ಅನಲಾಗ್‌ ಕಣ್ಣಲ್ಲಿ ತೋಟ ಹುಡುಕಾಟ


Team Udayavani, Apr 8, 2019, 10:01 AM IST

analog

ಎರೆ ಸೀಮೆಯ ಗದಗ ಯಾವಾಗಲೂ ಬರದ ತವರು ನೆಲ. ಈ ಭಾಗದ ಕೃಷಿಕರದ್ದು ಬಹುತೇಕ ಮಳೆ ಆಶ್ರಿತ ಬದುಕು. ಮಸಾರಿ ಮಣ್ಣಿನಲ್ಲಿ ಇಲ್ಲಿ ಸಣ್ಣಪುಟ್ಟ ತೋಟಗಳು ಉದಯಿಸಿವೆ. ಇಲ್ಲಿನ ಹುಲಕೋಟಿಯ ಸನಿಹ ದೇವೇಂದ್ರಪ್ಪ ಗೊಣೆಪ್ಪನವರ್‌, ನಾಲ್ಕು ಎಕರೆ ತೋಟ ರೂಪಿಸಿ ಸುಮಾರು ಹದಿನೈದು ವರ್ಷಗಳಾಗಿವೆ. ಮಾವು, ಪೇರಲ, ಲಿಂಬು, ಗುಲಾಬಿ, ಅಂಜೂರ, ಕರಿಬೇವು, ಸೀಪಾಫ‌ಲ, ಹುಣಸೆ, ತೆಂಗು, ನುಗ್ಗೆ, ಪಪ್ಪಾಯ, ನೇರಳೆ, ಬಾಳೆ ಮುಂತಾದ ಸಸ್ಯ ಸಿರಿ ಇದೆ. ಹತ್ತು ವರ್ಷಕ್ಕೆ ಒಮ್ಮೆ ಉತ್ತಮ ಮಳೆ ಕಾಣುವ ನೆಲೆಯಲ್ಲಿ ಬಹುವಾರ್ಷಿಕ ತೋಟಗಾರಿಕೆ ಸವಾಲಿನ ಕೆಲಸ. ವಿವಿಧ ಹಂತದ ಮರ ಬೆಳೆ, ನೆಲದ ತೇವ ಆರದಂತೆ ಸಾವಯವ ಮುಚ್ಚಿಗೆ, ನೀರಿನ ಮಿತ ಬಳಕೆ, ಹಸಿರು ಬೇಲಿ ಹೀಗೆ ಹಲವು ಪ್ರಯತ್ನಗಳಿವೆ.

ಸಹಕಾರಿ ಸಂಘದಲ್ಲಿ ದುಡಿಯುತ್ತಿದ್ದ ದೇವೇಂದ್ರಪ್ಪ, ಮಣ್ಣಿನ ಕಾಯಕಕ್ಕೆ ಮನಸ್ಸು ಮಾಡಿದ್ದು ನಿವೃತ್ತಿಯ 60 ವರ್ಷ ನಂತರದಲ್ಲಿ ! ಅವರು ನಿತ್ಯ ತೋಟದಲ್ಲಿ ದುಡಿಯುತ,¤ ಸಸ್ಯಗಳ ಆರೋಗ್ಯ ಗಮನಿಸುತ್ತ, ಹೊಸ ಬೆಳೆ ಸೇರಿಸುತ್ತ ಹಸಿರು ಕಟ್ಟಿದ್ದಾರೆ. ಕೃಷಿ ಕಾಯಕದ ಜೊತೆಗೆ ಮಾರಾಟ ತಂತ್ರವನ್ನು ಕಲಿತಿದ್ದಾರೆ. ಬಿಡುವಿನ ಸಮಯದಲ್ಲಿ ಮಾವು, ಅಂಜೂರ ನರ್ಸರಿಯ ಉಪಕಸುಬು. ಉರಿ ಬಿಸಿಲಲ್ಲಿ ತೋಟ ಹೊಕ್ಕರೆ ಮಲೆನಾಡಿನ ಕಾಡು ತಂಪು. ವರ್ಷವಿಡೀ ಒಂದಿಲ್ಲೊಂದು ಬೆಳೆ ತೋಟದ ನಿರಂತರ ಆದಾಯಕ್ಕೆಸಹಾಯಕ, ಸುಸ್ಥಿರ ಕೃಷಿಯ ಸೂಚಕ. “ಸ್ವಂತ ದುಡೀಬೇಕು,ಕೃಷಿ ಅನುಭವ ಬೆಳೆಸಿಕೊಳ್ಳಬೇಕು’ ಎಂದು ಕೃಷಿಕ ಗೊಣೆಪ್ಪನವರ್‌ ಹೇಳುತ್ತಾರೆ.

