ಹಸಿರು ಕಟ್ಟುವ ವೀರರು ಶೀಘ್ರ ಬೆಳೆಯುವ ಶೂರರು


Team Udayavani, Dec 17, 2018, 6:00 AM IST

kalave-1.jpg

ಬೇಸಾಯದ ತಂತ್ರಗಳು ಪರಿಸರ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿವೆ. ಬೇವಿನ ಗಿಡ ನೆಟ್ಟು ಮಾವಿನ ಫ‌ಲ ಸಾಧ್ಯವೇ? ಶರಣರು ಅಂದು ಕೇಳಿದ್ದರು. ಫ‌ಲವತ್ತಾದ ಮಣ್ಣಿಲ್ಲದ ಕಡೆ ಬೆಳೆ ಬೆಳೆಯುವಾಗ ಮೊದಲು ಮಣ್ಣಿನ ಆರೋಗ್ಯಕ್ಕೆ ಶೀಘ್ರ ಬೆಳೆಯುವ ಮರ ಬೆಳೆಸಬೇಕು.  ನಂತರ ಮುಖ್ಯ ಬೆಳೆಯ ಕುರಿತು ಯೋಚಿಸಬೇಕು. ಕೃಷಿ ಕಾಲ ಎಷ್ಟು ಬದಲಾಗಿದೆಯೆಂದರೆ ಬೇವು ನೆಟ್ಟು ಮಾವಿನ ಫ‌ಲ ಪಡೆಯಬೇಕಾಗಿದೆ. 

ನಿಸರ್ಗ ರಮ್ಯ ಶರಾವತಿ ಕಣಿವೆಯಲ್ಲಿ ಗೇರುಸೊಪ್ಪ ಟೇಲರೇಸ್‌ ಅಣೆಕಟ್ಟೆಗಾಗಿ ಎರಡು ದಶಕಗಳ ಹಿಂದೆ ಕಾಡು ಕಡಿದಿದ್ದರು. ನದಿ ಕಣಿವೆಯ ನಾಟಾಗಳನ್ನು ಮಳೆಗಾಲಕ್ಕೆ ಮುಂಚೆ ಸಾಗಿಸಿ ಅಳಿದುಳಿದ ಸೊಪ್ಪು ಟಿಸಿಲುಗಳಿಗೆ ಬೆಂಕಿ ಹಾಕಿ ಸುಡಲಾಯಿತು. ಮರ ಕಡಿತದ ನೆಲೆ ಸ್ಮಶಾನದಂತೆ ಕಾಣಿಸುತ್ತಿತ್ತು. ನಂತರ, ಅಬ್ಬರದ ಮಳೆ ಶುರುವಾಯ್ತು. ಎರಡು ತಿಂಗಳ ನಂತರ ಮರ ಕಡಿತವಾದ ಜಾಗ ವೀಕ್ಷಿಸಿದರೆ ಅಚ್ಚರಿ.  ಚಂದಕಲು (ಮೆಕರಂಗಾ ಪೆಲ್ಟಾಟಾ)  ಸಸ್ಯ ಸಮೂಹ ಹತ್ತಾರು ಅಡಿ ಎತ್ತರ ಬೆಳೆದು ದಟ್ಟ ಹಸಿರು ಕವಚ ರೂಪಿಸಿತ್ತು. ಕತ್ತಿ ಕಾಳಗ ನಡೆಯುವಾಗ ರಕ್ಷಣೆಗೆ ಹಿಡಿಯುವ “ಗುರಾಣಿ'(ಪೆಲ್ಟಾಟಾ) ಇದರ ಸಸ್ಯಶಾಸ್ತ್ರೀಯ ಹೆಸರಿನಲ್ಲಿ ಸೇರ್ಪಡೆಯಾಗಿದ್ದಕ್ಕೆ ಪುರಾವೆಯಾಗಿ ಸಸ್ಯ ದೊಡ್ಡೆಲೆಯ ಹಸಿರು ಗುರಾಣಿ ಹಿಡಿದು ಅಬ್ಬರದ ಮಳೆಯಲ್ಲಿ ಭೂಮಿಯ ಮಾನಮುಚ್ಚಲು ಹೋರಾಡಿತು. ಬೆಂಕಿ ಬಿದ್ದಲ್ಲಿ ಬೆಳೆಯುತ್ತದೆ, ಬೆಂಕಿ ಕಡ್ಡಿ ತಯಾರಿಗೆ ಬಳಕೆಯಾಗುತ್ತದೆಂದು ಬ್ರಿಟೀಷ್‌ ಸಸ್ಯ ಶಾಸ್ತ್ರಜ್ಞರು 18 ನೇ ಶತಮಾನದಲ್ಲಿ ಮರ ಗುರುತಿಸಿದಂತೆ ವರ್ತನೆ ತೋರಿಸಿತು.  ಮುಂದಿನ ಐದಾರು ತಿಂಗಳಿನಲ್ಲಿ ಭೂಗತವಾಗಿದ್ದ ಇನ್ನುಳಿದ ವೃಕ್ಷದ ಬೇರುಗಳು ಚಿಗುರಿ ಸಸ್ಯ ವೈಧ್ಯ ಅವತರಿಸಿತು. ಮಾನವ ಆಕ್ರಮಣದ ಮಧ್ಯೆ ಕಾಡು ಕೂಡಿತು.

