ಗೋಮೂತ್ರ ಸಂಜೀವಿನಿ
Team Udayavani, Feb 18, 2019, 12:30 AM IST
ಕೃಷಿಯ ಸರ್ವರೋಗಕ್ಕೂ ಗಂಜಲವೇ ಮದ್ದು ಅನ್ನೋದನ್ನು ಕೆಮ್ಮರ್ಜೆಯ ಜಯನಾರಾಯಣ ಉಪಾಧ್ಯಾಯರು ಪ್ರಯೋಗಿಸಿ ತೋರಿಸಿದ್ದಾರೆ. ಅವರು ತಮ್ಮ ತೋಟದಲ್ಲಿರುವ ಅಡಕೆಗೆ ಗಂಜಲ ಪ್ರಯೋಗ ಮಾಡಿದ್ದರಿಂದ ಆ ಬೆಳೆ ಸರ್ವ ರೋಗದಿಂದ ಮುಕ್ತವಾಗಿದೆ.
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಕೆಮ್ಮರ್ಜೆಯಲ್ಲಿ ಹದಿನೇಳು ವರ್ಷಗಳಿಂದ ಕೃಷಿಯಲ್ಲಿ ಸತತ ಪ್ರಯೋಗಗಳನ್ನು ಮಾಡುತ್ತಲೇ ಬಂದವರು ಈ ಜಯನಾರಾಯಣ ಉಪಾಧ್ಯಾಯರು. ಹನಿ ನೀರಾವರಿಯೊಂದಿಗೆ ಗೋಮೂತ್ರವನ್ನು ಮಿಶ್ರ ಮಾಡಿ ಅಡಕೆ ಗಿಡಗಳಿಗೆ ಪೂರೈಸುವುದರಿಂದ ಶೀಘ್ರ ಯೋಗ್ಯ ಪರಿಣಾಮ ಸಾಧ್ಯವಿದೆಯೇ? ಹೀಗಂತ ಕೇಳುವವರಿಗೆ ಉಪಾಧ್ಯಾಯರೇ ಉತ್ತರ ಹೇಳಲು ಅಣಿಯಾಗುತ್ತಾರೆ. ಇದು ಅವರ ಹೊಸ ಪ್ರಯೋಗ. ಇದ ಗಿಡಗಳ ಮೇಲೆ ಸಾಕಷ್ಟು ಉತ್ತಮ ಪರಿಣಾಮವನ್ನು ಬೀರಿದೆ.
ಸುಮಾರು ಎಂಟು ಎಕರೆಯಲ್ಲಿ ಅಡಕೆ, ತೆಂಗು, ಕಾಳುಮೆಣಸು, ಬಾಳೆ ಮುಂತಾದ ಸಮ್ಮಿಶ್ರ ಬೆಳೆಗಳ ಜೊತೆಗೆ ಹಲವು ವರ್ಷ ಸಾವಯವದಲ್ಲೇ ಭತ್ತ ಬೆಳೆದು, ಅಕ್ಕಿ ಮಾಡಿ ಎಲ್ಲರ ಗಮನ ಸೆಳೆದವರು ಈ ಉಪಾದ್ಯಾಯರು.
