ಮಕ್ಕಳಿರಲವ್ವ ಮನೆತುಂಬಾ!: ಮಗು ದತ್ತು ಪಡೆಯಲು ಕಾನೂನಿನ ಹತ್ತು ಸುತ್ತು
Team Udayavani, May 1, 2017, 10:18 PM IST
ಅಡಿಕೆ ಸುಗ್ಗಿ ಸಂದರ್ಭ. ಭೇಟಿಯಾದ ಓರ್ವ ಕೊನೆ ಕೊಯ್ಯುವ ಕೂಲಿಯಾಳಿಗೆ ಮದುವೆಯಾಗಿ 14 ವರ್ಷ ಸಂದಿದ್ದರೂ ಮಕ್ಕಳಿರಲಿಲ್ಲ. ಪತ್ನಿಯ ಬಿಪಿ ಸಮಸ್ಯೆಯಿಂದಾಗಿ ಮೂರ್‍ನಾಲ್ಕು ಮಕ್ಕಳು ಗರ್ಭದಲ್ಲಿಯೇ ಅಸುನೀಗಿದ್ದವು. ಮತ್ತೆ ಮಕ್ಕಳು ಸಾಧ್ಯವಿಲ್ಲ. ಮಕ್ಕಳೆಂದರೆ ಆತನಿಗೆ ಜೀವ. ಈ ಪರಿಸ್ಥಿತಿಯಲ್ಲಿ ಆತ ಕೇಳಿದ್ದು ಒಂದೇ ಮಾತು, ಎಲ್ಲಾದರೂ ದತ್ತು ಮಕ್ಕಳು ಸಿಗುತ್ತದಾ?
ದೇಶದ ಜನಸಂಖ್ಯೆ 120 ಕೋಟಿ ದಾಟಿರಬಹುದು. ಜನಸಂಖ್ಯಾ ಸ್ಫೋಟದ ಪರಿಣಾಮವಾಗಿ ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿಯೇ ಏದುಸಿರು ಬಿಡುತ್ತಿರಬಹುದು. ಆದರೂ ಭಾರತದಲ್ಲಿ ಮಕ್ಕಳಿಲ್ಲದ ಸಾವಿರಾರು ದಂಪತಿಗಳಿದ್ದಾರೆ. ಅವರು ಮಗುವಿಗಾಗಿ ಹಂಬಲಿಸುವುದು ಮನಸ್ಸನ್ನು ಆರ್ದಗೊಳಿಸುತ್ತದೆ. ಹಾಗಿದ್ದೂ ದೇಶದಲ್ಲಿ ಮಕ್ಕಳನ್ನು ದತ್ತು ಪಡೆಯುವುದು ತೀರಾ ಕಠಿಣ. ದುರುಪಯೋಗವನ್ನು ತಡೆಯಬೇಕು ಎಂಬ ಹಿನ್ನೆಲೆಯಲ್ಲಿ ಈ ಕಟ್ಟುಪಾಡು ಅನಿವಾರ್ಯವೂ ಇರಬಹುದು. ಸಮಾಜದಲ್ಲಿನ ಅನಾಥ, ನಿರ್ಗತಿಕ ಮತ್ತು ಪರಿತ್ಯಕ್ತ ಮಕ್ಕಳು ಪುನರ್ವಸತಿಯ ಮೂಲಕ ಉತ್ತಮ ಬದುಕು ಪಡೆಯಲು ಕಾನೂನಿನಲ್ಲಿ ಒದಗಿಸಿದ ಅವಕಾಶವೇ ದತ್ತು ಸ್ವೀಕಾರ. ಇದರಿಂದ ಮಗು ತನ್ನನ್ನು ಪ್ರೀತಿಸುವ ಕುಟುಂಬದ ಆಶ್ರಯದಲ್ಲಿ ಬೆಳೆದು ಉತ್ತಮ ನಾಗರಿಕನಾಗಿ, ಈ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಬೇಕೆಂಬುದೇ ಕಾನೂನುಗಳ ಆಶಯ.
