ಕ್ಷಾಮ ನೆಲದ ದಿವ್ಯಗಂಗೆ ಕೃಷ್ಣಾ…
Team Udayavani, Feb 19, 2018, 8:15 AM IST
ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಬಹುತೇಕ ಜಿಲ್ಲೆಗಳ ಕೃಷಿ ಬದುಕಿಗೆ ಕೃಷ್ಣಾ ನದಿಯೇ ಜೀವಾಳ ಇದು ದೇಶದ ನಾಲ್ಕನೇ ಅತಿ ದೊಡ್ಡ ನದಿ. ಕೃಷ್ಣಾದ ಕಥೆ ಕಾವೇರಿಯಷ್ಟು ದೊಡ್ಡದಾಗಿ ಎಲ್ಲಿಯೂ ಕೇಳಿಸುವುದಿಲ್ಲ. ಪುರಾಣ, ಸಾಹಿತ್ಯ, ಚರಿತ್ರೆಗಳಲ್ಲೂ ಈ ನದಿಯ ಮಹತ್ವ ಕುರಿತು ಮಾತು ಕಡಿಮೆ. ಏಕೆ ಹೀಗೆ?
ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಹಾಬಲೇಶ್ವರ ಬೆಟ್ಟದಲ್ಲಿ ಜೋರ್ ಹಳ್ಳಿ ಇದೆ. ಪಶ್ಚಿಮಘಟ್ಟದ ಸಮುದ್ರ ಮಟ್ಟದಿಂದ 4,386 ಅಡಿ ಎತ್ತರದ ಈ ಕಾಡಿನೂರಲ್ಲಿ ಕೃಷ್ಣಾ ನದಿಯ ಜನನವಾಗಿದೆ. ಅಲ್ಲಿಂದ ಪಶ್ಚಿಮದ ಅರಬ್ಬಿಯ ಕಡಲು ನಿಕ್ಕೀ 64 ಕಿಲೋ ಮೀಟರ್ ಮಾತ್ರ ದೂರ. ಕಡಲು ತಲುಪುವುದೇ ನದಿಯ ಗುರಿಯಾಗಿರುವಾಗ ಹತ್ತಿರದ ಅರಬ್ಬಿಗೆ ನಿರಾಯಾಸವಾಗಿ ಹೋಗಬಹುದಿತ್ತು. ಆದರೆ ಪ್ರಕೃತಿಯ ಗುಟ್ಟು ಬೇರೆಯೇ ಇದೆ. ಕೃಷ್ಣಾ ನದಿ, ಹತ್ತಿರದ ಅರಬ್ಬಿ ಸಮುದ್ರವನ್ನು ಹಾಗೆಯೇ ಬಿಟ್ಟು, ಇಲ್ಲಿಂದ 1,400 ಕಿಲೋ ಮೀಟರ್ ದೂರದ ಬಂಗಾಳಕೊಲ್ಲಿಗೆ ಹರಿದಿದೆ. ಕಾಡು, ಜನಜೀವನ, ಕೃಷಿ, ಭಾಷೆ ಸೇರಿದಂತೆ ಎಲ್ಲ ನೆಲೆಗಳಲ್ಲಿ ವೈವಿಧ್ಯ ಮೇಳೈಸಿದೆ. ಅರಬ್ಬೀಯತ್ತ ಅರವತ್ನಾಲ್ಕು ಕಿ.ಲೋ ಮೀಟರ್ ತಿರುಗುವ ಬದಲು ಮುಖ ತಿರುಗಿಸಿ ಸಾವಿರ ಕಿ.ಲೋ ಮೀಟರ್ ಪಯಣಕ್ಕೆ ಸಜಾjಗಿದ್ದೇ ಕೃಷ್ಣ ನದಿಯ ಸಕಲ ಸೊಬಗಿನ ಮೂಲ.
