ಮಣ್ಣಿನ ಆರೋಗ್ಯಕ್ಕೆ ಮಾಂಜ್ರಾ ಪಾಠಗಳು


Team Udayavani, Dec 11, 2017, 11:26 AM IST

11-18.jpg

ವರ್ಷದ ಆರೇಳು ತಿಂಗಳು ಹರಿಯುವ ಮಾಂಜ್ರಾ ನದಿಯನ್ನು ನಂಬಿಯೇ ಗಡಿ ಜಿಲ್ಲೆ ಬೀದರ್‌ನ ಕೃಷಿ ಬದುಕು ನಡೆದಿದೆ. ನದಿ ಮೂಲದ ಮಹಾರಾಷ್ಟ್ರದಲ್ಲಿ ಕೃಷಿ ಹೊಂಡ, ಕೆರೆ ನಿರ್ಮಾಣ, ಬ್ಯಾರೇಜ್‌ಗಳ ಹೂಳೆತ್ತುವ ಕೆಲಸವು  ಸರಕಾರ, ಸಮುದಾಯದ ನೇತೃತ್ವದಲ್ಲಿ ಜೋರಾಗಿ ನಡೆಯುತ್ತಿದೆ. ಆದರೆ  ಬೀದರ್‌ ಜಿಲ್ಲೆಯಲ್ಲಿ ನದಿ ಸಂರಕ್ಷಣೆಯ ಕಾಯಕಕ್ಕೆ ಇನ್ನೂ ನಾವು ಸರಿಯಾಗಿ ಹೆಜ್ಜೆ ಇಟ್ಟಿಲ್ಲ. ವಾಸ್ತವ ಹೀಗಿರುವಾಗಲೇ ಕಷ್ಟ ಸಹಿಷ್ಣುಗಳ ಕೃಷಿ ಕಾಳಜಿಯಲ್ಲಿ ನೆಲ ಜಲ ಸಂರಕ್ಷಣೆಯ ಪುಟ್ಟ ಬೆಳಕು ಕಾಣಿಸುತ್ತಿದೆ.

ಮೈಲಾರಲಿಂಗನ ಭೂಮಿ 885 ಎಕರೆ ವಿಸ್ತಾರವಿದೆ. 40 ವರ್ಷದಿಂದ ಇಲ್ಲೇ ಇದ್ದೇನೆ. ಗಾಯ್‌ಮುಖ ಬದಲಾಗಿದ್ದು ನೋಡಿಲ್ಲ…. ಗೋವಿನಮುಖದಿಂದ ನೀರು ಒಂದೇ ಪ್ರಮಾಣದಲ್ಲಿ ಹರಿದು ಬರುತ್ತಿದೆ. ದಿನಕ್ಕೆ ಸಾವಿರಾರು ಭಕ್ತರು ಬರ್ತಾರೆ. ದೈವ ಸನ್ನಿದಾನಕ್ಕೆ ಶರಣಾಗುತ್ತೀ… ಹೀಗೆಂದು ಖಾನಾಪುರದ ಕಾಶಿನಾಥ ಜೋಶಿ ವಿವರಿಸುತ್ತಿದ್ದರು. ಬೀದರ್‌ನಿಂದ ಸುಮಾರು 15 ಕಿಲೋ ಮೀಟರ್‌ ದೂರದಲ್ಲಿ ಬಾಲ್ಕಿ ರಸ್ತೆಯಂಚಿನಲ್ಲಿಗಾಯ್‌ಮುಖ(ಗೋಮುಖ)ವಿದೆ. ಇದನ್ನು ನೋಡಿದರೆ ಗೌತಮ ಮುನಿಯ ಪ್ರಯತ್ನದಿಂದ ಜನಿಸಿದ ಗೋದಾವರಿ ನದಿ ನೆನಪಾಗುತ್ತದೆ. ಬೀದರ್‌ನ ಬಿಸಿಲು, ಬರದ ನೆಲೆಯಲ್ಲಿ ಮಲೆನಾಡಿನ ಕಣಿವೆಯಲ್ಲಿ ಕಾಣಿಸುವಂತೆ ಒರತೆ ಜಲವಿದೆಯೆಂದರೆ ಅಚ್ಚರಿಯೇ! ಆಕಳ ಮುಖದಿಂದ ಹರಿಯುವ ಪವಿತ್ರ ಜಲದ ನೆಲೆ ಪುಣ್ಯಕ್ಷೇತ್ರ, ಮೈಲಾರಲಿಂಗನ ಭೂಮಿಯೆಂಬ ದೈವ ಭಕ್ತಿಯಲ್ಲಿ ಅರಣ್ಯ ಸಂರಕ್ಷಿಸಿದ ಪರಂಪರೆಯಿಂದ ನೀರು ಉಳಿದಿದೆ. 


