ವಿಮಾ ಗಂಟಿಗೂ ಇದೆ ವಯಸ್ಸಿನ ನಂಟು!
Team Udayavani, Nov 12, 2018, 4:00 AM IST
ವಿಮೆ ಎಂಬುದು ಆಪದ್ಬಾಂಧವನಂತೆ. ಅನಾರೋಗ್ಯ, ಆಪತ್ತಿಗೆಲ್ಲ ಇದು ನಮ್ಮ ನೆರವಿಗೆ ಬರುತ್ತದೆ. ಜೇಬಿನ ಭಾರವನ್ನು ತಗ್ಗಿಸುತ್ತದೆ. ಆದರೆ ವಯಸ್ಸಾಗುತ್ತಿದ್ದಂತೆ ಹೇಗೆ ನಮ್ಮ ಮೆಚ್ಯುರಿಟಿ ಅವಧಿ ಕಡಿಮೆಯಾಗುತ್ತದೆಯೋ ಹಾಗೆಯೇ ವಿಮೆಯ ಪ್ರೀಮಿಯಂ ಹೆಚ್ಚುತ್ತದೆ. ಹೀಗಾಗಿ, ಯಾವ ವಯಸ್ಸಿನಲ್ಲಿ ಯಾವ ರೀತಿಯ ವಿಮೆ ಮಾಡಿಸಬೇಕು ಎಂಬುದು ಬಹಳ ಮುಖ್ಯ. ವ್ಯಕ್ತಿಗೆ ಎಷ್ಟೇ ವಯಸ್ಸಾಗಿರಲಿ, ಆತ ವಿಮೆ ಮಾಡಿಸುವುದು ಇಂದಿನ ತುರ್ತು. ಅದಕ್ಕೆ ತಕ್ಕುದಾದ ಯೋಜನೆಯನ್ನೂ ಮಾಡಬೇಕು.
ಸಾಮಾನ್ಯವಾಗಿ, ಕಡಿಮೆ ವಯಸ್ಸಿನಲ್ಲಿ ವಿಮೆ ಮಾಡಿಸುವುದರ ಒಂದು ಅನುಕೂಲವೆಂದರೆ ಪ್ರೀಮಿಯಂ ಕಡಿಮೆ ಇರುತ್ತದೆ. 30 ವರ್ಷದ ವಿಮೆಯನ್ನು 25ನೇ ವರ್ಷಕ್ಕೆ ಖರೀದಿಸಿದರೆ, ಪ್ರೀಮಿಯಂ 7 ಸಾವಿರ ರೂ. ಇದ್ದರೆ, ಇದೇ ಪಾಲಿಸಿಯನ್ನು 30ರಲ್ಲಿ ಖರೀದಿ ಮಾಡಿದರೆ 9 ಸಾವಿರ ರೂ.ಪ್ರೀಮಿಯಂ ಕಟ್ಟಬೇಕಾಗುತ್ತದೆ. ಇಂದಿನ ಜೀವನ ಶೈಲಿಯಲ್ಲಿ ಜಡತ್ವ ಹೆಚ್ಚು. ಹೀಗಾಗಿ, ವಯಸ್ಸು ಹೆಚ್ಚುತ್ತಿದ್ದಂತೆ ಒಂದಲ್ಲ ಒಂದು ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇರುತ್ತೇವೆ. ಸಕ್ಕರೆ ಕಾಯಿಲೆ, ರಕ್ತದೊತ್ತಡಗಳು ಈಗ ಸಾಮಾನ್ಯ ಕಾಯಿಲೆಗಳಾಗಿವೆ.