ಬೆಳೆದು ನಿಂತ ಹೆಮ್ಮರಗಳ ಸಮೂಹ ನೋಡಿ ನಾವು ವನಪರಿಚಯ ಪಡೆಯುತ್ತೇವೆ. ಮರಗಳು ಸವಾಲು ಎದುರಿಸಿ ಹೇಗೆ ಬೆಳೆದು ನಿಂತವೆಂದು ನಮಗೆ ಗೊತ್ತಾಗುವುದಿಲ್ಲ. ಮರಗಳ ಕೆಳಗಡೆ ಮಳೆಗಾಲದಲ್ಲಿ ಲಕ್ಷಾಂತರ ಸಸಿಗಳು ಪ್ರತಿ ವರ್ಷ ಜನಿಸುತ್ತವೆ. ಇವುಗಳಲ್ಲಿ ಮರವಾಗುವವೂ ಒಂದೆರಡೂ ಇಲ್ಲ. ಬೆಂಕಿ, ದನಕರು, ಮಳೆ ಕೊರತೆ, ಮಾನವ ಹಸ್ತಕ್ಷೇಪಗಳನ್ನು ದಾಟಿ ಹೆಮ್ಮರವಾಗಬೇಕು. ಖುಷಿಗಾಗಿ, ಕಾಸಿಗಾಗಿ ತೋಟ ಬೆಳೆಯಲು ಹೊರಡುವಾಗಲೂ ಇಂಥದೇ ಅಡೆತಡೆಗಳಿವೆ.  ನಮ್ಮ ಸ್ವಭಾವ ಹೇಗಿದೆಯೆಂದರೆ ನೆಟ್ಟಿದ್ದೆಲ್ಲ ಮರವಾಗಬೇಕು, ಫ‌ಲ ಕೊಡಬೇಕು. ಕೃಷಿಕರ ಮನಸ್ಸು ಮಾರುಕಟ್ಟೆ ನೋಡುತ್ತ ಮರದ ಲೆಕ್ಕಾಚಾರ ಹಾಕಿದರೆ ಸಸ್ಯಗಳು  ಮಣ್ಣು, ಪರಿಸರ ಅನುಕೂಲತೆಯಿಂದ ಬೆಳೆಯುತ್ತವೆ. ಹೀಗಾಗಿ, ಕಾಡು ತೋಟ ಗೆಲ್ಲಲು ಕಾಯುವ ತಾಳ್ಮೆ ಅಗತ್ಯವಿದೆ. ಮಲೆನಾಡಿನಲ್ಲಿ ಹೊಸ ಅಡಿಕೆ ತೋಟ ನಿರ್ಮಿಸುವ ಭೂಮಿಯಲ್ಲಿ ಮೊದಲು ಕಬ್ಬು ಬೆಳೆಯುತ್ತಿದ್ದರು. ಒಂದೆರಡು ವರ್ಷ ಕಬ್ಬು ಬೆಳೆದ ನೆಲ ನಂತರ ಅಡಿಕೆ ಬೆಳೆಯಲು ಯೋಗ್ಯವೆಂಬ ಪಾರಂಪರಿಕ ಜಾnನ ನಾಲ್ಕು ದಶಕಗಳ ಹಿಂದೆ ಇತ್ತು. ಅಡಿಕೆ ನಾಟಿ ಮುಗಿದು ತಕ್ಷಣ ಬಾಳೆ ನೆಡುವುದು ಮುಂದಿನ ಹೆಜ್ಜೆ. ಎಳೆ ಅಡಿಕೆ ಸಸಿಗೆ ಬೇಸಿಗೆಯ ಪ್ರಖರ ಬಿಸಿಲಿಗೆ ಹಸಿರು ಕೊಡೆಗಳಂತೆ ಬಾಳೆ ನೆರವಾಗುತ್ತಿತ್ತು. ನಾವು ಹೇಗಿದ್ದೇವೆಂದರೆ ಉತ್ತಮ ಬೆಲೆ ಸಿಗುತ್ತದೆಂದು ಬರದ ನೆಲದಲ್ಲಿ ಬೆಳೆಯುವ ರೋಜಾ ಕಂಟಿ, ಕಾರೆ ಕಂಟಿ ಜಾಗದಲ್ಲಿ ಅಡಿಕೆ ನೆಡುತ್ತೇವೆ. ಹೀಗಾಗಿ, ನೀರು, ನಿರ್ವಹಣೆಯ ಖರ್ಚು ಏರುತ್ತಿದೆ.