ಗಾಯಮಾತಾದ ನೀರು ಹರಿದು ವ್ಯರ್ಥವಾಗಿ ಹೋಗುತ್ತಿದೆ. ಇಲ್ಲಿ ಒಂದು ವಿಶಾಲ ಕೆರೆ ಕಟ್ಟಬಹುದಲ್ಲವೇ? ಒಳ್ಳೆಯ ಜಾಗದಲ್ಲಿ ನೀರು ಶೇಖರಿಸಿದರೆ ಕೃಷಿಗೆ ಪ್ರಯೋಜನವಾಗಬಹುದೆಂದು ಬೀದರ್‌ನ ಹಿರಿಯ ಮಿತ್ರರೊಬ್ಬರು ಮಾತಾಡಿದ್ದರು. ಜಲ ಪಯಣದಲ್ಲಿ ಗಾಯಮಾತಾ ಸುತ್ತಾಡಿದರೆ ಇಲ್ಲಿ ಮನುಷ್ಯ ಕೃತಕವಾಗಿ ಏನು ಮಾಡಿದರೂ ಗೋಮಾತೆ ಮುನಿಸಿಕೊಂಡು ಗಂಗಾಮಾತೆ ಮಾಯವಾಗಬಹುದು ಅನ್ನಿಸಿತು.  ನಿಸರ್ಗದ ಕೊಡುಗೆಯನ್ನು ಜನಜೀವನದ ಲಾಭಕ್ಕೆ ತಿರುಗಿಸಲು ಕಣಿವೆಯ ಕಲ್ಲು ಒಡೆದು, ಮಣ್ಣು ಬಗೆದು, ಕಾಂಕ್ರೀಟ್‌ ಕಟ್ಟಲು ಶುರುವಾದರೆ ಇಷ್ಟು ಕಾಲ ನೆಲದ ಸೇವೆಗೈಯ್ದ ವೃಕ್ಷಗಳು ಕಣ್ಮರೆಯಾಗುತ್ತವೆ. 600-800 ಮಿಲಿ ಮೀಟರ್‌ ವಾಡಿಕೆಯ ಮಳೆ ಸುರಿಯುವ ಬೀದರ್‌  ಶತಮಾನಗಳಿಂದ ಹಲವು ಬರ ಕಂಡಿದೆ. ಬಹತ್ತರ್‌ (1972) ಬರದಲ್ಲಂತೂ ಊರಿಗೆ ಊರೇ ತತ್ತರಿಸಿದೆ. ಕಳೆದ ದಶಕದಲ್ಲಿ ಹಲವು ವರ್ಷ ಮಳೆ ಕೊರತೆಯಾಗಿದೆ. ಕೆಲವೊಮ್ಮೆ 250-300 ಮಿಲಿ ಮೀಟರ್‌ ಕೂಡಾ ಸುರಿದಿಲ್ಲ. ಆದರೆ ಪವಾಡದಂತೆ ಗಾಯ್‌ಮಾತಾದ ಜುಳು ಜುಳು ಮಾತ್ರ ನಿಲ್ಲಲಿಲ್ಲ. ಮನುಷ್ಯ, ಪ್ರಕೃತಿ ಶೋಷಣೆಯಿಂದ ಒಂದು ಹೆಜ್ಜೆ ಹಿಂದೆ ಸರಿಯಲು ದೈವದ ಕುರಿತು ಇರುವ ನಂಬಿಕೆಗಳು ನೆರವಾಗುತ್ತವೆ. ನಿಸರ್ಗ ನಿರ್ಮಿತ ಅರಣ್ಯ ಉಳಿಸಿದರೆ ನಾಡಿನ ನೆಮ್ಮದಿ ಹೇಗೆ ಸಾಧ್ಯವೆಂದು ಅರಿಯಲು ಇಲ್ಲಿ ಸಾಕ್ಷಿ ಸಿಗುತ್ತದೆ. ಗೋದಾವರಿ ನದಿ ಕಣಿವೆಯ ಮಗಳು ಮಾಂಜ್ರಾ, ಇವಳ ಸೆರಗಿನ ಕಿರಿ ಮಗಳಂತೆ  ಗಾಯ್‌ಮಾತಾ ಕಾಣಿಸುತ್ತಾಳೆ. ಕಾಡು ನೀರಿನ ಜಲ ಸಂರಕ್ಷಣೆಯ ಮಹತ್ವವನ್ನು ಇಲ್ಲಿ ತಿಳಿಯಬಹುದು. 

