ದೇವರ ದುಡ್ಡು
ಮಲೆ ಮಹದೇಶ್ವರನ "ಕಾಣಿಕೆ'
Team Udayavani, Mar 16, 2020, 6:05 AM IST
ದೇವಸ್ಥಾನಗಳಿಗೆ ಹೋದಾಗ ನಾವೇನೆಂದು ಕೋರಿಕೊಳ್ಳುತ್ತೇವೆ? ವಿದ್ಯೆ, ಬುದ್ಧಿ ಮತ್ತು ದುಡ್ಡು. ಬೇಡಿ ಬಂದವರಿಗೆ ಕೇಳಿದ್ದನ್ನು ಕರುಣಿಸುವ ದೇವರನ್ನು ಕಂಡು ಬರುವಾಗ ಭಕ್ತ ಸುಮ್ಮನೆಯೇ ಬರುವುದಿಲ್ಲ. ತನ್ನ ಕೈಲಾದಷ್ಟು ದುಡ್ಡನ್ನು ಕಾಣಿಕೆಯಾಗಿ ಅರ್ಪಿಸುತ್ತಾನೆ. ದೇವರಿಗೆ ಸೇರುವ ಈ ದುಡ್ಡು ಯಾವೆಲ್ಲಾ ರೀತಿಯಲ್ಲಿ ವಿನಿಯೋಗವಾಗುತ್ತದೆ. ದೇವಾಲಯ ನಿರ್ವಹಣೆಗೆ ತಗುಲುವ ಖರ್ಚು ವೆಚ್ಚಗಳೇನು? ಕಾಣಿಕೆ ಹುಂಡಿ, ದೇಣಿಗೆಯ ದುಡ್ಡು ಮರಳಿ ಭಕ್ತರನ್ನು ಯಾವ ರೀತಿ ತಲುಪುತ್ತಿದೆ ಎಂಬಿತ್ಯಾದಿ ಮಾಹಿತಿ “ದೇವರ ದುಡ್ಡು’ ಸರಣಿಯಲ್ಲಿ ಪ್ರಕಟಗೊಳ್ಳಲಿದೆ. ಇತ್ತೀಚಿಗೆ ದಾಖಲೆ ಪ್ರಮಾಣದ ಕಾಣಿಕೆ ದುಡ್ಡು ಸಂಗ್ರಹಗೊಂಡ ಮಲೆ ಮಹದೇಶ್ವರ ದೇವಸ್ಥಾನದ ನಿರ್ವಹಣೆಯ ಮಾಹಿತಿ ಈ ಬಾರಿ…
– ಕರೆಂಟ್ ಬಿಲ್(ತಿಂಗಳ)- 25 ಲಕ್ಷ ರೂ.
– ಲಾಡಿನ ಲಾಭ (ವರ್ಷಕ್ಕೆ)- 6 ಕೋಟಿ ರೂ.
– ದೇವಸ್ಥಾನದ ನೌಕರರು- 530
– ನೌಕರರ ಸಂಬಳ(ತಿಂಗಳಿಗೆ)- 1.5 ಕೋಟಿ
– ತಿಂಗಳ ರಿಪೇರಿ ಖರ್ಚು- 3- 4 ಲಕ್ಷ ರೂ.
– ಅನ್ನ ದಾಸೋಹದ ಖರ್ಚು(ತಿಂಗಳಿಗೆ)- 1 ಕೋಟಿ ರೂ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಒಡೆಯ ಮಾದಪ್ಪ ಬಹು ಕೋಟಿಗಳ ಒಡೆಯ. ಸುಮಾರು 700 ವರ್ಷಗಳ ಇತಿಹಾಸ ಇರುವ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಶಿವರಾತ್ರಿ, ಯುಗಾದಿ, ದೀಪಾವಳಿ ಸಂದರ್ಭಗಳಲ್ಲಿ ಮಹದೇಶ್ವರ ಬೆಟ್ಟದಲ್ಲಿ ರಥೋತ್ಸವ ನಡೆಯುತ್ತದೆ. ಈ ತಿಂಗಳುಗಳಲ್ಲಿ ಹುಂಡಿಗೆ ಹಾಕುವ ಹಣವೂ ಅಧಿಕ ಪಟ್ಟು ಹೆಚ್ಚಾಗಿರುತ್ತದೆ. ಜಾತ್ರಾ ವಿಶೇಷಗಳು ಇರುವ ತಿಂಗಳಲ್ಲಿ ಒಂದು ಕೋಟಿಯಷ್ಟು ಹುಂಡಿಯ ಹಣ ಸಂಗ್ರಹವಾಗುತ್ತಿದ್ದುದು, ಈಗ ಎರಡು ಕೋಟಿ ರೂ. ದಾಟಿದೆ.
