ನಿರುದ್ಯೋಗ ವಿಮೆ
Team Udayavani, May 1, 2017, 9:47 PM IST
ಇವತ್ತಿನಿಂದ ಕೆಲಸಕ್ಕೆ ಬರಬೇಡ ಎಂದು ಆಫೀಸಿನಲ್ಲಿ ಹೇಳಿದ್ದಾರೆ. ಬೇರೆ ಕೆಲಸವನ್ನು ಹುಡುಕಿಕೊಳ್ಳಲು ಅವಕಾಶವೂ ಸಿಕ್ಕಿಲ್ಲ. ಮನೆಯ ಖರ್ಚು, ಬಾಡಿಗೆ, ಸಾಲ, ವಿಮೆ, ಮಕ್ಕಳ ಸ್ಕೂಲು ಫೀ ಹೀಗೆ ಎಲ್ಲದಕ್ಕೂ ಕಂಪನಿಯ ಸಂಬಳವೇ ಆಧಾರವಾಗಿತ್ತು. ಈಗ ಮತ್ತೆ ಕೆಲಸ ಸಿಗುವವರೆಗೂ ಏನು ಮಾಡೋದು? ಎಂಬ ಪ್ರಶ್ನೆ ಉದ್ಯೋಗಸ್ಥರ ಜೀವನದಲ್ಲೊಮ್ಮೆಯಾದರೂ ಬಂದು ಹೋಗದೇ ಇರದು. ಅಂತಹ ಪ್ರಶ್ನೆಗಳಿಗೆ ಉತ್ತರಿಸುವ ಉದ್ಯೋಗ ನಷ್ಟ ವಿಮೆ ಇಲ್ಲಿದೆ.
ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದು ಕಂಪನಿ ಹೇಳಿದೆ. ಮುಂದೆ ಏನು ಮಾಡಬೇಕೆಂದು ನನಗೆ ತೋಚುತ್ತಿಲ್ಲ ಎಂದು ಕೈಹಿಡಿದ ಹೆಂಡತಿ ಬಳಿಯೋ ಅಥವಾ ಸಾಕಿ ಸಲುಹಿದ ಪೋಷಕರ ಬಳಿಯೋ ಹೇಳಿದಾಗ ಅವರಿಗೆ ಎಂತಹ ಆಘಾತ ಆಗಬೇಡ ?! ‘ನಾನು ಮೊದಲೇ ಹೇಳಿದೆ, ಸರ್ಕಾರಿ ಕೆಲಸಕ್ಕೆ ಟ್ರೈ ಮಾಡು ಅಂತ, ನೀನೇ ಕಂಪನಿಯ ಕೆಲಸ ಹೆಚ್ಚು. ಗಳಿಕೆ ಬೇಗ. ಪ್ರಮೋಷನ್‌ಗಳು ಸಿಗುತ್ತೆ, ವಿದೇಶಕ್ಕೂ ಹೋಗಬಹುದು ಅಂತೆಲ್ಲ ಹೇಳಿ ಸೇರಿಕೊಂಡೆ. ಈಗ ನೋಡು ಮನೆಗೆ ಕಳುಹಿಸಿದ್ದಾರೆ..!’ ಹೀಗೆಲ್ಲಾ ಆಪ್ತವಲಯ ಮಾತನಾಡಿ ಮೂದಲಿಸುತ್ತವೆ. ಆದರೆ ನಿಮ್ಮ ಆರ್ಥಿಕ ಸಮಸ್ಯೆಯನ್ನೆಂದೂ ತೀರಿಸಲು ಮುಂದೆ ಬರುವುದಿಲ್ಲ.