ಕಡಿಮೆ ವಯಸ್ಸಿನಲ್ಲಿ ವಿಮೆ ಖರೀದಿಸಿದರೆ ನಂತರ ವಯಸ್ಸಾದಂತೆ ರೈಡರ್‌ಗಳನ್ನು ಖರೀದಿಸಬಹುದು. ಅಂದರೆ, ಸಂಕೀರ್ಣ ಅನಾರೋಗ್ಯ ಕವರ್, ಮೆಟರ್ನಿಟಿ ಕವರ್ ಇತ್ಯಾದಿಯನ್ನು ಪಡೆದುಕೊಳ್ಳಬಹುದು. ನಮಗೆ ಜೀವ ವಿಮೆ, ಆರೋಗ್ಯ ವಿಮೆ, ಅಂಗವೈಕಲ್ಯ ಹಾಗೂ ಗೃಹ ವಿಮೆ ಅತ್ಯಂತ ಪ್ರಮುಖವಾದದ್ದು. ಸಾಮಾನ್ಯವಾಗಿ ಜೀವ ಹಾಗೂ ಆರೋಗ್ಯ ವಿಮೆಯ ಬಗ್ಗೆ ಈಗ ಹೆಚ್ಚು ಜಾಗೃತಿ ಮೂಡಿದೆ. ಈ ಎರಡರಲ್ಲಿ ಯಾವುದಾದರೂ ಒಂದು ವಿಮೆಯನ್ನು ಜನರು ಖರೀದಿ ಮಾಡಿಯೇ ಇರುತ್ತಾರೆ. ಹೀಗಾಗಿ ಯಾವ ವಯಸ್ಸಿನಲ್ಲಿ, ಯಾವ ರೀತಿಯ ವಿಮೆ ಅಗತ್ಯ ಎನ್ನುವ ಸಮಗ್ರ ಮುನ್ನೋಟ ಇಲ್ಲಿದೆ.
ವಯಸ್ಸು 20: ಇಪ್ಪತ್ತರ ಹೊಸ್ತಿಲಿನಲ್ಲಿರುವ ವ್ಯಕ್ತಿ ಯಾವ ಕಾಲೇಜಿಗೆ ಸೇರಿಕೊಳ್ಳಬೇಕು, ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂದೂ ಯೋಚಿಸುತ್ತಿರುತ್ತಾನೆ. ಅದರಲ್ಲೂ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದರೆ, ಯಾವ ಕಾರು ಕೊಳ್ಳಬೇಕು ಎಂದು ಯೋಚಿಸುತ್ತಾರೆ. ಇದನ್ನು ಬಿಟ್ಟರೆ ಯಾವ ಹುಡುಗಿಯನ್ನು ಮೆಚ್ಚಿಸಲು ಏನು ಮಾಡಬೇಕು ಎಂದು ಯೋಚಿಸುತ್ತಾನೆ. ಈ ವಯಸ್ಸಿನಲ್ಲಿ ಯಾರೂ ಯಾವ ಜೀವ ವಿಮೆ ಖರೀದಿಸಬೇಕು ಎಂದು ಯೋಚಿಸುವುದಿಲ್ಲ. ಸಾಮಾನ್ಯವಾಗಿ, ವಿಮೆ ಖರೀದಿ ಮಾಡುವುದಕ್ಕೆ ಇದು ಸೂಕ್ತ ಸಮಯ ಅಲ್ಲ ಎಂದೇ ಭಾವಿಸಿರುತ್ತಾರೆ. ಆದರೆ, ಅದು ತಪ್ಪು. ವಿಮೆ ಮಾಡಿಸುವುದಕ್ಕೆ ಯಾವ ವಯಸ್ಸೂ ತೀರಾ ಬೇಗನೆ ಆಯಿತು ಎಂದು ಭಾವಿಸುವಂತೆಯೇ ಇಲ್ಲ.
20ರ ಹೊಸ್ತಿಲಲ್ಲಿ ವಿಮೆ ಮಾಡಿಸಿದರೆ ಸಿಗುವ ಅನುಕೂಲ
– ಕಡಿಮೆ ಪ್ರೀಮಿಯಂ ದರಗಳು.
– ಎಷ್ಟು ಬೇಗ ವಿಮೆ ಆರಂಭಿಸುತ್ತೀರೋ ಅಷ್ಟುಹೆಚ್ಚು ಮೊತ್ತವನ್ನು ನೀವು ಪಾಲಿಸಿ ಅವಧಿಯಲ್ಲಿ ಸಂಗ್ರಹಿಸಿಟ್ಟಿರುತ್ತೀರಿ.
