ಮನೆ ಕಂಪನ
Team Udayavani, Mar 5, 2018, 12:40 PM IST
ಮನೆಯ ಇಡೀ ಭಾರ ಪಾಯದ ಮೇಲೆಯೇ ಇರುತ್ತದೆ ಹಾಗೂ ಈ ಮಣ್ಣು ಅದುರಿದರೆ, ಸ್ವಾಭಾವಿಕವಾಗೇ ಮನೆ ಅದುರಿದ ಅನುಭವ ಆಗುತ್ತದೆ. ಸಾಮಾನ್ಯವಾಗಿ ಮನೆಗಳಿಗೆ ಬಳಸಿದ ಸಾಮಗ್ರಿಗಳು ಸಾಕಷ್ಟು ಗಟ್ಟಿಮುಟ್ಟಾಗಿದ್ದು, ಇಂಥ ಅದುರುವಿಕೆಯಿಂದ ಏನೂ ತೊಂದರೆ ಆಗುವುದಿಲ್ಲ.
ರಸ್ತೆಯಲ್ಲಿ ಗಾಡಿಗಳು ಓಡಾಡಿದರೆ, ಅದರಲ್ಲೂ ಭಾರಿಗಾತ್ರದ ಲಾರಿ ಚಲಿಸಿದರೆ ಮನೆಯಲ್ಲಿ ಕಿಟಕಿ ಗಾಜು ಅದುರಿದಂತಾಗಬಹುದು. ಅದರಲ್ಲೂ ಪೈಪ್ ಅಳವಡಿಸಲು ರೋಡನ್ನು ಅಡ್ಡಡ್ಡಕ್ಕೆ ತೋಡಿ, ನಂತರ ಸರಿಯಾಗಿ ಮುಚ್ಚದಿದ್ದರೆ, ವಾಹನಗಳ ಎರಡೂ ಚಕ್ರಗಳು ಅದರಲ್ಲಿ ಇಳಿದು ಹತ್ತುವಾಗ ಧಸಕ್ಕೆಂದು ರಸ್ತೆಯೇ ಅದುರಿದಾಗ, ಅದರ ಕಂಪನಕ್ಕೆ ಇಡೀ ಮನೆಯೇ ಅದುರಿದಂತೆ ಭಾಸವಾಗಬಹುದು. ಸಿಡಿಲಿನ ಶಬ್ದಕ್ಕೆ, ಪಟಾಕಿ ಶಬ್ದಕ್ಕೂ ಮನೆಯಲ್ಲಿ ಕಂಪನ ಉಂಟಾದಾಗ ಆತಂಕವಾಗಬಹುದು. ಇವುಗಳನ್ನು ತಡೆಯುವುದು ಹೇಗೆ, ಇವೆಲ್ಲವೂ ಅನಿವಾರ್ಯವಾ?
ಮನೆಯ ಇಡೀ ಭಾರ ಪಾಯದ ಮೇಲೆಯೇ ಇರುತ್ತದೆ ಹಾಗೂ ಈ ಮಣ್ಣು ಅದುರಿದರೆ, ಸ್ವಾಭಾವಿಕವಾಗೇ ಮನೆ ಅದುರಿದ ಅನುಭವ ಆಗುತ್ತದೆ. ಸಾಮಾನ್ಯವಾಗಿ ಮನೆಗಳಿಗೆ ಬಳಸಿದ ಸಾಮಗ್ರಿಗಳು ಸಾಕಷ್ಟು ಗಟ್ಟಿಮುಟ್ಟಾಗಿದ್ದು, ಇಂಥ ಅದುರುವಿಕೆಯಿಂದ ಏನೂ ತೊಂದರೆ ಆಗುವುದಿಲ್ಲ. ಮನೆ ಒಂದಷ್ಟು ಕಂಪಿಸಿ ಮತ್ತೆ ತನ್ನ ಮೂಲದಲ್ಲಿ ಇದ್ದಂತೆ ಇದ್ದುಬಿಡುತ್ತದೆ. ಈ ಕಾರಣಕ್ಕಾಗಿಯೇ ನಾವು ಮನೆ ಕಟ್ಟುವಾಗ ಬರಿ ಭಾರ ಹೊರವುದಲ್ಲದೆ, ಇತರೆ ಏರಿಳಿತಗಳಿಗೂ ಹೊಂದಿಕೊಳ್ಳುವಂತೆ, ಯಾವುದೇ ರೀತಿಯಿಂದಲೂ ಹಾನಿಗೊಳಗಾಗದಂತೆ ವಿನ್ಯಾಸ ಮಾಡಬೇಕಾಗುತ್ತದೆ. ಇಡೀ ಮನೆಯನ್ನು ಬೆಸೆಯಲು ಪಾಯದ ಕೆಳಗೆ ಬೆಡ್ ಕಾಂಕ್ರಿಟ್ ಹಾಕುವುದರಿಂದ ಶುರುವಾಗುವ ಈ ಬೆಸೆಯುವಿಕೆ, ಪ್ಲಿಂತ್ ಮಟ್ಟದಲ್ಲಿ ಬೀಮ್ ಮಾದರಿಯಲ್ಲಿ ಉಕ್ಕಿನ ಸರಳುಗಳೊಂದಿಗೆ ಹಾಕಿದ್ದರೆ, ಲಿಂಟಲ್ ಮಟ್ಟದಲ್ಲೂ ಮತ್ತೂಂದು ಬೀಮ್ ಬಂದಿರುತ್ತದೆ. ಜೊತೆಗೆ ನಾವು ಹಾಕುವ ಆರ್‌ಸಿಸಿ ಸೂರು ಕೂಡ ದೊಡ್ಡಮಟ್ಟದಲ್ಲಿ ಇಡೀ ಮನೆಯನ್ನು ಬೆಸೆಯುವಲ್ಲಿ ಮುಖ್ಯ ಭೂಮಿಕೆಯಾಗುತ್ತದೆ.