ಪ್ರಮುಖವಾಗಿ ಮೂರು ಮುಖ್ಯ ದತ್ತು ಕಾನೂನುಗಳನ್ನು ಪ್ರಸ್ತಾಪಿಸಬಹುದು. ಮೊದಲನೆಯದಾಗಿ, ಹಿಂದೂ ಅಡಾಪ್ಷನ್ ಮತ್ತು ಮೆಂಟನೆನ್ಸ್ ಆಕ್ಟ್-1956, ಹಾಗೆಯೇ ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಆಕ್ಟ್-1890 ಹಾಗೂ ಜುವೆನೈಲ್ ಜಸ್ಟೀಸ್ ಅಮೆಂಡ್‌ಮೆಂಟ್ ಆಕ್ಟ್ 2006(ಎಎಂ). ಹಲವು ಕಾನೂನುಗಳಲ್ಲಿರುವ ಅಂಶಗಳು ಒಟ್ಟಾರೆಯಾಗಿ ಗೊಂದಲ ಉಂಟುಮಾಡುವ ಸಾಧ್ಯತೆ ಮತ್ತು ದುರುಳರು ಕಾನೂನಿನ ಪ್ರಾವಿಧಾನಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬ ಕಾರಣಕ್ಕೆ 2015ರಲ್ಲಿ ಕೇಂದ್ರ ಸರ್ಕಾರ ಮಕ್ಕಳ ದತ್ತು ವಿಚಾರದಲ್ಲಿ ಮಾರ್ಗಸೂಚಿ ಸೂತ್ರಗಳನ್ನು ಪ್ರಕಟಿಸಿದೆ. ಇದರ ಆಧಾರದ ಮೇಲೆಯೇ ದತ್ತು ಪ್ರಕ್ರಿಯೆ ನಡೆಯಬೇಕು. ದತ್ತು ಎಂಬ ಕಾನೂನು ಪ್ರಕ್ರಿಯೆಯ ನಂತರ ದತ್ತಕವಾದ ಮಗುವಿಗೆ ಸ್ವಂತ ಮಕ್ಕಳ ಎಲ್ಲ ಹಕ್ಕುಗಳು ಲಭ್ಯವಾಗುತ್ತವೆ. ಮತ್ತೆ ಮೂರು ನಾಲ್ಕು ಮಾದರಿಯ ಮಕ್ಕಳು ದತ್ತಕಕ್ಕೆ ಲಭ್ಯವಾಗುತ್ತಾರೆ. ಮಾರ್ಗಸೂಚಿಯ ಸೆಕ್ಷನ್ ನಾಲ್ಕರ ಪ್ರಕಾರ,
1. ಒಪ್ಪಿಸಿದ ಮಗು: ನೈಜ ತಂದೆತಾಯಿಗಳು ತಮ್ಮ ಸ್ವಇಚ್ಛೆಯಿಂದ ಕಾನೂನು ರೀತ್ಯಾ ದತ್ತು ಕೇಂದ್ರಕ್ಕೆ ತಮ್ಮ ಮಗುವನ್ನು ಒಪ್ಪಿಸಬಹುದು. ಮಗುವನ್ನು ವೈದ್ಯರಿಂದ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುವುದು. ದಂಪತಿಗೆ ದತ್ತು ಪ್ರಕ್ರಿಯೆಯ ಎಲ್ಲಾ ವಿವರಗಳನ್ನು ಆಪ್ತಸಲಹಾ ಕೇಂದ್ರದ ಮೂಲಕ ತಿಳಿಸಿ ತೀರ್ಮಾನ ಕೈಗೊಳ್ಳಲು ಮೂರು ತಿಂಗಳ ಕಾಲಾವಕಾಶವನ್ನು ನೀಡಲಾಗುವುದು. ಆನಂತರ ಮಗು ದತ್ತು ಸ್ವೀಕಾರಕ್ಕೆ ಯೋಗ್ಯವಾಗುತ್ತದೆ ಹಾಗೂ ಮೂಲ ಕುಟುಂಬದ ಹಕ್ಕು ಬಾಧ್ಯತೆಯನ್ನು ಪೂರ್ತಿ ಕಳೆದುಕೊಳ್ಳುತ್ತದೆ.
