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳುವ ಅವಕಾಶವನ್ನು ಕಾಯ್ದೆಯಲ್ಲಿ ಮಾಡಿಕೊಡಲಾಗಿತ್ತು. ಇತ್ತೀಚಿನ ತಿದ್ದುಪಡಿಯ ಪ್ರಕಾರ ಸಹಸದಸ್ಯತ್ವವನ್ನು ತೆಗೆದು ಹಾಕಲಾಗಿದೆ. ನಾಮಮಾತ್ರ ಸದಸ್ಯತ್ವವನ್ನು ಉಳಿಸಿಕೊಂಡಿದ್ದು, ನಿರ್ದಿಷ್ಟ ಉದ್ದೇಶಕ್ಕಾಗಿ, ಮೂರು ವರ್ಷಗಳಿಗೆ ಮೀರದ ಅವಧಿಗಾಗಿ ನಾಮಮಾತ್ರ ಸದಸ್ಯರೆಂದು ಸೇರಿಸಿಕೊಳ್ಳಬಹುದು. ಆದರೆ ಸದಸ್ಯತ್ವಕ್ಕೆ ಅರ್ಹನಿದ್ದ ವ್ಯಕ್ತಿಯನ್ನು ನಾಮಮಾತ್ರ ಸದಸ್ಯರೆಂದು ಸೇರಿಸಿಕೊಳ್ಳುವಂತಿಲ್ಲ ಎನ್ನಲಾಗಿದೆ.

ಸದಸ್ಯರ ಅಧಿಕಾರ ಮೊಟಕಿಲ್ಲ!
ದತ್ತಿ ಕಾಯ್ದೆಯ ಭಾಗವಾಗಿದ್ದ ಇನ್ನೊಂದು ಪರಮಾಧಿಕಾರ ಸದಸ್ಯರ ಆಯ್ಕೆ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಈಗಿನ ತಿದ್ದುಪಡಿಯ ಅನ್ವಯ, ಸದಸ್ಯತ್ವಕ್ಕೆ ಅರ್ಹನಿದ್ದ ವ್ಯಕ್ತಿಗೆ ಸದಸ್ಯತ್ವವನ್ನು ನಿರಾಕರಿಸುವಂತಿಲ್ಲ ಮತ್ತು ಸದಸ್ಯತ್ವದ ಅರ್ಜಿ ಸ್ವೀಕರಿಸಿದ 60 ದಿನಗಳೊಳಗೆ ಅರ್ಜಿದಾರನಿಗೆ ಸದಸ್ಯತ್ವ ನಿರಾಕರಿಸಿದಲ್ಲಿ ಕಾರಣ ಸಹಿತ ನಿರಾಕರಣೆಯನ್ನು ತಿಳಿಸತಕ್ಕದ್ದು. ಹಾಗೆಯೇ ಸದಸ್ಯತ್ವದಿಂದ ತೆಗೆದುಹಾಕುವ ಪ್ರಾಧಾನವನ್ನು ಕೈಬಿಟ್ಟಿದ್ದು, ಯಾವುದೇ ಸದಸ್ಯನನ್ನು ತೆಗೆದು ಹಾಕುವಂತಿಲ್ಲ. ಆದರೆ ಸದಸ್ಯನು ತನ್ನ ಕರ್ತವ್ಯವನ್ನು ಪೂರೈಸದಿದ್ದಲ್ಲಿ ಕಾಯ್ದೆ ಅಥವಾ ಉಪಧಿಯ ಯಾವುದೇ ಅನರ್ಹತೆಗೆ ಗುರಿಯಾದಲ್ಲಿ ಅವನನ್ನು ಅನರ್ಹಗೊಳಿಸಬಹುದು.

