ಕರಿಕಾಲನ ಕಲ್ಲಣೆ ಹಾಗೂ ಕೆರೆಕಟ್ಟೆಯ ಕತೆಗಳು
Team Udayavani, Jan 22, 2018, 1:01 PM IST
ನದಿಗೆ ಒಡ್ಡು ನಿರ್ಮಿಸಿ ನೀರು ಗೆಲ್ಲುವ ತಂತ್ರಗಳು ಬದುಕು ಬದಲಿಸಿವೆ. ಸಂತೆ, ಸೇತುವೆ, ರಸ್ತೆಗಳು ಉತ್ಪಾದನೆ ವ್ಯವಹಾರಕ್ಕೆ ವೇಗ ನೀಡಿವೆ. ಹೇರೆತ್ತು, ಕುದುರೆ, ಚಕ್ಕಡಿಗಾಡಿಗಳ ಮೂಲಕ ಶುರುವಾದ ವ್ಯಾಪಾರ -ವ್ಯವಹಾರ ಕಣಿವೆ ಕಣಿವೆಗಳಿಗೆ ಬದಲಾವಣೆಯ ಹೊಸ ಚಕ್ರ ಜೋಡಿಸಿದೆ. ಬೆಳಕಾಗಿ, ಬದುಕಾಗಿ ಮನುಕುಲದ ಜೊತೆಯಾಗಿ ನೆರವಾದ ಕಾವೇರಮ್ಮನ ನೀರು ಹಿಡಿಯುವ ವಿದ್ಯೆ, ಚೋಳ ಅರಸರ ಕರಿಕಾಲನ ಕಲ್ಲಣೆಯಷ್ಟು ಹಳೆಯದಾಗಿದೆ.
ಓಡುವ ನೀರನ್ನು ನಡೆಯುವಂತೆ, ನಿಲ್ಲುವಂತೆ, ಇಂಗುವಂತೆ ಮಾಡಬೇಕೆಂದು ಜಲ ಸಂರಕ್ಷಣೆಯಲ್ಲಿ ಹೇಳುತ್ತೇವೆ. ಕಾವೇರಿ ಏಕೆ ಓಡುವೆ?…. ಎಂದು ಪ್ರಶ್ನಿಸಿ, ನದಿಯನ್ನು ಮೊದಲು ನಿಲ್ಲಿಸಿದ್ದು ದಕ್ಷಿಣ ಭಾರತವನ್ನು ಸುಮಾರು 400 ವರ್ಷ ಆಳಿದ ಚೋಳ ಅರಸು ಮನೆತನ. ಕ್ರಿ.ಶ 850-1250ರ ಸಮಯದಲ್ಲಿ ಆಳಿದ ಈ ರಾಜವಂಶ ಚೀನ, ಕಾಂಬೋಡಿಯಾ, ಜಾವಾ, ಬರ್ಮಾ ದೇಶಗಳ ಜೊತೆ ವ್ಯಾಪಾರ ಸಂಬಂಧ ಹೊಂದಿತ್ತು.
ಸಹ್ಯಾದ್ರಿಯ ತುದಿಯಿಂದ ಇಂದಿನ ತಮಿಳುನಾಡಿನ ಸಮುದ್ರ ತಟದವರೆಗೆ ಹಬ್ಬಿದ ಆಡಳಿತದಲ್ಲಿ ಮುತ್ತು, ಆನೆದಂತ, ಬಣ್ಣ ಹಾಕಿದ ಬಟ್ಟೆ, ರೇಷ್ಮೆ, ಮಸ್ಲಿನ್ ಬಟ್ಟೆಗಳು ರಪ್ತಾಗುತ್ತಿದ್ದವಂತೆ! ಕ್ರಿ.ಶ ಮೊದಲನೇ ಶತಮಾನದ ಕೊನೆಯಲ್ಲಿ ಆಳ್ವಿಕೆ ನಡೆಸಿದ ಚೋಳವೀರ ಕರಿಕಾಲ ಅರಸನ ಕಾಲದಲ್ಲಿ ತಮಿಳುನಾಡಿನ ತಂಜಾವೂರು ಸನಿಹದಲ್ಲಿ ಕಾವೇರಿಗೆ ಮೊದಲ ಕಲ್ಲಣೆ ನಿರ್ಮಿಸಲಾಯ್ತು. ನದಿಯ ಪ್ರವಾಹ ತಡೆದು ಆ ನೀರನ್ನು ಕಾಲುವೆಯಲ್ಲಿ ಹರಿಸಿ ಕೃಷಿಗೆ ನೆರವಾಗುವುದು ಕಲ್ಲಣೆಯ ಮುಖ್ಯ ಉದ್ದೇಶ.
17ನೇ ಶತಮಾನದಲ್ಲಿ ಈಜಿಪ್ಟ್ನಿಂದ ದೆಹಲಿಯ ಮೊಘಲ್ ಆಸ್ಥಾನಕ್ಕೆ ಬಂದ ರಾಯಭಾರಿ ದಕ್ಷಿಣ ಇಂಡಿಯಾದ ಕಲ್ಲಣೆ ನೋಡಲು ಬಯಸಿ ಕಾವೇರಿ ನದಿಗೆ ಬಂದಿದ್ದರು. ಗಂಗಾ ನದಿ ಕಾಲುವೆ ಯೋಜನೆಯ ಅಧಿಕಾರಿ ಬಾಯರ್ಡ್ ಸ್ಮಿತ್ ಕ್ರಿ.ಶ 1853ರಲ್ಲಿ ಕಲ್ಲಣೆಗಳನ್ನು ನೋಡಿ ಬರೆದ ವರದಿಯಲ್ಲಿ, ಹೊಸ ಮಾದರಿಯ ನೀರಾವರಿ ಅವಕಾಶ ಇಲ್ಲದ ಕಾಲದಲ್ಲಿ ಸ್ಥಳೀಯ ಕಲ್ಲು ಬಳಸಿ ನಿರ್ಮಿಸಿದ ಮಹತ್ಸಾದನೆ ಇದೆಂದು ಕೊಂಡಾಡಿದ್ದಾರೆ.
1600 ವರ್ಷಗಳ ಹಿಂದಿನ ಕಲ್ಲಣೆ ಕಾವೇರಿ ನದಿ ನೀರನ್ನು 1080 ಅಡಿ ಉದ್ದ, 40ರಿಂದ 60 ಅಡಿ ಅಗಲ, 15ರಿಂದ 18 ಅಡಿಯೆತ್ತರದ ಕಟ್ಟೆಯ ಮೂಲಕ ಹಿಡಿದಿದ್ದು ಆ ಕಾಲಕ್ಕೆ ತಾಂತ್ರಿಕವಾಗಿ ಬಹುದೊಡ್ಡ ಕೌಶಲ್ಯವಾಗಿ ಗಮನಸೆಳೆದಿತ್ತು. ಹೀಗಾಗಿ ಇದಕ್ಕೆ ವಿಶ್ವದ ಮೊದಲ ಅಣೆಕಟ್ಟು ಎಂಬ ಖ್ಯಾತಿ ಇದೆ. ನದಿ ಕಣಿವೆಯಲ್ಲಿ ರಾಜ್ಯವಾಳಿದ ಅರಸು ಮನೆತನದ ಇತಿಹಾಸದ ಪುಟಗಳಲ್ಲಿ ಕಾವೇರಿ ಶಕ್ತಿಶಾಲಿನಿಯಾಗಿ ಕಾಣಿಸುತ್ತಾಳೆ.
