ಹೊಲಿಗೆಯಿಂದ ಬಯಲಿಗೆ…
ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರೈತ ಮಹಿಳೆ
Team Udayavani, Sep 23, 2019, 5:00 AM IST
ರೈತ ಮಹಿಳೆಯೊಬ್ಬರು ಜಮೀನಿನಲ್ಲಿ ಬಿತ್ತನೆ, ಕಳೆ ಕೀಳುವುದು, ಕಟಾವು, ಪಶುಪಾಲನೆ, ಹೈನುಗಾರಿಕೆ ಮುಂತಾದ ಕೆಲಸಗಳನ್ನು ನಿರ್ವಹಿಸಿ, ಹಲ ಬಗೆಯ ಬೆಳೆಗಳನ್ನು ತೆಗೆದಿದ್ದಾರೆ. ಖರ್ಚು ಕಡಿಮೆ ಮಾಡುವ ಸಲುವಾಗಿ ಸಾವಯವ ಪದ್ಧತಿಯನ್ನು ಅನುಷ್ಠಾನಗೊಳಿಸಿ ಅದರಿಂದ ಇಳುವರಿಯನ್ನೂ ಹೆಚ್ಚಿಸಿಕೊಂಡಿದ್ದಾರೆ.
ಸುನೀತಾ ಮೇಟಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದವರು. 2014ರಲ್ಲಿ ಪತಿಯನ್ನು ಕಳೆದುಕೊಂಡ ಅವರಿಗೆ ಇಬ್ಬರು ಮಕ್ಕಳ ಪೋಷಣೆ ಮತ್ತು ಹೊಲ-ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಬಂತು. ಟೈಲರಿಂಗ್ ಕೆಲಸದ ಸಹಾಯದಿಂದ, ಸಂಸಾರವನ್ನು ಸಾಗಿಸುತ್ತಿದ್ದರು. ಆದರೆ 5 ಎಕರೆ ಕೃಷಿ ಭೂಮಿಯ ಕೆಲಸದ ಜೊತೆಗೆ ಹೊಲಿಗೆಯ ಉದ್ಯೋಗ ಕಷ್ಟದಾಯಕವಾಗಿತ್ತು. ಹೀಗಾಗಿ, ಹೊಲಿಗೆ ಕೆಲಸವನ್ನು ನಿಲ್ಲಿಸಿ, ಸಂಪೂರ್ಣವಾಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡರು.
ಸಸ್ಯಜನ್ಯ ಕೀಟನಾಶಕ ಸಿಂಪಡಣೆ
ಒಂದು ಏಕರೆ ಜಮೀನಿನಲ್ಲಿ ಅರಿಶಿನ ಮತ್ತು ಸ್ವೀಟ್ ಕಾರ್ನ್, ಒಂದು ಎಕರೆಯಲ್ಲಿ ಸೋಯಾ ಬೀನ್ ಮತ್ತು ಕೊರಲೆ, ಒಂದೂವರೆ ಏಕರೆಯಲ್ಲಿ ಸಾವಯವ ಕಬ್ಬು, ಅರ್ಧ ಏಕರೆಯಲ್ಲಿ ಉಳ್ಳಾಗಡ್ಡಿ ಹಾಗೂ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವರ ಹೊಲದಲ್ಲಿ ಒಂದು ಕೊಳವೆಬಾವಿಯಿದ್ದು, ಹನಿ ನೀರಾವರಿ ಮುಖಾಂತರ 5 ಎಕರೆ ಕೃಷಿ ಭೂಮಿಗೆ ನೀರು ನೀಡುತ್ತಿದ್ದಾರೆ. ಸುನೀತಾರವರು ಸಾವಯವ ಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿದೆ. ಜೊತೆಗೆ, ನೀರಿನ ಸಮರ್ಪಕ ಬಳಕೆಯಿಂದಲೂ ಯಶಸ್ಸು ಕಾಣಬಹುದು ಎಂಬುದನ್ನು ಕಂಡುಕೊಂಡಿದ್ದಾರೆ. ಜೀವಾಮೃತ ಮತ್ತು ಸಸ್ಯಜನ್ಯ ಕೀಟನಾಶಕಗಳನ್ನು ತಯಾರಿಸಿ ಕೃಷಿಯಲ್ಲಿ ಅಳವಡಿಸಿದ್ದಾರೆ. ಒಟ್ಟಾರೆ ತಮ್ಮ 5 ಎಕರೆ ಜಮೀನಿನಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಕುಟುಂಬಕ್ಕೆ ಸ್ಥಿರ ಆದಾಯ ಬರುವಂತೆ ಶ್ರಮಿಸುತ್ತಿದ್ದಾರೆ.
