ಷೇರು ಪೇಟೆಯ ಕರಡಿ ಕುಣಿತ ಹೇಗೆ?
Team Udayavani, Dec 25, 2017, 2:29 PM IST
ಒಂದು ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಅಥವಾ ಒಂದು ಕಂಪನಿಯ ಲಾಭ-ನಷ್ಟದ ಫಲಿತಾಂಶದ ಮೇಲೆ ಶೇರು ಮಾರುಕಟ್ಟೆಯೂ ತತ್ತರಿಸುವುದುಂಟು. ಶೇರು ಹೂಡಿಕೆಯ ವಿಚಾರಕ್ಕೆ ಬಂದಾಗ, ಒಂದು ವಾರದ ನಂತರ ಮಾರುಕಟ್ಟೆಯ ರಿಪೋರ್ಟ್ ಹೀಗೇ ಇರುತ್ತದೆ ಎಂದು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿಲ್ಲ…
ಮೊನ್ನೆಯ ದಿನ ಸೋಮವಾರ, ಗುಜರಾತ್‌ನ ಚುನಾವಣಾ ಫಲಿತಾಂಶದ ದಿನ. ಮತ ಎಣಿಕೆ ಆರಂಭವಾಗಿತ್ತು. ಆರಂಭದಲ್ಲಿ ಎಲ್ಲರ ನಿರೀಕ್ಷೆಯಂತೆಯೇ ಭಾಜಪ ಮುನ್ನಡೆಯಲ್ಲಿದ್ದರೆ ಎಲ್ಲರಿಗೂ ಒಂದು ರೀತಿಯ ನಿರಾತಂಕ. ಶೇರು ಬಜಾರು ಹೆಚ್ಚು ಟೆನ್ಷನ್ ತೆಗೆದುಕೊಳ್ಳದೆ ಖಚಿತ ಫಲಿತಾಂಶದ ನಿರೀಕ್ಷೆಯಲ್ಲಿ ನಿಧಾನವಾಗಿ ಅಲ್ಲದೇ ತೆವಳುತ್ತಾ ಸಾಗುತ್ತಿತ್ತು. ಹಾಗಿರುವಾಗ ಅಚಾನಕ್ಕಾಗಿ ಎಲ್ಲರ ನಿರೀಕ್ಷೆಯ ವಿರುದ್ಧವಾಗಿ ಭಾಜಪವು ಕಾಂಗ್ರೆಸ್‌ಗಿಂತ ಹಿನ್ನೆಲೆಗೆ ಸರಿಯಿತು. ಆ ಕೂಡಲೇ ಶೇರುಮಾರುಗಟ್ಟೆ ಪಟಪಟನೆ ಬೀಳಲು ಆರಂಭಿಸಿತ್ತು.
ಕೆಲವೇ ಕ್ಷಣಗಳಲ್ಲಿ ಮಾರುಕಟ್ಟೆ ಸೂಚ್ಯಂಕ 700 ಅಂಕಗಳಿಗೂ ಮೀರಿ ಕುಸಿಯಿತು. ಏನಾಗುತ್ತಾ ಇದೆ ಎಂದು ಅರಿವಾಗುವಷ್ಟರಲ್ಲಿಯೇ ಹಲವರ ವರ್ಷಗಳ ಉಳಿತಾಯ ಗಾಳಿಯಲ್ಲಿ ಆವಿಯಾಗಿತ್ತು. ಇದು ಮಾರುಕಟ್ಟೆ ಒಂದು ಸುದ್ದಿಗೆ ನೀಡುವ ಪ್ರತಿಕ್ರಿಯೆ. ಇನ್ನೇನು ಇದ್ದದ್ದನ್ನೆಲ್ಲವೂ ಮಾರಿಯೇ ಬಿಡೋಣ; ಇನ್ನೂ ಕಾದರೆ ಇದ್ದದ್ದೂ ಸಂಪೂರ್ಣ ಮುಳುಗೀತು ಎನ್ನುವ ಮಟ್ಟಕ್ಕೆ ಹೂಡಿಕೆದಾರರು ಬರುವಷ್ಟರಲ್ಲಿ ಚುನಾವಣಾ ಪಲಿತಾಂಶ ಪುನಃ ಏರುಪೇರಾಯಿತು. ಕಾಂಗ್ರೆಸ್ ಹಿಂದಿಕ್ಕಿ ಭಾಜಪ ಪುನಃ ಮುನ್ನೆಲೆಗೆ ಬಂತು.
