ಕಬಡ್ಡಿ, ಕಬಡ್ಡಿ
Team Udayavani, Nov 27, 2017, 1:52 PM IST
ಒಂದು ಸಾಲದ ಅವಧಿಯಲ್ಲಿ ಹಣಕಾಸು ಮಾರುಕಟ್ಟೆಯ ಏರು ಪೇರುಗಳ ಅನ್ವಯ ಬಡ್ಡಿಯ ದರ ನಿರಂತರವಾಗಿ ಬದಲಾಗುತ್ತಿದ್ದರೆ, ಅದನ್ನು ಬದಲಾಗುವ ಬಡ್ಡಿದರ ಎನ್ನುತ್ತಾರೆ. ಇದು ಸಾಮಾನ್ಯವಾಗಿ ಸ್ಥಿರ ಬಡ್ಡಿದರಕ್ಕಿಂತ ಕಡಿಮೆ ಇದ್ದು, ಗ್ರಾಹಕರನ್ನು ಆಕರ್ಷಿಸುತ್ತದೆ.
ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡರೆ, ಸಾಮಾನ್ಯವಾಗಿ ಸಾಲ ಮಾಡಿದ ದಿನದಿಂದ, ಸಾಲ ತೀರುವವರೆಗೆ ಆ ಸಾಲಕ್ಕೆ ನೀಡುವ ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆ ಬಡ್ಡಿದರ ಸ್ಥಿರ. ಕೆಲವು ಸಂದರ್ಭದಲ್ಲಿ, ಸಾಲದ ಉದ್ದೇಶ ತಪ್ಪಾಗಿ ನಮೂದಾಗಿದ್ದರೆ ಅಥವಾ ಸಾಲಗಾರನ ಕೆಟಗರಿ ನಮೂದಾಗಿರದಿದ್ದು, ಅದನ್ನು ಸರಿಪಡಿಸಿದಾಗ ಬಡ್ಡಿದರ ಬದಲಾಗುವ ಸಾಧ್ಯತೆಗಳಿರುತ್ತವೆ. ಹಾಗೆಯೇ, ಕೆಲವು ಬಾರಿ ಆಡಳಿತವರ್ಗದ ವಿಶೇಷ ಅಧಿಕಾರದಿಂದ ಬಡ್ಡಿದರ ಕಡಿಮೆಯಾಗುವುದನ್ನೂ ಅಲ್ಲಗೆಳೆಯಲಾಗದು. ಒಮ್ಮೊಮ್ಮೆ ನ್ಯಾಯಾಲಯದ ಆದೇಶದ ಮೇರೆಗೆ ಅಥವಾ ಅನುತ್ಪಾದಕ ಅಥವಾ ಸುಸ್ತಿ ಸಾಲದ ವಸೂಲಿಯನ್ನು ನ್ಯಾಯಾಲಯದ ಹೊರಗೆ ಸೆಟ್ಲ ಮಾಡುವಾಗ ಹಾಗೆಯೇ, ಏಕಬಾರಿ ತೀರುವಳಿ ಸಂದರ್ಭದಲ್ಲೂ ಬಡ್ಡಿದರದಲ್ಲಿ ಬದಲಾವಣೆ ಅಥವಾ ಕಡಿತಗಳಾಗುತ್ತದೆ.
ಈ ಪರಿಸ್ಥಿತಿ 2000 ನೇ ಇಸ್ವಿಯವರೆಗೆ ಇದ್ದು, ಇದನ್ನು ಸ್ಥಿರ ಬಡ್ಡಿದರದ ಕಾಲ ಎಂದು ಕರೆಯುತ್ತಿದ್ದರು. ಪರಿಸ್ಥಿತಿಯು ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಬದಲಾಗುತ್ತಿರುವ ಚಿಂತನೆಯಂತೆ ಅದೂ ಬದಲಾಗುತ್ತಿರುತ್ತದೆ. ಬ್ಯಾಂಕುಗಳು ತಾವು ಸ್ವೀಕರಿಸಿದ ಠೇವಣಿಯನ್ನು ಗ್ರಾಹಕರಿಗೆ ಸಾಲವಾಗಿ ನೀಡುತ್ತವೆ. ಠೇವಣಿ ಸಾಮಾನ್ಯವಾಗಿ ಅಲ್ಪಕಾಲೀನ ಸಾಲಗಳು ದೀರ್ಘ ಕಾಲೀನವಾಗಿರುತ್ತಿದ್ದು, ಬ್ಯಾಂಕುಗಳಿಗೆ ಸಾಲ ಮತ್ತು ಸ್ವತ್ತುಗಳ ಮಿಸ್ ಮ್ಯಾಚ್ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ನಿವಾರಿಸಿರಿಸಿಕೊಳ್ಳಲು 2000ರಲ್ಲಿ ಬ್ಯಾಂಕುಗಳು ಕೆಲವು ವಿದೇಶಿ ಬ್ಯಾಂಕುಗಳಂತೆ ಬದಲಾದವು.