2. ಸಾರ್ವಜನಿಕ ಸ್ಥಳಗಳು – ಆಸ್ಪತ್ರೆಗಳಲ್ಲಿ ಮುಂತಾದ ಕಡೆ ಸಿಕ್ಕ ಅನಾಥ ಮಗುವನ್ನು ಗುರುತಿಸಿ ಸೇವಾ ಸಂಸ್ಥೆಗಳು ಪೊಲೀಸರಿಗೆ ಮಾಹಿತಿ ನೀಡುತ್ತವೆ. ಈ ಮಗುವನ್ನು ಪೊಲೀಸರು ಜುವೆನೈಲ್ ವೆಲ್‌ಫೇರ್ ಬೋರ್ಡ್‌ಗೆ ಹಾಜರುಪಡಿಸುತ್ತಾರೆ. ವಿಚಾರಣೆ ಹಾಗೂ ಮಾಧ್ಯಮದ ಮೂಲಕ ಈ ಮಗುವಿನ ಬಗ್ಗೆ ಮಾಹಿತಿ ನೀಡಿ ಯಾರಿಂದಲೂ ಪ್ರತಿಕ್ರಿಯೆ ಬಾರದಿದ್ದಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ಪರಿತ್ಯಜಿಸಲಾಗಿದೆ ಎಂದು ತೀರ್ಮಾನಿಸಿ ಈ ಮಗು ದತ್ತು ಹೊಂದಲು ಯೋಗ್ಯವಾಗಿದೆ ಎಂದು ಧೃಢೀಕರಣ ನೀಡಲಾಗುತ್ತದೆ.
ದತ್ತು ಸ್ವೀಕಾರ ಮಾಡಲು ಎಲ್ಲ ಭಾರತೀಯರಿಗೆ, ಅನಿವಾಸಿ ಭಾರತೀಯರಿಗೆ ಹಾಗೂ ವಿದೇಶಿ ಪ್ರಜೆಗೆ ಕೂಡ ಅಧಿಕಾರವಿದೆ. ಈ ಅಧಿಕಾರಕ್ಕೆ ಷರತ್ತುಗಳು ಅನ್ವಯವಾಗುತ್ತವೆ! ವಿವಾಹ ಚೌಕಟ್ಟಿನ ಹೊರತಾಗಿ ಎಲ್ಲ ಪುರುಷ, ಮಹಿಳೆಯರು ದತ್ತು ತೆಗೆದುಕೊಳ್ಳಬಹುದು. ಏಕಾಂಗಿ ಮಹಿಳೆ ಗಂಡು ಹೆಣ್ಣುಗಳಲ್ಲಿ ಯಾವುದೇ ಲಿಂಗದ ಮಗುವನ್ನು ದತ್ತು ತೆಗೆದುಕೊಳ್ಳಬಹುದಾದರೂ ಏಕಾಂಗಿ ಪುರುಷನೋರ್ವ ಹೆಣ್ಣು ಮಗುವನ್ನು ದತ್ತು ಪಡೆಯುವಂತಿಲ್ಲ ಎಂದು ಮಾರ್ಗಸೂಚಿ ಹೇಳುತ್ತದೆ. ಒಂದೊಮ್ಮೆ ದಂಪತಿಗಳು ಮಗುವೊಂದನ್ನು ದತ್ತು ತೆಗೆದುಕೊಳ್ಳಬೇಕು ಎಂತಾದರೆ ಅವರು ಕನಿಷ್ಟ ಎರಡು ವರ್ಷ ಅರ್ಹ ದಾಂಪತ್ಯ ಜೀವನ ನಡೆಸಿರುವುದನ್ನು ಖಚಿತಪಡಿಸಬೇಕು. ದತ್ತಕ ಪಡೆಯಲು ಇಬ್ಬರ ಒಪ್ಪಿಗೆಯೂ ಕಡ್ಡಾಯ.