ನದಿ ಹರಿವಿನ ದಿಕ್ಕಿನ ಕುರಿತು ಪುರಾಣದಲ್ಲಿ ಸ್ವಾರಸ್ಯಕರ ಕಥೆಯೊಂದಿದೆ. “ಕೃಷ್ಣವೇಣಿ’ ನದಿಯ ಮೂಲ ಹೆಸರು. ಇಲ್ಲಿ ವಿಷ್ಣುವೇ ಕೃಷ್ಣ, ವೇಣಿ ಶಂಕರ. ಜೈಮಿನಿಯಾಂತರಕಲ್ಪದಲ್ಲಿ ಬ್ರಹ್ಮ, ಶಿವನ ಪ್ರೀತಿಗೆ ಯಜ್ಞ ಮಾಡುತ್ತಾನೆ. ಕ್ಷಿಪ್ರಸಿದ್ಧಿಕ್ಷೇತ್ರವೆಂದು ಖ್ಯಾತವಾದ ಗೋಕರ್ಣದಲ್ಲಿ ಇದನ್ನು ನಡೆಸಲು ನಿಶ್ಚಯಿಸಿ ಅಲ್ಲಿಗೆ ಗಾಯತ್ರಿ-ವಾಣಿಯನ್ನು ಕರೆದೊಯ್ಯುತ್ತಾನೆ. ಭೃಗುಮುನಿ ಯಜ್ಞ ಪುರೋಹಿತ. ಬ್ರಹ್ಮನು ಯಜ್ಞ ಆರಂಭಿಸಿದನು. ಆದರೆ ಆರಂಭದಲ್ಲಿ ಗಣಪತಿಪೂಜೆ ಮಾಡುವುದನ್ನು ಮರೆತನು. ಯಾಗದ ಶುರುಮಾಡಲು ವಾಣಿಯನ್ನು ಕರೆದಾಗ ಅವಳು ಸ್ನಾನ, ಅಲಂಕಾರವೆಂದು ಪೂಜೆಗೆ ಬರುವುದಕ್ಕೆ ತಡಮಾಡಿದಳು. ಲಗ್ನದ ಸಮಯ ಮೀರುತ್ತಿರುವುದನ್ನು ಗಮನಿಸಿದ ಬ್ರಹ್ಮ ಸನಿಹದಲ್ಲಿದ್ದ ಗಾಯತ್ರಿಯನ್ನು ಕರೆದು ಆರಂಭ ಕರ್ಮ ಮುಗಿಸಿದನು. ಅಷ್ಟರಲ್ಲಿ ವಾಣಿ ಆಗಮಿಸಿದಳು. ತನಗಿಂತ ಕಿರಿಯವಳಾದ ಗಾಯತ್ರಿ ಯಜ್ಞ ಕಾರ್ಯಕ್ಕೆ ಕುಳಿತಿರುವುದನ್ನು ನೋಡಿ ಕೋಪಗೊಂಡಳು. ನನ್ನನ್ನು ಮರೆತು ಶುಭಕಾರ್ಯಕ್ಕೆ ಕುಳಿತಿ ನೀವಿಬ್ಬರೂ ಜಲವಾಗಿ ಜನಿಸಿರೆಂದು ಸಿಟ್ಟಿನಲ್ಲಿ ಶಾಪ ಹಾಕಿದಳು. ಇದಕ್ಕೆ ಪ್ರತಿಯಾಗಿ ಗಾಯತ್ರಿಯೂ ವಾಣಿಗೆ ನೀನೂ ನದಿಯಾಗಿ ಜನಿಸೆಂದು ಮರುಶಾಪ ಎಸೆದಳು.
