ಕಾಡುಪ್ರಾಣಿಗಳ ಹಾವಳಿ ತಡೆಯಲು “ಜೇನು ಬೇಲಿ’
Team Udayavani, Jul 1, 2019, 5:00 AM IST
ನೀವು ದಟ್ಟಡವಿಗೆ ಹೋಗಿ ಅಲ್ಲಿ ಹೆಜ್ಜೆàನಿನ ಗೂಡುಗಳಿರುವ ಮರಗಳನ್ನು ದೂರ ನಿಂತು ಗಮನಿಸಿ. ಆ ಮರಗಳ ಮೇಲೆ ಮಂಗಗಳ ಚೇಷ್ಟೆ ಇರುವುದಿಲ್ಲ, ಆನೆಗಳು ಆ ಮರಗಳಿಗೆ ಮೈ ಉಜ್ಜುವುದಿಲ್ಲ, ತಮ್ಮ ಮರಿಗಳನ್ನು ಆ ಮರಗಳ ಬಳಿ ಬಿಡುವುದೂ ಇಲ್ಲ. ಕಾಡು ಹಂದಿಗಳು ಸಹ ಅಂಥ ಮರಗಳ ಬುಡಗಳನ್ನು ಕೋರೆಹಲ್ಲುಗಳಿಂದ ಕೆದಕುವ ಕೆಲಸ ಮಾಡುವುದಿಲ್ಲ. ಪ್ರಾಣಿಗಳ ಈ ಭಯವನ್ನೇ ಉಪಯೋಗಿಸಿಕೊಂಡು, ಜೇನಿನ ಬೇಲಿ ನಿರ್ಮಿಸುವುದರಿಂದ ಬೆಳೆಗೆ ರಕ್ಷಣೆ ದೊರೆಯುವುದಲ್ಲದೆ, ಪ್ರಾಣಿಗಳ ಮಾರಣಹೋಮವೂ ತಪ್ಪುತ್ತದೆ.
ಕಾಡಂಚಿನಲ್ಲಿ ವ್ಯವಸಾಯ ಮಾಡುತ್ತಿರುವವರು ಬೆಳೆಗಳನ್ನು ಸದಾ ಎಚ್ಚರಿಕೆಯಿಂದ ಕಾವಲು ಕಾಯಬೇಕಾಗುತ್ತದೆ. ಅದರಲ್ಲಿಯೂ ಕಬ್ಬು, ಭತ್ತ, ಬಾಳೆ ಬೆಳೆಗಳಿರುವ ಕೃಷಿಭೂಮಿಗೆ ಕಾಡುಹಂದಿಗಳು, ಕಾಡಾನೆಗಳ ಕಾಟ ವಿಪರೀತ. ಇಂಥ ಜಾಗಗಳಲ್ಲಿ ಬೆಳೆಯನ್ನು ಬೆಳೆಯುವ ಶ್ರಮಕ್ಕಿಂತ ಅವುಗಳ ರಕ್ಷಣೆಯೇ ದೊಡ್ಡ ಸವಾಲು. ಬೆಳೆಯನ್ನು ಹಗಲಿರುಳೆನ್ನದೇ ಕಾಯಬೇಕು. ಕೆಲ ಸಲ ಹೀಗೆ ಕಾಯ್ದರೂ ಪ್ರಯೋಜನವಾಗುವುದಿಲ್ಲ.
ಇವೆಲ್ಲ ಕಾರಣಗಳಿಂದಾಗಿ ಕೃಷಿಕರು ಕೃಷಿಭೂಮಿ ಸುತ್ತ ಕಂದಕ ತೋಡುವುದು, ಸೌರಬೇಲಿ ಹಾಕಿಸುವುದು, ಕೆಲವು ಬಾರಿ ತಂತಿಬೇಲಿಗೆ ಹತ್ತಿರದ ಎಲೆಕ್ಟ್ರಿಕ್ ಕಂಬಗಳ ವೈರುಗಳಿಂದ ವಿದ್ಯುತ್ ಸಂಪರ್ಕ ನೀಡುವ ಕೆಲಸ ಮಾಡುತ್ತಾರೆ. ಹೀಗೆ ಮಾಡುವುದು ತಪ್ಪೆಂದು ಅವರಿಗೆ ತಿಳಿದಿರುತ್ತದೆ. ಹಾಗಿದ್ದೂ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ ಎಂಬ ಕಾರಣಕ್ಕಾಗಿ ಬೆಳೆ ರಕ್ಷಿಸಿಕೊಳ್ಳಲು ಈ ರೀತಿಯ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಕಾಡಾನೆಗಳು, ಕಾಡುಹಂದಿಗಳು, ಜಿಂಕೆಗಳು ಇದ್ಯಾವುದನ್ನೂ ಅರಿಯದೇ ತಂತಿಯನ್ನು ಸ್ಪರ್ಶಿಸಿ ಸಾವಿಗೀಡಾಗುತ್ತವೆ. ಸಹಜವಾಗಿ ಇದು ಸುದ್ದಿಯಾಗುತ್ತದೆ. ಅಕ್ರಮವಾಗಿ ವಿದ್ಯುತ್ ಹಾಯಿಸಿದ ಆರೋಪದ ಮೇಲೆ ಸಂಬಂಧಿತ ಕೃಷಿಕರನ್ನು ದಸ್ತಗಿರಿ ಮಾಡಲಾಗುತ್ತದೆ. ಇಂಥ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ.
