![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 2, 2020, 8:27 PM IST
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಮೊಬೈಲ್ ಸಂಖ್ಯೆಗಳನ್ನು ಸೇವ್ ಮಾಡುವಾಗ ಗೂಗಲ್ ಅಕೌಂಟ್‌ಗೆ ಸೇವ್ ಮಾಡಿಕೊಳ್ಳುವುದು ಎಲ್ಲ ರೀತಿಯಿಂದಲೂ ಉತ್ತಮ ಎಂದು ಎಲ್ಲರಿಗೂ ತಿಳಿದಿದೆ. ಹೀಗೆ ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗೂಗಲ್ ಅಕೌಂಟ್‌ನಲ್ಲಿ ಬಹುತೇಕ
ಮಂದಿ ನಂಬರ್‌ಗಳನ್ನು ಸೇವ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೆಲವರು ಇಲ್ಲಿ ಇನ್ನೊಂದು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಗೂಗಲ್‌ನಲ್ಲಿ ಸೇವ್ ಮಾಡಿಕೊಂಡಿರುವ ಫೋನ್ ನಂಬರ್‌ಗಳನ್ನು ಗೊತ್ತಿಲ್ಲದೇ ತಾವೇ ಡಿಲೀಟ್ ಮಾಡಿಕೊಳ್ಳುತ್ತಿದ್ದಾರೆ! ಅದು ಹೇಗೆಂದಿರಾ?!
ಕೆಲವರು, ತಾವು ಹೊಸ ಫೋನ್ ಕೊಂಡಾಗ ಅದಕ್ಕೆ ತಮ್ಮ ಜಿ ಮೇಲ್ ಐಡಿ ಸೇರಿಸುತ್ತಾರೆ. ಅವರ ಮೊಬೈಲ್ ಸಂಖ್ಯೆ ಗೂಗಲ್ ಅಕೌಂಟ್‌ನಲ್ಲಿ ಸೇವ್ ಆಗಿದ್ದರೆ, ಅವರ ಮೊಬೈಲ್ ಸಂಖ್ಯೆಗಳೆಲ್ಲವೂ ಹೊಸ ಫೋನ್‌ನಲ್ಲಿ ತಾವೇ ತಾವಾಗಿ ಬಂದು ಸೇರಿಕೊಳ್ಳುತ್ತವೆ.
ತಿಳಿಯದೇ ಕೆಲವರು ಏನು ಮಾಡುತ್ತಾರೆಂದರೆ, ತಮ್ಮ ಹಳೆಯ ಫೋನ್‌ನಲ್ಲಿ ತಮ್ಮ ಫೋನ್ ನಂಬರ್‌ಗಳು ಇನ್ನೇಕಿರಬೇಕು ಎಂದುಕೊಂಡು ತಮ್ಮ ಎಲ್ಲ ಮೊಬೈಲ್ ನಂಬರುಗಳನ್ನೂಡಿಲೀಟ್ ಮಾಡಿಬಿಡುತ್ತಾರೆ! ಆಗ ಏನಾಗುತ್ತದೆಂದರೆ, ಹೊಸ ಫೋನ್‌ನಲ್ಲೂ ಎಲ್ಲ ನಂಬರುಗಳೂ ಡಿಲೀಟ್ ಆಗಿಬಿಡುತ್ತವೆ! ಹೀಗಾದಾಗ, ಅಯ್ಯೋ! ನನ್ನ ಫೋನ್ ನಂಬರನ್ನು ಹಳೆಯ ಫೋನ್‌ನಲ್ಲಿ ಡಿಲೀಟ್ ಮಾಡಿರುವುದು, ಹೊಸ ಫೋನ್‌ನಲ್ಲೂ ಡಿಲೀಟ್ ಆಯ್ತಲ್ಲ! ಇದು ಹೇಗೆ? ನನ್ನಲ್ಲಿದ್ದ 3 ಸಾವಿರಕ್ಕೂ ಹೆಚ್ಚು ನಂಬರ್‌ಗಳೂ ಅಳಿಸಿ ಹೋದವಲ್ಲ… ಎಂದು ಪೇಚಾಡುತ್ತಾರೆ.
ನೆನಪಿಡಿ: ನಿಮ್ಮ ಫೋನ್ ನಂಬರ್‌ಗಳು ಸೇವ್ ಆಗಿರುವುದು, ನಿಮ್ಮ ಫೋನ್‌ನ ಸ್ಟೋರೇಜಿನಲ್ಲಲ್ಲ. ಗೂಗಲ್ ಅಕೌಂಟಿನ ಕ್ಲೌಡ್ ಸ್ಟೋರೇಜಿನಲ್ಲಿ. ನೀವು ಡಿಲೀಟ್ ಕೊಟ್ಟಾಗ ಕ್ಲೌಡ್ ಸ್ಟೋರೇಜಿನಲ್ಲಿದ್ದ ನಂಬರ್‌ಗಳೆಲ್ಲವೂ ಅಳಿಸಿ ಹೋಗುತ್ತವೆ. ಆದ್ದರಿಂದ ನಿಮ್ಮ ಹಳೆಯ ಫೋನಿನಿಂದ ಆ ನಂಬರ್‌ಗಳನ್ನು ತೆಗೆಯಬೇಕೆಂದರೆ, ನಿಮ್ಮ ಗೂಗಲ್ ಅಕೌಂಟ್ ಅನ್ನು ಆ ಫೋನಿನಿಂದ ರಿಮೂವ್ ಮಾಡಿದರೆ ಸಾಕು. ಆಗ ಆ ನಂಬರುಗಳು ತಾನೇ ತಾನಾಗಿ ಆ ಫೋನಿನಿಂದ ಮಾಯವಾಗುತ್ತವೆ. ಸೆಟಿಂಗ್‌ಗೆ ಹೋಗಿ, ಅಕೌಂಟ್ ಆಯ್ಕೆ ಮಾಡಿ ಅದರಲ್ಲಿ ಗೂಗಲ್ ಅಕೌಂಟ್ ರಿಮೂವ್‌ಮಾಡಿದರೆ ಆಯಿತು.
