ಹೆಗಡೆ ತೋಟದ ರಹಸ್ಯಗಳು
Team Udayavani, Nov 26, 2018, 6:00 AM IST
ಸಾಮಾನ್ಯವಾಗಿ ಕಾಫಿತೋಟಗಳಲ್ಲಿ ತಾಳೆಯನ್ನು ಬೆಳೆಸುವುದಿಲ್ಲ. ಈ ತೋಟದಲ್ಲಿ ತಾಳೆ ಬೆಳೆಗೂ ಆದ್ಯತೆ ನೀಡಲಾಗಿದೆ. ಇದರಿಂದ ಆಗುವ ಅನುಕೂಲಗಳು ಅಪಾರ. ಬೆಳೆಗಾರರಿಗೆ ನಿರಂತರ ಆದಾಯ ಒದಗಿಸುವ ನಿಟ್ಟಿನಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೇ ಇವುಗಳಿಗೆ ರೋಗ-ಕೀಟ ಬಾಧೆಯೂ ಕಡಿಮೆ.
ರಾಸಾಯನಿಕ ಮುಕ್ತ ಕೃಷಿ-ತೋಟಗಾರಿಕೆ ಪರಿಣಾಮಗಳು ಅನೇಕ. ಕೃಷಿ ಭೂಮಿಯ ಮಣ್ಣು ಭಾರಿ ಫಲವತ್ತತೆಯಿಂದ ಕೂಡಿರುತ್ತದೆ. ಇಳುವರಿಯಲ್ಲಿ ಸುಸ್ಥಿರತೆ ಇರುತ್ತದೆ. ಭೂಮಿಯಲ್ಲಿನ ಜೈವಿಕ ಚಟುವಟಿಕೆಗಳು ಅತ್ಯುತ್ತಮವಾಗಿರುತ್ತವೆ. ಇದಲ್ಲದೇ ಅಂತರ್ಜಲ ಶುದ್ಧವಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ಸ್ವಾವಲಂಬನೆ ಹೆಚ್ಚುತ್ತಾ ಹೋಗುತ್ತದೆ. ಇಷ್ಟೆಲ್ಲ ಮಾಡಲು ದೃಢ ನಿರ್ಧಾರ ಬೇಕು.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹರಿಹಳ್ಳಿಯಲ್ಲಿ ಡಾ. ವಿ.ಪಿ. ಹೆಗಡೆ ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅನುಸರಿಸುವ ನಿರ್ಧಾರ ಮಾಡಿದ್ದಾರೆ. ಇವರು ಹಿರಿಯ ನಿವೃತ್ತ ಕೃಷಿವಿಜ್ಞಾನಿ. ವಿಜ್ಞಾನಿ ಆಗುವುದಕ್ಕೂ ಮೊದಲೂ, ಕೃಷಿ ಮಾಡುತ್ತಿದ್ದರು. ನಿವೃತ್ತಿ ಹೊಂದಿದ ನಂತರ ಪೂರ್ಣ ಪ್ರಮಾಣದಲ್ಲಿ ಕೃಷಿಕರಾದರು. ಆಗ ಯಾವುದೇ ಕಾರಣಕ್ಕೂ ತೋಟದೊಳಗೆ ರಾಸಾಯನಿಕ ಕೀಟನಾಶಕ, ಗೊಬ್ಬರಗಳನ್ನು ತರುವುದಿಲ್ಲವೆಂದು ಶಪಥ ಮಾಡಿ, ಈಗ ಅದೇ ದಾರಿಯಲ್ಲಿ ಮುಂದುವರಿದಿದ್ದಾರೆ.
ಡಾ. ವಿ.ಪಿ. ಹೆಗಡೆ ಅವರು ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕದವರು. ಕೃಷಿ ಪದವಿಧ ಪಡೆದ ನಂತರ ಖಾಸಗಿ ಕಂಪನಿಗಳ ಬೃಹತ್ ಎಸ್ಟೇಟುಗಳಲ್ಲಿ ಕೆಲಸ ಮಾಡಿದರು. ಅಲ್ಲಿ ರಾಸಾಯನಿಕ ಕೃಷಿ ಮತ್ತು ಸಾವಯವ ಕೃಷಿಯ ಪರಿಣಾಮಗಳನ್ನು ಪ್ರಾಯೋಗಿಕವಾಗಿ ತಿಳಿದರು. ಇದರಿಂದಾಗಿ ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿ ಅತ್ಯುತ್ತಮ ಎನ್ನುವುದು ಅವರಿಗೆ ತಿಳಿಯಿತು.