ಹೆಚ್ಚು ಆದಾಯ
ಕಬ್ಬು ಬೆಳೆಯೊಂದಿಗೆ ಅಂತರ ಬೆಳೆಯಾಗಿ ತರಕಾರಿಗಳನ್ನು ಬೆಳೆದು, ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಕೇವಲ ಬೆಂಡೆಕಾಯಿ ಬೆಳೆಯಿಂದ 25,000 ರೂ., ನುಗ್ಗೆಕಾಯಿಯಿಂದ 25,000 ರೂ. ವಾರ್ಷಿಕ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಾಜು 60 ರಿಂದ 70 ಟನ್‌ಗಳಷ್ಟು ಕಬ್ಬು ಬೆಳೆಯುತ್ತದೆ. ವರ್ಷಕ್ಕೆ 1 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯ ಪಡೆಯುತ್ತಾರೆ. ಸ್ವೀಟ್ ಕಾರ್ನ್ನಿಂದ 40,000 ರೂ., ಅರಿಶಿನ ಪುಡಿಯಿಂದ 80,000 ರೂ. ಗಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಮಧ್ಯವರ್ತಿಗಳ ಕಾಟವಿಲ್ಲ
ಕೃಷಿ ಉತ್ಪನ್ನಗಳ ಮಾರಾಟಕ್ಕೆ ಹೊಸದೊಂದು ದಾರಿ ಹುಡುಕಿದ್ದಾರೆ ಸುನೀತಾ. ಮಗಳೊಂದಿಗೆ ಬಾಗಲಕೋಟೆ, ಬೀಳಗಿ ಹಾಗೂ ಗದ್ದನಕೇರಿ ಕ್ರಾಸ್ ಸಂತೆಗಳಿಗೆ ಹೋಗಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬೀಳಗಿ ಕೃಷಿ ಇಲಾಖೆಯ ಆತ್ಮಾ ಗುಂಪಿನ ಸದಸ್ಯರಾಗಿ ಸೇರಿದ ನಂತರ ಜೀವನ ಶೈಲಿ ಹಾಗೂ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಿಂದಾಗಿ ಆರ್ಥಿಕ ಚೇತರಿಕೆ ಕಂಡುಕೊಂಡಿದ್ದಾರೆ. ಕೃಷಿ ಇಲಾಖೆಯ ಗೌರಮ್ಮ ಚನ್ನಪ್ಪನವರ ಹಾಗೂ ಸುಮಂಗಲಾ ಜಕರಡ್ಡಿ ಅವರನ್ನು ಸದಾ ಸ್ಮರಿಸುತ್ತಾರೆ ಸುನೀತಾ.
ಹಣ್ಣು- ಹೈನುಗಾರಿಕೆ
ಇವರ ಹೊಲದಲ್ಲಿ 80 ಹೆಬ್ಬೇವು, 40 ತೆಂಗು, 4 ಮಾವು ಮುಂತಾದ ಬಹು ವಾರ್ಷಿಕ ಬೆಳೆಗಳನ್ನು ಬದುವಿನ ಮೇಲೆ ಬೆಳೆದು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಅಲ್ಲದೇ 2 ನೇರಳೆ, 2 ಸೀತಾಫಲ, ಬೆಟ್ಟದ ನೆಲ್ಲಿ, ಹುಣಸೆ, ಪೇರಲ, ನಿಂಬೆ, ಕರಿಬೇವು ಗಿಡಗಳನ್ನು ಬಳಸುತ್ತಿದ್ದಾರೆ. ಹೈನುಗಾರಿಕೆಯಲ್ಲಿಯೂ ತೊಡಗಿಕೊಂಡಿರುವ ಇವರು, 1 ಜರ್ಸಿ ಆಕಳು, 1 ಮುರ್ರಾ ಎಮ್ಮೆ, 1 ಜವಾರಿ ಆಕಳನ್ನು ಸಾಕಿದ್ದಾರೆ. ಹೈನುಗಾರಿಕೆಯಿಂದ ವಾರ್ಷಿಕ 50,000 ರೂ. ಆದಾಯ ಗಳಿಸುತ್ತಿದ್ದಾರೆ.
– ಸುರೇಶ ಗುದಗನವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.