ಅಳಿಸಿದ ನಂಬರ್ ಪಡೆಯುವುದು ಹೇಗೆ? : ಗೊತ್ತಾಗದೇ ಡಿಲೀಟ್ ಮಾಡಿದಗೂಗಲ್ ಅಕೌಂಟ್‌ನಲ್ಲಿದ್ದ ನಂಬರನ್ನು ಮತ್ತೆ ಪಡೆಯಬಹುದೇ? ಎಂದರೆ ಖಂಡಿತ ಪಡೆಯಬಹುದು! ನಂಬರ್ ಗಳನ್ನು ಡಿಲೀಟ್ ಮಾಡಿ 30 ದಿನ ದಾಟದಿದ್ದರೆ ಅಷ್ಟೂ ನಂಬರ್‌ಗಳನ್ನು ಮತ್ತೆ ಪಡೆದುಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಾದುದಿಷ್ಟೇ. ನಿಮ್ಮ ಆಂಡ್ರಾಯ್ಡ್ ಫೋನಿನ ಗೂಗಲ್ ಆ್ಯಪ್ ಗಳ ಗುಚ್ಛ ವಿರುವ ಫೋಲ್ಡರ್‌ಗೆ ಹೋಗಿ,ಅಲ್ಲಿ ಕಾಂಟ್ಯಾಕ್ಟ್ ಆ್ಯಪ್ ಮೇಲೆ ಒತ್ತಿ. ಎಡಭಾಗದಲ್ಲಿ ಮೂರು ಗೆರೆಗಳಿವೆ. ಅದನ್ನು ಒತ್ತಿ, ನಂತರ ಸೆಟಿಂಗ್ ಒತ್ತಿ. ಅಲ್ಲಿ ಕೊನೆಯಿಂದ ಎರಡನೇ ಆಯ್ಕೆಯಾದ UNDO CHANGES ಅನ್ನು ಒತ್ತಿ. ಅಲ್ಲಿ 10 ನಿಮಿಷದ ಹಿಂದೆ, 1 ಗಂಟೆಯಹಿಂದೆ, ನಿನ್ನೆ, 1 ವಾರದ ಹಿಂದೆ, ಮತ್ತು ಕಸ್ಟಮ್ ಎಂಬ ಆಯ್ಕೆಗಳಿವೆ. ನೀವು ಡಿಲೀಟ್ ಮಾಡಿ ಒಂದೆರಡು ದಿನವಾಗಿದ್ದರೆ ಒಂದು ವಾರದ ಹಿಂದೆ ಎಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಿ.
ಇಲ್ಲವಾದರೆ ಕಸ್ಟಮ್‌ಗೆ ಹೋಗಿ ಎಷ್ಟು ದಿನ ಬೇಕೋ ಆಯ್ಕೆ ಮಾಡಿಕೊಳ್ಳಿ. ಆದರೆ ಅದು 1 ತಿಂಗಳಿಗೆ ಸೀಮಿತ. ನಂತರ ಕನ್ಫರ್ಮ್ ಒತ್ತಿ. ನಿಮ್ಮ ನಂಬರ್‌ಗಳೆಲ್ಲವೂ ಮತ್ತೆ ಸಂಗ್ರಹವಾಗುತ್ತವೆ. ಇದನ್ನು ಕಂಪ್ಯೂಟರ್‌ನಲ್ಲಿ ಜಿಮೇಲ್‌ಗೆ ಹೋಗಿ ಬಲಭಾಗದಲ್ಲಿ ಒಂಬತ್ತು ಚುಕ್ಕೆಗಳಿರುವ ಗೂಗಲ್ ಆ್ಯಪ್ ಗುಚ್ಛಕ್ಕೆ ಹೋಗಿ ಅಲ್ಲಿ ಕಾಂಟ್ಯಾಕ್ಟ್ಸ್ ಆಯ್ಕೆ ಮಾಡಿಕೊಂಡು ಸಹ ಮಾಡಬಹುದು.
-ಕೆ.ಎಸ್. ಬನಶಂಕರ ಆರಾಧ್ಯ
You seem to have an Ad Blocker on.
To continue reading, please turn it off or whitelist Udayavani.