ಕಾವೇರಿ, ಕೃಷ್ಣಾ, ತುಂಗಭದ್ರಾ ನದಿ ಹೆಸರು ಎಲ್ಲರಿಗೂ ಪರಿಚಿತ. ಆದರೆ ಮಾಂಜ್ರಾ ಹೆಸರು ಕೇಳಿದವರು ಬಹಳ ಕಡಿಮೆ.  ಮಹಾರಾಷ್ಟ್ರದ ಬಾಲಘಾಟ್‌ ಶ್ರೇಣಿಯ ಬೀಡ್‌ ಜಿಲ್ಲೆಯಲ್ಲಿ ಜನಿಸಿ ಉಸ್ಮಾನಾಬಾದ್‌, ಲಾತೂರ್‌ ಜಿಲ್ಲೆಗಳ ಮೂಲಕ ಬೀದರ್‌ ಪ್ರವೇಶಿಸುವ ಇದು 84 ಕಿಲೋ ಮೀಟರ್‌ ದೂರ ಬೀದರ ಜಿಲ್ಲೆಯಲ್ಲಿ ಪ್ರವಹಿಸುತ್ತದೆ.  ಬಾಲ್ಕಿ, ಬಸವಕಲ್ಯಾಣ, ಔರಾದ್‌, ಬೀದರ ತಾಲೂಕಿನ ಜೊತೆಗೆ ಹುಮನಾಬಾದ್‌ ಪ್ರದೇಶಕ್ಕೂ ನದಿ ನೀರು ನೆರವಾಗಿದೆ. ಬಾಲ್ಕಿ ತಾಲೂಕಿನ ಕೊಂಗಳಿ, ಜೀರಗಾ, ಚಂದಾಪುರಗಳಲ್ಲಿ ನದಿಗೆ ಸೇತುವೆ ಜೊತೆಗೆ ನೀರಾವರಿ ಒಡ್ಡು ನಿರ್ಮಿಸಲಾಗಿದೆ. ಕಾರಂಜಾ ನೀರಾವರಿ ಯೋಜನೆ ರೈತರ ಅನುಕೂಲಕ್ಕೆ ರೂಪಿಸಲಾಗಿದೆ. ಆದರೆ ಕಾಲುವೆ ನಿರ್ಮಾಣ ಪೂರ್ಣಗೊಂಡಿಲ್ಲ. ವರ್ಷಕ್ಕೆ ಒಂದೆರಡು ಸಾರಿ ಯಾವಾಗಲೋ ನೀರು ಬಿಡುತ್ತಾರೆ. ಆದ್ದರಿಂದ ಕೃಷಿಗೆ ಯಾವುದೇ ಪ್ರಯೋಜನವಿಲ್ಲ. ವಿಚಿತ್ರವೆಂದರೆ ಬೀದರ್‌, ಹುಮನಾಬಾದ್‌, ಚಿಟಗುಪ್ಪ ಪಟ್ಟಣಗಳ ಕುಡಿಯುವ ನೀರಿಗಾಗಿ ಕಾರಂಜಾ ಬಳಕೆಯಾಗುತ್ತಿದೆ. ಚುಳಕಿ ನಾಲಾ, ಬಸವಕಲ್ಯಾಣ ನಗರಕ್ಕೆ ನೀರು  ಒದಗಿಸುತ್ತಿದೆ. 