ಸ್ಥಿರ ಮತ್ತು ಬದಲಾಗುವ ಬಡ್ಡಿದರಗಳೆಂದರೇನು?
ಸಾಲದ ಅವಧಿ ಪೂರ್ತಿ ಮುಗಿಯುವವರೆಗೆ ಮತ್ತು ಸಾಲ ಪೂರ್ತಿ ಮರುಪಾವತಿ ಆಗುವವರೆಗೆ ಸಾಲದ ಮೇಲಿನ ಬಡ್ಡಿದರ ಬದಲಾಗದಿದ್ದರೆ, ಸಾಲ ನೀಡುವಾಗ ನಿಗದಿ ಪಡಿಸಿದ ಬಡ್ಡಿದರವೇ ಕೊನೆಯತನಕ ಖಾಯಂ ಇದ್ದರೆ, ಅಂಥ ಬಡ್ಡಿಯನ್ನು ಸ್ಥಿರ ಬಡ್ಡಿದರ ಎನ್ನುತ್ತಾರೆ. ಸ್ಥಿರ ಬಡ್ಡಿದರವನ್ನು ಫಿಕ್ಸ್ ಮಾಡುವಾಗ ಆಗ ಪ್ರಚಲಿತ ಇರುವ ಮಾರುಕಟ್ಟೆ ಪರಿಸ್ಥಿತಿ, ಬ್ಯಾಂಕಿನ ಒಟ್ಟಾರೆ ಹಣಕಾಸು ಪರಿಸ್ಥಿತಿ, ಮಾರ್ಜಿನ್ ಮತ್ತು ಸ್ಪ್ರೆಡ್ ಅನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಬಡ್ಡಿದರ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ಏರುವ ಸೂಚನೆ ಇದ್ದರೆ, ಫಿಕ್ಸೆಡ್ ಬಡ್ಡಿದರ ಗ್ರಾಹಕನಿಗೆ ಪಾಲಿಗೆ ಲಾಭಕರ. ಬಡ್ಡಿದರ ಇಳಿಯುವ ಲಕ್ಷಣ ಇದ್ದರೆ, ಗ್ರಾಹಕನಿಗೆ ನಷ್ಟವಾಗುವ ಸಂಭವ ಹೆಚ್ಚು. ಸಾಮಾನ್ಯವಾಗಿ ಸ್ಥಿರ ಬಡ್ಡಿದರ ಬದಲಾಗುವ ಬಡ್ಡಿದರ ಕ್ಕಿಂತ ಶೇ.1 ರಿಂದ 2.50 ರಷ್ಟು ಹೆಚ್ಚಿಗೆ ಇರುತ್ತದೆ. ಬ್ಯಾಂಕುಗಳಲ್ಲಿ ಬಡ್ಡಿದರ ಏರಿದರೆ ಗ್ರಾಹಕನಿಗೆ ಲಾಭವಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಕೆಲವು ಬ್ಯಾಂಕುಗಳು ಮಾತ್ರ ಸ್ಥಿರ ಬಡ್ಡಿದರ ದ ಸೌಲಭ್ಯವನ್ನು ಕೊಡುತ್ತಿವೆ. ಬಹುತೇಕ ಎಲ್ಲಾ ಬ್ಯಾಂಕುಗಳು ಬದಲಾಗುವ ಬಡ್ಡಿದರವನ್ನು ನಿಗದಿಪಡಿಸುತ್ತವೆ. ಈ ಸ್ಥಿರ ಬಡ್ಡಿದರದ ಅನುಕೂಲ ಏನೆಂದರೆ ಗ್ರಾಹಕ ನಿಖರವಾಗಿ ತನ್ನ ಸಾಲದ ಮತ್ತು ಬಡ್ಡಿಯ ಬಾಕಿಯನ್ನು ತಿಳಿದು ಕೊಳ್ಳಬಹುದು. ಇದರಿಂದ ತನ್ನ ವೈಯಕ್ತಿಕ ಹಣಕಾಸು ಯೋಜನೆಯನ್ನು ರೂಪಿಸಿಕೊಳ್ಳಬಹುದು . ಬಡ್ಡಿದರ ಹೆಚ್ಚಾಗಿ ತನ್ನ ಮಾಸಿಕ EMI ಹೆಚ್ಚಳವಾಗಿ ವೈಯಕ್ತಿಕ ಹಣಕಾಸು ಫೈನಾನ್ಸ ಅಸ್ತವ್ಯಸ್ತವಾಗುವ ಸಂಭವ ಕಡಿಮೆ. ಬಡ್ಡಿದರ ತುಂಬಾ ಕೆಳಮಟ್ಟದಲ್ಲಿದ್ದು, ಭವಿಷ್ಯದಲ್ಲಿ ಏರುವ ಸೂಚನೆ ಇದ್ದರೆ ಮತ್ತು ಗ್ರಾಹಕ ತನ್ನ ಸಂಪೂರ್ಣ ಸಾಲವನ್ನು ಸದ್ಯದಲ್ಲಿಯೇ ಪೂರ್ಣವಾಗಿ ತೀರಿಸುವ ಇಚ್ಚೆ ಇದ್ದರೆ, ಸ್ಥಿರ ಬಡ್ಡಿದರ ಗ್ರಾಹಕನಿಗೆ ಲಾಭದಾಯಕವಾಗಿರುತ್ತದೆ.
