ಕಾವೇರಮ್ಮನ “ಕಾಫೀ-ಕಬ್ಬು’
Team Udayavani, Feb 5, 2018, 3:15 PM IST
ಪ್ರವಾಹದ ಅಬ್ಬರದಿಂದ ಸಂಕಷ್ಟ ಅನುಭವಿಸುತ್ತಿದ್ದ ನದಿ ದಂಡೆಯ ಹಳ್ಳಿಗಳಲ್ಲಿ ಕಲ್ಲಣೆಯಿಂದ ನೀರಾವರಿ ಪ್ರಯತ್ನಗಳು ಶುರುವಾದವು. ಕಾವೇರಿ ನದಿಯಲ್ಲಿ ಕ್ರಿ.ಶ 1924ರಲ್ಲಿ ಭಾರೀ ಪ್ರವಾಹ ಬಂದಿತು. ಬೃಹತ್ ಅಣೆಕಟ್ಟು ನಿರ್ಮಾಣದ ಮೂಲಕ ನೀರು ಹಿಡಿಯುವ ಚಿಂತನೆಯೂ ಆನಂತರದಲ್ಲಿ ಬೆಳೆಯಿತು. ಮಳೆ ನೀರು ಅಣೆಕಟ್ಟೆಗಳಲ್ಲಿ ನಿಂತು ಕೃಷಿ, ಉದ್ಯಮದ ಆರ್ಥಿಕತೆಯ ಮೂಲವಾಯ್ತು. ನದಿ ಮೂಲದಲ್ಲಿ ಕಾಫಿ, ಮಂಡ್ಯದ ಬಯಲಲ್ಲಿ ಭತ್ತ, ಕಬ್ಬಿಗೆ ನೆರವಾಗುತ್ತಿದ್ದ ಕಾವೇರಿ ಈಗ ಮಹಾನಗರಗಳಿಗೆ ಕುಡಿಯುವ ನೀರು ಒದಗಿಸಬೇಕು. ನದಿ ಒಣಗಿದಂತೆ ಜನ ಜೀವನವೂ ಬಡವಾಗುತ್ತಿದೆ.
ನ್ಯಾಯಾಲಯಗಳಲ್ಲಿ ನೀರಿನ ಹಕ್ಕು ಕೇಳುವ ನಾವು ಅರಣ್ಯ ಸಂರಕ್ಷಣೆಯ ಕರ್ತವ್ಯದ ಬಗೆಗೂ ಗಮನಹರಿಸಬೇಕಲ್ಲವೇ?
“ಕನ್ನಂಬಾಡಿಯ ಕಟ್ಟದಿದ್ದರೆ….’ ಹಾಡಿನ ಸಾಲು ಕಾವೇರಿ ನದಿಗೆ ನಿರ್ಮಿಸಲಾದ ಅಣೆಕಟ್ಟು ನಾಡಿನ ಜನರ ಬದುಕನ್ನು ಹೀಗೆಲ್ಲ ಬದಲಿಸಿತು ಎಂಬುದರ ಮಹತ್ವವನ್ನು ಸಾರುತ್ತದೆ. ಸುಮಾರು 760 ಕಿಲೋ ಮೀಟರ್ ಉದ್ದದ ಈ ನದಿ ರಾಜ್ಯದಲ್ಲಿ 320 ಕಿಲೋ ಮೀಟರ್ ಹರಿಯುತ್ತದೆ. ನದಿ ಜಲಾಯನದ ವಿಸ್ತೀರ್ಣ 3,613 ಚದರ ಕಿಲೋ ಮೀಟರ್, ಅಂದರೆ ರಾಜ್ಯದ ಜಲಾನಯನದಲ್ಲಿ ಶೇಕಡಾ 18.84ರಷ್ಟು ಪ್ರದೇಶ ಕಾವೇರಿಯದಾಗಿದೆ. ನಾಲ್ಕೈದು ಸಾವಿರ ಮಿಲಿ ಲೀಟರ್ ಅಬ್ಬರದ ಮಳೆ ಸುರಿಯುವ ಬ್ರಹ್ಮಗಿರಿ ಬೆಟ್ಟದಿಂದ ತಮಿಳುನಾಡು ಗಡಿಯ ಹೊಗೇನಕಲ್ ಜಲಪಾತದವರೆಗಿನ ಪ್ರದೇಶದಲ್ಲಿ ಸುರಿವ ಹನಿ ಜಲಸಿರಿಯಾಗಿದೆ. ಹೇಮಾವತಿ, ಲಕ್ಷ್ಮಣತೀರ್ಥ, ಹಾರಂಗಿ, ಕಬಿನಿ, ಸುವರ್ಣಾವತಿ, ಲೋಕಪಾವನಿ, ಶಿಂಷಾ, ಅರ್ಕಾವತಿ ಎಂಬ ಉಪನದಿಗಳೆಲ್ಲ ಕಾವೇರಮ್ಮನ ಜೊತೆ ಒಂದಾಗಿ ಸೀಮೆ ಶ್ರೀಮಂತವಾಗಿದೆ. ಇಡೀ ಕಣಿವೆಯಲ್ಲಿ ಹೆಚ್ಚಿನ ಮಳೆ ಮಡಿಕೇರಿಯಲ್ಲಿ ಸುರಿಯುವುದರಿಂದ ‘ ಮಡಕೇರಿಯಲ್ಲಿ ಮಳೆಯಾದರೆ ಚೋಳನಾಡಿನಲ್ಲಿ ಅನ್ನ ದೊರೆಯುತ್ತದೆ’ ಮಾತು ಶತಮಾನಗಳಿಂದ ರೂಢಿಯಲ್ಲಿದೆ.