ಮಾಂಜ್ರಾ ನದಿ ಒಂದು ಕಾಲದಲ್ಲಿ ವರ್ಷವಿಡೀ ಹರಿಯುತ್ತಿತ್ತು. ಈಗ ಮಹಾರಾಷ್ಟ್ರದಲ್ಲಿ ಮಳೆ ಸುರಿದಾಗ ಮೈತುಂಬಿಕೊಳ್ಳುತ್ತಿದೆ. ವರ್ಷದ ಆರೇಳು ತಿಂಗಳು ನದಿ ಹರಿದರೂ ಸಾಕು, ತೀರದ ಕೃಷಿ ನೆಲೆಗಳಲ್ಲಿ ಅಂತರ್ಜಲ ಏರುತ್ತದೆ. ತೆರೆದ ಬಾವಿ, ಕೊಳವೆ ಬಾವಿ ನೀರಾವರಿಯ ಮೂಲಕ ಪರಿಶ್ರಮದಲ್ಲಿ ಕೃಷಿ ಗೆಲ್ಲುತ್ತದೆ. ಉತ್ತರ ಕರ್ನಾಟಕದಲ್ಲಿ ಆಲಮಟ್ಟಿ ಅಣೆಕಟ್ಟು ನಿರ್ಮಾಣದ ಬಳಿಕ ಬೆಳಗಾವಿ, ಬಾಗಲಕೋಟೆಯಲ್ಲಿ ಕಬ್ಬಿನ ಕ್ರಾಂತಿಯಾಗಿದ್ದು ಗೊತ್ತಿದೆ. 1980ರ ಪೂರ್ವದಲ್ಲಿ ಮಂಡ್ಯ ಜಿಲ್ಲೆ ಕಬ್ಬಿನ ಪ್ರಮುಖ ನೆಲೆಯಾಗಿತ್ತು. ಇದರ ನಂತರದ ಸ್ಥಾನವನ್ನು ಬೀದರ್‌ ಹೊಂದಿತ್ತು.  ತೆರೆದ ಬಾವಿಗಳಿಂದ ನೀರೆತ್ತಿ ಕಬ್ಬು ಬೆಳೆಯುವ ಸಾಹಸ ಇಲ್ಲಿ ನಡೆಯುತ್ತಿತ್ತು. 70ರ ದಶಕದಲ್ಲಿ ಕಪ್ಪಲಿ ಹೊಡೆಯುವ ನೋಟಗಳು ಸಾಮಾನ್ಯವಾಗಿದ್ದವು. 40-50 ಅಡಿ ಸುತ್ತಳತೆ, 18-20 ಅಡಿ ಅಲ್ಪ ಆಳದ ಭಾಗಗಳಲ್ಲಿ ನೀರು ಧಾರಾಳ ದೊರೆಯುತ್ತಿತ್ತು. ಊರಿಗೆ ಮೂರು ನಾಲ್ಕು ಕಬ್ಬಿನ ತೋಟಗಳು, ಪ್ರತಿಯೊಬ್ಬರ ಹೊಲದಲ್ಲೂ ಬಾವಿಗಳಿದ್ದವು. ಕಬ್ಬು ಅರೆದು ಬೆಲ್ಲ ತಯಾರಿಸುವ ಕಾರ್ಯ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿತ್ತು. ಕಳವೆ(ಭತ್ತ), ಬಾಳೆ, ತರಕಾರಿ, ಇರುಳ್ಳಿಗಳನ್ನು ಕಪ್ಪಲಿ ನೀರಾವರಿಯಲ್ಲಿ ಬೆಳೆಯುತ್ತಿದ್ದರು. ಇದಕ್ಕೆಲ್ಲ ಮಾಂಜ್ರಾ ಜೀವಸೆಲೆ. 