ಜಯನಾರಾಯಣ ಉಪಾಧ್ಯಾಯರ ಹುಟ್ಟೂರು ಬಂಟ್ವಾಳ ತಾಲೂಕಿನ ಕಂಬಳಿಮೂಲೆ. ಪದವಿಪೂರ್ವ ಶಿಕ್ಷಣ ಮುಗಿದ ಕೂಡಲೇ ಉದ್ಯಮದ ಹೆಜ್ಜೆ ಹುಡುಕುತ್ತ ದೆಹಲಿಗೆ ಹೋದರು. ಇಪ್ಪತೂ¾ರು ವರ್ಷಗಳ ಕಾಲ ಅಲ್ಲಿ ವಿದ್ಯುನ್ಮಾನ ಕ್ಷೇತ್ರದಲ್ಲಿ ದುಡಿದವರು. ಜರ್ಮನಿ ಸೇರಿದಂತೆ ದೇಶಗಳಲ್ಲಿಯೂ ಸುತ್ತಾಡಿದವರು. ಕಡೆಗೂ ಶರಣಾದದ್ದು ಕೃಷಿಗೆ. ಆರಂಭದಲ್ಲಿ ಉಪಾಧ್ಯಾಯರನ್ನು ಕಾಡಿದ್ದು ನೀರಿನ ಕೊರತೆ. ಬಾವಿಯ ನೀರು ಬೇಗನೆ ಖಾಲಿಯಾಯಿತು. ಮತ್ತೇನು ಮಾಡೋದು? ರೇಷ್ಮೆ ಕೃಷಿಯ ಕಡೆ ಹೊರಳಿದರು. ಬಿತ್ತನೆ ಕೋಠಿ ಸೇರುತ್ತಿದ್ದ ರೇಷ್ಮೆ ಬೆಳೆಯ ಉತ್ಪಾದನೆಯಲ್ಲಿ ಹಲವು ವರ್ಷಗಳ ಕಾಲ ತಾಲೂಕಿನಲ್ಲಿ ಅವರು ಮೈಲುಗಲ್ಲು ನೆಟ್ಟಿದ್ದಾರೆ. ಅದರಿಂದ ಮೂರು ಲಕ್ಷ ರೂಪಾಯಿ ವಾರ್ಷಿಕ ವರಮಾನ ಬರುತ್ತಿತ್ತು. “ರೇಷ್ಮೆ ಕೈ ಹಿಡಿಯದೆ ಹೋಗಿದ್ದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ನನ್ನಿಂದಾಗುತ್ತಿರಲಿಲ್ಲ’ ಎನ್ನುತ್ತಾರೆ ಉಪಾಧ್ಯಾಯರು. ಅವರ ಹಿರಿಯ ಮಗ ಆಸ್ಟ್ರೇಲಿಯಾದಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ರೇಷ್ಮೆಹುಳಗಳ ಹಿಕ್ಕೆ ಅಡಕೆ ಕೃಷಿಗೆ ಉತ್ತಮ ಗೊಬ್ಬರವಾದುದು ಕೂಡ ರೇಷ್ಮೆ ಕೃಷಿಯಲ್ಲಿ ಅವರು ಗೆಲುವು ಸಾಧಿಸಲು ಪೂರಕವಾಯಿತಂತೆ.
ಈಗ ಕೊಳವೆ ಬಾವಿಯಲ್ಲಿ ಒಳ್ಳೆಯ ನೀರು ಸಿಕ್ಕಿದೆ. ಆದರೆ ನೀರನ್ನು ಮಿತವಾಗಿ ಹೇಗೆ ಬಳಸಬಹುದೆಂಬುದಕ್ಕೆ ಪಾಠವಾಗುತ್ತಾರೆ ಈ ಕೃಷಿಕರು. 1,700 ಅಡಕೆ ಮರಗಳಲ್ಲಿ ತುಂಬಿದ ಫಸಲಿದೆ. ಭತ್ತ ಬೆಳೆಯುವ ಹೊಲದಲ್ಲಿ ಹೊಸದಾಗಿ ಇಂಟರ್‌ಸಿ ಮತ್ತು ಮಂಗಳ ತಳಿಗಳ 600 ಅಡಕೆ ಗಿಡಗಳನ್ನು ನೆಟ್ಟಿದ್ದಾರೆ. ಕಳೆದ ವರ್ಷದ 1,700 ಗಿಡಗಳಿವೆ. ಇಷ್ಟು ಗಿಡಗಳಿಗೆ ಬೆಳಗ್ಗೆ ಮುಕ್ಕಾಲು ತಾಸು, ಸಂಜೆ ಒಂದೂವರೆ ತಾಸು ಹನಿ ನೀರಾವರಿ ಜಿನುಗುತ್ತದೆ. ಇಷ್ಟು ಸೂಕ್ಷ್ಮ ರಂಧ್ರದಲ್ಲಿ ನೀರು ಜಿನುಗಿದರೆ ಸಾಕೆ? ಈ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ. ಅದಕ್ಕೆ ಉಪಾಧ್ಯಾಯರು ಹೀಗನ್ನುತ್ತಾರೆ- “ಪ್ರತಿಯೊಂದು ನೀರಿನ ಹನಿ ಕೂಡ ಮಣ್ಣನ್ನು ನೆನೆಸುತ್ತ ನೆಲದಾಳಕ್ಕಿಳಿದು ಬೇರಿಗೆ ತಲಪುತ್ತದೆ. ಹೆಚ್ಚು ಪ್ರಮಾಣದಲ್ಲಿ ನೀರು ಬಂದರೆ ಬೇರಿಗಿಂತ ಆಳ ಸೇರಿ ಮರಕ್ಕೆ ಲಾಭ ಸಿಗುವುದಿಲ್ಲ’ ಅಡಕೆ ಗಿಡಗಳಿಗೆ ಇಷ್ಟೇ ನೀರು ಸಾಕು. ನೀರು ಇದೆಯೆಂದು ಹನಿಸಲು ಹೋಗುವುದು ನೀರಿನ ಕಣಜವನ್ನು ಬರಿದು ಮಾಡುವ ಪ್ರಯತ್ನ ಎಂಬುದು ಅವರ ಅನಿಸಿಕೆ. ಕಡಿಮೆ ನೀರು ಬಳಸಿ ಅಡಕೆ ಬೆಳೆಯುವ ಇಚ್ಛೆಯುಳ್ಳವರಿಗೆ ಅವರ ಕೃಷಿ ಪ್ರಧಾನ ಪಾಠವಾಗುತ್ತದೆ.
ಉಪಾಧ್ಯಾಯರು ಹನಿ ನೀರಾವರಿ ಪೂರೈಕೆಗಾಗಿ ನೆಲದಲ್ಲಿ ಹೊಂಡ ತೋಡಿ ಸುಲಭ ಖರ್ಚಿನ ತೊಟ್ಟಿ ನಿರ್ಮಿಸಿದ್ದಾರೆ. 1500 ಲೀಟರ್ ನೀರು ಶೇಖರಿಸಬಹುದು. ಇದಕ್ಕೆ ಡಿಸ್ಕ್ ಮತ್ತು ಸ್ಯಾಂಡ್ ಫಿಲ್ಟರ್‌ಗಳನ್ನು ಜೋಡಿಸಿದ್ದಾರೆ. ನೀರು ಸೂಕ್ಷ್ಮ ಧೂಳಿನ ಕಣಗಳನ್ನು ಕೂಡ ಶುದ್ಧೀಕರಿಸಿಯೇ ಮುಂದೆ ಹೋಗುತ್ತದೆ. ಹಟ್ಟಿ ತೊಳೆದ ನೀರು, ಗೋಮೂತ್ರಗಳು ಗೋಬರ್ ಬಗ್ಗಡದ ಗುಂಡಿ ಸೇರುತ್ತವೆ. ದೊಡ್ಡ ಅಡಕೆಮರಗಳಿಗೆ ಈ ಬಗ್ಗಡವನ್ನು ತಿಂಗಳಿಗೊಂದು ಸಲ ಪೈಪ್ ಮೂಲಕ ಬುಡಕ್ಕೆ ಹಾಯಿಸುತ್ತಾರೆ. ಹತ್ತು ದಿನಗಳಿಗೊಮ್ಮೆ ಹದಿನೈದು ಲೀಟರ್ ಗೋಮೂತ್ರವನ್ನು ನೇರವಾಗಿ ಸಂಗ್ರಹಿಸಿ ಹನಿ ನೀರಾವರಿಯ ಜೊತೆಗೆ ಸೇರುವಂತೆ ಇಂಜೆಕ್ಟ್ ಮಾಡಲಾಗುತ್ತದೆ. ಇದು ಹೊಸದಾಗಿ ನೆಟ್ಟ ಗಿಡಗಳ ಬುಡವನ್ನು ತಲಪುತ್ತದೆ. ಈ ವ್ಯವಸ್ಥೆಗಾಗಿ ಸುಮಾರು 45 ಸಾವಿರ ರೂಪಾಯಿ ವೆಚ್ಚವಾಗಿದೆ.
