ಸುವರ್ಣ ಬಾಳೆ
Team Udayavani, Dec 18, 2017, 12:43 PM IST
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮುಂಬಾಳು ಗ್ರಾಮದಲ್ಲಿ ಯುವ ರೈತ ಹಸನ್ ಸಾಬ್ ಬಾಳೆ ಜೊತೆ ಸುವರ್ಣ ಗಡ್ಡೆ ಕೃಷಿ ಕೈಗೊಂಡು ಬಂಪರ್ ಫಸಲು ಪಡೆದಿದ್ದಾರೆ.
ಶಿವಮೊಗ್ಗ-ಜೋಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ತಾಗಿಕೊಂಡಂತೆ ಮುಂಬಾಳು ಗ್ರಾಮದಲ್ಲಿ ಒಂದೂವರೆ ಎಕರೆ ವಿಸ್ತೀರ್ಣದ ಇವರ ಹೊಲವಿದೆ. ಮೇ ಕೊನೆಯ ವಾರ ಪುಟ್ ಬಾಳೆ ಜಾತಿಯ 800 ಬಾಳೆ ಗಿಡ ನೆಟ್ಟರು. ಗಿಡಕ್ಕೆ ರೂ.8 ರಂತೆ ಖರೀದಿಸಿದ್ದರು. ಗಿಡದಿಂದ ಗಿಡಕ್ಕೆ 6 ಅಡಿ ಅಂತರ ಬರುವಂತೆ ಬಾಳೆ ಸಸಿ ನಾಟಿ ಮಾಡಿದ್ದಾರೆ. ಬಾಳೆಗಿಡಗಳ ನಡುವೆ ಗಿಡದಿಂದ ಗಿಡಕ್ಕೆ 4 ಅಡಿ ಅಂತರದಲ್ಲಿ ಸುವರ್ಣ ಗಡ್ಡೆ ಸಸಿಗಳ ಬೆಳೆಸಿದ್ದಾರೆ. ಇವರು 10 ಕ್ವಿಂಟಾಲ್ ಸುವರ್ಣಗಡ್ಡೆ ಬೀಜ ಖರೀದಿಸಿದ್ದರು. ಇದರಿಂದ ಸರಾಸರಿ ಅರ್ಧ ಕಿ.ಗ್ರಾಂ.ತೂಕದಷ್ಟು ಬೀಜ ಬರುವಂತೆ ಕತ್ತರಿಸಿ, ನಾಟಿ ಮಾಡಿ 450 ಸುವರ್ಣ ಗಡ್ಡೆ ಬೆಳೆಸಿದ್ದಾರೆ. ಹೀಗೆ ನೆಡುವಾಗ ಅರ್ಧ ಅಡಿ ಆಳ ಮತ್ತು ಸುತ್ತಳತೆ ಬರುವಂತೆ ಗುಂಡಿ ನಿರ್ಮಿಸಿ ಸಗಣಿ ಗೊಬ್ಬರ ಮತ್ತು ಬೂದಿ ಹಾಕಿ ಬೀಜ ನಾಟಿ ಮಾಡಿದರು. ಬೀಜ ಮೊಳೆತು ಎಲೆಗಳು ಕಾಣಿಸುತ್ತಿದ್ದಂತೆ, ಸಗಣಿ ಗೊಬ್ಬರ ಹಾಕಿ ಮಣ್ಣು ಏರಿಸಿದರು. ಸುವರ್ಣಗಡ್ಡೆ ಸಸಿಗಳಿಗೆ ಪ್ರತಿ 25 ದಿನಕ್ಕೆ ಒಮ್ಮೆಯಂತೆ 20:20 ಒಮ್ಮೆ ಹಾಗೂ 19:19 ಕಾಂಪ್ಲೆಕ್ಸ್ ಗೊಬ್ಬರ ನೀಡಿದ್ದರು. ಇವು ಬಾಳೆ ಗಿಡಗಳ ನಡುವೆ ಹುಲುಸಾಗಿ ಬೆಳೆದಿವೆ.
ಲಾಭ ಹೇಗೆ ?
ಕ್ವಿಂಟಾಲ್ ಒಂದಕ್ಕೆ ರೂ.2300 ರಂತೆ 10 ಕ್ವಿಂಟಾಲ್ ಸುವರ್ಣಗಡ್ಡೆಯ ಬೀಜದ ಗಡ್ಡೆ ಖರೀದಿಸಿದ್ದರು. 450 ಗಿಡ ಬೆಳೆದಿದೆ. ಪ್ರತಿ ಗಿಡದ ಬುಡದಲ್ಲಿ ಸರಾಸರಿ 10 ಕಿ.ಗ್ರಾಂ. ತೂಕದಷ್ಟು ಗಾತ್ರದ ಸುವರ್ಣಗಡ್ಡೆ ಫಸಲು ಬಿಟ್ಟಿದೆ. 450 ಗಿಡದಿಂದ ಸುಮಾರು 45 ಕ್ವಿಂಟಾಲ್ ಸುವರ್ಣಗಡ್ಡೆ ಫಸಲು ದೊರೆಯುತ್ತದೆ. ಕ್ವಿಂಟಾಲ್ ಒಂದಕ್ಕೆ ಮಾರುಕಟ್ಟೆಯಲ್ಲಿ ಸರಾಸರಿ 1,600ರೂ. ಬೆಲೆ ಇದೆ. 45 ಕ್ವಿಂಟಾಲ್ ಫಸಲು ಮಾರಾಟದಿಂದ ಇವರಿಗೆ ರೂ.65 ಸಾವಿರ ಆದಾಯ ದೊರೆಯುತ್ತಿದೆ. ಬೀಜದ ಗಡ್ಡೆ ಖರೀದಿ, ಗಿಡ ನೆಡುವಿಕೆ, ಗೊಬ್ಬರ, ಕಳೆ ಸ್ವತ್ಛತೆ ಇತ್ಯಾದಿ ಎಲ್ಲಾ ಲೆಕ್ಕ ಹಾಕಿದರೆ ರೂ.35 ಸಾವಿರ ಖರ್ಚಾಗಿದೆ. ಆದಾಯದಲ್ಲಿ ಖರ್ಚು ಕಳೆದರೆ 30 ಸಾವಿರ ಲಾಭ ದೊರೆಯುತ್ತದೆ. ಬಾಳೆ ಸಸಿ ನೆಟ್ಟು ಒಂದು ವರ್ಷದ ನಂತರ ಫಸಲು ಕೈಗೆ ಸಿಗುತ್ತದೆ. ಆಮೇಲೆ ಆದಾಯ. ಅದು ಕೈಗೆ ಬರುವ ಮೊದಲೇ (ಆರುತಿಂಗಳ ಅವಧಿಯಲ್ಲಿ) ಉಪ ಬೆಳೆಯಿಂದ ಆದಾಯ ಗಳಿಸುವ ಇವರ ತಂತ್ರ ಇತರರಿಗೆ ಮಾದರಿ.
ಮಾಹಿತಿಗೆ-9901709065
ಮಾತಿಗಾಗಿ ಇವರ ಮೊಬೈಲ್ ಸಂಖ್ಯೆ 9901709065 ನ್ನು ಸಂಪರ್ಕಿಸಬಹುದು.
ಎನ್.ಡಿ.ಹೆಗಡೆ ಆನಂದಪುರಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.