ಲಾಡು ಪ್ರಸಾದದಿಂದ ಕೋಟಿ
ಇದಲ್ಲದೇ ವಿವಿಧ ಸೇವೆಗಳನ್ನು ಮಾಡಿಸುವ ಭಕ್ತಾದಿಗಳು ಆ ಸೇವೆಗಳಿಗೆ ನೀಡುವ ಶುಲ್ಕದ ಹಣದಿಂದ 10 ಕೋಟಿ ರೂ. ಆದಾಯ ಬರುತ್ತದೆ. ಇದರಲ್ಲಿ 4 ಕೋಟಿ ರೂ. ಹಣ, ಭಕ್ತರ ಸೇವೆಗಳಿಗೆ ಪ್ರತಿಯಾಗಿ ಅವರಿಗೆ ನೀಡುವ ಪ್ರಸಾದ, ತಟ್ಟೆ, ಚೊಂಬು, ಲಾಡು ಇತ್ಯಾದಿಗಳಿಗೆ ಖರ್ಚಾಗುತ್ತದೆ. ಹುಂಡಿ, ಸೇವೆಗಳ ಆದಾಯ ಮಾತ್ರವಲ್ಲದೇ ಮಾದಪ್ಪನಿಗೆ ಲಾಡು ಮಾರಾಟದಿಂದಲೇ ಪ್ರತಿ ವರ್ಷ 18 ಕೋಟಿ ರೂ. ಆದಾಯ ಬರುತ್ತದೆ! ಇದರಲ್ಲಿ 12 ಕೋಟಿ ರೂ. ಲಾಡು ತಯಾರಿಕೆಗೆ ಖರ್ಚಾದರೆ ಇನ್ನು 6 ಕೋಟಿ ರೂ. ಲಾಭ ಬರುತ್ತದೆ!
ಅಂಗಡಿ ಮಳಿಗೆ, ಪೆಟ್ರೋಲ್ ಬಂಕ್ ಆದಾಯ
ಮಾದಪ್ಪನ ಲೀಲೆಗಳಂತೆ ಅವನಿಗೆ ಬರುವ ಆದಾಯದ ಲೀಲೆಗಳು ಸಹ ಅನೇಕ! ಕೇವಲ ದೇವಾಲಯದ ಪೂಜೆ, ಸೇವೆ, ಪ್ರಸಾದಗಳಿಂದಷ್ಟೇ ಮಾದಪ್ಪನಿಗೆ ಆದಾಯ ಬರುವುದಿಲ್ಲ. ಮಹದೇಶ್ವರ ಬೆಟ್ಟದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆ, ಪೆಟ್ರೋಲ್ ಬಂಕ್, ವಸತಿ ಗೃಹಗಳಿಂದ ವರ್ಷಕ್ಕೆ 10 ರಿಂದ 15 ಕೋಟಿ ರೂ. ಆದಾಯವಿದೆ. ಇದು ವಾಣಿಜ್ಯ ಮೂಲದ ಆದಾಯ. ಒಟ್ಟಾರೆಯಾಗಿ ಮಲೆ ಮಹದೇಶ್ವರನ ಆದಾಯದ ಮೂರನೇ ಒಂದು ಭಾಗ ಕಾಣಿಕೆ ಹುಂಡಿಯಿಂದ, ಇನ್ನು ಮೂರನೇ ಒಂದು ಭಾಗ ಸೇವೆಗಳಿಗೆ ವಿಧಿಸುವ ಶುಲ್ಕದಿಂದ, ಇನ್ನು ಮೂರನೇ ಒಂದು ಭಾಗ ಬೆಟ್ಟದ ವಾಣಿಜ್ಯ ಮೂಲಗಳಿಂದ ಬರುತ್ತದೆ.
