ಕೆಸು ಬೆಳೆದರೆ ಕೈ ತುಂಬಾ ಕಾಸು !
Team Udayavani, Jan 29, 2018, 11:40 AM IST
ಹೊಸದಾಗಿ ನೆಟ್ಟ ರಬ್ಬರ್ ತೋಟ ಮತ್ತು ತೆಂಗಿನ ತೋಟಗಳಲ್ಲಿ ಕೆಸುವಿನ ಗೆಡ್ಡೆ ಬೆಳೆಯಬಹುದು. ಐದು ತಿಂಗಳಿನ ಬೆಳೆಯಾಗಿರುವ ಕೆಸುವಿನ ಗದ್ದೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ…
ಇದು ಘಟ್ಟದ ಕೆಸು ಎಂದು ಜನಪ್ರಿಯವಾಗಿದ್ದರೂ ಅದರ ಕೃಷಿ ಮೂಲತಃ ಬಂದಿರುವುದು ಕೇರಳದಿಂದ. ಅಲ್ಲಿಂದ ವಲಸೆ ಬಂದ ಬೆಳೆಗಾರರ ಮೂಲಕ ಘಟ್ಟದ ಕೆಸುವಿನ ತಳಿ ನಮ್ಮಲ್ಲಿಗೆ ಹರಡಿದೆ. ನಿಧಾನವಾಗಿ ಕರಾವಳಿಯ ರೈತರು ಅದರ ಲಾಭವನ್ನು ಗುರುತಿಸಿಕೊಂಡು ಬೆಳೆಯಲು ಮುಂದಾಗುತ್ತಿದ್ದಾರೆ. ಹೊಸದಾಗಿ ನೆಟ್ಟ ರಬ್ಬರ್ ತೋಟ ಮತ್ತು ತೆಂಗಿನ ತೋಟಗಳಲ್ಲಿ ಉಪಕೃಷಿಯಾಗಿ ಇದನ್ನು ಬೆಳೆಯುವುದರಿಂದ ಹೆಚ್ಚು ಆದಾಯ ಪಡೆಯಬಹುದು. ಇದು ಹೆಚ್ಚಾಗಿ ಮಳೆಗಾಲದಲ್ಲಿ ಆಗುವ ಕೃಷಿ. ನೀರಾವರಿ ಅನುಕೂಲವಿದ್ದರೆ ಬೇಸಗೆ ಕಾಲದಲ್ಲಿಯೂ ಬೆಳೆಯಲು ಸಾಧ್ಯವಿದೆ.
ಘಟ್ಟದ ಕೆಸುವನ್ನು ವರ್ಷವೂ ಮಳೆಗಾಲದಲ್ಲಿ ಬೆಳೆದು ಲಾಭ ಗಳಿಸುತ್ತಿರುವ ರೈತರಲ್ಲಿ ಉಮೇಶ ಬಂಗೇರ ಕೂಡ ಒಬ್ಬರು. ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಕಾಪಿನಡ್ಕದಲ್ಲಿ ಅವರ ಮನೆ ಇದೆ. ಮನೆ ಹಿಂದಿನ ಖಾಲಿ ಜಾಗದಲ್ಲಿ ಅವರು ಇದನ್ನು ಬೆಳೆಯುತ್ತಾರೆ. ರೋಗ ಮತ್ತು ಕೀಟಗಳಿಂದ ಮುಕ್ತವಾದ ಈ ಬೆಳೆಗೆ ಕಾಡುಹಂದಿ ಮತ್ತು ಹೆಗ್ಗಣಗಳ ಬಾಧೆ ಅಪರೂಪಕ್ಕೆ ಕಾಡಬಹುದು. ಉಳಿದಂತೆ ಸುಲಭವಾದ ವ್ಯವಸಾಯ. ಭರವಸೆಗೆ ಮೋಸವಾಗದ ಆದಾಯ. ಐದು ತಿಂಗಳಲ್ಲಿ ಕೈತುಂಬ ಸಂಪಾದನೆ ತಂದುಕೊಡುವ ಈ ಕೆಸುವಿನ ಗೆಡ್ಡೆಗಳಿಗೆ ಮಾರುಕಟ್ಟೆಯಲ್ಲಿ ತುಂಬ ಬೇಡಿಕೆ ಇದೆ. ಒಂದು ಗಿಡದ ಬುಡದಲ್ಲಿ ಹತ್ತರಿಂದ ಹದಿನೈದು ಕಿಲೋ ತನಕ ಗೆಡ್ಡೆಗಳು ಬರುತ್ತವೆ. ಕಿಲೋಗೆ ನಲವತ್ತು ರೂಪಾಯಿ ಧಾರಣೆಯೂ ಸಿಗುತ್ತದೆ ಎನ್ನುತ್ತಾರೆ ಬಂಗೇರ.