ಆಡಳಿತ ಮಂಡಳಿ ಸದಸ್ಯರ ಕನಿಷ್ಠ ಮಿತಿಯನ್ನು ಒಂಭತ್ತರಿಂದ ಹನ್ನೊಂದಕ್ಕೆ ಹೆಚ್ಚಿಸಲಾಗಿದೆ. ಮತ್ತು ಗರಿಷ್ಠ ಮಿತಿಯನ್ನು ಹದಿನೈದರ ಬದಲಾಗಿ ಕಾರ್ಯಕ್ಷೇತ್ರಕ್ಕೆ ಅನುಗುಣವಾಗಿ ನಿಗದಿಪಡಿಸಿದೆ. ತಾಲ್ಲೂಕು ಮಟ್ಟಕ್ಕಿಂತ ಕೆಳಗಿನ ಎಲ್ಲ ಸಹಕಾರಿಗಳು 11, ತಾಲ್ಲೂಕು ಮಟ್ಟದ ಎಲ್ಲ ಸಹಕಾರಿಗಳು 13, ತಾಲ್ಲೂಕು ವ್ಯಾಪ್ತಿ ಮೀರಿದ ಆದರೆ ಜಿಲ್ಲಾ ಮಟ್ಟಕ್ಕಿಂತ ಕೆಳಗಿನ ಸಹಕಾರಿಗಳು 15. ತಾಲ್ಲೂಕು ವ್ಯಾಪ್ತಿ ಮೀರಿದ ಆದರೆ ಜಿಲ್ಲಾ ಮಟ್ಟಕ್ಕಿಂತ ಕೆಳಗಿನ ಸಹಕಾರಿ ಬ್ಯಾಂಕುಗಳು ಹಾಗೂ  ಜಿಲ್ಲಾ ವ್ಯಾಪ್ತಿ ಮೀರಿದ ಎಲ್ಲ ಸಹಕಾರಿಗಳು ತಲಾ 17, ಒಕ್ಕೂಟ ಸಹಕಾರಿಗಳು 19 ಮತ್ತು ಅಪೆಕ್ಸ್‌ ಸಹಕಾರಿಗಳು 21 ನಿರ್ದೇಶಕರನ್ನು ಚುನಾಯಿಸಬೇಕು.

ಸದಸ್ಯರ ಸಂಖ್ಯೆಗಿಂತ ಮೀಸಲಾತಿಯನ್ನು ಜಾರಿಗೊಳಿಸಿರುವುದು ಗಮನಾರ್ಹ. ಹೊಸ ನಿಯಮದ ಪ್ರಕಾರ, ಆಡಳಿತ ಮಂಡಲಿಯಲ್ಲಿ ಮೀಸಲಾತಿ ನಿಗದಿಪಡಿಸಿದ್ದು, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಒಂದು ಸ್ಥಾನ, ಹಿಂದುಳಿದ ವರ್ಗದವರಿಗೆ ಎರಡು ಸ್ಥಾನ ಮತ್ತು ಮಹಿಳೆಯರಿಗೆ ಎರಡು ಸ್ಥಾನವನ್ನು ಮೀಸಲಿಡಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಆ ವರ್ಗದ ಸದಸ್ಯರಿದ್ದಲ್ಲಿ ಮೇಲಿನ ಮೀಸಲಾತಿ ಅನ್ವಯಿಸುತ್ತದೆ. ಬಿಡಿ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಹೊಂದಿರುವ ಸಹಕಾರಿಗಳಿಗೆ ಮಾತ್ರ ಮೀಸಲಾತಿ ಅನ್ವಯಿಸುತ್ತದೆ. ಆದರೆ ಇಂತಹ ಸದಸ್ಯರಿದ್ದಲ್ಲಿ ಮಾತ್ರ ಎಂಬ ಉಲ್ಲೇಖ ಮೀಸಲಾತಿ ಕೊಡದಿರುವುದಕ್ಕೆ ಕಾರಣವಾಗಬಹುದು. 

