ಕ್ರಿಮಿ ಕೀಟಗಳಿಂದ ಮನೆ ರಕ್ಷಣೆ ಹೇಗೆ?
Team Udayavani, May 21, 2018, 12:56 PM IST
ಹಾವುಗಳು ಕಾಂಪೌಂಡ್ ಹತ್ತಿಯೂ ಬರಬಹುದು. ಸಾಮಾನ್ಯವಾಗಿ ಮೂರು ನಾಲ್ಕು ಅಡಿ ಎತ್ತರದ ಗೋಡೆ ಹತ್ತಿಬರುವುದು ಸ್ವಲ್ಪ ಕಷ್ಟವಾದರೂ ಹತ್ತಿರ ಮಣ್ಣು, ಕಸದ ಗುಡ್ಡೆ ಬಿದ್ದಿದ್ದರೆ, ಇಲ್ಲವೇ ಗಿಡಗಂಟಿ ಹತ್ತಲು ಸಿಕ್ಕರೆ, ಗೋಡೆ ಹತ್ತಲೂ ಬಹುದು. ಆದುದರಿಂದ, ಕಾಂಪೌಂಡ್ ಮೇಲೆ ಕಡೆ ಪಕ್ಷ ಆರು ಇಂಚಾದರೂ ಹೊರಚಾಚಿದಂತೆ, ಸ್ಲ್ಯಾಬ್‌ಗಳನ್ನು ಅಳವಡಿಸಿದರೆ ಸರಾಗವಾಗಿ ಹತ್ತಲು ಆಗುವುದಿಲ್ಲ.
ಹೊಸಮನೆಗಳನ್ನು ಸಾಮಾನ್ಯವಾಗಿ ಹೊಸ ಬಡಾವಣೆಗಳಲ್ಲಿ ಕಟ್ಟಲಾಗುತ್ತದೆ. ಅಲ್ಲಿನ ಮೂಲ ನಿವಾಸಿಗಳು ಅಂದರೆ ಹಾವು, ಚೇಳು, ಜರಿ, ಸೊಳ್ಳೆಗಳು. ಇವುಗಳ ಇರು ನೆಲೆಗಳ ಮೇಲೆಯೇ ಮನೆಕಟ್ಟುವುದು. ನಾವು ಆಕ್ರಮಿಸಿಕೊಂಡಾಕ್ಷಣ ಅವೆಲ್ಲ ದೂರದೂರ ಓಡಿಹೋಗುತ್ತವೆ ಎಂದೇನೂ ಇಲ್ಲ! ಹೊಲ, ಗದ್ದೆ, ಗೋಮಾಳ, ಕಾಡಿನಂತಿದ್ದ ಭೂಮಿ ಕಾಲಕ್ರಮೇಣ ನಗರೀಕರಣದ ಆಕ್ರಮಣಕ್ಕೆ ತುತ್ತಾದ ಮೇಲೆ ಗುಬ್ಬಚ್ಚಿಗಳೂ ಕಣ್ಣಿಗೆ ಬೀಳದಂತಾಗುವುದು ನಿಜವಾದರೂ, ಬಡಾವಣೆ ಅಭಿವೃದ್ಧಿಗೊಳ್ಳುವವರೆಗೆ ಕ್ರಿಮಿಕೀಟಗಳ ಬಾಧೆ ತಪ್ಪಿದ್ದಲ್ಲ.
ಹಾರಾಡುವ ಸೊಳ್ಳೆ, ನೊಣಗಳಿಂದ ರಕ್ಷಣೆ ಪಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಸುಮ್ಮನಿರಬಹುದಾದರೂ ಹಾವು, ಚೇಳುಗಳಿಗೆ ಏನು ಮಾಡುವುದು? ಅಕಸ್ಮಾತ್ ಅವು ಮನೆಗೆ ನುಗ್ಗಿದರೆ? ಹಾವುಗಳು ಸಾಮಾನ್ಯವಾಗಿ ನೆಲದ ಮೇಲೆ ಹರಿದಾಡಲು ನೋಡುತ್ತವೆ, ಅನಗತ್ಯವಾಗಿ ಮೇಲೆ ಹತ್ತಲು ನೋಡುವುದಿಲ್ಲ. ಅದರಲ್ಲೂ ನಾಲ್ಕಾರು ಮೆಟ್ಟಿಲುಗಳಿವೆ ಎಂದರೆ, ತ್ರಾಸ ಪಟ್ಟು ಮೇಲೆ ಏಕೆ ಹತ್ತಬೇಕು?