ಜನರ ಮನದಲ್ಲಿ ಸಂತಸ ಮೂಡಿತು. ಬೀಳುತ್ತಿದ್ದ ಮಾರುಕಟ್ಟೆ ಪುನಃ ಮೇಲೇರಲು ಆರಂಭಿಸಿತು. ಕೆಲವೇ ಕ್ಷಣಗಳಲ್ಲಿ ಮಾರುಕಟ್ಟೆ ಏನೂ ಆಗಲೇ ಇಲ್ಲವೋ ಎಂಬಂತೆ ನಟಿಸುತ್ತಾ, ಹಿಂದಿನ ಮಟ್ಟಕ್ಕೆ ಬಂದು ಮತ್ತೆ ಆಮೆಗತಿಯಲ್ಲಿ ಮೇಲೇರಲು ಆರಂಭಿಸಿತು. ಈ ರೀತಿ ಅಚಾನಕ್ಕಾಗಿ ನಡೆದ ವಿದ್ಯಮಾನವು ಎಲ್ಲರನ್ನೂ ಚಕಿತಗೊಳಿಸಿದೆ. ಕೇವಲ ಒಂದರೆಕ್ಷಣ ನಡೆದ ಬದಲಾವಣೆಗೆ ಶೇರು ಮಾರುಕಟ್ಟೆ ಅಷ್ಟೂ ತೀವ್ರವಾಗಿ ಪ್ರತಿಕ್ರಿಯಿಸಿದ್ದು ಏಕೆ? ಭಾಜಪ ಮುನ್ನಡೆಯಲ್ಲಿರುವಾಗ ಸುಮ್ಮನಿದ್ದ ಮಾರುಕಟ್ಟೆ ಕಾಂಗ್ರೆಸ್ ಮುನ್ನೆಲೆಗೆ ಬಂದಾಗ ಬೀಳಲಾರಂಭಿಸಿದ್ದು ಯಾಕೆ?
ಇದರ ಹಿಂದಿನ ಮರ್ಮವೇನು? ಮಾರುಕಟ್ಟೆಯ ಚಲನೆಯ ಹಿಂದಿರುವ ತರ್ಕಶಾಸ್ತ್ರವೇನು? ಇದರ ಲಾಜಿಕ್ ಅನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ಹತ್ತು ಹಲವು ಪ್ರಶ್ನೆಗಳು ಜನ ಸಾಮಾನ್ಯರನ್ನು ಕಾಡುತ್ತವೆ. ವಾಸ್ತವದಲ್ಲಿ, ಶೇರು ಬಜಾರಿನಲ್ಲಿ ಹಲವಾರು ಶೇರುಗಳ ಬೆಲೆಗಳು ನಿರಂತರವಾಗಿ ಏರಿಳಿಯುತ್ತಲೇ ಇರುತ್ತದೆ. ಒಂದು ಕ್ಷಣ ಒಂದು ಶೇರು ಇಲ್ಲಿದ್ದರೆ, ಮರುಕ್ಷಣ ಅಲ್ಲಿ. ಮುಂದೆ ಎಲ್ಲಿ ಎಂದು ಹೇಳಲಾಗದು. ಒಂದು ರೀತಿಯಲ್ಲಿ ಹುಚ್ಚು ಹಿಡಿದಂತೆ ನೆಗೆದಾಡುವ ಶೇರು ಬೆಲೆಗಳ ಹಿಂದೆ ಯಾವುದಾದರೂ ತಾರ್ಕಿಕ ನೆಲೆ ಇದೆಯೇ? ಅಥವಾ ಇದೆಲ್ಲಾ ಬರೀ ಹುಚ್ಚೇ?