ಆಡಳಿತ ಮಂಡಳಿಗೆ ಬ್ಯಾಂಕಿಂಗ್‌, ವ್ಯವಸ್ಥಾಪನೆ ಅಥವಾ ಹಣಕಾಸು ನಿರ್ವಹಣೆಯಲ್ಲಿ ಅನುಭವವಿರುವ ಇಬ್ಬರು ತಜ್ಞರನ್ನು ಸದಸ್ಯರನ್ನಾಗಿ ಸಹ ಆಯ್ಕೆ ಮೂಲಕ ಸೇರಿಸಿಕೊಳ್ಳಬೇಕು ಎಂಬ ಅಂಶದಿಂದ ಈ ಮಾದರಿಯ ಸಹಕಾರಿ ಸಂಸ್ಥೆಗಳು ವೃತ್ತಿಪರ ಮಾದರಿಯಲ್ಲಿ ವ್ಯವಹರಿಸಲು ಸಾಧ್ಯವಾಗಲು ಕಾರಣವಾಗಬಹುದು. ಆದರೆ ಅಂತಹ ಸದಸ್ಯರಿಗೆ ಚುನಾವಣೆಯಲ್ಲಿ ಮತದಾನದ ಅಥವಾ ಪದಾಧಿಕಾರಿಯಾಗುವ ಹಕ್ಕು ಇರುವುದಿಲ್ಲ ಎಂದು ತಿದ್ದುಪಡಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸರ್ಕಾರದ ಕೈಯಲ್ಲಿ ಚುನಾವಣೆ ಜುಟ್ಟು!
ಇದುವರೆಗೆ ಸಹಕಾರಿಯ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳನ್ನು ನಿಬಂಧಕರು ನೇಮಕ ಮಾಡುತ್ತಿದ್ದರು. ಪ್ರಸ್ತುತ ಸಹಕಾರಿ ಚುನಾವಣಾ ಆಯೋಗ ರಚಿಸಲಾಗುತ್ತಿದ್ದು, ಪದಾಧಿಕಾರಿಗಳ ಚುನಾವಣೆಯೂ ಸೇರಿದಂತೆ ಸಹಕಾರಿಯ ಎಲ್ಲಾ ರೀತಿಯ ಚುನಾವಣೆಯನ್ನು ನಡೆಸುವ ಸಂಪೂರ್ಣ ಉಸ್ತುವಾರಿ (ಮತದಾರರ ಪಟ್ಟಿ ತಯಾರಿಸುವುದೂ ಸೇರಿದಂತೆ) ಯನ್ನು ಚುನಾವಣಾ ಆಯೋಗಕ್ಕೆ ನೀಡಿದೆ. ಈ ಮೂಲಕ ಸರ್ಕಾರ ಸೌಹಾರ್ದ ಸಹಕಾರಿ ವ್ಯವಸ್ಥೆಯಲ್ಲೂ ತನ್ನ ಇಷಾನಿಷ್ಟಗಳ ಜಾರಿಗೆ ದಾರಿ ಮಾಡಿಕೊಂಡಿದೆ ಎನ್ನಬಹುದು. 