ಕೆಳಗೇ ಏನಾದರೂ ಸಿಗುತ್ತದೆಯೋ ಎಂದು ನೋಡುವ ಸಾಧ್ಯತೆ ಹೆಚ್ಚಿರುತ್ತದೆ. ಆದುದರಿಂದ, ಹೊಸ ಬಡಾವಣೆಗಳಲ್ಲಿ ಮನೆ ಕಟ್ಟುವವರು ಮಾಮೂಲಿ ಮೂರು ಮೆಟ್ಟಿಲುಗಳನ್ನು ನೀಡುವ ಬದಲು ಕಡೇಪಕ್ಷ ಐದು ಆರು ಮೆಟ್ಟಿಲುಗಳನ್ನು ನೀಡಿದರೆ, ಬಹುತೇಕ ಕ್ರಿಮಿಕೀಟಗಳು ಅಷ್ಟೊಂದು ಮೇಲೆ ಹತ್ತುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗೆಯೇ, ನಗರ ಬೆಳೆದಂತೆ, ರಸ್ತೆಯ ಮೇಲೆ ನಾಲ್ಕಾರು ಪದರ ಟಾರು ಹಾಕುತ್ತಿದ್ದಂತೆ,
ಮನೆ ಹೊರಗಿನ ಮಟ್ಟ ಹೆಚ್ಚಿ, ಕೆಲವಾರು ವರ್ಷಗಳಲ್ಲಿ ಒಂದೆರಡು ಮೆಟ್ಟಿಲು ಕಡಿಮೆ ಮಾಡಿಕೊಳ್ಳುವಷ್ಟು ಎತ್ತರಗೊಂಡರೂ ಆಶ್ಚರ್ಯವಿಲ್ಲ. ಹಾಗಾಗಿ, ಮನೆ ಕಟ್ಟುವಾಗಲೇ ಒಂದೆರಡು ಮೆಟ್ಟಿಲು ಹೆಚ್ಚುವರಿ ಆಗುವುದರಿಂದ ಇಡೀ ಮನೆಯನ್ನೇ ಎತ್ತರಿಸಿದಂತೆ ಆಗುತ್ತದಾದರೂ, ದೂರ ದೃಷ್ಟಿಯನ್ನು ಇಟ್ಟುಕೊಂಡು ಲೆಕ್ಕಚಾರ ಹಾಕಿದರೆ ಇದರಿಂದ ಯಾವುದೇ ರೀತಿಯ ತಲೆನೋವು ಆಗುವುದಿಲ್ಲ.
ಹೊರಚಾಚಿದ ಮೆಟ್ಟಿಲುಗಳು: ಸಾಮಾನ್ಯವಾಗಿ ಮೆಟ್ಟಿಲುಗಳನ್ನು ಇಟ್ಟಿಗೆ ಇಲ್ಲವೇ ಕಾಂಕ್ರಿಟ್ ಬ್ಲಾಕ್‌ನಲ್ಲಿ ಕಟ್ಟಿ ಅದರ ಮೇಲೆ ಗ್ರಾನೈಟ್ ಇಲ್ಲವೇ ಇತರೆ ಫಿನಿಶ್ ನೀಡಲಾಗುತ್ತದೆ. ಹೀಗೆ ಮಾಡುವ ಬದಲು, ಗೋಡೆಯಿಂದ ಹೊರಚಾಚಿದಂತೆ ಅಂದರೆ, ಕಡೇ ಪಕ್ಷ ಪ್ಲಿಂತ್ ಮಟ್ಟದಲ್ಲಿಯಾದರೂ ಮನೆಯ ನೆಲ ಮಹಡಿಯ ಫ್ಲೋರ್ ಕಾಂಕ್ರಿಟ್‌ನ ಮಟ್ಟದಿಂದ ಮೂರು ಇಂಚು ದಪ್ಪದ ಸ್ಲ್ಯಾಬ್ ಅನ್ನು ಹೊರಚಾಚಿದಂತೆ ಮಾಡಬೇಕು.