ಮೈಸೂರು ಪಶ್ಚಿಮ ಭಾಗದಿಂದ ಕೊಡಗಿನವರೆಗೆ ಆಳಿದ ಚೆಂಗಾಳ್ವರು ( ಕ್ರಿ,ಶ 1245), ಅರಕಲಗೋಡು-ಉತ್ತರ ಕೊಡಗಿನ ಕೊಂಗಾಳ್ವರು(ಕ್ರಿ,ಶ 1004), ಪಲ್ಲವ, ಗಂಗ, ಹೊಯ್ಸಳ ಸಾಮ್ರಾಜ್ಯಗಳನ್ನು ಕಾವೇರಿ ಪೋಷಿಸಿದೆ. ತುಂಗಭದ್ರಾ ತೀರದ ವಿಜಯನಗರ ಸಾಮ್ರಾಜ್ಯದ ವಿಸ್ತರಣೆಯನ್ನು ನದಿ ನಾಡು ಕಂಡಿದೆ. ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡಿನ ಗಡಿಯಾಗಿದ್ದು ಕಾವ್ಯಗಳಲ್ಲಿ ಚಿರಪರಿಚಿತವಾಗಿದೆ.
ಮೈಸೂರು ಅರಸರ ರಾಜಧಾನಿಯಾಗಿ ಶ್ರೀರಂಗಪಟ್ಟಣ ಮೆರೆದಿದೆ. ವಿಜಯನಗರ ಅರಸರ ಕಾಲದಲ್ಲಿ ಕಾವೇರಿ ಹಾಗೂ ಅದರ ಉಪನದಿಗಳಿಗೆ ಬಹುತೇಕ ಕಡೆಗಳಲ್ಲಿ ಅಣೆಕಟ್ಟುಗಳ ನಿರ್ಮಾಣವಾಗಿವೆ. ತಲಕಾಡಿನ ಮಾಧವಮಂತ್ರಿ ಕಟ್ಟೆ, ಶ್ರೀರಂಗಪಟ್ಟಣದ ಸನಿಹದ ಸೀತಾಪುರಕಟ್ಟೆಯನ್ನು ಇಲ್ಲಿ ಹೆಸರಿಸಬಹುದು. ಮಾಧವಮಂತ್ರಿ ಕಟ್ಟೆಯ ನೀರಿನಿಂದಾಗಿ ಟಿ. ನರಸಿಪುರ ಪ್ರದೇಶದಲ್ಲಿ ಭತ್ತ ಬೆಳೆಯಲು ಅನುಕೂಲವಾಯ್ತು.
ಜಂಗಮಕಟ್ಟೆ, ಕಾವೇರಿಗೆ ನಮ್ಮ ರಾಜ್ಯದಲ್ಲಿ ನಿರ್ಮಿಸಿದ ಮೊದಲ ಅಣೆಕಟ್ಟು ಎನ್ನಬಹುದು. ನಾಲ್ಕಡಿ ಉದ್ದದ ಕಲ್ಲು ಕಡಿದು ಇದನ್ನು ನಿರ್ಮಿಸಲಾಗಿದೆ. ಸಾವಿರಾರು ಬೃಹತ್ ಗಾತ್ರದ ಕಲ್ಲು ಸೇರಿಸಿ 10ನೇ ಶತಮಾನದಲ್ಲಿ ರಾಮನಾಥಪುರದ ಹತ್ತಿರ ವೀರಶೈವ ಸನ್ಯಾಸಿ ರುದ್ರಂಗಣಸ್ವಾಮಿಗಳು ನಿರ್ಮಿಸಿದ ಕಟ್ಟೆ ಇದು. ಈ ಗ್ರಾಮಕ್ಕೆ “ಕಟ್ಟೆಪುರ’ ಹೆಸರು ಬಂದಿದೆ. ತಲಕಾವೇರಿಯಿಂದ ಹೊಗೇನಕಲ್‌ವರೆಗಿನ ನದಿ ಪಾತ್ರದಲ್ಲಿ ಸುಮಾರು 12 ಅಣೆಕಟ್ಟುಗಳು ಶತಮಾನಗಳ ಹಿಂದೆ ರಚನೆಯಾಗಿವೆ.