ಒಂದು ಮಗುವನ್ನು ದತ್ತು ತೆಗೆದುಕೊಳ್ಳುವಾಗ ಮಗು ಹಾಗೂ ದತ್ತಕ ಆಕಾಂಕ್ಷಿಗಳ ವಯೋ ವ್ಯತ್ಯಾಸ 25 ವರ್ಷಕ್ಕಿಂತ ಅಧಿಕವಾಗಿರುವಂತಿಲ್ಲ. ಈ ಸಂಭಾವ್ಯ ಪೋಷಕರು ಮಾನಸಿಕವಾಗಿ, ದೈಹಿಕವಾಗಿ ಗಟ್ಟಿಮುಟ್ಟಾಗಿರಬೇಕು. ಅವರ ಆರ್ಥಿಕ ಸ್ಥಿತಿ ಪಡೆವ ಮಗುವನ್ನು ಬಾಳಿಸುವಷ್ಟು ಸದೃಢವಾಗಿರಬೇಕು. ಈಗಾಗಲೇ ಅವರು ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವಂತಿಲ್ಲ. ಅವರ ಜೀವವೇ ಕಂಟಕದಲ್ಲಿರುವಂತಹ ರೋಗದಿಂದಲೂ ಅವರು ಪೀಡಿತರಾಗಿರಬಾರದು. ಕಾನೂನುಗಳನ್ನೋ, ಮಾರ್ಗಸೂಚಿ ನಿಯಮಗಳನ್ನೋ ಹೇಳಬಹುದು. ಅದನ್ನು ನಿರ್ವಹಿಸುವವರು ಯಾರು? ಇದಕ್ಕೆಂದೇ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ-ಸೆಂಟ್ರಲ್ ಅಡಾಪ್ಶನ್ ರಿಸೋರ್ಸ್ ಅಧಾರಿಟಿ-ಕಾರಾ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ. ಇದು ದೇಶೀಯ, ಅಂತರ್ದೇಶೀಯ ದತ್ತು ಪ್ರಕ್ರಿಯೆಗಳೆರಡನ್ನೂ ನೋಡಿಕೊಳ್ಳುತ್ತದೆ. ಅದರ ಮುಖ್ಯ ವಿವರಗಳು ಇಂತಿವೆ;
Central Adoption Resource Authority, Ministry of Women & Child Development, West Block 8, Wing 2, 2nd Floor, R.K. Puram, New Delhi-110066 (India)
Telephone Numbers: +91-11-26180194
E-mail: [email protected]
Website: http://www.cara.nic.in/Index.aspx
ದತ್ತು ಕ್ರಮ ಹೇಗೆ?
ದತ್ತು ಆಸಕ್ತರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಡಿಸಿಪಿಓ ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಇದೀಗ ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಫಾರಂ www.cara.nic.in <http://www.cara.nic.in/> ನಲ್ಲಿ ಲಭ್ಯ. ಈ ಕೆಳಗಿನ ವ್ಯವಸ್ಥೆಗಳಲ್ಲೂ ಅರ್ಜಿ ಸಲ್ಲಿಸಬಹುದು.
(A) Licensed Adoption Placement Agency (LAPA), (B) Recognised Indian Placement Agency (RIPA), (C) Adaption coordination agency (D) State Adaption Cell
ಈ ದಾಖಲಾತಿಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಜನ್ಮ ದಿನಾಂಕದ ಪ್ರಮಾಣ ಪತ್ರ, ವಿವಾಹ ದೃಢೀಕರಣ ಪತ್ರ, ವೈದ್ಯಾಧಿಕಾರಿಗಳಿಂದ ಆರೋಗ್ಯ ಪ್ರಮಾಣಪತ್ರ, ಇತ್ತೀಚಿನ 3 ಭಾವಚಿತ್ರಗಳು, ಸಂಬಂದಿಕರಲ್ಲದವರಿಂದ 3 ಶಿಫಾರಸ್ಸು ಪ್ರಮಾಣಪತ್ರಗಳು, ಆದಾಯ ಪ್ರಮಾಣ ಪತ್ರ, ಆಸ್ತಿ ಮತ್ತು ಋಣ ಪಟ್ಟಿ, ಬ್ಯಾಂಕ್ ಧೃಢೀಕರಣ, ಈ ಹಿಂದೆ ದತ್ತು ಪಡೆದಿಲ್ಲವೆಂಬ ಪ್ರಮಾಣ ಪತ್ರ. ವಿಚ್ಛೇದನಗೊಂಡಿದ್ದರೆ ದಾಖಲಾತಿಗಳನ್ನು ಪಡೆಯಲಾಗುತ್ತದೆ. ಅರ್ಜಿ ಸಲ್ಲಿಸಿದ ವ್ಯಕ್ತಿ, ಕುಟುಂಬದ ಕುರಿತಾಗಿ ದತ್ತು ಏಜೆನ್ಸಿ ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡುತ್ತದೆ. ದತ್ತು ಸಂಸ್ಥೆಯು ದತ್ತು ಪಡೆಯುವವರ ಹೋಮ್ ಸ್ಟಡಿಗಾಗಿ ತನ್ನ ಕಾರ್ಯಕರ್ತನನ್ನು ನಿಯೋಜಿಸಿ ಈ ಕೆಳಗಿನ ಮಾನದಂಡಗಳನ್ನು ಆಧರಿಸಿ ಅವರ ಮಾನಸಿಕ ಸಿದ್ಧತೆ ಹಾಗೂ ಯೋಗ್ಯತೆ ಬಗ್ಗೆ ವಿವರವಾದ ವರದಿಯನ್ನು ಪಡೆಯುತ್ತದೆ.
