ಹುಮ್ಮಸ್ಸಿನ ಕೃಷಿಗೆ ಹವ್ಯಾಸಗಳೇ ಟಾನಿಕ್
Team Udayavani, Jan 21, 2019, 12:30 AM IST
ನಾಲ್ಕು ಜನಕ್ಕೆ ಅನುಕೂಲವಾಗುವಂಥ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವವರು ಶ್ರೀಹರಿ ದರ್ಬೆ. ಹೊಳೆಯಾಗಿ ಅಡ್ಡವಾಗಿ ತಡೆಯೊಂದನ್ನು ನಿರ್ಮಿಸುವಾಗ ಅವರು ನೆರೆಹೊರೆಯ ರೈತರೊಂದಿಗೂ ಚರ್ಚಿಸುತ್ತಾರೆ. ತಡೆ ನಿರ್ಮಿಸಲು ತಗುಲುವ ಖರ್ಚನ್ನು ಮಾತ್ರವಲ್ಲ; ನೀರಾವರಿಯ ಅನುಕೂಲಗಳನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ.
ದಕ್ಷಿಣ ಕನ್ನಡದ ಪುತ್ತೂರಿನಿಂದ ಕಾರಿನಲ್ಲಿ ಹೊರಟು, ಅಡ್ಕಸ್ಥಲ ಸೇತುವೆ ದಾಟಿ, ಗುಡ್ಡದ ರಸ್ತೆಯಲ್ಲಿ ಸಾಗುತ್ತಿದ್ದೆವು. ಆಗ ಬಲಬದಿಯಲ್ಲಿ ಆಳದಲ್ಲಿ ಸೀರೆ ಹೊಳೆ ಪಾತ್ರದಲ್ಲಿ ಕಾಣಿಸಿತು,ದರ್ಬೆ ಕಟ್ಟ.
ಅದು ಅಲ್ಲಿನ 25 ಕುಟುಂಬದವರು ಸೇರಿ ಹೊಳೆ ನೀರಿನ ಹರಿವು ತಡೆಯಲು ಹೊಳೆಗೆ ಅಡ್ಡವಾಗಿ ವರ್ಷಕ್ಕೊಮ್ಮೆ ನಿರ್ಮಿಸುವ ಕಟ್ಟ. ಅದರ ಫಲಾನುಭವಿಗಳಲ್ಲಿ ಒಬ್ಬರು ಶ್ರೀಹರಿ ದರ್ಬೆ (49). ಹತ್ತು ನಿಮಿಷಗಳಲ್ಲಿ ನಮ್ಮ ಕಾರು ಗುಡ್ಡವಿಳಿದು ಅವರ ಮನೆ ತಲಪಿತ್ತು.
ಅನಂತರ ನಡೆಯುತ್ತಾ, ಅವರ ತೋಟ ದಾಟಿದೊಡನೆ ಎದುರಾಯಿತು 180 ಅಡಿ ಉದ್ದದ ದರ್ಬೆ ಕಟ್ಟ. ರೂ.4,500 ಬೆಲೆಯ ವಿಶಾಲವಾದ ಪ್ಲಾಸ್ಟಿಕ್ ಹಾಳೆ ಬಳಸಿ ನಿರ್ಮಿಸಿದ ಕಟ್ಟ. ಪ್ಲಾಸ್ಟಿಕ್ ಹಾಳೆಯ ಮೇಲೆ ಹಿತಾಚಿ ಯಂತ್ರದಿಂದ ಮರಳು ಅಗೆದು ಅಗೆದು ಹಾಕಿ, ಮರಳಿನ ತಡೆಗೋಡೆ ಐದಡಿ ಎತ್ತರವಾದಾಗ, ಎರಡೂ ಬದಿಗಳಿಂದ ಪ್ಲಾಸ್ಟಿಕ್ ಹಾಳೆ ಎತ್ತಿ, ತಡೆಗೋಡೆಯನ್ನು ಮುಚ್ಚಿದರೆ ಆ ನೀರಿನ ಕಟ್ಟ ತಯಾರು. ಈ ವಿಧಾನದ ಅನಾನುಕೂಲ: ಪ್ರತಿ ವರ್ಷ ಹೊಸ ಪ್ಲಾಸ್ಟಿಕ್ ಹಾಳೆ ಅಗತ್ಯ.