– ಇದು ಶೇರಿನಲ್ಲಿ ಹಣ ಹೂಡುವ ಎಲ್ಲರನ್ನೂ ಕಾಡುವ ಪ್ರಶ್ನೆ. ಶೇರು ಬೆಲೆಗಳ ಏರಿಳಿತದ ಮರ್ಮವನ್ನು ಭೇದಿಸಿ ಒಮ್ಮೆ ಕರಗತ ಮಾಡಿಕೊಂಡರೆ ಅದೊಂದು ಆರ್ಥಿಕ ನಿರ್ವಾಣವೇ ಸರಿ. ದುಡ್ಡು ಬಾಚಿಕೊಳ್ಳಲು ಎರಡು ಕೈಗಳು ಸಾಲವು. ಹಾಗಾಗಿ, ಶೇರು ಪೀಡಿತ ಗಂಡುಗಲಿಗಳು ಈ ಗುಂಗಿನದೇ ಸದಾ ಲೀನವಾಗಿರುತ್ತಾರೆ. ಇದನ್ನು ತುಸು ವಿವರವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಈ ಕೆಳಗಿನ ಉದಾಹರಣೆಯನ್ನು ಗಮನಿಸಿ: ನನ್ನ ನೆರೆಮನೆಯ ಧುರೀಣರೊಬ್ಬರು ಮೊನ್ನೆ ಮೊನ್ನೆ ತಾನೆ ನಿವೃತ್ತಿಗೊಂಡು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೇಳಿ
ತಮ್ಮ ಪಿ.ಎಫ್ ದುಡ್ಡಿನಿಂದ 100 ರಿಲಾಯನ್ಸ್ ಇಂಡಸ್ಟ್ರೀಸ್ ಶೇರುಗಳನ್ನು, ಪ್ರತಿ ಶೇರಿಗೆ 1000 ರೂಪಾಯಿಗಳಂತೆ ಖರೀದಿಸುತ್ತಾರೆ. ಮರುದಿನ ಬೆಳಗ್ಗೆ ರಾಯರು ವೆಂಕಟೇಶ ಸುಪ್ರಭಾತವನ್ನು ಭಕ್ತಿಯಿಂದ ಕೇಳಿ, ಆಮೇಲೆ ದಿನದ ಪೇಪರು ತೆರೆದು ನೋಡುತ್ತಾರೆ. ರಿಲಾಯನ್ಸ್ ಕಂಪೆನಿಗೆ ಕೃಷ್ಣಾ-ಗೋದಾವರಿ ಬೇಸಿನ್ನಿನಲ್ಲಿ ಹೊಸ ತೈಲ ನಿಕ್ಷೇಪವೊಂದರ ಪತ್ತೆಯಾಗಿರುತ್ತದೆ. ಇದು ಕಂಪೆನಿಯ ಭವಿಷ್ಯಕ್ಕೆ ಪೂರಕವಾದ ಅಂಶ. ಭವಿಷ್ಯದ ಆದಾಯ ಹೆಚ್ಚಾಗುವ ಸಂಭವ.
ಆ ದಿನ ಮಾರುಕಟ್ಟೆಯಲ್ಲಿ ರಿಲಯನ್ಸ್ ಆ ಸಿಹಿ ಸುದ್ದಿಯ ಬಲದಿಂದ ರೂ 50 ಹೆಚ್ಚಿಸಿಕೊಂಡು ರೂ.1050 ಕ್ಕೆ ಏರುತ್ತದೆ. ರಾಯರು ಖುಷಿಯಿಂದ ಬೀಗುತ್ತಾರೆ. ತಿಮ್ಮಪ್ಪನಿಗೆ ಇನ್ನೊಮ್ಮೆ ಭಕ್ತಿಯಿಂದ ಕೈಮುಗಿಯುತ್ತಾರೆ. ಅದಕ್ಕೂ ಮರುದಿನ, ವಕೀಲ ರಾಮ್ ಜೆಠ್ಮಲಾನಿಯವರು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಯಾವುದೋ ಸ್ಪೆಕ್ಟ್ರಮ್ ಕೇಸಿನಲ್ಲಿ ತಮ್ಮ ಅದ್ಭುತ ವಾಕ್ಚಾತುರ್ಯದಿಂದ ಕೋರ್ಟಿನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ವಿರುದ್ಧ ವಾದ ಮಂಡಿಸುತ್ತಾರೆ. ಇದನ್ನು ಕೇಳಿದ ಜನತೆಗೆ ರಿಲಾಯನ್ಸ್ ಈ ಕೇಸಿನಲ್ಲಿ ಸೋಲಬಹುದು ಎಂಬ ಆತಂಕ ಮೂಡುತ್ತದೆ.