ಬೆಳಗಾವಿ, ಬಾಗಲಕೋಟೆ, ಬೀದರ್‌ ಪ್ರದೇಶಗಳಲ್ಲಿ ಕಬ್ಬು ಬೆಳೆಯುವ ನೆಲಕ್ಕೆ ಸೆಣಬು ಹಾಕುತ್ತಾರೆ.  ಸೆಣಬಿನ ಹಸಿರಿನಿಂದ ಮಣ್ಣಿಗೆ ಸಾವಯವ ಶಕ್ತಿ ಒದಗಿಸುತ್ತಾರೆ. ಬೇಸಿಗೆಯಲ್ಲಿ ದ್ವಿದಳ ಧಾನ್ಯ ಬೆಳೆದು ಮಳೆಗಾಲದಲ್ಲಿ ಭತ್ತ ಬೆಳೆಯುವ ತಂತ್ರಗಳಂತೂ ಎಲ್ಲರಿಗೂ ಗೊತ್ತಿದೆ. ಗದ್ದೆಗೆ ಮಳೆ ಬಿದ್ದ ತಕ್ಷಣ ಸಣಬು, ಡಯಂಚ ಬಿತ್ತಿದರೆ ಸೊಗಸಾಗಿ  ಆಳೆತ್ತರ ಬೆಳೆಯುತ್ತದೆ.  ನಾಟಿಗೆ ತಿಂಗಳು ಮುಂಚೆ ಉಳುಮೆ ಮಾಡಿ ನೀರು ಕಟ್ಟಿದರೆ ಗಿಡ ಕೊಳೆತು ಮಣ್ಣಿಗೆ ಸೇರಿ ಸತ್ವ ಹೆಚ್ಚುತ್ತದೆ. ಆಗ ಸಸಿಯನ್ನು ನಾಟಿ ಮಾಡಿದರೆ ದೊಡ್ಡಿ ಗೊಬ್ಬರದ ಹೆಚ್ಚಿನ ಖರ್ಚಿಲ್ಲದೇ ಹುಲಸಾಗಿ ಭತ್ತದ ಬೆಳೆ ಪಡೆಯಬಹುದು. ಮಣ್ಣನ್ನು ಮುಖ್ಯ ಬೆಳೆಗೆ ಒಗ್ಗಿಸಲು  ಇಂಥ ತಂತ್ರಗಳು ಬೇಕು.  