ಖಾಸಗಿ ವಲಯದ ಉದ್ಯೋಗದಲ್ಲಿ ನೌಕರನಿಗೆ ನಿರಂತರವಾಗಿ ಕಾಡುವ ಸಮಸ್ಯೆ ಎಂದರೆ ಅಭದ್ರತೆ. ತನ್ನನ್ನು ಯಾವ ಸಂದರ್ಭದಲ್ಲಿ ಕಂಪನಿ ಹೊರಹಾಕುತ್ತದೋ ಎಂಬ ಭೀತಿಯನ್ನು ಪ್ರತಿ ನೌಕರ ಎದುರಿಸುತ್ತಿರುತ್ತಾನೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಭೂತ ಎಲ್ಲ ಕಂಪನಿಗಳನ್ನೂ ಆವರಿಸುತ್ತಿದೆ. ಆರ್ಥಿಕ ಮುಗ್ಗಟ್ಟಿನ ಪ್ರಶ್ನೆಯಿಂದಲೋ, ಕಂಪನಿ ಬೆಳವಣಿಗೆಯ ದೃಷ್ಟಿಯಿಂದಲೋ ಕೌಶಲ ಮತ್ತು ಸಾಮರ್ಥ್ಯದ ಕೊರತೆಯಿರುವ ನೌಕರರನ್ನು ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಹೊರಹಾಕಿಬಿಡುತ್ತಾರೆ. ಅಂತಹ ವೇಳೆಯಲ್ಲಿ ನೌಕರಿಯನ್ನು ಕಳೆದುಕೊಂಡ ಉದ್ಯೋಗಸ್ಥನಿಗೆ ಕಡಿಮೆ ಹಣವೂ, ಹೆಚ್ಚಿನ ಉಪಯೋಗವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಉದ್ಯೋಗ ನಷ್ಟ ಮಿಮೆ(ಜಾಬ್‌ಲೆಸ್ ಇನ್ಶೂರೆನ್ಸ್) ಕೈ ಹಿಡಿಯುತ್ತದೆ.
ಜಾಬ್‌ಲೆಸ್ ಇನ್ಶೂರೆನ್ಸ್ ಎಂದರೇನು?
ಜಾಬ್‌ಲೆಸ್ ಇನ್ಶೂರೆನ್ಸ್ ಎಂದರೆ ಉದ್ಯೋಗ ಕಳೆದುಕೊಂಡ ವ್ಯಕ್ತಿಗೆ ಆರ್ಥಿಕ ನೆರವಿಗೆ ಬರುವ ವಿಮೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಉದ್ಯೋಗ ನಷ್ಟ ವಿಮೆ ಎಂದರೆ ಅಲ್ಪಾವಧಿಯ ಸಾಲ ಸುರಕ್ಷಾ ವ್ಯವಸ್ಥೆ. ಈ ವ್ಯವಸ್ಥೆಯ ವಿಮಾದಾರನು ಒಂದು ವೇಳೆ ವಿಮಾ ನಿಯಮಾನುಸಾರ ಉದ್ಯೋಗವನ್ನು ಕಳೆದುಕೊಂಡಿದ್ದರೆ, ಆತ ಮಾಡಿದ ಸಾಲ, ಮಾಸಿಕ ಕಂತುಗಳನ್ನು ವಿಮಾ ಕಂಪನಿಯೇ ಭರಿಸುತ್ತದೆ. ಆದರೆ ನಿಯಮಗಳು ಕಡ್ಡಾಯ.
ನಿಯಮಗಳೇನು?
ವಿಮಾ ನಿಯಮದ ಪ್ರಕಾರ ಉದ್ಯೋಗಿಯು ಕೆಲಸದಿಂದ ತೆಗೆದ ಕಂಪನಿಯ ದೃಢೀಕರಣ ಪತ್ರ ಹೊಂದಿರಬೇಕು. ಪಿಂಕ್ ಸ್ಲಿಪ್ ಅಥವಾ “ನಿಮ್ಮ ಸೇವೆ ನಮಗಿನ್ನು ಸಾಕು’ ಅಥವಾ ‘ಸೇವೆ ಕೊನೆಗೊಳಿಸಲಾಗಿದೆ ‘ ಎಂದು ಸಂಸ್ಥೆ ನಮೂದಿಸಿ ನೀಡುವ ಪತ್ರ ಉದ್ಯೋಗ ನಷ್ಟ ವಿಮೆಗೆ ಅನ್ವಯವಾಗುತ್ತದೆ.