ಇದು ಕಂಪೆನಿಯ ಆದಾಯಕ್ಕೆ ಮಾರಕ ಸಂಗತಿ. ಹಾಗಾಗಿ ಅಂದು ಬೇಡಿಕೆ ಕಡಿಮೆಯಾಗಿ ರಿಲಾಯನ್ಸ್ ರೂ 100 ಕಳೆದುಕೊಂಡು ರೂ 950 ಕ್ಕೆ ಕ್ಲೋಸ್ ಆಗುತ್ತದೆ. ನಮ್ಮ ರಾಯರಿಗೆ ಆವಾಗ ಬೇಸರವಾದರೂ ಮುಂದೊಂದು ದಿನ ಉತ್ತಮ ತ್ತೈಮಾಸಿಕ ಸಾಧನೆಯ ಮೇರೆಗೆ ರಿಲಾಯಾನ್ಸ್ 1,100 ರೂಪಾಯಿಗೆ ಏರಿದಾಗ ಮತ್ತೆ ಖುಷಿಯಿಂದ ಉಬ್ಬುತ್ತಾರೆ; ದೇವರಿಗೆ ಹಣ್ಣುಕಾಯಿ ಅರ್ಪಿಸುತ್ತಾರೆ. ಹೀಗೆ ಸಿಹಿಸುದ್ದಿಗೆ ಹಿಗ್ಗುತ್ತಾ, ಕಹಿಸುದ್ದಿಗೆ ಕುಗ್ಗುತ್ತಾ ಶೇರುಗಳೂ, ಒಟ್ಟಿಗೆ ರಾಯರೂ ತಮ್ಮ ಸಹಬಾಳ್ವೆ ನಡೆಸುತ್ತಿದ್ದಾರೆ.
ಬೆಲೆಗಳ ಏರಿಳಿತದ ಈ ಕ್ರಮವನ್ನು ಅಥೆìçಸಿಕೊಂಡ ಅವರು ತಮ್ಮ ಶೇರು ಖರೀದಿಯ ರಣ ತಂತ್ರವನ್ನು ರೂಪಿಸಿಯೇ ಬಿಡುತ್ತಾರೆ. ಯಾವುದೇ ಕಂಪೆನಿಯ ಸಿಹಿಸುದ್ದಿ ಬಂದೊಡನೆಯೇ ಎಲ್ಲರಿಗೂ ಮೊದಲಿಗರಂತೆ ಆ ಕಂಪೆನಿಯ ಶೇರನ್ನು ಖರೀದಿಸಬೇಕು ಎಂದುಕೊಳ್ಳುತ್ತಾರೆ. ಸಿಹಿ ಸುದ್ದಿಗೆ ಶೇರು ಬೆಲೆ ಮೇಲೇರಲೇ ಬೇಕಲ್ಲವೇ? ಮೊನ್ನೆ ಒಂದು ದಿನ ಹೀಗೆ ಆಯಿತು: ವಿಪೋ› ಕಂಪೆನಿಯ ತ್ತೈಮಾಸಿಕ ರಿಸಲ್ಟ್ ಬಂದಿತ್ತು. ವಿಪೋ› ಆದಾಯದಲ್ಲಿ ಶೇ.25ರಷ್ಟು ವೃದ್ಧಿಯನ್ನು ದಾಖಲಿಸಿತ್ತು.
ಇದೊಂದು ಭಾರೀ ಬೆಳವಣಿಗೆ ಎಂದುಕೊಂಡ ರಾಯರು ವಿಪ್ರೋ ಶೇರೊಂದಕ್ಕೆ 700 ರೂಪಾಯಿಯಂತೆ ಮಾರುಕಟ್ಟೆಯ ಬೆಲೆಯಲ್ಲಿ 100 ಶೇರು ಕೊಂಡರು. ರಾಯರು ಮುಗಿಬಿದ್ದು 100 ವಿಪೋ› ಕೊಂಡು ಅವರ ಅಕೌಂಟ್ 70,000 ರೂಪಾಯಿಗಳಿಗೆ ಡೆಬಿಟ್ ಆದ ಮರುಕ್ಷಣದಿಂದಲೇ ವಿಪೋ› ಶೇರು ಕುಸಿಯತೊಡಗಿತು. ರಾಯರು ಬೆವರಲಾರಂಭಿಸಿದರು. ಏನು ಮಾಡುವುದು ಎಂದರಿಯದೆ ಅತೀವ ಆತಂಕಕ್ಕೆ ಒಳಪಟ್ಟರು.
