ರೈತರ ಹತಾಶೆಯ ಕೂಗು ಕೇಳಿಸುತ್ತಿದೆಯೇ?
Team Udayavani, Jun 3, 2019, 6:00 AM IST
ಕೃಷಿರಂಗದ ಬಿಕ್ಕಟ್ಟು ಮತ್ತು ರೈತ ಆತ್ಮಹತ್ಯೆಗಳ ಸಮಸ್ಯೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಅಗತ್ಯ. ಮುಂಬಯಿ ಅಥವಾ ದೆಹಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ, ಪ್ರತಿಭಟಿಸಿದ ರೈತರು ತೀವ್ರ ಹತಾಶೆಯ ಎಚ್ಚರಿಕೆಯ ಸಂದೇಶಗಳನ್ನು ಕಳಿಸುತ್ತಲೇ ಇದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ತೆಲಂಗಾಣ ನೆರೆಯಿಂದಾಗಿ ತತ್ತರಿಸಿತ್ತು. ಆ ಸಂದರ್ಭದಲ್ಲಿ ಅಲ್ಲಿನ ಕಿಸಾನ್ ಮಿತ್ರ ಸಹಾಯವಾಣಿಯ ಶ್ರುತಿ ಅವರಿಗೊಂದು ಹತಾಶೆಯ ಫೋನ್ ಕರೆ ಬಂತು. ಅದನ್ನು ಮಾಡಿದವರು ಶಿವಣ್ಣ. ಅವರ ಹತ್ತಿ ಹೊಲಕ್ಕೆ ನೆರೆ ನುಗ್ಗಿತ್ತು. ಅನಿಶ್ಚಿತ ಭವಿಷ್ಯದ ಭಯ ತಾಳಲಾಗದೆ ಕೀಟನಾಶಕ ಕುಡಿದು ಸಾಯಲು ಅವರು ಸಿದ್ಧರಾಗಿದ್ದರು. ಅದೃಷ್ಟವಶಾತ್ ಶಿವಣ್ಣ ವಿಷ ಕುಡಿಯುವ ಮುಂಚೆ ಅವರ ನೆರೆಹೊರೆಯವರು ಗಮನಿಸಿ, ಸಹಾಯವಾಣಿಗೆ ಫೋನ್ ಮಾಡಿಸಿದರು ಎನ್ನುತ್ತಾರೆ ಶ್ರುತಿ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಶ್ರುತಿ, ಫೋನಿನಲ್ಲಿ ಬಹಳ ಹೊತ್ತು ಶಿವಣ್ಣನ ಜೊತೆ ಮಾತನಾಡಿದರು. ಅಷ್ಟರಲ್ಲಿ ಕ್ಷೇತ್ರ ಸಂಚಾಲಕರನ್ನು ಶಿವಣ್ಣನ ಬಳಿಗೆ ಕಳಿಸಲಾಯಿತು.
ನಮಗೆ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶ ಮಾಡಿ, ಆತ್ಮಹತ್ಯೆ ತಪ್ಪಿಸಲು ಸಾಧ್ಯವಾಯಿತು. ನಮ್ಮ ಸೂಚನೆಯಂತೆ ಅಲ್ಲಿನ ಕೃಷಿ ಅಧಿಕಾರಿ ಶಿವಣ್ಣರನ್ನು ಭೇಟಿ ಮಾಡಿದರು. ಅನಂತರ, ಶಿವಣ್ಣರನ್ನು ಜಿಲ್ಲಾಧಿಕಾರಿಯ ಬಳಿಗೆ ಕರೆದೊಯ್ದೆವು. ಶಿವಣ್ಣ ತನ್ನ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಿದ್ದರು; ಅದರ ಹಣ ಅವರ ಕೈಸೇರಲು ಜಿಲ್ಲಾಧಿಕಾರಿ ಸಹಾಯ ಮಾಡಿದರು. ಅಷ್ಟೇಅಲ್ಲ, ಶಿವಣ್ಣ ಆಟೋರಿಕ್ಷಾ ಖರೀದಿಸಲೂ ಜಿಲ್ಲಾಧಿಕಾರಿಗಳು ಹಣಕಾಸಿನ ವ್ಯವಸ್ಥೆ ಮಾಡಿದರು. ಈಗ ಶಿವಣ್ಣ ಚೆನ್ನಾಗಿದ್ದಾರೆ ಎನ್ನುತ್ತಾರೆ ಶ್ರುತಿ. ಹೀಗೆ, ಕಿಸಾನ್ ಮಿತ್ರದಂಥ ಸಹಾಯವಾಣಿಗಳು ನಮ್ಮ ದೇಶದ ಹತಾಶ ರೈತರ ಜೀವ ಉಳಿಸಲು ಸಹಾಯ ಮಾಡುತ್ತಿವೆ.