ಮುಖ್ಯಮಂತ್ರಿಯವರ ಶಿಫಾರಸ್ಸಿನ ಮೇರೆಗೆ ಮಾನ್ಯ ರಾಜ್ಯಪಾಲರು ಪ್ರಧಾನ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಚುನಾವಣಾ ಆಯೋಗಕ್ಕೆ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿರುತ್ತಾರೆ ಮತ್ತು ಸಹಕಾರಿಗಳ ಅಪರ ನಿಬಂಧಕರ ದರ್ಜೆಯ ಅಧಿಕಾರಿಯು ಆಯೋಗದ ಕಾರ್ಯದರ್ಶಿಯಾಗುತ್ತಾರೆ. ಚುನಾವಣಾ ಆಯುಕ್ತರ ಪದಾವಧಿಯು ಐದು ವರ್ಷಗಳಾಗಿರುತ್ತದೆ.
ಈ ಸಂಘದ ಸದಸ್ಯರಿಗೆ ಎಲ್ಲ ರೀತಿಯಲ್ಲಿ ಸಹಕಾರಿ ಸಂಘಗಳ ಸದಸ್ಯರ ಅಧಿಕಾರಗಳನ್ನು ಒದಗಿಸಲಾಗಿದೆ. ಅವರು ಆಡಳಿತ ಸಮಿತಿ ಸದಸ್ಯರಾಗಬಹುದು. ವಿವಿಧ ಹುದ್ದೆಗಳನ್ನು ಅಲಂಕರಿಸಬಹುದು. ಮೀಟಿಂಗ್‌ಗಳಲ್ಲಿ ಭಾಗವಹಿಸಬಹುದು.  ಸಭೆಯ ನಿರ್ಣಯ ಮತ್ತು ಚುನಾವಣೆಗಳಲ್ಲಿ ಮತ ಚಲಾಯಿಸಬಹುದು. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಸಂಘಟನೆಗಳು ಈ ಕಾಯ್ದೆಯಡಿ ನೋಂದಣಿಯಾಗಿದ್ದು, ಕೇವಲ ನಕಾರಾತ್ಮಕವಾಗಿಯೇ ಇದನ್ನು ನೋಡಬೇಕಾಗಿಲ್ಲ. ಸಹಕಾರಿ ತತ್ವದಡಿ ಕೆಲಸ ಮಾಡುತ್ತಿರುವ ಐದು ಅಥವಾ ಆರು ಗುಂಪುಗಳು ಈ ಕಾಯ್ದೆಯಡಿ ಲೀನಗೊಳ್ಳಬಹುದು. ಅಂತಹ ಸಂದರ್ಭದಲ್ಲಿ ನಿಜ ಅರ್ಥದಲ್ಲಿ ಸಂಘಟಿತರಾಗುವ ಗುಂಪು ಅದ್ಭುತವಾದ ಫ‌ಲಿತಾಂಶ ಕಂಡುಕೊಳ್ಳಲು ಸಾಧ್ಯವಿದೆ. ಅಷ್ಟೇಕೆ, ಒಂದೊಮ್ಮೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಹಕಾರಿಗಳು ಸಹಭಾಗಿತ್ವದಲ್ಲಿ ನಿರ್ದಿಷ್ಟ ಉದ್ಯಮ ನಡೆಸಲೂ ಇದರಲ್ಲಿ ಅವಕಾಶವಿದೆ. ಇತ್ತೀಚೆಗೆ ಈ ವ್ಯವಹಾರಕ್ಕೆ  ಮುಂಚಿತವಾಗಿಯೇ ರಿಸರ್ವ್‌ ಬ್ಯಾಂಕ್‌ನ ಒಪ್ಪಿಗೆ ಪಡೆದಿರಬೇಕು ಎಂದು ತಿದ್ದುಪಡಿ ತರಲಾಗಿದೆ. ಅದೇ ರೀತಿ ಇನ್ನೊಂದು ಸಂಘಟನೆಗೆ ಸಹಾಯ ಒದಗಿಸಿ ಉತ್ತೇಜಿಸಬಹುದು. ಬೇರೆ ಮಾತಿನಲ್ಲಿ ಹೇಳುವುದಾದರೆ, ಇಲ್ಲಿನ ಲಾಭವನ್ನು ಬೇರೆಡೆ ತೊಡಗಿಸುವ ಸುವರ್ಣಾವಕಾಶ! ಯಾವುದೇ ರಾಜಕೀಯ ಪಕ್ಷ, ಕೋಮು ಸಂಘಟನೆಯಿಂದ  ಸೌಹಾರ್ದ ಸಂಸ್ಥೆ ದೇಣಿಗೆ ಪಡೆಯುವುದನ್ನು ನಿರ್ಬಂಧಿಸಲಾಗಿದೆ. 

ಈ ಸಂಸ್ಥೆಗಳು ಯಾವುದೇ ಖಾಸಗಿ ಫೈನಾನ್ಸ್‌ಗೆ ಕಡಿಮೆ ಇಲ್ಲದಂತೆ ಎಲ್ಲ ಮಾದರಿಯ ಬ್ಯಾಕಿಂಗ್‌ ವ್ಯವಹಾರಗಳನ್ನೂ ನಡೆಸಬಹುದು. ಸಂಸ್ಥೆಗೆ ಮೂಲ ಬಂಡವಾಳ ಸಂಗ್ರಹಿಸಲು ಷೇರು ಮಾತ್ರವಲ್ಲದೆ ಠೇವಣಿ, ಡಿಬೆಂಚರ್‌, ಸಾಲ ಮತ್ತು ದೇಣಿಗೆಯನ್ನು ಅವಲಂಬಿಸಬಹುದಾಗಿದೆ. 2009ರ ವೇಳೆಗೇ ದೇಶದ ಎಂಟು ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ ಎಂದರೆ ಇದರ ಪ್ರಭಾವವನ್ನು ಲೆಕ್ಕಹಾಕಬಹುದು.

