ಇಲ್ಲಿ ಯಾರು ಅಮುಖ್ಯರಲ್ಲ
ಕಾರ್ಮಿಕರನ್ನು ನಿಭಾಯಿಸುವ ಕಲೆ
Team Udayavani, Jul 15, 2019, 5:28 AM IST
ಮನೆ ಕಟ್ಟುವಾಗ ನಾನಾ ವಿಧದ ಕುಶಲಕರ್ಮಿಗಳು ಒಬ್ಬರಿಗೊಬ್ಬರು ಹೊಂದಿಕೊಂಡು, ಸಹಮತದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆಗ ನಿರ್ಮಾಣ ಕಾರ್ಯ ಯಾರಿಗೂ ಹೊರೆಯಾಗದು. ಜೊತೆಗೆ, ಅಂದುಕೊಂಡಂತೆಯೇ ಆಯಾ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿದರೆ ಮನೆ ಕಟ್ಟುವುದೂ ಸಲೀಸು ಕೆಲಸ ಎನಿಸುತ್ತದೆ. ಆದರೆ, ಸಂಯಮ ಇಲ್ಲದಿದ್ದರೆ ಎಲ್ಲ ಕೆಲಸವೂ ಹದಗೆಟ್ಟು ದುಬಾರಿ ಆಗುವುದರ ಜೊತೆಗೆ, ಹೆಚ್ಚು ವೇಳೆ ತೆಗೆದುಕೊಂಡು ಫಲಿತಾಂಶವೂ ಕಳಪೆಯಾಗಿ ಬರುತ್ತದೆ.
ಶುರುವಿನಲ್ಲಿ ಬರುವ ಪಾಯ ಹೊಡೆಯುವವರು ಕೊನೆಯಲ್ಲಿ ಬರುವ ಬಣ್ಣ ಹೊಡೆಯುವವರನ್ನು ನೋಡಿಯೇ ಇಲ್ಲದೆ ಇರಬಹುದು, ಆದರೂ ಆ ಒಂದು ಶಿಸ್ತು, ಕ್ರಮಬದ್ಧತೆ ಇಲ್ಲದಿದ್ದರೆ, ಮಣ್ಣಿನ ಮಟ್ಟದಲ್ಲಾದ ಏರುಪೇರು, ಬಣ್ಣ ಹೊಡೆಯುವಾಗ ಕೈಕೊಡಬಹುದು! ಆದುದರಿಂದ, ಶುರುವಿನಿಂದಲೂ ಬಿಗಿ ಹಿಡಿತ ಸಾಧಿಸಿ, ಎಲ್ಲರಲ್ಲೂ “ಒಂದೇ ಮನಸ್ಸು, ವಿವಿಧ ದೇಹ’ ಎಂಬಂತೆ ಆಗುವಂತೆ ನೋಡಿಕೊಂಡರೆ, ನಾನಾ ವಿಧದ ತಂಟೆ ತಕರಾರುಗಳಿಂದ ತಪ್ಪಿಸಿಕೊಳ್ಳಬಹುದು! ಕುಶಲಕರ್ಮಿಗಳಲ್ಲಿ ಆ ಒಂದು ಒಮ್ಮತ ಮೂಡಿಸುವುದು ಕಷ್ಟ ಏನಲ್ಲ!