ಆಪ್ತ ಸಲಹೆಯಿಂದ ಪರಿಹಾರ
ಆದರೆ, ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ 2015ರಿಂದೀಚೆಗೆ ರೈತರ ಆತ್ಮಹತ್ಯೆ ಬಗ್ಗೆ ಅಂಕಿಸಂಖ್ಯೆ ಪ್ರಕಟಿಸಿಲ್ಲ. ಬ್ಯೂರೋ ಪ್ರಕಟಿಸಿದ 2015ರ ಮಾಹಿತಿ ಅನುಸಾರ, ಆ ವರ್ಷ 8,007 ರೈತರು ಮತ್ತು 4,585 ಕೃಷಿ ಕೆಲಸಗಾರರು ಆತ್ಮಹತ್ಯೆ ಮಾಡಿಕೊಂಡರು.
ಈ ಪರಿಸ್ಥಿತಿಯಲ್ಲಿ, ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಅಸಹಾಯಕ ರೈತರನ್ನು ಹತಾಶೆಯ ಶೂಲದಿಂದ ರಕ್ಷಿಸಲು ಮಾಡುತ್ತಿರುವ ಪ್ರಯತ್ನಗಳು ಗಮನಾರ್ಹ. ಕೆಲವು ರಾಜ್ಯಗಳಲ್ಲಿ ಬದುಕಿನ ಭರವಸೆ ಕಳೆದುಕೊಂಡ ರೈತರಿಗೆ ಮಾನಸಿಕ ಬೆಂಬಲ ನೀಡಲು ಕಾರ್ಯಕ್ರಮಗಳನ್ನು ಶುರು ಮಾಡಿರುವುದು ಮುಖ್ಯ ಬೆಳವಣಿಗೆ.
ಮಹಾರಾಷ್ಟ್ರದ ಯವತ್ಮಾಲ… ಜಿಲ್ಲೆಯಲ್ಲಿ 2005ರಿಂದ ಕಾರ್ಯಾಚರಿಸುತ್ತಿರುವ ಸೊಸೈಟಿ ಫಾರ್ ರೂರಲ… ಅಂಡ್ ಅರ್ಬನ್ ಜಾಯಿಂಟ… ಆಕ್ಟಿವಿಟೀಸ್ (ಶ್ರುಜನ್) ಅಂಥ ಒಂದು ಸಂಸ್ಥೆ. “ಹತಾಶನಾದ ರೈತ, ತಾನು ಏಕಾಂಗಿ, ತನಗೆ ಯಾರೂ ಇಲ್ಲ ಎಂದು ಭಾವಿಸಬಾರದು ಎಂಬುದು ನಮ್ಮ ಆಶಯ. ಅದಕ್ಕಾಗಿ ರೈತರೊಂದಿಗೆ ಸಭೆಗಳನ್ನು ನಡೆಸಿ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಖನ್ನತೆಯಂಥ ಸಂಗತಿಗಳ ಬಗ್ಗೆ ಸಂವಾದ ನಡೆಸುತ್ತೇವೆ’ ಎನ್ನುತ್ತಾರೆ ಶ್ರುಜನ್ ಸಂಸ್ಥೆಯ ಯೋಗಿನಿ ದೋಲ್ಕೆ.