ಮಣ್ಣಿನ ಮೂಲ ಗುಣ ಹಾಗೂ ಕಂಪನಗಳು
ಜೇಡಿ ಮಣ್ಣು ಹೆಚ್ಚಿರುವ ಭೂಮಿಯಲ್ಲಿ ವಿವಿಧ ಕಾಲದಲ್ಲಿ ಅದರ ಗುಣ ಬೇರೆಬೇರೆ ರೀತಿಯಾಗಿರುತ್ತದೆ. ಮಳೆಗಾಲದಲ್ಲಿ ನೀರು ಕುಡಿದು ಗಟ್ಟಿ ಹಿಟ್ಟಿನಂತೆ ಆಗುವ ಈ ಮಣ್ಣು, ಬೇಸಿಗೆಯಲ್ಲಿ ಒಣಗಿದರೆ, ಗಟ್ಟಿಮುಟ್ಟಾಗಿರುತ್ತದೆ. ಆದರೆ ತೀರಾ ಒಣಗಿದರೆ, ಬಿರುಕುಬಿಡುತ್ತದೆ. ನೀರಿದ್ದಾಗ ಕಂಪನಗಳನ್ನು ಸುಲಭದಲ್ಲಿ ಅತ್ತಿಂದಿತ್ತ ಒಯ್ಯುವ ಈ ಜೇಡಿ ಮಣ್ಣು, ಒಣಗಿದಾಗ ಕಂಪನಗಳನ್ನು ಅಷ್ಟಾಗಿ ರವಾನಿಸುವುದಿಲ್ಲ. ಅದೇ ಮರಳು ನುರುಜುಕಲ್ಲು ಮಿಶ್ರಿತ ಭೂಮಿಯಲ್ಲಿ ವಿವಿಧ ಕಾಲಮಾನಗಳಲ್ಲಿ ಅಷ್ಟೇನೂ ವ್ಯತ್ಯಾಸ ಇರುವುದಿಲ್ಲ. ನೀರು ಇಂಗಿದರೂ ಅದು ದೊಡ್ಡ ಕಣಗಳ ಮಧ್ಯೆ ಉಳಿದು, ಮರಳು ಹಾಗೂ ನುರುಜು ಕಲ್ಲುಗಳೇ ಭಾರ ಹೊರುವುದರಿಂದ, ತನ್ನ ಮೂಲ ಗುಣವನ್ನು ಹಾಗೆಯೇ ಉಳಿಸಿಕೊಳ್ಳಬಲ್ಲವು. ಹಾಗಾಗಿ ಕಾಲ ಬದಲಾಗುತ್ತಿದ್ದಂತೆ ಹೆಚ್ಚಿಗೆ ಬದಲಾವಣೆ ಇಲ್ಲದೆ, ಒಂದೇ ರೀತಿಯಾಗಿ ಆ ಕಡೆ ತೀಪಾ ಕಡಿಮೆಯೂ ಇರದೆ, ಈ ಕಡೆ ಹೆಚ್ಚಾ ಆಗದೇ ಸಮಾನವಾಗಿ ಕಂಪನಗಳನ್ನು ಹರಡುತ್ತದೆ.