– ಹೂಡಿಕೆ ಅಧಿಕ ರಿಸ್ಕ್ ವಿಧಾನಗಳಲ್ಲಿ ಹೂಡಿಕೆ ಮಾಡಬಹುದು.
– ಈ ವಯಸ್ಸಿನಲ್ಲಿ ರಿಟೈರ್ಮೆಂಟ್ಟ ಪ್ಲಾನ್ ಖರೀದಿಸುವುದು ಅತೀ ಮುಖ್ಯ. ಇದರಿಂದ, ನಿವೃತ್ತಿಯ ನಂತರ ಹೆಚ್ಚಿನ ಮೊತ್ತದ ಅನುಕೂಲ ಸಿಗಲಿದೆ.
– ಈ ವಯಸ್ಸಿನಲ್ಲಿ ಜೀವಾವಧಿ ಪಾಲಿಸಿಗಳನ್ನು ಖರೀದಿಸುವುದರ ಬದಲು ಟರ್ಮ್ ಪ್ಲಾನ್‌ಗಳನ್ನು ಪಡೆಯಬೇಕು.
– ಪ್ಲಾನ್ ಮೋಡ್ ಅಥವಾ ಕವರೇಜ್ ಬದಲಿಸಲು ಅನುವು ಮಾಡುವ ಫ್ಲೆಕ್ಸಿಬಲ್ ಪ್ಲಾನ್ ಆಯ್ಕೆ ಮಾಡಬೇಕು.
– ಪ್ರೀಮಿಯಂ ರೈಡರ್ ವಿನಾಯಿತಿ ನೀಡುವ ಪಾಲಿಸಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ವಯಸ್ಸು 30: ವೈವಾಹಿಕ ಜೀವನಕ್ಕೆ ಕಾಲಿಡುವ ವಯಸ್ಸು ಅಂದರೆ ಈ ಮೂವತ್ತು. ವಿವಾಹವಾಗಿ, ಮಕ್ಕಳು ಮನೆ ತುಂಬುವ ಸಮಯವಿದು. ಈ ವಯಸ್ಸಿನಲ್ಲಿ ಜನರು ಸಾಮಾನ್ಯವಾಗಿ ತಮ್ಮ ಬಗ್ಗೆ ಕಡಿಮೆ ಯೋಚನೆ ಮಾಡಿ, ಕುಟುಂಬದ ಸುರಕ್ಷತೆಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ತನ್ನ ವೈಯಕ್ತಿಕ ಅಗತ್ಯಗಳನ್ನು ಈ ಅವಧಿಯಲ್ಲಿ ಹಿಂದಿನ ಸೀಟಿಗೆ ಜರುಗಿಸಿ ಕುಟುಂಬ ಹಾಗೂ ಮಕ್ಕಳ ಭವಿಷ್ಯದ ಪ್ಲಾನ್ ಮಾಡಲು ಆರಂಭಿಸಿರುತ್ತಾರೆ. ಹೀಗಾಗಿ, ವಿಮಾ ಏಜೆಂಟರಿಗೆ ಹಾಗೂ ಕಂಪನಿಗಳಿಗೆ ಇದು ವಸಂತಕಾಲ! ಸೂಕ್ತ ವಿಮೆಯನ್ನು ಮಾಡಿಸಿಕೊಳ್ಳುವುದು ಈ ವಯಸ್ಸಿನಲ್ಲಿ ಅತೀ ಮುಖ್ಯ ಕರ್ತವ್ಯವೂ ಹೌದು.