ಸೇವೆಯಿಂದ ನಿವೃತ್ತಿ, ಸ್ವಯಂಸೇವಾ ನಿವೃತ್ತಿ(ವಿಆರ್‌ಎಸ್)
ಸೇವಾಕಾಲದಲ್ಲಿ ಅವಿಧೇಯತೆ, ಅಪ್ರಾಮಾಣಿಕತೆ, ಕಂಪನಿಯ ಅಶಿಸ್ತು ಕ್ರಮಕ್ಕೆ ಒಳಗಾಗಿ ಉದ್ಯೋಗ ನಷ್ಟ, ಅನಾರೋಗ್ಯ ಕಾರಣ ದಿಂದ ನಿವೃತ್ತಿ, ಹಿಂಬಡ್ತಿ, ಭತ್ಯೆಗಳ ಕಡಿತ, ಕಂಪನಿ ನಿಯಮಗಳ ಉಲ್ಲಂಘನೆಯಿಂದ ಉಚ್ಛಾಟನೆ, ಸಂಸ್ಥೆಗೆ ವಿರುದ್ಧವಾದ ಚಟುವಟಿಕೆ ಯಲ್ಲಿ ತೊಡಗುವುದು ಈ ಎಲ್ಲಾ ಕಾರಣಗಳಿಂದ ನೌಕರನು ತನ್ನ ನೌಕರಿಯನ್ನು ಕಳೆದುಕೊಂಡಿದ್ದರೆ ವಿಮೆ ಸೌಲಭ್ಯ ದೊರಕುವುದಿಲ್ಲ. ಸ್ವಯಂ ಉದ್ಯೋಗಿಗಳಿಗೆ, ಉದ್ಯೋಗವನ್ನು ಹೊಂದದೆಯೇ ಇರುವವರಿಗೆ, ಕೆಲಸಕ್ಕೆ ರಾಜೀನಾಮೆ ನೀಡಿದವರಿಗೆ, ಗುತ್ತಿಗೆ ಆಧಾರದಲ್ಲಿ ಕೆಲಸಮಾಡುತ್ತಿರುವವರಿಗೆ, ಯಾವುದೇ ಕಂಪನಿಯಲ್ಲಿ ತರಬೇತಿ ಅವಧಿಯ ನೌಕರರಿಗೆ, ದೃಢೀಕೃತವಲ್ಲದ ನೌಕರರಿಗೆ ವಿಮಾ ಸೌಲಭ್ಯವಿಲ್ಲ. ಈ ವಿಮೆ, ಉದ್ಯೋಗ ನಷ್ಟ ಹೊಂದಿದ ವ್ಯಕ್ತಿಯನ್ನು ಮಾತ್ರ ಅವಲಂಬಿಸಿದೆ. ಆದರೆ ಆ ವ್ಯಕ್ತಿಯ ಅನಾರೋಗ್ಯ, ಸಾಲ ಮರುಪಾವತಿ ರಕ್ಷಣೆ, ಖಾಸಗಿ ಅಪಘಾತ ಇನ್ನಿತರ ಪ್ರತೇಕ ವಿಮಾ ಸೌಲಭ್ಯಗಳನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ.
ನೌಕರಿ ಸಮಯದಲ್ಲಿ ಆದ ಅಪಘಾತದಿಂದ ಆ ಉದ್ಯೋಗ ಮುಂದುವರೆಸಲು ಸಾಧ್ಯವಾಗದೇ ಇರುವ ವೇಳೆ ವಿಮಾ ಸೌಲಭ್ಯ ನೆರವಿಗೆ ಬರುತ್ತದೆ. ಆದರೆ ಅಪಘಾತವು ವಿಮಾದಾರನು ಕೆಲಸಕ್ಕೆ ತೆರಳುವ ವೇಳೆ, ಉದ್ಯೋಗ ಸಂಬಂಧ ಪ್ರತ್ಯೇಕ ಜಾಗಗಳಿಗೆ ಹೋಗುವಾಗ ಸಂಭವಿಸಿರಬೇಕು. ಜೊತೆಗೆ ಅಪಘಾತದಿಂದ ಕೆಲಸವನ್ನು ನಿರ್ವಹಿಸಲಾಗದ ಸ್ಥಿತಿ, ಅಂಗ ವೈಫಲ್ಯ ಇತ್ಯಾದಿಯನ್ನು ವೈದ್ಯರು ದೃಢಪಡಿಸಿದ್ದರೆ ಮಾತ್ರ ವಿಮೆಯ ಹಣ ದೊರೆಯುತ್ತದೆ.