ಮೊದಲ ಮಳೆ ಬಂದ ಕೂಡಲೇ ಕೆಸುವಿನ ನಾಟಿಗೆ ವೇದಿಕೆ ಸಿದ್ಧವಾಗುತ್ತದೆ. ಅರ್ಧ ಅಡಿ ಆಳ, ಒಂದಡಿ ಅಗಲದ ಗುಂಡಿಗಳನ್ನು ತೆಗೆಯುತ್ತಾರೆ. ಸಾಲುಗಳು ಮತ್ತು ಗಿಡಗಳ ನಡುವೆ ಎರಡು ಅಡಿ ಅಂತರವಿಡುತ್ತಾರೆ. ಹಿಂದಿನ ವರ್ಷದ ಗೆಡ್ಡೆಗಳಿಂದ ಮೊಳಕೆ ಬರುವ ಭಾಗಗಳನ್ನು ಕತ್ತರಿಸಿ ಮೊದಲೇ ಒಂದೆಡೆ ರಾಶಿ ಹಾಕಿಡುತ್ತಾರೆ. ಇದಕ್ಕೆ ಇರುವೆಗಳ ಬಾಧೆ ಹೆಚ್ಚಿರುವುದರಿಂದ ಇರುವೆ ನಿರೋಧಕವಾದ ಹುಡಿಯನ್ನು ಗೆಡ್ಡೆಗಳ ಮೇಲೆ ಚಿಮುಕಿಸಿರಬೇಕಾಗುತ್ತದೆ. ನಾಟಿಗೆ ಮೊದಲು ಕೂಡ ನೆಡುವ ಗುಂಡಿಯೊಳಗೆ ಇರುವೆಯನ್ನು ದೂರವಿಡುವ ಔಷಧದ ಬಳಕೆ ಅಗತ್ಯವೆಂಬುದನ್ನು ಬಂಗೇರ ನೆನಪಿಸುತ್ತಾರೆ.