ಕ್ರಿ.ಶ 1836ರಲ್ಲಿ ಗಂಗೇಕೊಂಡದ ಚೋಳಪುರದ ದೇಗುಲದ ಕಟ್ಟಡದ ಪ್ರಾಕಾರದ ಪೌಳಿ, ಗೋಪುರ ಕಟ್ಟಡದ ಕಲ್ಲು ಕಿತ್ತು ಕೆಳ ಅಣೆಯನ್ನು ನಿರ್ಮಿಸಲಾಯಿತಂತೆ. ಕ್ರಿ.ಶ 1769ರಲ್ಲಿ ನಾಲ್ಕು ಆಂಗ್ಲ ಮೈಸೂರು ಯುದ್ಧಗಳು ನಡೆದಿವೆ. ಆಗ ಜನ ಜೀವನ ಸಂಕಷ್ಟಕ್ಕೆ ಸಿಲುಕಿತು. ಆ ಸಂದರ್ಭದಲ್ಲಿ ಕೆರೆಕಟ್ಟೆಗಳ ನಾಶ ನಡೆದಿದೆ. ಕ್ರಿ.ಶ 1792ರಲ್ಲಿ ಕಾರ್ನವಾಲಿಸನು ಶ್ರೀರಂಗಪಟ್ಟಣಕ್ಕೆ ಸೇನೆ ನುಗ್ಗಿಸುತ್ತಿದ್ದನು.
ಶ್ರೀರಂಗಪಟ್ಟಣದಿಂದ ಪೂರ್ವಕ್ಕೆ 9 ಮೈಲು ದೂರದಲ್ಲಿ ಕಾವೇರಿಗೆ ಕಟ್ಟಿದ ಅರಕೆರೆಯ ಕಲ್ಲು ಅಣೆ ಗಮನಿಸಿದನು. ಕಟ್ಟೆಯ ಕೆಳಭಾಗದ ನದಿಯಲ್ಲಿ ಕಲ್ಲಿನ ರಾಶಿಗಳಿದ್ದುದರಿಂದ ಸಂಚಾರ ಕಷ್ಟವಾಯ್ತು. ಕಲ್ಲು ಅಣೆ ಒಡೆದರೆ ಸುಲಭವಾಗಿ ನದಿ ದಾಟಬಹುದೆಂದು ಯೋಚಿಸಿದರು. ಕಟ್ಟೆಯ ಕಲ್ಲು ಕಿತ್ತೆಸೆಯಲು ಪ್ರಯತ್ನಿಸಿದರು. ಕಲ್ಲು ಕೀಳಲಾಗಲಿಲ್ಲ. ನಿರ್ಮಾಣ ಅಷ್ಟು ಭದ್ರವಾಗಿತ್ತು. ಕ್ರಿ.ಶ 1800-1812ರ ಸುಮಾರಿಗೆ ದಿವಾನ್ ಪೂರ್ಣಯ್ಯನವರು ಹಳೆಯ ಜಲಾಶಯಗಳ ಜೀರ್ಣೋದ್ಧಾರ ಮಾಡಿದರು.
ಆಗ ಮೇಜರ್ ಸ್ಯಾಂಕಿ, ಮೈಸೂರಿನ ಮುಖ್ಯ ಎಂಜಿನಿಯರ್ ಅವರು ಕ್ರಿ.ಶ 1866ರಲ್ಲಿ ರಾಜ್ಯದ 19,223 ಕೆರೆಗಳ ಹೂಳು ತೆಗೆಯಲು 48 ಲಕ್ಷ ರೂಪಾಯಿಯ ಯೋಜನೆ ತಯಾರಿಸಿದರು. ಆದರೆ ಕೆರೆ ಹೂಳೆತ್ತುವ ಸ್ಯಾಂಕಿ ವರದಿ ಮೂಲೆಗುಂಪಾಯಿತು. ಕ್ರಿ.ಶ 1884ರಲ್ಲಿ ಪ್ರಜಾಪ್ರತಿನಿಧಿ ಸಭೆ ಉದ್ದೇಶಿಸಿ ಮಾತನಾಡಿರುವ ದಿವಾನ್ ಸರ್ ಶೇಷಾದ್ರಿ ಅಯ್ಯರ್ ಮೈಸೂರು ರಾಜ್ಯದಲ್ಲಿ 38,000 ಕೆರೆಗಳಿವೆ ಎಂದಿದ್ದಾರೆ.