ಮಾನವ- ವನ್ಯಮೃಗಗಳ ನಡುವಿನ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಇಂಥ ಸಮಸ್ಯೆಗಳಿಗೆ ಆಫ್ರಿಕಾದ ಕೃಷಿಕರು ಶಾಂತಿಯುತ ಪರಿಹಾರವನ್ನು ಕಂಡುಕೊಂಡಿದ್ದಾರೆ. ಭಾರತಕ್ಕಿಂತಲೂ ಆಫ್ರಿಕಾದ ಕಾಡುಗಳ ವಿಸ್ತಾರ ಮತ್ತು ಅಲ್ಲಿನ ವನ್ಯಮೃಗಗಳ ಸಂಖ್ಯೆಯೂ ಅಪಾರ. ಅಲ್ಲಿನ ರೈತರು ತಮ್ಮ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ಕಂಡುಕೊಂಡಿರುವ ಶಾಂತಿಯುತ ಉಪಾಯಗಳಲ್ಲಿ “ಜೇನು ಬೇಲಿ’ಯೂ ಒಂದು!
ಇದ್ಯಾವ ರೀತಿಯ ಬೇಲಿ, ನಾವೆಂದೂ ಇಂಥದನ್ನು ಕೇಳಿಯೇ ಇಲ್ಲವಲ್ಲ ಎಂದು ಹುಬ್ಬೇರಿಸಬೇಡಿ. ಇದು ಸಜೀವ ಬೇಲಿ. ಜೇನುಹುಳುಗಳ ತಂಟೆಗೆ ಹೋದರೆ ಯಾವ ಪಾಡು ಪಡಬೇಕು, ಯಾವ ರೀತಿಯ ಹಿಂಸೆ ಅನುಭವಿಸಬೇಕು ಎಂಬುದು ಮನುಷ್ಯರಿಗಷ್ಟೆ ಅಲ್ಲ; ವನ್ಯಮೃಗಗಳಿಗೂ ಗೊತ್ತಿದೆ ಎಂಬುದನ್ನು ಆಫ್ರಿಕಾದ ರೈತರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಆನೆಗಳು, ಕಾಡುಹಂದಿಗಳು ಮತ್ತು ಮಂಗಗಳು ಹುಲುಸಾದ ಬೆಳೆಗಳಿರುವ ಕೃಷಿಭೂಮಿಗೆ ದಾಳಿ ಮಾಡಿ ದಾಂಧಲೆ ಎಬ್ಬಿಸಿದಾಗ ರೊಚ್ಚಿಗೇಳುವ ಜೇನುಹುಳುಗಳು ತೀವ್ರತರದಲ್ಲಿ ದಾಳಿ ಮಾಡುತ್ತವೆ. ಇವುಗಳ ದಾಳಿಯ ರಭಸಕ್ಕೆ, ಕುಟುಕಿಸಿಕೊಂಡಾಗ ಆಗುವ ಉರಿ ಉರಿ, ನೋವಿನ ಬಾಧೆಗೆ ವನ್ಯಮೃಗಗಳು ಅರಚುತ್ತಾ ಅಲ್ಲಿಂದ ಪಲಾಯನ ಮಾಡುತ್ತವೆ. ಆದರೂ ಬಿಡದ ಜೇನುಹುಳುಗಳು ಸಾಕಷ್ಟು ದೂರ ಇವುಗಳ ಬೆನ್ನು ಹತ್ತುತ್ತವೆ.