ಈ ನೀರಿನ ಕಟ್ಟ ಕಟ್ಟುವುದು ಡಿಸೆಂಬರ್‌ನಲ್ಲಿ. ಕಟ್ಟ ನಿರ್ಮಿಸುವ ವೆಚ್ಚವನ್ನು ಎಲ್ಲ ಫಲಾನುಭವಿ ಕುಟುಂಬಗಳು ಹಂಚಿಕೊಳ್ಳುವುದು ವಾಡಿಕೆ. ಈ ವರ್ಷ ಹಿತಾಚಿ ಯಂತ್ರದ 19 ಗಂಟೆ ಬಾಡಿಗೆ ಮತ್ತು ಪ್ಲಾಸ್ಟಿಕ್ ಹಾಳೆಯ ವೆಚ್ಚ ಸೇರಿಸಿ, ಒಟ್ಟು ಆದ ವೆಚ್ಚ ರೂ.27,000. ಇದರಲ್ಲಿ ಶ್ರೀಹರಿ ಅವರ ಪಾಲು ರೂ.3,000. ಇಷ್ಟೇ ವೆಚ್ಚದಲ್ಲಿ ಅವರ ತೋಟಕ್ಕೆ ಸಮೃದ್ಧ ನೀರು. ಕಟ್ಟದ ನೀರನ್ನು ಪಂಪ್ ಸೆಟ್ಟಿನಿಂದ ಎತ್ತುವವರು ಹದಿನಾರು ಕೃಷಿಕರು. ಇನ್ನೊಂದು ಲಾಭ 10 ಅಡಿ ಆಳದ ಕಟ್ಟದ ಕೆರೆಯಿಂದ ಸಿಗುವ ಕ್ವಿಂಟಾಲ್‌ಗಟ್ಟಲೆ ಮೀನು.
ಶ್ರೀಹರಿ ಅವರದು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಎರಡು ಎಕರೆ ಅಡಿಕೆ ತೋಟ. ಉಪಬೆಳೆಗಳು ಕರಿಮೆಣಸು, ಕೊಕ್ಕೋ ಮತ್ತು ತೆಂಗು. ಅಡಿಕೆ ಮರಗಳಿಗೆ ಸ್ಪ್ರಿಂಕ್ಲರ್ ಜಾಲದಿಂದ ನೀರಾವರಿ. ನಾನು ಪ್ರತಿಯೊಂದು ಅಡಿಕೆ ಮರಕ್ಕೆ ವರ್ಷಕ್ಕೆ ಎರಡು ಹೆಡಿಗೆ ಸೆಗಣಿ ಗೊಬ್ಬರ ಮತ್ತು ಸುಡುಮಣ್ಣು ಮಾತ್ರ ಹಾಕುತ್ತೇನೆ. ಯಾವುದೇ ರಾಸಾಯನಿಕ ಗೊಬ್ಬರ ಹಾಕುವುದಿಲ್ಲ. ಹಾಗಾಗಿ, ನನ್ನ ತೋಟದ ಖರ್ಚು ಬಹಳ ಕಡಿಮೆ ಎಂದರು ಶ್ರೀಹರಿ.
ತರಕಾರಿ ಕೃಷಿಯಲ್ಲಿ ಪಳಗಿದವರು ಶ್ರೀಹರಿ. ಬಸಳೆ ಮತ್ತು ತೊಂಡೆಯ ತಲಾ ನಾಲ್ಕು ಚಪ್ಪರಗಳಿಂದ ಉತ್ತಮ ಫಸಲು. ಹೀರೆಕಾಯಿ, ಕುಂಬಳಕಾಯಿ, ಸೌತೆಕಾಯಿ, ಬೆಂಡೆಕಾಯಿ, ಗೆಣಸು, ಮೆಣಸು, ಕೂವೆ (ಆರಾರೂಟು) ಇವನ್ನೂ ಬೆಳೆಯುತ್ತಿದ್ದಾರೆ. ಬಹುಪಾಲು ತರಕಾರಿಗಳ ಮಾರಾಟ ಮಂಗಳೂರಿನಲ್ಲಿ, ಸಾವಯವ ಕೃಷಿಕ ಗ್ರಾಹಕ ಬಳಗದ ಭಾನುವಾರದ ಸಂತೆಯಲ್ಲಿ. ಇವರ ಪ್ರಧಾನ ಹಣ್ಣಿನ ಬೆಳೆಗಳು ಪಪ್ಪಾಯಿ ಮತ್ತು ಬಾಳೆ.