ಸುಭದ್ರ ಭವಿಷ್ಯಕ್ಕಾಗಿ ಬೇಕಾದ ಮೊತ್ತವನ್ನು ಕೂಡಿಡಲು ಈ ಅವಧಿಯಲ್ಲಿ ಸಾಕಷ್ಟು ಸಮಯವೂ ಸಿಗುತ್ತದೆ. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ದೀರ್ಘಕಾಲದವರೆಗೆ ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಲೇ ಇದ್ದರೆ, ಆ ಮೊತ್ತ ಹಲವು ಪಟ್ಟು ವೃದ್ಧಿಯಾಗುತ್ತದೆ. ನೀವು ಮೊದಲೇ ಹೂಡಿಕೆ ಮಾಡಿದರೆ, ನಂತರ ಮಾರುಕಟ್ಟೆ ಎಷ್ಟೇ ಕುಸಿದರೂ ಪಾಲಿಸಿ ಮುಗಿದಾಗ ನೀವು ಹಿಂಪಡೆಯುವ ಮೊತ್ತ ಖಂಡಿತ ಹೆಚ್ಚಾಗಿರುತ್ತದೆ. ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ಟರ್ಮ್ ಪ್ಲಾನ್ ಅನ್ನೋ ಅಥವಾ ಮನಿ ಬ್ಯಾಕ್ ಅನ್ನೋ ಖರೀದಿ ಮಾಡುವುದು ಒಳಿತು. ಮನಿ ಬ್ಯಾಕ್ ಯೋಜನೆ ಕಾಲಕಾಲಕ್ಕೆ ಹಣ ವಾಪಸ್ ಪಡೆಯಲು ಬಯಸುವವರಿಗೆ ಸೂಕ್ತ. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಯೋಚಿಸುವವರು ಚೈಲ್ಡ್ ಪ್ಲಾನ್‌ಗಳನ್ನೂ ಖರೀದಿ ಮಾಡಬಹುದು.
ವಯಸ್ಸು 40: ಕಾಲು ಸೋಲಲು ಆರಂಭವಾಗುತ್ತದೆ, ಕಣ್ಣು ಸಣ್ಣಗೆ ಮಂಜಾಗಿರುತ್ತದೆ. ದೇಹದಲ್ಲಿ ಮೊದಲಿನಷ್ಟು ಶಕ್ತಿ ಇರುವುದಿಲ್ಲ. ಹೀಗಾಗಿ, ನಮಗೂ ಒಂದು ವಿಮೆ ಬೇಕು ಎಂದು ಮನಸಿನೊಳಗೇ ಅನಿಸಲು ಆರಂಭವಾಗುತ್ತದೆ ಅಂದರೆ, ನೀವು ನಲವತ್ತು ವರ್ಷಕ್ಕೆ ಕಾಲಿಟ್ಟಿದ್ದೀರಿ ಅಂತ ಅರ್ಥ. ಇದು ನಮ್ಮೆಲ್ಲರ ತಲೆಗೆ ಹೊಡೆದು ನಿನಗೊಂದು ವಿಮೆ ಬೇಕು ಎಂದು ಹೇಳುವ ವಯಸ್ಸು. 30ರ ವಯಸ್ಸಿನಲ್ಲಿ ವಿಮೆ ಖರೀದಿಸಲು ನಿರಾಕರಿಸಿದವರೂ ಈಗ ವಿಮೆ ಬೇಕು ಅನ್ನುವುದು ಈಗಲೇ. ಮನೆಯಲ್ಲಿ ಬಾಳಸಂಗಾತಿ ಹಾಗೂ ಪಾಲಕರಿರುತ್ತಾರೆ. ಮಕ್ಕಳಿಗೆ ತಮ್ಮ ಕಾಲ ಮೇಲೆ ನಿಲ್ಲುವ ಸಾಮರ್ಥ್ಯ ಬಂದಿರುವುದಿಲ್ಲ. ಇವರೆಲ್ಲರನ್ನೂ ನೋಡಿಕೊಳ್ಳುವ ಜವಾಬ್ದಾರಿಯ ಮಧ್ಯೆ ಭದ್ರತೆಗಾಗಿ ವಿಮೆಯ ಅಗತ್ಯವೂ ಇರುತ್ತದೆ.
