ಹುಣಸೂರು ಟಿಫಾನೀಸ್ ದೋಸೆ, ಬಾಳೆ ಎಲೆ ಊಟಕ್ಕೆ
Team Udayavani, Feb 18, 2019, 12:30 AM IST
ಕಾವೇರಿಯ ಉಪನದಿ ಲಕ್ಷ್ಮಣ ತೀರ್ಥವನ್ನು ಹೊಂದಿರುವ ಹುಣಸೂರು, ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಂತೆಯೇ ಇರುವ ಪ್ರದೇಶ. ಇದು ವನ್ಯ ಜೀವಿಗಳ ತಾಣವೂ ಆಗಿದೆ. ಮಡಕೇರಿ, ಇರ್ಪು ಫಾಲ್ಸ್, ನಾಗರಹೊಳೆ ಫಾರೆಸ್ಟ್… ಹೀಗೆ, ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಲು ಹೋಗುವ ಮುನ್ನ ಹುಣಸೂರಲ್ಲಿ ಊಟ, ತಿಂಡಿ ಮಾಡಿಕೊಂಡು ಹೋಗುವುದು ಬೆಸ್ಟ್. ಏಕೆಂದರೆ ನಾಗರಹೊಳೆ ಅಭಯಾರಣ್ಯದಲ್ಲಿ ತಿನ್ನಲು ಏನೂ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಊಟಕ್ಕೇನು ಮಾಡುವುದು? ಒಳ್ಳೆಯ ಊಟ-ತಿಂಡಿ ಇಲ್ಲದೆ ಇರುವುದಾದರೂ ಹೇಗೆ ಎಂಬ ಚಿಂತೆ ಬೇಡ. ಹುಣಸೂರಿನ ಹಳೆಯ ಹಾಗೂ ಹೊಸ ಬಸ್ ನಿಲ್ದಾಣದ ಬಳಿ ಹುಣಸೂರು ಟಿಫಿನ್ ರೂಂ ಮತ್ತು ಹುಣಸೂರು ಟಿಫಾನೀಸ್ ಎಂಬ ಎರಡು ಹೋಟೆಲ್‌ಗಳು ಇವೆ. ಇವು ರುಚಿಕರ ತಿಂಡಿ ಹಾಗೂ ಬಾಳೆ ಎಲೆ ಊಟಕ್ಕೆ ಹೆಸರುವಾಸಿ.
ಮಂಗಳೂರಿಂದ 45 ವರ್ಷಗಳ ಹಿಂದೆ ಹುಣಸೂರಿಗೆ ಬಂದ ಕೃಷ್ಣಶೆಟ್ಟಿ ಅವರು ಈ ಹೋಟೆಲ್ ಆರಂಭಿಸಿದವರು. ಮೊದಲು ಹುಣಸೂರಲ್ಲಿ ಪದೇಪದೆ ಕಾಲರಾ ರೋಗ ಕಾಣಿಸಿಕೊಳ್ಳುತ್ತಿತ್ತು. ಇಂತಹ ಸಮಯದಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ಕೃಷ್ಣಶೆಟ್ಟಿ ಅವರು, 1980ರಲ್ಲಿ ಹಳೇ ಬಸ್ ನಿಲ್ದಾಣದ ಎದುರು ಹುಣಸೂರು ಟಿಫನ್ ರೂಂ ಹೆಸರಲ್ಲಿ ಪುಟ್ಟ ಹೋಟೆಲ್ ಆರಂಭಿಸಿದರು. ನಂತರ ರುಚಿಕಟ್ಟಾದ ದೋಸೆ, ಬಾಳೆ ಎಲೆ ಊಟ ಜನರಿಗೆ ಇಷ್ಟವಾಯಿತು. ನಂತರ ಅದೇ ಜಾಗದಲ್ಲಿ ದೊಡ್ಡದಾಗಿ ಹೋಟೆಲ್ ಮಾಡಿದರು. ಈಗ ಅವರ ಪುತ್ರ ಶಶಿಧರ್‌ಶೆಟ್ಟಿ ಅವರು ಹೋಟೆಲ್ ನೋಡಿಕೊಳ್ಳುತ್ತಿದ್ದಾರೆ. ಹೊಸ ಬಸ್ ನಿಲ್ದಾಣದ ಪಕ್ಕ ನ್ಯೂ ಹುಣಸೂರು ಟಿಫಾನೀಸ್ ಹೆಸರಿನ ಇನ್ನೊಂದು ಹೋಟೆಲನ್ನೂ ಆರಂಭಿಸಿದ್ದಾರೆ.