ಪ್ರಮುಖ ಉದ್ಯೋಗ ನಷ್ಟ ವಿಮೆಗಳು
ಅಪನಗದೀಕರಣದ ನಂತರ ಭಾರತದಲ್ಲಿ ಉದ್ಯೋಗ ನಷ್ಟ ವಿಮೆಯ ಅವಶ್ಯಕತೆ ಹೆಚ್ಚುತ್ತಿದೆ. ಅಂದರೆ ಜಾಗತೀಕರಣದಿಂದಾಗಿ ವಿದೇಶಿ ಕಂಪನಿಗಳು ಭಾರತದಲ್ಲಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿವೆ. ಆದರೆ ಅಪನಗದೀಕರಣದಿಂದಾಗಿ ಆದ ಆರ್ಥಿಕ ತಲ್ಲಣವನ್ನು ಎದುರಿಸಲು, ಕಂಪನಿಯ ವೆಚ್ಚವನ್ನು ತಗ್ಗಿಸಲು ನೌಕರರ ಕಡಿತಕ್ಕೆ ಮುಂದಾಗಿವೆ. ಇದರಲ್ಲಿ ಭಾರತೀಯ ಕಂಪನಿಗಳೇನು ಕಡಿಮೆಯಿಲ್ಲ ಅವೂ ಸಹ ಈ ಮಾರ್ಗವನ್ನೇ ಅವಲಂಬಿಸುತ್ತಿವೆ. ಹೀಗಾಗಿ ಭಾರತದಲ್ಲಿಯೂ ಉದ್ಯೋಗ ನಷ್ಟ ವಿಮಾ ಪಾಲಿಸಿಗಳು ಈಗೀಗ ಪ್ರಾರಂಭವಾಗುತ್ತಿದೆ.
ಅವುಗಳಲ್ಲಿ-
1. ರಾಯಲ್ ಸುಂದರಂ ಸಂಸ್ಥೆಯ ಸೇಫ್ ಲೋನ್ ಶೀಲ್ಡ್
2. ಎಚ್‌ಡಿಎಪ್‌ಸಿ ಎರ್ಗೋನ ಹೋಂ ಸುರಕ್ಷಾ ಪ್ಲಸ್
3. ಐಸಿಐಸಿಐ ಲೋಂಬಾರ್ಡ್‌ನ ಸೆಕ್ಯೂರ್ ಮೈಂಡ್
ಈ ವಿಮೆಗಳ ಕಂತುಗಳನ್ನು ಕಟ್ಟುವ ಅವಧಿ ಒಂದು ವರ್ಷದಿಂದ ಐದು ವರ್ಷ ಆಗಿರುತ್ತದೆ.
ವಿಮಾದಾರ ಧೂಮಪಾನ ವ್ಯಸನಿಯೇ ಎಂಬುದು ಸಹ ಇಲ್ಲಿ ನಿಗದಿಯಾಗುತ್ತದೆ. ಇದು ಉದ್ಯೋಗಸ್ಥನ ಆಯುಷ್ಯ ಮತ್ತು ಕಾರ್ಯಕ್ಷಮತೆಯನ್ನು ನಿರ್ಧರಿಸುತ್ತದೆ. ವಾರ್ಷಿಕ ಆದಾಯವನ್ನು ನಮೂದಿಸುವುದು ಕಡ್ಡಾಯ.
ವಿಮಾ ಕಾರ್ಯನಿರ್ವಹಣೆ ಹೇಗೆ ?
ಒಬ್ಬ ನೌಕರ ಉದ್ಯೋಗ ಭದ್ರತೆಯ ಭೀತಿಯಿಂದ ಪ್ರತಿ ತಿಂಗಳು ಉದ್ಯೋಗ ನಷ್ಟ ವಿಮೆಗೆ ಒಂದು ಸಾವಿರದಂತೆ ಐದು ವರ್ಷ ಪಾವತಿಸಿದರೆ ಕೆಲಸ ಹೋದ ಸಮಯದಲ್ಲಿ ಅವನಿಗೆ ಸಿಗುವುದು ಕೇವಲ 3600 ರೂ. ಹೀಗಾಗಿ ಪ್ರೀಮಿಯಂ, ಉದ್ಯೋಗ ನಷ್ಟವಾದ ಸಮಯದಲ್ಲಿ ಎಷ್ಟಿರಬೇಕು ಎಂಬುದನ್ನು ಉದ್ಯೋಗಸ್ಥನೇ ನಿರ್ಧರಿಸಬೇಕಾಗುತ್ತದೆ. ಸಾಮಾನ್ಯವಾಗಿ ವಿಮಾ ಪಾವತಿಯಾದ ಮೊಬಲಗಿನಲ್ಲಿ ಒಂದು ಕಂತಿಗೆ ದೊರೆಯುವ ಹಣ ಕಡಿಮೆ ಇರುತ್ತದೆ. ಹೀಗಾಗಿ ಒಟ್ಟು ಮೊಬಲಗಿನ ನಿಗದಿತ ಹಣ ಪಾವತಿಯಾಗುವಂತೆ ಪಾಲಿಸಿ ಮಾಡಿಸುವುದು ಸೂಕ್ತ. ಆದರೆ ದುಬಾರಿ ಕಂತುಗಳನ್ನು ಕಟ್ಟುವುದು ನೌಕರನಿಗೆ ಉಪಯುಕ್ತವಲ್ಲ.
ಸೌಲಭ್ಯಗಳೇನು?
ಉದ್ಯೋಗಸ್ಥನು ಕಳೆದುಕೊಂಡ ನೌಕರಿಯ ದಾಖಲೆ ಪರಿಶೀಲನೆ ಬಳಿಕ ಮಾಸಿಕ ವೇತನ ಆಧರಿಸಿ ಪಡೆದ ಶೇ.50ರಷ್ಟು ಸಾಲದ ಮಾಸಿಕ ಕಂತುಗಳನ್ನು ವಿಮಾ ಕಂಪನಿ ಭರಿಸುತ್ತದೆ. ಕೆಲಸದ ವೇಳೆಯಲ್ಲಿ ಆದ ಅಪಘಾತಕ್ಕೆ ಅನುಗುಣವಾಗಿ ಆದ ಉದ್ಯೋಗನಷ್ಟದ ವೈದ್ಯರು ನೀಡಿದ ದಾಖಲಾತಿ ಮೇರೆಗೆ ವಿಮೆಯ ಹಣವು ವಿಮಾದಾರನಿಗೆ ತಲುಪುತ್ತದೆ.
ಎಚ್‌ಡಿಎಪ್‌ಸಿ ಎರ್ಗೋ ಹೋಮ್ ಸುರಕ್ಷಾ ಪ್ಲಸ್‌ನಲ್ಲಿ ತಿಳಿಸಿರುವಂತೆ ವಿಮಾ ಪ್ರಯೋಜನ ಮೂರು ಮಾಸಿಕ ಕಂತುಗಳಲ್ಲಿ ಮಾತ್ರ ಲಭ್ಯ. ಅದರಲ್ಲಿ ವಿಮಾ ಕಂತು ಉದ್ಯೋಗಿ ಪ್ರತಿ ತಿಂಗಳ ದುಡಿಮೆಯ ಶೇ. 50ರಷ್ಟು ಮಾತ್ರ ಆಗಿರುತ್ತದೆ. ಅಂದರೆ ಉದ್ಯೋಗಿಯು ಉದ್ಯೋಗ ನಷ್ಟವಾದ ಬಳಿಕ ಅವನಿಗೆ ದೊರೆಯುವುದು ಕೇವಲ ಒಂದೂವರೆ ತಿಂಗಳ ವೇತನ ಮಾತ್ರ. ಒಂದು ವೇಳೆ ಉದ್ಯೋಗಿ ತನ್ನ ಗೃಹಸಾಲವನ್ನು 20 ವರ್ಷಗಳ ಅವಧಿಗೆ ಪಡೆದಿದ್ದರೆ, ಮೂರು ತಿಂಗಳ ಒಟ್ಟು ಮೌಲ್ಯದ ಕೇವಲ ಶೇ. 1.25 ರಷ್ಟು ಮಾತ್ರ ಸಿಗುತ್ತದೆ. ಕವರೇಜಿನಲ್ಲಿ ಉದ್ಯೋಗಸ್ಥನ ನಿರೀಕ್ಷೆಯನ್ನು ತುಲುಪಲು ಸಾಧ್ಯವಿಲ್ಲ. ವಿಮಾ ಅವಧಿ ಕಡಿಮೆ ಜೊತೆಗೆ ವಿಮಾ ಪ್ರಯೋಜನದ ಅವಧಿಯೂ ಕಡಿಮೆ ಇರುವ ಕಾರಣ ಮೂರುತಿಂಗಳಲ್ಲಿ ಉದ್ಯೋಗಸ್ಥ ಮತ್ತೂಂದು ನೌಕರಿಯನ್ನು ಹುಡುಕಿಕೊಳ್ಳಲೇಬೇಕು. ಅದರೆ ಉದ್ಯೋಗ ನಷ್ಟವಿಮೆಯಲ್ಲಿ ಗೃಹಸಾಲಕ್ಕೆ ಅನ್ವಯವಾಗುವ ಅವಕಾಶಗಳಿವೆ ಎಂಬ ಭ್ರಮೆ ಬೇಡ. ಏಕೆಂದರೆ ವಿಮಾ ಪ್ರಯೋಜನದ ಅವಧಿ ತೀರಾ ಕಡಿಮೆ. ಐಸಿಐಸಿಐ ಲೋಂಬಾರ್ಡ್‌ನ ಸೆಕ್ಯೂರ್ ಮೈಂಡ್ ವಿಮೆಯಲ್ಲಿ ಉದ್ಯೋಗಿ ಕೊನೆಯಲ್ಲಿ ಏನನ್ನು ಪಡೆಯುತ್ತಾನೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಜೊತೆಗೆ ಈ ವಿಮೆ ಯುಎಸ್‌ಪಿ (ಯೂನಿಕ್ ಸೆಲ್ಲಿಂಗ್ ಪೊ›ಪೋಜಿಷನ್) ಎಂಬ ಆರ್ಥಿಕ ಮಾರುಕಟ್ಟೆಯ ಏರಿಳಿತವನ್ನು ಅವಲಂಭಿಸಿದೆ.
ತಜ್ಞರ ಅಭಿಪ್ರಾಯವೇನು?
ವಿಮಾದಾರನು ಉದ್ಯೋಗ ನಷ್ಟ ಹೊಂದಿದ ಬಳಿಕ ಸಿಗುವ ಮೂರು ತಿಂಗಳಲ್ಲಿ ಮತ್ತೂಂದು ಉದ್ಯೋಗ ಹುಡುಕಿಕೊಳ್ಳುವ ತನಕ ವಿಮಾ ಪ್ರಯೋಜನ ಕೈಡಿಯುತ್ತದೆ ಎನ್ನುತ್ತಾರೆ ತಜ್ಞರು. ಭಾರತದಂತಹ ದೇಶದಲ್ಲಿ ಸಂಸ್ಥೆಗಳು ಉದ್ಯೋಗ ಕಡಿತ ಮಾಡುವಾಗ ಸಕಾರಣ ಪ್ರಕಟಿಸುವುದು ತೀರಾ ಕಡಿಮೆ ಹಾಗೂ ಉದ್ಯೋಗಿಗಳಿಂದಲೇ ರಾಜೀನಾಮೆ ಪಡೆಯುವುದು, ಸ್ವಯಂ ನಿವೃತ್ತಿ ಪಡೆಯುವಂತೆ ಮಾಡುತ್ತವೆ. ಹೀಗಾಗಿ ಪಿಂಕ್ ಸ್ಲಿಪ್‌ನಂತಹ ದಾಖಲೆಗಳು ದೊರೆಯುವುದು ಕಷ್ಟ.
