ಮಾವು, ಅಡಿಕೆ ಮಧ್ಯೆ ಬದನೆ
Team Udayavani, Jul 10, 2017, 1:03 PM IST
ಅಂತರ ಬೆಳೆಯನ್ನು ಅಡಿಕೆ, ತೆಂಗಿನ ಮಧ್ಯೆ ಮಾತ್ರವಲ್ಲ. ಮಾವಿನ ಮಧ್ಯೆ ಕೂಡ ಬೆಳೆಯಬಹುದು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳ ಗ್ರಾಮದ ರುದ್ರಪ್ಪ ಹೀಗೆ ಮಾಡಿದ್ದಾರೆ. ಮಾವಿನ ತೋಪಿನಲ್ಲಿ ಅಡಿಕೆ ಸಸಿ ಬೆಳೆಸುತ್ತಿರುವುದರ ಜೊತೆಗೆ ಬದನೆ ಕೃಷಿ ಮೂಲಕ ಸುತ್ತಮುತ್ತಲ ರೈತರನ್ನು ಚಕಿತಗೊಳಿಸಿದ್ದಾರೆ. ತರಿಕೆರೆಯಿಂದ ಇತಿಹಾಸ ಪ್ರಸಿದ್ಧ ಅಮೃತಾಪುರ ದೇವಾಲಯಕ್ಕೆ ಹೋಗುವಾಗ ಸಮತಳ ಗ್ರಾಮ ಎದುರಾಗುತ್ತದೆ.ರಸ್ತೆ ಪಕ್ಕದಲ್ಲಿಯೇ ರುದ್ರಪ್ಪನವರ ಹೊಲವಿದೆ.
ಕೃಷಿ ಹೇಗೆ ?
ರುದ್ರಪ್ಪನವರು ಒಂದೂವರೆ ಎಕರೆ ಹೊಲದಲ್ಲಿ 35 ಮಾವಿನ ಮರಗಳನ್ನು ಬೆಳೆಸಿದ್ದಾರೆ. 8 ವರ್ಷ ಪ್ರಾಯದ ಮಾವಿನ ಮರಗಳು ಕಸಿ ಜಾತಿಯವಾಗಿದ್ದು, ಮರದ ತುಂಬಾ ಫಸಲು ಬಿಟ್ಟಿವೆ. ಈ ಮರಗಳ ನಡುವೆ 600 ಅಡಿಕೆ ಸಸಿ ನೆಟ್ಟಿದ್ದಾರೆ. ಸಸಿಗಳಿಗೆ ಒಂದು ವರ್ಷವಾಗಿದ್ದು ಫಸಲಿಗೆ ಇನ್ನೂ 5-6 ವರ್ಷ ಕಾಯಬೇಕು. ಅದುವರೆಗೂ ಆದಾಯ ಗಳಿಸಲು ತರಕಾರಿ ಕೃಷಿ ಶುರುಮಾಡಿದ್ದಾರೆ. ಮಾವಿನ ಮರಗಳ ನಡುವಿನ ಖಾಲಿ ಜಾಗದಲ್ಲಿ ಅಡಿಕೆ ಸಸಿಗಳಿಂದ 2 ಅಂತರ ಬಿಟ್ಟು ಬದನೆ ಗಿಡ ಬೆಳೆಸಿದ್ದಾರೆ. ಮುಂಡ್ರಳ್ಳಿಯ ನರ್ಸರಿಯಿಂದ ಒಂದು ಗಿಡಕ್ಕೆ 80 ಪೈಸೆಯಂತೆ 4000 ಬದನೆ ಗಿಡ ಖರೀದಿಸಿ ತಂದು ನೆಟ್ಟಿದ್ದಾರೆ. ಗಿಡದಿಂದ ಗಿಡಕ್ಕೆ ಒಂದು ಅಡಿ ಮತ್ತು ಸಾಲಿನಿಂದ ಸಾಲಿಗೆ ಎರಡು ಅಡಿ ಅಂತರದಲ್ಲಿ ಬದನೆ ಬೆಳೆಸಿದ್ದಾರೆ.ಕೊಳವೆ ಬಾವಿಯಿಂದ ಎರಡು ದಿನಕ್ಕೆ ಒಮ್ಮೆಯಂತೆ ನೀರು ಹಾಯಿಸಿದ್ದಾರೆ. ಫೆಬ್ರವರಿ ಮೂರನೇ ವಾರದ ಸುಮಾರಿಗೆ ಬದನೆ ನಾಟಿ ಮಾಡಿದ್ದರು.ಗಿಡ ನೆಟ್ಟು 10 ದಿನ ವಾಗುತ್ತಿದ್ದಂತೆ ಡಿ.ಎ.ಪಿ ಮತ್ತು ಪೊಟ್ಯಾಷ್ ಮಿಶ್ರಣ ಮಾಡಿ ಗೊಬ್ಬರ ನೀಡಿದ್ದರು. ನಂತರ ಪ್ರತಿ 20 ದಿನಕ್ಕೆ ಒಮ್ಮೆಯಂತೆ 3 ಸಲ ಗೊಬ್ಬರ ನೀಡಿದ್ದಾರೆ. ಏಪ್ರಿಲ್ ಮೊದಲವಾರ ಫಸಲು ಆರಂಭವಾಗಿ ಜೂನ್ 20 ರ ವರೆಗೂ ಮಾರಾಟ ಮಾಡಿದ್ದಾರೆ.