ಕೌಟುಂಬಿಕ ಸಾಮಾಜಿಕ ಸ್ಥಿತಿ, ಮನೆಯಲ್ಲಿನ ವ್ಯವಸ್ಥೆಗಳ ವಿವರ, ದಂಪತಿ ಜೀವನ ಶೈಲಿ, ಗಂಡ ಹೆಂಡಿರ ಸಂಬಂಧ, ಸಂಬಂಧಿಕರೊಂದಿಗೆ ಇರುವ ಸಂಬಂಧ, ಆರೋಗ್ಯ ಸ್ಥಿತಿ, ಆರ್ಥಿಕ ಸ್ಥಿತಿ, ಶಿಕ್ಷಣಕ್ಕೆ ಇರುವ ವ್ಯವಸ್ಥೆ, ದತ್ತು ಪಡೆಯಲು ಕಾರಣಗಳು, ದತ್ತು ಪಡೆಯುವ ಬಗ್ಗೆ ಮನೆಯ ಹಿರಿಯರ ಮತ್ತು ಇತರ ಸದಸ್ಯರ ಅಭಿಪ್ರಾಯಗಳು ವರದಿಯಲ್ಲಿ ಪರಿಗಣನೆಗೆ ಬರುತ್ತದೆ. ಈ ವರದಿಯನ್ನು ಪ್ರಕಟಿಸಿದ ನಂತರ ಅರ್ಹ ಪೋಷಕರು ತಮ್ಮ ಅಗತ್ಯಗಳನ್ನು ಪಟ್ಟಿ ಮಾಡಿ ಸೂಚಿಸಿದರೆ ಅವರಿಗೆ ಬೇಡಿಕೆಗೆ ಅನುಸಾರವಾಗಿ ಗರಿಷ್ಠ ಆರು ಮಕ್ಕಳ ಫೋಟೋ, ಮಕ್ಕಳ ಕುರಿತ ಅಧ್ಯಯನ ವರದಿ, ಆರೋಗ್ಯ ಮಾಹಿತಿಗಳನ್ನು ಕೊಡಲಾಗುತ್ತದೆ. ಮಗುವಿನ ಆರೋಗ್ಯ, ಮಾನಸಿಕ ಸ್ಥಿತಿ ಹಾಗೂ ಸ್ವಭಾವಗಳ ಬಗ್ಗೆ ಅಧ್ಯಯನ ವರದಿ ಮಾಹಿತಿ ನೀಡುತ್ತದೆ. ಆದರೆ ಯಾವುದೇ ಕಾರಣಕ್ಕೂ ಮಗುವಿನ ಕೌಟುಂಬಿಕ ಮೂಲವನ್ನು ತಿಳಿಸಲಾಗುವುದಿಲ್ಲ.