ಮಣ್ಣಿಗೆ ಶಕ್ತಿ ನೀಡಲು ಕಳೆ ಗಿಡ, ದ್ವಿದಳ ಧಾನ್ಯ, ಹುಲ್ಲು, ಬಳ್ಳಿ ಬೆಳೆಸುವ  ದಾರಿಗಳಿವೆ. ಮೇಲ್ಮಣ್ಣು, ತೇವ ರಕ್ಷಣೆಗೆ ರಬ್ಬರ್‌ ತೋಟಕ್ಕೆ ಮುಚ್ಚಿಗೆಯಾಗಿ ಮ್ಯುಕುನಾ, ಅಡಿಕೆಗೆ ವೆಲ್‌ವೆಟ್‌ ಅವರೆಯ ಬಳ್ಳಿ ಹಬ್ಬಿಸುವುದೂ ಒಂದು ಪ್ರಯತ್ನ.  ಸಾಮಾನ್ಯವಾಗಿ  ಮಳೆಗಾಲದಲ್ಲಿ ಸಸಿ ನೆಡುವುದು ಜಾಸ್ತಿ. ಬೇಸಿಗೆಯಲ್ಲಿ  ಬಿಸಿಯೇರಿದ ಭೂಮಿಗೆ ಮಳೆಗಾಲದ ಆರಂಭದಲ್ಲಿ ಸಸಿ ಊರಿದರೆ ಚೆನ್ನಾಗಿ ಬೇರಿಳಿಸಿ ಬೆಳೆಯುತ್ತದೆ. ಆಗಾಗ ಹನಿ ಸುರಿಯುವುದರಿಂದ ನೀರುಣಿಸುವ ಪ್ರಮೇಯ ಇರುವುದಿಲ್ಲ. ಮಳೆಗಾಲದಲ್ಲಿ ನೆಟ್ಟ ಸಸಿ ಉಳಿಕೆಯ ಪ್ರಮಾಣ ಜಾಸ್ತಿ. ಆದರೆ ಕೆಲವು ಸಸ್ಯಗಳು  ಬೇಸಿಗೆಯ ಆರಂಭದಲ್ಲಿ ಬಿಸಿಲಿಗೆ ಭಯ ಗೊಳ್ಳುತ್ತವೆ. ಎಷ್ಟೇ ನೀರು ನೀಡಿದರೂ ಬಿಸಿಲು ಸಹಿಸಲು ಆಗುವುದಿಲ್ಲ.  ಆಗ ಅಕ್ಕಪಕ್ಕ ನೆರಳು ನೀಡುವ ಮರಗಳಿದ್ದರೆ ಅನುಕೂಲ. ಈ ಸೂಕ್ಷ್ಮಅರ್ಥಮಾಡಿಕೊಂಡ ಹಿರಿಯರು, ತೋಟ ಬೆಳೆಸುವ ಮುನ್ನ ನೆರಳು ವೃಕ್ಷಗಳಿಗೆ ಮನ್ನಣೆ ನೀಡಿದ್ದಾರೆ. 