ಪ್ರವಾಹ ಕಾಲದಲ್ಲಿ ನಿಮಿಷಕ್ಕೆ 2,50,000 ಘನ ಅಡಿ ನೀರು ( ಒಂದು ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಒಂದು ಕ್ಯುಸೆಕ್ಸ್, ಒಂದು ಘನ ಅಡಿಯೆಂದರೆ 28.3 ಲೀಟರ್) ಹರಿಯುವ ಇಲ್ಲಿ ಬೇಸಿಗೆಯಲ್ಲಿ ಒಂದು ಸಾವಿರ ಘನ ಅಡಿಯೂ ಇರುವುದಿಲ್ಲ. ಗುಡ್ಡಗಾಡಿನ ಪ್ರದೇಶದಲ್ಲಿ ಬಿದ್ದ ಮಳೆ, ಹಳ್ಳಗಳನ್ನು ಸೇರಿ ವೇಗವಾಗಿ ಸಾಗುತ್ತದೆ. ಅರಣ್ಯಗಳಲ್ಲಿ ಇಂಗಿದ ನೀರು ಒರತೆಯಾಗಿ ಝರಿ, ತೊರೆಗಳಾಗಿ ನಿಧಾನ ಗತಿ ಸಂಚಾರದಿಂದ ಬೇಸಿಗೆಯಲ್ಲಿ ಒಂದಿಷ್ಟು ಉಳಿಯುತ್ತದೆ.
ಕಾವೇರಿಯ ಶತಮಾನದ ವೈಭವದ ಪುಟ ತೆಗೆದರೆ ಆಗೆಲ್ಲಾ ನೀರಿನ ಬಳಕೆ ಇಷ್ಟಿರಲಿಲ್ಲ. ನದೀಪಾತ್ರದಲ್ಲಿ, ನಗರಗಳಳಿÉ ಇಷ್ಟೊಂದು ಜನಸಂಖ್ಯೆಯೂ ಇರಲಿಲ್ಲ. ಹೇಮಾವತಿ ನದಿಗೆ ಗೊರೂರು ಸನಿಹದಲ್ಲಿ ಸೇತುವೆ ನಿರ್ಮಾಣ ಪೂರ್ವದಲ್ಲಿ ನದಿ ದಾಟಲು ದೋಣಿ, ಜಂಜಾಲು(ಸಾಗಡ)ಗಳ ಅಗತ್ಯವಿತ್ತು. ಕೊಡಗಿನ ಕಿತ್ತಳೆ ತುಂಬಿಕೊಂಡು ಮಡಿಕೇರಿ- ರಾಜಪೇಟೆ ಮಾರ್ಗವಾಗಿ ಹಾಸನಕ್ಕೆ ಹೋಗುವ ಎತ್ತಿನ ಗಾಡಿಗಳು ಗೊರೂರಿನಲ್ಲಿ ನದಿ ದಾಟಲು ಎರಡು ದೋಣಿಗಳನ್ನು ಒಟ್ಟಿಗೆ ಸೇರಿಸಿದ ಜಂಜಾಲು ಬಳಸುತ್ತಿದ್ದರು, ಅಷ್ಟೊಂದು ನೀರು ಹರಿಯುತ್ತಿತ್ತು. ಕೊಡಗುಸೋನೆ, ಐನೂರು ಸೋನೆ, ಗೌರಿಜಡೆಯೆಂಬ ಮಳೆ ಹೆಸರುಗಳು ಹಾಸನ, ಮೈಸೂರು ನಾಡಿಗೂ ಪರಿಚಿತವಾಗಿತ್ತು.