ದಿನದ ಕೊನೆಗೆ ವಿಪೋ› ಶೇ. 5ರಷ್ಟು ಕುಸಿದಿತ್ತು. ರಾತ್ರಿಯಿಡೀ ಭಜನೆಯದೇ ಕಾಲ ಕಳೆದರು. ವಿಪೋ› ಮರುದಿನ ಇನ್ನೂ ಶೇ.2ರಷ್ಟು ಕುಸಿಯಿತು. ಕೊನೆಗೆ, 5,000 ರೂಪಾಯಿಯ ನಷ್ಟದೊಂದಿಗೆ ಘಾಸಿಗೊಂಡ ರಾಯರು ವಿಪೋ› ಕೌಂಟರಿನಿಂದ ಹೊರ ಬಂದರು. ಈಗ ವಿಪೋ›ದ ಹೆಸರು ಕೇಳಿದರೂ ಬೆಚ್ಚಿ ಬೀಳುವ ರಾಯರಿಗೆ ನಡೆದ ಅನಾಹುತದ ಅರಿವಾಗಲಿಲ್ಲ. ಉತ್ತಮ ತ್ತೈಮಾಸಿಕ ಸಾಧನೆಯ ಬಳಿಕವೂ ವಿಪೋ› ಏಕೆ ಕುಸಿಯಿತು? ಇದು ಮುಖ್ಯ ಪ್ರಶ್ನೆ.
***
ಕಳೆದೆರಡು ದಶಕಗಳಿಂದ ಭಾರತೀಯ ಶೇರು ಮಾರುಕಟ್ಟೆಯನ್ನು ತಮ್ಮ ಮುಷ್ಟಿಯಲ್ಲಿರಿಸಿಕೊಂಡಿರುವ ವಿದೇಶಿ ಹಾಗೂ ಸ್ವದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ದೊಡ್ಡ ದೊಡ್ಡ ಹೂಡಿಕೆದಾರರು ಎಲ್ಲಾ ಕಂಪೆನಿಗಳ ಶೇರಿನ ಮೌಲ್ಯಮಾಪನವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಹಾಲಿ ವರ್ಷದ ಆದಾಯ ಅಲ್ಲದೆ, ಭಾವಿ ವರ್ಷಗಳ ನಿರೀಕ್ಷಿತ ಆದಾಯವೂ ಸೇರಿರುತ್ತದೆ. ಜಾಗತಿಕ ಮಾರುಕಟ್ಟೆ, ಔದ್ಯೋಗಿಕ ವಾತಾವರಣ, ದೇಶದ ಆರ್ಥಿಕ ಪ್ರಗತಿ, ಕಂಪೆನಿ ನ್ಯೂಸ್, ಗಾಸಿಪ್, ವಿಶ್ಲೇಷಣೆಗಳು ಇತ್ಯಾದಿಗಳ ಮೇಲೆ ಶೇರುಗಳ ಬೆಲೆಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಲೇ ಇರುತ್ತಾರೆ.
ಅಲ್ಲದೇ ಅದೇ ಬೆಲೆಗಳನ್ನು ಆಧಾರವಾಗಿಟ್ಟು ಶೇರುಗಳನ್ನು ಖರೀದಿ-ಬಿಕರಿ ಮಾಡುತ್ತಾರೆ. ಅಂತೆಯೇ ಮಾರುಕಟ್ಟೆಯಲ್ಲಿ ಬೆಲೆಗಳು ಏರಿಳಿಯುತ್ತಾ ಇರುತ್ತವೆ. ರಾಯರು ವಿಪೋ ಶೇರುಗಳನ್ನು ಖರೀದಿಸಿದ ಸಂದರ್ಭದಲ್ಲಿ ಮಾರುಕಟ್ಟೆ ಆಗಾಗಲೇ ವಿಪೋ›ದಲ್ಲಿ ಶೇ.40ರಷ್ಟು ಆದಾಯದ ವೃದ್ಧಿಯ ನಿರೀಕ್ಷೆ ಹೊಂದಿತ್ತು. ಮಾರ್ಕೆಟ್ ಬೆಲೆಯಾದ ರೂ.700 ರಲ್ಲಿ ಶೇ.40ರಷ್ಟು ಬೆಳವಣಿಗೆಯ ನಿರೀಕ್ಷೆಯೂ ಅಡಕವಾಗಿತ್ತು. ಶೇ.25ರಷ್ಟು ಉತ್ತಮ ಏರಿಕೆಯಾಗಿದ್ದರೂ ಕೂಡಾ ನಿರೀಕ್ಷಿತ ಶೇ.40ರಷ್ಟು ಸಾಕಾರವಾಗದೆ ಹೋದದ್ದೇ ಮಾರುಕಟ್ಟೆಯ ನಿರಾಸೆಗೆ ಕಾರಣ.
