ಕುರುವತ್ತಿ ಬಸವೇಶ್ವರ ಖಾನಾವಳಿ
Team Udayavani, Feb 3, 2020, 5:15 AM IST
ಕುರುವತ್ತಿ ಬಸವೇಶ್ವರ ಖಾನಾವಳಿಮಲ್ಲಿಗೆ ಹೂವಿಗೆ ಪ್ರಸಿದ್ಧಯಾದ ಹೂವಿನ ಹಡಗಲಿ, ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿರುವ ಕುರುವತ್ತಿ ಬಸವೇಶ್ವರ ಖಾನಾವಳಿಯು, ಜೋಳದ ರೊಟ್ಟಿ, ರಾಗಿ ರೊಟ್ಟಿ, ಮುದ್ದೆ ಊಟಕ್ಕೆ ಹೆಸರುವಾಸಿ. ಇಲ್ಲಿ ಮಾಡುವ ಅಡುಗೆ ಮನೆಯಲ್ಲಿಯೇ ತಯಾರಾದ ಅಡುಗೆಯಂತೆ ಇರುತ್ತದೆ. ಏ.14 ಬಂದ್ರೆ ಈ ಖಾನಾವಳಿಗೆ ಐದು ವರ್ಷ ತುಂಬುತ್ತೆ. ಊಟಕ್ಕೆ, ಕುರುವತ್ತಿ ಬಸವೇಶ್ವರ ಖಾನಾವಳಿ ಬೆಸ್ಟ್ ಅನ್ನುವ ಮಟ್ಟಿಗೆ ಜನಪ್ರಿಯತೆ ಪಡೆದಿರುವ ಈ ಹೋಟೆಲಿನ ಮಾಲೀಕರು, ಹಕ್ಕಂಡಿ ಚಂದ್ರಪ್ಪ.
ಹೂವಿನಿಂದ ಹೋಟೆಲ್
ಕೈಗೆ ಸಿಕ್ಕ ಕೆಲಸ ಮಾಡಿಕೊಂಡು ತಿರುಗಾಡಿಕೊಂಡಿದ್ದ ಚಂದ್ರಪ್ಪಗೆ ಬೆನ್ನೆಲುಬಾಗಿದ್ದು, ಅವರ ಪತ್ನಿ ದೇವಕ್ಕ, ಮದುವೆಗೂ ಮುಂಚೆ ಹೊಲದ ಕೂಲಿ ಕೆಲಸ ಮಾಡಿಕೊಂಡಿದ್ದ ದೇವಕ್ಕ, ಆ ನಂತರ, ಕುಟುಂಬ ನಿರ್ವಹಣೆಗಾಗಿ ಹೂವು ಕಟ್ಟುವ ಕೆಲಸ ಆರಂಭಿಸಿದ್ರು, ಆದರೆ, ಅದರಲ್ಲಿ ಅಂಥ ಸಂಪಾದನೆ ಆಗುತ್ತಿರಲಿಲ್ಲ. ನಂತರ ಜೊತೆಯಲ್ಲಿದ್ದ ಸ್ನೇಹಿತರು, ಹೋಟೆಲ್‌ಗಳಿಗೆ ರೊಟ್ಟಿ ಮಾಡಿಕೊಡುವಂತೆ ಸಲಹೆ ನೀಡಿದರು. ಆಗ, ತಾವೇ ಹಿಟ್ಟು ತಂದು ಸುಮಾರು 12 ವರ್ಷ ರೊಟ್ಟಿ ಮಾಡಿ, ಒಂದು ರೊಟ್ಟಿಗೆ 3 ರೂ.ನಂತೆ ಹೋಟೆಲ್‌ಗಳಿಗೆ ಮಾರಾಟ ಮಾಡಿ ಸಂಸಾರ ತೂಗಿಸುತ್ತಿದ್ದರು.