ಮೈಸೂರಿನ ಕಳಲವಾಡಿಯ 13 ಎಕರೆಯಲ್ಲಿ ಎ.ಪಿ.ಚಂದ್ರಶೇಖರವರ ಇಂದ್ರಪ್ರಸ್ಥದ ತೋಟವಿದೆ. ನೂರಾರು ಕಿಲೋ ಮೀಟರ್‌ ದೂರದ ಮಲೆನಾಡಿನ ಮೂಲೆಮೂಲೆಯ ಹಣ್ಣು ಹಂಪಲು,ಕಾಡು ಸಸ್ಯಗಳೆಲ್ಲ ಬೆಳೆದಿವೆ. ಹಸಿರು ಸಂಭ್ರಮಕ್ಕೆ ದೊಡ್ಡ ಸಾಕ್ಷಿಯಾಗಿ 205 ಜಾತಿಯ ಪಕ್ಷಿ$, 71 ಜಾತಿಯ ಚಿಟ್ಟೆ, 40 ಜಾತಿಯ ಡ್ರಾಗನ್‌ ಪ್ಲೆ„, 25 ಜಾತಿಯ ಜೇಡ, 16 ಜಾತಿಯ ಹಾವು, 10 ಜಾತಿಯ ಕಪ್ಪೆಗಳನ್ನು ಇಲ್ಲಿ ಗುರುತಿಸಲಾಗಿದೆ. ಒಂದು ಕಾಡು ತೋಟ ಕಟ್ಟುವ ಮೂಲಕ ಬಯಲು ನಾಡಿನ ಪರಿಸರ ಬದಲಾವಣೆ ಹೇಗಾಯಿತೆಂಬುದಕ್ಕೆ ಇದಕ್ಕಿಂತ ಬೇರೆ ದಾಖಲೆಯ ಅಗತ್ಯವಿಲ್ಲ. ಪಕ್ಷಿ, ಚಿಟ್ಟೆಗಳೆಲ್ಲ ಒಂದೊಂದು ಸಸ್ಯದ ಜೊತೆ ಆಹಾರ-ಆವಾಸದ ಸಂಬಂಧ ವಿರಿಸಿಕೊಂಡಿವೆ. ಪರಿಸರವನ್ನು ಮಳೆ, ಮಣ್ಣು, ಉಷ್ಣತೆಗಳ ಮೂಲಕ ಅರ್ಥಮಾಡಿ ಕೊಳ್ಳುವುದು ಗೊತ್ತಿರುವ ದಾರಿ. ಇಲ್ಲಿ ಜೀವಲೋಕದ ಮೂಲಕ ಅರ್ಥ ಮಾಡಿ ಕೊಳ್ಳುವ ಅವಕಾಶವಿದೆ.