ದೇವತೆಗಳು, ಋಷಿಗಳು ವಾಣಿಯನ್ನು ಪ್ರಾರ್ಥಿಸಿದರು. ತಪ್ಪು ಮನ್ನಿಸಲು ವಿನಂತಿಸಿದರು. ಆಗ ಒಂದು ರೂಪದಲ್ಲಿ ನದಿಯಾಗಿ, ಇನ್ನೊಂದು ರೂಪದಲ್ಲಿ ದೇವತೆಯಾಗಿರೆಂದು ವಾಣಿ ನುಡಿ ಬದಲಿಸಿದಳು. ಪುರುಷ ನದಿಗಳು ಪೂರ್ವ ಕಡಲನ್ನು, ಸ್ತ್ರೀ ನದಿಗಳು ಪಶ್ಚಿಮದ ಕಡಲನ್ನು ಸೇರಲು ಸೂಚಿಸಿದಳು. ಹೀಗಾಗಿ ಪುರುಷ ನದಿ ಕೃಷ್ಣಾ ಪೂರ್ವದ ಬಂಗಾಳಕೊಲ್ಲಿಯತ್ತ ಹರಿಯಬೇಕಾಯ್ತು! ಕೃಷ್ಣವೇಣಿಯ ಸ್ನಾನದಿಂದ ಗೋಹತ್ಯೆ, ಪಿತೃಹತ್ಯೆ, ಮಾತೃಹತ್ಯೆ ತಟ್ಟುವುದಿಲ್ಲವೆಂಬ ನಂಬಿಕೆಯೂ ಬೆಳೆಯಿತು. ಫಲವತ್ತಾದ ಕಪ್ಪು ಮಣ್ಣಿನಲ್ಲಿ ನದಿ ಹರಿಯುವುದರಿಂದಲೂ ಈ ನದಿಗೆ ಕೃಷ್ಣಾ ಎಂಬ ಹೆಸರು ಬಂದಿದೆ. ಮರಾಠಿ ಜನಪದ ನುಡಿಯಲ್ಲಿ “ಶಾಂತ ವಾಹಾತೆ ಕೃಷ್ಣಾಮೀ’ ಎಂಬ ಮಾತಿದೆ. ಪ್ರವಾಹದಲ್ಲಿ ಮಣ್ಣು ಕೊಚ್ಚಿಕೊಂಡು ನದಿ ನಿಧಾನಕ್ಕೆ ಹರಿಯುತ್ತದೆ. ಹೀಗಾಗಿ ನಿಧಾನ ನಡಿಗೆಗೆ ಕೃಷ್ಣಾ ಹರಿವಿನ ಉಪಮೆ ಇದೆ.
ಪಶ್ಚಿಮ ಘಟ್ಟದ ಕಾಡಲ್ಲಿ ಜನಿಸಿ ಪೂರ್ವ ಬಯಲಿನಲ್ಲಿ ನದಿ ಸಾಗಿದ್ದರಿಂದ ಕೃಷಿ ಬದುಕಿಗಂತೂ ಮಹದುಪಕಾರವಾಗಿದೆ. 2,58,948 ಚದರ ಕಿಲೋ ಮೀಟರ್ ಜಲಾನಯನ ಕ್ಷೇತ್ರ ಇದರದು. ಅಂದರೆ ಭಾರತದ ಒಟ್ಟೂ ಭೂ ಪ್ರದೇಶದ ಶೇಕಡಾ 8 ಭಾಗ ಇದರದು. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶಗಳ ಬದುಕು ಹಸಿರಾಗಿಸುವಲ್ಲಿ ಈ ನದಿಯ ಕೊಡುಗೆ ಇದೆ. ಸಾಮಾನ್ಯವಾಗಿ 600 ದಿಂದ 3000 ಮಿಲಿ ಮೀಟರ್ ಮಳೆ ಇಲ್ಲಿ ಸುರಿಯುತ್ತದೆ. ಜೂನ್‌ದಿಂದ ಅಕ್ಟೋಬರ್‌ವರೆಗೆ ಸುರಿಯುವ ಮಾನ್ಸೂನ್, ನದಿ ನೀರಿನ ಸಂಪತ್ತು. ವಿಶೇಷವೆಂದರೆ ಜುಲೈದಿಂದ ಆಗಸ್ಟ್ ಸಂದರ್ಭದಲ್ಲಿ ಕಣಿವೆಯ ವಾರ್ಷಿಕ ಮಳೆಯ ಶೇ. 70ರಷ್ಟು ಸುರಿಯುತ್ತದೆ. ಪಶ್ಚಿಮ ಘಟ್ಟಗಳು ಮಳೆ ಮನೆಯಾಗಿದೆ. ಇಲ್ಲಿನ ಮಹಾರಾಷ್ಟ್ರದ ಸತಾರ, ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳಲ್ಲಿ 301 ಕಿಲೋ ಮೀಟರ್ ಹರಿದು ರಾಜ್ಯ ಪ್ರವೇಶಿಸುತ್ತದೆ. 1500-3200 ಮಿಲಿ ಮೀಟರ್ ಮಳೆ ಸುರಿಯುವ ಇಲ್ಲಿ, ಶೇ.26ರಷ್ಟು ಜಲಾನಯನ ಪ್ರದೇಶವಿದೆ. ಸತಾರದ ಕರಾಡದಲ್ಲಿ ಕೊಯ್ನಾ, ಸಾಂಗ್ಲಿಯಲ್ಲಿ ವರ್ಣಾ, ಕುರಂದವಾಡಾದಲ್ಲಿ ಪಂಚಗಂಗಾ ನದಿ ಜೊತೆಗೂಡುತ್ತದೆ. ಹೀಗಾಗಿ ಒಮ್ಮೆ ಕರ್ನಾಟಕದಲ್ಲಿ ಮಳೆಯಾಗದಿದ್ದರೂ ಪ್ರವಾಹದ ನೀರನ್ನು ಕೃಷ್ಣಾ ನೀಡುತ್ತದೆ. ಸರಣಿ ಅಣೆಕಟ್ಟುಗಳಲ್ಲಿ ನೀರು ಶೇಖರಣೆಯಿಂದ ಜಲ ಬಳಕೆ ವಿಸ್ತರಿಸಿದೆ. ರಾಜ್ಯದಲ್ಲಿ 360 ಕಿ.ಲೋ ಮೀಟರ್ ಹರಿಯುವ ನದಿ ಘಟಪ್ರಭಾ, ಮಲಪ್ರಭಾ, ಭೀಮಾ, ತುಂಗಭದ್ರಾ ನದಿಗಳನ್ನು ಐಕ್ಯವಾಗಿಸಿ ಸಾಗುತ್ತದೆ. “ಹಿರೇ ಹೊಳೆ’ ಹೆಸರು ನದಿಗಿದೆ. ಪ್ರಮುಖ ಹತ್ತೂಂಭತ್ತು ಉಪನದಿಗಳನ್ನು ಜೊತೆ ಸೇರಿಸಿಕೊಂಡು ಆಂಧ್ರದ ಕೃಷ್ಣಾ ಜಿಲ್ಲೆಯ ಹಂಸಲಾದೇವಿಯಲ್ಲಿ ಈ ನದಿ ಕಡಲು ಸೇರುತ್ತದೆ. ವಿಶೇಷವೆಂದರೆ ಮಳೆ ಕಡಿಮೆ ಕಾರಣದಿಂದ ನದಿಗೆ ನೀರು ಜೋಡಣೆಯಲ್ಲಿ ಆಂಧ್ರದ ಕೊಡುಗೆ ಕಡಿಮೆ ಇದೆ.