ನೌಕರರ ಸಂಬಳ ಖರ್ಚು, ವೆಚ್ಚ
ಮಲೆ ಮಹದೇಶ್ವರ ದೇವಾಲಯದಲ್ಲಿ 530 ಮಂದಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 170 ಮಂದಿ ಕಾಯಂ ನೌಕರರು. ಇನ್ನು 360 ಮಂದಿ, ತಾತ್ಕಾಲಿಕ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಸಂಬಳಕ್ಕೆ ಪ್ರತಿ ತಿಂಗಳು 1.5 ಕೋಟಿ ರೂ. ಖರ್ಚಾಗುತ್ತದೆ. ಮಾದಪ್ಪನ ಸನ್ನಿಧಿಗೆ ಬಂದವರು ದೇವಾಲಯದ ದಾಸೋಹ ಭವನದಲ್ಲಿ ನೀಡುವ ದಾಸೋಹವನ್ನು ಸೇವಿಸದೇ ಹಿಂದಿರುಗುವುದಿಲ್ಲ. ದಾಸೋಹಕ್ಕೆ ಪ್ರತಿ ತಿಂಗಳು 1 ಕೋಟಿ ರೂ. ವೆಚ್ಚವಾಗುತ್ತದೆ. ವಿಶೇಷವೆಂದರೆ ಇದರಲ್ಲಿ 50 ರಿಂದ 60 ಲಕ್ಷ ರೂ.ಗಳು ಭಕ್ತಾದಿಗಳು ದಾಸೋಹ ಭವನಕ್ಕೆ ಸಲ್ಲಿಸುವ ಅಕ್ಕಿ, ಬೇಳೆ, ಧಾನ್ಯ, ತರಕಾರಿ, ಸೊಪ್ಪು ಇತ್ಯಾದಿಗಳಿಂದಲೇ ಬರುತ್ತದೆ. ಇನ್ನು 30 ರಿಂದ 40 ಲಕ್ಷ ರೂ.ಗಳನ್ನು ದೇವಾಲಯದ ಆದಾಯದಿಂದ ವೆಚ್ಚ ಮಾಡಲಾಗುತ್ತದೆ.
ತಟ್ಟೆ, ಪ್ರಸಾದ ಮತ್ತು ವಿದ್ಯುತ್
ಇನ್ನು ಸೇವೆಗಳನ್ನು ಮಾಡಿಸುವ ಭಕ್ತರಿಗೆ ತಾಮ್ರದ ಚೊಂಬು, ತಟ್ಟೆ, ಲಾಡು, ತೆಂಗಿನ ಕಾಯಿ, ತೀರ್ಥದ ಬಾಟಲಿ, ಮಿಶ್ರ ಪ್ರಸಾದ ಇತ್ಯಾದಿಗಳನ್ನು ದೇವಾಲಯದ ವತಿಯಿಂದ ಕೊಡಲಾಗುತ್ತದೆ. ಇದಕ್ಕೆ ಪ್ರತಿ ತಿಂಗಳು ಸರಾಸರಿ 30 ರಿಂದ 33 ಲಕ್ಷ ರೂ. ಖರ್ಚು ಬೀಳುತ್ತದೆ. ಮಹದೇಶ್ವರ ದೇವಾಲಯ, ಪ್ರಾಂಗಣ, ವಸತಿಗೃಹಗಳು, ಕಾವೇರಿ ನೀರು ಸರಬರಾಜು ಸೇರಿ ತಿಂಗಳಿಗೆ 25 ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತದೆ! ಬೆಟ್ಟಕ್ಕೆ ಕಾವೇರಿ ನದಿ ಮೂಲದಿಂದ ಕುಡಿಯುವ ನೀರು ತರುವುದರಿಂದ ಪಂಪಿಂಗ್ ಸ್ಟೇಷನ್, ಕೊಳವೆ ಇತ್ಯಾದಿಗಳ ರಿಪೇರಿ, ನಿರ್ವಹಣೆಗೆ ತಿಂಗಳಿಗೆ 3 ರಿಂದ 4 ಲಕ್ಷ ರೂ. ವೆಚ್ಚ ತಗುಲುತ್ತದೆ.
ಹುಂಡಿಯಿಂದ ಬರುವ ಆದಾಯ
ಮಾರ್ಚ್ 1 ರಂದು ನಡೆದ ಫೆಬ್ರವರಿ ತಿಂಗಳ ಹುಂಡಿ ಎಣಿಕೆಯಲ್ಲಿ 2,51,61,247 ರೂ. ಸಂಗ್ರಹವಾಗಿತ್ತು! ಇದು ಕೇವಲ 29 ದಿನಗಳ ಸಂಗ್ರಹ ಎಂಬುದು ನೆನಪಿರಲಿ! ಈ ಪೈಕಿ 15,21,344 ರೂ. ಹಣ ನಾಣ್ಯದ ರೂಪದಲ್ಲಿ ಬಂದಿತ್ತು! ಹಾಗಾಗಿ ಪ್ರತಿ ತಿಂಗಳ ಸರಾಸರಿ ಲೆಕ್ಕ ಹಾಕಿದರೆ ಮಾದಪ್ಪನ ಸನ್ನಿಧಿಗೆ ಬರುವ ಭಕ್ತಾದಿಗಳು ಹುಂಡಿಗೆ ಹಾಕುವ ಮೊತ್ತ ವರ್ಷಕ್ಕೆ 20 ರಿಂದ 22 ಕೋಟಿ ರೂ. ಆಗುತ್ತದೆ.