ಸುರಿಯುವ ಮಳೆ, ನೆಲದ ಮಣ್ಣು, ಹವಾಮಾನ ಅವಲಂಬಿಸಿ ಅರಣ್ಯ ಅವತರಿಸುತ್ತದೆ. ಕೃಷಿ ಮಾಡುವ ನಾವು ಅರಣ್ಯದ ಸ್ವರೂಪದಲ್ಲಿಯೇ ತೋಟ ಬೆಳೆಸುವ ಸಾಧ್ಯತೆ ಇಂದ್ರಪ್ರಸ್ಥದಲ್ಲಿ ಸಾಕಾರವಾಗಿದೆ. ಅಡಿಕೆ ,ತೆಂಗು, ಬಾಳೆ, ಕಾಳುಮೆಣಸು, ಗೆಣಸು, ಅರಿಸಿನ, ಜಾಯಿಕಾಯಿ ಹಲಸು ಹೀಗೆ ವಿವಿಧ ಎತ್ತರದ ನೂರಾರು ಸಸ್ಯಗಳನ್ನು ಕಾಣಬಹುದು. ಪ್ರತಿ ಸಸ್ಯದ ಬಳಕೆ, ಬೆಳೆಯುವ ರೀತಿ, ಮೌಲ್ಯವರ್ಧನೆ, ಮಾರುಕಟ್ಟೆಯ ಅರಿವು ಚಂದ್ರಶೇಖರ್‌ರಿಗೆ ಇದೆ. ತೋಟಕ್ಕೆ ಮಾರುಕಟ್ಟೆಯ ಗೊಬ್ಬರ, ಕೀಟನಾಶಕ ಖರೀದಿಸುವ ಬದಲು ನಿಸರ್ಗ ಸೂತ್ರದ ಮೂಲಕ ನಿರ್ವಹಣೆಯ ಜಾಣ್ಮೆ ಇದೆ. 35 ವರ್ಷಗಳಿಂದ ಇಂದ್ರಪ್ರಸ್ಥದ ಮಣ್ಣಿನ ಅನುಭವಗಳಿಂದ ಕೃಷಿ ಅರಳಿದೆ.

ಮೂಡಬಿದರೆಯ ಸೋನ್ಸ್‌ ತೋಟ ಹಣ್ಣಿನ ಬೆಳೆಗಳಿಗೆ ಹೆಸರುವಾಸಿ. ಕ್ರಿ.ಶ. 1926 ರಲ್ಲಿ ಹುಲ್ಲು ಬೆಳೆಯುವ ನೆಲೆಯಲ್ಲಿ ತೆಂಗು, ಗುಡ್ಡೆಭತ್ತ(ಡ್ರೆ„ಲ್ಯಾಂಡ್‌ ಪ್ಯಾಡಿ), ಅಡಿಕೆ, ಬಾಳೆ ಬೆಳೆಯುವ ಪ್ರಯತ್ನ ಶುರುವಾಯ್ತು. ಡಾ. ಎಲ್‌
.ಸಿ.ಸೋನ್ಸ್‌ರ ಪ್ರಯತ್ನದ ಫ‌ಲವಾಗಿ 60 ರ ದಶಕದ ನಂತರದಲ್ಲಿ ಉಷ್ಣವಲಯದ ವಿವಿಧ ಜಾತಿಯ ಹಣ್ಣಿನ ಸಸ್ಯಗಳ ನೆಲೆಯಾಗಿ ಪರಿವರ್ತನೆಯಾಗಿದೆ. ಮಾವು, ಕಾಳುಮೆಣಸು, ಪೇರಲೆ, ಚಿಕ್ಕು, ಹಲಸು, ನೇರಳೆ, ಜಾಯಿಕಾಯಿ ಮುಂತಾದ ಬೆಳೆಗಳ ಜೊತೆಗೆ ರಂಬೂಟಾನ್‌,