ಘಂಟೆಗಳ ಸಮಯದಲ್ಲಿ ಸಂಭಾವ್ಯ ಪೋಷಕರು ತಮ್ಮಆಯ್ಕೆಯ ಮಗುವನ್ನು ಗುರುತಿಸಬೇಕು. ಈ ಮಗುವಿನ ಹೊರತಾದ ಮಕ್ಕಳನ್ನು ಉಳಿದವರ ಆಯ್ಕೆಗೆ ಮುಕ್ತಗೊಳಿಸ ಲಾಗುತ್ತದೆ. ಮುಂದಿನ ಹಂತವೇ ಮುಖಾಮುಖೀ. ಮಗು ಹಾಗೂ ದತ್ತಕದ ಆಸಕ್ತರು ಪರಸ್ಪರ ಭೇಟಿ ಮಾಡಲು ಸಮಯ ಕೊಡಲಾಗುತ್ತದೆ. ಈ ಪ್ರಕ್ರಿಯೆ 15 ದಿನಗಳಲ್ಲಿ ಮುಕ್ತಾಯವಾಗಬೇಕು. ಆಯ್ಕೆ ಮಾಡಿದ ಮಗು ಅಥವಾ ಆಸಕ್ತರು ಪರಸ್ಪರರಲ್ಲಿ ಒಬ್ಬರು ಒಪ್ಪಿಗೆ ಸೂಚಿಸದಿದ್ದರೂ ಮತ್ತೆ ಮೊದಲಿನಂತೆ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಇವೆಲ್ಲ ಸುಲಲಿತವಾಗಿ ನಡೆದು, ಮಗು ಆಕಾಂಕ್ಷಿಗಳು ಒಪ್ಪಿಗೆ ಪತ್ರಕ್ಕೆ ಸಹಿ ಮಾಡದ ನಂತರ ನ್ಯಾಯಾಲಯದ ಮೂಲಕ ಮಗು ಪಡೆಯುವುದಕ್ಕೆ ವೇದಿಕೆ ಸಿದ್ಧವಾದಂತೆ.
ದತ್ತು ಕೊಡುವ ಅಧಿಕೃತ ಸಂಸ್ಥೆ ಒಪ್ಪಿಗೆ ಪತ್ರ ಪಡೆದ ಏಳು ದಿನಗಳ ಒಳಗೆ ನ್ಯಾಯಾಲಯಕ್ಕೆ ದತ್ತಕ ಪಿಟಿಷನ್ ಸಲ್ಲಿಸುತ್ತದೆ. ನ್ಯಾಯಾಲಯ ಕ್ಯಾಮರಾ ಕಣ್ಗಾವಲಿನಲ್ಲಿ ಪ್ರಕ್ರಿಯೆ ನಡೆಸಿ ಪ್ರಕರಣ ಇತ್ಯರ್ಥ ಪಡಿಸಲು ಎರಡು ತಿಂಗಳ ಕಾಲಾವಕಾಶ ವಿರುತ್ತದೆ. ದತ್ತಕದ ದೃಢೀಕೃತ ಆದೇಶವನ್ನು ತೀರ್ಪಿತ್ತ 10 ದಿನಗಳ ಒಳಗೆ ಏಜೆನ್ಸಿಗೆ ತಲುಪಿಸಲಾಗುತ್ತದೆ. ಇಲ್ಲಿಗೆ ಪೋಷಕರಿಗೆ ಮಗುವಿನ ಹಸ್ತಾಂತರ ಮಾಡಲು ಅಧಿಕೃತ ಸಂಸ್ಥೆಗೆ ಅನುಮತಿ ಸಿಕ್ಕಂತಾಗುತ್ತದೆ. ದತ್ತು ಕೊಟ್ಟ ನಂತರವೂ ಮಗುವಿನ ಕುರಿತಾಗಿ ಮೇಲ್ವಿಚಾರಣಾ ಅಧಿಕಾರವನ್ನು ಸದರಿ ಸಂಸ್ಥೆ ಹೊಂದಿರುತ್ತದೆ. ದತ್ತು ಪಡೆದ ನಂತರ ಪ್ರತಿ ಆರು ತಿಂಗಳಿಗೊಮ್ಮೆ ಎರಡು ವರ್ಷದವರೆಗೆ ಸಂಸ್ಥೆಯು ಪಾಲಕರ ಮನೆಗೆ ಬೇಟಿ ನೀಡಿ ಮಗುವಿನ ಸ್ಥಿತಿ-ಗತಿ ಬಗ್ಗೆ ಭಾವಚಿತ್ರ ಸಹಿತ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ.
