ಅರಣ್ಯ ನರ್ಸರಿಗಳಲ್ಲಿ ಖುಷಿಯ ಸೆಲೆ
ಕಾಡು ತೋಟ- 21
Team Udayavani, Jun 10, 2019, 6:00 AM IST
ಸಸ್ಯ ಬೆಳೆಸುವಲ್ಲಿ ಅರಣ್ಯ ನರ್ಸರಿಗಳ ಅನುಭವ ಪ್ರಮುಖವಾದುದು. ಕಾಡಿನ ನೂರಾರು ಸಸ್ಯ ಜಾತಿ ಗುರುತಿಸಿ, ಉತ್ತಮ ಬೀಜ ಸಂಗ್ರಹಿಸಿ, ಬೀಜೋಪಚಾರ ಮಾಡುತ್ತ ವರ್ಷಗಳ ಕಾಲ ಇಲ್ಲಿ ಸಸಿ ಪೋಷಿಸಲಾಗುತ್ತದೆ. ಸಸಿ ಬೆಳೆಸುವ ಕಾಯಕದಲ್ಲಿ 30-40 ವರ್ಷಗಳ ಅಪಾರ ಅನುಭವವಿರುವ ವಾಚ್‌ಮನ್, ಗಾರ್ಡ್‌ಗಳು ಯಶಸ್ಸಿನ ಹಿಂದಿದ್ದಾರೆ.
ನೆಡುವ ಸಸ್ಯಗಳ ಬಗ್ಗೆ ಪ್ರೀತಿ ಮೂಡಲು ಅರಣ್ಯ ನರ್ಸರಿಯ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬೇಸಿಗೆಯ ಪ್ರಖರ ಬಿಸಿಲಿಗೆ ಭೂಮಿ ಬಿಸಿಯಾಗುತ್ತದೆ. ಜೂನ್ ಮೊದಲವಾರದಲ್ಲಿ ಮುಂಗಾರು ಮಳೆಗೆ ಇಳೆಯ ಸ್ವರೂಪ ಬದಲಾಗುತ್ತದೆ. ಅಬ್ಬರದ ಮಳೆ ಶುರುವಾಗಿ 20-25 ದಿನಗಳ ಕಾಲ ಭೂಮಿಯ ಒಂದೆರಡು ಅಡಿ ಆಳದವರೆಗೂ ಬಿಸಿ ಇರುತ್ತದೆ. ಈ ಸೂಕ್ತ ಸಮಯಕ್ಕೆ ಸಸಿ ನೆಟ್ಟರೆ, ನೆಲಕ್ಕೆ ಬೀಜ ಊರಿದರೆ ಸಸ್ಯಾಭಿವೃದ್ಧಿ ಉತ್ತಮವಾಗಿರುತ್ತದೆ. ಪ್ರತಿ ವರ್ಷ ಲಕ್ಷಾಂತರ ಸಸಿ ಬೆಳೆಸುವ ಅರಣ್ಯ ಇಲಾಖೆ ಮಳೆ ಬಿದ್ದ ತಕ್ಷಣ ನೆಡುವ ಕಾರ್ಯ ಶುರುಮಾಡುತ್ತದೆ. ಅರಣ್ಯೀಕರಣದ ಸಂಭ್ರಮಕ್ಕೆ ಮಳೆಯ ಮೊದಲ ದಿನಗಳು ಸಾಕ್ಷಿಯಾಗುತ್ತವೆ. ಮಳೆಯ ಪರಿಸ್ಥಿತಿ ಗಮನಿಸಿಕೊಂಡು ಸಸಿಯನ್ನು ನಾಟಿ ಮಾಡುವುದು ನಿರ್ಧಾರವಾಗಿದೆ.
