ತರಕಾರಿ ಬೆಳೆಯಿಂದ ಬದುಕು ತಂಪಾಯ್ತು !
Team Udayavani, Apr 30, 2018, 6:15 AM IST
ಮಲೆನಾಡಿನ ಭಾಗದಲ್ಲಿ ನೀರಿನ ವ್ಯವಸ್ಥೆ ಚೆನ್ನಾಗಿದ್ದರೂ ತರಕಾರಿ ಕೃಷಿ ನಡೆಸುವವರು ವಿರಳ. ಆದರೆ ಶಿವಮೊಗ್ಗ ಜಿಲ್ಲೆ ಆಯನೂರು ಸಮೀಪದ ಉಬ್ಬನಹಳ್ಳಿಯ ನಾಗರಾಜ ಈ ಕೆಲಸ ಮಾಡಿದ್ದಾರೆ. ಇವರು ವೃತ್ತಿಯಲ್ಲಿ ಸರಕು ಸಾಗಣೆಯ ಬಾಡಿಗೆ ಆಟೋ ಓಡಿಸುತ್ತಾರೆ. ಜೊತೆಗೆ ವರ್ಷವಿಡೀ ತರಕಾರಿ ಕೃಷಿಯಲ್ಲಿ ಲಾಭ ಮಾಡುತ್ತಿದ್ದಾರೆ.
ಆಯನೂರಿನಿಂದ ಸವಳಂಗ ಹೆದ್ದಾರಿಗೆ ತಾಗಿಕೊಂಡಿರುವ ಉಬ್ಬನಹಳ್ಳಿ ಗ್ರಾಮದಲ್ಲಿ ಇವರ ಹೊಲವಿದೆ. ಒಂದು ಎಕರೆ ವಿಸ್ತೀರ್ಣದ ಹೊಲದಲ್ಲಿ ಕೊಳವೆ ಬಾವಿ ತೆಗೆಸಿ ನೀರಾವರಿ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಮಳೆಗಾಲ ಮುಕ್ತಾಯವಾಗುತ್ತಿದ್ದಂತೆ ಸೆಪ್ಟೆಂಬರ್ ತಿಂಗಳಿನಿಂದ ತರಕಾರಿ ಬೆಳೆಯುತ್ತಾರೆ.
ಕೃಷಿ ಹೇಗೆ ?
ಇವರು ತಮ್ಮ ಒಂದು ಎಕರೆ ಹೊಲವನ್ನು 5 ಭಾಗ ಮಾಡಿಕೊಂಡಿದ್ದಾರೆ. ಒಂದೊಂದು ಭಾಗದಲ್ಲಿ ಬೇರೆ ಬೇರೆ ತರಕಾರಿ ಬೆಳೆಯುತ್ತಾರೆ. ಮೂಲಂಗಿ, ಚೌಳಿಕಾಯಿ, ಬೆಂಡೆಕಾಯಿ, ಬಸಳೆ ಸೊಪ್ಪು, ಹರಬೆ ಸೊಪ್ಪು, ಬದನೆ , ಟೊಮೆಟೊ ಇತ್ಯಾದಿ ಬೆಳೆಸಿದ್ದಾರೆ. ಬೀಜ ಬಿತ್ತಿ ಗಿಡ ಮೊಳಕೆಯಾಗುತ್ತಿದ್ದಂತೆ 20:20 ಕಾಂಪ್ಲೆಕ್ಸ್ ಗೊಬ್ಬರ, ಸಗಣಿ ಗೊಬ್ಬರ, ಕುರಿ ಗೊಬ್ಬರವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಗಿಡಗಳಿಗೆ ಪ್ರತಿ 20 ದಿನಕ್ಕೆ ಒಮ್ಮೆಯಂತೆ ನೀಡುತ್ತಾ ಮಣ್ಣು ಏರಿಸಿ ಕೊಡುತ್ತಾ ಕೃಷಿ ನಡೆಸುತ್ತಾರೆ. ತರಕಾರಿ ಪಟ್ಟೆ ಸಾಲಿನ ಮಧ್ಯೆ ನೀರು ಹರಿಯುವಂತೆ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಮಧ್ಯೆ ಮಧ್ಯೆ 80 ಬಾಳೆಗಿಡ, 300 ನುಗ್ಗೆ ಗಿಡ, ಶುಂಠಿ, ಅರಿಶಿನ, 400 ಅಡಿಕೆ, 20 ತೆಂಗಿನ ಗಿಡಗಳನ್ನು ಸಹ ಬೆಳೆಸಿದ್ದಾರೆ. ಕಳೆದ ವರ್ಷ ನೆಟ್ಟ ಬಾಳೆ ಗಿಡಗಳು ಈ ವರ್ಷ ಗೊನೆ ಬಿಟ್ಟಿದ್ದು ಬರುವ ಮೇ ತಿಂಗಳಲ್ಲಿ ಫಸಲು, ಮಾರಾಟಕ್ಕೆ ಸಿಗಲಿದೆ.