ಬಸವಕಲ್ಯಾಣ ತಾಲೂಕಿನಲ್ಲಿ ಇಂದಿಗೂ  ತೆರೆದ ಬಾವಿಗಳಲ್ಲಿ ಕೃಷಿ ನೀರಾವರಿ ಇದೆ. ಬಸವಕಲ್ಯಾಣ ಕೋಟೆಯ ಪ್ರದೇಶ ಪರ್ತಾಪುರ ಸನಿಹದಲ್ಲಿ 12ನೇ ಶತಮಾನದಲ್ಲಿ ನಿರ್ಮಿಸಿದ ಬಾವಿಗಳಲ್ಲಿ ಬೀದರದ ಜಲ ಪರಂಪರೆಯ ತಾಕತ್ತು ಗಮನಿಸಬಹುದು. 40 ವರ್ಷಗಳ ಹಿಂದೆ ಜಿಲ್ಲೆಯ ಹುಮನಾಬಾದ್‌ ಪ್ರದೇಶದಲ್ಲಿ 1000-1200 ಮಿಲಿ ಮೀಟರ್‌ ಮಳೆ ಸುರಿಯುತ್ತಿತ್ತು. 1980ರವರೆಗೆ ನೀರಾವರಿಗೆ ನೂರಕ್ಕೆ ನೂರು ಜನ ತೆರೆದ ಬಾವಿಗಳನ್ನು ಮಾತ್ರ ಬಳಸುತ್ತಿದ್ದರು. ಈಗ ಶೇ. 40ರಷ್ಟು ಬಾವಿ ಬಳಕೆ ಉಳಿದಿದೆ. ಬೀದರ-ಗುಲ್ಬರ್ಗಾ ಗಡಿಯಲ್ಲಿ ಕಮಲಾಪುರ ಹಳ್ಳ ಹರಿಯುತ್ತದೆ. ಕಣಿವೆಯಲ್ಲಿ ಹರಿಯುವ ಹಳ್ಳ, ದಡದ ಮಾವು, ಬಿದಿರು ಸಸ್ಯ ನೋಡಿದರೆ ಬಯಲು ನೆಲದ ನದಿ ಪರಿಸರ ಹಿಂದೆ ಹೇಗಿತ್ತೆಂದು ತಿಳಿಯುತ್ತದೆ, ಇಲ್ಲಿ ಮಲೆನಾಡು ನೆನಪಾಗುತ್ತದೆ. ಮಾರ್ಚ್‌ವರೆಗೆ ಹಳ್ಳ ಹರಿಯುತ್ತ ನಂತರ ಒಣಗುತ್ತದೆ. ಆದರೆ ಹಳ್ಳದ ದಂಡೆಯ ಬಾವಿಗಳಲ್ಲಿ ಸಾಕಷ್ಟು ನೀರಿರುತ್ತದೆ. ಕೊಳವೆ ಬಾವಿ ಕೊರೆಸುವ ಈ ಕಾಲದಲ್ಲಿಯೂ ರೈತರು ಹೊಸ ಹೊಸ ತೆರೆದ ಬಾವಿಗಳನ್ನು ಹಳ್ಳದ ಗುಂಟ ನಿರ್ಮಿಸುತ್ತಿರುವುದು ನೀರ ನೆಮ್ಮದಿಗೆ ಪುರಾವೆಯಾಗಿದೆ. 

ಕಾವೇರಿ, ಕೃಷ್ಣಾ, ತುಂಗಭದ್ರಾ ನದಿ ಕಣಿವೆಗಳಲ್ಲಿ  ಅಣೆಕಟ್ಟೆಯ ಕೇಂದ್ರೀಕೃತ ನೀರಾವರಿ ಯೋಜನೆಗಳನ್ನು ನೋಡುತ್ತಿದ್ದೇವೆ. ಭತ್ತ, ಕಬ್ಬಿನ ಸಾಮ್ರಾಜ್ಯವೇ ಈಗ  ನೆಲ ಆಳುತ್ತಿದೆ.  ಬೃಹತ್‌ ನೀರಾವರಿ ಯೋಜನೆಯ ಅನುಕೂಲತೆ ಇಲ್ಲದ ಬೀದರ್‌, ಇಂದು ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ ಕೃಷಿ ನಂಬಿದೆ. ವರ್ಷದ ಒಂಬತ್ತು ತಿಂಗಳು ನೀರಿಗೆ ಸಮಸ್ಯೆಇಲ್ಲ. ಏಪ್ರಿಲ್‌-ಮೇ ಸಮಯದಲ್ಲಿ ಕಬ್ಬು ನೀರಿಲ್ಲದೆ ಒಣಗುತ್ತದೆ. ಆದರೆ ಜೂನ್‌ನಲ್ಲಿ ಮಳೆ ಶುರುವಾದರೆ ಬೆಳೆಗೆ ಹೊಸ ಜೀವ ಮೂಡುತ್ತದೆ. ಕಬ್ಬಿನ ನಡುವೆ 10-15 ಜಾತಿಯ ತರಕಾರಿ ಬೆಳೆಯುವ ಮಾದರಿ ಪ್ರಯತ್ನಗಳಿವೆ. ಗೋಬಿ, ತಿಳಕಿಜಾÌಳ, ಹುಮನಾಬಾದ್‌ ಶುಂಠಿ, ಬಸವಕಲ್ಯಾಣದ ಮುಚ್ಚಳಾಮ್‌ ಜೋಳ(ದಗಡಿ ಜೋಳ), ಔಡಲ, ಮೆಣಸಿನ ಕಾಯಿ, ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ, ಸೋಯಾ, ಸಜ್ಜೆ,ಕಡ್ಲೆ, ಶೇಂಗಾ, ಜವೆಗೋದಿ, ಅರಿಶಿನ…ಹೀಗೆ ಹೊಲಕ್ಕೆ ಖ್ಯಾತಿ ತಂದ ಬೆಳೆಗಳು ಹಲವಿದೆ. ದಾಳಿಂಬೆ, ಬಾಳೆ, ಲಿಂಬು, ದ್ರಾಕ್ಷಿ, ಗೋಡಂಬಿಯೂ ಇದೆ. ಬೆಳೆಸಿರಿಯ ಹಿಂದೆ ನದಿಯ ಕೊಡುಗೆ ಇದೆ.

