ಖಡಕ್‌ನಾಥ್ ಕೋಳಿಯ ಕಹಾನಿ
Team Udayavani, Jan 8, 2018, 2:44 PM IST
ನೋಡಲು ಕಪ್ಪು ಕೋಳಿ. ಇದರ ಹೆಸರು ಖಡಕ್‌ನಾಥ್ ಕೋಳಿ. ಮೂಲ ಮಧ್ಯಪ್ರದೇಶ. ಬಲು ಅಪರೂಪವೆನಿಸಿರುವ ಈ ಕೋಳಿಮರಿಗಳ ಸಾಮ್ರಾಜ್ಯವೀಗ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಚನಹಳ್ಳಿಯಲ್ಲಿ ನಿರ್ಮಾಣಗೊಂಡಿದೆ. ಮೂವರು ಮಹಿಳೆಯರು ಆರಂಭಿಸಿರುವ ಈ ಫಾರಂ, ಸುಮಾರು ಒಂದೂವರೆ ಎಕರೆ ವಿಸ್ತಾರದ ಜಮೀನಿನಲ್ಲಿ ಹರಡಿಕೊಂಡಿದೆ. ಕವಿತಾ ಸಂತೋಷ್, ರಾಧಾ ಮತ್ತು ಸುಧಾ ಎಂಬ ಮೂವರು ಮಹಿಳೆಯರು 300ಕ್ಕೂ ಅಧಿಕ ಕೋಳಿಮರಿಗಳನ್ನು ಸಾಕುತ್ತಿದ್ದಾರೆ.
ಆನ್‌ಲೈನ್‌ನಲ್ಲಿ ಕಂಡಿತ್ತು…
ಖಡಕ್‌ನಾಥ್ ಕೋಳಿ ಮರಿಗಳ ಬಗ್ಗೆ ಆನ್‌ಲೈನ್‌ನಲ್ಲಿ ತಿಳಿದುಕೊಂಡರಂತೆ ಕವಿತಾ. ನಂತರದಲ್ಲಿ ಟಿವಿಯಲ್ಲಿ ಬಂದ ಈ ಕೋಳಿ ಕುರಿತ ಕಾರ್ಯಕ್ರಮ ನೋಡಿ, ಅವುಗಳನ್ನು ಸಾಕಲೇಬೇಕೆಂಬ ಹಠಕ್ಕೆ ಬಿತ್ತು ಕವಿತಾ ಮನಸ್ಸು. ಅದರಂತೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ ಆರಂಭದಲ್ಲಿ ಕೆಲವು ಮರಿಗಳನ್ನು ತರಿಸಿಕೊಂಡರು. ನಂತರ ಮಾಂಸದ ರುಚಿ ನೋಡುವ ಆಸೆಯಾಯಿತು. ತಾವು ತಿನ್ನುವುದರ ಜೊತೆಗೆ ಸ್ನೇಹಿತರು, ಹಿತೈಷಿಗಳು, ಬಂಧುಗಳಿಗೂ ನೀಡಿದರು. ಅದನ್ನು ತಿಂದವರು ಇಷ್ಟಪಟ್ಟರು. ನಂತರ ಅವುಗಳನ್ನು ಸಾಕುವುದಕ್ಕೆ ಮುಂದಡಿ ಇಟ್ಟರು.
ಖಡಕ್‌ನಾಥ್ ಕೋಳಿಗಳನ್ನು ಸಾಕುವುದಕ್ಕೂ ಮುನ್ನ ಅವುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ, ಮಳವಳ್ಳಿಯ ಕೋಳಿ ಸಂವರ್ಧನಾ ಕೇಂದ್ರದಲ್ಲಿ ತರಬೇತಿ ಪಡೆದರು. ಮಧ್ಯಪ್ರದೇಶದ ಜಾಗ್ವಾ ಜಿಲ್ಲೆಯಿಂದ ಆರಂಭದಲ್ಲಿ 300 ಮರಿಗಳನ್ನು ರೈಲಿನ ಮೂಲಕ ತರಿಸಿಕೊಂಡರು. ಇವುಗಳಲ್ಲಿ 150 ಮರಿಗಳು ಸಾವನ್ನಪ್ಪಿದ್ದವು. ಆದರೂ ಇವರು ಎದೆಗುಂದಲಿಲ್ಲ. ಸಾಕಣೆಯನ್ನು ಮುಂದುವರಿಸಿ, ನಷ್ಟ ಭರಿಸಿಕೊಂಡರು.
ಹೊರರಾಜ್ಯಗಳಿಂದಲೂ ಬೇಡಿಕೆ
ಈ ಕೋಳಿಗಳಿಗೆ ಹೊರರಾಜ್ಯಗಳಿಂದಲೂ ಅಗಾಧ ಬೇಡಿಕೆಯಿದೆ. ಬೆಂಗಳೂರು, ಬಳ್ಳಾರಿ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಬೇಡಿಕೆ ಬರುತ್ತಿದೆ. ಆಂಧ್ರಪ್ರದೇಶದಿಂದ ಹೆಚ್ಚಿನ ಬೇಡಿಕೆ ಬರುತ್ತಿದೆಯಾದರೂ ಬೇಡಿಕೆಗೆ ತಕ್ಕಂತೆ ಮರಿಗಳನ್ನು ಪೂರೈಸಲಾಗುತ್ತಿಲ್ಲ. ಬೇಡಿಕೆ ಹೆಚ್ಚಿದ್ದಾಗ ಮಧ್ಯಪ್ರದೇಶದಿಂದ 12 ಸಾವಿರಕ್ಕೂ ಹೆಚ್ಚು ಕೋಳಿ ಮರಿಗಳನ್ನು ಆನ್‌ಲೈನ್ ಮೂಲಕ ಮಾರುತ್ತಾರೆ.