ಸಾಮಾನ್ಯವಾಗಿ ಕಡಿಮೆ ಕಂತು ಪಾವತಿಸುವ ಮತ್ತು ಹೆಚ್ಚು ಪ್ರೀಮಿಯಂ ಪಡೆಯುವ ವಿಮೆಗಳನ್ನೇ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರೆ ಈ ವಿಮೆ ತದ್ವಿರುದ್ಧವಾಗಿದೆ. ಪ್ರಯೋಜನದ ಅವಧಿ ನೌಕರನಿಗೆ ಬೇಸರ ತರಿಸಬಹುದು. ಉದ್ಯೋಗ ನಷ್ಟ ಹೊಂದುವ ಭೀತಿಯಿರುವ ನೌಕರ ಮೂರು ತಿಂಗಳಿಗೂ ಹೆಚ್ಚು ಮನೆ ಖರ್ಚು ಸೇರಿದಂತೆ ತನ್ನ ಅಗತ್ಯತೆಗಳನ್ನು ಪೂರೈಸುವಷ್ಟು ಆರ್ಥಿಕ ಸಬಲನಾದರೆ ಅವನಿಗೆ ಉದ್ಯೋಗ ನಷ್ಟ ವಿಮೆಯ ಅಗತ್ಯವೇ ಬರುವುದಿಲ್ಲ. ಅಂತಹವರಿಗೆ ಇದು ಈ ವಿಮೆ ಸರಿಯಾದ ಆಯ್ಕೆಯಲ್ಲ. ಉದ್ಯೋಗಿಯ ಮನೆಯ ಖರ್ಚೂ ದೊಡ್ಡದಾಗಿದ್ದು, ಮಾಡಿರುವ ಗೃಹಸಾಲ ಪ್ರೀಮಿಯಂಗಳು ಬೃಹತ್‌ಗಾತ್ರದಲ್ಲಿದ್ದರೆ ಮಾತ್ರ ವಿಮಾ ಸೌಲಭ್ಯ ಅನುಕೂಲಕ್ಕೆ ಬರುತ್ತದೆ. ಭಾರತದಂತಹ ದೇಶದಲ್ಲಿ ಹೆಚ್ಚು ಭಾವನಾತ್ಮಕವಾಗಿ ಕೆಲಸದಲ್ಲಿ ತೊಡಗುವುದರಿಂದ ಸಾಮಾನ್ಯವಾಗಿ ನೌಕರಿಯನ್ನು ಕಳೆದುಕೊಳ್ಳುವವರ ಸಂಖ್ಯೆ ಕಡಿಮೆ. ಆದರೂ ಇತ್ತೀಚಿನ ದಿನಗಳಲ್ಲಿ ಭಾರತೀಯ ಐಟಿ ಬಿಟಿ ಕಂಪನಿಗಳು ಉದ್ಯೋಗಸ್ಥರನ್ನು ತೆಗೆಯಲು ಹುನ್ನಾರ ನಡೆಸುತ್ತಿವೆ ಎನ್ನುತ್ತಾರೆ ತಜ್ಞರು.
ಐಟಿ ವಲಯದಲ್ಲಿ ತಲ್ಲಣ
ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ ಸರ್ಕಾರಗಳ ವೀಸಾ ನಿಯಮಗಳಲ್ಲಿ ಆಗಿರುವ ಬದಲಾವಣೆ ಭಾರತೀಯ ಐಟಿ ವಲಯದಲ್ಲಿ ಹೊಸ ತಲ್ಲಣ ಸೃಷ್ಟಿಸಿದೆ. ಕೌಶಲ, ಸಾಮರ್ಥ್ಯದ ಕೊರತೆ, ಅಧಕ್ಷತೆ, ಅಪ್ರಾಮಾಣಿಕತೆ, ನೌಕರರಲ್ಲಿ ಭಯ ಹುಟ್ಟಿಸಲು ಅಸ್ತವಾಗಿದ್ದ ಉದ್ಯೋಗ ಕಡಿತ, ಈಗ ಕಂಪನಿಗಳ ಭವಿಷ್ಯವನ್ನು ನಿರ್ಧರಿಸುವಂತಾಗಿದೆ. ದೇಶದ ಪ್ರಮುಖ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ನೇಮಕಾತಿ ಪ್ರಮಾಣವನ್ನು ತಗ್ಗಿಸಿವೆ. ಜೊತೆಗೆ ಔಟ್ ಸೋರ್ಸಿಂಗ್ ಲೆಕ್ಕಾಚಾರದಲ್ಲಿಯೂ ವ್ಯವಕಲನ ಮಾಡುತ್ತಿವೆ.