ಅನುಭವದಿಂದ ಕಲಿತರು
ಅರಣ್ಯೀಕರಣ ಮಳೆಗಾಲದಲ್ಲಿ ನಡೆಯುವುದಕ್ಕೆ, ಅಗತ್ಯ ಸಸ್ಯಾಭಿವೃದ್ಧಿಯ ಪೂರ್ವತಯಾರಿ ನರ್ಸರಿಗಳಲ್ಲಿರಬೇಕು. ಸರಿಸುಮಾರು ಒಂದು ವರ್ಷಗಳ ಕಾಲ ಶಿಶು ಸಂರಕ್ಷಿಸಿದಂತೆ ಸಸ್ಯಪಾಲನೆಯ ಕೆಲಸ ನಡೆಯುತ್ತದೆ. ಹತ್ತಾರು ಕಿ.ಲೋ ುàಟರ್ ದೂರದಿಂದ ಉತ್ತಮ ಬೀಜ ಸಂಗ್ರಹಿಸಬೇಕು. ಬೀಜ ಮೊಳಕೆಗೆ ಮಡಿಗಳಲ್ಲಿ ಹಾಕಬೇಕು. ತೇಗದ ಬೀಜಗಳನ್ನು ಸಗಣಿ ನೀರಿನಲ್ಲಿ ನೆನೆಹಾಕಿ ನೆರಳಲ್ಲಿ ಒಣಗಿಸಬೇಕು. ಸತತ ನಾಲ್ಕು ವಾರ ಕಾಲ ಬೀಜೋಪಚಾರ ಸಿಕ್ಕರಷ್ಟೇ ಅದು ಮೊಳಕೆಯಾಗುತ್ತದೆ. ಅಣಲೆಯ ಬೀಜದ ದಪ್ಪ ಕವಚಕ್ಕೆ ಮರದ ಸುತ್ತಿಗೆಯಲ್ಲಿ ಪೆಟ್ಟು ಹಾಕಿ ತುಸು ಒಡೆದು ಮಣ್ಣಿಗೆ ಹಾಕಿದರೆ ಮಾತ್ರ ಸಸಿಯಾಗುತ್ತದೆ. ಉಪ್ಪಾಗೆ, ಮುರುಗಲು ಬೀಜ ಕವಚದ ಸುತ್ತಲಿನ ಹಣ್ಣಿನ ಹುಳಿ ಅಂಶವನ್ನು ಸ್ವತ್ಛಗೊಳಿಸಿದರೆ ಮಾತ್ರ ಮೊಳಕೆ ಸಲೀಸಾಗುತ್ತದೆ. ಮರಳಿನಲ್ಲಿ ಹಾಕಿ ಹುಳಿ ತೆಗೆಯುವ ಕಾರ್ಯ ನಡೆಯಬೇಕು. ಅತ್ತಿ, ಮತ್ತಿ, ಬೀಟೆ, ನೆಲ್ಲಿ, ನೇರಳೆ, ಮಾವು, ಬೇವು ಹೀಗೆ ನೂರಾರು ಸಸ್ಯ ಬೆಳೆಸಲು ತಂತ್ರಗಳು ಬೇರೆ ಬೇರೆಯಾಗಿವೆ. ಕಾಡಿನ ಮೂಲೆಯಲ್ಲಿ ಮರದಡಿ ಪ್ರಾಣಿ, ಪಕ್ಷಿಗಳ ಹಿಕ್ಕೆಯಲ್ಲಿ ಜನಿಸಿದ ಎಳೆ ಸಸಿ ಕಿತ್ತು ಪಾಲಿಥೀನ್ ಚೀಲಕ್ಕೆ ಹಾಕಿ ಸಸಿ ಬೆಳೆಸುವ ವಿಧಾನಗಳಿವೆ. ಅತ್ಯುತ್ತಮ ಬೀಜ ಸಂಗ್ರಹಿಸಿ ಸಸಿ ಬೆಳೆಸುವ ತಜ್ಞ ಕೆಲಸಗಾರರು ಅರಣ್ಯ ಕಾಲೇಜುಗಳಲ್ಲಿ ಓದಿದವರಲ್ಲ, ಕಾಡು ಓದಿ ಅನುಭವದಲ್ಲಿ ಕಲಿತವರು.