ಮಣ್ಣು ಹೊರುವವರಿಗೂ ಪ್ರಾಮುಖ್ಯತೆ ಕೊಡಿ
ವಿವಿಧ ಬಗೆಯ ಕುಶಲಕರ್ಮಿಗಳು ಮಾಡುತ್ತಿರುವ ಕೆಲಸವೆಲ್ಲ ಒಂದೇ ಮನೆಗೆ. ಹಾಗಾಗಿ ಪ್ರತಿಯೊಬ್ಬರೂ ಪಡುತ್ತಿರುವ ಪರಿಶ್ರಮ ಒಟ್ಟಾರೆಯಾಗಿ ಉತ್ತಮ ಗುಣಮಟ್ಟದ, ನೂರಾರು ವರ್ಷ ಬಾಳಿಕೆ ಬರುವಂಥ ಗೃಹ ನಿರ್ಮಾಣಕ್ಕೆ ಎಂಬುದನ್ನು ಮನವರಿಕೆ ಮಾಡಿದರೆ, ಎಲ್ಲರಲ್ಲೂ ಒಂದು ಹುಮ್ಮಸ್ಸು, ಉತ್ಸಾಹ ಮೂಡಿಬಂದು, ಉತ್ತಮ ಗುಣಮಟ್ಟದ ಮನೆ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ! ಕೆಲವೊಮ್ಮೆ ಮಣ್ಣು ಹೊಡೆಯುವವರನ್ನು “ಅಯ್ಯೋ ಇದಕ್ಕೆಲ್ಲಾ ಅಷ್ಟೇನೂ ಪರಿಣತಿ ಬೇಕಾಗಿಲ್ಲ.’ ಎಂದು ನಿರ್ಲಕ್ಷಿಸಬಹುದು. ಆದರೆ ಮನೆ ಕಟ್ಟುವಾಗ ಶುರುವಾಗುವ ಅತಿ ಮುಖ್ಯ ಘಟ್ಟ ಪಾಯವೇ ಆಗಿರುತ್ತದೆ. ಮಣ್ಣು ಸರಿಯಾಗಿ ಅಗೆಯದಿದ್ದರೆ, ಸರಿಯಾಗಿ ಪಾಯ ಹಾಕಲು ಆಗುವುದಿಲ್ಲ! ಪಾಯಕ್ಕೆ ಮಣ್ಣು ಅಗೆಯುವಾಗ, ತೂಕಿಗೆ ನೇರವಾಗಿ ಅಂದರೆ ಪ್ಲಂಬ್ ಸರಿಯಾಗಿರುವಂತೆ ಪಾಯ ಅಗೆದರೆ, ಮಣ್ಣು ಹೆಚ್ಚು ಕೆಳಗೆ ಬೀಳುವುದಿಲ್ಲ.
ಅನೇಕ ಬಾರಿ, ಪಾಯ ಹೊಡೆಯುವವರು ಕೆಳಗೆ ಮಾತ್ರ ಅಗಲ ಮಾಡಿ, ಮೇಲೆ ಹೋಗುತ್ತಿದ್ದಂತೆ ಕಡಿಮೆ ಮಾಡಿಬಿಡುತ್ತಾರೆ. ಹೀಗೆ ವಾಲಿಕೊಂಡಿರುವ ಪಾಯದ ಅಕ್ಕಪಕ್ಕದ ಕಡೆಯಿಂದ ಮಣ್ಣಿನ ಹೆಂಟೆಗಳು ಸುಲಭದಲ್ಲಿ ಬಿದ್ದು, ಕಾಂಕ್ರೀಟ್ ಬೆಡ್- ತಳದ ಕಾಂಕ್ರೀಟ್ ಇಲ್ಲವೇ ಫೂಟಿಂಗ್ ಕಾಂಕ್ರೀಟ್ ಹಾಕುವಾಗ ತೊಂದರೆ ಒದಗಬಹುದು. ಮಣ್ಣು ಹೊಡೆಯುವವರು ನೇರವಾಗಿ ಅಗೆದಾಗ ಅವರನ್ನು ಹೊಗಳಿ, ಸೊಟ್ಟಪಟ್ಟ ಅಗೆದಾಗ, ಎಚ್ಚರಿಸಿ, ಸರಿಯಾಗಿ ತೋಡಲು ಹೇಳಿದರೆ, ಉತ್ತಮ ತಳಪಾಯ ಹಾಕಲು ಸಾಧ್ಯ. ಅನೇಕ ಬಾರಿ ನಾವು ಪಾಯ ಅಗೆಯುವಾಗ ಗಾರೆಯವರನ್ನೇ ಮರೆತಿರುತ್ತೇವೆ. ಈ ಸಮಯದಲ್ಲಿ ಅವರು ಕೂಡಾ ಒಮ್ಮೆ ಬಂದು ನೋಡಿದರೆ, ತಮ್ಮ ಕೆಲಸಕ್ಕೆ ಅನುಕೂಲವಾಗುವಂತೆಯೇ ಅಗೆಯಲು ನಯವಾಗಿ ವಿನಂತಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಅವರ ತೊಂದರೆಯನ್ನು ಮಣ್ಣು ಅಗೆಯುವವರಿಗೆ ವಿವರಿಸುವುದರಿಂದ ಅವರಿಗೂ ತಿದ್ದಿಕೊಳ್ಳಲು ನೆರವಾಗುತ್ತದೆ.
ಕುಶಲಕರ್ಮಿಗಳು ಒಬ್ಬರಿಗೊಬ್ಬರು ಪೂರಕವಾಗಿ, ಸಹಾಯ ಮಾಡುವ ರೀತಿಯಲ್ಲಿ ಕೆಲಸ ಮಾಡುವಂಥ ವಾತಾವರಣ ನಿರ್ಮಿಸುವುದು ಅತ್ಯಗತ್ಯ. ಕೆಲವೊಮ್ಮೆ “ಹಾವು ಮುಂಗುಸಿಯಂತೆ’ ಪದೇಪದೇ ಕಚ್ಚಾಡುತ್ತಿದ್ದರೆ, ಕಡೆಗೆ ಕೆಡುವುದು ಮನೆಯ ಗುಣಮಟ್ಟ! ಆದ್ದರಿಂದ ಕೆಲಸಗಾರರಲ್ಲಿ ಯಾರಾದರಿಬ್ಬರು ಜಗಳವಾಡುತ್ತಾ ವಾತಾವರಣವನ್ನೇ ಕೆಡಿಸುತ್ತಿದ್ದರೆ ನಿರ್ದಾಕ್ಷಿಣ್ಯವಾಗಿ ಅವರನ್ನು ಕೆಲಸದಿಂದ ತೆಗೆದುಹಾಕುವುದು ಉತ್ತಮ. ನಿವೇಶನ ಕಟ್ಟುವ ಜಾಗದಲ್ಲಿ ಜಗಳವಾಗುತ್ತಿದ್ದರೆ ಕೆಲವರಿಗೆ ಅದು ಮನರಂಜನೆಯಂತೆ ಕಂಡರೂ, ಅನೇಕ ಬಾರಿ ಇದು ಕೆಲಸ ಮಾಡಲು ಮನಸ್ಸಿಲ್ಲದ ಸೋಮಾರಿಗಳು ಕೆಲಸದಿಂದ ತಪ್ಪಿಸಿಕೊಳ್ಳುವುದಕ್ಕೆ ಹೂಡಿರುವ ಕೆಟ್ಟ ಉಪಾಯವೂ ಆಗಿಬಿಡುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಶಾಂತಿ ಹಾಗೂ ಸೌಹಾರ್ದತೆಯಿಂದ ವರ್ತಿಸುವ ಕುಶಲ ಕರ್ಮಿಗಳನ್ನು ಕೆಲಸಗಾರರನ್ನಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ಸಮಾನರಾಗಿ ಕಾಣಿ
ನಾನೇ ಮುಖ್ಯ, ನನ್ನ ಕಾರ್ಯವೇ ಎಲ್ಲಕ್ಕಿಂತ ನಿರ್ಣಾಯಕ ಎಂದೆಲ್ಲ ವಿವಿಧ ಹಂತದಲ್ಲಿ ಕುಶಲಕರ್ಮಿಗಳು ಸ್ವಯಂ ಘೋಷಿಸಿಕೊಳ್ಳುತ್ತ, ಹೆಚ್ಚು ಹಣ ಕೇಳಲು ನೋಡುತ್ತಾರೆ. ಆದರೆ, ಮನೆ ಕಟ್ಟುವಾಗ ಯಾವ ಕೆಲಸವೂ ಕಡಿಮೆ ಅಲ್ಲ, ಯಾವುದೂ ಹೆಚ್ಚಲ್ಲ! ಒಬ್ಬರಿಂದ ಅಥವಾ ಕೇವಲ ಒಂದೇ ಬಗೆಯ ನೈಪುಣ್ಯತೆಯಿಂದ ಮನೆ ಕಟ್ಟಲು ಆಗುವುದಿಲ್ಲ! ಕಾಂಕ್ರೀಟ್ ಗ್ಯಾಂಗಿನವರು ಮೈಯೆಲ್ಲ ಸಿಮೆಂಟ್ ಮಾಡಿಕೊಂಡು ಕಾರ್ಯನಿರ್ವಹಿಸುತ್ತಾರೆ ಎಂದು ಅವರೇನೂ ಕಡಿಮೆ ಆಗುವುದಿಲ್ಲ, ಹಾಗೆಯೇ ಎಲೆಕ್ಟ್ರಿಷಿಯನ್ ಇಸಿŒ ಮಾಡಿದ ದಿರಿಸು ಧರಿಸಿ ಕಾರ್ಯ ನಿರ್ವಹಿಸುತ್ತಾರೆ ಎಂದ ಮಾತ್ರಕ್ಕೆ ಅವರ ಕೆಲಸವೇನೂ ಪ್ರಾಮುಖ್ಯತೆ ಪಡೆಯುವುದಿಲ್ಲ. ಕಾಂಕ್ರೀಟ್ ಹಾಕುವಾಗ ಎಲೆಕ್ಟ್ರಿಷಿಯನ್ ಗ್ಯಾಂಗ್- ಕಾಂಕ್ರೀಟ್ ಗುಂಪಿನವರೊಡನೆ ನಯವಾದ ಮಾತುಗಳಲ್ಲಿ ವ್ಯವಹರಿಸಿದರೆ ಅವರೂ ವಿದ್ಯುತ್ ಕೊಳವೆಗಳು ಬರುವ ಸ್ಥಳದಲ್ಲಿ ಹುಶಾರಾಗಿ ಕಾಂಕ್ರೀಟ್ ಸುರಿಯುತ್ತಾರೆ. ಇಲ್ಲದಿದ್ದರೆ, ಬೇಕಾಬಿಟ್ಟಿ ಹಾಕಿದರೆ ಮುಂದೆ ತೊಂದರೆ ಅಗುವುದು ಎಲೆಕ್ಟ್ರಿಷಿಯನ್‌ಗೆ!
ಹುಷಾರಾಗಿ ಸಂಬಳ ನಿಗದಿಪಡಿಸಿ
ಮಹಾತ್ಮ ಗಾಂಧಿಯವರನ್ನು ಅತಿಯಾಗಿ ಪ್ರೇರೇಪಿಸಿದ ಬ್ರಿಟಿಷ್ ಲೇಖಕ ಜಾನ್ ರಸ್ಕಿನ್. ಅವರು ಪರಿಶ್ರಮ ಹಾಗೂ ಸಂಬಳದ ಕುರಿತಾದ ಸಾಲನ್ನೇ ತಮ್ಮ ಪುಸ್ತಕಕ್ಕೆ ಹೆಸರಾಗಿಸಿದ್ದರು. ರಸ್ಕಿನ್ ಮೂಲತಃ ಒಬ್ಬರು ಆರ್ಕಿಟೆಕ್ಟ್. “ಕುಶಲಕರ್ಮಿಗಳನ್ನು ವಿವಿಧ ಮಾನದಂಡದಿಂದ ಅಳೆಯಲಾಗುತ್ತದೆ. ಒಬ್ಬರಿಗೆ ಸ್ವಲ್ಪ ಹೆಚ್ಚು ಕೊಟ್ಟರೆ ಮಿಕ್ಕವರು ಹೆಚ್ಚಾಯಿತು ಎಂದು ದೂರಬಾರದು. ಮೊದಲು ಬಂದವರಿಗೆ ಹೆಚ್ಚು ಪಗಾರ, ನಂತರ ಬಂದವರಿಗೆ ಕಡಿಮೆ ಎಂದೇನೂ ಇರುವುದಿಲ್ಲ.