ಗುಂಡಿಯಲ್ಲಿ ಬೀಜದ ಮೊಳಕೆಯ ಭಾಗವನ್ನು ಮೇಲ್ಭಾಗದಲ್ಲಿರಿಸಿ ತೆಳ್ಳಗೆ ಮಣ್ಣು ಮುಚ್ಚುತ್ತಾರೆ. ಬಿಸಿಲಿಗೆ ಬಾಧೆಯಾಗದೆ ತಂಪು ಉಳಿಯುವಂತೆ ತರಗೆಲೆಗಳನ್ನು ಮುಚ್ಚುತ್ತಾರೆ. ತಿಂಗಳೊಳಗೆ ಎಲ್ಲ ಬೀಜಗಳೂ ಗಿಡವಾಗಿರುತ್ತವೆ. ಬುಡಕ್ಕೆ ಕಾಲು ಕಿಲೋ. ನಷ್ಟು ಸಗಣಿ ಗೊಬ್ಬರ, ಕುರಿ, ಕೋಳಿ ಗೊಬ್ಬರವನ್ನಾಗಲಿ ಇಡಬೇಕಾಗುತ್ತದೆ. ಎರಡನೆಯ ತಿಂಗಳಿನಲ್ಲಿ ನೂರು ಗ್ರಾಂ. ರಸಗೊಬ್ಬರವನ್ನು ಬುಡಕ್ಕೆ ಸೇರಿಸಬೇಕು. ಮೂರನೆಯ ತಿಂಗಳಿನಲ್ಲಿ ಸುತ್ತಲಿನ ಮಣ್ಣನ್ನು ಕೆತ್ತಿ ಬುಡಕ್ಕೆ ಏರು ಹಾಕಿದರೆ ಕೆಲಸ ಮುಗಿಯಿತು. ಐದು ತಿಂಗಳು ತುಂಬಿದಾಗ ಅಗೆಯಲು ಸಿದ್ಧ. ಬುಡವನ್ನು ಬಿಡಿಸಿದರೆ ಸಿಗೆಣಸಿನ ಗೆಡ್ಡೆಗಳ ಹಾಗೆ ಗೊಂಚಲು ಗೊಂಚಲಾಗಿ ಕಾಣಿಸುವ ಗೆಡ್ಡೆಗಳನ್ನು ಸುಲಭವಾಗಿ ತೆಗೆಯಬಹುದು.
ಘಟ್ಟದ ಕೆಸುವಿನ ದಂಟು ಮತ್ತು ಎಲೆಗಳನ್ನು ಪತ್ರೊಡೆ. ಸಾಂಬಾರು, ಚಟ್ನಿ, ಪಲ್ಯ ಮೊದಲಾದ ಪದಾರ್ಥಗಳಿಗೆ ಉಪಯೋಗಿಸಬಹುದು. ಇದರಲ್ಲಿ ಕೆಸುವಿನ ಸ್ವಭಾವದ ತುರಿಕೆಯ ಗುಣವಿರುತ್ತದೆ. ಆದರೆ ಗೆಡ್ಡೆಗಳು ತುರಿಕೆ ಇಲ್ಲ. ತುಂಬ ಸ್ವಾದಿಷ್ಟವಾಗಿವೆ. ಮುಂಜಾನೆಯ ತಿಂಡಿಗೆ ಈ ಗೆಡ್ಡೆಯನ್ನು ಬೇಯಿಸಿ ಉಪRರಿ ತಯಾರಿಸಬಹುದಂತೆ. ಗೆಡ್ಡೆಯ ಮೇಲಿರುವ ತೆಳುವಾದ ಸಿಪ್ಪೆ ತೆಗೆಯಲು ಸುಲಭ. ಪಲ್ಯ, ಸಾಂಬಾರು, ಮಜ್ಜಿಗೆ ಹುಳಿಗಳಲ್ಲದೆ ಹಪ್ಪಳ, ಚಿಪ್ಸ್ ಇತ್ಯಾದಿಗಳ ತಯಾರಿಕೆಗೂ ತುಂಬ ಅನುಕೂಲವಾಗಿದೆ. ಪೇಟೆಯಲ್ಲಿ ಇರುವ ಬೇಡಿಕೆಯನ್ನು ಪರಿಗಣಿಸಿ ಕೆಲವು ತಿಂಗಳ ವರೆಗೆ ದಾಸ್ತಾನಿಡಬಹುದು. ಹಾಳಾಗುವ ಭಯವಿಲ್ಲ. ಬೆಲೆ ಬಂದಾಗ ಮಾರಾಟ ಮಾಡಬಹುದು. ಒಂದು ಬುಡದಲ್ಲಿ ಕನಿಷ್ಠ ಮುನ್ನೂರು ರೂಪಾಯಿ ಸಿಗುತ್ತದೆ. ಎಕರೆಗೆ ಎರಡು ಲಕ್ಷ ರೂ. ತನಕ ಗಳಿಸಬಹುದೆಂಬ ಲೆಕ್ಕಾಚಾರ ಬಂಗೇರ ಅವರದು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ
Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.