ಬದಲಾಗುವ ಬಡ್ಡಿದರ
ಒಂದು ಸಾಲದ ಅವಧಿಯಲ್ಲಿ ಹಣಕಾಸು ಮಾರುಕಟ್ಟೆಯ ಏರು ಪೇರುಗಳ ಅನ್ವಯ ಬಡ್ಡಿಯ ದರ ನಿರಂತರವಾಗಿ ಬದಲಾಗುತ್ತಿದ್ದರೆ, ಅದನ್ನು ಬದಲಾಗುವ ಬಡ್ಡಿದರ ಎನ್ನುತ್ತಾರೆ. ಇದು ಸಾಮಾನ್ಯವಾಗಿ ಸ್ಥಿರ ಬಡ್ಡಿದರಕ್ಕಿಂತ ಕಡಿಮೆ ಇದ್ದು, ಗ್ರಾಹಕರನ್ನು ಆಕರ್ಷಿಸುತ್ತದೆ. ಹಣಕಾಸು ಮಾರುಕಟ್ಟೆಯಲ್ಲಿ ಬಡ್ಡಿದರ ಕುಸಿದರೆ, ಅದರ ಲಾಭ ಗ್ರಾಹಕನಿಗೆ ಆಗುತ್ತದೆ. ಆತನ ಸಾಲದ ಮಾಸಿಕ ಕಂತುಗಳು ಕಡಿಮೆಯಾಗುತ್ತವೆ. ಅಕಸ್ಮಾತ್ ಹಣಕಾಸು ಮಾರುಕಟ್ಟೆ ಯಲ್ಲಿ ಬಡ್ಡಿದರ ಉತ್ತರಮುಖೀಯಾದರೆ, ಗ್ರಾಹಕನು ಹೆಚ್ಚಿನ ಬಡ್ಡಿದರ ನೀಡಬೇಕಾಗಿದ್ದು, ಆತನ ಮಾಸಿಕ ಕಂತುಗಳು ಹೆಚ್ಚಾಗುತ್ತವೆ. ಬಡ್ಡಿದರ ರಿಸರ್ವ್ ಬ್ಯಾಂಕ್‌ನ ಬೇಸ್ ರೇಟ್ ಅನ್ನು ಅವಲಂಭಿಸಿರುತ್ತದೆ. ರಿಸರ್ವ್ ಬ್ಯಾಂಕ್ ಬೇಸ್‌ರೇಟ್ ಅನ್ನು ಬದಲಿಸಿದಾಗಲೆಲ್ಲಾ, ಬ್ಯಾಂಕುಗಳ ಬದಲಾಗುವ ಬಡ್ಡಿದರ ಬದಲಾಗುತ್ತದೆ. ಇದು ಹೆಚ್ಚಾಗಬಹುದು ಅಥವಾ ಕಡಿಮೆಯಾಗಲೂಬಹುದು. ಸದ್ಯ ಬಡ್ಡಿದರ ಇಳಿಯುತ್ತಿದ್ದು, ಗ್ರಾಹಕನಿಗೆ ಅನುಕೂಲವಾಗುವ ಸಂಭವ ಹೆಚ್ಚು. ಅದರೆ, ಸ್ಥಿರ ಬಡ್ಡಿದರ ಅಥವಾ ಬದಲಾಗುವ ಬಡ್ಡಿದರಗಳಲ್ಲಿ ಯಾವುದು ಒಳ್ಳೆಯದು ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಇದು ಹಲವು ಸದಾ ಬದಲಾಗುವ ಹಣಕಾಸು ಮಾರುಕಟ್ಟೆ ಪರಿಸ್ಥಿತಿಯ ಮೇಲೆ , ಸರ್ಕಾರ ಮತ್ತು ರಿಸರ್ವ್ ಬ್ಯಾಂಕುಗಳ ನೀತಿ-ನಿಯಮಾವಳಿ, ಧೋರಣೆಗಳನ್ನು ಅವಲಂಭಿಸಿರುತ್ತದೆ. ಒಬ್ಬ ಗ್ರಾಹಕ 20 ಲಕ್ಷ ಸಾಲವನ್ನು ಶೇ.10.15ರಷ್ಟು ಫ್ಲೋಟಿಂಗ್ ರೇಟ್‌ನಲ್ಲಿ ಹತ್ತು ವರ್ಷಗಳಿಗೆ ತೆಗೆದುಕೊಂಡರೆ, ಆತನಿಗೆ ಮಾಸಿಕ ಕಂತು 26,590ರೂ. ನಿಗದಿಯಾಗುತ್ತದೆ. ಇದೇ ಸಾಲವನ್ನು ಶೇ.12ರ ಸ್ಥಿರ ಬಡ್ಡಿ ದರದಲ್ಲಿ ತೆಗೆದುಕೊಂಡರೆ ಮಾಸಿಕ ಕಂತು 28,690ರೂ. ಆಗುತ್ತದೆ. 10 ವರ್ಷದ ಸಾಲದ ಅವಧಿಯಲ್ಲಿ ಆ ಗ್ರಾಹಕ ತಿಂಗಳಿಗೆ 2,100 ರಂತೆ 210000 ಉಳಿಸುತ್ತಾನೆ. ಇದು ಸಣ್ಣ ಮೊತ್ತವಲ್ಲ. ಅದರೆ, ಈ ಅವಧಿಯಲ್ಲಿ ಬಡ್ಡಿದರ ಹೆಚ್ಚಾದರೆ?
ದರ ಬದಲಿಸಿಕೊಳ್ಳಹುದೇ?
ಗ್ರಾಹಕ ತನ್ನ ಸಾಲವನ್ನು ಸ್ಥಿರ ಬಡ್ಡಿದರದಿಂದ ಬದಲಾಗುವ ಬಡ್ಡಿದರ ಮತ್ತು ಬದಲಾಗುವ ಬಡ್ಡಿದರದಿಂದ ಸ್ಥಿರ ಬಡ್ಡಿದರಕ್ಕೆ ಬದಲಿಸಿಕೊಳ್ಳಲು ಸಾಧ್ಯ. ಬದಲಾಗುವ ಬಡ್ಡಿದರದಿಂದ ಸ್ಥಿರ ಬಡ್ಡಿದರಕ್ಕೆ ಬದಲಾಯಿಸಿಕೊಳ್ಳಲು ಬ್ಯಾಂಕುಗಳು ಅನುಮತಿ ಕೊಡುತ್ತಿವೆ. ಬಾಕಿ ಇರುವ ಸಾಲದ ಮೊತ್ತದ ಮೇಲೆ ಶೇ. 1.75ರಿಂದ 2ರ ವರೆಗೆ ಶುಲ್ಕ ವಿಧಿಸುತ್ತವೆ. ಇದನ್ನು ಪರಿವರ್ತನಾ ಶುಲ್ಕ ಎಂದು ಕರೆಯುತ್ತಾರೆ. ಇದು ಬ್ಯಾಂಕ್ ನಿಂದ ಬ್ಯಾಂಕ್‌ಗೆ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ಕೆಲವು ಬ್ಯಾಂಕ್‌ಗಳು ಬಾಕಿ ಇರುವ ಸಾಲದ ಮೊತ್ತದ ಮೇಲೆ ಶೇ.0.50ರಷ್ಟು ಶುಲ್ಕವನ್ನು ತೆಗೆದುಕೊಳ್ಳುತ್ತವೆ. ಈ ಬದಲಾವಣೆ ಅಥವಾ ಪರಿವರ್ತನೆ ಕೇವಲ ಬಾಕಿ ಇರುವ ಸಾಲದ ಮೊತ್ತಕ್ಕಷ್ಟೇ ಸೀಮಿತವಾಗಿದ್ದು, ತೆಗೆದುಕೊಂಡ ಪೂರ್ತಿ ಸಾಲಕ್ಕೆ ಅನ್ವಯವಾಗುವುದಿಲ್ಲ. ಸ್ಥಿರ ಬಡ್ಡಿದರದ ಸಾಲವನ್ನು ಮೊದಲೇ ಕ್ಲೋಸ್ ಮಾಡುವುದು ಅಥವಾ ಬೇರೆ ಬ್ಯಾಂಕಿಗೆ ವರ್ಗಾಯಿಸುವುದು ಸ್ವಲ್ಪತುಟ್ಟಿಯಾಗುತ್ತದೆ.