ದುಡ್ಡೆಲ್ಲವೂ ಅಭಿವೃದ್ಧಿ ಕೆಲಸಗಳಿಗೆ
ಮಲೆ ಮಹದೇಶ್ವರ ದೇವಾಲಯ, ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದೆ. ಹೀಗಾಗಿ ದೇವಾಲಯಕ್ಕೆ ಬಂದ ಆದಾಯವೆಲ್ಲವೂ ದೇವಾಲಯದ ಅಭಿವೃದ್ಧಿಗೆ ವಿನಿಯೋಗವಾಗುತ್ತದೆ. ಮುಜರಾಯಿ ಇಲಾಖೆಗೆ ಸೇರಿದ್ದಾಗ ಬರುವ ಒಟ್ಟು ಆದಾಯದ ಹಣದಲ್ಲಿ ಶೇ. 10ರಷ್ಟು ಸರ್ಕಾರಕ್ಕೆ ಹೋಗುತ್ತಿತ್ತು. ಆದರೆ ಈಗ ಪೂರ್ತಿ ಆದಾಯ ಪ್ರಾಧಿಕಾರಕ್ಕೇ ಸೇರಿದ್ದು. ನಿಯಮಿತ ಖರ್ಚುಗಳನ್ನು ಹೊರತುಪಡಿಸಿ, ದೇವಾಲಯಕ್ಕೆ ಬಂದ ಆದಾಯವನ್ನೆಲ್ಲ ಈಗ ಪ್ರಾಧಿಕಾರದ ಮೂಲಕ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿಗೇ ಬಳಸಲಾಗುತ್ತಿದೆ.
ಹೀಗಾಗಿ, ಭಕ್ತಾದಿಗಳ ಅನುಕೂಲಕ್ಕಾಗಿ ಅತಿಥಿಗೃಹಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಡಾರ್ಮಿಟರಿ, ಮೂಲ ಸೌಕರ್ಯ ಅಭಿವೃದ್ಧಿ, ಸುಸಜ್ಜಿತ ಹೋಟೆಲ್ ನಿರ್ಮಾಣ, ಘನ ತ್ಯಾಜ್ಯ ಸಂಸ್ಕರಣಾ ಘಟಕ, ಬೆಟ್ಟದ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಹೊಸ ಕ್ಯೂ ಲೇನ್‌ಗಳ ನಿರ್ಮಾಣ, ಸ್ನಾನಘಟ್ಟಗಳ ನಿರ್ಮಾಣ, ಬಹುಮಹಡಿ ವಾಹನ ನಿಲ್ದಾಣ, ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ, 512 ಕೊಠಡಿಗಳ ವಸತಿಗೃಹ ಸಂಕೀರ್ಣ ನಿರ್ಮಾಣ ಇತ್ಯಾದಿಗಳಿಗೆ ಬಳಸಲಾಗುತ್ತದೆ.
ಮಲೆ ಮಹದೇಶ್ವರ ದೇವಾಲಯಕ್ಕೆ ಬರುವ ಆದಾಯ, ಬೇರೆ ದೇವಾಲಯಗಳಲ್ಲಿ ಸಂಗ್ರಹವಾಗುವ ಆದಾಯಕ್ಕಿಂತ ಭಿನ್ನವಾದುದು. ಕೇವಲ ಹುಂಡಿ, ಪೂಜೆ, ಸೇವೆಗಳನ್ನು ಹೊರತುಪಡಿಸಿ ವಾಣಿಜ್ಯಕ ಮೂಲಗಳಿಂದಲೂ ದೇವಾಲಯಕ್ಕೆ ಆದಾಯ ಬರುತ್ತಿದೆ. ದೇವಾಲಯಕ್ಕೆ ಬೇಕಾದ ಖರ್ಚು ಕಳೆದು, ಈ ಆದಾಯವನ್ನೆಲ್ಲ ಭಕ್ತಾದಿ ಸ್ನೇಹಿ ವಾತಾವರಣವನ್ನು ಸೃಷ್ಟಿ ಮಾಡಲು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿಗೆ ಭಕ್ತಾದಿಗಳು ನೀಡುವ ಹಣದಿಂದಲೇ ಅನುದಾನ ಒದಗಿಸಲಾಗುತ್ತಿದೆ.
-ಜಯ ವಿಭವಸ್ವಾಮಿ, ಕಾರ್ಯದರ್ಶಿ, ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕೊಳ್ಳೇಗಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.