ಹೀಗೆ ಮಾಡಿದರೆ ಅದನ್ನೇ ಮೆಟ್ಟಿಲಂತೆ ಬಳಸಬಹುದು. ಆಗ ನಮಗೆ ಈ ಮೆಟ್ಟಿಲಿನ ಕೆಳಗೂ, ಕೆಳಗಿನ ಮೆಟ್ಟಿಲಿನ ಮೇಲೂ ಸುಮಾರು ಮೂರು ನಾಲ್ಕು ಇಂಚಿನ ಸಂದಿ ಸಿಗುತ್ತದೆ. ಹಾವು ಚೇಳು ಇತ್ಯಾದಿ ಜಂತುಗಳು ಸಾಮಾನ್ಯವಾಗಿ ಸಂದಿ ಗೊಂದಿ ಇದ್ದರೆ, ಅಲ್ಲೇ ಹರಿದಾಡಿ, ಮೇಲೆ ಹತ್ತಲು ಹೋಗುವುದಿಲ್ಲ. ಇದು ಒಂದು ರೀತಿಯ ಅಡ್ಡದಾರಿಯ ರೂಪವಾಗಿದ್ದು, ಮನೆಯ ಹೊರಗೆ ಹರಿದಾಡಿದರೂ, ಮೇಲು ಮೆಟ್ಟಿಲು ಹತ್ತಿ ಒಳಬರಲು ಸ್ವಲ್ಪ ಕಷ್ಟವಾಗುತ್ತದೆ!
ಇಲಿ ನಿರೋಧಕ ವಿಧಾನಗಳು: ಹಾವುಗಳ ಮುಖ್ಯ ಆಹಾರ ಇಲಿಗಳೇ ಆಗಿರುತ್ತವೆ. ಪರಿಸರದಲ್ಲಿ ಸಮತೋಲನ ಕಾಯ್ದುಕೊಂಡುಹೋಗಲು, ಇಲಿಗಳ ಸಂಖ್ಯೆ ಕಡಿಮೆಗೊಳಿಸುವಲ್ಲಿ ಹಾವುಗಳ ಪಾತ್ರ ಹಿರಿದು. ಹೀಗಾಗಿ ಹಾವು ಎಂದರೆ ಎಲ್ಲರಿಗೂ ಭಯವೇ! ಆದುದರಿಂದ ನಿಮ್ಮ ಮನೆಯ ಸುತ್ತಲೂ ಇಲಿಗಳು ಬಿಲಗಳನ್ನು ಕೊರೆಯದಂತೆ ಎಚ್ಚರ ವಹಿಸುವುದು ಉತ್ತಮ.
ಮನೆಯ ಸುತ್ತಲೂ ಒಂದೂವರೆ ಎರಡು ಅಡಿ ಅಗಲದ ಫ್ಲಾಗಿಂಗ್ ಕಾಂಕ್ರಿಟ್, ಅಂದರೆ ಮಳೆಯ ನೀರು ಗೋಡೆಗೆ ಹೊಡೆದು, ಕೆಳಕ್ಕೆ ಇಳಿದು ಪಾಯಕ್ಕೆ ಹೋಗದಂತೆ ತಡೆಯಲು ಮನೆಯ ಸುತ್ತಲೂ ಹಾಕುವ ಮೂರು ಇಂಚು ದಪ್ಪದ ಕಾಂಕ್ರಿಟ್ ಇಲಿಬಿಲಗಳ ನಿಯಂತ್ರಣದಲ್ಲಿ ಮುಖ್ಯವಾಗುತ್ತದೆ. ಇಲಿಗಳ ಹಾವಳಿ ಹೆಚ್ಚಿರುವ ಕಡೆ, ಇನ್ನೊಂದೆರಡು ಅಡಿ ಹೆಚ್ಚುವರಿಯಾಗಿ ಕಾಂಕ್ರಿಟ್ ಹಾಕಿದರೆ, ಮತ್ತಷ್ಟು ನಿಯಂತ್ರಣ ಸಿಗುತ್ತದೆ.