ಕಾಡಿನ ಕಲ್ಲುಗುಡ್ಡಗಳನ್ನು ಗಮನಿಸಬೇಕು. ಹುಲ್ಲು, ಬಳ್ಳಿ, ಮುಳ್ಳುಕಂಟಿಗಳು ಹತ್ತಾರು ವರ್ಷ ಬೆಳೆದ ಬಳಿಕ ವೃಕ್ಷ ಜಾತಿಗಳು ಬೆಳೆಯುತ್ತವೆ. ಮುಳ್ಳುಕಂಟಿ, ಪೊದೆಗಳಿಂದ ವಾಣಿಜ್ಯ ಲಾಭವಿಲ್ಲ,  ಮರಗಳು ಮಾತ್ರ ಇರಬೇಕೆಂದು  ಉಳಿದವನ್ನು ಕಡಿದರೆ ಭೂಮಿ ಬರಡಾಗಿ ಏನೂ ಬೆಳೆಯದ ಸ್ಥಿತಿ ತಲುಪುತ್ತದೆ. ಮಣ್ಣಿಗೆ ಮರಗಳನ್ನು ಹೊಂದುವ ಅವಕಾಶ ದೊರೆಯಲು ವಿವಿಧ ಹಂತಗಳಲ್ಲಿ ಸಸ್ಯಗಳ  ನೆರವು ಬೇಕಾಗುತ್ತದೆ. ಅರಣ್ಯ ಬೆಳೆಯುವ ಸ್ವರೂಪಗಳನ್ನು ನೋಡುತ್ತ ಹೋದರೆ ತೋಟವನ್ನು ಹೇಗೆ ಬದಲಿಸಬೇಕೆಂದು ಗೊತ್ತಾಗುತ್ತದೆ. ಕಾಡಿನ ಹೊನ್ನೆ ಸಾಮಾನ್ಯವಾಗಿ ಗೊಣಗಲು ಮುಳ್ಳುಕಂಟಿಯ ನಡುವೆ ಜನಿಸಿ ಮರವಾಗುತ್ತದೆ. ಹೊನ್ನೆಯ ಎಳೆ ಚಿಗುರನ್ನು ದನಕರು, ಜಿಂಕೆಗಳು ತಿನ್ನದಂತೆ ಮುಳ್ಳು ಪೊದೆ, ನೈಸರ್ಗಿಕ ಟ್ರೀ ಗಾರ್ಡ್‌ನಂತೆ ರಕ್ಷಣೆ ನೀಡುತ್ತದೆ. ಕಂಟಿಯ ಬುಡದ ಫ‌ಲವತ್ತಾದ ಮಣ್ಣು  ಆಳಕ್ಕೆ ಬೇರಿಳಿಸುವ ಹೊನ್ನೆಯನ್ನು ಪೋಷಿಸುತ್ತದೆ.  ಹೆಮ್ಮರಗಳ ಕಾಡು ಬೆಳೆಯುವ ಪೂರ್ವದಲ್ಲಿ ಶೀಘ್ರವಾಗಿ ಬೆಳೆಯುವ ಸಸ್ಯ ಸಂಕುಲಗಳನ್ನು ನಿಸರ್ಗ ನೇಮಿಸುತ್ತದೆ. ಇವುಗಳ ನಡುವೆ ಕಿಂದಳ, ತಾರೆ, ನೇರಳೆ, ಹೆನ್ನೇರಳೆ, ಮಸೆ, ಬನಾಟೆ, ಹೊಳೆಗೇರು ಮುಂತಾದವು ಬೆಳೆಯುತ್ತವೆ. ಕಾಡು ಗೆಲ್ಲಲ್ಲು ಮುಂಚೂಣಿಯಲ್ಲಿ ನಿಲ್ಲುವ ಸಸ್ಯಗಳು ಮರ ದಟ್ಟಣೆ ಹೆಚ್ಚಿದಂತೆ ನಶಿಸುತ್ತವೆ. ಕೆಲಸ ಪೂರೈಸಿ ಕಾಲೆ¤ಗೆಯುತ್ತವೆ. ವನ ವ್ಯವಸ್ಥೆ, ಮಣ್ಣು ಪರಿವರ್ತನೆಯ ಕ್ರಿಯೆಯನ್ನು ಬೇರೆ ಬೇರೆ ಸಸ್ಯಗಳ ಮೂಲಕ ಸೊಗಸಾಗಿ ನಿರ್ವಹಿಸುತ್ತದೆ.  

