ಖಡಕ್ ರೊಟ್ಟಿ ಊರಲ್ಲಿ ರಾಗಿಮುದ್ದೆ ಹವಾ !
Team Udayavani, Jul 9, 2018, 5:47 PM IST
ಖಡಕ್ ರೊಟ್ಟಿ. ಖಾರದ ಚಟ್ನಿಗೆ ಹೆಸರಾಗಿರುವ ಹುಬ್ಬಳ್ಳಿಯಲ್ಲಿ ರಾಗಿ ಮುದ್ದೆಯ ಊಟ ನೀಡುವ ಹೋಟೆಲೊಂದಿದೆ. ಅಲ್ಲಿ ದಿನವೂ ರಾಗಿಯಿಂದ ತಯಾರಿಸಿದ 20ಕ್ಕೂ ಹೆಚ್ಚು ಬಗೆಯ ತಿನಿಸುಗಳು ಸಿಗುತ್ತವೆ.
ಉತ್ತರ ಕರ್ನಾಟಕ ಎಂದರೆ ಸಾಕು, ಥಟ್ಟನೆ ನೆನಪಾಗುವುದು ಖಡಕ್ ಜೋಳದ ರೊಟ್ಟಿ. ಹೀಗಾಗಿ ಈ ಭಾಗದಲ್ಲಿ ಜೋಳದ ರೊಟ್ಟಿ ಹೋಟೆಲ್‌ಗಳೇ ಜಾಸ್ತಿ. ಆದರೆ, ದಿನದಿಂದ ದಿನಕ್ಕೆ ಕಡಿಮೆ ಬೆಲೆಗೆ ಮತ್ತು ಹೆಚ್ಚು ಪೌಷ್ಟಿಕಾಂಶ ಹೊಂದಿರುವ ರಾಗಿ ಪ್ರದಾರ್ಥಗಳ ಸೇವನೆ ಹೆಚ್ಚುತ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜೋಳದ ರೊಟ್ಟಿ ಹೋಟೆಲ್‌ಗಳ ನಡುವೆಯೂ ಇಲ್ಲಿನ ಮರಾಠಾ ಗಲ್ಲಿಯಲ್ಲಿರುವ ಗಜಾನನ ಹೋಟೆಲ್ ರಾಗಿ ಮುದ್ದೆ ಊಟಕ್ಕೆ ಭಾರಿ ಪ್ರಸಿದ್ಧಿ ಪಡೆದಿದೆ.
ಈ ಹೋಟೆಲ್‌ನಲ್ಲಿ ರಾಗಿಯಿಂದ ತಯಾರಿಸಿದ ವಿವಿಧ ಬಗೆಯ ಪದಾರ್ಥಗಳಿಗೆ ಬಹು ಬೇಡಿಕೆಯಿದೆ.
1988ರ ಇಸ್ವಿ. ಅರವಿಂದ ವಿಷ್ಣುರಾವ ಮಾನೆ ಎಂಬುವರು ಗಜಾನನ ಪಾನ್‌ಶಾಪ್ ನಡೆಸುತ್ತಿದ್ದರು. ಏನಾದರೂ ಹೊಸ ಬ್ಯೂಸಿನೆಸ್ ಮಾಡಬೇಕು. ಒಂದು ಹೋಟೆಲ್ ಆರಂಭಿಸಬೇಕು, ಸಾಮಾನ್ಯ ಹೋಟೆಲ್‌ಗಿಂತ ವಿಭಿನ್ನವಾಗಿ ಮತ್ತು ಬಡ ಜನರಿಗೆ ಕಡಿಮೆ ದರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಬೇಕೆಂಬ ಆಲೋಚನೆ ಅವರಿಗೆ ಬಂತು. ಮೊದಲು ದಾವಣಗೆರೆ ಬೆಣ್ಣೆದೋಸೆ ಹೋಟೆಲ್ ಆರಂಭಿಸಿದರು. ಆದರೆ ಗ್ರಾಹಕರ ಬಗೆ-ಬಗೆಯ ದೂರುಗಳು ಮತ್ತು ಲಾಭಕ್ಕಿಂತ ಖರ್ಚು ಹೆಚ್ಚಾಗಿದ್ದರಿಂದ ರಾಗಿ ಮುದ್ದೆ ಹೋಟೆಲ್ ಶುರು ಮಾಡಿದರು. ಅಷ್ಟೊತ್ತಿಗೆ ಹೋಟೆಲ್ ವ್ಯವಹಾರದ ಜ್ಞಾನ ಹೊಂದಿದ್ದ ಅರವಿಂದ ಅವರಿಗೆ ರಾಗಿಯಲ್ಲಿ ಹೇಗೆ ಉಪಾಹಾರ ತಯಾರಿಸಬೇಕೆಂಬ ಸಮಸ್ಯೆ ಎದುರಾಯಿತು. ಆಗ ದೂರದ ದಾವಣಗೆರೆ ಮತ್ತು ಹರಿಹರಕ್ಕೆ ತೆರಳಿ ರಾಗಿ ಮುದ್ದೆ ಸೇರಿದಂತೆ ರಾಗಿಯಲ್ಲಿ ವಿವಿಧ ಬಗೆಯ ಉಪಾಹಾರ ತಯಾರಿಸುವುದನ್ನು ಕಲಿತರು. ನಂತರ ಶುರುವಾದದ್ದೇ ಈ ರಾಗಿ ಮುದ್ದೆ ಹೋಟೆಲ್. ಈಗ ರಾಗಿಮುದ್ದೆ ಎಂದರೆ ಗಜಾನನ, ಗಜಾನನ ಹೋಟೆಲ್ ಅಂದರೆ ರಾಗಿಮುದ್ದೆ ಎನ್ನು ವಷ್ಟರ ಮಟ್ಟಿಗೆ ಹುಬ್ಬಳ್ಳಿಯಲ್ಲಿ ಈ ಹೋಟೆಲ್ ಪ್ರಸಿದ್ಧಿ ಪಡೆದಿದೆ. ಇದಕ್ಕೆ ನಿದರ್ಶನವೆಂಬಂತೆ ನಿತ್ಯ ಸುಮಾರು 20 ಕೆಜಿ ರಾಗಿ ಹಿಟ್ಟು ಮುದ್ದೆಗಳಾಗಿ ಖರ್ಚಾಗುತ್ತಿದೆ.
20 ಬಗೆಯ ಉಪಾಹಾರ
ರಾಗಿಮುದ್ದೆ, ರಾಗಿ ಉಪ್ಪಿಟ್ಟು, ರಾಗಿ ಇಡ್ಲಿ, ರಾಗಿ ಶಾವಂಗಿ ಬಾತ್, ರಾಗಿ ಲಸ್ಸಿ, ರಾಗಿ ಲಸ್ಸಿ ಹಾಫ್, ರಾಗಿ ಅಂಬಲಿ, ರಾಗಿ ದೋಸೆ, ರಾಗಿ ಮಸಾಲಾ ದೋಸೆ, ರಾಗಿ ಸೆಟ್ ದೋಸಾ, ರಾಗಿ ಉತ್ತಪ್ಪ, ರಾಗಿ ಆಮ್ಲೆಟ್ ಸೇರಿದಂತೆ ಸುಮಾರು 20 ಬಗೆಯ ಉಪಾಹಾರಗಳು ಇಲ್ಲಿ ದೊರೆಯುತ್ತವೆ. ರಾಗಿಯಲ್ಲಿ ತಯಾರಿಸಿದ ಉಪಾಹಾರಗಳು ದಿನವಿಡೀ ದೊರೆಯುವುದಿಲ್ಲ. ಈ ಬಹುಬಗೆಯ ತಿನಿಸುಗಳ ತಯಾರಿಕೆಗೆ ದಿನವನ್ನು ಮೂರು ಭಾಗ ಮಾಡಿಕೊಂಡಿದ್ದಾರೆ. ಬೆಳಗ್ಗೆ 8ರಿಂದ 12ರ ವರೆಗೆ (ಅಳವಿ ಹಾಲು, ರಾಗಿ ಗಂಜಿ, ರಾಗಿ ಉಪ್ಪಿಟ್ಟು, ರಾಗಿ ಲಸ್ಸಿ, ರಾಗಿ ಶಾವಿಗೆ ಬಾತ್). ಮಧ್ಯಾಹ್ನ 1ರಿಂದ ಸಂಜೆ 4 (ರಾಗಿ ಮುದ್ದೆ, ರಾಗಿ ಅಂಬಲಿ, ರಾಗಿ ಲಸ್ಸಿ ಹಾಫ್, ರಾಗಿ ದೋಸೆ, ರಾಗಿ ಮಸಾಲಾ ದೋಸೆ). ಸಂಜೆ 5ರಿಂದ ರಾತ್ರಿ 9ರ ವರೆಗೆ (ರಾಗಿ ಉತ್ತಪ್ಪ, ರಾಗಿ ಆಮ್ಲೆಟ್ ಹಾಗೂ ಇತರೆ ಆಹಾರಗಳು). ಸೋಮವಾರ ಮತ್ತು ಬುಧವಾರ ರಿಯಾಯಿತಿ ದರದಲ್ಲಿ ರಾಗಿಮುದ್ದೆ ದೊರೆಯುತ್ತದೆ. ಇನ್ನು ಅಯ್ಯಪ್ಪಸ್ವಾಮಿ ಮಾಲೆ ಧರಿಸಿದವರಿಂದ ಊಟಕ್ಕೆ ಕೇವಲ 10 ರೂ.ಗಳನ್ನು ಮಾತ್ರ ಪಡೆಯಲಾಗುತ್ತದೆ.