ಶ್ರೀಹರಿ ಹುಲುಸಾದ ಬೆಳೆ ಬೆಳೆಯಲು ಆಸರೆ ಮನೆ ಪಕ್ಕದ ಗುಡ್ಡದ ತುದಿಯಲ್ಲಿರುವ ಇಪ್ಪತ್ತೈದು ಲಕ್ಷ ಲೀಟರ್ ನೀರು ತುಂಬುವ ಟ್ಯಾಂಕ್. 120 ಅಡಿ ಉದ್ದ, 70 ಅಡಿ ಅಗಲ, 10 ಅಡಿ ಆಳದ ಟ್ಯಾಂಕಿನ ತಳಕ್ಕೆ ಪ್ಲಾಸ್ಟಿಕ್ ಹಾಳೆ ಹಾಸಲಾಗಿದೆ. ಇದು ಮೂರು ವರುಷ ಮುಂಚೆ ರೂ.1.75 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಟ್ಯಾಂಕ್. ಈ ಬೃಹತ್ ಟ್ಯಾಂಕಿಗೆ ಸರಕಾರದಿಂದ ಪಡೆದ ಸಬ್ಸಿಡಿ ರೂ.48,000 ಎಂಬ ಮಾಹಿತಿ ನೀಡಿದರು ಶ್ರೀಹರಿ.
ದನಗಳನ್ನು ಸಾಕಿರುವ ಕಾರಣ ಅಡಿಕೆ ತೋಟಕ್ಕೆ ಮತ್ತು ತರಕಾರಿ ಕೃಷಿಗೆ ಬೇಕಾದಷ್ಟು ಗೊಬ್ಬರ ಹಾಗೂ ಗೋಬರ್ ಗ್ಯಾಸ್ ಸ್ಥಾವರದಿಂದ ಮನೆಬಳಕೆಗೆ ಬೇಕಷ್ಟು ಗ್ಯಾಸ್ ಸಿಗುತ್ತಿದೆಯಂತೆ.
ಮೂವತ್ತು ಜೇನ್ನೊಣದ ಕುಟುಂಬ ಸಾಕಿರುವುದು ಅವರ ಬೆಳೆಗಳ ಉತ್ತಮ ಇಳುವರಿಗೆ ಪೂರಕ ಚಟುವಟಿಕೆಯಾಗಿದೆ. ಇನ್ನೂ 35 ಜೇನ್ನೊಣದ ಕುಟುಂಬವನ್ನೂ ಸಲಹಿದ್ದರು ಶ್ರೀಹರಿ. ಆದರೆ, ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಗಮನ ನೀಡದ ಕಾರಣ ಅವನ್ನು ಕಳೆದುಕೊಂಡೆ ಎಂದು ಮನೆ ಪಕ್ಕ ಪೇರಿಸಿಟ್ಟ ಖಾಲಿ ಪೆಟ್ಟಿಗೆಗಳನ್ನು ತೋರಿಸಿದರು. ಜೇನುಸಾಕಣೆಯ ಪಟ್ಟುಗಳನ್ನು ಬಾಲ್ಯದಲ್ಲಿಯೇ ಶ್ರೀಹರಿ ಕಲಿತದ್ದು, ತನಗಿಂತ 24 ವರುಷ ಹಿರಿಯನಾದ ತನ್ನ ಹಿರಿಯಣ್ಣ ಮಹಾಬಲ ಭಟ್ ಅವರಿಂದ.