ಲಾಭ ಎಷ್ಟು?
ನಾಗರಾಜ್ ಅವರಿಗೆ, ತೊಂಡೆಕಾಯಿ ಮಾರಾಟದಿಂದ ರೂ.10 ಸಾವಿರ, ಚೌಳಿ ಕಾಯಿ ಮಾರಾಟದಿಂದ ರೂ.12 ಸಾವಿರ, ಮೂಲಂಗಿ ಮಾರಾಟದಿಂದ ರೂ.15 ಸಾವಿರ ಆದಾಯ ದೊರೆತಿದೆ. 2 ಕ್ವಿಂಟಾಲ್ ಶುಂಠಿ ಬೀಜ ಕೃಷಿ ಮಾಡಿದ್ದು 15 ಕ್ವಿಂಟಾಲ್ ಫಸಲು ದೊರೆತಿದೆ. ಇದರಿಂದ 30 ಸಾವಿರ ಆದಾಯ ದೊರೆತಿದೆ. ಬಸಳೆ ಸೊಪ್ಪು ಮತ್ತು ಹರಬೆ ಸೊಪ್ಪಿನ ಮಾರಾಟದಿಂದ ರೂ.5 ಸಾವಿರ ,ತಿಂಗಳ ಅವರೆ ಕಾಯಿ ಮಾರಾಟದಿಂದ 4 ಸಾವಿರ , ತೊಗರಿಕಾಳು ಮಾರಾಟದಿಂದ 3 ಸಾವಿರ ಆದಾಯ ದೊರೆತಿದೆ. ಹೀಗೆ ಎಲ್ಲ ಬಗೆಯ ಲೆಕ್ಕಹಾಕಿದರೆ ಒಟ್ಟು 70 ಸಾವಿರ ಆದಾಯ ದೊರೆತಿದೆ. ಸುಮಾರು 20 ಸಾವಿರ ಖರ್ಚಾಗಲಿದ್ದು ನಿವ್ವಳ ಲಾಭ 50 ಸಾವಿರ ದೊರೆತಿದೆ. ತರಕಾರಿ ಫಸಲು ಕಟಾವು ಆಗುತ್ತಿದ್ದಂತೆ ನಿರಂತರವಾಗಿ ತರಕಾರಿ ಮಾರುವ ಉದ್ದೇಶದಿಂದ ಒಂದು ಕಡೆ ಕಟಾವು ಆಗುತ್ತಿದ್ದಂತೆ ಅದೇ ಹೊಲದ ಇನ್ನೊಂದು ಭಾಗದಲ್ಲಿ ಅದೇ ತರಕಾರಿ ಕೃಷಿ ಆರಂಭಿಸಿತ್ತಾ ವರ್ಷ ವಿಡೀ ತರಕಾರಿ ಬೆಳೆಯುತ್ತಾರೆ.
ಇವರ ಜೊತೆ ಇವರ ಪತ್ನಿ ಸಹ ಸಹಕರಿಸುತ್ತಿದ್ದು ಆಟೋ ಬಾಡಿಗೆಗೆ ಹೋಗಿ ಮರಳಿ ಬರುತ್ತಿದ್ದಂತೆ ತರಕಾರಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಹೊಲದಲ್ಲಿ ಬಹು ವಾರ್ಷಿಕ ಫಸಲಿನ ಅಡಿಕೆ, ಬಾಳೆ,ನುಗ್ಗೆ, ತೆಂಗು ಮುಂತಾದ ಕೃಷಿ ನಡೆಸುತ್ತಿರುವ ಕಾರಣ, ತರಕಾರಿ ಗಿಡಗಳಿಗೆ ಹಾಯಿಸಿದ ನೀರು ಈ ಗಿಡಗಳಿಗೂ ತಾಗಿ ಪರೋಕ್ಷವಾಗಿ ಕೃಷಿ ನಡೆಸುವ ಇವರ ಈ ವಿಧಾನ ಉಳಿದ ರೈತರಿಗೆ ಮಾದರಿಯಾಗಿದೆ.
ಮಾಹಿತಿಗೆ 8197522769
– ಎನ್.ಡಿ.ಹೆಗಡೆ ಆನಂದಪುರಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.