ಸಾಮಾನ್ಯವಾಗಿ 40ರ ವಯಸ್ಸಿನಲ್ಲಿ ವಿಮೆ ಮಾಡಿಸುವುದು ಒಂಥರಾ ಹೊರೆಯೇ. ಈ ವಯಸ್ಸಿನಲ್ಲಿ ಮಕ್ಕಳ ಶೈಕ್ಷಣಿಕ ಖರ್ಚು ಹೆಚ್ಚಿರುತ್ತದೆ. ಪಾಲಕರ ವೈದ್ಯಕೀಯ ವೆಚ್ಚವೂ ವಿಪರೀತವಾಗಿರುತ್ತದೆ. ಹೀಗಾಗಿ, ಖರ್ಚು ವೆಚ್ಚ ಹೆಚ್ಚಿದ್ದಾಗ ವಿಮೆ ಪ್ರೀಮಿಯಂ ಹೆಚ್ಚು ಭರಿಸುವುದು ಎಂಥವರಿಗೂ ಹೊರೆಯೇ ಸರಿ. ಪರಿಣಿತರ ಪ್ರಕಾರ, ಸಾಮಾನ್ಯ ಟರ್ಮ್ ಪ್ಲಾನ್ ತೆಗೆದುಕೊಳ್ಳುವುದು ಈ ವಯಸ್ಸಿನಲ್ಲಿ ಉತ್ತಮ. ನೀವೇನಾದರೂ ವಿಮೆ ಕಂ ಹೂಡಿಕೆ ಯೋಜನೆಯನ್ನು ಖರೀದಿಸುತ್ತೀರಿ ಎಂದಾದರೆ, ಡೆಡ್ ಫಂಡ್‌ಗಳನ್ನು ನೋಡಬಹುದು. ಈ ವಯಸ್ಸಿನಲ್ಲಿ ನೀವು ನಿವೃತ್ತಿ ಬಗ್ಗೆ ಯೋಚಿಸಲೇಬೇಕು. ಒಂದು ವೇಳೆ ನಿಮಗೆ ನಿವೃತ್ತಿ ನಿಧಿ ಬೇಕು ಎನಿಸಿದರೆ ವಿಳಂಬ ಮಾಡಲೇಬಾರದು. ಈ ಅವಧಿಯಲ್ಲಿ ಒಂದಷ್ಟು ಮೊತ್ತವನ್ನಾದರೂ ನಿವೃತ್ತಿಗಾಗಿ ಕೂಡಿಡಬಹುದು.
ವಯಸ್ಸು 50: ಇದು ವೃದ್ಧಾಪ್ಯದ ಹೊಸ್ತಿಲು. ಮಕ್ಕಳು ಆರ್ಥಿಕವಾಗಿ ಸ್ವತಂತ್ರವಾಗಿರುತ್ತಾರೆ. ಜೀವನ ವೆಚ್ಚ ಕಡಿಮೆ ಇರುತ್ತದೆ ಮತ್ತು ಜೀವನವೂ ಅತ್ಯಂತ ಸರಳ ಹಾಗೂ ಸುಲಲಿತ. ಯಾವ ಗೊಡವೆಯೂ ಇಲ್ಲ, ಜವಾಬ್ದಾರಿಯೂ ಇರುವುದಿಲ್ಲ. ಬೆಳಗ್ಗೆ ಎದ್ದು ಟೀ ಕುಡಿಯುತ್ತ ಪೇಪರ್ ಓದಿ, ಕಚೇರಿಗೆ ತೆರಳುವ, ಜೀವನದ ಅತ್ಯಂತ ಆರಾಮದಾಯಕ ಕಾಲವಿದು. ಹಾಗಾದರೆ, ಈ ವಯಸ್ಸಿನಲ್ಲಿ ವಿಮೆ ಏಕೆ ಬೇಕು? ಅನ್ನಬೇಡಿ. ನಿಜವಾಗಲೂ ವಿಮೆಯ ಅಗತ್ಯ ಇರುವುದೇ 50ನೇ ವಯಸ್ಸಿನಲ್ಲಿ. 50 ವ,ì ಎಂಬುದು ಅನಿರೀಕ್ಷಿತಗಳ ಸಂತೆ.
