ಜೋಳದ ಸಿರಿ ಬೆಳಕಿನಲ್ಲಿ…
Team Udayavani, Feb 18, 2019, 12:30 AM IST
ಉತ್ತರ ಕರ್ನಾಟಕದ ಕೃಷಿಕರಿಗೆ ಜೋಳವೇ ಜೀವ ಬೆಳೆ. ಆದರೆ ನೀರಿನ ಅಭಾವದಿಂದ ಜೋಳ ಎಂದರೆ ಸ್ವಲ್ಪ ದೂರ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲೂ ಈ ಮಲ್ಲಯ್ಯ ಛಲ ಬಿಡದೆ ಜೋಳ ಬೆಳೆದು ಲಾಭ ಮಾಡುತ್ತಿದ್ದಾರೆ. ಅದು ಹೀಗೆ…
“ಏನ್ ಜೋಳಾ ರೀ. ಎಂಥ ಎತ್ರ ಬೆಳದೈತ್ರೀ ….ನಾವು ಇಷ್ಟ ಎತ್ರ ಬೆಳೆದಿದ್ದ ಜೋಳನಾ ನೋಡ್ಯಾ ಇಲಿÅà. ಮಳಿ ಇಲ್ದಾಗುನ ಇಂತಹ ಬೆಳೆ ಬಂದೈತ್ರಲ್ಲಾ’
ಕೊಪ್ಪಳದ ದೋಟಿಹಾಳ-ಹನುಮಸಾಗರ ರಸ್ತೆಯಲ್ಲಿ ನೀವು ಓಡಾಡಿದರೆ ಇಂಥ ಉದ್ಗಾರ ಬರದೇ ಇದ್ದರೆ ಕೇಳಿ. ಏಕೆಂದರೆ, ಮಲ್ಲಯ್ಯ ನಿಡಗುಂದಿ ಮಠ ಎಂಬ ರೈತ ಆ ರೀತಿಯಲ್ಲಿ ಬಿಳಿ ಜೋಳವನ್ನು ಬೆಳೆದಿದ್ದಾರೆ.
ಬಿಳಿಜೋಳ, ಉತ್ತರ ಕರ್ನಾಟಕ ಭಾಗದ ಜನರ ಮುಖ್ಯ ಆಹಾರ ಬೆಳೆ. ಜೋಳದ ಬೆಳೆಯೊಂದು ಉತ್ತಮ ಫಸಲು ತಂದರೆ ವರ್ಷದವರೆಗೆ ಆಹಾರದ ಸಮಸ್ಯೆ ತಪ್ಪಿ, ಎಂತಹ ತಾಪತ್ರಯ ಬಂದರೂ, ರೈತರು ಅದನ್ನು ಎದುರಿಸುವ ಮನೋಬಲ ಪಡೆಯುತ್ತಾರೆ. ಹಾಗಾಗಿ, ಗ್ರಾಮದ ಸುತ್ತಮುತ್ತಲಿನ ರೈತರು ಹೆಚ್ಚಾಗಿ ಬಿಳಿಜೋಳವನ್ನು ಬೆಳೆಯಲು ಬಯಸುತ್ತಾರೆ. ಅದೇನು ಪುಣ್ಯವೋ…ಏನೋ.. ಮಲ್ಲಯ್ಯ ಅವರ ಹೊಲದಲ್ಲಿ ಪ್ರತಿವರ್ಷ ನಾನಾ ನಮೂನೆಯ ರೋಗಗಳಿಗೆ ತುತ್ತಾಗುತ್ತಿದ್ದ ಜೋಳದ ಬೆಳೆ, ಈ ಬಾರಿ ಆಳೆತ್ತರ ಬೆಳೆದು, ತೆನೆಗಳಲ್ಲಿ ಮುತ್ತು ಪೋಣಿಸಿದ ರೀತಿ ಕಾಳು ಕಟ್ಟಿಕೊಂಡು, ಬಿತ್ತಿದವರು ಬಿಂಕಪಡುವ ಹಾಗೆ ನಿಂತಿದೆ.
ತೋಟದ ಬೆಳೆಯಾಗಿ ಬಿಳಿಜೋಳ ಕೃಷಿ
ಸಾಮಾನ್ಯವಾಗಿ ಮಳೆಯಾಶ್ರಿತ ಭೂಮಿಯಲ್ಲಿ ಹಿಂಗಾರು ಬೆಳೆಯಾಗಿ, ಬಿಳಿಜೋಳ ಬಿತ್ತುವುದು ವಾಡಿಕೆ. ಆದರೆ ಕಳೆದ ವರ್ಷ ಮಳೆ ಇಲ್ಲದ ಬೆಳೆ ಸಂಪೂರ್ಣ ಒಣಗಿ ಹೋಯಿತು. ಈ ಕಾರಣದಿಂದಲೇ ಹೊಟ್ಟೆಗೆ ಹಿಟ್ಟು ಹಾಗೂ ಜಾನುವಾರುಗಳಿಗೆ ಮೇವು ದೊರಕೀತು ಎಂಬ ಆಸೆಯಿಂದ ಬಹುತೇಕ ರೈತರು ಪುನಃ ನೀರಾವರಿಯಾಶ್ರಿತ ಜಮೀನುಗಳಲ್ಲಿ ಬಿಳಿ ಜೋಳದ ಬೀಜಗಳನ್ನು ಬಿತ್ತಿದ್ದರು. ಅದರಂತೆ, ಕಡೆಕೋಪ್ಪ ಗ್ರಾಮದ ಮಲ್ಲಯ್ಯ ನಿಡಗುಂದಿಮಠ ಅವರು ಮೂರು ಎಕರೆ ಜಮೀನಲ್ಲಿ ಮಿಶ್ರ ಬೆಳೆಯಾಗಿ ಕಬ್ಬು, ಗೋಧಿ ಮತ್ತು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಲ್ಲಿ ಒಂದು ಎಕರೆ ಭೂಮಿಯಲ್ಲಿ ಬಿಳಿಜೋಳ ಬಿತ್ತನೆ ಮಾಡಿದರು. ಆ ಜೋಳವೇ ಇಂದು ಇವರ ಬದುಕಿಗೆ ಆಸರೆಯಾಗಿದೆ. ಜಾನುವಾರುಗಳಿಗೆ ಮೇವು ದೊರಕಿಸಿಕೊಟ್ಟಿದೆ.