ಕಾಂಪೌಂಡ್ ಗೇಟ್ ಬಳಿಯೇ ನಿಯಂತ್ರಿಸಿ: ಹಸು ನಿರೋಧಕಗಳು ಹಾವು ನಿಯಂತ್ರಕಗಳಂತೆಯೂ ಕಾರ್ಯ ನಿರ್ವಹಿಸಬಲ್ಲವು. ಸಾಮಾನ್ಯವಾಗಿ ಹಸುವಿನ ಪಾದದಷ್ಟು ಅಗಲ ಸಂದಿಯ ಅಂತರದಲ್ಲಿ, ಎರಡು ಮೂರು ಇಂಚು ದಪ್ಪದ ಪೈಪ್‌ಗ್ಳನ್ನು ಗೇಟಿನ ಉದ್ದಕ್ಕೆ ಮೇರಿಯ ಮೇಲೆ ಅಳವಡಿಸಿದರೆ, ಕಾಲು ಸಿಕ್ಕಿಹಾಕಿಕೊಳ್ಳುತ್ತದೆ ಎಂಬ ಕಾರಣಕ್ಕೆ ದನಕರುಗಳು ದಾಟಲು ಹೋಗುವುದಿಲ್ಲ.
ಇಂಥವನ್ನು ಪಾಶ್ಚಾತ್ಯ ದೇಶಗಳಲ್ಲಿ “ಕೌವ್ ಕ್ಯಾಚರ್’ ಎಂದೇ ಕರೆಯಲಾಗುತ್ತದೆ. ಇದೇ ಮಾದರಿಯವನ್ನು, ಗೇಟಿನ ಮುಂದೆ- ಎರಡು ಮೂರು ಅಡಿಗಳಷ್ಟು ಅಗಲಕ್ಕೆ ಮೋರಿಯ ಮೇಲೆ ಹಾಕುವ ಕಲ್ಲು ಇಲ್ಲವೇ ಕಾಂಕ್ರಿಟ್ ಬದಲಿಗೆ ಹಾಕಬಹುದು. ಅದರಲ್ಲೂ ಮನೆ ಎತ್ತರದಲ್ಲಿದ್ದು, ರಸ್ತೆ ಕೆಳಗಿದ್ದರೆ, ಇಳಿಜಾರು ಹಾಗೂ ನುಣ್ಣನೆಯ ಪೈಪ್ ಮೇಲೆ ಹರಿದಾಡಿ ಮುಂದೆ ಸರಿಯಲು ಹಾವುಗಳಿಗೆ ಕಷ್ಟವಾಗುತ್ತದೆ.
ನುಣುಪಾದ ನೆಲದಲ್ಲಿ ಸಾಮಾನ್ಯವಾಗಿ ಹಾವುಗಳು ಹಾದುಹೋಗುವುದಿಲ್ಲ. ಹಾಗೆಯೇ, ಮನೆಯ ಗೇಟು ನೆಲಕ್ಕೆ ಅಂಟಿದಂತಿದ್ದು, ಕೇವಲ ಒಂದೆರಡು ಎಮ್ ಎಮ್ ಸಂದಿ ಇದ್ದರೆ, ಹಾಗೇ ಒಳನುಸುಳಲು ಕಷ್ಟವಾಗುತ್ತದೆ. ಜೊತೆಗೆ, ಅಕ್ಕಪಕ್ಕದಲ್ಲಿ ಅಳವಡಿಸಿರುವ ಕೀಲಿಗಳ ಬಳಿಯೂ ಸಂದಿ ಇಲ್ಲದಂಥ ವಿನ್ಯಾಸ ಮಾಡಿ. ಗೇಟಿನ ಡಿಸೈನ್ ಏನೇ ಇರಲಿ, ಹಿಂದೊಂದು ಶೀಟ್ ಹಾಕಿದರೆ ಮನೆಗೆ ಕರೆಯದೆ ಬರುವ ಅತಿಥಿಗಳ ನಿಯಂತ್ರಣ ಸುಲಭವಾಗುತ್ತದೆ.