ಮಳೆ, ಪ್ರವಾಹದ ಸಂದರ್ಭದಲ್ಲಿ ನದಿ ದಡಮೀರಿ ಹರಿದು ಅಪಾರ ಹಾನಿಗಳಾಗುತ್ತಿದ್ದವು. ಆನಂತರದ ದಿನಗಳಲ್ಲಿಯೇ ಪ್ರವಾಹದ ನೀರನ್ನು ತಡೆದು ಅಕ್ಕಪಕ್ಕದ ಹಳ್ಳ, ಕಾಲುವೆಗಳ ಮೂಲಕ ಹರಿಸಿ ಪ್ರವಾಹ ನಿಯಂತ್ರಿಸಲು ಕಲ್ಲಣೆಗಳು ಶುರುವಾದವು. ಮೈಸೂರು ರಾಜ್ಯದಲಿ,É ಹಿಂದಿನಿಂದ ಚಿರಪರಿಚಿತ ‘ಕನ್ನಂಬಾಡಿ’ ಅಣೆಕಟ್ಟು, ಶ್ರೀರಂಗಪಟ್ಟಣದಿಂದ ಸುಮಾರು ಹತ್ತು ಮೈಲು ದೂರ. ಮೈಸೂರು ಸರಕಾರ ಇಲ್ಲಿ ವಿದ್ಯುತ್ ಉತ್ಪಾದನೆಯ ಬಗ್ಗೆ ಆಸಕ್ತಿವಹಿಸಿತು. ಅಂದು ಸರಕಾರದ ಉಪ ಮುಖ್ಯ ಇಂಜಿನಿಯರ್ ಎ.ಸಿ.ಜೆ.ಲಾಬನೀರ್ ವಿದ್ಯುತ್ ಉತ್ಪಾದನೆಯ ಯೋಜನೆ ತಯಾರಿಗೆ ವಿಶ್ವದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾದ ನಯಾಗರ ಸೇರಿದಂತೆ ಪ್ರಮುಖ ಜಲದ್ಯುತ್ ಘಟಕ ವೀಕ್ಷಿಸಿದರು. ಇದರ ಆಧಾರದಲ್ಲಿ ಕಾವೇರಿಯಲ್ಲಿ ವಿದ್ಯುತ್ ಉತ್ಪಾದಿಸಿ ಕೋಲಾರದ ಚಿನ್ನದ ಗಣಿಗೆ ಪೂರೈಸುವ ಯೋಜನೆ ಶುರುವಾಯ್ತು. ಯೋಜಿತ 4000 ಎಚ್.ಪಿ ವಿದ್ಯುತ್ ಉತ್ಪಾದನೆಗೆ 181 ಕ್ಯುಸೆಕ್ಸ್ ನೀರು ಬೇಕು. ನದಿಗೆ ಅಡ್ಡಲಾಗಿ ಮರಳ ಚೀಲಗಳ ಒಡ್ಡು ನಿರ್ಮಿಸಿ ಕ್ರಿ. ಶ. 1900 ಮಾರ್ಚ್ 24ರಂದು ಅಳೆದಾಗ 95 ಕ್ಯೂಸೆಕ್ಸ್ ನೀರಿರುವುದು ತಿಳಿಯಿತು. ಆದರೆ ವಿದ್ಯುತ್ ಉತ್ಪಾದನೆಗೆ ಇನ್ನೂ 86 ಕ್ಯೂಸೆಕ್ಸ್ ಕೊರತೆಯಾಯ್ತು. ಅಗತ್ಯವಿರುವ ನೀರನ್ನು ಪಡೆಯಲು ತಲಕಾಡಿನ ಮಾಧವಮಂತ್ರಿ ಕಟ್ಟೆಯ ಎತ್ತರ ಹೆಚ್ಚಿಸಲು ಸರ್. ಎಂ. ವಿಶ್ವೇಶ್ವರಯ್ಯ ಸಲಹೆ ನೀಡಿದರು. ಕ್ರಿ.