2005ರಲ್ಲಿ ಶ್ರುಜನ್ ಸಂಸ್ಥೆ ರೈತರಿಗಾಗಿ ಕಾರ್ಯಕ್ರಮ ಆರಂಭಿಸಿದಾಗ, ಆ ಸಂಸ್ಥೆಯಲ್ಲೇ ಒಬ್ಬ ಮನಶಾಸ್ತ್ರಜ್ಞ ಇದ್ದರು. ಅನಂತರ, 2015ರಲ್ಲಿ ಮಹಾರಾಷ್ಟ್ರ ಸರಕಾರವು ಇದೇ ಉದ್ದೇಶದಿಂದ ಪ್ರೇರಣಾ ಎಂಬ ಸಹಾಯವಾಣಿ ಆರಂಭಿಸಿತು. ಇದಕ್ಕೆ ಹತಾಶ ರೈತರು ಫೋನ್ ಕರೆ ಮಾಡಿ ಆಪ್ತಸಲಹೆ (ಕೌನ್ಸೆಲಿಂಗ್) ಪಡೆಯಬಹುದು. ಮಹಾರಾಷ್ಟ್ರ ಸರಕಾರವು ರೈತರ ಆತ್ಮಹತ್ಯೆ ಮತ್ತು ಅದನ್ನು ತಡೆಯುವಲ್ಲಿ ಮನಃಶಾಸ್ತ್ರದ ಪಾತ್ರದ ಬಗ್ಗೆ 2005ರಲ್ಲಿ ಅಧ್ಯಯನ ನಡೆಸಿತ್ತು. ವಾರ್ಧಾದ ಮಹಾತ್ಮಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನಃಶಾಸ್ತ್ರ ವಿಭಾಗದ ಪಿ.ಬಿ. ಬೆಹೆರೆ ಆ ಅಧ್ಯಯನ ತಂಡದ ಒಬ್ಬ ಸಂಶೋಧಕರು. ಆತ್ಮಹತ್ಯೆಯ ಪ್ರಯತ್ನದಿಂದ ಪಾರಾದವರಲ್ಲಿ ಹಲವರು ತಾವು ಪುನಃ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿರುವುದಾಗಿ ತಿಳಿಸಿದರು ಎಂಬ ಆತಂಕಕಾರಿ ಮಾಹಿತಿ ನೀಡುತ್ತಾರೆ ಬೆಹೆರೆ.
ತೆಲಂಗಾಣದಲ್ಲಿ ಸ್ಥಾಪಿಸಲಾದ ಕಿಸಾನ್ ಮಿತ್ರ ಸಹಾಯವಾಣಿ ಸಕ್ರಿಯವಾಗಿದೆ (ಮಹಾರಾಷ್ಟ್ರದ ನಂತರ, ಆತ್ಮಹತ್ಯೆ ಮಾಡಿಕೊಂಡ ಅತ್ಯಧಿಕ ರೈತರ ರಾಜ್ಯ ತೆಲಂಗಾಣ). ಏಪ್ರಿಲ… 2017ರಿಂದ ಕಿಸಾನ್ ಮಿತ್ರ ಸಹಾಯವಾಣಿ, ಸುಮಾರು 4,000 ಹತಾಶ ರೈತರಿಗೆ ಸಹಾಯ ಮಾಡಿದೆ. ಅದರ ಶುಲ್ಕರಹಿತ ಸಹಾಯವಾಣಿ 18001203244 ಮೂಲಕ ರೈತರ ದೂರುಗಳು ಮತ್ತು ಪ್ರಶ್ನೆಗಳನ್ನು ಸ್ವೀಕರಿಸಿ ಸ್ಪಂದಿಸಲಾಗುತ್ತಿದೆ. 2018ರಲ್ಲಿ ಮುಂಗಾರು ಹಂಗಾಮಿನಲ್ಲಿ ಹತ್ತಿಯ ಬೆಲೆ ಕುಸಿಯಿತು. ಆಗ, ಕಿಸಾನ್ ಮಿತ್ರಕ್ಕೆ ಬಂದ ಕರೆಗಳ ಮಾಹಿತಿ ಆಧರಿಸಿ, ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಿದ ಕಾರಣ, ರೈತರಿಗೆ ಸಹಾಯವಾಯಿತು.