ಇವೆಲ್ಲ ಕೃಷಿ ಚಟುವಟಿಕೆಗಳ ನಡುವೆಯೋ ಶ್ರೀಹರಿ ಬೆಳೆಸಿಕೊಂಡಿರುವ ಇನ್ನೊಂದು ಹವ್ಯಾಸ ಬೋನ್ಸಾಯ… ಗಿಡಗಳನ್ನು ಬೆಳೆಸುವುದು. ಅವರು ಬೆಳೆಸಿದ ಆಲ, ಅಶ್ವತ್ಥ ಇತ್ಯಾದಿ 50 ಬೊನ್ಸಾಯ… ಗಿಡಗಳನ್ನು ನೋಡುವುದೇ ಖುಷಿ. ಈ ಬೋನ್ಸಾಯ… ಗಿಡಗಳು ನನ್ನ ಮಕ್ಕಳಿದ್ದಂತೆ ಎಂದರು ಶ್ರೀಹರಿ. ಏಕೆಂದರೆ, ಮಕ್ಕಳನ್ನು ಸಲಹುವಂತೆ ಜತನದಿಂದ ಬೆಳೆಸಿದರೆ ಮಾತ್ರ ಅವು ಉಳಿದಾವು. ಅವರ ಇನ್ನೊಂದು ಹವ್ಯಾಸ ಪ್ಲಾಸ್ಟಿಕಿನ ಚಪ್ಪಟೆ ಪಟ್ಟಿಗಳಿಂದ ಕಿರುಬುಟ್ಟಿ, ಪೆನ್-ಹೋಲ್ಡರ್ ಇತ್ಯಾದಿ ರಚಿಸುವುದು.
ಮಳೆಗಾಲದಲ್ಲಿ ಎತ್ತರದ ಗುಡ್ಡದಿಂದ ರಭಸದಿಂದ ಇಳಿದು ಬರುವ ನೀರಿನಿಂದ ಜನರೇಟರ್ ಮೂಲಕ ಮನೆಬಳಕೆಗಾಗಿ ವಿದ್ಯುತ್ ಉತ್ಪಾದಿಸುತ್ತಾರೆ ಶ್ರೀಹರಿ. ಆ ಜನರೇಟರಿಗೆ ಮೂರು ಇಂಚು ಗಾತ್ರದ ತೊರೆ ನೀರು ಹರಿಸಿದರೆ ನಿರಂತರವಾಗಿ 230 ವೋಲ್ಟಿನ ವಿದ್ಯುತ್ ಉತ್ಪಾದನೆಯಾಗುತ್ತದೆ. ತೋಟದಿಂದ ಹಣ್ಣಡಿಕೆ ಸಾಗಿಸಲಿಕ್ಕಾಗಿ ಮಾರ್ಪಡಿಸಿದ ಆಟೋರಿಕ್ಷಾ ಬಳಸುತ್ತಾರೆ.
ಶ್ರೀಹರಿ ಬಾಲ್ಯದಿಂದಲೇ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡವರು. “ಸಮಾಜಕ್ಕೆ ಉಪಕಾರಿಯಾಗಿ ಬದುಕು’ ಎಂದಿದ್ದರು ನನ್ನ ತಂದೆ. ಊರಿನವರೊಂದಿಗೆ ಸೇರಿ ನೀರಿನ ಕಟ್ಟ ಕಟ್ಟುವಂತಹ ಕೆಲಸಗಳಿಗೆ ಆ ಮಾತೇ ಪ್ರೇರಣೆ’ ಎನ್ನುವ ಶ್ರೀಹರಿ ಈಗ ಎಲ್ಲ ಕೃಷಿಕರಿಗೂ ಪ್ರೇರಣೆ. ಕೃಷಿ ಮತ್ತು ಹಲವು ಹವ್ಯಾಸಗಳಲ್ಲಿ ಸದಾ ತೊಡಗಿಸಿಕೊಂಡಿರುವ ಶ್ರೀಹರಿ ಅವರ ಎಲ್ಲ ಕೆಲಸಗಳಿಗೂ ಪತ್ನಿ ಅನುಪಮಾ ಅವರ ಒತ್ತಾಸೆಯಿದೆ. ನಾವು ಬೀಳೊಡುವಾಗ ಶ್ರೀಹರಿ ನಮಗಿತ್ತ ಆಹ್ವಾನ: “ನಿಮ್ಮ ಬಳಗದ ಸದಸ್ಯರು ನಮ್ಮ ಮನೆಗೆ ಬನ್ನಿ. ಬೇಕಾದರೆ ಎರಡು ದಿನ ತರಕಾರಿ ಕೃಷಿ ಮಾಡುವ ನನ್ನ ಅನುಭವ ಹಂಚಿಕೊಳ್ಳುತ್ತೇನೆ….’
– ಅಡ್ಡೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.