ಹೋಟೆಲ್‌ನ ವಿಶೇಷ ತಿಂಡಿ:
ಇತರೆ ಹೋಟೆಲ್‌ಗಳಂತೆ ಇಲ್ಲಿಯೂ ಬಗೆ ಬಗೆಯ ತಿಂಡಿ ಸಿಗುತ್ತದೆ. ಆದರೆ, ಹುಣಸೂರು ಟಿಫನ್ ರೂಂ ಹಾಗೂ ಟಿಫಾನೀಸ್‌ನಲ್ಲಿ ಸಿಗುವ ಸಾದಾ ದೋಸೆ, ರೈಸ್‌ಬಾತ್, ತೆಂಗಿನಕಾಯಿ ಚಟ್ನಿಯನ್ನು ಗ್ರಾಹಕರು ಹೆಚ್ಚು ಇಷ್ಟಪಡುತ್ತಾರೆ.
12 ರೂ.ನಿಂದ 30 ರೂ. ಒಳಗೆ ಇಲ್ಲಿ ತಿಂಡಿ ಸಿಗುತ್ತದೆ. 12 ರೂ.ಗೆ ಇಡ್ಲಿ 15 ರೂ.ಗೆ ವಡೆ, ಪೂರಿ 30 ರೂ., ರೈಸ್ ಬಾತ್ 30 ರೂ., ಸಾದಾ ದೋಸೆ 12 ರೂ. ಮಸಾಲೆ ದೊಸೆ 35 ರೂ.ಗೆ ಸಿಗುತ್ತದೆ. ಇದರ ಜೊತೆಗೆ ಕೊಡುವ ತೆಂಗಿನಕಾಯಿ ಚಟ್ನಿ, ಸಾಗು ರುಚಿಯನ್ನು ಹೆಚ್ಚಿಸುತ್ತದೆ.
ಫುಲ್ ಊಟಕ್ಕೆ 55 ರೂ.
ಚಪಾತಿ, ಪೂರಿ ಊಟಕ್ಕೆ 55 ರೂ. ದರ ಇದ್ದು, ಚಪಾತಿ, ಮೊಸರು, ಅನ್ನ -ಸಾಂಬಾರು, ತಿಳಿ ಸಾರು, ಖೀರು, ಪಲ್ಯ, ಹಪ್ಪಳ, ಉಪ್ಪಿನ ಕಾಯಿ ಕೊಡ್ತಾರೆ. ಗ್ರಾಮೀಣ ಭಾಗದ ಜನರು, ಶಾಲಾ ಮಕ್ಕಳು, ಆಟೋ ಚಾಲಕರು, ಮುಂತಾದ ಕೂಲಿ ಕಾರ್ಮಿಕರು ಇತರರು ಹೆಚ್ಚಿನ ಪ್ರಮಾಣದಲ್ಲಿ ಹೋಟೆಲ್‌ಗೆ ಬರುವುದರಿಂದ 35 ರೂ.ಗೆ ಮಿನಿ ಊಟ ಸಿಗುತ್ತದೆ. ಅನ್ನ ಸಾಂಬಾರ್, ಮೊಸರು, ತಿಳಿ ಸಾರು, ಮೊಸರು, ಉಪ್ಪಿನ ಕಾಯಿ, ಹಪ್ಪಳ ಕೊಡುತ್ತಾರೆ.
ಹೋಟೆಲ್ ಸಮಯ:
ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ. ರಜೆ ಇಲ್ಲ.
ಹೋಟೆಲ್ ವಿಳಾಸ:
ಹಳೇ ಬಸ್ ನಿಲ್ದಾಣದ ಎದುರು ಹುಣಸೂರು ಟಿಫನ್ ರೂಂ., ಹೊಸ ಬಸ್ ನಿಲ್ದಾಣದ ಪಕ್ಕ ನ್ಯೂ ಹುಣಸೂರು ಟಿಫಾನೀಸ್.
– ಭೋಗೇಶ ಆರ್. ಮೇಲುಕುಂಟೆ
ಫೋಟೋ ಕೃಪೆ: ಸಂಪತ್‌ಕುಮಾರ್ ಹುಣಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.