ಸಹಕಾರಿ ಸಂಸ್ಥೆಯಲ್ಲಿ ಸದಸ್ಯರಾದವರೊಂದಿಗೆ ಮಾತ್ರ ವ್ಯವಹಾರ ನಡೆಸಬಹುದು. ಆ ಮಟ್ಟಿಗೆ ಸೌಹಾರ್ದ ಸಂಸ್ಥೆಗಳ ಕಾರ್ಯ ಬಾಹುಳ್ಯ ಪರೀತ ವಿಸ್ತಾರವಾದುದು. ಸಂಸ್ಥೆಯ  ಚಟುವಟಿಕೆಗಳ ತನಿಖೆ ನಡೆಸುವ ಪರಮಾಧಿಕಾರ ಸಂಬಂಧಿಸಿದ ರಿಜಿಸ್ಟಾರ್‌ರಿಗೆ ಮಾತ್ರ ನೀಡಲಾಗಿದೆ. ಇವರೂ ಕೂಡ ಒಟ್ಟು ಸದಸ್ಯರ ಮೂರನೇ ಒಂದು ಭಾಗದ ಕಾರ್ಯಕಾರಿ ಮಂಡಲಿ ಸದಸ್ಯರು ಅಥವಾ ಒಟ್ಟು ಸದಸ್ಯರ ಶೇ. 10ಕ್ಕಿಂತ ಕಡಿಮೆ ಇಲ್ಲದ ಸದಸ್ಯರು ನಿರ್ದಿಷ್ಟ ಮಾದರಿಯಲ್ಲಿ, ನಿಶ್ಚಿತ ಶುಲ್ಕ ಕಟ್ಟಿಯೇ ತನಿಖೆಗೆ ಆಗ್ರಹಿಸಬಹುದು. ಇದು ಒಂದು ರೀತಿಯಲ್ಲಿ ಎರಡು ಅಲಗಿನ ಖಡ್ಗದ್ದಂತೆ ಎಂಬುದು ನಿಜ. ಅದೇ ರೀತಿ ಇಂದು ಬಹುಸಂಖ್ಯಾತ ಸಹಕಾರಿ ವ್ಯವಸ್ಥೆಗಳು ಹುಳುಕು ರಾಜಕೀಯದಿಂದಾಗಿಯೇ ಹಿನ್ನಡೆಯಲ್ಲಿವೆ ಎಂಬುದನ್ನೂ ಕೂಡ ನೆನಪಿಸಿಕೊಳ್ಳಬೇಕಾಗುತ್ತದೆ.

ಸದರಿ ಸೌಹಾರ್ದ ಸಹಕಾರಿ ಸಂಸ್ಥೆಯ ಸ್ಥಾಪನೆ, ಅದರ ಬೈಲಾ, ಲೀನ ಪ್ರಕ್ರಿಯೆ ಮೊದಲಾದ ಕೆಲವು ಅಂಶಗಳನ್ನು ಯಾವುದೇ ನ್ಯಾಯಾಲಯದ ವ್ಯಾಪ್ತಿಯಲ್ಲಿ ಪ್ರಶ್ನಿಸಲು ಕಾಯ್ದೆಯಲ್ಲಿಯೇ ರಕ್ಷಣೆ ಒದಗಿಸಲಾಗಿದೆ. ಇದು ಕಿತಾಪತಿಗಳಿಗೆ ಸಮಸ್ಯೆಯಾಗಬಹುದು. ಆದರೆ ರಿಜಿಸ್ಟಾರ್‌ರಿಗೆ ದೂರು ಕೊಡುವ ಸಾಧ್ಯತೆಯನ್ನು ಮುಕ್ತವಾಗಿರಿಸಲಾಗಿದೆ.