ಚರಿತ್ರೆಯ ಪುಟ ತೆಗೆದರೆ ಕೃಷ್ಣಾ ನದಿ ಕಣಿವೆಗೆ ಬಂದಷ್ಟು ಬರದ ಕಷ್ಟ ರಾಜ್ಯದ ಯಾವ ಪ್ರದೇಶದಲ್ಲಿಯೂ ಬಂದಿಲ್ಲ. ಡೌಗಿ ಬರ, ಎತ್ತಿನ ಬರ, ಸಜ್ಜೆ ಬರ, ಬಹತ್ತರ (1972)ಬರ ಸೇರಿದಂತೆ ಹಲವು ಬರವನ್ನು ಊರು ಕಂಡಿದೆ. ಹತ್ತು ವರ್ಷಕ್ಕೆ ಒಮ್ಮೆ ಉತ್ತಮ ಮಳೆ ಕಾಣುವ ಪ್ರದೇಶಗಳು ಇಲ್ಲಿವೆ. ಒಂದು ವರ್ಷ ಮಳೆ ಸುರಿದರೆ ಎರಡು ವರ್ಷ ನೀರಿನ ಸಮಸ್ಯೆ ಇಲ್ಲವೆಂಬ ಗ್ರಾಮಗಳೂ ಇವೆ. ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳು ಸೇರಿದಂತೆ ಧಾರವಾಡ, ಬೆಳಗಾವಿ, ವಿಜಾಪುರ, ಕಾನಡಾ ಜಿಲ್ಲೆಗಳ ವಿವರಗಳುಳ್ಳ ಮುಂಬೈ ಇಲಾಖೆಗೆ ಸೇರಿದ ಗೆಜಿಟಿಯರ್ ಕ್ರಿ.ಶ. 1893ರಲ್ಲಿ ಪ್ರಕಟವಾಗಿದೆ. ಇದರಲ್ಲಿ ಕ್ರಿ.ಶ. 1876-77ರ ಬರಗಾಲದಲ್ಲಿ ಕೃಷ್ಣಾ ಕಣಿವೆಯ ಜನರು ಸೇವಿಸಿದ ನೂರಾರು ಕಾಡು ಸಸ್ಯಗಳ ಪಟ್ಟಿ ಇದೆ. ಹೊಲದಲ್ಲಿ ಅನ್ನ ಸಿಗದಿದ್ದಾಗ ಅರಣ್ಯ ಆಹಾರ ನೀಡಿದೆ. ಕೆರೆಗಳ ಸುವರ್ಣ ಯುಗ ರೂಪಿಸಿದ ಕಲ್ಯಾಣದ ಚಾಲುಕ್ಯರು, ನೀರಾವರಿ ಯೋಜನೆಗೆ ಹೆಸರಾದ ವಿಜಯನಗರ ಸಾಮ್ರಾಜ್ಯಗಳೆಲ್ಲ ಕೃಷ್ಣಾ ಕಣಿವೆಯಲ್ಲಿ ಬೆಳೆದವು. ಮೈಸೂರು ಸೀಮೆಗೆ ಹೋಲಿಸಿದರೆ ಕೆರೆಗಳು ಕಡಿಮೆ, ಅದರಲ್ಲಿಯೂ ಕಣಿವೆಯ ಸರಣಿ ಕೆರೆಗಳಂತೂ ಅಪುರೂಪ. “ಎರೆ ಇದ್ದವ ದೊರೆ’ ‘ ದೋಣಿ (ನದಿ) ಹರಿದರೆ ಓಣಿಯೆಲ್ಲ ಕಾಳು’ ಮಾತು ಲಾಗಾಯ್ತಿನಿಂದ ನಂಬಿದ ನೆಲೆ. ಅತ್ಯಂತ ಕಡಿಮೆ ಮಳೆಯಲ್ಲಿ ಬಿಳಿ ಜೋಳ, ಕಡಲೆ, ಸದಕ, ಹತ್ತಿ, ಕುಸುಬಿ ಬೆಳೆದು ಗೆಲ್ಲುವವರು ಇಲ್ಲಿನ ರೈತರು. ಅಕ್ಕಡಿ ಬೇಸಾಯದ ಮೂಲಕ ಬರ ಗೆಲ್ಲುವ ತಂತ್ರ ಗೊತ್ತಿದೆ. ಉಳುಮೆಗೆ ಯಾವ ಯಂತ್ರಗಳಿಲ್ಲದ ಕಾಲದಲ್ಲಿ ಕೃಷ್ಣಾ ವ್ಯಾಲಿ, ದೇವಣಿ ಎತ್ತಿನ ದೈತ್ಯ ಶಕ್ತಿ ಪ್ರದೇಶದ ಭೂಮಿಗಳನ್ನು ಹಸನಾಗಿಸಿವೆ.