ಡುರಿಯನ್‌, ಮ್ಯಾಂಗೋಸ್ಟಿನ್‌, ಲಾಂಗ್‌ ಸಾಟ್‌, ಎಗ್‌ ಪೂ›ಟ್‌, ಬಟರ್‌ ಪೂ›ಟ್‌, ಜಬೋಟಿಕಾಬಾ, ಮೆಕೆಡ್ಯಾಯಿಯಾ, ವೆಲ್‌ವೆಟ್‌ ಆ್ಯಪಲ್‌, ಮಿರ್ಯಾಕಲ್‌ ಪ್ರುಟ್‌ ಮುಂತಾಗಿ ಮಲೇಶಿಯಾ, ಥೈಲ್ಯಾಂಡ್‌, ಇಂಡೋನೇಶಿಯ, ಸಿಲೋನ್‌ ದೇಶಗಳ ನೂರಾರು ಜಾತಿಯ ಹಣ್ಣಿನ ಗಿಡಗಳಿವೆ. ಸುಮಾರು 50 ಜಾತಿಯ ಬಿದಿರುಗಳಿವೆ. ಅನಾನಸ್‌ ವಾಣಿಜ್ಯ ಬೆಳೆಯನ್ನು ರಾಜ್ಯಕ್ಕೆ ಪರಿಚಯಿಸಿದ ಮೊದಲ ತೋಟವಿದು. ತೆಂಗಿನ ನಡುವೆ ಅನಾನಸ್‌ ಬೆಳೆದಾಗ ನೆಲದ ಪಸೆ(ತೇವ) ಸಂರಕ್ಷಣೆಯಾಗಿ ತೆಂಗಿನ ಆರೋಗ್ಯದಲ್ಲಿ ಬದಲಾವಣೆಯಾಗಿದ್ದನ್ನು ಸೋನ್ಸ್‌ ಗುರುತಿಸುತ್ತಾರೆ. ಬಳ್ಳಿ, ಗಡ್ಡೆ, ಹೂ ಗಿಡಗಳು, ಹುಲ್ಲಿನ ವಿಶೇಷ, ಔಷಧೀಯ ಸಸ್ಯಗಳಿವೆ. ಕಡಿಮೆ ನೀರಿನಲ್ಲಿ ಕಲ್ಲು ಗುಡ್ಡ ಕಾಡಿನಂತೆ ಹಸಿರಾಗಿದೆ. ಸೋನ್ಸ್‌ ತೋಟ ದೇಶಿ ಸಸ್ಯ ಕೃಷಿಯ ಒಂದು ಪ್ರಯೋಗ ಭೂಮಿ, ಪ್ರತಿ ಸಸ್ಯಗುಣದ ಅನುಭವದ ಮೂಲಕ ಇಲ್ಲಿನ ನರ್ಸರಿಗಳಲ್ಲಿ ಸಸ್ಯೋತ್ಪಾದನೆಯ ಕಾರ್ಯ ನಡೆಯುತ್ತದೆ.

ಮಲೇಶಿಯಾದ ಡುರಿಯನ್‌ ದುರ್ವಾಸನೆಯ ಫ‌ಲ ಇಲ್ಲಿ ಬೆಳೆಯುತ್ತಿದೆ. ಶಕ್ತಿವರ್ಧಕವಾದಫ‌ಲದ ಬಳಕೆ ನಮಗೆ ಗೊತ್ತಿಲ್ಲ. ಆದರೆ, ದೇಶಿಗರಿಗೆ ಅಚ್ಚುಮೆಚ್ಚು. ಬದಲಾದ ಸಂಪರ್ಕ ಸಾಧ್ಯತೆಯಲ್ಲಿ ಇಲ್ಲಿ ಬೆಳೆದು ವಿದೇಶಗಳಿಗೆ ರಪು¤ಮಾಡುವ ಅವಕಾಶಗಳಿವೆ . ಹವಾಮಾನಕ್ಕೆ ತಕ್ಕಂತೆ ಕೆಲವು ವೃಕ್ಷ ಜಾತಿಗಳಲ್ಲಿ ಫ‌ಲ ಬಿಡುವ ಸಮಯ ಬದಲಾಗುತ್ತದೆ. ಇಂಥ ಫ‌ಲಗಳಿಗೆ ಮಾರುಕಟ್ಟೆ ಜೋಡಿಸಿ ತೋಟ ಗೆಲ್ಲಿಸಬಹುದು. ಇಸ್ರೇಲಿನವರು ಬಿಹಾರದಿಂದ ಲಿಚ್ಚಿ ಸಸ್ಯ ಒಯ್ದು ತೋಟ ಮಾಡಿದ್ದಾರೆ. ಆಸ್ಟ್ರೇಲಿಯಾದವರು ನಮ್ಮ ಕಾಡಿನ ಶ್ರೀಗಂಧ ಒಯ್ದು ಬೆಳೆಸಿ ಗೆದ್ದಿದ್ದಾರೆ. ಹೀಗೆ ಹೊಸತನಗಳಿಗೆ ನಾವು ತೆರೆದುಕೊಳ್ಳುವ ಅಗತ್ಯವಿದೆಯೆಂದು ಸೋನ್ಸ್‌ ಸೂಚಿಸುತ್ತಾರೆ. ಹವಾಮಾನಕ್ಕೆ