ವಿವಿಧ ಘಟ್ಟದಲ್ಲಿ ವಿವಿಧ ಕುಶಲಕರ್ಮಿಗಳಿಗೆ ಕೆಲಸ ಒಪ್ಪಿಸುವ ಮೊದಲು ಪಗಾರವನ್ನು ನಿಗದಿಪಡಿಸಲಾಗುತ್ತದೆ. ಇದು ಸಾಮಾನ್ಯವಾಗಿ ಮನೆ ನಿರ್ಮಾಣ ಕೆಲಸ ಮುಗಿಯುವವರೆಗೂ ಅನ್ವಯವಾಗುತ್ತದೆ. ಎಲ್ಲರಿಗೂ ಒಂದೇ ರೀತಿಯ ಪಗಾರ ಕೊಡಲು ಆಗುವುದಿಲ್ಲ. ಯಾರಾದರೂ ಹೆಚ್ಚು ಬಯಸಿದರೆ, ಅಂಥವರಿಗೆ ಹೆಚ್ಚಿನ ಕೌಶಲ್ಯ ಪಡೆದುಕೊಳ್ಳುವುದರ ಬಗ್ಗೆ ಮನದಟ್ಟು ಮಾಡಬೇಕು. ಕೆಲವರು ಉತ್ತಮ ಗುಣಮಟ್ಟದ ಕೆಲಸವನ್ನು ನಿರಾಯಾಸವಾಗಿ ಹಾಗೂ ಹೆಚ್ಚು ಮಾಡುತ್ತಾರೆ. ಮತ್ತೂ ಕೆಲವರು ಉತ್ತಮ ಗುಣಮಟ್ಟದ ಕೆಲಸವನ್ನು ಅತಿ ಕಡಿಮೆ ಎನ್ನುವಷ್ಟು ಪ್ರತಿದಿನ ಮಾಡುತ್ತಿರುತ್ತಾರೆ. ಇದನ್ನೆಲ್ಲ ಗಮನಿಸಿ, ಆನಂತರವೇ ಸಂಬಳ ನಿರ್ಧರಿಸುವುದು ಉತ್ತಮ.
ಉತ್ತಮ ಕೆಲಸಗಾರರನ್ನು ಗುರುತಿಸಿ, ಪೋಷಿಸಿ
ಎಲ್ಲರೂ ಕೆಲಸ ಮಾಡುವುದು ದುಡ್ಡಿಗಾಗಿ ಎನ್ನುವುದರಲ್ಲಿ ಸಂಶಯವಿಲ್ಲ, ಅಲ್ಲದೆ ಕಷ್ಟಪಟ್ಟು ದುಡಿದು ಹೆಚ್ಚು ಹಣ ಕೇಳುವುದು ತಪ್ಪೇನೂ ಅಲ್ಲ. ಒಬ್ಬರು ಇನ್ನೊಬ್ಬರ ಜೊತೆ ಹೊಂದಿಕೊಂಡು ಕೆಲಸ ನಿರ್ವಹಿಸುವುದು, ಸಾಮಗ್ರಿಯನ್ನು ವ್ಯರ್ಥ ಮಾಡದೆ ಅಗತ್ಯಕ್ಕೆ ತಕ್ಕದಾಗಿ ಬಳಸುವುದು, ಕಾಲಹರಣ ಮಾಡದಿರುವುದು ಈ ಗುಣಗಳನ್ನು ತೋರಿದ ಕೆಲಸಗಾರರನ್ನು ಚೆನ್ನಾಗಿ ಪಗಾರ ಕೊಟ್ಟು ಸಂತಸದಿಂದ ಇರಿಸಿದರೆ ಇತರರೂ ಅವರನ್ನು ಅನುಕರಿಸುತ್ತಾರೆ. ಆಗ ಮನೆ ನಿರ್ಮಾಣದ ಕಾರ್ಯ ಅಂದುಕೊಂಡಂತೆಯೇ ಮೂಡಿಬರುತ್ತದೆ. ಅಲ್ಲದೆ ದುಂದುವೆಚ್ಚ ಕಡಿಮೆಯಾಗುವುದರಿಂದ, ಒಟ್ಟು ಖರ್ಚಿನಲ್ಲಿ ಉಳಿತಾಯವಾದಂತೆಯೂ ಆಗುತ್ತದೆ.
ಹೆಚ್ಚಿನ ಮಾಹಿತಿಗೆ: 9844132826
– ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.