ಹೊಸ ಮೌಲ್ಯಮಾಪನಕ್ಕೆ ಅನುಸಾರವಾಗಿ ಶೇರು ಬೆಲೆ ಮತ್ತೆ ಕುಸಿಯಿತು. ಏರುತ್ತಿರುವ ಬಿ.ಪಿ ಯ ನಡುವೆ ರಾಯರು ಶೇರು ಮೌಲ್ಯಮಾಪನ ಮತ್ತು ಅದರೊಳಗೆ ನಿರೀಕ್ಷೆ’ಯ ಮಹತ್ವದ ಬಗ್ಗೆ ಪ್ರಾಥಮಿಕ ಪಾಠ ಕಲಿತರು. ಹೀಗೆ ಮಾರುಕಟ್ಟೆಯಲ್ಲಿ ಪ್ರತಿಯೊಂದು ಸುದ್ದಿಯನ್ನೂ ನಿರೀಕ್ಷೆ’ಯ ಮಾನದಂಡದಲ್ಲಿ ನೋಡಬೇಕು. ನಮಗೆ ಸಿಕ್ಕ ಸುದ್ದಿಯನ್ನು ಮಾರುಕಟ್ಟೆ ಈಗಾಗಲೇ ಅರಿತಿದ್ದು, ಶೇರು ಬೆಲೆಯಲ್ಲಿ ಅದನ್ನು ಗಣನೆಗೆ ತೆಗೆದುಕೊಂಡಿದ್ದಲ್ಲಿ ಆ ಸುದ್ದಿಯ ಘೋಷಣೆಯಾದ ಕೂಡಲೇ ಅದು ಶೇರು ಬೆಲೆಯನ್ನು ಅಷ್ಟಾಗಿ ಬಾಧಿಸುವುದಿಲ್ಲ.
ಹೊರಬಿದ್ದ ಸುದ್ದಿ ಅನಿರೀಕ್ಷಿತವಾದಲ್ಲಿ ಮಾತ್ರ ಶೇರು ಬೆಲೆ ಅದಕ್ಕನುಸಾರವಾಗಿ ಏರಿಳಿಯಬಹುದು. ಅಲ್ಲದೆ ನಿರೀಕ್ಷೆಗಿಂತ ಭಿನ್ನವಾದ ಅಂಶಗಳಿದ್ದಲ್ಲಿ ಅಷ್ಟರಮಟ್ಟಿಗೆ ಬೆಲೆ ಹೆಚ್ಚು-ಕಡಿಮೆಯಾದೀತು. ಆದ್ದರಿಂದ ಶೇರು ಬೆಲೆಯನ್ನು ಪ್ರಡಿಕ್ಟ್ ಮಾಡುವಾಗ ಮತ್ತು ಸುದ್ದಿಗಳ ಆಧಾರದಲ್ಲಿ ಅವುಗಳಲ್ಲಿ ದುಡ್ಡು ಹೂಡುವಾಗ ಮಾರುಕಟ್ಟೆಯ ಪೂರ್ವಭಾವಿ ನಿರೀಕ್ಷೆಯನ್ನು ಗಮನದಲ್ಲಿ ತೆಗೆದುಕೊಳ್ಳಲೇ ಬೇಕು. ಈ ಬಗ್ಗೆ ಮಾಹಿತಿ ಶೇರು ಪಂಡಿತರ ಲೇಖನಗಳಲ್ಲಿ, ಟಿ.ವಿ ಶೋಗಳಲ್ಲಿ ಆಗಾಗ್ಗೆ ಬರುತ್ತಿರುತ್ತದೆ. ಈ ಬಗ್ಗೆ ವಿಶೇಷ ಹಾಗೂ ನಿರಂತರ ಅಧ್ಯಯನದ ಅಗತ್ಯ ಬರುತ್ತದೆ.