ಒಗ್ಗುವ ಸಸ್ಯಗಳನ್ನು ಕೃಷಿಗೆ ಪರಿಚಯಿಸುವ, ತೋಟಕ್ಕೆ ಒಗ್ಗಿಸುವ, ಮಾರುಕಟ್ಟೆಯಾಗಿಸುವ ಗುಣಗಳನ್ನು ಇಲ್ಲಿ ಗಮನಿಸಬಹುದು. ನಾವು ಬೆಳೆಯುವ ಬೆಳೆಗಳನ್ನು ಹೇಗೆ ಅರಿಯಬೇಕೆಂಬುದಕ್ಕೆ ಕೃಷಿಕ ಸೋನ್ಸ್‌ರ ಅಧ್ಯಯನಶೀಲ ಗುಣವೇ ಸಾಕ್ಷಿಯಾಗಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿಯ ದೇವೇಂದ್ರಪ್ಪ ಬಳೂಟಗಿ ಕ್ರಿ.ಶ. 1985 ರಿಂದ ದಾಳಿಂಬೆ ಬೆಳೆಯಲು ಆರಂಭಿಸಿದವರು.2006ರಲ್ಲಿ ದುಂಡಾಣು ರೋಗ ಆವರಿಸಿದಾಗ ಹೊಸ ಸಾಧ್ಯತೆಯ ಹುಡುಕಾಟಕ್ಕೆ ಮುಂದಾದರು. ದಾಳಿಂಬೆ ನಡುವೆ ಮಾವು, ಹೆಬ್ಬೇವು, ಪೇರಲ ಪ್ರಯೋಗ ನಡೆಸಿದವರು. ಯಲಬುರ್ಗಾದ ಮಂಡಲಮುರಿಯ ತೋಟದಲ್ಲಿ ಕಾಡು ಮರ ಆಧಾರಿತ ಕೃಷಿ ಬದುಕು ರೂಪಿಸಿದರು. ಶ್ರೀಗಂಧ, ತೇಗ, ಹೆಬ್ಬೇವು, ಸುಬಾಬುಲ್‌, ನೆಲ್ಲಿ, ನೇರಳೆ, ಹುಣಸೆ, ಸೀತಾಫ‌ಲ, ಹೊಂಗೆ ಮುಂತಾದ ಸಸ್ಯ ಬೆಳೆಸುತ್ತ ಅತ್ಯಂತ ಕಡಿಮೆ ನೀರಿನಲ್ಲಿ ಕಾಡು ಕೂಡಿಸಿದವರು. ಸಜ್ಜೆ, ಹುರಳಿ, ನವಣೆ, ಹೆಸರು ಬೆಳೆಯುವಲ್ಲಿ 20-25 ಅಡಿಯೆತ್ತರದ ಮರ ನಿಲ್ಲಿಸಿದ ಬರದ ಸೀಮೆಯ ಪ್ರಯೋಗ ಅರಣ್ಯಾಭಿವೃದ್ಧಿಯ ಪಾಠ ಹೇಳುತ್ತಿದೆ. ಮಣ್ಣಿನ ಆರೋಗ್ಯ ಸಂರಕ್ಷಣೆಗೆ ನೈಸರ್ಗಿಕ ಕೃಷಿಯ ಬೆನ್ನೇರಿದ ಕೊಪ್ಪಳದ ಬಿಕ್ಕನಳ್ಳಿಯ ಜಯಂತ ರಾಮರೆಡ್ಡಿ ಸರಳ ಬದುಕಿನ ಸಾಕ್ಷಿ. ಬಯಲು ಸೀಮೆಯ ಅಕ್ಕಡಿ ಬೇಸಾಯ ತಂತ್ರದ ಶಕ್ತಿ ಬಲ್ಲವರು. ಹುಲ್ಲು, ಔಡಲ ಗಿಡಗಳ ನೆರಳಲ್ಲಿ ಕೃಷಿ ಬದುಕಿಸುವ ಸೂತ್ರ ಕಂಡವರು. ಕಾಡು ಕೃಷಿಗೆ ನೇರ ಪಾಠ ಇಲ್ಲಿಲ್ಲದಿದ್ದರೂ ಮಣ್ಣಿನ ಆರೋಗ್ಯ ಹೆಚ್ಚಿಸುವ ವಿಧಾನ ಕಲಿಯಬಹುದು. 350 ಮಿಲಿ ಮೀಟರ್‌ ಮಳೆಬಿದ್ದ ಬಳ್ಳಾರಿಯ ಹುಲಿಕೆರೆಯಲ್ಲಿ ಬೇಲ, ನೇರಳೆ, ಬೆಟ್ಟದ ನೆಲ್ಲಿ, ಸೀತಾಫ‌ಲ, ಹುಣಸೆ, ನುಗ್ಗೆಯಲ್ಲಿ ಬದುಕಲು ಕಲಿಸಿದ ವಿಶ್ವೇಶ್ವರ ಸಜ್ಜನ್‌ ಮರ ಅಭಿವೃದ್ಧಿಯ ದಾರಿ ತೋರಿಸಬಲ್ಲವರು. ಕೋಲಾರದ ಪಾಲೂರಹಳ್ಳಿ ಹನುಮಂತರೆಡ್ಡಿ ಚಿಕ್ಕು, ಪೇರಲೆ, ಸೀತಾಫ‌ಲ, ನೇರಳೆ, ಜಂಬುನೇರಳೆ ಮುಂತಾಗಿ ಫ‌ಲ ವೃಕ್ಷ ಬೆಳೆದವರು. ಎಲ್ಲರೂ ಅಡಿಕೆಯ ಎಕ ಬೆಳೆಯ ಹಿಂದೆ ಓಡುವಾಗ ಚಿಕ್ಕಮಗಳೂರಿನ ತರಿಕೆರೆಯ ಕಲಾಫಾರ ಜನಾರ್ಧನ್‌ ಹಲವು ಮರಗಳ ಸಂಗಡ ಬದುಕಿದವರು.

 

ಕೋಲಾರದ ನೆನಮನಹಳ್ಳಿಯ ಚಂದ್ರಶೇಖರ್‌ ತರಗೆಲೆ, ಕೃಷಿ ತ್ಯಾಜ್ಯಗಳಿಂದ ಭೂಮಿಯ ತೇವ ರಕ್ಷಣೆಯ “ಬಯೋಮಾಸ್‌ ಟ್ರೆಂಚ್‌’ ಉಪಾಯ ಅಳವಡಿಸಿದವರು. ಮುಚ್ಚಿಗೆ ಬೆಳೆಯಾಗಿ ದ್ವಿದಳ ಧಾನ್ಯಗಳ ಬೀಜ ಬಿತ್ತಿ ಮಾವು, ನುಗ್ಗೆ, ರೇಷ್ಮೆ ಬೆಳೆಗಳನ್ನು ನೀರಿಲ್ಲದ ಕೋಲಾರದಲ್ಲಿ ಮಳೆ
ಆಶ್ರಿತದಲ್ಲಿ ಸಾಧಿಸಿದವರು. 1,600 ಅಡಿ ಕೊರೆದರೂ ನೀರು ಸಿಗದ ತುಮಕೂರಿನ ಬಡವನಹಳ್ಳಿಯಲ್ಲಿ ದಿ.ಕಾಮಣ್ಣ ಅವರ ತೋಟ ಇಂದಿಗೂ ಮಾದರಿಯಾಗಿದೆ. ತೋಟಕ್ಕೆ ಕಾಡು ಪರಿಕಲ್ಪನೆ ಅಳವಡಿಸಿ ಅಡಿಕೆಯ ಜೊತೆಗೆ ಹಲಸು, ತೆಂಗು, ಬಾಳೆ, ಕೊಕ್ಕೊ, ಮೂಸುಂಬಿ ಮುಂತಾದ ಸಸ್ಯ ಬೆಳೆದವರು.