ಎಐಎಂಒ ವರದಿಯಲ್ಲೇನಿದೆ?
ಭಾರತದ ಮೂರು ಲಕ್ಷಕ್ಕೂ ಹೆಚ್ಚು ಕಿರು, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳನ್ನು ಪ್ರತಿನಿಧಿಸುವ ಅಖೀಲ ಭಾರತ ಉತ್ಪಾದಕರ ಸಂಘಟನೆ (ಆಲ್ ಇಂಡಿಯಾ ಮ್ಯಾನುಫ್ಯಾಕ್ಚರ್ ಆರ್ಗನೈಜೇಷನ್) ನಡೆಸಿರುವ ಅಧ್ಯಯನದ ಪ್ರಕಾರ ಕಿರು ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಸಂಸ್ಥೆಗಳು ತಮ್ಮ ನೌಕರರಲ್ಲಿ ಶೇ.30ರಷ್ಟು ಉದ್ಯೋಗ ಕಡಿತಗೊಳಿಸಲು ಚಿಂತಿಸಿವೆ.
ದೇಶದ ಮೂರನೇ ಸಾಪ್ಟ್ವೇರ್ ದೈತ ಕಂಪನಿ ವಿಪ್ರೋದಲ್ಲಿ ಸೇವೆಯಲ್ಲಿದ್ದ 600 ಮಂದಿ ಉದ್ಯೋಗಸ್ಥರನ್ನು ತೆಗೆದುಹಾಕಿದೆ. ಇನ್ನು ಹೆಚ್ಚು ನೌಕರರನ್ನು ತೆಗೆಯಲು ಚಿಂತಿಸಿದೆ ಎನ್ನಲಾಗಿದೆ.
2015-16 ರಲ್ಲಿ ಇನ್ಫೋಸಿಸ್ ಕಂಪನಿಯು 17,857 ಎಂಜಿನಿಯರ್‌ಗಳ ನೇಮಕಾತಿ ಮಾಡಿಕೊಂಡಿತ್ತು. ಆದರೆ 2016-17ರಲ್ಲಿ ನೇಮಕಾತಿಯನ್ನು 6,320ಗೆ ಇಳಿಸಿದೆ.
ಫ್ರಾನ್ಸ್ ಮೂಲದ ಕ್ಯಾಪ್ ಜೆಮಿನಿ ಸಂಸ್ಥೆ ಹೊರಗುತ್ತಿಗೆ ರೂಪದಲ್ಲಿ ಶೇ.40ರಷ್ಟು ಸಿಬ್ಬಂದಿ ನೇಮಕವನ್ನು ಶೇ, 15 ರಷ್ಟಕ್ಕೆ ಇಳಿಸಿದೆ.
ಮೈಕ್ರೋಸಾಪ್ಟ್, ಸಿಸ್ಕೋ ಸಿಟ್ಟವ್,ಲಾರ್ಸರ್ ಅಂಡ್ ಟ್ಯೂಬ್ರೋ, ಸ್ನಾಪ್‌ಡೀಲ್ ಇತರ ಎಂಜಿನಿಯರಿಂಗ್ ದೈತ್ಯ ಸಂಸ್ಥೆಗಳು 2017ರಲ್ಲಿ ಉದ್ಯೋಗ ಕಡಿತ ಮಾಡಲಿವೆ ಎನ್ನಲಾಗಿದೆ.
– ಎನ್. ಅನಂತನಾಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.