ಶ. 1902 ಜೂನ್ 30ರಂದು ವಿದ್ಯುತ್ ಉತ್ಪಾದನೆ ಶುರುವಾಗಿ ಕೋಲಾರದ ಚಿನ್ನದ ಗಣಿಗೆ ಸರಬರಾಜಾಯಿತು. ಈ ನಿಟ್ಟಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯನವರ ಪ್ರಯತ್ನ ಸ್ಮರಣೀಯ. ಮುಂದೆ ಕ್ರಿ.ಶ 1905 ಆಗಸ್ಟ್ 5ರಂದು ಬೆಂಗಳೂರು ಸಿಟಿ ಮಾರ್ಕೆಟ್‌ನಲ್ಲಿ ಬೀದಿ ದೀಪಕ್ಕೆ ಕಾವೇರಿಯ ಬೆಳಕಾಯ್ತು. ಅಲ್ಲಿಂದ ಮುಂದೆ ವಿದ್ಯುತ್‌ಗಾಗಿ ಗಣಿ, ಹತ್ತಿ ಗಿರಣಿ, ಇತರ ಕೈಗಾರಿಕೆ ಬೇಡಿಕೆಗಳು ಹೆಚ್ಚಿದವು. ಮುಂದೆ ಕೃಷ್ಣರಾಜ ಸಾಗರ ಬೃಹತ್ ಅಣೆಕಟ್ಟು ಕ್ರಿ.ಶ 1911ರಿಂದ ಆರಂಭವಾಗಿ 1932ರಲ್ಲಿ ಮುಕ್ತಾಯವಾಯಿತು.
ಕಾವೇರಿ ಕಣಿವೆಯಲ್ಲಿ ಮುಖ್ಯ ಆರ್ಥಿಕ ಬೆಳೆಯಾಗಿ ಕಬ್ಬು ಇಂದು ಕಾಣಿಸುತ್ತಿದೆ. ಕಬ್ಬಿನ ಬೇಸಾಯಕ್ಕೆ ಭೂಮಿ ಹದಗೊಳಿಸುವ ತಂತ್ರಗಳು ಕ್ರಿ.ಶ 1801ರ ಬುಕಾನನ್ ದಾಖಲೆಗಳಲ್ಲಿ ಕಾಣಿಸುತ್ತದೆ. ಅಣೆಕಟ್ಟು ನೀರಾವರಿಯ ನಿಶ್ಚಿತ ಹರಿವು ದೊರಕಲು ಆರಂಭಿಸಿದಾಗ ಕಬ್ಬನ್ನು ಮಾತ್ರ ಬೆಳೆಯುವ ನೆಲೆಗಳು ವಿಸ್ತರಣೆಯಾದವು. ಪೂರಕವಾಗಿ ಸಕ್ಕರೆ ಕಾರ್ಖಾನೆಗಳು ಆರಂಭವಾದವು. “ಶಾಹೀ(ರಾಜ ಬೆಳೆ) ಕ್ರಾಪ್’ ಆಗಿ ಕಬ್ಬು ಕೃಷಿಕರ ಕೈ ಹಿಡಿಯಿತು. ಭತ್ತದ ಬೇಸಾಯದಲ್ಲಿ ನಾಟಿ ಕ್ರಮ ಪರಿಚಿತವಾಗಿ ಎಕರೆಗೆ ಹೆಚ್ಚು ಆದಾಯ ಪಡೆಯುವ ಕ್ರಮಗಳು ಜಾರಿಯಾದವು. ವರ್ಷಕ್ಕೆ ಎರಡು ಬೆಳೆ ತೆಗೆಯುವ ಅನುಕೂಲತೆಯಾಯ್ತು. ಹಾಸನ, ಮೈಸೂರು, ಮಂಡ್ಯದ ನದಿ ಕಣಿವೆಯ ಕೃಷಿ ಚಿತ್ರಗಳಲ್ಲಿ ಪರಿವರ್ತನೆಯಾಯಿತು. ಅಡಿಕೆ, ತೆಂಗು, ತರಕಾರಿ, ರೇಷ್ಮೆ ಹೀಗೆ ಹೊಸ ಹೊಸ ಬೆಳೆಯ ಅವಕಾಶಗಳು ವೃದ್ಧಿಸಿದವು.