ವ್ಯಕ್ತಿ ನಿಧನವಾದ ನಂತರ ಬಾಳಸಂಗಾತಿಯ ಬದುಕು ಸರಾಗವಾಗುವುದಕ್ಕಾದರೂ ವಿಮೆ ಬೇಕು. ಅವರು ಜೀವನವಿಡೀ ವ್ಯಕ್ತಿಯ ಜೊತೆ ಹೆಜ್ಜೆ ಹಾಕಿರುತ್ತಾರೆ. ಹಠಾತ್ತನೆ ಆ ಸಂಗಾತಿ ಕಣ್ಮರೆಯಾದರೆ ಆಗುವ ಆಘಾತವೇ ದೊಡ್ಡದು. ಅದರ ಮೇಲೆ ಆರ್ಥಿಕ ಆಘಾತವನ್ನು ಅವಲಂಬಿತರು ಸಹಿಸಿಕೊಳ್ಳುವುದಿಲ್ಲ. ಅದೆಲ್ಲದರ ಜೊತೆಗೆ ಅವರಿಗೆ ಹೊಸ ಆದಾಯದ ದಾರಿಯೂ ಇರುವುದಿಲ್ಲ. ಮಕ್ಕಳನ್ನೇ ಅವಲಂಬಿಸಬೇಕಾಗುತ್ತದೆ. ಈ ಅವಧಿಯಲ್ಲಿ ನಿವೃತ್ತಿ ಪ್ಲಾನ್ ಖರೀದಿ ಮಾಡುವುದು ಸೂಕ್ತ. ಇತರ ಯಾವುದೇ ಟರ್ಮಲ್ ಪ್ಲಾನ್ ಈ ಅವಧಿಯಲ್ಲಿ ಸೂಕ್ತವಲ್ಲ. ನಿವೃತ್ತಿಗೆ ಹತ್ತಾರು ವರ್ಷ ಇರುವುದರಿಂದ ಸ್ವಲ್ಪ ಮೊತ್ತದ ನಿವೃತ್ತಿ ಮೊತ್ತವನ್ನು ಈ ಪ್ಲಾನ್‌ನಲ್ಲಿ ಕೂಡಿಡಬಹುದು.
ವಯಸ್ಸು 60: ಅದೇನೋ, 60ಕ್ಕೆ ಕಾಲಿಡುತ್ತಿದ್ದಂತೆಯೇ ವಿಮೆ ಮಾಡಿಸಲು ತುಂಬಾ ವಿಳಂಬವಾಯಿತು ಎಂಬ ಮನಸ್ಥಿತಿ ಕಾಡಲು ಶುರುವಾಗುತ್ತದೆ. ಇನ್ನೂ ನೀವು ಒಂದು ವಿಮೆ ಖರೀದಿ ಮಾಡದೇ ಇದ್ದರೆ, ಈಗಿಂದೀಗಲೇ ಒಂದು ವಿಮೆ ಖರೀದಿಸಿ. ವಿಮೆಯ ಉದ್ದೇಶ ಕೇವಲ ವ್ಯಕ್ತಿಯ ಪ್ರೀತಿಪಾತ್ರರನ್ನು ಆರ್ಥಿಕವಾಗಿ ಸಕ್ರಿಯವಾಗಿಸುವುದಷ್ಟೇ ಅಲ್ಲ. ಆದಾಯ ನಿಂತು ಹೋದಾಗ ಜೀವನಾಂಶ ಪಡೆಯವುದು ಹಾಗೂ ಬಾಕಿ ಇರುವ ಸಾಲವನ್ನು ಪಾವತಿ ಮಾಡುವ ಉದ್ದೇಶವೂ ಅದರ ಹಿಂದಿನ ಲೆಕ್ಕಚಾರವಾಗಿರುತ್ತದೆ.