ಇಂದು ಫಾಸ್ಟ್‌ಪುಡ್‌ ಯುಗ. ಹಸಿವಾದ ತಕ್ಷಣ ತಿಂಡಿ, ತಟ್ಟೆಯಲ್ಲಿರಬೇಕು. ಹೊಸದಾಗಿ ತೋಟ ಮಾಡುವ ಹೆಚ್ಚಿನವರಲ್ಲಿ ಸಾಮಾನ್ಯವಾಗಿ ಇಂಥ ಮನಃಸ್ಥಿತಿ. “ಸರ್‌, ಯಾವ ಮರ ಬೇಗ ಬೆಳಿತ್ರಾ?’ ಎಂಬುದರಿಂದ  ಪ್ರಶ್ನೆ ಶುರುವಾಗುತ್ತದೆ. ಒಂದು ಊರಲ್ಲಿ ಬಹುಬೇಗ ಬೆಳೆಯುವುದು ಇನ್ನೊಂದು ಊರಲ್ಲಿ ಸೊರಗಬಹುದು. ಇತ್ತೀಚಿನ ದಶಕಗಳಲ್ಲಿ ಮರ ಬೆಳೆಸುವವರೆಲ್ಲ ಹೆಬ್ಬೇವಿನ ಹಿಂದೆ ಬಿದ್ದಿದ್ದಾರೆ. ಹುಣಸೂರಿನಿಂದ ಶುರುವಾಗಿ ರಾಮದುರ್ಗದ ಬೆಟ್ಟದ ಹೊಲದಲ್ಲಿಯೂ ಹಸಿರು ಭೀಮನಿಗೆ ಜೈಕಾರ ನಡೆದಿದೆ. ಹೊಲದ ಬದು, ದಾಳಿಂಬೆ ಹಾಗೂ ಮಾವಿನ ತೋಟಗಳಲ್ಲಿ ಮರ ಬೆಳೆಸಿದ್ದು ನೋಡಬಹುದು. 25 ವರ್ಷಗಳ ಹಿಂದೆ ತಿಪಟೂರು, ಕೊಳ್ಳೆಗಾಲ, ಹುಣಸೂರು, ಹಾಸನದ ಕೆಲವೆಡೆ ಹೊಲದ ಬದಿಯಲ್ಲಿ ಹೇಗೋ ಬೆಳೆಯುತ್ತಿದ್ದ ಮರಕ್ಕೆ  ಇಂದು ಶೀಘ್ರ ಬೆಳೆಯುವ ವೃಕ್ಷ ಎಂಬ ಕಾರಣಕ್ಕೆ ಮಾನ್ಯತೆ ದೊರಕಿದೆ.  ಭೂಮಿಯಲ್ಲಿ ಫ‌ಲ ವೃಕ್ಷಗಳನ್ನು ಬೆಳೆಯುವ ಪೂರ್ವದಲ್ಲಿ ನೆಲದ ಸತ್ವ ಹೆಚ್ಚಳ, ನೆರಳು, ಉಪಉತ್ಪನ್ನದ ಉದ್ದೇಶದಿಂದ ಶೀಘ್ರ ಬೆಳೆಯುವ ಸಂಕುಲ ಹುಡುಕುತ್ತೇವೆ. ಸಿಲ್ವರ್‌ ಓಕ್‌, ಗಾಳಿ, ಅಕೇಶಿಯಾ ಅರಿಕ್ಯುಲಿ ಫಾರ್ಮಿಸ್‌, ಅಕೇಶಿಯಾ ಮ್ಯಾಂಜಿಯಂ, ನೀಲಗಿರಿ, ಸುಬಾಬುಲ್‌ ಹೀಗೆ ಹೊಲಕ್ಕೆ ಬಂದ ದೇಶಿ ಸಸ್ಯಗಳಿವೆ. ಹೊಂಗೆ, ಬೇವು, ಕರಿಜಾಲಿ, ಹುಣಸೆ, ಬೇಲ ಸಾಮಾನ್ಯವಾಗಿ ಬಯಲು ನಾಡಿನ ಅಕ್ಕರೆಯಾಗಿದೆ. ನಮ್ಮ ಅರಣ್ಯದ  ಚಂದಕಲು, ಬನಾಟೆ, ಮಹಾಗನಿ, ಕಾಡುಬೆಂಡೆ ಮುಂತಾದ ನೆಲದ ವೃಕ್ಷಗಳಿವೆ. ಬೀದರ್‌ನಲ್ಲಿ, ಕರ್ನಾಟಕ ಅರಣ್ಯ ಇಲಾಖೆಯು ಮೂರು ವರ್ಷದ ಹಿಂದೆ ವನವೊಂದನ್ನು  ಅಭಿವೃದ್ಧಿಪಡಿಸಿದೆ. ರಂಜಲು, ಮಾವು, ಮುರುಗಲು, ಹಲಸು, ಬಿಳಿಮತ್ತಿ ಮುಂತಾದ ಪಶ್ಚಿಮಘಟ್ಟದ ವೃಕ್ಷಗಳು ಇಲ್ಲಿ ಎಷ್ಟು ಚೆನ್ನಾಗಿ ಎತ್ತರ ಬೆಳೆದಿವೆಯೆಂದರೆ  ಇಷ್ಟು ವರ್ಷ ಯಾಕೆ ಬಯಲು ನಾಡಿನ ವ್ಯಾಪಕ ಅರಣ್ಯೀಕರಣದಲ್ಲಿ ಇವುಗಳನ್ನು ಬೆಳೆಸಿಲ್ಲವೆಂಬ ನೋವು ಅಲ್ಲಿ ಕೆಲಸ ನಿರ್ವಹಿಸಿದ ಅರಣ್ಯಾಧಿಕಾರಿಗಳನ್ನು ಕಾಡುತ್ತಿದೆ.  