ಇದೇ ಸಂದರ್ಭದಲ್ಲಿ, ನಿಶ್ಚಿತ ಆದಾಯದ ನೌಕರಿಯಿಲ್ಲದೆ, ಪರದಾಡುತ್ತಿದ್ದ ಚಂದ್ರಪ್ಪನಿಗೆ ಕೆಲವು ಸ್ನೇಹಿತರು, ಖಾನಾವಳಿ ತೆರೆಯುವಂತೆ ಸಲಹೆ ನೀಡಿದ್ದಾರೆ. ಹೇಗೂ ದೇವಕ್ಕನಿಗೂ ರೊಟ್ಟಿ, ರುಚಿಯಾಗಿ ಅಡುಗೆ ಮಾಡಲು ಬರುತ್ತಿದ್ದರಿಂದ ಖಾನಾವಳಿಯನ್ನು ಆರಂಭಿಸಿದ್ದಾರೆ. ದೇವಕ್ಕನ ಕೈರುಚಿಗೆ ನಾಗರಿಕರು ಇಲ್ಲಿನ ಕಾಯಂ ಗ್ರಾಹಕರಾಗಿದ್ದಾರೆ. ಇಂದು ದೇವಕ್ಕರ ತಂಗಿ ಸೇರಿದಂತೆ, ನಾಲ್ವರು ಖಾನಾವಳಿಯಲ್ಲಿ ರೊಟ್ಟಿ ತಯಾರಿ ಕೆಲಸ ಮಾಡುತ್ತಾರೆ. ಇಲ್ಲಿ ಸಿಗುವ ಬಿಸಿಯಾದ ಜೋಳದ ರೊಟ್ಟಿ, ರಾಗಿ ರೊಟ್ಟಿ, ಪಲ್ಯ, ಮುದ್ದೆ ಜೊತೆ ಕೊಡುವ ಶೇಂಗಾ ಬಜ್ಜಿ ಗ್ರಾಹಕರ ಬಾಯಲ್ಲಿ ನೀರೂರಿಸುತ್ತೆ.
ಹೋಟೆಲ್ ಸಮಯ:
ಮಧ್ಯಾಹ್ನ 12.30 ರಿಂದ 4 ಗಂಟೆವರೆಗೆ ಮತ್ತು ರಾತ್ರಿ 7.30 ರಿಂದ 9.30ರವರೆಗೆ, ಭಾನುವಾರ ರಜೆ.
ಹೋಟೆಲ್ ವಿಳಾಸ:
ಹೊಸ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಡಿಫೋ ಹಿಂಭಾಗ, ಹೂವಿನಹಡಗಲಿ ಪಟ್ಟಣ.
ಊಟ ಮಾತ್ರ:
ರಾಗಿ ಮುದ್ದೆ, ರಾಗಿ ರೊಟ್ಟಿ, ಚಪಾತಿ, ಜೋಳದ ರೊಟ್ಟಿ ಊಟ ಇರುತ್ತದೆ. ಊಟಕ್ಕೆ ಎರಡು ಥರದ ಪಲ್ಯ, ಉಪ್ಪಿನಕಾಯಿ, ಕಡಲೆಪುಡಿ, ಸೌತೆಕಾಯಿ, ಈರುಳ್ಳಿ, ಅನ್ನ ಸಾಂಬಾರ್, ಹಪ್ಪಳ, ಮೊಸರು ಕೊಡ್ತಾರೆ. ದರ 50 ರೂ., ಹೋಳಿಗೆ ಊಟಕ್ಕೆ 60 ರೂ. (ಸೋಮವಾರ ಮಾತ್ರ), ಇನ್ನು ಅನ್ನ ಸಾಂಬಾರ್ ತೆಗೆದುಕೊಂಡ್ರೆ ಮೊಸರು, ಪಲ್ಯ, ಹಪ್ಪಳ, ಉಪ್ಪಿನಕಾಯಿ ಕೊಡ್ತಾರೆ. ದರ 40 ರೂ..
– ಭೋಗೇಶ ಆರ್. ಮೇಲುಕುಂಟೆ
ಫೋಟೋ ಕೃಪೆ: ಆಕಾಶ ಪೂಜಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.