ಅಧ್ಯಯನವಿಲ್ಲದೆ ಬರೀ ಸುದ್ದಿಯ ಆಧಾರದ ಮೇಲೆ ಏಕಾಏಕಿ ಹಣ ಹೂಡಿದರೆ ಎಡವಟ್ಟಾದೀತು. ಗುಜರಾತ್ ಫಲಿತಾಂಶದಲ್ಲಿ ಬಹುತೇಕ ಭಾಜಪ ಗೆಲ್ಲುವ ನಿರೀಕ್ಷೆಯನ್ನೇ ಮಾರುಕಟ್ಟೆ ಗಣನೆಗೆ ತೆಗೆದುಕೊಂಡಿತ್ತು. ಮಾರುಕಟ್ಟೆಯ ಬೆಲೆ ಅಂತಹ ಭಾಜಪದ ಗೆಲುವಿನ ನಿರೀಕ್ಷೆಯ ಮಟ್ಟದಲ್ಲಿ ನಿಂತಿತ್ತು. ಬೆಳಗ್ಗಿನಿಂದ ಸರಿ ಸುಮಾರು ಅದೇ ದಿಕ್ಕಿನಲ್ಲಿ ಫಲಿತಾಂಶ ಮುಂದುವರಿಯುತ್ತಿದ್ದರೆ ಅದು ಮಾರುಕಟ್ಟೇಯ ನಿರೀಕ್ಷೆಯ ಗತಿಯನ್ನೇ ಅವಲಂಭಿಸಿತ್ತು. ಅದರಲ್ಲಿ ಯಾವ ಶಾಕ್ ಅಥವಾ ಅಚ್ಚರಿಯೂ ಇರಲಿಲ್ಲ. ಹಾಗಾಗಿ ಮಾರುಕಟ್ಟೆಯ ಬೆಲೆ ಊಹೆಯ ಮಟ್ಟದಲ್ಲಿಯೇ ನಿಂತಿತ್ತು.
ಆದರೆ ಯಾವಾಗ ಕಾಂಗ್ರೆಸ್ ಮುನ್ನಡೆಗೆ ಬಂದಿತೋ ಅದು ಮಾರುಕಟ್ಟೆಯ ನಿರೀಕ್ಷೆಗೆ ವಿರುದ್ಧವಾಗಿತ್ತು. ಶೇರುಗಳ ಮೌಲ್ಯಮಾಪನದ ಲೆಕ್ಕಾಚಾರದಲ್ಲಿ ಏರುಪೇರು ಉಂಟಾಯಿತು. ಕಾಂಗ್ರೆಸ್ ಗೆಲುವು ಅಂದರೆ ಭಾಜಪ ಅಥವಾ ಮೋದಿಯವರಿಗೆ ಸೋಲು. ಅಂದರೆ ಸಧ್ಯದ ಆರ್ಥಿಕ ನೀತಿಗಳಿಗೆ ಹಿನ್ನಡೆ. ಈ ಲಾಜಿಕ್ ಹಿಡಿದುಕೊಂಡು ಮಾರುಕಟ್ಟೆ ಬೀಳತೊಡಗಿತು. ಹೀಗೆ ಒಂದು ಮಾರುಕಟ್ಟೆಯಲ್ಲಿ ಏನು ನಡೆದಿದೆ ಎನ್ನುವುದಕ್ಕಿಂತ ಯಾವ ಮಟ್ಟದ ನಿರೀಕ್ಷೆ ಇತ್ತು ಮತ್ತು ಆ ನಿರೀಕ್ಷೆಗೆ ಪೂರಕವಾಗಿ ಅಥವಾ ವಿರುದ್ಧವಾಗಿ ಏನು ನಡೆದಿದೆ ಎನ್ನುವುದು ಮುಖ್ಯ. ಅದು ಮಾರುಕಟ್ಟೆಯ ಮುಂದಿನ ಗತಿಯನ್ನು ನಿರ್ಧರಿಸುತ್ತದೆ.
* ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.