ಸಸ್ಯಗಳು ನರ್ಸರಿಯ ಮೂಲಕ ನಮ್ಮ ಹೊಲಕ್ಕೆ ಬರುತ್ತವೆ. ಸಸಿ ಬೆಳೆಸಿದ ನರ್ಸರಿ ಒಂದೇ ಆದರೂ ಬೆಳೆಯುವ ಸ್ವಭಾವ ಬೇರೆಯಾಗಿರುತ್ತದೆ. ಎಲೆಯ ಗಾತ್ರ, ಕಾಂಡದ ಸ್ವರೂಪ, ಮರಟೊಂಗೆ ಬೆಳೆಯುವ ರೀತಿ, ಬೇರಿನ ಬೆಳವಣಿಗೆ ಪ್ರತಿ ಜಾತಿಯಲ್ಲಿ ಭಿನ್ನವಿದೆ. ನೀರು, ನೆರಳು, ಬಿಸಿಲು ಅಗತ್ಯಕ್ಕೆ ತಕ್ಕಷ್ಟು ಸಿಕ್ಕಾಗ ಖುಷಿಯಿಂದ ಪುಟಿದೇಳುತ್ತವೆ. ಮಣ್ಣು, ನೀರು ಪರೀಕ್ಷಿಸಿ ವಿಜಾnನ ಎಷ್ಟೇ ಸಲಹೆ ನೀಡಿದರೂ ಸಸಿ ನೆಟ್ಟ ನೆಲ ನಿತ್ಯವೂ ಹೊಸ ಹೊಸ ಸವಾಲು ಒಡ್ಡುತ್ತದೆ. ನೀರು ಹೆಚ್ಚಾದಾಗ ಕಳೆ ಬೆಳೆದು, ಜೌಗಾಗಿ ಸಸಿ ಮಂಕಾಗಬಹುದು. ಸಸ್ಯದ ಬುಡಭಾಗ ಓಡಾಡಲಾಗದಷ್ಟು ಕೆಸರೆದ್ದ ಎರೆ ಮಣ್ಣಿನಲ್ಲಿ ಎರಡಡಿ ಆಳದ ಮಸಾರಿ ಮಣ್ಣಿಗೆ ಹನಿ ನೀರು ತಲುಪಿರುವುದಿಲ್ಲ. ತಾನು ಸಾಕಷ್ಟು ನೀರು ಕುಡಿದ ಬಳಿಕವೇ ಎರೆ ಮಣ್ಣು ಕೆಳಪದರಕ್ಕೆ ಹರಿಯಲು ಅವಕಾಶ ನೀಡುತ್ತದೆ. ಹೀಗಾಗಿ ತೋಟದ ಮೇಲ್ಮೆ„ಯಲ್ಲಿ ಒದ್ದೆಯಾಗಿದ್ದರೂ ಮರದ ಬೇರಿಗೆ ನೀರಿಲ್ಲದೇ ಸೊರಗುತ್ತವೆ. ಮರ ಅಭಿವೃದ್ಧಿಯಲ್ಲಿ ಸಸ್ಯಗುಣದ ಜೊತೆಗೆ ಮಣ್ಣಿನ ಸ್ವಭಾವವನ್ನೂ ಗಮನಿಸಬೇಕಾಗುತ್ತದೆ. 