ಬದಲಾಗದ ಬೋರ್ಡ್
ಸುಮಾರು 20 ವರ್ಷಗಳ ಹಿಂದೆ ಅರವಿಂದ ಮಾನೆಯನ್ನು ಹೋಟೆಲ್ ಆರಂಭಿಸುವಾಗ ಇದ್ದ ಬೋಡೇì ಈಗಲೂ ಇರುವುದು. ತಂತ್ರಜ್ಞಾನ ಬದಲಾದಂತೆ ಬೋರ್ಡ್ ವಿನ್ಯಾಸದಲ್ಲಿ ಬದಲಾದರೂ ಅಕ್ಷರದ ಸ್ಟೈಲ್ ಬದಲಾಗಿಲ್ಲ. ಇದಕ್ಕೆ ಕಾರಣವೂ ಇದೆ. ಮೊದಲ ಬಾರಿಗೆ (1988ರಲ್ಲಿ) ರಫೀಕ್ ಎಂಬ ಕಲಾವಿದರಿಂದ ವಿಭಿನ್ನವಾಗಿ ತಯಾರಿಸಿದ ಈ ಬೋರ್ಡ್‌ಗೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಹೀಗಾಗಿ ಎಷ್ಟೋ ಜನ ಹೋಟೆಲ್ ಬೋರ್ಡ್ ನೋಡುತ್ತಿದ್ದಂತೆ, ಇಲ್ಲಿ ಒಂದು ರಾಗಿಮುದ್ದೆ ಹೋಟೆಲ್ ಇದೆ ಎಂದು ಗುರುತಿಸಿದ ಉದಾಹರಣೆ ಇದೆ.
ರಾಗಿ ತಿಂದವ ನಿರೋಗಿ
ರಾಗಿ ಸೇವಿಸುವುದರಿಂದ ನಿರೋಗಿ ಆಗಬಹುದು ಎಂಬ ಮಾತೊಂದಿದೆ. ಆದ್ದರಿಂದ ಪ್ರತಿಯೊಬ್ಬರೂ ರಾಗಿಯಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸಬೇಕು. ಅದಕ್ಕಾಗಿ ರಾಗಿಯಲ್ಲಿಯೇ ಹೆಚ್ಚು ಉಪಾಹಾರ ತಯಾರಿಸಲಾಗುತ್ತಿದೆ. ಗ್ರಾಹಕರಿಗೆ ಉಪಾಹಾರ ಒದಗಿಸುವುದರ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ಉಪಾಹಾರ ನೀಡಲು ಕೊಡುವ ಟೋಕನ್ ಮೇಲೆಯಲ್ಲಿ “ಅತ್ಯುತ್ತಮ ಆರೋಗ್ಯಕ್ಕೆ ರಾಗಿಮುದ್ದೆ’ ಎಂದು ನಮೂದಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಹೋಟೆಲ್ ಮಾಲೀಕ ಅರವಿಂದ ಮಾನೆ.
– ಶರಣು ಹುಬ್ಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.