ವಿಶ್ವಾಸ ತುಂಬುವ ಕೆಲಸ
ಅಲ್ಲಿನ ಸುಸ್ಥಿರ ಕೃಷಿ ಕೇಂದ್ರವು ಪತ್ರಿಕಾ ವರದಿಗಳು ಮತ್ತು ಸ್ವಯಂಸೇವಕರು ಕಳಿಸಿದ ಮಾಹಿತಿಯ ಆಧಾರದಿಂದ ರೈತರ ಆತ್ಮಹತ್ಯೆಗಳ ಅಂಕೆಸಂಖ್ಯೆಯನ್ನು ದಾಖಲಿಸುತ್ತಿದೆ. ಅದರ ಕಾರ್ಯನಿರ್ವಾಹಕ ನಿರ್ದೇಶಕ ಜಿ.ವಿ. ರಾಮಾಂಜನೇಯುಲು. ರೈತರೊಂದಿಗೆ ಮಾತನಾಡುವುದಕ್ಕೆ ಯಾರೂ ಇಲ್ಲ. ರೈತರ ಖನ್ನತೆ ಪ್ರಾಣಾಂತಿಕ ಮಟ್ಟಕ್ಕೇರಲು ಇದುವೇ ಮುಖ್ಯ ಕಾರಣ. ಮೊದಲಾಗಿ, ನಿಮಗಾಗಿ ನಾವಿದ್ದೇವೆ ಎಂಬ ವಿಶ್ವಾಸವನ್ನು ರೈತರಲ್ಲಿ ಮೂಡಿಸಬೇಕು. ಅನಂತರ ರೈತರೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಮಾತಾಡಬೇಕು. ಅದಾದ ನಂತರ ಆ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ವಿವರಿಸುತ್ತಾರೆ.
ಹಲವು ರಾಜ್ಯಗಳು ರೈತ ಸಹಾಯವಾಣಿ ಆರಂಭಿಸಿವೆ. ರೈತರ ಆತ್ಮಹತ್ಯೆಗೆ ಮಾನಸಿಕ ಆರೋಗ್ಯದ ಕೊರತೆ ಕಾರಣ ಎಂಬ ನೆಲೆಯಲ್ಲಿ. ಆದರೆ ಪರಿಣತರ ಅಭಿಪ್ರಾಯ ಮತ್ತು ಅಧ್ಯಯನಗಳ ಪ್ರಕಾರ, ರೈತರ ಆತ್ಮಹತ್ಯೆ ಕಡಿಮೆ ಮಾಡಬೇಕಾದರೆ, ಮನಃಶಾಸ್ತ್ರ ಆಧಾರಿತ ಕ್ರಮಗಳಿಗಿಂತ ರೈತರ ಹತಾಶೆ ಹೋಗಲಾಡಿಸುವ ಸರಕಾರದ ಧೋರಣಾತ್ಮಕ ಕ್ರಮಗಳು ಹೆಚ್ಚು ಪರಿಣಾಮಕಾರಿ.