ಫಾಸ್ಟ್‌ ಫ‌ೂÅಟ್‌ಗಳ ಹಿಂದೆ…
30-40 ವರ್ಷಗಳ ಹಿಂದೆ  ತೆಂಗು, ಅಡಿಕೆ, ಹಲಸು, ಮಾವು ನೆಡುವಾಗ ಹತ್ತು ವರ್ಷಕ್ಕೆ ಫ‌ಲ ದೊರೆಯುತ್ತಿತ್ತು. ಈಗ ನಮಗೆಲ್ಲ ಒಂದೆರಡು ವರ್ಷಕ್ಕೆ ಫ‌ಲ ನೀಡುವ ತಳಿಗಳು ಬೇಕು. ನಮ್ಮ ಮನಸ್ಸು ಫಾಸ್ಟ್‌ಪುಡ್‌ನ‌ಂತೆ ಫಾಸ್ಟ್‌ಫ‌ೂÅಟ್ಸ್‌ಗಳ ಹಿಂದೆ ಓಡುತ್ತಿದೆ.  “ನೆಲ ಗುಣ ಬದಲಿಸದೇ ಮರ ಬೆಳೆಸಲಾಗದು, ಮರ ಬೆಳೆಯದೇ ನೆಲದ ಗುಣ ಬದಲಾಗದು’ ನಾವೆಲ್ಲರೂ ಇಂದು ವಿಚಿತ್ರ ಸಂದರ್ಭದಲ್ಲಿ ನಿಂತಿದ್ದೇವೆ. ಮಳೆಕಾಡುಗಳಲ್ಲಿ ನೂರಾರು ವರ್ಷ ಬಾಳುವ ವೃಕ್ಷಗಳು ಕಡಿಮೆ. ಬೇಗ ಬೆಳೆದು ಒಣಗುವ ಇವು ಹ್ಯೂಮಸ್‌, ಫ‌ಲವತ್ತತೆ ಹೆಚ್ಚಿಸುತ್ತವೆ. ಸಸ್ಯ ಬೇರುಗಳು ಒಣಗಿ ಪೊಳ್ಳಾಗಿ ಮಳೆ ನೀರು ಇಂಗಿಸಲು ಸಹಾಯ ಮಾಡುತ್ತವೆ. ತೊರೆಗಳು ವರ್ಷವಿಡೀ ಹರಿಯಲು ಸಾಧ್ಯವಾಗಿದೆ. ನಮ್ಮ ಮಣ್ಣಿನಲ್ಲಿ ಯಾವ ಸಸ್ಯ ಬೆಳೆಯುತ್ತದೆಂದು ಇಷ್ಟವೆಂದು ಗಮನಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನೀಲಗಿರಿ, ಅಕೇಶಿಯಾದಂಥ  ಆಕ್ರಮಣಕಾರಿ ಶೀಘ್ರ ಬೆಳೆಯುವ ಸಸ್ಯ ಮುಂಚೂಣಿಗೆ ತಂದರೆ ಮಣ್ಣು  ಗೆಲ್ಲಲಾಗುವುದಿಲ್ಲ. ಎರೆಹುಳು, ಸೂûಾ¾ಣು ಜೀವಿಗಳ ಮಾತು ಆಲಿಸದಿದ್ದರೆ, ಕಾಡು ತೋಟಕ್ಕೆ  ಬಣ್ಣ ತುಂಬುವ ಕೆಲಸ ಯಾವತ್ತೂ ಸಾಧ್ಯವಿಲ್ಲ. 

ಮುಂದಿನ ಭಾಗ – ಹಣ್ಣೆಲೆ ಬೀಳುವಾಗ ಹಸಿರೆಲೆ ನಗಬೇಕು

– ಶಿವಾನಂದ ಕಳವೆ

ಟಾಪ್ ನ್ಯೂಸ್

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.