“ಸುವರ್ಣ’ ಕಾಲ !
Team Udayavani, Oct 23, 2017, 11:13 AM IST
ಸುವರ್ಣಗಡ್ಡೆಗೆ ಕೊಳೆ ರೋಗ, ಕೀಟಬಾಧೆ ಮುಂತಾದ ಸಮಸ್ಯೆ ಇರುವುದಿಲ್ಲ. ಹಾಗಾಗಿ, ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದಾಗಲೇ ಬೆಳೆ ಕೈಗೆ ಬಂದರೆ ಲಾಭ ಗ್ಯಾರಂಟಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾವರೆಹಳ್ಳಿ ಗ್ರಾಮದ ಮಂಜುನಾಥ ಶೇಟ್ ಅವರು ರಬ್ಬರ್ ಜೊತೆ ಸುವರ್ಣ ಗಡ್ಡೆ ಬೆಳೆದು ಆದಾಯದ ಮಾರ್ಗ ಕಂಡುಕೊಂಡಿದ್ದಾರೆ.
ಆನಂದಪುರಂ-ಬಳ್ಳಿಬೈಲು ರಸ್ತೆಯಲ್ಲಿ ತ್ಯಾವರೆಹಳ್ಳಿಯಲ್ಲಿ ಮುಖ್ಯ ರಸ್ತೆಗೆ ತಾಗಿ ಕೊಂಡಂತೆ ಇವರ ಹೊಲವಿದೆ. ಇವರು 3 ವರ್ಷಗಳ ಹಿಂದೆ ರಬ್ಬರ್ ಗಿಡ ನೆಟ್ಟು ಬೆಳೆಸಿದ್ದಾರೆ.ರಬ್ಬರ ಸಸಿ ನೆಟ್ಟ ವರ್ಷ ಅಂತರ್ ಬೆಳೆಯಾಗಿ ಶುಂಠಿ ಕೃಷಿ ನಡೆಸಿದ್ದ ಇವರು ಕಳೆದ ವರ್ಷ ಮರಗೆಣಸು ಬೆಳೆಸಿದ್ದರು.ಈ ವರ್ಷ ಸುವರ್ಣ ಗಡ್ಡೆ ಮತ್ತು ಮೆಕ್ಕೆಜೋಳವನ್ನು ಅಂತರ್ ಬೆಳೆಯಾಗಿಸಿಕೊಂಡಿದ್ದಾರೆ.
ಕೃಷಿ ಹೇಗೆ ?
ರಬ್ಬರ್ ಗಿಡಗಳ ಸಾಲಿನಲ್ಲಿ ಸುಮಾರು ಒಂದು ಎಕರೆ ವಿಸ್ತೀರ್ಣದಲ್ಲಿ 1,200 ಸುವರ್ಣಗಡ್ಡೆ ಸಸಿ ಬೆಳೆಸಿದ್ದಾರೆ. ನೆಡುವಾಗ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 4 ಅಡಿ ಅಂತರದಲ್ಲಿ ಬೀಜ ನಾಟಿ ಮಾಡಿದ್ದಾರೆ. ಸರಾಸರಿ ಒಂದು ಅಡಿ ಚೌಕ ಮತ್ತು ಒಂದು ಅಡಿ ಆಳದ ಗುಂಡಿ ನಿರ್ಮಿಸಿ ಬೀಜ ಹಾಕಿದ್ದರು. ಕಿ.ಗ್ರಾಂ.ಗೆ ರೂ.30 ರ ದರದಲ್ಲಿ, ಸರಾಸರಿ 250 ಗ್ರಾಂ. ಗಾತ್ರದ ಬೀಜದ ಗಡ್ಡೆ ನಾಟಿ ಮಾಡಿದ್ದರು. ಗಿಡನೆಡುವಾಗ ಗುಂಡಿಗೆ ಸ್ವಲ್ಪ ಸಗಣಿ ಗೊಬ್ಬರ ಹಾಕಿದ್ದರು. ಬೀಜ ಮೊಳೆತು ಎಲೆಗಳು ಕಾಣಿಸುತ್ತಿದ್ದಂತೆ 20:20 ಕಾಂಪ್ಲೆಕ್ಸ್ ಗೊಬ್ಬರ ಹಾಕಿ ಕೃಷಿ ಮುಂದುವರೆಸಿದರು. ಪ್ರತಿ 25 ದಿನಕ್ಕೆ ಒಮ್ಮೆಯಂತೆ ಒಟ್ಟು 4 ಸಲ ಗೊಬ್ಬರ ನೀಡಿದ್ದರು.ಪ್ರತಿ ಸಲ ಗೊಬ್ಬರ ನೀಡಿದಾಗ ಗುದ್ದಲಿ ಬಳಸಿ ಗಿಡಕ್ಕೆ ಮಣ್ಣು ಏರಿಸಿ ಗಡ್ಡೆ ಚೆನ್ನಾಗಿ ಬೆಳೆಯುವಂತೆ ಕೃಷಿ ಕೈಗೊಂಡಿದ್ದರು.
ಲಾಭ ಹೇಗೆ ?
ಗಿಡಗಳು ಚೆನ್ನಾಗಿ ಬೆಳೆದು ಪ್ರತಿ ಗಿಡದಿಂದ ಸರಾಸರಿ 8 ಕಿ.ಗ್ರಾಂ.ನಷ್ಟು ಗಾತ್ರದ ಗಡ್ಡೆ ಬೆಳೆದಿದೆ. ಇವರು ಒಟ್ಟು 1,200 ಗಿಡ ಬೆಳೆಸಿದ್ದಾರೆ.ಇದರಿಂದ ಸುಮಾರು 100 ಕ್ವಿಂಟಾಲ್ ಸುವರ್ಣ ಗಡ್ಡೆ ಸಿಕ್ಕಿದೆ. ಕ್ವಿಂಟಲ್ ಒಂದಕ್ಕೆ ರೂ.2000 ದರದಿಂದ ಇವರಿಗೆ ರೂ.2 ಲಕ್ಷ ಆದಾಯ ದೊರೆತಿದೆ. ಬೀಜ ಖರೀದಿ, ಗಿಡ ನೆಡುವ ಕೂಲಿ, ಗೊಬ್ಬರ ಖರೀದಿ, ಕೃಷಿ ಕೂಲಿ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ಸುಮಾರು ರೂ.50 ಸಾವಿರ ಖರ್ಚು ತಗುಲಿದೆ. ಆದರೂ ಸಹ ರೂ.1.5 ಲಕ್ಷ ಲಾಭ. ಸುವರ್ಣಗಡ್ಡೆಗೆ ಕೊಳೆ ರೋಗ, ಕೋಟ ಬಾಧೆ ಇತ್ಯಾದಿ ಸಮಸ್ಯೆ ಇಲ್ಲದ ಕಾರಣ ಲಾಭ ಅಧಿಕ ಎನ್ನುತ್ತಾರೆ ಮಂಜುನಾಥ್.
ಮಾಹಿತಿಗೆ- 9449132702
ಎನ್.ಡಿ.ಹೆಗಡೆ ಆನಂದಪುರಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.