ಮಣ್ಣು ಆಧರಿಸಿ ಕಂಪನಕ್ಕೆ ಶಮನಕಗಳು
ಮರಳು ಹಾಗೂ ಬೌಲ್ಡರ್ ಅಂದರೆ ಸೈಜು ಮಾಡದ ವಿವಿಧ ಆಕಾರದ ಕಚ್ಚಾ ಕಲ್ಲುಗಳಿಗೆ ಹಾಗೆಯೇ ಜೆಲ್ಲಿ ಕಲ್ಲುಗಳಿಗೂ ಕಂಪನಗಳನ್ನು ಕಡಿಮೆ ಮಾಡುವ ಗುಣವಿರುತ್ತದೆ. ಇವು ಒಂದು ರೀತಿಯ ಶಾಕ್ ಅಬಾÕರ್‌ಬರ್ ರೀತಿಯಲ್ಲಿ ಕೆಲಸ ಮಾಡುತ್ತವೆ. ಈ ಕಾರಣದಿಂದಾಗಿಯೇ ರೈಲು ಹಳಿಗಳ ಕೆಳಗೆ ಇವನ್ನು ಅಡ್ಡ ಪಟ್ಟಿ ಸ್ಲಿàಪರ್ಗಳ ಕೆಳಗೆ ಹಾಕಲಾಗುತ್ತದೆ. ರೈಲುಗಳ ಓಡಾಟದಿಂದ ಸಾಕಷ್ಟು ಕಂಪನಗಳು ಉಂಟಾಗುವುದರಿಂದ, ಎಷ್ಟೇ ಗಟ್ಟಿಮುಟ್ಟಾದ ವಸ್ತುಗಳನ್ನು ಹಾಕಿದರೂ ಅವು ಕಾಲಕ್ರಮೇಣ ಬಿರುಕು ಬಿಡುವ ಸಾಧ್ಯತೆ ಇರುತ್ತದೆ. ಆದುದರಿಂದ ನೂರಾರು ವರ್ಷಗಳಿಂದ ರೈಲಿನ ಕೆಳಗೆ ಜೆಲ್ಲಿ ಕಲ್ಲುಗಳನ್ನು ಬಳಸಿರಿವುದನ್ನು ಈಗಲೂ ನೋಡಬಹುದು. ಪಾಯ ಹಾಕುವಾಗ, ಪಕ್ಕದಲ್ಲಿ ಮುಖ್ಯ ರಸ್ತೆ ಇದ್ದು, ಭಾರಿ ವಾಹನಗಳ ಉಪಟಳ ಇದ್ದರೆ, ಪಾಯದ ಕೆಳಗೆ ಒಂದು ಒಂಭತ್ತು ಇಂಚು ಬೌಲ್ಡರ್ ಪ್ಯಾಕ್ ಮಾಡಿ, ಮರಳಿನಿಂದ ಅದರ ಸಂಧಿಗಳನ್ನು ತುಂಬಿ, ಮೇಲೂ ಒಂದೆರಡು ಇಂಚು ಹೆಚ್ಚುವರಿಯಾಗಿ ಮರಳನ್ನು ತುಂಬಿರಿ. ಹೀಗೆ ಶಾಕ್ ಅಬಾÕರ್‌ಬರ್ ಮಾದರಿಯ ಪಾಯ ಕೆಳಮಟ್ಟದಲ್ಲಿ ತಯಾರಾದ ನಂತರ, ಮಾಮೂಲಿ ಪಾಯವನ್ನು ಅದರ ಮೇಲೆ ಹಾಕಬಹುದು.
ಪಾಯ ಮತ್ತು ಅದರ ಆಳ
ಪಾಯ ಹೆಚ್ಚು ಆಳ ಹೋದಷ್ಟೂ ಮನೆಗೆ ನಾನಾ ರೀತಿಯಲ್ಲಿ ಉಪಯುಕ್ತ ಎಂಬುದು ನಿಜವಾದರೂ, ಹೇಳಿಕೇಳಿ ನಮಗದು ನೇರವಾಗಿ ಉಪಯೋಗವಾಗುವುದಿಲ್ಲ. ಸಾಮಾನ್ಯವಾಗಿ ಪಾಯವನ್ನು ಭೂಮಿಯ ಕೆಳಗೆ, ಕಡೆ ಪಕ್ಷ ಮೂರು ನಾಲ್ಕು ಅಡಿ ಆಳದಲ್ಲಿ ಹಾಕಬೇಕಾಗುತ್ತದೆ. ಈ ಮಟ್ಟ ಸದೃಢವಾಗಿರುವುದರ ಜೊತೆಗೆ ವಾತಾವರಣದ ಏರಿಳಿತಗಳಿಗೆ ಹೆಚ್ಚು ಬದಲಾಗುವುದಿಲ್ಲ. ಮನೆಯ ಎತ್ತರ ಹೆಚ್ಚಿದಷ್ಟೂ ಪಾಯ ಸ್ವಲ್ಪ ಆಳಕ್ಕೆ ಇದ್ದರೆ ಒಳ್ಳೆಯದು. ಮುಖ್ಯ ರಸ್ತೆ, ಕೆರೆಕಟ್ಟೆ, ರಾಜಕಾಲುವೆ ಇತ್ಯಾದಿ ಹತ್ತಿರವೇ ಇದ್ದರೆ, ಕಡೆ ಪಕ್ಷ ಐದು ಅಡಿಯಾದರೂ ಪಾಯ ತೆಗೆಯ ಬೇಕಾಗುತ್ತದೆ. ಜೊತೆಗೆ ಮಣ್ಣಿನ ದೃಢತೆಯ ಬಗ್ಗೆ ಸಂಶಯವಿದ್ದರೆ, ನುರಿತ ಆರ್ಕಿಟೆಕ್ಟ್ಗಳ ಸಹಾಯ ಪಡೆಯಬೇಕಾಗುತ್ತದೆ.