ಸೌಹಾರ್ದ ಸಹಕಾರಿ ಕಾಯ್ದೆಯ ಪೂರ್ಣ ವರ ಇಂಗ್ಲೀಷ್‌, ಕನ್ನಡಗಳಲ್ಲಿ  ಅಂತಜಾìಲದಲ್ಲಿ ಲಭ್ಯ. ಈ ಕೊಂಡಿಯನ್ನು ಬಳಸಿ :http://www.souharda.coop/downloads.html  

ಸೌಹಾರ್ದ ಕಾಯ್ದೆಯ ಅನುಕೂಲಗಳು
ಸಹಕಾರಿ ಕಾಯ್ದೆಯ ಬಳಕೆಗಿಂತ ಸಂಸ್ಥೆಯೊಂದಕ್ಕೆ ಸೌಹಾರ್ದ ಕಾಯ್ದೆಯ ಅನುಸರಣೆಯಿಂದ ಹೆಚ್ಚು ಲಾಭವಿದೆ ಎಂಬುದು ಹಳೆಯ ವಾದ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಈ ಕಾಯ್ದೆಯ ಅನುಕೂಲಗಳನ್ನು ಪಟ್ಟಿ ಮಾಡಿದೆ.

1.    ಉಪವಿಧಿ ತಿದ್ದುಪಡಿಯನ್ನು ಸಹಕಾರಿಯ ಕ್ರಿಯಾಶೀಲ ಸದಸ್ಯರು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದ ನಂತರ ನಿಬಂಧಕರು ತಿದ್ದುಪಡಿ ಮಾಡಿ ಆದೇಶ ಹೊರಡಿಸಬಹುದು. ನಿಬಂಧಕರು ಸ್ವಯಂ ನಿರ್ಧಾರದಿಂದ ನೇರವಾಗಿ ಉಪವಿಧಿಗಳ ತಿದ್ದುಪಡಿ ಮಾಡಿ ಆದೇಶ ನೀಡಲು ಅವಕಾಶ ಇರುವುದಿಲ್ಲ.

2.    ಸಹಕಾರಿಯ ಆಡಳಿತ ಮಂಡಳಿಯನ್ನು ಸಂಯುಕ್ತ ಸಹಕಾರಿಯು ಮಾತ್ರ ರದ್ದುಗೊಳಿಸುವ ಅಧಿಕಾರವನ್ನು ಹೊಂದಿರುತ್ತದೆ.

3.    ಸಾಮಾನ್ಯ ಸಭೆಯಲ್ಲಿ ಲೆಕ್ಕಪರಿಶೋಧಕರು ಕಡ್ಡಾಯವಾಗಿ ಉಪಸ್ಥಿತರಿರಬೇಕಿರುತ್ತದೆ. ಅಗತ್ಯವಿದ್ದಲ್ಲಿ ಅಥವಾ ಸದಸ್ಯರು ಬಯಸಿದಲ್ಲಿ ಸದಸ್ಯರ ಪ್ರಶ್ನೆಗೆ ಲೆಕ್ಕಪರಿಶೋಧಕರು ಉತ್ತರಿಸಬೇಕಾಗುತ್ತದೆ.

4.    ಮುಕ್ತ ಸದಸ್ಯತ್ವದ ಅವಕಾಶ ಒದಗಿಸಲಾಗಿದೆ. ಸದಸ್ಯತ್ವದ ವಿಷಯದಲ್ಲಿ ನಿಬಂಧಕರು ಅಥವಾ ಸಂಯುಕ್ತ ಸಹಕಾರಿ ನಿರ್ದೇಶನ ನೀಡಲು ಅವಕಾಶವಿರುವುದಿಲ್ಲ. ಸಹಕಾರಿಯ ಆಡಳಿತ ಮಂಡಳಿಯು ಸದಸ್ಯತ್ವದ ಕುರಿತು ನಿರ್ಣಯ ತೆಗೆದುಕೊಳ್ಳಬೇಕಿರುತ್ತದೆ. ಸದಸ್ಯತ್ವದ ಕುರಿತು ಯಾವುದೇ ಮೇಲ್ಮನವಿ ಇದ್ದಲ್ಲಿ ಸಾಮಾನ್ಯ ಸಭೆಯು ತೀರ್ಮಾನಿಸಬಹುದಾಗಿರುತ್ತದೆ.