ನೀರಾವರಿ ದಾಖಲೆ ತೆಗೆದರೆ 18.102 ಎಕರೆ ಬೀದರ್‌ನಲ್ಲಿ ಕೆರೆಗಳ ನೀರು ಪಡೆಯುತ್ತಿದೆ. ಆದರೆ ಈಗ ಬಹುತೇಕ ಕೆರೆಗಳು ಹೂಳು ತುಂಬಿ ಒಣಗಿವೆ. ಮೂರ್ಕಂಡಿ, ತಳಬೇಗ, ಬೇಲೂರು ಹೀಗೆ ಕೆಲವು ದೊಡ್ಡ ಕೆರೆಗಳು ಮಾತ್ರ ಉಳಿದಿವೆ. ಕೃಷಿ ಅಭಿವೃದ್ಧಿಗೆ ರೂಪಿಸಿದ ಯೋಜನೆಗಳು ನಗರದತ್ತ ಹರಿಯುವ ನೆಲೆಯಲ್ಲಿ ಕೃಷಿ ಕಲ್ಯಾಣ ಹೇಗೆ ಸಾಧ್ಯ? ನದಿ ತುಂಬಿ ಹರಿಯುವಾಗ ನೀರು ಹಿಡಿದಿಡಲು ಕೆರೆ ಕಟ್ಟೆಗಳು ನಿರ್ಮಾಣವಾಗಬೇಕು. ಈಗಾಗಲೇ ನಿರ್ಮಿಸಿದ ಬ್ಯಾರೇಜ್‌ಗಳಲ್ಲಿ ಅಪಾರ ಪ್ರಮಾಣದ ಹೂಳು ತುಂಬಿರುವುದರಿಂದ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ನದಿ, ಕೆರೆಗಳ ಹೂಳೆತ್ತುವ ಕೆಲಸ ನಡೆಯಬೇಕು. 