ದುರಂತ ನೋಡಿ, ದತ್ತು ಪಡೆಯಲು ಬೇಕಾಗುವ ಅರ್ಹತೆಗಳ ಆಧಾರದಲ್ಲಿ ಮಲೆನಾಡಿನ ಕೊನೆಗೌಡ ಅನರ್ಹ ನಾಗುತ್ತಾನೆ! ಬದುಕು ನಡೆಸುವ ಸಾಮರ್ಥ್ಯ ಇದ್ದರೂ ಅದನ್ನು ರುಜುವಾತು ಪಡೆಸುವ ದಾಖಲೆ, ಆಸ್ತಿ ಅವನಲ್ಲಿಲ್ಲ. ಅವನ ಪ್ರೀತಿ, ಮಕ್ಕಳ ಕುರಿತ ಆಸೆ, ಕಾಳಜಿ ಸಾಕ್ಷ್ಯಾಧಾರಿತ ವ್ಯವಸ್ಥೆಯಲ್ಲಿ ಶೂನ್ಯ ಸಮಾನ! ಕೊನೆಗೂ ಆತ ಅನಧಿಕೃತ ಮಾರ್ಗಗಳ ಮೂಲಕವೇ ಮಗುವನ್ನು ದತ್ತು ಪಡೆಯಬೇಕು. ಇದಲ್ಲವೇ ಕಾನೂನಿನ ವ್ಯಂಗ್ಯ?
ದತ್ತು ಪಡೆಯಲು ಇರುವ ಕಾನೂನುಗಳು
1. ಹಿಂದೂ ಅಡಾಪ್ಷನ್ ಮತ್ತು ಮೇಂಟನೆನ್ಸ್ ಆಕ್ಟ್-1956 (HAMA):
ಇದು ಭಾರತದಾದ್ಯಂತ ಹಿಂದೂಗಳಿಗಾಗಿಯೇ ಇರುವ ದತ್ತಕ ಕಾಯಿದೆ. ಇದರಲ್ಲಿ ಬುದ್ಧ, ಜೈನ್, ಸಿಖ್ ಪಂಥದವರೂ ಒಳ ಪಡುತ್ತಾರೆ. ಗಂಡು/ಹೆಣ್ಣು, ನ್ಯಾಯಸಮ್ಮತ/ ನ್ಯಾಯ ಸಮ್ಮತವಲ್ಲದ, ಪರಿತ್ಯಕ್ತ, ತಬ್ಬಲಿ ಮಗು ಯಾವುದೇ ಧರ್ಮದ್ದಿರಲಿ ಅದು ಹಿಂದೂ ಧರ್ಮದಂತೆ ಬೆಳೆಯುತ್ತಿದ್ದರೆ ಈ ಕಾಯಿದೆ ವ್ಯಾಪ್ತಿಯಲ್ಲಿ ಬರುತ್ತದೆ. 15 ವರ್ಷ ಮೀರಿದ ಮಗು ದತ್ತು ಹೊಂದಲು ಬರುವುದಿಲ್ಲ. ದತ್ತು ಪಡೆಯುವವರು ಹೊಂದಿರಬೇಕಾದ ಕನಿಷ್ಟ ಅರ್ಹತೆಗಳು.
– ವ್ಯಕ್ತಿ 25ರಿಂದ 45 ವರ್ಷ ವಯಸ್ಸಿನವರಾಗಿರಬೇಕು.
– ಮದುವೆಯಾಗಿದ್ದರೆ ಕನಿಷ್ಠ 5 ವರ್ಷವಾಗಿರಬೇಕು.
– ಅವರ ಮಾಸಿಕ ಆದಾಯ ತಿಂಗಳಿಗೆ ಕನಿಷ್ಠ ರೂ. 10,000 ಇರಬೇಕು.
– ಮಾನಸಿಕವಾಗಿ ಸ್ವಸ್ಥ, ಮಕ್ಕಳ ಮೇಲೆ ಸಹಜ ಪ್ರೀತಿ ಉಳ್ಳವರಾಗಿದ್ದು, ತಮ್ಮ ಸ್ವಂತ ಮಕ್ಕಳಂತೆ ಸಾಕುವವರಾಗಿರಬೇಕು.