ಅಂದರೆ ಚದರ ಮೈಲಿಗೊಂದು ಕೆರೆ ಇರುವ ಪ್ರದೇಶವಿದು. ಗುಡ್ಡದಲ್ಲಿ ಹರಿಯುವ ಮಳೆ ನೀರನ್ನು ನೇರವಾಗಿ ನದಿಗೆ ಹರಿಯಲು ಬಿಡದೇ ಕಾಲುವೆಗಳ ಮೂಲಕ ಒಂದಾದ ನಂತರ ಒಂದು ಕೆರೆಗೆ ಜೋಡಿಸುವುದು ಮೈಸೂರು ರಾಜ್ಯದ ವಿಶೇಷವಾಗಿದೆ. ಕಣಿವೆಯ ಕೆರೆ ಜಾಲಗಳ ಮೂಲಕ ಕೇಂದ್ರೀಕೃತ ಕೃಷಿ ನೀರಾವರಿ ತಂತ್ರಗಳನ್ನು ವ್ಯವಸ್ಥಿತವಾಗಿ ಅಳವಡಿಸಿದ ವಿಧಾನಗಳನ್ನು ನೀರಾವರಿ ಇತಿಹಾಸ ಎತ್ತಿ ಹೇಳುತ್ತಿದೆ.
ಕ್ರಿ.ಶ 1801ರಲ್ಲಿ ಮೈಸೂರು ಸುತ್ತಿದ ಪ್ರವಾಸಿ ಡಾ.ಫ್ರಾನ್ಸಿಸ್ ಬುಕಾನನ್ ಇಲ್ಲಿನ ಕೃಷಿ ಬದುಕನ್ನು ಕುರಿತು ಹೀಗೆ… ದಾಖಲಿಸಿದ್ದಾರೆ. “ರೈತರು ಕೆರೆಯ ನೀರನ್ನು ಅಂದಾಜಿಸುತ್ತಿದ್ದರು. ಇಡೀ ಅಚ್ಚುಕಟ್ಟಿನಲ್ಲಿ ಭತ್ತ ಬೆಳೆಯಲು ಸಾಕಾಗದಿದ್ದರೆ ಜೋಳ ಅಥವಾ ರಾಗಿ ಬೆಳೆಯುತ್ತಿದ್ದರು. ನೀರಿನ ಲಭ್ಯತೆ ತಿಳಿದು ಭತ್ತ ಬೆಳೆಯುತ್ತಿದ್ದರು. ಶ್ರೀರಂಗಪಟ್ಟಣದ ಸುತ್ತಮುತ್ತಲ ಒಂದೇ ಭೂಮಿಯಲ್ಲಿ ಕಬ್ಬನ್ನು ಯಾವಾಗಲೂ ಹಾಕುತ್ತಿರಲಿಲ್ಲ.
ನಡುನಡುವೆ ಮೂರು ಬೆಳೆಯನ್ನು ಹುಚ್ಚೆಳ್ಳು/ ಭತ್ತ ಇತ್ಯಾದಿ ಬೆಳೆದು ನಂತರ ಕಬ್ಬು ಬೆಳೆಯುತ್ತಿದ್ದರು. ಮಣ್ಣಿನ ಸಂರಕ್ಷಣೆ, ನೀರು ನಿರ್ವಹಣೆಯ ತಂತ್ರಗಳನ್ನು ರೈತರು ಕಲಿತಿದ್ದರು’. ಕಾವೇರಿಗೆ ನಿರ್ಮಿಸಿದ ಕಲ್ಲಣೆ, ಕಾಂಕ್ರೀಟ್ ಅಣೆಕಟ್ಟುಗಳು ಆಧುನಿಕ ಕರ್ನಾಟಕದ ದೇಗುಲಗಳಾಗಿ ಹಸಿರು ವರ ನೀಡುತ್ತಿವೆ. ಕ್ರಿ.ಶ 1881ರಲ್ಲಿ 30,000 ಚದರ ಮೈಲು ವಿಸ್ತೀರ್ಣದ ಮೈಸೂರು ರಾಜ್ಯ ಬಹಳ ಹಿಂದುಳಿದಿತ್ತು.