ಬೆಂಗಳೂರು, ಚೆನೈನ ಬೃಹತ್ ಜನಸಂಖ್ಯೆಗೆ ಕುಡಿಯುವ ನೀರಿನ ಮೂಲ ಕಾವೇರಿ. ಕೃಷ್ಣರಾಜಸಾಗರ, ಮೆಟ್ಟೂರಿನ ಬೃಹತ್ ಅಣೆಕಟ್ಟೆಗಳು ಕೃಷಿ-ಜನಜೀವನ ಬದುಕಿನ ಜೀವಸೆಲೆಯಾಗಿವೆ. ಸಕ್ಕರೆ, ಕಾಫೀ, ತೆಂಗು, ತರಕಾರಿ, ಹೂ, ಹಣ್ಣು, ಹೈನು ಎಲ್ಲದರಲ್ಲಿಯೂ ಕಾವೇರಮ್ಮ ಕಾಣಿಸುತ್ತಾಳೆ. ಮನೆಗೆ ಬಳಸುವ ಪಿಠೊಪಕರಣ, ಕಾಗದ, ಕೈಗಾರಿಕೆ, ಕರಕುಶಲ ಉತ್ಪನ್ನಗಳ ಹಿಂದೆಯೂ ನದಿ ನೀರಿನ ಅಂಶವಿದೆ. ಆರೋಗ್ಯ, ಶಿಕ್ಷಣ, ಸಾರಿಗೆ ಎಲ್ಲದರ ಹಿಂದೆ ಮಹಾತಾಯಿ ಕಾವೇರಿಯ ಆಶೀರ್ವಾದವಿದೆ. ನದಿ ದಂಡೆಯ ಉದ್ದಕ್ಕೂ ಆಳಿದ ಅರಸುಕುಲ, ನಿರ್ಮಿಸಿದ ದೇಗುಲ, ಅರಣ್ಯ ಸಂಪತ್ತಿನ ಹಿಂದೆ ಜಲರಾಶಿಯ ಕೊಡುಗೆ ಇದೆ. ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತಳೆ, ಏಲಕ್ಕಿ, ಕಾಳುಮೆಣಸು, ಶ್ರೀಗಂಧ, ಜೇನು ವರಿಸಲು ಪದಗಳಿಲ್ಲ. ಕಾವೇರಿ ಮಡಿಲಲ್ಲಿರುವ ಮೀನು-ಜಮೀನಿನ ಬೆಲೆ ಕಟ್ಟಲಾಗದು. ದಿನಕ್ಕೆ 40-50 ಮೈಲು ಗಾಡಿ ಎಳೆದರೂ ಸುಸ್ತಾಗದ ಅಮೃತ್‌ಮಹಲ್ ಎತ್ತುಗಳು ಸೈನ್ಯದ ಶಕ್ತಿಯಾಗಿದ್ದು ಕಾವೇರಿಯ ನೆಲದ ಸತ್ವದಿಂದಲೇ !
ಕಾವೇರಿಯ ನೆನಪಿನ ನೆಂಟರ ಬಳಗಕ್ಕೆ ಮಿತಿ ಇಲ್ಲ, ಅದು ಮೈಸೂರು ರಾಜ್ಯದಲ್ಲಿ ಕ್ರಿ.ಶ 1892ರ ಪೂರ್ವದಲ್ಲಿದ್ದ ಶ್ರೀಗಂಧ ತೇಗದ ಅರಮನೆಯಲ್ಲಿ, ನಂತರ ಎದ್ದು ನಿಂತು ಇಂದಿಗೂ ದಸರಾ ಹಬ್ಬದ ಮೂಲಕ ವಿಶ್ವದ ಗಮನಸೆಳೆಯುವ ಶಕ್ತಿಕೇಂದ್ರವಾದ ಅರಮನೆ ವೈಭವಗಳಲ್ಲಿ ಕಾಣಿಸುತ್ತಿದೆ. ರಾಗಿ ಮುದ್ದೆ ಸೊಪ್ಪಿನ ಸಾರಿನಲ್ಲಿ, ಮೈಸೂರುಪಾಕಿನಲ್ಲಿ, ನದಿ ಮೂಲದ ಊರುಗಳ ಬೆರಕೆ ಸೊಪ್ಪಿನ ಅಡುಗೆಯಲ್ಲಿ, ಬನ್ನೂರು ಕುರಿ ತಳಿಯಲ್ಲಿ ಶ್ರೀಸಾಮಾನ್ಯರ ಜೀವನದ ಭಾಗವಾಗಿದೆ.