ಬಂಪರ್ ಬೆಳೆ
ಕೇವಲ ಮೂರು ಎಕರೆ ಜಮೀನು ಹೊಂದಿರುವ ಮಲ್ಲಯ್ಯ, ಎಂಥ ಸಂದರ್ಭದಲ್ಲೂ ಜೋಳ ಬಿತ್ತುವುದನ್ನು ನಿಲ್ಲಿಸಿಲ್ಲ. ಪ್ರತಿ ವರ್ಷ ಜಮೀನಿಗೆ ಸಾವಯವ ಗೊಬ್ಬರವನ್ನು ಬಳಸುತ್ತಾರೆ. ಎರಡು ಬಾರಿ ನೀರಿನ ಜೊತೆ ಸಗಣಿ ಗೊಬ್ಬರ ಮಿಶ್ರಣ ಮಾಡಿ ಹಾಯಿಸಿದ್ದಾರೆ. ಈ ಬಾರಿ ಬಿತ್ತನೆ ಮಾಡಿದ ಬಿಳಿಜೋಳ ಸುಮಾರು 8 ರಿಂದ 9 ಅಡಿ ಎತ್ತರ ಬೆಳೆದು, ಎಕರೆಗೆ 10-15 ಕ್ವಿಂಟಾಲ್ ಫಸಲು ದೊರೆತಿದೆ.
ಜೋಳ ಬಿತ್ತನಗೆ 1000-1500 ರೂ.ನ ಬಿತ್ತನೆ ಬೀಜವನ್ನು ಖರೀದಿಸಿ ನಾಟಿ ಮಾಡಿದ್ದಾರೆ. ಇತರ ಎಲ್ಲಾ ಖರ್ಚುಗಳನ್ನು ಸೇರಿಸಿದರೆ ಒಟ್ಟು 7,000-8000 ರೂ ಆಗಬಹುದು. ಮಾರುಕಟ್ಟೆಯಲ್ಲಿ ಸದ್ಯ ಒಂದು ಕಿಂಟಲ್ ಬಿಳಿ ಜೋಳಕ್ಕೆ 3,400 ರಿಂದ 3500 ವರಗೆ ಇದೆ. ಒಂದೂವರಿ ಎಕರೆ ಭೂಮಿಯಲ್ಲಿ ಸುಮಾರು 10-15 ಕ್ವಿಂಟಾಲ್ ಜೋಳ ಬಂದರೇ 50-60 ಸಾವಿರ ರೂ. ಆದಾಯ.
ಹಿಂದೇಟು, ಜೋಳದ ಬೆಳೆಗೆ ಕೋಕ್
ಹಿಂದೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಜೋಳದ ಕಣಜವೆನಿಸಿಕೊಂಡಿದ್ದವು. ಆದರೆ, ಈಗ ಕೈ ತುಂಬ ಹಣವಿರುವ ವಾಣಿಜ್ಯ ಬೆಳೆಗಳನ್ನು ಬೆಳೆಯುವಲ್ಲಿ ತೋರುವ ಆಸಕ್ತಿಯನ್ನು ರೈತರು ಜೋಳ ಬೆಳೆಯುವಲ್ಲಿ ತೋರುತ್ತಿಲ್ಲ. ಹೀಗಾಗಿ, ಜೋಳದ ಬೆಳೆ ಅಷ್ಟೊಂದು ಬಿತ್ತನೆಯಾಗಿಲ್ಲ. ಆರಕ್ಕೇರದ ಮೂರಕ್ಕಿಳಿಯದ ಬೆಳೆ ಎಂದು ಮೂಗು ಮುರಿಯುತ್ತಿದ್ದ ರೈತರು, ಈ ಬಾರಿ ಬಿತ್ತಿದ ನಿಡಗುಂದಿ ಮಠರ ಜಮೀನಿನಲ್ಲಿ ಬೆಳೆದು ನಿಂತಿರುವ ಭಾರೀ ಪ್ರಮಾಣದ ಜೋಳವನ್ನು ಕಂಡು ಬೆರಗಾಗಿದ್ದಾರೆ. ತಾವೂ ಬೆಳೆಯಬೇಕೆಂಬ ನಿರ್ಧಾರಕ್ಕೂ ಬಂದಿದ್ದಾರೆ.
– ಮಲ್ಲಿಕಾರ್ಜುನ ಮೆದಿಕೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.