55 ಲಕ್ಷ ಜನಸಂಖ್ಯೆಯ ರಾಜ್ಯದ ವಾರ್ಷಿಕ ರಾಜಸ್ವ ವರಮಾನ ಕೇವಲ ಒಂದೂವರೆ ಕೋಟಿ ಮಾತ್ರ ಇತ್ತು. ಕೋಲಾರದ ಚಿನ್ನದ ಗಣಿ, ಶಿವಮೊಗ್ಗದ ಮ್ಯಾಂಗನೀಸ್ ಅದಿರಿನ ವಹಿವಾಟು. ಕೆಲವು ಹತ್ತಿ ಗಿರಣಿ ಬಿಟ್ಟರೆ ಬೇರೆ ಕೈಗಾರಿಕೆ ಇರಲಿಲ್ಲ. ಇಂದು ಶ್ರೀ ಮಂತನಾಡಾಗಿ ಮೈಸೂರು ಬೆಳೆಯಲು ಕಾವೇರಮ್ಮನ ಮಡಿಲಲ್ಲಿ ರೂಪಿಸಿದ ಕೆರೆ ಕಟ್ಟೆಗಳು ಕಾರಣವೆಂಬುದನ್ನು ಮರೆಯಲಾಗದು.
ಕಬಿನಿ, ಹಾರಂಗಿ, ಹೇಮಾವತಿ, ಕೃಷ್ಣರಾಜಸಾಗರದ ಅಣೆಕಟ್ಟೆಗಳಲ್ಲಿ ನದಿ ನೀರು ಹಿಡಿದು ವಿದ್ಯುತ್ ಉತ್ಪಾದನೆ , ಕೃಷಿಗಾಗಿ ಬಳಸುವ ಪ್ರಯತ್ನ ರಾಜ್ಯವನ್ನು ಪ್ರಗತಿಯತ್ತ ಒಯ್ದಿವೆ. ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಗಳ ಮೂಲಕ ಜನರಿಗೆ ಕೆಲಸ ದೊರೆಯಲು ಕಾವೇರಿ ನದಿಯ ಕೊಡುಗೆ ಅಪಾರವಾಗಿದೆ. ಅಮೂಲ್ಯವಾಗಿದೆ.
“ಕಾಡೇ ನದಿಗಳ ತಾಯಿ, ನದಿ ನಾಡಿನ ಜೀವನಾಡಿ’ ಎಂಬ ಸತ್ಯ ಕಾವೇರಮ್ಮನ ಮಡಿಲ ಮಕ್ಕಳಿಗೆಲ್ಲ ಗೊತ್ತಿದೆ. ಕೊಡಗು, ಹಾಸನ, ಮೈಸೂರು, ಮಂಡ್ಯ, ಬೆಂಗಳೂರಿನ ಬದುಕು ಕಾವೇರಿಯ ಮೇಲೆ ನಿಂತಿದೆ. ಜಲಸಂರಕ್ಷಣೆಯ ವಿಚಾರದಲ್ಲಿ ಶತಮಾನಗಳಿಂದ ಪಾಠ ಕಲಿತ ನಾವು ಇಂದು ನೀರಿನ ನೋವು ಅನುಭವಿಸುತ್ತಿದ್ದೇವೆಂದರೆ ನಾವು ನದಿ ಪರಿಸರವನ್ನು ಸರಿಯಾಗಿ ಓದಿಲ್ಲ. ಸಂರಕ್ಷಣೆಗೆ ಜಾಗೃತರಾಗಿಲ್ಲ ಎಂದೇ ಅರ್ಥ.
* ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.