ಕಾಂಪೌಂಡ್ ಗೋಡೆಗಳಿಗೆ ಹೊರಚಾಚು: ಕೆಲವೊಮ್ಮೆ ಹಾವುಗಳು ಕಾಂಪೌಂಡ್ ಹತ್ತಿಯೂ ಬರಬಹುದು. ಸಾಮಾನ್ಯವಾಗಿ ಮೂರು ನಾಲ್ಕು ಅಡಿ ಎತ್ತರದ ಗೋಡೆ ಹತ್ತಿಬರುವುದು ಸ್ವಲ್ಪ ಕಷ್ಟವಾದರೂ ಹತ್ತಿರ ಮಣ್ಣು, ಕಸದ ಗುಡ್ಡೆ ಬಿದ್ದಿದ್ದರೆ, ಇಲ್ಲವೇ ಗಿಡಗಂಟಿ ಹತ್ತಲು ಸಿಕ್ಕರೆ, ಗೋಡೆ ಹತ್ತಲೂ ಬಹುದು. ಆದುದರಿಂದ, ಕಾಂಪೌಂಡ್ ಮೇಲೆ ಕಡೆ ಪಕ್ಷ ಆರು ಇಂಚಾದರೂ ಹೊರಚಾಚಿದಂತೆ, ಸ್ಲ್ಯಾಬ್‌ಗಳನ್ನು ಅಳವಡಿಸಿದರೆ ಸರಾಗವಾಗಿ ಹತ್ತಲು ಆಗುವುದಿಲ್ಲ.
ಹಾವು ಮತ್ತೂಂದು ಗೋಡೆಮೇಲೆ ಹತ್ತಲು ನೋಡಿದರೂ, ತಲೆ ಮೇಲೆ ಸ್ಲಾಬ್ ಹೊರಚಾಚಿದಂತೆ ಇರುವುದನ್ನು ಕಂಡು, ಅದನ್ನು ಸುತ್ತಿಕೊಂಡು ಮೇಲಿನ ಮಟ್ಟ ತಲುಪಲು ಅದಕ್ಕೆ ಕಷ್ಟವಾಗುತ್ತದೆ. ಸಾಮಾನ್ಯವಾಗಿ ಹಡಗುಗಳಲ್ಲಿ ಇಲಿಗಳ ಪ್ರವೇಶವನ್ನು ತಡೆಯಲು ಈ ರೀತಿಯ ವಿನ್ಯಾಸವನ್ನು ಅಳವಡಿಸಲಾಗುತ್ತದೆ. ಕಾಂಪೌಂಡ್ ಮೇಲಿನ ಹೊರಚಾಚುಗಳು ಹಾವು, ಚೇಳುಗಳ ಪ್ರವೇಶವನ್ನು ಕೆಳ ಮಟ್ಟದವರೆಗೂ ನಿಯಂತ್ರಿಸುವಂತೆಯೇ ಗೋಡೆ ಹತ್ತಿಬರುವ ಇಲಿ ಹೆಗ್ಗಣಗಳನ್ನೂ ತಡೆಯಬಲ್ಲವು.
ನಮ್ಮ ಪರಿಸರ ಪ್ರೇಮ ಎಷ್ಟೇ ಗಾಢವಾಗಿದ್ದರೂ, ಹಾವು ಚೇಳು ಮತ್ತೂಂದನ್ನು ಮನೆಯೊಳಗೆ ಬಿಟ್ಟುಕೊಳ್ಳಲು ಆಗುವುದಿಲ್ಲ. ಇವೆಲ್ಲ ಮನೆಯನ್ನು ಪ್ರವೇಶಿಸುವ ಮೊದಲೇ ನಿಯಂತ್ರಿಸಿದರೆ, ಮುಂದಾಗುವ ತೊಂದರೆಗಳನ್ನು ತಪ್ಪಿಸಬಹುದು!
ಮಾಹಿತಿಗೆ: 98441 32826
* ಆರ್ಕಿಟೆಕ್ಟ್ ಕೆ.ಜಯರಾಮ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.