ಬೆಂಗಳೂರಿಂದ ಬೀದರ್‌ ಬಹಳ ದೂರ, ನೀರಾವರಿ ಯೋಜನೆಯ ವಿಚಾರದಲ್ಲಿಯೂ ಈ ಮಾತು ಅನ್ವಯವಾಗುತ್ತದೆ.  ಆದರೆ ನೀರಿನ ಸಂಕಷ್ಟಗಳ ನಡುವೆಯೂ ಇಂದು ಬೀದರ್‌ನ ರೈತರು ರಾಜ್ಯದ ಗಮನ ಸೆಳೆದಿದ್ದಾರೆ. ಕಬ್ಬಿನ ರವದಿಗಳನ್ನು ಮಣ್ಣಿಗೆ ಸೇರಿಸಿ, ಮಣ್ಣಿನ ಆರೋಗ್ಯ ಹೆಚ್ಚಿಸಿ, ಎಕರೆಗೆ 50-60 ಟನ್‌ ಕಬ್ಬು ಬೆಳೆಯುತ್ತಾರೆ. ಕಬ್ಬಿನ ಸಾಲಿನ ನಡುವೆ ತರಕಾರಿ, ತೊಗರಿ, ಅರಿಶಿಣ, ಸೋಯಾ, ಈರುಳ್ಳಿ ಮುಂತಾದ ಬೆಳೆ ಬೆಳೆದು ಗೆಲ್ಲುವ ಮಾರ್ಗ ತೋರಿಸುತ್ತಾರೆ.  ಕಬ್ಬು, ಶುಂಠಿ, ಗೋಬಿ, ಹೆಸರು, ಸೋಯಾ, ಅರಿಶಿಣ, ಈರುಳ್ಳಿ, ಭತ್ತಬೆಳೆದು ಗೆದ್ದ ಸಾಧಕರು ಇಲ್ಲಿದ್ದಾರೆ. ಲಾತೂರ್‌ ಮಾರುಕಟ್ಟೆಯಲ್ಲಿ ಬೀದರ್‌ ಬೆಲ್ಲ, ಹೆಸರು ಹೆಸರಾಗಿದೆ. ಹನಿ ನೀರಾವರಿಗೆ ಸರಕಾರ ಸಬ್ಸಿಡಿ ನೀಡುವ ಈ ಸಂದರ್ಭದಲ್ಲಿ ಇಲ್ಲಿನ ರೈತರು ನೇರವಾಗಿ ಅಹಮದ್‌ನಗರದಿಂದ ಹನಿ ನೀರಾವರಿ ಪೈಪ್‌ ಖರೀದಿಸಿ ಕಡಿಮೆ ವೆಚ್ಚದಲ್ಲಿ ಹೇಗೆ ನೀರಾವರಿ ಸಾಧ್ಯವೆಂದು ತೋರಿಸುತ್ತಾರೆ. ಈರುಳ್ಳಿಗೆ ಮಳೆಯ ಹನಿ ಸೋಕುವ ರೈನ್‌ ಪೈಪ್‌ಗ್ಳು, ಕಬ್ಬು, ತೊಗರಿ, ಶುಂಠಿ, ಅರಿಶಿಣ ಬೆಳೆ ತಂತ್ರಜಾnನಗಳು ಕೃಷಿ ವಿಜಾnನಿಗಳಿಗೆ ಅಚ್ಚರಿ ಹುಟ್ಟಿಸುವಂತಿದೆ. ಹೂವರಳುವ ತೊಗರಿಗೆ ಒಂದು ನೀರು, ವರ್ಷಕ್ಕೆ ಕಬ್ಬಿಗೆ ಮೂರು ಸಾರಿ ನೀರುಣಿಸಿ ಗೆಲ್ಲುವ ಇವರಲ್ಲಿ ಮಣ್ಣಿನ ಆರೋಗ್ಯ ರಕ್ಷಣೆಗೆ ನೀರಾವರಿ ರೈತರು ಕಲಿಯುವ ಪಾಠಗಳಿವೆ. ಬರ ಗೆಲ್ಲುವ ಅಕ್ಕಡಿ ತಂತ್ರಗಳಿವೆ. ನಮಗಿರುವುದು ಇಷ್ಟೇ ನೀರೆಂದು ರೈತರಿಗೆ ಮಾಂಜ್ರಾ ಮುಖ ನೋಡಿದಾಗ ಅರ್ಥವಾಗಿದೆ. ನೀರಿನ ಮಿತಬಳಕೆಗೆ ಮಾಂಜ್ರಾ ಕಣಿವೆಯಲ್ಲಿ ಕಲಿಕೆ ಇದೆ. ನಮ್ಮ ಆರೋಗ್ಯಕ್ಕೆ ಉತ್ತಮ ಆಹಾರ ನೀಡುವ ರೈತರಿಗೆ ಇನ್ನಷ್ಟು ಶಕ್ತಿ ತುಂಬಲು ನಾವೇನು ಮಾಡಬಹುದು? ಉಣ್ಣುವ ಎಲ್ಲರೂ ಯೋಚಿಸಬೇಕಿದೆ.

ಶಿವಾನಂದ ಕಳವೆ

ಟಾಪ್ ನ್ಯೂಸ್

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.