ಜೇನಿನಿಂದ ಫಸಲಿಗೂ ಲಾಭ
ಹೆಜ್ಜೆàನುಗಳು ತಾವಾಗಿಯೇ ಯಾರ ತಂಟೆಗೂ ಹೋಗುವುದಿಲ್ಲ; ಆದರೆ ಕೆಣಕಿದವರನ್ನು ಸುಮ್ಮನೆ ಬಿಡುವುದಿಲ್ಲ. ಶತ್ರುಗಳು ಸುಲಭವಾಗಿ ದಾಳಿ ಮಾಡಲಾಗದಷ್ಟು ಎತ್ತರದಲ್ಲಿ ಇವು ಗೂಡುಗಳನ್ನು ಕಟ್ಟುತ್ತವೆ. ಮಕರಂದ ಸಂಗ್ರಹಿಸಲು ಗೂಡಿರುವ ತಾಣದಿಂದ ಐದಾರು ಕಿಲೋಮೀಟರ್ ಸುತ್ತಳತೆಯವರೆಗೂ ಇವು ಹೋಗುತ್ತವೆ. ಬೆಳದಿಂಗಳ ರಾತ್ರಿಗಳಲ್ಲಿಯೂ ಇವುಗಳು ಮಕರಂದ ಸಂಗ್ರಹಿಸುವುದನ್ನು ಕಾಣಬಹುದು. ಇವುಗಳ ಪರಾಗಸ್ಪರ್ಶ ಕ್ರಿಯೆಯಿಂದ ಕೃಷಿಬೆಳೆಗಳು, ಅರಣ್ಯದ ಬೆಳೆಗಳು ಸಮೃದ್ಧ ಫಸಲು ನೀಡುತ್ತವೆ.ಹೆಜ್ಜೆàನುಗಳ ಉಗ್ರ ಸ್ವಭಾವ ಶತ್ರುಗಳು ಯಾರಾದರೂ ತಮ್ಮ ಗೂಡಿಗೆ ತೊಂದರೆ ಕೊಟ್ಟ ಪಕ್ಷದಲ್ಲಿ ಮೊದಲು ಕಾವಲುಗಾರ ಜೇನುನೊಣಗಳು ಇತರ ಜೇನುನೊಣಗಳಿಗೆ ಎಚ್ಚರಿಕೆ ನೀಡುತ್ತವೆ. ಗೂಡಿನ ಮೇಲ್ಭಾಗದಲ್ಲಿ ಸುತ್ತಲೂ ಹಾರಾಡುತ್ತಾ ಎಚ್ಚರಿಕೆ ಸಂದೇಶ ರವಾನಿಸುತ್ತವೆ. ಆಗ ಉಳಿದ ನೊಣಗಳು ಗೂಡಿನ ತಳಭಾಗದಲ್ಲಿ ಸೇರುತ್ತವೆ. ನಂತರ ಇವೆಲ್ಲವೂ ಒಟ್ಟಿಗೆ ಶತ್ರುವಿನ ಮೇಲೆ ದಾಳಿ ಮಾಡುತ್ತವೆ. ತಮ್ಮ ಶತ್ರುಗಳನ್ನು ಇವು ಸುಮಾರು ಮೂರು ನಾಲ್ಕು ಕಿಲೋಮೀಟರ್ ದೂರದವರೆಗೂ ಅಟ್ಟಿಸಿಕೊಂಡು ಹೋಗಿ ಚುಚ್ಚುತ್ತವೆ. ಇದರಿಂದ ಚರ್ಮ ಊದಿಕೊಂಡು ಭಾರಿ ಯಾತನೆ ಉಂಟಾಗುತ್ತದೆ. ಮತ್ತೆ ಅವು ಈ ಕಡೆ ತಲೆ ಹಾಕಬಾರದು ಆ ಮಟ್ಟಿಗಿನ ದಾಳಿಯನ್ನು ಜೇನುನೊಣಗಳು ಮಾಡುತ್ತವೆ.
ಮೊದಲು ಗುರುತು, ನಂತರ ಕಚ್ಚುವಿಕೆ
ಕಾವಲುಗಾರ/ ಸೈನಿಕ ನೊಣಗಳು ಮೊದಲು ದಾಳಿ ಮಾಡುತ್ತವೆ. ಹೀಗೆ ದಾಳಿಗೊಳಗಾದ ಜೀವಿಯಿಂದ ವಿಶಿಷ್ಟ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ಜೇನುಹುಳುಗಳಿಗಷ್ಟೆ ಅರಿವಾಗುತ್ತದೆ. ಅದೊಂದು ರೀತಿಯಲ್ಲಿ ಗುರುತು ಮಾಡಿದಂತೆ. ನಂತರ ಆ ವಾಸನೆಯ ಜಾಡು ಹಿಡಿದ ಇತರೆ ಜೇನುನೊಣಗಳು ಹಿಂಡಾಗಿ ಶತ್ರುವಿನ ಮೇಲೆ ದಾಳಿ ಮಾಡುತ್ತವೆ. ತೋಟಗಳು, ಕ್ಷೇತ್ರಬೆಳೆಗಳು ಇರುವ ಸ್ಥಳಗಳಲ್ಲಿ ಇವು ಇದ್ದರೆ ಕೃಷಿಕರಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಜೇನುನೊಣಗಳು ತಮ್ಮ ಗೂಡಿನ ಬಳಿ ನಡೆಯುವ ಚಟುವಟಿಕೆಗಳಿಗೆ ಹೊಂದಿಕೊಂಡಿರುತ್ತವೆ. ಆದರೆ ವನ್ಯಮೃಗಗಳು ದಾಂಧಲೆ ಎಬ್ಬಿಸಿ ಗೂಡುಗಳ ಪ್ರಕ್ರಿಯೆಗೆ ಭಂಗ ತಂದಾಗ ಮಾತ್ರ ದಾಳಿ ಮಾಡುತ್ತವೆ.
– ಕುಮಾರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.