ಇವರ ತೋಟ, ಹೇಮಾವತಿ ನದಿ ಹಿನ್ನೀರಿನ ಪಕ್ಕದಲ್ಲಿದೆ. ಮೂರೂವರೆ ದಶಕಗಳ ಹಿಂದೆ ಇಲ್ಲಿ ಜಮೀನು ಖರೀದಿಸಿದರು.
ಮಣ್ಣಿನಲ್ಲಿ ಸತ್ವ ಇರಲಿಲ್ಲವಾದ್ದರಿಂದ ಫಲವತ್ತು ಮಾಡಬೇಕಿತ್ತು. ಹದಗೊಳಿಸುವ ಕಾರ್ಯಕ್ಕೆ ಕೈ ಹಾಕಿದರು. ಒಂದು ಹಂತಕ್ಕೆ ತಂದ ನಂತರ ಬಹು ಮಹಡಿ ಪದ್ಧತಿಯಲ್ಲಿ ತೋಟ ಮಾಡಲು ನಿಶ್ಚಯಿಸಿದರು. ಪ್ರಧಾನ ಬೆಳೆಯಾಗಿ ಕಾಫಿ ಆಯ್ದುಕೊಂಡರು. ಈ ಪದ್ಧತಿಯಲ್ಲಿ ಸಸ್ಯ ಸಂಯೋಜನೆ ಬಹು ವೈಜ್ಞಾನಿಕವಾಗಿರುತ್ತದೆ. ಒಂದು ಗಿಡದ ನೆರಳು ಮತ್ತೂಂದು ಗಿಡದ ಬೆಳವಣಿಗೆಗೆ ಬಾಧಿಸದಂತೆ ಯೋಜಿಸಿದರು. ನೆರಳಿನಲ್ಲಿ ಬೆಳೆಯುವ ಸಸ್ಯಗಳನ್ನು ಹುಡುಕಿದರು.
ಕಾಫಿ ಸಸ್ಯಗಳಲ್ಲಿಯೂ ವೈವಿಧ್ಯಮಯ ತಳಿಗಳಿವೆ. ಅರೇಬಿಕಾ, ರೋಬಸ್ಟಾ, ಕಾವೇರಿ ಇತ್ಯಾದಿ. ಕಾಫಿತೋಟ ಮಾಡಬೇಕು ಎಂದು ಹೊರಟವರು ಸಾಮಾನ್ಯವಾಗಿ ಇವುಗಳಲ್ಲಿ ಯಾವುದಾದರೊಂದು ತಳಿಯನ್ನು ಆಯ್ದುಕೊಳ್ಳುತ್ತಾರೆ. ಏಕೆಂದರೆ ಒಂದಕ್ಕಿಂತ ಹೆಚ್ಚು ತಳಿ ಹಾಕಿದರೆ ನಿರ್ವಹಣೆ ಮಾಡುವುದು ಕಷ್ಟ. ಒಂದೊಂದರ ಬೆಳವಣಿಗೆ ರೀತಿಯೂ ಭಿನ್ನ. ಆದರೆ ಈ ತೋಟದಲ್ಲಿ ವೈವಿಧ್ಯಮಯ ಕಾಫಿ ತಳಿಗಳಿವೆ. ಕೆಲವೊಂದು ತಳಿಗಳನ್ನು ತೋಟದ ಅಂಚಿನಲ್ಲಿ ಬೆಳೆಸಲಾಗಿದೆ. ಸಮೃದ್ಧ ಇಳುವರಿಯನ್ನೂ ನೀಡುತ್ತಿವೆ.
ಸಾಮಾನ್ಯವಾಗಿ ಕಾಫಿತೋಟಗಳಲ್ಲಿ ತಾಳೆಯನ್ನು ಬೆಳೆಸುವುದಿಲ್ಲ. ಈ ತೋಟದಲ್ಲಿ ತಾಳೆ ಬೆಳೆಗೂ ಆದ್ಯತೆ ನೀಡಲಾಗಿದೆ. ಇದರಿಂದ ಆಗುವ ಅನುಕೂಲಗಳು ಅಪಾರ. ಬೆಳೆಗಾರರಿಗೆ ನಿರಂತರ ಆದಾಯ ಒದಗಿಸುವ ನಿಟ್ಟಿನಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೇ ಇವುಗಳಿಗೆ ರೋಗ-ಕೀಟ ಬಾಧೆಯೂ ಕಡಿಮೆ.
ಹೆಗಡೆ ಅವರ ತೋಟದಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಬಾಳೆಕೃಷಿಯನ್ನೂ ಮಾಡಲಾಗುತ್ತಿದೆ. ಒಮ್ಮೆ ಕಂದು ನೆಟ್ಟು ಅದು ಬೆಳವಣಿಗೆಯಾಗಿ ಬಾಳೆ ನೀಡಿದ ನಂತರ ಅದರ ಉಪ ಕಂದು ಅಥವಾ ಮರಿಯನ್ನು ಬೆಳೆಯಲು ಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಾಳೆಗೆ ಹೆಚ್ಚು ಬೇಡಿಕೆ ಬಂದಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿಯೂ ಉತ್ತಮ ಧಾರಣೆ ದೊರೆಯುತ್ತಿದೆ. ಇದರಿಂದ ದೂರದ ಮಾರುಕಟ್ಟೆಗೆ ಸಾಗಣೆ ಮಾಡುವ ಖರ್ಚು ಉಳಿಯುತ್ತಿದೆ.
ಮುಖ್ಯವಾಗಿ ಇಲ್ಲಿ ಜಿ 9 ಮತ್ತು ಪುಟ್ಟಬಾಳೆ ತಳಿಗಳನ್ನು ಬೆಳೆಸಲಾಗುತ್ತಿದೆ. ಇವೆರಡಕ್ಕೂ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಇರುತ್ತದೆ ಅನ್ನೋದು ಹೆಗಡಯವರ ಲೆಕ್ಕಾಚಾರ. ಇವುಗಳು ಉಪಬೆಳೆಯಾದ ಕಾರಣ ಹಣ್ಣುಗಳ ಮಾರಾಟದಿಂದ ಎಷ್ಟೇ ಹಣ ಬಂದರೂ ಅದೆಲ್ಲವೂ ಲಾಭಾಂಶವೇ ಆಗಿರುತ್ತದೆ. ಗೊನೆ ಕೊಯ್ಲು ಮಾಡಿದ ನಂತರ ಬಾಳೆದಿಂಡನ್ನು ಅಲ್ಲಿಯೇ ಕಳಿಯಲು ಬಿಡುತ್ತಾರೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೇ ಇತರ ಸಸ್ಯಗಳ ಉತ್ತಮ ಬೆಳವಣಿಗೆಗೂ ಸಹಾಯವಾಗುತ್ತದೆ.
ಬಾಳೆ ಎಲೆಗಳಿಗೆ ಸದಾ ಅತ್ಯಧಿಕ ಬೇಡಿಕೆ. ಇಷ್ಟು ಪ್ರಮಾಣದ ಎಲೆಗಳು ಸ್ಥಳೀಯವಾಗಿ ಲಭ್ಯವಾಗದ ಕಾರಣ ವ್ಯಾಪಾರಿಗಳು ಅಕ್ಕಪಕ್ಕದ ರಾಜ್ಯಗಳಿಂದ ತರಿಸುತ್ತಾರೆ. ಅಲ್ಲಿನ ಸಾಕಷ್ಟು ರೈತರು ಎಲೆಗಳ ಸಲುವಾಗಿಯೇ ಬಾಳೆಗಿಡಗಳನ್ನು ಕೃಷಿ ಮಾಡುತ್ತಾರೆ. ಇದಕ್ಕಾಗಿಯೇ ವಿಶಿಷ್ಟ ತಳಿಗಳಿವೆ. ಬಾಳೆಎಲೆಗಳಿರುವ ಬೇಡಿಕೆಯನ್ನು ಹೆಚ್ಚು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ. ಇದನ್ನು ವಾಣಿಜ್ಯ ಬೆಳೆಯಾಗಿ ಸಮರ್ಪಕವಾಗಿ ಕೃಷಿ ಮಾಡಿದರೆ ಹೆಚ್ಚು ಫಾಯಿದೆ ಪಡೆಯಬಹುದು
ಡಾ. ವಿ.ಪಿ. ಹೆಗಡೆ ಅವರನ್ನು, ಪರಿಚಿತರು ನಡೆದಾಡುವ ಕೃಷಿ ಜ್ಞಾನ ಭಂಡಾರ ಎಂದೇ ಕರೆಯುತ್ತಾರೆ. ಇವರು ತೋಟದಲ್ಲಿರುವ ಎಲ್ಲ ಸಸ್ಯಗಳಿಂದಲೂ ಬಹು ವಿಧದ ಲಾಭಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ತೋಟಕ್ಕೆ ಭೇಟಿ ನೀಡಿದವರಿಗೆ ಇವೆಲ್ಲ ಸಾಧ್ಯವಾಗುವ ರೀತಿಯನ್ನು ವಿವರಿಸುತ್ತಾರೆ. ಈ ಕಾರಣದಿಂದ ಈ ತೋಟ ಕೃಷಿ ಪಾಠಶಾಲೆಯೂ ಆಗಿದೆ.
ಮಾಹಿತಿಗೆ: 08170 217403
– ಕುಮಾರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.