ಮಳೆ ಇಲ್ಲದ ಕಾಲಕ್ಕೆ ಬದುಕುವ ದಾರಿ ತೋರಿಸಿದ ಅಕ್ಕಡಿ ಬೇಸಾಯ ತಂತ್ರಗಳಲ್ಲಿ, ದನಕರು ಉಳಿಸಲು ರಾಗಿ ಗರಿ ಮೇಯಿಸುವ ಜಾಣ್ಮೆಯಲ್ಲಿ, ರಾಮನಗರದ ರೇಷ್ಮೆ- ಮೈಸೂರು ಪೇಟಾಗಳಲ್ಲೆಲ್ಲ ಸಿಗುವವಳು ಅಪ್ಪಟ ಕಾವೇರಿ. ಕೃಷಿ, ಕೈಗಾರಿಕೆ, ಕಲೆ, ಕೂಲಿ ಯಾವುದೇ ಕೆಲಸ ಇರಲಿ, ದಿನದ ಬದುಕು ಶುರುವಾಗುವುದು ಕಾವೇರಿಯಿಂದಲೇ ! ಒಂದು ಕಾಲದಲ್ಲಿ ಹೊಯ್ಸಳ ಶಿಲ್ಪದ ಜಕಣಾಚಾರಿಯ ಕೌಶಲದಲ್ಲಿ, ಭರತನಾಟ್ಯಕ್ಕೆ ಗೆಜ್ಜೆ ತಯಾರಿಸುವ ಜಾವಗಲ್ ಮಲದೇ ಹಳ್ಳಿಯ ಶ್ರೀಸಾಮಾನ್ಯರಾದ ಮರಾಠಿಗರ ಮೂಲಕ ಕಾಣಿಸಿಕೊಂಡ ನದಿಶಕ್ತಿಯೇ ಇಂದು ಬೇರೆ ರೂಪಗಳಲ್ಲಿ ಕಾಣಿಸಬಹುದು.
ಕಾವೇರಿ ಕಣಿವೆಯಲ್ಲಿ ನೀರಿನ ಲಭ್ಯತೆ 334 ಟಿಎಮ್‌ಸಿಗಳು ಮಾತ್ರ. ನ್ಯಾಯಾಲಯದ ತೀರ್ಮಾನದಂತೆ ಕರ್ನಾಟಕವು 212 ಟಿಎಮ್‌ಸಿ ನೀರನ್ನು ಮೆಟ್ಟೂರು ಜಲಾಶಯಕ್ಕೆ ಬಿಡಬೇಕು. ಇದರಲ್ಲಿ 205 ಟಿಎಮ್‌ಸಿ ತಮಿಳುನಾಡಿನದು, ಮೆಟ್ಟೂರಿಗೆ ಸೇರಿದ ನೀರಿನಲ್ಲಿ 6 ಟಿಎಮ್‌ಸಿಯನ್ನು ತಮಿಳುನಾಡು ಪಾಂಡಿಚೇರಿಗೆ ಬಿಡಬೇಕು. ವರ್ಷದಿಂದ ವರ್ಷಕ್ಕೆ ಮಳೆಯ ವ್ಯತ್ಯಾಸವಾಗುತ್ತಿದೆ. ಅರಣ್ಯನಾಶವಾಗುತ್ತಿದೆ. ಮಳೆ ಸುರಿದರೆ ನದಿಯಲ್ಲಿ ನೀರು ಹರಿದು ಅಣೆಕಟ್ಟು ತುಂಬುತ್ತದೆ. ಇತ್ತೀಚಿನ ವರ್ಷಗಳಲ್ಲಿ ಶೇ. 61ರಷ್ಟು ನೀರಿನ ಕೊರತೆ ಕಾವೇರಿ ಕಣಿವೆಯಲ್ಲಿ ಕಾಣಿಸುತ್ತಿರುವುದು ಆತಂಕದ ಸಂಗತಿ. ಆದರೆ ನಾವು ನ್ಯಾಯಾಲಯಗಳಲ್ಲಿ ನೀರಿನ ನ್ಯಾಯ ಕೇಳುತ್ತ ನಿಂತಿದ್ದೇವೆ. ಆದರೆ ನಮಗೆ ನೀರು ನೀಡಲು ನೆರವಾಗುವ ಕಾವೇರಮ್ಮನ ಕಾಡು ಏನಾಗಿದೆಯೆಂದು ಯಾವತ್ತಾದರೂ ಯೋಚಿಸಿದ್ದೇವೆಯೇ?
– ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.