ಕೃಷ್ಣಾ ಜಲಾನಯನದಲ್ಲಿ 1,13,271 ಚದರ ಕಿ.ಲೋ ಮೀಟರ್ ಪ್ರದೇಶ, ರಾಜ್ಯದಲ್ಲಿದೆ. ಇವುಗಳಲ್ಲಿ 75.86ರಷ್ಟು ಕ್ಷೇತ್ರಗಳಲ್ಲಿ ಕೃಷಿ ತುಂಬಿದೆ. ಜನಜೀವನದ ವಿಚಾರದಲ್ಲಿ ಇದು ಖುಷಿಯ ಸಂಗತಿಯಾದರೂ ನದಿ ಪರಿಸರದ ಸುಸ್ಥಿರತೆಯ ವಿಚಾರದಲ್ಲಿ ಇದು ಭಯದ ಬೆಳವಣಿಗೆಯಾಗಿದೆ. ಕಾಡೇ ನದಿಗಳ ತಾಯಿ ಎನ್ನುತ್ತೇವೆ. ಆದರೆ ಈ ಜಲಾನಯನದಲ್ಲಿ ಕಾಡು ಬಹಳ ಕಡಿಮೆ ಇದೆ. ನದಿ, ಅಣೆಕಟ್ಟು, ಬ್ಯಾರೇಜುಗಳಲ್ಲಿ ಅಪಾರ ಹೂಳು ತುಂಬಲು ಇದು ಕಾರಣವಾಗಿದೆ. ಅಲ್ಲೊಂದು ಇಲ್ಲೊಂದು ಬೆಟ್ಟಗುಡ್ಡಗಳಲ್ಲಿ ಕಾಲದ ಕಾಡಿನ ಪಳೆಯುಳಿಕೆಗಳಿವೆ. ಬಾಗಲಕೋಟೆಯ ಜಮಖಂಡಿಯ ಕಲ್ಲಹಳ್ಳಿಯ ಗುಡ್ಡಗಳಲ್ಲಿ ಶತಮಾನಗಳ ಹಿಂದಿನ ಇದ್ದಲು ಭಟ್ಟಿಯ ಕುರುಹು ಕಾಡು ಕರಗಿದ ಕಥೆ ಹೇಳುತ್ತವೆ. ಗಡಿನಾಡಿನ ಕಲಬುರ್ಗಿಯ ಚಿಂಚೋಳಿಯ ಕೊಂಚಾವರಮ್ ಅರಣ್ಯ ಸುತ್ತಿದರೆ ಕಾಡು ಬೆಳೆಯುವ ನೆಲದ ಸಾಧ್ಯತೆ ಗೋಚರಿಸುತ್ತದೆ. ಯಾದಗಿರಿಯ ಸುರಪುರದ ಅರಮನೆ ಕಟ್ಟಡದ ದೈತ್ಯ ಕಂಬ, ತೊಲೆಗಳಲ್ಲಿ ಕಾಡಿನ ನೆನಪುಗಳಿವೆ. ಇಲ್ಲಿನ ರಾಜವಂಶದ ಹಿರಿಯರಾದ ರಾಜ ಪಿಂಡ ನಾಯಕರು, ಬಾಗಲಕೋಟೆಯ ಬೀಳಗಿ ಯಡಹಳ್ಳಿಯ ದೇಸಾಯಿ ವಾಡಾದಲ್ಲಿ ಕುಳಿತು ಹೇಳುವ ಬೇಟೆಯ ಕಥೆ ಕೇಳಿದರಂತೂ ಕೃಷ್ಣಾ ಕಣಿವೆಯ ಕಾಡಿನ ಕತೆಗಳನ್ನು “ಚಿರತೆಗಳ ಚರಿತ್ರೆ’ ಮೂಲಕ ಹೇಳಬಹುದು ! ಬದಾಮಿಯ ಬೆಟ್ಟದಲ್ಲಿ ಕಾಡು ಮಂಗಗಳ ಸಂರಕ್ಷಣೆಗೆ “ಮಂಗನ ಕಾಡು’ ರೂಪಿಸಿದ ಜನಪದರ ಮಾತುಗಳಲ್ಲಿ ಕಲ್ಯಾಣದ ಚಾಲುಕ್ಯರ ಅರಣ್ಯ ನೀತಿ ಹುಡುಕಬಹುದು. ಆಲಮಟ್ಟಿಯ ಅಣೆಕಟ್ಟೆಗೆ ಗ್ರಾಮಗಳು ಮುಳುಗಡೆಯಾಗಿ ಹಳೆ ಮನೆಯ ಕಟ್ಟಿಗೆಗಳನ್ನು ಎತ್ತಿ ನಿರಾಶ್ರಿತ ರೈತರು ಹೊರಟಾಗ ಕೆಲವು ಹಳೆ ದೊಡ್ಡಿಗಳಲ್ಲಿ ಶ್ರೀಗಂಧದ ತೊಲೆಗಳು ಪರಿಮಳ ಬೀರಿದವಂತೆ. ದೊಡ್ಡಿಗೆ ಶ್ರೀಗಂಧದ ತುಂಡನ್ನು ಬಳಸುವ ಪರಿಪಾಠ ಶತಮಾನದ ಹಿಂದೆ ಅದೆಂಥ ಶ್ರೀಮಂತ ಅರಣ್ಯವಿತ್ತು ಎಂಬ ಊಹೆಗೆ ಸಾಕ್ಷಿಯಾಗಿವೆ.
ಕ್ರಿ.ಶ. 1972 ರ ಬರಸಾಥ್ ಬರದ ನಂತರದಲ್ಲಿ ನಿದ್ದೆಯಿಂದೆದ್ದು ಕೃಷ್ಣಾ ನದಿಯತ್ತ ನೋಡಿದ್ದೇವೆ. ಆಲಮಟ್ಟಿ, ನಾರಾಯಣಪುರ, ಹಿಡ್ಕಲ್ ಅಣೆಕಟ್ಟು ಕಟ್ಟಿದ್ದೇವೆ. ನದಿ ಮೂಲದಿಂದ ಸಾಗರ ಸಂಗಮದವರೆಗೆ ಪ್ರಸ್ತುತ ಬೃಹತ್ ಹಾಗೂ ಮಧ್ಯಮ ನೀರಾವರಿಯ 150 ಯೋಜನೆಗಳು ಜಾರಿಯಾಗಿವೆ. ಇವುಗಳಲ್ಲಿ 77 ಯೋಜನೆ ಮಹಾರಾಷ್ಟ್ರದ್ದಾಗಿದೆ. 47 ಯೋಜನೆ ಜಾರಿಗೊಳಿಸಿದ ಕರ್ನಾಟಕ ಈ ಪೈಕಿ 32 ಯೋಜನೆ ಮುಗಿಸಿದ್ದು 15 ಯೋಜನೆಗಳು ಕುಂಟುತ್ತಿವೆ. ಒಂದು ಕಾಲದಲ್ಲಿ ಬರ ಬಂದಾಗ ಕಾಡಿನ ಸೊಪ್ಪು ತಿಂದು ಬದುಕಿದ ನೆಲೆ ಈಗ ಅಣೆಕಟ್ಟೆ, ಬ್ಯಾರೇಜುಗಳ ನೀರಿನಿಂದ ಬರಗೆಲ್ಲಲು ಕಲಿತಿದೆ. ಬೆಲೆ ಇಲ್ಲದ ಮಸಾರಿ ಭೂಮಿಗೆ ಹಣ್ಣು, ತರಕಾರಿ ತೋಟಗಾರಿಕೆಯ ಶಕ್ತಿ ಬಂದಿದೆ. ಕೃಷ್ಣಾ ಕೃಷಿಗೆ ಸಿಕ್ಕ ಬಳಿಕ ಬೆಳೆಗಳು ಬದಲಾಗಿವೆ.
ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.