ಹನಿ ನೀರಾವರಿಯೊಂದಿಗೆ ಗೋಮೂತ್ರವನ್ನು ಸೇರಿಸಿ ಜಿನುಗಿಸುವ ಈ ನೂತನ ಪ್ರಯೋಗದಿಂದ ಏನು ಲಾಭವಿದೆ? ಒಂದು ವರ್ಷದ ಗಿಡಗಳ ಬೆಳವಣಿಗೆ ನೋಡಿದರೆ ಆರು ತಿಂಗಳು ಹೆಚ್ಚಾದಂತೆ ಕಾಣಿಸುತ್ತವೆ. ಕಡು ಬಿಸಿಲಿನಲ್ಲಿದ್ದರೂ ಒಂದು ಗರಿಯೂ ಒಣಗಿಲ್ಲ. ಪುಷ್ಟವಾಗಿ ಹಸುರಾಗಿರುವ ಗಿಡಗಳು ಆರೋಗ್ಯಕರವಾಗಿವೆ. ಅಡಕೆ ಗಿಡಗಳಿಗೆ ವರ್ಷಕ್ಕೆ ಅರ್ಧ ಬುಟ್ಟಿ ಗೊಬ್ಬರ, 19-19-19ರ ಲಿಕ್ವಿಡ್, ಕಾಲು ಕಿ.ಲೋ ಇಫೊ ರಸಗೊಬ್ಬರವನ್ನು ಎರಡು ಕಂತುಗಳಾಗಿ ಕೊಡುವುದು ಬಿಟ್ಟರೆ ಬೇರೆ ಯಾವ ಪೋಷಕಾಂಶಗಳನ್ನೂ ಉಪಾಧ್ಯಾಯರು ಬಳಸುವುದಿಲ್ಲ. ಅವರ ಹೊಸ ತೋಟದಲ್ಲಿ ಎಲ್ಲ ಕೃಷಿಕರಿಗೂ ಮಾದರಿಯಾಗುವ ನಾಟಿ ವಿಧಾನವಿದೆ. ಮುಂದೆ ತೋಟದ ಕೆಲಸಕ್ಕೆ ಯಂತ್ರಗಳನ್ನು ವಾಹನಗಳನ್ನು ಇಳಿಸಬೇಕಾದ ಸಂದರ್ಭ ಬಂದರೆ ಇರಲಿ ಅಂತ ಪ್ರತೀ ಎರಡು ಸಾಲುಗಳ ನಡುವೆ ಹನ್ನೆರಡು ಅಡಿಗಳ ಒಂದು ಹಾದಿ ಬಿಟ್ಟಿದ್ದಾರೆ. ಎಂಟು ಅಡಿಗಳ ಅಂತರದ ಸಾಲಿನಲ್ಲಿ ಆರು ಅಡಿಗೆ ಒಂದರಂತೆ ಗಿಡಗಳ ನಾಟಿ ಮಾಡಿದ್ದಾರೆ. ಹೀಗಿದ್ದರೂ ಎಕರೆಗೆ 536 ಗಿಡಗಳ ನಾಟಿ ಮಾಡಲು ಸಾಧ್ಯವಾಗಿದೆ.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷರೂ ಆಗಿರುವ ಉಪಾಧ್ಯಾಯರು ನಾಲ್ಕು ದನಗಳನ್ನು ಸಾಕಿ ಹೈನುಗಾರಿಕೆ ಮಾಡುತ್ತಿದ್ದಾರೆ. ಮನೆಯ ಖರ್ಚಿಗೆ ಬೇಕಾಗುವಷ್ಟೇ ಗೋಬರ್ ಅನಿಲ ಉತ್ಪಾದಿಸುತ್ತಾರೆ. ಅತಿ ಕಡಿಮೆ ಪ್ರಮಾಣದ ಕೂಲಿ ಕಾರ್ಮಿಕರ ಬಳಕೆಗೂ ಅವರ ತೋಟ ಮಾದರಿಯಾಗಿದೆ. ಗೋಮೂತ್ರ ಪ್ರಯೋಗದ ಇನ್ನಷ್ಟು ಫಲಿತಾಂಶಕ್ಕಾಗಿ ಅವರು ಕಾಯುತ್ತಿದ್ದಾರೆ. ಬಳಿಕ ಎಲ್ಲ ಮರಗಳಿಗೂ ಅದನ್ನು ಪೂರೈಸುವ ಯೋಜನೆ ಅವರಲ್ಲಿದೆ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.