ಆದರೆ, ಈ ವಯಸ್ಸಿನಲ್ಲಿ ವಿಮೆ ಆರಂಭಿಸಿದರೆ ಪ್ರೀಮಿಯಂ ಅತಿ ಹೆಚ್ಚಿರುತ್ತದೆ ಅನ್ನೋದಪ ತಿಳಿದಿರಲಿ. 60ನೇ ವಯಸ್ಸಿನಲ್ಲಿ ಅನಾರೋಗ್ಯಕ್ಕೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕ್ಲೇಮ್ ಮಾಡುವ ಅವಕಾಶವೂ ಹೆಚ್ಚಿರುತ್ತದೆ. ಇದು ಪ್ರೀಮಿಯಂ ಹೆಚ್ಚುವುದಕ್ಕೆ ಇರುವ ಸಾಮಾನ್ಯ ಕಾರಣ. ಹಲವು ವಿಮೆ ಕಂಪನಿಗಳು ಈ ವಯಸ್ಸಿನವರಿಗೂ, ಉತ್ತಮ ಬೆಲೆಯಲ್ಲಿ ಅತ್ಯುತ್ತಮ ಕವರೇಜ… ನೀಡಲು ಸಿದ್ಧವಿರುತ್ತಾರೆ. ಇದಕ್ಕಾಗಿ ಸ್ವಲ್ಪ ಆನ್‌ಲೈನ್‌ನಲ್ಲೋ ಅಥವಾ ವಿಮೆ ಏಜೆಂಟರ ಬಳಿಯೂ ಪರಿಶೀಲನೆ ನಡೆಸಬೇಕಷ್ಟೇ.
ವಯಸ್ಸು 70: ಜೀವನದ ವೃತ್ತ ಒಂದು ಸುತ್ತು ಪೂರೈಸಲು ಇನ್ನೇನು ಕಾಲ ಸನ್ನಿಹಿತವಾದಂತಿದೆ. ಈಗ ನಿಜಕ್ಕೂ ವಿಮೆ ಅಗತ್ಯವಿದೆಯೇ ಎಂಬುದು ಮನಸಲ್ಲಿ ಕೊರೆಯಲು ಆರಂಭಿಸುತ್ತದೆ. ಆದರೆ, ದುರಾದೃಷ್ಟವಶಾತ್ ಬಹುತೇಕ ಎಲ್ಲ ವಿಮೆ ಕಂಪನಿಗಳೂ ವಿಮೆಯ ವಯಸ್ಸನ್ನು 65ಕ್ಕೆ ಮಿತಿಗೊಳಿಸಿವೆ. ಅಂದರೆ, 65ರ ನಂತರ ನಿಮಗೆ ವಿಮೆ ಖರೀದಿಗೆ ಆಯ್ಕೆಗಳೇ ಇರುವುದಿಲ್ಲ.
ಇದು 65 ರ ನಂತರ ವಿಮೆ ಖರೀದಿ ಮಾಡುವವರನ್ನು ನಿರುತ್ಸಾಹಗೊಳಿಸುತ್ತದೆ. ಹಾಗಿದ್ದರೂ, 70 ವರ್ಷದ ನಂತರ ವಿಮೆಯನ್ನು ನವೀಕರಿಸುವುದೂ ಕಷ್ಟವೇ. ಬಹುತೇಕ ಕಂಪನಿಗಳು ವಿಮೆ ನವೀಕರಣದ ವಯಸ್ಸನ್ನು 75ಕ್ಕೆ ಮಿತಿಗೊಳಿಸಿದ್ದವು. ಆದರೆ ಐಆರ್‌ಡಿಎ ಮಧ್ಯಪ್ರವೇಶಿಸಿ ಜೀವನಪೂರ್ತಿ ವಿಮೆ ನವೀಕರಿಸಲು ಅವಕಾಶ ನೀಡಬೇಕೆಂದು ಸೂಚಿಸಿದೆ. ಆದರೆ ಹೊಸ ಪಾಲಿಸಿ ಖರೀದಿ ಮಾಡುವುದು ಈಗಲೂ ಸುಲಭ ಸಾಧ್ಯವಿಲ್ಲ. ಅದರಲ್ಲೂ ಆಫ್ ಲೈನ್‌ನಲ್ಲಿ 70ವರ್ಷದವರಿಗೆ ವಿಮೆ ಸಿಗುವುದೇ ಅನುಮಾನ.
* ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.