ಇಲ್ಲಿನ ಸಸ್ಯ ಸೊಬಗು ಮಲೆನಾಡು ನೆನಪಿಸುತ್ತಿದೆ. ಶಿವಮೊಗ್ಗದ ಕಾನೂರು ಕೋಟೆ ಸನಿಹದ ಕೃಷಿಕ ಜೋಸೆಪ್‌ ಶೀಘ್ರ ಬೆಳೆಯುವ ಉಪ್ಪು ಚಂದ್ರಿಕೆ( ಚಂದಕಲು) ಕಾಡು ಗಿಡ ನೆಟ್ಟು ಕಾಳು ಮೆಣಸು ಬೆಳೆಸಿದ್ದಾರೆ. ರಾಮದುರ್ಗದ ಮುದಕವಿಯ ಶಿವಾನಂದ ಮಠಪತಿ ಕಲ್ಲುಗುಡ್ಡದಲ್ಲಿ ಗೆದ್ದವರು, ಕಡಿಮೆ ನೀರು ಬಳಸುವ ಸೂತ್ರ ಅಳವಡಿಕೆಗೆ ಕಾಡಿನ ತತ್ವ ಬಳಸಿದವರು. ಅಡಿಕೆಯ ಜೊತೆಗೆ ಹಲವು ಬೆಳೆಸೇರಿಸಿದ ಬನ್ನೂರು ಕೃಷ್ಣಪ್ಪ, ಮನೆ ಹಿಂಬದಿಯ ಸೊಪ್ಪಿನ ಬೆಟ್ಟದಲ್ಲಿ ಕಾಡು ಮರಗಳ ಜೊತೆಗೆ ದಾಲಿcನ್ನಿ, ಮಾವು
ಮುಂತಾದ ವೃಕ್ಷ ಬೆಳೆಸಿದ ಸಾಗರದ ಮಂಚಾಲೆಯ ಪ್ರಕಾಶ್‌, ಗುಡ್ಡಕ್ಕೆ ಗಾಯ ಮಾಡದೇ ಹಣ್ಣಿನ ತೋಟ ರೂಪಿಸಿದ ಧಾರವಾಡದ ಡಾ. ಸಂಜೀವ ಕುಲಕರ್ಣಿಯವರ ಸುಮನ ಸಂಗಮ, ಸಜ್ಜೆ ಹೊಟ್ಟಿನ ಮುಚ್ಚಿಗೆಯಲ್ಲಿ ಲಿಂಬು, ತೆಂಗು ಮುಂತಾದ ಬೆಳೆ ಗೆಲ್ಲಿಸಿದ ವಿಜಯಪುರದ ಇಂಡಿಯರಾಜಶೇಖರ ನಿಂಬರಗಿ ತೋಟಗಳಲ್ಲಿ ಪಾಠಗಳಿವೆ. ಕರಾವಳಿಯ ಕುಮಟಾ ಸೀಮೆಯ ಹಲವು ಅಡಿಕೆ ತೋಟಗಳಲ್ಲಿ ಕಾಡು ನೋಟಗಳಿವೆ. ಕೃಷಿ ಪ್ರವಾಸ, ನೋಡಿದ
ತೋಟದ ವಿಶೇಷ ಗಮನಿಸಿ ಅಳವಡಿಸುವ ಕ್ರಿಯಾಶೀಲತೆಯ ಗುಣವಿದ್ದರೆ ಅನನ್ಯ ತೋಟವನ್ನು ನಾವೂ ರೂಪಿಸಬಹುದು.

ಮುಂದಿನ ಭಾಗ- ಗಾಳಿ ಮಾತಿಗೆ ಬೆಲೆಇದೆ !

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.