– ಅವಿವಾಹಿತ ವಯಸ್ಕ ಗಂಡಸು ದತ್ತು ಪಡೆಯಬಹುದು. ವಿವಾಹಿತನಾಗಿದ್ದರೆ ಹೆಂಡತಿಯ ಒಪ್ಪಿಗೆ ಅತ್ಯಗತ್ಯ. ವಿವಾಹಿತ ಮಹಿಳೆ ದತ್ತು ಪಡೆಯುವಂತಿಲ್ಲ. ಆದರೆ ಗಂಡ ದತ್ತು
ಸ್ವೀಕರಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದರೆ ಅಥವಾ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರ ಹೆಂಡತಿ ದತ್ತು ಪಡೆಯಬಹುದು.
– ಅವಿವಾಹಿತ, ವಿಚ್ಛೇದನಗೊಂಡ, ವಿಧವೆ ವಯಸ್ಕ ಮಹಿಳೆ ದತ್ತು ಪಡೆಯಲು ಅರ್ಹಳು.
– ವಯಸ್ಕ ಗಂಡಸು/ಹೆಂಗಸು, ಹೆಣ್ಣು/ಗಂಡು ಮಗುವನ್ನು ದತ್ತು ಪಡೆಯಲಿಚ್ಛಿಸಿದಾಗ ಮಗು – ಪಾಲಕರ ವಯಸ್ಸಿನ ಅಂತರ ಕನಿಷ್ಟ 21 ವರ್ಷವಾಗಿರಬೇಕು.
– ಕುಟುಂಬಕ್ಕೆ ಮಗ, ಮೊಮ್ಮಗ, ಮರಿಮಗ ಇದ್ದರೆ ಅವರು ದತ್ತು ಸ್ವೀಕಾರಕ್ಕೆ ಅನರ್ಹರು.
– ದತ್ತು ಮಗುವಿಗೆ ಸ್ವಂತ ಮಗುವಿಗೆ ಸಿಗುವ ಎಲ್ಲಾ ಹಕ್ಕುಗಳೂ ಲಭ್ಯವಾಗುತ್ತವೆ.
– ಒಮ್ಮೆ ದತ್ತು ಪಡೆದ ಮಗುವನ್ನು ಪುನಃ ದತ್ತು ನೀಡುವ ಹಾಗಿಲ್ಲ ಹಾಗೂ ಈ ಪ್ರಕ್ರಿಯೆಯು ಬದಲಾಯಿಸಲಾಗದಂತಹುದು.
2. ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಆಕ್ಟ್- 1890(GAWA)
ಹಿಂದೂಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಧರ್ಮದವರಿಗೆ ಈ ಕಾನೂನು ಅನ್ವಯ. (ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಹಾಗೂ ಜೂಸ್) ಈ ಧರ್ಮಗಳ ವೈಯಕ್ತಿಕ ಕಾನೂನಿನಲ್ಲಿ ಪೂರ್ತಿ ದತ್ತು ನಿಯಮವನ್ನು ಅಳವಡಿಸಿಲ್ಲ. ಈ ಕಾನೂನಿನ ಪ್ರಕಾರ ದತ್ತು ಪಡೆದವರು ದತ್ತಕ ಮಗು ವಯಸ್ಕನಾಗುವವರೆಗೆ (21ವ) ಕೇವಲ ಪೋಷಕರಾಗಿರುತ್ತಾರೆ. ಹಾಗಾಗಿ ಇಲ್ಲಿ ಸ್ವಂತ ಮಗುವಿಗೆ ಸಿಗುವ ಯಾವುದೇ ಹಕ್ಕುಗಳೂ ಲಭ್ಯವಾಗುವುದಿಲ್ಲ. ಅಂತಾರಾಷ್ಟ್ರೀಯ ದತ್ತು ನಿಯಮ ಇದರಲ್ಲಿ ಬರುತ್ತದೆ.
3. ಜುವೆನೈಲ್ ಜಸ್ಟೀಸ್ ಅಮೆಂಡ್‌ಮೆಂಟ್ ಅಕ್ಟ್ 2006 (GGí)
ಇದು ಎಲ್ಲಾ ಧರ್ಮದವರಿಗೂ ಅನ್ವಯವಾಗುವ ಕಾನೂನು. ಸದ್ಯ ಗುಜರಾತ್, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಜಾರಿಯಲ್ಲಿದೆ.
– ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.