ಈ ಶುಲ್ಕ ಶೇ.2 ರಿಂದ 4ವರೆಗೂ ಆಗಬಹುದು ಶೇ. 25 ನಿಂದ 1 ವರೆಗೆ ಪ್ರೊಸೆಸಿಂಗ್ ಶುಲ್ಕವನ್ನು ಇಂಥ ಪರಿವರ್ತನೆಯನ್ನು ಬ್ಯಾಂಕ್ ಗ್ರಾಹಕ ತನ್ನ ಹಕ್ಕೆಂದು ಕೇಳಲಾಗುವುದಿಲ್ಲ. ಇದು ಬ್ಯಾಂಕಿನ discretionary power ಗೆ ಸಂಬಂಧಪಟ್ಟ ವಿಷಯ. ಆದರೂ ಸಾಮಾನ್ಯವಾಗಿ ಬ್ಯಾಂಕುಗಳು ಈ ನಿಟ್ಟಿನಲ್ಲಿ ಗ್ರಾಹಕ ಸ್ನೇಹಿಯಾಗಿರುತ್ತವೆ. ಅದಕ್ಕೂ ಮೇಲಾಗಿ ಬದಲಾಗುವ ಬಡ್ಡಿದರದ ಪರಿಕಲ್ಪನೆ ಬಗೆಗೆ ಗ್ರಾಹಕರ ಒಲವು ಹೆಚ್ಚು ಎಂದು ಹೇಳಲಾಗುತ್ತಿದೆ. ಬಹುಶಃ ಹಣಕಾಸು ಮಾರುಕಟ್ಟೆಯಲ್ಲಿ ಬಡ್ಡಿದರ ಇಳಿಯುತ್ತಿರುವುದೇ ಈ ಕಾರಣಕ್ಕೆ ಎನ್ನುತ್ತಾರೆ ವಿಶ್ಲೇಷಕರು.
ಸ್ಥಿರ ಮತ್ತ ಬದಲಾಗುವ ಬಡ್ಡಿದರದ ಪರಿಕಲ್ಪನೆ. ಬ್ಯಾಂಕುಗಳು ನೀಡುವ ಸಾಲಗಳಿಗೆ ಅನ್ವಯವಾಗುತ್ತದೆ. ಈ ಬದಲಾಗುವ ಬಡ್ಡಿದರವನ್ನು ಈ ಮೊದಲು ರಿಸರ್ವ್ ಬ್ಯಾಂಕ್ ಬೇಸ್ ರೇಟ್ ಅನ್ನು ಬದಲಿಸಿದಾಗಲೆಲ್ಲಾ ಬ್ಯಾಂಕುಗಳು ಬದಲಿಸುತ್ತಿದ್ದವು. ಆದರೆ, ಈಗ ಈ ಬದಲಾವಣೆ ವರ್ಷಕ್ಕೊಮ್ಮೆ ಆಗುತ್ತಿದೆ. ಈ ಬದಲಾಗುವ ಬಡ್ಡಿದರ ಅಥವಾ fl oating rate of interest ಗ್ರಾಹಕರು ಇಡುವ ಠೇವಣಿಗೆ ಅನ್ವಯವಾಗುವುದಿಲ್ಲ. ಅದು ಎಂದಿನಂತೆ ಬ್ಯಾಂಕುಗಳ ಹಣಕಾಸು ಸ್ಥಿತಿ, ರಿಸರ್ವ್ ಬ್ಯಾಂಕ್ ನಿರ್ದೇಶನ, ಠೇವಣಿ ವೆಚ್ಚ ಮುಂತಾದ ಇನ್ನೂ ಹಲವು ದೇಶದ ಆರ್ಥಿಕ ಮಾನದಂಡಗಳ ಮೇಲೆ ಇರುತ್ತದೆ.
ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.