ಲಾಭ ಹೇಗೆ?
ಎರಡು ದಿನಕ್ಕೆ ಒಮ್ಮೆಯಂತೆ ಫಸಲು ಕೀಳುತ್ತಾರೆ. ಇಡೀ ಬದನೆ ಹೊಲವನ್ನು ಕಣ್ಣಳತೆಯಲ್ಲಿ 4 ಭಾಗ ಮಾಡಿಕೊಂಡು ಒಂದೊಂದು ಭಾಗದಲ್ಲಿ ಒಂದು ಸಲದಂತೆ ಫಸಲು ತೆಗೆಯುತ್ತಾರೆ. ಜೂನ್‌ವರೆಗೆ ಲೆಕ್ಕ ಹಾಕಿದರೆ ಇವರು ಒಟ್ಟು 460 ಪ್ಯಾಕೆಟ್ ಬದನೆ ಮಾರಾಟ ಮಾಡಿದ್ದಾರೆ.ಒಂದು ಪ್ಯಾಕೆಟ್ ಅಂದರೆ 12 ಕಿ.ಗ್ರಾಂ ತೂಕದ ಚೀಲ. ಒಂದು ಪ್ಯಾಕೆಟ್‌ಗೆ ಈ ವರ್ಷ ರೂ.200 ದರ ಸಿಗುತ್ತಿದೆ. 460 ಪ್ಯಾಕೆಟ್ ಬದನೆಕಾು ಮಾರಾಟದಿಂದ ಇವರಿಗೆ ಸುಮಾರು ರೂ.92 ಸಾವಿರ ರೂ. ಆದಾಯ. ಗಿಡ ಖರೀದಿ,ನೆಡುವಿಕೆ, ಗೊಬ್ಬರ, ನೀರಿನ ನಿರ್ವಹಣೆ ಹೀಗೆ ಎಲ್ಲಾ ಬಗೆಯ ಲೆಕ್ಕ ಹಾಕಿದರೂ ಇವರಿಗೆ ಒಟ್ಟು 30 ಸಾವಿರ ರೂ. ಖರ್ಚು ಬಂದಿದೆ. ಆದರೂ ಸರಾಸರಿ 60 ಸಾವಿರ ರೂ.ಲಾಭ ದೊರೆತಿದೆ. ಮಾವಿನ ಮರಗಳ ಫಸಲನ್ನು ಮರವೊಂದಕ್ಕೆ ರೂ.2 ಸಾವಿರದಂತೆ ಹಣ್ಣಿನ ವ್ಯಾಪಾರಿಗೆ ಫಸಲು ಮಾರಾಟ ಮಾಡಿದ್ದಾರೆ.
ಆದಾಯ ಮಾಡಿಕೊಳ್ಳುವುದು ಅಂದರೆ ಹೀಗೆ ಅಲ್ಲವೇ?
ಎನ್.ಡಿ.ಹೆಗಡೆ ಆನಂದಪುರಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.