ಕೋಳಿ, ಮಾಂಸದ ವೈಶಿಷ್ಟ್ಯ
ಖಡಕ್‌ನಾಥ್ ಕೋಳಿಗಳು ಎಲ್ಲ ಕೋಳಿಗಳಂತಲ್ಲ. ಇವು ನೋಡಲು ಕಪ್ಪು ಬಣ್ಣದ್ದಾಗಿದ್ದು, ಇದರ ಮಾಂಸ, ಮೂಳೆಗಳು, ರಕ್ತ ಎಲ್ಲವೂ ಪೆನ್ಸಿಲ್ ರೆಡ್ ಮಾದರಿಯ ಬಣ್ಣದಿಂದ ಕೂಡಿದೆ. ಈ ಕೋಳಿಗಳು ಒಂದೂವರೆ ಕೆಜಿಯಿಂದ 2 ಕೆಜಿ ವರೆಗೆ ತೂಗುತ್ತವೆ. ಅಧಿಕ ರಕ್ತದೊತ್ತಡ, ಹೃದ್ರೋಗ, ನರರೋಗ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ ಇರುವವರಿಗೆ ಪ್ರಯೋಜನಕಾರಿ. ಒಂದು ಕೋಳಿ ಜೀವಿತಾವಧಿಯಲ್ಲಿ ಸುಮಾರು 75 ರಿಂದ 80 ಮೊಟ್ಟೆಗಳನ್ನು ಇಡುತ್ತದೆ. ಪ್ರತಿ ಮೊಟ್ಟೆಗೆ 10 ರೂ., ಒಂದು ದಿನದ ಮರಿಗೆ 70 ರೂ., ಒಂದು ತಿಂಗಳ ಮರಿಗೆ 200 ರೂ., 45 ದಿನದ ಮರಿ 250 ರೂ., 150 ದಿನದ ಕೋಳಿ ಪ್ರತಿ ಕೆಜಿಗೆ 500 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ತಿಂಗಳಿಗೆ 40 ಸಾವಿರ ರೂ. ಲಾಭ
ಪೌಲ್ಟ್ರಿ ನಿರ್ವಹಣೆ, ಕೆಲಸಗಾರರಿಗೆ ಸಂಬಳ, ಇತರೆ ಖರ್ಚು ಕಳೆದು ಪ್ರತಿ ತಿಂಗಳು 30 ರಿಂದ 40 ಸಾವಿರ ರೂ. ಲಾಭ ಗಳಿಸುತ್ತಿದ್ದಾರೆ. ಮಹಿಳೆಯರು ಕುಕ್ಕುಟೋದ್ಯಮದಲ್ಲಿ ಆರ್ಥಿಕ ಸಬಲೀಕರಣ ಸಾಧಿಸಬಹುದು ಎನ್ನುವುದಕ್ಕೆ ಈ ಮಹಿಳೆಯರೇ ಸಾಕ್ಷೀಭೂತರಾಗಿದ್ದಾರೆ.
ಹೊಟ್ಟೆಗೇನು ತಿಂತಾವೆ?
ಖಡಕ್‌ನಾಥ್ ಕೋಳಿಗಳನ್ನು ಸಾಕುವುದಕ್ಕೆ ಹೆಚ್ಚು ಖರ್ಚಿನ ಅಗತ್ಯವಿಲ್ಲ. ಇವು ಎಲ್ಲಾ ಹವಾಗುಣಕ್ಕೂ ಹೊಂದಿಕೊಳ್ಳುತ್ತವೆ. ಚಳಿಗಾಲದಲ್ಲಿ ಗ್ಯಾಸ್ ಬ್ರೂಡರ್ ಮೂಲಕ ಶಾಖ ನೀಡಲಾಗುತ್ತದೆ. ಆರಂಭದಲ್ಲಷ್ಟೇ ಫೀಡ್ಸ್ ಕೊಟ್ಟರೆ ಸಾಕು. ಇನ್ನುಳಿದಂತೆ ಜೋಳ, ಹಿಪ್ಪುನೇರಳೆ ಎಲೆಗಳು, ಸತ್ತ ರೇಷ್ಮೆ ಹುಳುಗಳು, ಕೊಳೆತ ತರಕಾರಿ, ಅನ್ನ, ರಾಗಿ ಹಾಕಿದರೆ ಸಾಕು ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯುತ್ತವೆ. ಈ ಕೋಳಿಗಳು ಮೊಟ್ಟೆಗಳಿಗೆ ಕಾವುಕೊಟ್ಟು ಮರಿ ಮಾಡುವುದಿಲ್ಲ. ಆದ ಕಾರಣ, ಮೊಟ್ಟೆಗಳನ್ನು ಮರಿ ಮಾಡುವ ಯಂತ್ರದ ಮೂಲಕ ಕೋಳಿ ಮರಿಗಳನ್ನು ಉತ್ಪಾದಿಸುತ್ತಿದ್ದಾರೆ.
ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.