5.    ಈ ಕಾಯ್ದೆಯಲ್ಲಿ ಸದಸ್ಯರಿಗೆ ಶಾಸನಬದ್ಧ ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಸದಸ್ಯರು ಸೌಹಾರ್ದ ಸಹಕಾರಿಯೊಂದಿಗೆ ಕನಿಷ್ಠ ವ್ಯವಹಾರ ಮಾಡದಿದ್ದಲ್ಲಿ ಹಾಗೂ ಸತತ ಮೂರು ಸಾಮಾನ್ಯ ಸಭೆಯಲ್ಲಿ ಗೈರುಹಾಜರಾಗುವುದರ ಮೂಲಕ ಶಾಸನಬದ್ಧ ಕರ್ತವ್ಯ ನಿರ್ವಹಿಸದಿದ್ದಲ್ಲಿ ಸದಸ್ಯತ್ವದಿಂದ ಅನರ್ಹಗೊಳಿಸಬಹುದಾಗಿರುತ್ತದೆ.

6.    ಆಡಳಿತ ಮಂಡಳಿಯು 1/3 ಸದಸ್ಯರ ಕೋರಿಕೆಯ ಮೇರೆಗೆ ಅಥವಾ ಸಹಕಾರಿಯ 1/10 ಸದಸ್ಯರ ಕೋರಿಕೆಯ ಮೇರಿಗೆ ಮಾತ್ರ ನಿಬಂಧಕರು ವಿಚಾರಣೆ ಮತ್ತು ತನಿಖೆಯನ್ನು ನಡೆಸಬಹುದಾಗಿರುತ್ತದೆ. ನಿಬಂಧಕರು ಸ್ವಯಂಪ್ರೇರಿತ ವಿಚಾರಣೆ ನಡೆಸುವಂತಿಲ್ಲ.

7.    ಸೌಹಾರ್ದ ಸಹಕಾರಿಗಳು ಆಸ್ತಿ ಖರೀದಿ ಅಥವಾ ವಿಲೇವಾರಿ ಮಾಡಬೇಕಿದ್ದಲ್ಲಿ ಸಾಮಾನ್ಯ ಸಭೆಯ ಅನುಮೋದನೆ ಪಡೆದು ಮಾಡಬಹುದಾಗಿರುತ್ತದೆ. ನಿಬಂಧಕರ ಅನುಮತಿ ಪಡೆಯುವ ಅಗತ್ಯವಿಲ್ಲ.

8.    ಚುನಾವಣೆಯನ್ನು ನಿಗದಿತ ಸಮಯದೊಳಗೆ ನಡೆಸುವುದು ಕಡ್ಡಾಯ. ಚುನಾವಣೆಯನ್ನು ಮೂಂದೂಡಲು ಅವಕಾಶವಿರುವುದಿಲ್ಲ.

9.    ಸರ್ಕಾರ ಅಥವಾ ನಿಬಂಧಕರು ಸಹಕಾರಿಯ ಕಾರ್ಯಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸಿ ನಿರ್ದೇಶನ ನೀಡುವಂತಿಲ್ಲ. ಕರ್ತವ್ಯ ಲೋಪ ಉಂಟಾಗಿದ್ದಲ್ಲಿ ಸಂಯುಕ್ತ ಸಹಕಾರಿಯು ನಿರ್ದೇಶನ ನೀಡಬಹುದಾಗಿರುತ್ತದೆ.

10.    ಯಾವುದೇ ಬ್ಯಾಂಕ್‌ಗಳೊಂದಿಗಿನ ವ್ಯವಹಾರಕ್ಕೆ ಮುಕ್ತ ಅವಕಾಶ ಒದಗಿಸಲಾಗಿದೆ.

11.    ಪೂರಕ ಸಂಸ್ಥೆ ಪ್ರಾರಂಭಿಸಲು ನಿಬಂಧಕರ ಅನುಮತಿಯ ಅಗತ್ಯವಿರುವುದಿಲ್ಲ. ಸಾಮಾನ್ಯ ಸಭೆಯ ಅನುಮೋದನೆ ಸಾಕಿರುತ್ತದೆ.

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

ಅಡ್ಡಹೊಳೆಯಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

ಅಡ್ಡಹೊಳೆ ಗ್ರಾಮದಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

13(1

Udupi: ಕೊರಗ ಸಮುದಾಯಕ್ಕೆ ಸಮಸ್ಯೆಗಳ ಸರಣಿ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

12

Mangaluru: ಕಾಂಕ್ರೀಟ್‌ ರಸ್ತೆ ನಿರ್ಮಿಸಿದರೂ ಫುಟ್‌ಪಾತ್‌ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.