ಕೆಂಪು ಮಣ್ಣಿಗೆ ಮರಳು ಗೊಬ್ಬರ ಸೇರಿಸಿ ಪಾಲಿಥಿನ್ ಚೀಲದಲ್ಲಿ ಹಾಕಿ ಬೀಜ, ಸಸಿ ನೆಡಬೇಕು. ಹದವಾಗಿ ನೀರುಣಿಸುತ್ತ ಕಳೆ ನಿಯಂತ್ರಣವಾಗಬೇಕು. ಬಿಸಿಲು, ನೆರಳು ಗಮನಿಸಿಕೊಂಡು ಸೂಕ್ತವಾತಾವರಣದಲ್ಲಿ ಬೆಳೆಸಬೇಕು. ಎಳೆ ಶಿಶು ಬೆಳೆಸಲು ಅಮ್ಮಂದಿರು ಆಯಾಸ, ನಿದ್ದೆ ಮರೆಯುವಂತೆ ಬೆಳೆಸುವ ಕೆಲಸ ನಾಜೂಕಿನದು. ಮಡಿಗೆ ಹಾಕಿದ ಬೀಜಗಳನ್ನು ಇಲಿ, ಹೆಗ್ಗಣಗಳ ಬಾಯಿಂದ ಬಚಾವು ಮಾಡಬೇಕು. ಮೊಳಕೆ ಮೂಡಿದ ತಕ್ಷಣ ಆಗಮಿಸುವ ಇರುವೆ ಸೈನ್ಯಕ್ಕೆ ತಡೆ ಒಡ್ಡಬೇಕು. ಮೊದಲ ಎಳೆ ಕುಡಿ, ಚಿಗುರೆಂದರೆ ಹುಳುಗಳಿಗೆ ಪಂಚಪ್ರಾಣ. ಎಲೆಗಳಂತೆ ಹಸಿರು, ಕೆಂಪಾಗಿರುವ ಇವು ಕಳ್ಳ ದಾರಿಯಲ್ಲಿ ನುಸುಳಿ ತಿನ್ನುತ್ತವೆ. ಮಂಗ, ಜಿಂಕೆಗಳು ಚಿಗುರು ಮೆಲ್ಲಲು ಹೊಂಚು ಹಾಕುತ್ತವೆ. ಬೇಸಿಗೆಯಲ್ಲಿ ಹಸಿದ ಜಿಂಕೆಗಳಿಗೆ ಅರಣ್ಯ ನರ್ಸರಿಗಳು ನೀರು-ಆಹಾರ ದೊರೆಯುವ ಇಷ್ಟದ ಜಾಗವಾಗಿದೆ. ನರ್ಸರಿಯ ಸುತ್ತ ಬಲೆ ನಿರ್ಮಿಸಿ ಸಸ್ಯಗಳಿಗೆ ರಾತ್ರಿ ಕಾವಲು ಹಾಕಬೇಕು. ಮಧ್ಯಾಹ್ನ ಉರಿ ಬಿಸಿಲಿನ ಎರಡು ಗಂಟೆಗೆ ಮಂಗಗಳು ದಾಳಿ ಮಾಡುತ್ತವೆ. ಕೆಲಸಗಾರರಿಲ್ಲದ ಸಮಯ ನೋಡಿಕೊಂಡು ಚಿಗುರು ತಿಂದು ಪರಾರಿಯಾಗುತ್ತವೆ. ಹಾಗಾಗಿ, ಕಣ್ಣಲ್ಲಿ ಕಣ್ಣಿಟ್ಟು ಸಸ್ಯ ಬೆಳೆಸಬೇಕು.
ಸಸಿ ಬೆಳೆವ ಕಷ್ಟ
ಕಾಡು ತೋಟ ಬೆಳೆಸುವವರು ಅರಣ್ಯ ನರ್ಸರಿಗಳನ್ನು ಆಗಾಗ ನೋಡುತ್ತಿದ್ದರೆ ಉಪಯುಕ್ತ ಉತ್ತಮ ಸಸಿ ಸಂಗ್ರಹಿಸಬಹುದು. ಅಲ್ಲಿನ ಕೆಲಸಗಾರರ ಜೊತೆಗಿನ ಆಪ್ತ ಒಡನಾಟ ಹಲವು ಸಂಗತಿಗಳನ್ನು ಕಲಿಸುತ್ತದೆ. ಕಾಡಲ್ಲಿ ನೋಡಿದ ಉತ್ತಮ ಸಸ್ಯದ ಬೀಜ, ಅಪರೂಪದ ಸಸಿಯನ್ನು ನೀಡುವುದು, ಸಸಿ ಬೆಳೆಸುವ ಹೊಸ ವಿಧಾನಗಳ ಬಗ್ಗೆ ಚರ್ಚಿಸುವುದು… ಹೀಗೆ ಹಲವು ರೀತಿಯಲ್ಲಿ ನರ್ಸರಿಗಳಿಗೆ ನಾವು ನೆರವಾಗಬಹುದು. ಮಾವು, ನೇರಳೆ, ವಾಟೆ, ಹೆಬ್ಬಲಸು ಹೀಗೆ ವಿವಿಧ ಜಾತಿಯ ಬೀಜ ಸಂಗ್ರಹಿಸಿ ನರ್ಸರಿಗಳಿಗೆ ನೀಡಿದರೆ ಆಸಕ್ತಿಯಿಂದ ಅವರೂ ಸಸಿ ಬೆಳೆಸುತ್ತಾರೆ. ನಮ್ಮ ಮನೆಯ ಪಕ್ಕದಲ್ಲಿ ವಾಟೆ, ಬಿಳಿ ನೇರಲು ಮರವಿದೆ. ಕಳೆದ 20 ವರ್ಷಗಳಿಂದ ಹತ್ತಿರದ ನರ್ಸರಿಗೆ ಬೀಜ ಒದಗಿಸುತ್ತಿರುವೆ. ಇದರಿಂದ ಹಲವೆಡೆ ಈ ವೃಕ್ಷಗಳು ಬೆಳೆಯಲು ಅನುಕೂಲವಾಗಿವೆ.