ಕಂಪನಗಳಿಂದಾಗುವ ಹಾನಿ
ವೈಬ್ರೇಷನ್ಸ್ – ಕಂಪನಗಳು ಸುಮ್ಮನೆ ಆಗುತ್ತಿದ್ದರೆ, ಮನೆಗೆ ಏನೂ ತೊಂದರೆ ಕೊಡದಿದ್ದರೆ, ನಾವು ಹೆಚ್ಚು ಚಿಂತಿಸುವ ಅಗತ್ಯ ಇರುತ್ತಿರಲಿಲ್ಲ. ಆದರೆ ಕೆಲವೊಮ್ಮೆ ಕಂಪನಗಳಿಂದಾಗಿ ಮನೆಯಲ್ಲಿ ಸಣ್ಣ ಸಣ್ಣ ಬಿರುಕುಗಳು ಬೀಳುವುದು, ಗಾಜು ಬಿರುಕು ಬಿಡುವುದು ಇತ್ಯಾದಿ ಆಗಬಹುದು. ಮನೆಯಲ್ಲಿ ಉಂಟಾಗುವ ಎಲ್ಲ ಬಿರುಕುಗಳಿಗೂ ಕಂಪನಗಳೇ ಕಾರಣ ಎಂದು ಹೇಳಲಾಗದಿದ್ದರೂ, ಅತಿ ಹೆಚ್ಚು ಕಂಪನಗಳಿದ್ದರೆ, ಬಿರುಕು ಬಿಡುವ ಸಾಧ್ಯತೆ ಇರುತ್ತದೆ. ಮನೆ ವಿನ್ಯಾಸ ಮಾಡುವಾಗ ನಾವು ನಿವೇಶನದ ವೀಕ್ಷಣೆ ನಡೆಸಿ, ಈಗಾಗಲೇ ಇರಬಹುದಾದ ಕಂಪನ ಕಾರಣಗಳನ್ನು ಇಲ್ಲವೇ ಮುಂದೆ ಮುಖ್ಯ ರಸ್ತೆ ಅದರಲ್ಲೂ ಭಾರಿ ವಾಹನಗಳು ಓಡಾಡುವ ರಸ್ತೆ ಆಗುವಂತಿದ್ದರೆ, ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮನೆಗಳಿಗೆ ಕಂಪನಗಳಿಂದ ಹೆಚ್ಚುವರಿ ರಕ್ಷಣೆ ನೀಡುವಲ್ಲಿ, ಮನೆಯ ಆಕಾರವೂ ಮುಖ್ಯ ಪಾತ್ರ ವಹಿಸುತ್ತದೆ. ಮನೆಯನ್ನು ವಿನ್ಯಾಸ ಮಾಡುವಾಗ ಅದರ ಒಟ್ಟಾರೆ ಭಾರ ಸಮವಾಗಿ ಇಡೀ ಪಾಯದಮೇಲೆ- ಹಡಗುಗಳು ನೀರಿನಲ್ಲಿ ಬ್ಯಾಲನ್ಸ್ ಮಾಡಿಕೊಂಡು ಸಾಗುವಂತೆ ಮಾಡಿದರೆ, ಹೆಚ್ಚು ಹಾನಿ ಆಗುವುದಿಲ್ಲ. ಮನೆಯ ಒಂದು ಭಾಗ ತೀರಾ ಮೂರು ಮಹಡಿಗೆ ಏರಿ, ಮಿಕ್ಕ ಭಾಗ ಒಂದು ಮಹಡಿ ಮಾತ್ರ ಇದ್ದರೆ, ಕಂಪನಗಳ ಹಾನಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂಥ ವಿನ್ಯಾಸಗಳನ್ನು ಸೂಕ್ತ ರೀತಿಯಲ್ಲಿ ಬೆಸೆಯುವ ಅಗತ್ಯ ಇರುತ್ತದೆ.
ಮಾತಿಗೆ :98441 32826
– ಆರ್ಕಿಟೆಕ್ಟ್ ಕೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !
Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ
John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.