ಉದಾಹರಣೆಗೆ, ಇಂಡಿಯನ್ ಜರ್ನಲ… ಆಫ್ ಸೈಕಿಯಾಟ್ರಿ ಸಂಶೋಧನಾ ಪತ್ರಿಕೆಯಲ್ಲಿ 2017ರಲ್ಲಿ ಪ್ರಕಟವಾದ ಒಂದು ಅಧ್ಯಯನ ವರದಿ ಹೀಗೆನ್ನುತ್ತದೆ: ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ನಡೆಸಿದ ಅಧ್ಯಯನಗಳಿಂದ ಪಡೆದ ಸಾಕ್ಷ್ಯಗಳ ಅನುಸಾರ, ರೈತರ ಆತ್ಮಹತ್ಯೆಗಳಲ್ಲಿ ಮಾನಸಿಕ ಸಮಸ್ಯೆಗಳ ಪಾತ್ರಕ್ಕಿಂತ ಸಾಮಾಜಿಕ ಆರ್ಥಿಕ ಒತ್ತಡಗಳ ಪಾತ್ರ ಹಿರಿದಾಗಿದೆ.
ಸಮಗ್ರ ಗ್ರಹಿಕೆ ಅಗತ್ಯ
ಮಹಾರಾಷ್ಟ್ರದ ವಿದರ್ಭದಲ್ಲಿ ರೈತರ ಆತ್ಮಹತ್ಯೆ: ಕಟ್ಟುಕತೆ ಅಥವಾ ವಾಸ್ತವ ಎಂಬ ಶೀರ್ಷಿಕೆಯ ಅಧ್ಯಯನ ವರದಿ ಹೀಗೆಂದು ದಾಖಲಿಸಿದೆ: ರೈತರ ಆತ್ಮಹತ್ಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ವಿವಿಧ ಅಂಶಗಳು ಇವು: ವಿಪರೀತ ಸಾಲ ಮತ್ತು ವರ್ಷಗಟ್ಟಲೆ ಬಾಕಿಯಾದ ಬಡ್ಡಿ ಪಾವತಿಸಲು ಅಸಾಮರ್ಥ್ಯ; ಕೌಟುಂಬಿಕ ಜಗಳಗಳು, ಖನ್ನತೆ ಮತ್ತು ಮದ್ಯಪಾನ ಚಟಕ್ಕೆ ಕಾರಣವಾಗುವ ಆರ್ಥಿಕ ಸಂಕಷ್ಟಗಳು; ಆತ್ಮಹತ್ಯೆ ಮಾಡಿಕೊಂಡರೆ ಸಿಗುವ ಪರಿಹಾರದ ಹಣದಿಂದ ಸಾಲ ತೀರಿಸಲು ಕುಟುಂಬಕ್ಕೆ ಆಗುವ ಸಹಾಯ; ಕೃಷಿಯ ಒಳಸುರಿಗಳ (ಬೀಜ, ಗೊಬ್ಬರ ಇತ್ಯಾದಿ) ಏರುತ್ತಿರುವ ವೆಚ್ಚ ಮತ್ತು ಕುಸಿಯುತ್ತಿರುವ ಕೃಷಿ ಉತ್ಪನ್ನಗಳ ಬೆಲೆ.
ವಾಸ್ತವ ಹೀಗಿರುವಾಗ, ಕೃಷಿರಂಗದ ಬಿಕ್ಕಟ್ಟು ಮತ್ತು ರೈತ ಆತ್ಮಹತ್ಯೆಗಳ ಸಮಸ್ಯೆಯನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಅಗತ್ಯ. ಮುಂಬಯಿ ಅಥವಾ ದೆಹಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ, ಪ್ರತಿಭಟಿಸಿದ ರೈತರು ತೀವ್ರ ಹತಾಶೆಯ ಎಚ್ಚರಿಕೆಯ ಸಂದೇಶಗಳನ್ನು ಕಳಿಸುತ್ತಲೇ ಇ¨ªಾರೆ. ಬದುಕಬೇಕು ಎಂಬುದು ಅವರ ಆಶಯ. ಅವರನ್ನು ಹತಾಶೆಯ ಪ್ರಪಾತದ ಅಂಚಿಗೆ ತಳ್ಳಬಾರದು, ಅಲ್ಲವೇ?
– ಅಡ್ಡೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.