ಸಸಿ ನೆಡುವ ನಾವೇ ನರ್ಸರಿ ಮಾಡುವುದು, ಅಗತ್ಯ ಸಸಿ ಬೆಳೆಸಿಕೊಳ್ಳುವುದು ಕಷ್ಟವಾಗುತ್ತದೆ. ಈ ಕಾರ್ಯ ಸಂಯಮ, ಶ್ರಮ ಬಯಸುತ್ತದೆ. ಮಲೆನಾಡಿನ ಅರಣ್ಯ ನರ್ಸರಿಗಳಲ್ಲಿ ಸಾಮಾನ್ಯವಾಗಿ 80-120 ಜಾತಿಯ ಸಸ್ಯಗಳಿರುತ್ತವೆ. ಪ್ರತಿವರ್ಷ ಏಪ್ರಿಲ್-ಜೂನ್ ಸಮಯದಲ್ಲಿ ನಾಲ್ಕಾರು ನರ್ಸರಿ ಸುತ್ತಾಡಿದರೆ ಕೃಷಿ ಕಾಡಿಗೆ ಅಗತ್ಯವಾದ ಹಲವು ಸಸ್ಯಗಳ ಪರಿಚಯವಾಗುತ್ತದೆ. ನೆಲದಲ್ಲಿ ಬಹುಬೇಗ ಬೆಳೆದು ನೆರಳಾಗುವ ಚಂದಕಲು, ಔಷಧೀಯ ಶಿವಣೆ, ಪರಿಮಳದ ದಾಲಿcನ್ನಿ ಗಿಡಗಳು ಸಿಗುತ್ತವೆ. ಮುಖ್ಯವಾಗಿ, ನಾಲ್ಕೈದು ನರ್ಸರಿ ತಿರುಗಿದರೆ ಅವಸಾನದಂಚಿನ ಕಾಡು ಹಣ್ಣಿನ 40-50 ಜಾತಿಯ ಸಸ್ಯಗಳನ್ನು ಪಡೆಯಬಹುದು. ಇಲಾಖೆಯ ನಿಯಮದಂತೆ ಸಸ್ಯಕ್ಕೆ 4-5 ರೂಪಾಯಿ. ಬೆಳೆಸುವ ಕಾಳಜಿ ಉಳ್ಳವರು ಇದರ ಪ್ರಯೋಜನ ಪಡೆಯಬಹುದು.
ಸಂಪರ್ಕದಿಂದ ಲಾಭ
ಸರಿಸುಮಾರು 20 ವರ್ಷಗಳಿಂದ ಉತ್ತರ ಕನ್ನಡದ ಹಲವು ತಾಲೂಕುಗಳ ಅರಣ್ಯ ನರ್ಸರಿಗಳನ್ನು ಪ್ರತಿ ವರ್ಷ ಏಪ್ರಿಲ್- ಮೇ ಸಮಯದಲ್ಲಿ ನೋಡುತ್ತಿದ್ದೇನೆ. ಬೆತ್ತದ ಸಸಿ ಪರಿಣಿತರು, ಕಾಡು ತಾಳೆ ಬೆಳೆಯುವವರು, ಔಷಧ ಸಸ್ಯ ಪೋಷಿಸಿದವರು, ಕಾಡು ಹಣ್ಣಿನ ಸಸಿ ಬೆಳೆಸುವ ಪರಿಣಿತ ವಾಚಮನ್‌ಗಳ ಜೊತೆ ನಿರಂತರ ಸಂಪರ್ಕ ನೂರಾರು ಪಾಠ ಕಲಿಸಿದೆ. ಒಮ್ಮೆ ನರ್ಸರಿ ಸುತ್ತಾಡುವಾಗ ಅಕ್ಕರೆಯಲ್ಲಿ ವಾಚ್‌ಮನ್ ಒಂದು ಸಸಿ ನೀಡಿದರು. ಮತ್ತೆ ಕೇಳಿದರೆ ಇನ್ನೊಂದು ಸಸಿ ಅವರಲ್ಲಿ ಇರಲಿಲ್ಲ. ಆ ಗಿಡದ ತೊಗಟೆ ಮನೆಯಲ್ಲಿಟ್ಟರೆ ಸೊಳ್ಳೆ ಬರುವುದಿಲ್ಲವೆಂದರು! ಕಾಡು ಸುತ್ತಾಡಿ ಮರ ಹುಡುಕಿ ತೊಗಟೆ ಇಟ್ಟು ಪರೀಕ್ಷಿಸಿದಾಗ ಅಚ್ಚರಿಯಾಯ್ತು. ಘಟನೆ ನಡೆದು ಹತ್ತು ವರ್ಷಗಳಾಗಿವೆ. ಈಗ 300 ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಿದ್ದೇನೆ. ನರ್ಸರಿ ಸುತ್ತಾಟದಿಂದ ನಮ್ಮೂರ ಕಾಡಿನ ಸಸ್ಯದ ವಿಶೇಷ ಗುಣ ಕಲಿಯಲು ಸಾಧ್ಯವಾಯ್ತು.
ಕಾಡು ತೋಟದಲ್ಲಿ ಮನುಷ್ಯನ ಬಳಕೆಗೆ ಮಹತ್ವ ಪಡೆದ ಹಣ್ಣು ಹಂಪಲು ಗಿಡ ಮಾತ್ರ ಬೆಳೆಸಬೇಕಾಗಿಲ್ಲ. ನಾಟಾ, ನೆರಳು, ಗೊಬ್ಬರ, ಮೇವು, ಬೇಲಿ ಹೀಗೆ ಅಗತ್ಯಕ್ಕೆ ತಕ್ಕ ಸಸಿ ನೆಡಬೇಕಾಗುತ್ತದೆ. ತೋಟಗಾರಿಕಾ ನರ್ಸರಿಗಳಲ್ಲಿ ಮಾವು, ಸಪೋಟ, ಚಕ್ಕೋತ, ಮ್ಯಾಂಗೋಸ್ಟಿನ್, ರಂಬೂಟಾನ್, ಹಲಸು ಮುಂತಾದ ವಾಣಿಜ್ಯ ಮಹತ್ವದ ಸಸ್ಯ ಸಿಗಬಹುದು. ಕಾಡು ಸಸ್ಯ ಹುಡುಕಾಟಕ್ಕೆ ಅರಣ್ಯ ನರ್ಸರಿ ಯೋಗ್ಯ ಸ್ಥಳ. ಬೇಸಿಗೆಯಲ್ಲಿ ನೀರಿಲ್ಲದೇ ಬೆಳೆಸಬಹುದಾದ ಹಲವು ಜಾತಿಯ ಸಸ್ಯಗಳು ಇಲ್ಲಿ ದೊರೆಯುತ್ತವೆ. ಸಸಿ ಬೆಳೆಸುವ ಆಸಕ್ತರು ಅರಣ್ಯ ನರ್ಸರಿ ಪ್ರವಾಸ ಆರಂಭಿಸಿದರೆ ನೆಲದಲ್ಲಿ ಕಾಡು ಕೂಡುತ್ತದೆ. ತೋಟದ ಗೆಲುವು ಸಾಧ್ಯವಾಗುತ್ತದೆ.
ಕಾಡು ತೋಟ- 22. ಅಡಿಕೆಯ ವಿಸ್ತರಣೆಯ ಅಪಾಯ ಹಾಗೂ ಅನಲಾಗ್ ಉಪಾಯ
-ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.